ಕಡಕೋಳರ ಕಡುಪ್ರೀತಿಯ ‘ನಾಟಕ ಕರ್ನಾಟಕ’

ರಂಗಭೂಮಿ ಕುರಿತು ಅಪಾರ ಕಾಳಜಿಯಿರುವ, ಕಂಡಿದ್ದನ್ನು, ಕೇಳಿದ್ದನ್ನು ಬರವಣಿಗೆ ಮೂಲಕ ದಾಖಲಿಸುವ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಅವರ ‘ನಾಟಕ ಕರ್ನಾಟಕ’ ಕೃತಿ ಅಪರೂಪವಾದುದು. ಈಚಿನ ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲದೆ ಡಿಜಿಟಲ್ ಪತ್ರಿಕೆ ಹಾಗೂ ಕಲಬುರಗಿಯ ‘ಸಂಧ್ಯಾಕಾಲ’ ಎಂಬ ಸಂಜೆ ದೈನಿಕದ ‘ಮುಖಾಬಿಲೆ’ ಅಂಕಣದ ಲೇಖನಗಳ ಸಂಕಲನವಿದು.
ಒಟ್ಟು 26 ಲೇಖನಗಳ ಈ ಸಂಕಲನವು ಬಹಳ ಮುಖ್ಯವಾಗುತ್ತದೆ ಎನ್ನುವುದಕ್ಕೆ ಮೊದಲ ಕಾರಣ; ಇದು ರಂಗಭೂಮಿಯ ಪರಂಪರೆಯನ್ನು ಕಟ್ಟಿಕೊಡುತ್ತದೆ. ಅನೇಕ ರಂಗಕರ್ಮಿಗಳ ಅದರಲ್ಲೂ ನಾಟಕ ಕಂಪೆನಿಗಳ ಕಲಾವಿದರು, ಮಾಲಕರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರುವ ಕಡಕೋಳ ಅವರ ಈ ಲೇಖನಗಳು ಗಮನ ಸೆಳೆಯುತ್ತವೆ. ‘ವಸ್ತುನಿಷ್ಠವಾಗಿ ಹೇಳದೇ ಹೋದರೆ...’ ಎನ್ನುವ ಲೇಖಕರ ಮಾತುಗಳಲ್ಲಿ ‘‘ಪ್ರಭುತ್ವ ಮತ್ತು ವ್ಯವಸ್ಥೆಯ ಅಂಗಸಂಸ್ಥೆಗಳು ರೂಢಿಸಿಕೊಂಡು ಬಂದಿರುವ ಅಸೂಕ್ಷ್ಮ ಅಪಸವ್ಯಗಳು ಒಳಗೊಂಡಂತೆ ಸಾಂಸ್ಕೃತಿಕ ಜೀವಚೈತನ್ಯಗಳ ಸೂಕ್ಷ್ಮಶೋಧವೇ ಈ ಬರಹಗಳ ಒಳಹೇತು. ಅದನ್ನು ಬಯಲುಗೊಳಿಸುತ್ತಾ ಬೆಂಗಳೂರು ಕೇಂದ್ರಿತ ಅಘೋಷಿತ ‘ಹೈಕಮಾಂಡ್’ ಮಾದರಿ ಸಾಂಸ್ಕೃತಿಕ ಲೋಕದ ಮೇಲೆ ಚಿಕಿತ್ಸಕ ಚುರುಕು ಚೆಲ್ಲುವ ಕೆಲವು ಬರಹಗಳು ಇಲ್ಲಿವೆ’’ ಎನ್ನುವ ಅವರ ಮಾತು ನಿಜ.
ಆದರೆ ಸದ್ಯ ವ್ಯವಸ್ಥೆಯ ಭಾಗವಾಗಿರುವ ಅಂದರೆ ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರಾಗಿರುವ ಅವರಿಗೆ ಮೂಲಸೌಕರ್ಯಗಳಿಲ್ಲ. ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ 12 ಮತ್ತು 14 ಅಡಿ ಅಳತೆಯ ಕಚೇರಿ ಅವರದು! ಈ ಕೊರತೆ ನೀಗಿಸಲು ಅವರು ದೊಡ್ಡ ಕಚೇರಿಯನ್ನು ಬಾಡಿಗೆ ಪಡೆದರೆ ಅವರ ರಂಗಾಯಣದ ಚಟುವಟಿಕೆಗಳಿಗೆ ಹೊಡೆತ ಬಿದ್ದೀತೆಂಬ ಆತಂಕ. ಇದರೊಂದಿಗೆ ಅನುದಾನದ ಕೊರತೆಯಿಂದಾಗಿ ಕಾರನ್ನು ಕೂಡಾ ಅವರು ಬಳಸುತ್ತಿಲ್ಲ. ಹೀಗೆ ಉಳಿವ ಅನುದಾನದಲ್ಲಿ ರಂಗಚಟುವಟಿಕೆಗಳನ್ನು ಅವರು ಆಯೋಜಿಸುತ್ತಿದ್ದಾರೆ. ಮುಖ್ಯವಾಗಿ ದಾವಣಗೆರೆ ಹತ್ತಿರದ ಕೊಂಡಜ್ಜಿಯಲ್ಲಿ ರಾಜ್ಯ ಸರಕಾರವು ಹತ್ತು ಎಕರೆ ಜಮೀನು ನೀಡಿದೆ. ಇದರಲ್ಲಿ ಸಮಗ್ರ ರಂಗಭೂಮಿ ಕುರಿತ ‘ಮ್ಯೂಸಿಯಂ ನಿರ್ಮಾಣ’ ಅವರ ಮಹತ್ವದ ಕನಸು. ಹಾಗೆಯೇ ರಂಗಾಯಣದ ರಂಗಮಂದಿರ ನಿರ್ಮಾಣ, ವಿವಿಧ ರಂಗಶಿಸ್ತುಗಳ ಅಧ್ಯಯನ ಮತ್ತು ರಂಗ ತರಬೇತಿ, ಸಂಶೋಧನೆ, ಭಾರತೀಯ ರಂಗಸಂಸ್ಕೃತಿಗೆ ಸಂಬಂಧಿಸಿದ ವಿಭಿನ್ನ ಚಿಂತನೆಗಳ ಬೃಹತ್ ಮ್ಯೂಸಿಯಂ ನಿರ್ಮಿಸುವ ಅವರ ಕನಸು ನನಸಾಗಲಿ. ಈ ಕುರಿತು ತಮ್ಮ ಈ ಕೃತಿಯ ಕೊನೆಯಲ್ಲಿ ಅವರು ಪ್ರಸ್ತಾಪಿಸಿದ್ದಾರೆ. ‘‘ನೂರೈವತ್ತು ವರುಷಗಳ ರಂಪಯಣದಲ್ಲಿ ಮೂಡಿ ಬಂದ ಮಹತ್ತರ ರಂಗದಾಖಲೆಗಳ ಹೆಜ್ಜೆಗುರುತುಗಳು ಮ್ಯೂಸಿಯಂ ಜಾಗದಲ್ಲಿ ಗುರುತರವಾಗಿ ಸ್ಥಾಪನೆಯಾಗಬೇಕು. ರಂಗಭೂಮಿಗೆ ಸಂಬಂಧಿಸಿದ ಬೃಹದಾಕಾರದ ಗ್ರಂಥಾಲಯ, ರಂಗ ಪ್ರಯೋಗಾಲಯ ಹೀಗೆ ವೃತ್ತಿರಂಗದ ಕನಸುಗಳ ರಂಗ ಬಯಲು ವಿಸ್ತಾರ ಬಲುದೊಡ್ಡದು’’ ಎಂದಿದ್ದಾರೆ.
ಅವರ ಈ ಕೃತಿಯ ಮೊದಲ ಲೇಖನವೇ ‘ವೃತ್ತಿ ರಂಗಭೂಮಿ; ಕೆಲವು ನಿನಾದಗಳು’ ಗಮನಾರ್ಹ. ಭಾರತೀಯ ರಂಗಭೂಮಿಯ ಚರಿತ್ರೆಯನ್ನು ದಾಖಲಿಸುತ್ತಲೇ ಕನ್ನಡ ರಂಗಭೂಮಿಯ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳೇ ವಿಜೃಂಭಿಸುತ್ತಿದ್ದ ಕಾಲದಲ್ಲಿ ಶಾಂತಕವಿ ಎಂದೇ ಪ್ರಸಿದ್ಧರಾದ ಸಕ್ಕರಿ ಬಾಳಾಚಾರ್ಯ ಕನ್ನಡ ನಾಟಕಗಳನ್ನು ರಚಿಸಿ, ಆಡಿಸಿದ್ದು ದಾಖಲೆ. ಇದರೊಂದಿಗೆ ಮೈಸೂರು ಪರಿಸರದಲ್ಲಿ ಬೆಳೆದ ರಂಗ ಸಂಸ್ಕೃತಿ, ರಂಗ ಸಂಗೀತ ಪರಂಪರೆ, ನಟ-ನಟಿಯರ ಪರಂಪರೆ, ರಂಗಸಜ್ಜಿಕೆ ಪರಂಪರೆಯನ್ನು ಪರಿಚಯಿಸಿದ್ದು ರಂಗಚರಿತ್ರೆಯ ದೃಷ್ಟಿಯಿಂದ ಮಹತ್ವವಾದುದು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಹೆಸರಾಂತ ರಂಗನಟ, ನಾಟಕಕಾರ, ಗಾಯಕರಾಗಿದ್ದ ಕೋಗಳಿ ಪಂಪಣ್ಣನವರ ಕುರಿತ ಎಂ.ಎಂ. ಶಿವಪ್ರಕಾಶ್ ಅವರ ‘ಕೋಗಳಿ ಪಂಪಣ್ಣ’ ಕೃತಿ ಕುರಿತು ಕಡಕೋಳ ಅವರು ಪರಿಚಯಿಸುತ್ತಲೇ ಅದರ ಮಹತ್ವವನ್ನು ಸಾರುತ್ತಾರೆ.
ನವ ವೃತ್ತಿ ರಂಗಭೂಮಿ ಕುರಿತ ಲೇಖನದಲ್ಲಿ ‘‘ಈಚಿನ ದಿನಮಾನಗಳಲ್ಲಿ ನವ ವೃತ್ತಿ ರಂಗಭೂಮಿ ಎಂಬ ಪದಪ್ರಯೋಗ ಕೆಲವು ಮಂದಿ ಎಲೈಟ್ ರಂಗಕರ್ಮಿಗಳು ಖಾಯಷ್‌ಪಟ್ಟು ಬಳಕೆ ಮಾಡುತ್ತಿದ್ದಾರೆ. ಅದು ವರ್ತಮಾನದ ಹೊಸ ಅಲೆ ರಂಗ ಸಂಸ್ಕೃತಿ ಚಿಂತನೆಯ ಮುದ್ದಾಂ ಬಳಕೆಯಂತೆ ಕಂಡು ಬಂದರೂ ಅದು ಖಾನೇಸುಮಾರಿ ಬಳಕೆಯೇನಲ್ಲ. ಅವರು ಬುದ್ಧಿಪೂರ್ವಕವಾಗಿಯೇ ತಮ್ಮ ವೃತ್ತಿಯ ರಂಗವಾಂಛೆಯಿಂದ ಈ ಹೊಸ ನುಡಿಗಟ್ಟನ್ನು ಬಳಸುತ್ತಿದ್ದಾರೆ. ತಾವು ನಾಟಕವನ್ನೇ ವೃತ್ತಿಯಾಗಿ ಬದುಕುತ್ತಿರುವುದರಿಂದ ಅಥವಾ ತಮ್ಮ ವೃತ್ತಿಜೀವನವೇ ರಂಗ ಕಾಯಕವಾದ್ದರಿಂದ ತಮ್ಮದೂ ವೃತ್ತಿರಂಗಭೂಮಿ ಬ್ಲಡ್ ಗ್ರೂಪ್ ಎಂಬ ಅಭಿಮತ ಅವರದಾಗಿರಬಹುದು’’ ಎನ್ನುವುದರ ಜೊತೆಗೆ ಪರಂಪರಾಗತ ಕಂಪೆನಿ ಶೈಲಿಯ ನಾಟಕಗಳ ವೃತ್ತಿರಂಗಭೂಮಿ ತಮ್ಮದಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದೂ ಹೇಳುತ್ತಾರೆ. ‘‘ಕಂಪೆನಿ ನಾಟಕಗಳು ಗ್ರಾಮೀಣರನ್ನೊಳಗೊಂಡು ಕೆಳ ಮತ್ತು ಕೆಳಮಧ್ಯಮ ವರ್ಗದ ಬಹುಜನ ಸಮುದಾಯದ ಪ್ರೀತಿಗೆ ಪಾತ್ರವಾದವು. ಹಾಗೆ ಆಗುವಲ್ಲಿ ಕಂಪೆನಿಗಳಿಗೆ ಅಂದಿನ ಸ್ವಾಂತಂತ್ರ್ಯ ಹೋರಾಟ, ದೇಶಭಕ್ತಿ, ಖಾದಿ ಚಳವಳಿ, ಅನ್ಯೋನ್ಯ ಪ್ರೀತಿಯ ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನ ಹತ್ತು ಹಲವು ಅನನ್ಯತೆಗಳೇ ಹೆಚ್ಚು ಕಾರಣ. ಆದರೆ ಆಧುನಿಕವೆಂದು ಹೇಳಲಾದ ವೈಚಾರಿಕ, ಪ್ರಯೋಗಶೀಲ ನಾಟಕಗಳು ಮಧ್ಯಮ ವರ್ಗದ ಬಹುಸಂಖ್ಯಾತರು ಮತ್ತು ಗ್ರಾಮೀಣರನ್ನು ತಲುಪಲೇ ಇಲ್ಲ. ಅಷ್ಟೇ ಯಾಕೆ ಬಹುಪಾಲು ಕೆಳಮಧ್ಯಮ ವರ್ಗದ ರಂಗ ಸಂವೇದನೆಗಳಿಂದಲೂ ಹೊಸ ಅಲೆಯ ಆಧುನಿಕ ನಾಟಕಗಳು ಬಹಳೇ ದೂರ ಉಳಿದವು’’ ಎನ್ನುವ ಮೂಲಕ ತಮ್ಮ ಖಚಿತ ನಿಲುವನ್ನು ಕಡಕೋಳ ಪ್ರತಿಪಾದಿಸುತ್ತಾರೆ.
ಹಿಂದಿನ ಸರಕಾರದ ಅವಧಿಯಲ್ಲಿ ಯಕ್ಷ ರಂಗಾಯಣವು ಕಾರ್ಕಳದಲ್ಲಿ ಆರಂಭಗೊಂಡಿದ್ದರ ಕುರಿತು ಪ್ರಸ್ತಾಪಿಸುವ ‘ಅಕಾಡಮಿಗಳ ವಿಕೇಂದ್ರೀಕರಣ ಆಗಲಿ’ ಎನ್ನುವ ಲೇಖನ ಮುಖ್ಯವಾದುದು. ‘‘ಪ್ರಾದೇಶಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ನೆಲೆಗಳಲ್ಲಿ ಅಕಾಡಮಿ ಮತ್ತು ಪ್ರತಿಷ್ಠಾನಗಳು ವಿಕೇಂದ್ರೀಕರಣ ಆಗಬೇಕು’’ ಎನ್ನುವ ಸಲಹೆ ಅವರದು.
ನಡುಸೀಮೆ ನಾಡು ಎಂದು ದಾವಣಗೆರೆಯನ್ನು ಕರೆಯುವ ಕಡಕೋಳ ಅವರು ‘ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ’ ಲೇಖನದಲ್ಲಿ ದಾವಣಗೆರೆಯು ಹೇಗೆ ರಂಗ ಶ್ರೀಮಂತಿಕೆ ಹೊಂದಿದೆ ಎಂಬುದನ್ನು ವಿಸ್ತಾರವಾಗಿ ಹಿಡಿದಿಟ್ಟಿದ್ದಾರೆ. ಕೋಲಶಾಂತಪ್ಪ ಅವರ ಕುರಿತು ಹೇಳುತ್ತಲೇ ಶ್ರೀಜಯಲಕ್ಷ್ಮೀ ನಾಟಕ ಸಂಘವು ದಾವಣಗೆರೆಯ ಮೊತ್ತ ಮೊದಲ ನಾಟಕ ಕಂಪೆನಿ ಎಂದು ದಾಖಲಿಸುವ ಅವರು, ನಂತರ ಕೆಬಿಆರ್ ಡ್ರಾಮಾ ಕಂಪೆನಿಯ ವೈಭವವನ್ನು ಬಣ್ಣಿಸುತ್ತಾರೆ. ಬಳಿಕ ಕಾಕನೂರು ಯಲ್ಲಪ್ಪನವರ ಮಹಾಕೂಟೇಶ್ವರ ನಾಟಕ ಕಂಪೆನಿಯ ಪ್ರಸ್ತಾಪದೊಂದಿಗೆ ರಂಗಪೋಷಕರನ್ನೂ ಸ್ಮರಿಸುತ್ತಾರೆ. ಹಾಗೆಯೇ ಹೊಸ ಅಲೆ ಹೆಸರಿನ ಆಧುನಿಕ ರಂಗಭೂಮಿ ಕುರಿತು ಅಂದರೆ ರಂಗತಂಡಗಳನ್ನು ಹೆಸರಿಸುತ್ತಾರೆ.
ಹೀಗೆಯೇ ಕಂದಗಲ್ಲ ಹಣಮಂತರಾಯರ ಕೊಡುಗೆ ಸ್ಮರಿಸುವ ಲೇಖನವನ್ನು ಪ್ರಕಟಿಸಿರುವ ಅವರು, ಬನಶಂಕರಿ ನಾಟಕಗಳ ಜಾತ್ರೆ ಕುರಿತು ಒಳನೋಟಗಳನ್ನು ಹೇಳಿದ್ದಾರೆ. ಮುಖ್ಯವಾಗಿ ನಾಟಕ ಕಂಪೆನಿಗಳು ಗುತ್ತಿಗೆದಾರರ ಕೈಯಲ್ಲಿ ಸಿಕ್ಕು ನರಳುತ್ತಿರುವ ಕುರಿತು ಪ್ರಸ್ತಾಪಿಸಿದ್ದು ಉಲ್ಲೇಖನೀಯ. ಕೇವಲ ಬನಶಂಕರಿಯಲ್ಲದೆ ಕೊಪ್ಪಳ, ಚಿಂಚಲಿ, ಶಿರಸಿ, ಗೊಡಚಿ, ಅಮ್ಮಣಗಿ ಮೊದಲಾದ ಜಾತ್ರೆಗಳಲ್ಲೂ ಗುತ್ತಿಗೆದಾರರ ಹಾವಳಿ ಹೆಚ್ಚಿದೆ. ಈ ಕುರಿತು ಯಾವ ಕಂಪೆನಿ ಮಾಲಕರೂ ಧ್ವನಿಯೆತ್ತುತ್ತಿಲ್ಲ ಎಂದು ಅವರು ವಿಷಾದವಾಗಿ ಹೇಳುತ್ತಾರೆ.
ರೋಗಗ್ರಸ್ತವಾಗಿರುವ ಕಲಬುರ್ಗಿ ರಂಗಾಯಣ, ಮೈಸೂರು ರಂಗಾಯಣ; ಅಡ್ಡಡ್ಡ ರಂಗ ಪ್ರಹಸನಗಳು ಲೇಖನಗಳು ಆಯಾ ಸಂದರ್ಭಕ್ಕೆ ಬರೆದವುಗಳಾದರೂ ಅಂದಿನ ವಿದ್ಯಮಾನಗಳಿಗೆ ಕನ್ನಡಿಯಾಗುತ್ತವೆ. ಈಮೂಲಕ ರಂಗಾಯಣಗಳು ಹೇಗಿರಬೇಕೆಂದು ಅವರು ಸಲಹೆ ನೀಡುತ್ತಾರೆ. ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು ಲೇಖನದಲ್ಲಿ ರಿಯಾಲಿಟಿ ಷೋಗಳ ಹಾಸ್ಯದ ಹೆಸರಿನಲ್ಲಿ ಪ್ರಸಾರಿಸುತ್ತಿರುವ ಅಶ್ಲೀಲತೆ ಜೊತೆಗೆ ವೃತ್ತಿನಾಟಕಗಳ ಕೊರತೆ ಕಾಡುವುದನ್ನು ಗಂಭೀರವಾಗಿ ಹೇಳಿದ್ದಾರೆ. ಹೀಗೆಯೇ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ‘ಜತೆಗಿರುವನು ಚಂದಿರ’ ನಾಟಕ ನಿಲ್ಲಿಸಿದ ಕುರಿತು ಪ್ರಸ್ತಾಪಿಸುವ ‘ಕಂಪೆನಿ ನಾಟಕಗಳ ಪ್ರೇಕ್ಷಕ ಪರಂಪರೆ ಮತ್ತು ಜತೆಗಿರುವನು ಚಂದಿರ’ ಲೇಖನ ಎಚ್ಚರಿಕೆ ಮೂಡಿಸುತ್ತದೆ. ಕಿಡಿಗೇಡಿಗಳಿಗೆ ಬೈದು, ಬುದ್ಧಿ ಹೇಳಿ ನಾಟಕ ನೋಡುವಂತೆ ಮಾಡುತ್ತಿದ್ದ ಪ್ರೇಕ್ಷಕರಿದ್ದರು ಎನ್ನುವುದನ್ನು ನೆನೆಯುತ್ತಾರೆ.
‘ರಂಗಭೂಮಿ ಕಲಾವಿದೆ; ಬದಲಾಗದ ಸಮಷ್ಟಿ ದೃಷ್ಟಿ’ ಲೇಖನದಲ್ಲಿ ಕಲಾವಿದೆಯರ ಸಂಕಟಗಳ ಅನಾವರಣವಿದೆ. ‘‘ಕಣ್ಮರೆಯಾಗುತ್ತಿರುವ ರಂಗಪರಂಪರೆಗಳ ಅಪರಿಚಿತ ಭಾವಸ್ಪಂದನೆ, ಸಿನೆಮಾ, ಸೀರಿಯಲ್ ಜಗತ್ತಿನ ಪ್ರಭಾವ ಮೀರದ ದುಃಸಾಧ್ಯದ ಸವಾಲುಗಳು. ಮತ್ತೊಂದೆಡೆ ಹಿರಿಯ ಕಲಾವಿದೆಯರ ಅನುಕರಣೆ. ಪುರುಷ ಅಹಂಕಾರದ ರಂಗಸಾಂಗತ್ಯ. ಈ ಎಲ್ಲ ಗೋಜಲು, ಗೊಂದಲಗಳ ನಡುವೆ ಕಲಾವಿದೆಯರು ವೈಯಕ್ತಿಕ ಬದುಕಿನತ್ತ ಲಕ್ಷ್ಯ ವಹಿಸುವುದು ದುಃಸಾಧ್ಯ’’ ಎನ್ನುವ ಅವರ ಮಾತು ಅಕ್ಷರಶಃ ಸತ್ಯ.
‘ವೃತ್ತಿ ರಂಗದ ಹತ್ತು ಹಲವು ಬಿಕ್ಕಟ್ಟುಗಳು’ ಲೇಖನದಲ್ಲಿ ಬಿ.ವಿ. ವೈಕುಂಠರಾಜು ಸಮೀಕ್ಷಾ ಸಮಿತಿಯ ಶಿಫಾರಸುಗಳನ್ನು ವಿವರವಾಗಿ ನೀಡಿರುವುದು ಗಮನಾರ್ಹ. ಇದೇ ಲೇಖನದಲ್ಲಿ ‘‘ನಾಟಕದ ತಂತ್ರ, ಗುಣಮಟ್ಟದ ಪ್ರಯೋಗ-ಪ್ರದರ್ಶನ ವಿಷಯದಲ್ಲಿ ಏನಂತ ಕೇಳಬೇಡಿ. ಸದಭಿರುಚಿ, ಪ್ರಗತಿಪರತೆ ಪ್ರಪಾತಕ್ಕೆ ಇಳಿದಿದೆ. ಕಂಪೆನಿ ನಾಟಕಗಳೆಂದರೆ ಹಾಸ್ಯರಸ ಮಾತ್ರ ಎನ್ನುವಂತಾಗಿದೆ. ಅಲ್ಲಿ ನವರಸಗಳ ನಾವೀನ್ಯತೆಯ ಪೂರ್ಣ ಕಣ್ಮರೆ. ಅದೇ ಸಿನಿಮೀಯತೆಯ ವಿಲನ್, ಹೆಚ್ಚೆಂದರೆ ಬೂಟು ಪಾಲಿಶ್ ಮಾಡುವ, ಸೆರಗೊಡ್ಡಿ ಭಿಕ್ಷೆ ಬೇಡುವ ಪ್ರಾಚೀನ ಕಾಲದ ರೆಡಿಮೇಡ್ ಸೂತ್ರಗಳನ್ನು ಇವತ್ತಿಗೂ ಉಣಬಡಿಸುವ ಸ್ಥಿತಿಗಳಿಂದ ಬಿಡುಗಡೆ ಪಡೆದಿಲ್ಲ’’ ಎನ್ನುವ ವಿಷಾದ ಅವರದು.
ಹೀಗೆಯೇ ಸಮಗ್ರ ರಂಗಭೂಮಿ; ವರ್ತಮಾನದ ಸವಾಲುಗಳು, ಸಾಮಾನ್ಯರ ರಂಗಭೂಮಿ; ಸಹಸ್ರ-ಸಹಸ್ರ ನಾಟಕಗಳ ದಾಖಲೆ, ವೃತ್ತಿರಂಗಭೂಮಿ ಕೇಂದ್ರದ ಕನಸುಗಳು, ಅಪ್ಪಟ ಶಿಸ್ತಿನ ವೃತ್ತಿರಂಗ ನಾಟಕಗಳ ಕಣ್ಮರೆ, ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಪೆಟ್ಟು, ನಾಟಕ ಸುವರ್ಣ ಕರ್ನಾಟಕ: ಅರಸು ಸ್ಮರಣೆ ಈ ಎಲ್ಲ ಲೇಖನಗಳಲ್ಲಿ ಕಡಕೋಳ ಅವರ ರಂಗಭೂಮಿ ಕುರಿತ ಅಪರಿಮಿತ ಪ್ರೀತಿ, ರಂಗಭೂಮಿ ಕಳೆದುಕೊಳ್ಳುತ್ತಿರುವ ಮೌಲ್ಯಗಳು, ಕಲಾವಿದರ ಕೊರತೆ, ಸರಕಾರದ ನಿರ್ಲಕ್ಷ್ಯ ಮೊದಲಾದ ಅಂಶಗಳ ಕುರಿತು ಅವರ ಕಾಳಜಿ ಪ್ರಶ್ನಾರ್ಹ.
ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರಷ್ಟೇ ವೃತ್ತಿರಂಗಭೂಮಿ ಕುರಿತು ಅಪಾರ ಕಾಳಜಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಡಕೋಳ ಅವರ ಕಡುಪ್ರೀತಿಗೆ ಶರಣು. ಈ ಕೃತಿಗೆ ಕೆ.ವೈ. ನಾರಾಯಣಸ್ವಾಮಿ ಸೊಗಸಾದ ಮುನ್ನುಡಿ ಬರೆದಿದ್ದಾರೆ. ‘ಸಂಸ್ಕೃತಿಯನ್ನು ಕಾಪಿಟ್ಟು ಬೆಳೆಸಬೇಕಾದ ಸರಕಾರ ಮತ್ತು ಆಡಳಿತಶಾಹಿಯ ಅಸೂಕ್ಷ್ಮತೆಗಳನ್ನು ದಿಟ್ಟವಾಗಿ ಪ್ರಶ್ನಿಸುವ ಮಲ್ಲಿಕಾರ್ಜುನ ಅವರು ವ್ಯವಸ್ಥೆಯ ಲೋಪಗಳನ್ನು ಕಟುವಾಗಿ ವಿಮರ್ಶಿಸುವುದಲ್ಲದೆ ಪರ್ಯಾಯಗಳನ್ನು ಸೂಚಿಸುತ್ತಾರೆ. ಆದಕಾರಣ ಈ ಲೇಖನಗಳು ಕೇವಲ ಸಮಸ್ಯೆಗಳನ್ನು ಗುರುತಿಸುವ ಪತ್ರಿಕಾ ವರದಿಗಳ ನಿರೂಪಣಾ ಶೈಲಿಯಿಂದ ಪಾರಾಗಿವೆ’’ ಎನ್ನುವುದು ನಿಜ. ಇದು ರಂಗಕರ್ಮಿಗಳಿಗೆ, ರಂಗಾಸಕ್ತರಿಗೆ, ರಂಗಾಭ್ಯಾಸಿಗಳಿಗೆ ಉಪಯುಕ್ತವಾಗುವ ಆಕರ ಗ್ರಂಥವಾಗಿದೆ.