ಒಲವು-ಚೆಲುವಿನ ‘ಮೈಸೂರು ಮಲ್ಲಿಗೆ’
ಕಳೆದ ಶನಿವಾರ (ಜೂನ್ 22) ಸಂಜೆ ಬೆಂಗಳೂರಿನ ರಂಗಶಂಕರ ಭರ್ತಿಯಾಗಿತ್ತು. ಅದು ‘ಮೈಸೂರು ಮಲ್ಲಿಗೆ’ ನಾಟಕದಿಂದಾಗಿ. ಅಲ್ಲಿ ಎಲ್ಲ ವಯೋಮಾನದ ಪ್ರೇಕ್ಷಕರು ಸೇರಿದ್ದು ವಿಶೇಷ. ಮತ್ತೆ ಮತ್ತೆ ಈ ನಾಟಕ ಪ್ರದರ್ಶನಗೊಳ್ಳುತ್ತಿದ್ದರೂ ಹೌಸ್ಫುಲ್ ಆಗುವುದು ಈ ನಾಟಕದ ಜನಪ್ರಿಯತೆಗೆ ಸಾಕ್ಷಿ.
ಕೆಎಸ್ನ ಅವರ 90ನೇ ಜನ್ಮದಿನದ ಅಂಗವಾಗಿ ಈ ನಾಟಕ ಪ್ರದರ್ಶನಗೊಳ್ಳಬೇಕಿತ್ತು. ಆದರೆ ಅವರ 95ನೇ ಜನ್ಮದಿನದ ಅಂಗವಾಗಿ 2006ರಲ್ಲಿ ಮೊದಲು ಪ್ರಯೋಗಗೊಂಡಿತು, ಅಲ್ಲಿಂದ ನಿರಂತರವಾಗಿ ಪ್ರಯೋಗ ಕಂಡಿದೆ. ಈಗಾಗಲೇ 350ಕ್ಕೂ ಅಧಿಕ ಪ್ರಯೋಗಗಳನ್ನು ಕಂಡಿದೆ ಮತ್ತು ಈಗಲೂ ಕಾಣುತ್ತಿದೆ.
ಕೆಎಸ್ನ ಕವನಗಳ ಆಧಾರಿತ ಈ ನಾಟಕಕ್ಕೆ ಡಾ.ಬಿ.ವಿ.ರಾಜಾರಾಂ ಅವರ ಸಮರ್ಥ ನಿರ್ದೇಶನದಿಂದ ಯಶಸ್ಸು ಕಾಣುತ್ತಲೇ ಇದೆ. ಇದರೊಂದಿಗೆ ಕಲಾಗಂಗೋತ್ರಿ ಕಿಟ್ಟಿ, ಪ್ರದೀಪ್ ನಾಡಿಗ, ಸಿದ್ಧಾರ್ಥ್ ಭಟ್, ಎಸ್.ಸುಷ್ಮಾ, ಶ್ರೀನಿವಾಸ ಕೈವಾರ, ಶ್ರೀನಿವಾಸ ಮೇಷ್ಟ್ರು, ಸುಗುಣ, ಸುರೇಶ್, ರವೀಂದ್ರ ಕಲಾಗಂಗೋತ್ರಿ, ಕಿರಣ್ ಕಾಂತಾವರ, ಪವನಕುಮಾರ್, ಟಿ.ಎನ್.ಸಂಧ್ಯಾ ಅಲ್ಲದೆ ಡಾ.ರಾಜಾರಾಂ ಹಾಗೂ ಡಾ.ಎಂ.ಎಸ್.ವಿದ್ಯಾ ಅವರ ಅಭಿನಯವೇ ಜೀವಾಳ. ಇವರೊಂದಿಗೆ ಸಂಜಯ್ ಆರಾಧ್ಯ ಹಾಗೂ ಸಂಧ್ಯಾ ಅವರು ಸೊಗಸಾಗಿ ಹಾಡುವುದರಿಂದ ನಾಟಕವು ಕಳೆ ಕಟ್ಟುತ್ತದೆ.
ಹಿರಿಯರಿಗೆ ಪ್ರೇಮಕವಿಯ ಕವನಗಳ ಮೆಲುಕು, ಕಿರಿಯರಿಗೆ ಕೆಎಸ್ನ ಬದುಕಿನ ಪರಿಚಯದೊಂದಿಗೆ ಅವರ ಕವನಗಳನ್ನು ಆಸ್ವಾದಿಸುವ ಅವಕಾಶ. ಹೀಗೆ ಎಲ್ಲ ತಲೆಮಾರನ್ನು ತಲುಪುವ ಈ ನಾಟಕ ಕವಿಯನ್ನು ಜೀವಂತವಾಗಿರಿಸುತ್ತಿದೆ. ಈ ಮೂಲಕ ಕವಿ ಅಳಿದರೂ ಕವಿತೆಗಳು ಉಳಿಯುತ್ತವೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿ.
ನಾಟಕ ಶುರುವಾಗುವುದೇ ಪ್ರೇಕ್ಷಕರ ಕಡೆಯಿಂದ ಬಳೆಗಾರ ಚೆನ್ನಯ್ಯ ಪ್ರವೇಶಿಸುವ ಮೂಲಕ. ಈ ಬಳೆಗಾರ ಚೆನ್ನಯ್ಯ ಕವಿ ಕೆಎಸ್ನ ಬದುಕನ್ನು ಅನಾವರಣಗೊಳಿಸುತ್ತಲೇ ನಾಟಕವನ್ನು ಮುಂದಕ್ಕೆ ಕೊಂಡೊಯ್ಯುವ ಸೂತ್ರಧಾರನೂ ಆಗುತ್ತಾನೆ. ಬದಲಾದ ಬದುಕಿನಿಂದ ಗಾಜಿನ ಬಳೆಗಳನ್ನು ತೊಟ್ಟುಕೊಳ್ಳದ ಹೊಸ ತಲೆಮಾರು, ನೀರು ಕೇಳಿದರೆ ತಂಪು ಪಾನೀಯ ತಂದು ಕೊಡುವ ಬಾಲಕಿಯ ಕಂಡು ಚೆನ್ನಯ್ಯ ಬೆರಗಾಗುತ್ತಾನೆ. ಬಾಯಾರಿಕೆ ನೀಗುತ್ತಿದ್ದ ಬಾವಿಯನ್ನು ಮುಚ್ಚಿ ಕಟ್ಟಡ ಎದ್ದಿರುವುದು ಕೇಳಿ ಆತಂಕಗೊಳ್ಳುತ್ತಾನೆ.
‘‘ಗಾಳಿ ಬದಲಾಗಲಿಲ್ಲ
ನೀರು ಬದಲಾಗಲಿಲ್ಲ
ಹೂವು ಬದಲಾಗಲಿಲ್ಲ
ಹಣ್ಣು ಬದಲಾಗಲಿಲ್ಲ
ಮನುಷ್ಯ ಮಾತ್ರ ಯಾಕೆ ಹಿಂಗೆ ಬದಲಾಗಿಬಿಟ್ಟ?’
ಆಧುನಿಕತೆಯಿಂದಾಗಿ ಬದಲಾಗುತ್ತಿರುವ ಬದುಕನ್ನು ಚೆನ್ನಯ್ಯ ಪ್ರಶ್ನಿಸುತ್ತಾನೆ. ಹೀಗೆ ಚೆನ್ನಯ್ಯನ ಮೂಲಕ ನಾಟಕವನ್ನು ವಿವರಿಸುತ್ತಲೇ ಕವಿಯ ಜೀವನದ ವಿವರಗಳನ್ನು ದೃಶ್ಯಗಳು ತೆರೆದಿಡುತ್ತವೆ.
‘ನಿಂಬಿಯ ಬನಾದ ಮ್ಯಾಗ ಚಂದ್ರಾಮ ಚೆಂಡಾಡಿದ’ ಹಾಡನ್ನು ಪಾಪ್ ರೀತಿ ಹಾಡುವ ಬಗೆಗೆ ‘ಮಲ್ಲಿಗೆಗೇ ಸೇಂಟ್ ಹೊಡೆದುಬಿಟ್ಟಿದ್ದಾರೆ’ ಎಂದು ಚೆನ್ನಯ್ಯ ಕೊರಗುತ್ತಾನೆ. ‘‘ನೋವೇ ಬ್ಯಾಡಂದ್ರೆ ಸೃಷ್ಟಿ ಎಲ್ಲಿಂದ ಆಗುತ್ತವ್ವಾ?’’ ಎಂದು ಕೇಳುತ್ತಾನೆ.
‘‘ಮೊದಲು ಪ್ರೀತಿಯಿಂದ ಬರದ್ರಿ
ಆಮ್ಯಾಲ ಸಮಾಧಾನದಿಂದ ಬರದ್ರಿ
ಆಮ್ಯಾಲ ಕೋಪ, ತಾಪ, ದುಗುಡ, ಹತಾಶೆಯಿಂದ ಬರದ್ರಿ
ನೆಮ್ಮದಿಯಿಂದ ಬರೀಲೇ ಇಲ್ವೆನೋ?’’
ಎಂದು ಕವಿಯ ಹೆಂಡತಿ ಕೇಳಿದಾಗ ‘‘ನೆಮ್ಮದಿಯಿಂದ ಇರೋನು ಕವಿ ಹೇಗೆ ಆಗ್ತಾನೆ? ಯಾವುದೋ ಆಫೀಸಲ್ಲಿ ಆರಾಮವಾಗಿರ್ತಾನೆ’’ ಎಂದು ಕವಿ ಉತ್ತರಿಸುತ್ತಾರೆ.
ಮಗಳು ಮೀನಾ ‘‘ಹಾಡು ಹೇಗೆ ಹೊಳೆಯುತ್ತೆ?’’ ಎಂದು ಕೇಳಿದಾಗ ‘‘ಹೊಳೆಯೋದೆಲ್ಲಾ ಹಾಡಾಗಲ್ಲ, ಹೃದಯದಲ್ಲಿ ಅದು ಗಟ್ಟಿಯಾಗಿ ಹೆಪ್ಪುಗಟ್ಟಬೇಕು. ಆಗ ಅದು ಹಾಡಾಗುತ್ತದೆ’’ ಎಂದು ಕವಿ ಹೇಳುತ್ತಾರೆ. ಅಲ್ಲದೆ ‘‘ಚುಚ್ಚೋದು ನನ್ನ ಕಾವ್ಯಗುಣ. ರೇಗೋದು ನಿಮ್ಮ ಸಹಜಗುಣ’’ ಎಂದೂ ಹೇಳುತ್ತಾರೆ.
‘‘ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು
ಮುಗಳ್ನಗೆ ಸೂಸಬೇಕು
ಏಳು ಅಡಿ ಉದ್ದದ ಕಿರುಮನೆಗೆ
ಮೂವತ್ತು ರೂಪಾಯಿ ಚಾಚಬೇಕು’’
ಎನ್ನುವ ಕವಿಯ ಬಡತನವನ್ನು ಈ ಸಾಲುಗಳು ತೆರೆದಿಡುತ್ತವೆ.
‘‘ಎಲ್ಲಿ ಹೂವು ಅರಳಿ ಹಾಡಾಗುವುದೋ?
ಎಲ್ಲಿ ಹಕ್ಕಿಯ ಹಾಡು ಮಾತಾಗಿ ಮುಗಿಯುವುದೋ?
ಎಲ್ಲಿ ಚೆಲುವು ಒಲವಾಗಿ ಫಲಿಸುವುದೋ?
ಎಲ್ಲಿ ಹೊಳೆಯ ನೀರು ಥಳಥಳಿಸಿ ಹೊಳೆಯುವುದೋ?
ಹೋಗಬೇಕು ನಾನಲ್ಲಿಗೆ’’
ಎನ್ನುವ ಆಶಯ ಚೆನ್ನಾಗಿದೆ.
‘‘ಗಡಿಯಾರದಂಗಡಿಯ ಮುಂದೆ ಬೆದರಿದ ಕುದುರೆ
ಕಣ್ಣ ಪಟ್ಟಿಯ ಕಂಡು ಕನ್ನಡಿಯಲಿ
ಗಂಟೆ ಎಷ್ಟೊಂದು ಕೇಳಿದರೇನ ಹೇಳಲಿ
ಎಷ್ಟೊಂದು ಗಡಿಯಾರ ಅಂಗಡಿಯಲಿ?
ಗಂಟೆ ಎಷ್ಟೆಂದು ಕೇಳಿದೆ ನೀನು?
ಹೇಳಿದೆನೆ ಗಡಿಯಾರ ನಡೆದಷ್ಟು ಗಂಟೆ...’’
ಇಂಥ ಚೆಂದದ, ಅರ್ಥಪೂರ್ಣ ಕೆಎಸ್ನ ಸಾಲುಗಳನ್ನು ಅಷ್ಟೇ ಚೆಂದಾಗಿ ಕಲಾಗಂಗೋತ್ರಿ ಕಿಟ್ಟಿ ಹೇಳುತ್ತಾರೆ.
ಕವಿಯ ಮಗ: ‘‘ನಿಮಗೆ ಬೇಡವಾಗಿದ್ರೆ ನಮಗಾದರೂ ಸೈಟು ಮಾಡಬೇಕಿತ್ತು?’’
ಕವಿ: ‘‘ವಿದ್ಯಾಭ್ಯಾಸ ಕೊಡಿಸಿದಿನಲ್ಲ? ಏನಾದ್ರೂ’’ ಮಾಡಿಕೊಳ್ಳಿ. ಜೊತೆಗೆ
‘‘ಉಪ್ಪು-ತುಪ್ಪವ ಕಲಿಸಿದನ್ನ ಉಣಿಸಿ
ಉಗುರ ಬೆಚ್ಚಗೆ ಕಾದ ಹಾಲ ಕುಡಿಸಿ
ತೂಗುಮಂಚದ ಮೇಲೆ ತಂದುರುಳಿಸಿ
ಸಣ್ಣ ದನಿಯಲಿ ಹಾಡಿ ಕನಸ ಬರಿಸಿ’’
ಎಂದು ಆಸ್ತಿ ಮಾಡದ ಮಗನಿಗೆ ಹೇಳಿದ್ದು ಮಾರ್ಮಿಕವಾಗಿದೆ. ಹೀಗೆಯೇ ಅವರ ಪತ್ನಿ ಕೇಳುತ್ತಾರೆ.
ಸೀತೆ: ‘‘ಕೊನೆಗೂ ನೀವು ವ್ಯವಹಾರ ಕಲಿಲೇ ಇಲ್ಲ?’’
ಕವಿ: ‘‘ಕಲಿತಿದ್ರೆ ಸ್ಥಿತಿ ಹೀಗಿರತಿರಲಿಲ್ಲ. ಮನೆ, ಕಾರು, ಬಂಗ್ಲೆ ಮಾಡಿಕೊಂಡು ವಿಮಾನಗಳಲ್ಲಿ ದೇಶವಿದೇಶ ಸುತ್ತಿಕೊಂಡು ಆರಾಮವಾಗಿರಬಹುದಿತ್ತು ಅಲ್ವಾ? ಆದರೆ ಇಷ್ಟೊಂದು ಬರೆಯೋಕೆ ಆಗ್ತಿತ್ತಾ? ಇಲ್ಲ. ಬರೆದ 10-20 ಕವನಗಳ ಹೆಸರು ಹೇಳಿಕೊಂಡು ಬಂಗ್ಲೆ, ಪದವಿ ಮಾಡಿಕೊಂಡು ನನಗೆ ನಾನೇ ಮೋಸ ಮಾಡಿಕೊಂಡು ಬದುಕಬೇಕಾಗಿತ್ತು.’’
ಎಂದು ಉತ್ತರಿಸುತ್ತಾರೆ. ಅರವತ್ತರ ದಶಕದ ಕವಿಗಳ ಸ್ಥಿತಿಗತಿಯನ್ನು ಸಾರುವ ನಾಟಕವೂ ಇದು. ಎರಡು ತಾಸಿನ ಈ ನಾಟಕದಲ್ಲಿ ಹಾಡು, ಹಾಡಿಗೆ ಪೂರಕವಾಗಿ ನೃತ್ಯ ಗಮನ ಸೆಳೆಯುತ್ತವೆ. ಅದರಲ್ಲೂ ಯುವಕವಿಯಾಗಿ ಸಿದ್ಧಾರ್ಥ ಭಟ್ ಹಾಗೂ ಯುವ ಸೀತೆಯಾಗಿ ಸುಷ್ಮಾ, ಮಧ್ಯವಯಸ್ಸಿನ ಕವಿಯಾಗಿ ಕಲಾಗಂಗೋತ್ರಿ ಕಿಟ್ಟಿ ಹಾಗೂ ಮಧ್ಯವಯಸ್ಸಿನ ಸೀತೆಯಾಗಿ ಡಾ.ಎಂ.ಎಸ್.ವಿದ್ಯಾ, ಕೊನೆಗೆ ವಯಸ್ಸಾದ ಕವಿಯಾಗಿ ಡಾ.ಬಿ.ವಿ.ರಾಜಾರಾಂ ಹಾಗೂ ವಯಸ್ಸಾದ ಸೀತೆಯಾಗಿ ಡಾ.ಎಂ.ಎಸ್.ವಿದ್ಯಾ ಅಭಿನಯಿಸಿಲ್ಲ, ಪಾತ್ರಗಳೇ ಅವರಾಗಿದ್ದಾರೆ.
ಎಲ್ಲೂ ಬೋರಾಗದ, ಮಹತ್ವದ ನಾಟಕ ಕೊಟ್ಟ ಕಲಾಗಂಗೋತ್ರಿ ತಂಡವನ್ನು ಮತ್ತು ತಂಡದ ಸಂಚಾಲಕರೂ ಈ ನಾಟಕದ ನಿರ್ದೇಶಕರೂ ಆದ ಡಾ.ಬಿ.ವಿ.ರಾಜಾರಾಂ ಅವರನ್ನು ಅಭಿನಂದಿಸುವೆ.
ನಾಟಕ: ಮೈಸೂರು ಮಲ್ಲಿಗೆ
ಮೂಲ ಕವನಗಳು: ಕೆ.ಎಸ್.ನರಸಿಂಹಸ್ವಾಮಿ
ರಂಗನಾಟಕ: ರಾಜೇಂದ್ರ ಕಾರಂತ
ನಿರ್ದೇಶನ: ಡಾ.ಬಿ.ವಿ.ರಾಜಾರಾಂ
ತಂಡ: ಕಲಾಗಂಗೋತ್ರಿ, ಬೆಂಗಳೂರು
ಬೆಳಕು: ಎಚ್.ಆರ್. ದಕ್ಷಿಣಾಮೂರ್ತಿ
ಪ್ರಸಾಧನ: ಶ್ರೀನಿವಾಸ್ ಕೈವಾರ