‘ರವೀಂದ್ರ ಕಲಾಕ್ಷೇತ್ರ ೬೦’ಕ್ಕೆ ‘ನಾಟಕ ಬೆಂಗ್ಳೂರು’ ಉತ್ಸವ
ನಾಟಕ ಶುರುವಾಗುವಾಗ ಮೂರು ಬಾರಿ ಘಂಟೆ ಬಾರಿಸುವುದು ಸಾಮಾನ್ಯ. ಆದರೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಘಂಟೆಯೇ ಇರಲಿಲ್ಲ! ಹೀಗಾಗಿ ಯಾವಾಗ ನಾಟಕ ಶುರುವಾಗುತ್ತದೆ ಎಂದು ಕಲಾಕ್ಷೇತ್ರದ ಆವರಣದಲ್ಲಿರುವವರಿಗೆ ಗೊತ್ತಾಗುತ್ತಿರಲಿಲ್ಲ. ಇದನ್ನು ಗಮನಿಸಿದ ‘ನಾಟಕ ಬೆಂಗ್ಳೂರು’ ವತಿಯಿಂದ ಘಂಟೆಯೊಂದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಣಿಕೆಯಾಗಿ ನೀಡಲಾಗಿದ್ದು, ಇನ್ನು ಮುಂದೆ ನಾಟಕ ಶುರುವಾಗುವಾಗ ಮೂರು ಬಾರಿ ಅದು ಸದ್ದು ಮಾಡಲಿದೆ. ಘಂಟೆಯನ್ನು ರೂಪಕವಾಗಿಯೂ ಗಮನಿಸಿದಾಗ ಅದು ಎಚ್ಚರಿಕೆಯದೂ ಹೌದು. ಹೇಗೆಂದರೆ; ಇನ್ನು ಮುಂದೆ ಕಲಾಕ್ಷೇತ್ರ ನಾಟಕಗಳಿಗೇ ಮೀಸಲಾಗಲಿ ಎಂದು. ಅಲ್ಲಿ ನಾಟಕಗಳೇ ಹೆಚ್ಚಾಗುತ್ತವೆ, ಪ್ರೇಕ್ಷಕರು ಹೆಚ್ಚಾಗಿ ಬರುತ್ತಾರೆ ಎಂಬ ವಿಶ್ವಾಸದಿಂದ ಕೊಟ್ಟ ಕಾಣಿಕೆಯದು.
ಇದೆಲ್ಲ ಶುರುವಾಗಿದ್ದು ‘‘ರವೀಂದ್ರ ಕಲಾಕ್ಷೇತ್ರಕ್ಕೆ ಜನರು ಬರುವುದು ಕಡಿಮೆಯಾಗುತ್ತಿದೆ. ಮತ್ತೆ ಕಲಾಕ್ಷೇತ್ರಕ್ಕೆ ಸೆಳೆಯಬೇಕು. ಇದಕ್ಕಾಗಿ ನಾಟಕೋತ್ಸವ ಮಾಡಬೇಕು. ಇದರಲ್ಲಿ ಬೆಂಗಳೂರಿನ ಕಲಾತಂಡಗಳೇ ಇರಬೇಕು’’
ಹೀಗೊಂದು ಚರ್ಚೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಕಾರಂತರ ಕ್ಯಾಂಟೀನ್ ಬಳಿ ನಡೆದುದುನ್ನು ಹಿರಿಯ ರಂಗಕರ್ಮಿಗಳಾದ ಡಾ.ಬಿ.ವಿ.ರಾಜಾರಾಂ, ಶಶಿಧರ್ ಭಾರಿಘಾಟ್ ನೆನಪಿಸಿಕೊಳ್ಳುತ್ತಾರೆ.
ಎಪ್ಪತ್ತರ ದಶಕದಿಂದ 2000ವರೆಗೆ ಕಲಾಕ್ಷೇತ್ರದತ್ತ ಪ್ರೇಕ್ಷಕರು ಹೆಚ್ಚಾಗಿ ಬರುತ್ತಿದ್ದರು. ಆಮೇಲೆ ನಾಟಕ ತಂಡಗಳಿಗೆ ಕಲಾಕ್ಷೇತ್ರ ಸಿಗದಂತಾಯಿತು. ನಾಟಕ ನೋಡಿದ ನಂತರ ವಾಪಸ್ ತಮ್ಮ ಮನೆಗಳಿಗೆ ತೆರಳಲು ಪ್ರೇಕ್ಷಕರಿಗೆ ತಾಪತ್ರಯಗಳು ಹೆಚ್ಚಿದವು; ಬೆಂಗಳೂರು ಬೆಳೆದ ಪರಿಣಾಮ. ಅಲ್ಲದೆ ಬಡಾವಣೆ ರಂಗಭೂಮಿ ಹೆಚ್ಚಿತು. ರಂಗ ಶಂಕರ, ಕಲಾಗ್ರಾಮ, ಸೇವಾಸದನ, ಕೆ.ಎಚ್.ಸೌಧ... ಇಲ್ಲೆಲ್ಲ ನಾಟಕಗಳು ಹೆಚ್ಚಾದವು. ಇದರೊಂದಿಗೆ ಒಂದು ಸಾವಿರ ಸಾಮರ್ಥ್ಯವಿರುವ ಕಲಾಕ್ಷೇತ್ರಕ್ಕೆ ಹವಾನಿಯಂತ್ರಣ ಅಳವಡಿಸಿದ್ದರಿಂದ ಬಾಡಿಗೆ ಹೆಚ್ಚಾಯಿತು. ನಾಟಕಕ್ಕಿಂತ ಕಾರ್ಯಕ್ರಮಗಳೇ ಹೆಚ್ಚಾದವು. ದುರಸ್ತಿಯ ನೆಪದಲ್ಲಿ ಆಗಾಗ ಮೂರು ತಿಂಗಳವರೆಗೆ ಕಲಾಕ್ಷೇತ್ರವನ್ನು ಮುಚ್ಚಲಾಗುತ್ತಿತ್ತು. ಆಮೇಲೆ ಆನ್‌ಲೈನ್ ಬುಕ್ಕಿಂಗ್ ಶುರುವಾಯಿತು. ಇದರಿಂದ ಏನೆಲ್ಲ ಕಾರ್ಯಕ್ರಮಗಳಾದವು! ಶಾಲೆ, ಕಾಲೇಜು, ರಿಯಾಲಿಟಿ ಷೋಗಳು... ಹೀಗೆ. ತಿಂಗಳಲ್ಲಿ 20 ದಿನಗಳವರೆಗೆ ನಾಟಕಗಳ ಪ್ರದರ್ಶನಕ್ಕೆ ಮೀಸಲಿರಿಸಬೇಕೆಂಬ ನಿಯಮ ನಿಂತೇ ಹೋಯಿತು. ‘‘ಇದರಿಂದ ಕಲಾಕ್ಷೇತ್ರಕ್ಕೆ ಇರಬೇಕಾದ ಘನತೆ, ಗೌರವ ಕಡಿಮೆಯಾಯಿತು. ಇದನ್ನೆಲ್ಲ ಸರಿಪಡಿಸಲು ಸಮಿತಿ ರಚಿಸಲು ಕೇಳಿದ್ದೇವೆ. ಇದುವರೆಗೆ ರಚನೆಯಾಗಿಲ್ಲ’’ ಎನ್ನುವ ಅಸಮಾಧಾನ ಡಾ.ಬಿ.ವಿ.ರಾಜಾರಾಂ ಅವರದು.
‘‘ಇಂಥ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸೆಳೆಯಲು ‘ಕಲಾಕ್ಷೇತ್ರ-30’ ಎಂದು ಕಾರ್ಯಕ್ರಮ ಆಯೋಜಿಸಿ 30 ನಾಟಕಗಳು ಪ್ರದರ್ಶನಗೊಂಡವು. 2013ರಲ್ಲಿ ಕಲಾಕ್ಷೇತ್ರಕ್ಕೆ 50 ವರ್ಷಗಳಾದಾಗ ‘ಕಲಾಕ್ಷೇತ್ರ-50’ ಎಂಬ ಉತ್ಸವ ಆಯೋಜಿಸಲಾಯಿತು. ‘ಆಗ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿದ್ದ ಉಮಾಶ್ರೀ ಅವರು ಎರಡು ಕೋಟಿ ರೂ. ಅನುದಾನ ನೀಡಿದರು. ನಾಟಕಗಳ ಜೊತೆಗೆ ಸಂಗೀತ, ಜಾನಪದ, ನೃತ್ಯ ಕಾರ್ಯಕ್ರಮಗಳನ್ನು ಪ್ರತೀ ತಿಂಗಳು ಏಳು ದಿನಗಳವರೆಗೆ ಒಂದು ವರ್ಷದವರೆಗೆ ಆಯೋಜಿಸಿದ್ದೆವು’’ ಎಂದು ಖುಷಿಯಿಂದ ಹೇಳಿದರು ಡಾ.ಬಿ.ವಿ.ರಾಜಾರಾಂ. ಇದರೊಂದಿಗೆ ‘ಕಲಾಕ್ಷೇತ್ರ-50 ಪ್ರಯುಕ್ತ 2013ರಲ್ಲಿ ಐದು ತಿಂಗಳವರೆಗೆ ತಿಂಗಳಿಗೆ 10 ನಾಟಕಗಳಾದವು. ಈ ಉತ್ಸವದಲ್ಲಿ ಕಾಲೇಜು, ಕಾರ್ಮಿಕ, ಪೌರಾಣಿಕ, ಮಕ್ಕಳ ನಾಟಕಗಳೆಂದು ಐವತ್ತು ನಾಟಕಗಳು ಪ್ರದರ್ಶನಗೊಂಡವು. ಇದರೊಂದಿಗೆ ನಾಟಕ ರಚನಾ ಸ್ಪರ್ಧೆ, ರಂಗ ತರಬೇತಿ ಹಾಗೂ ರಂಗಗೀತೆಗಳ ಶಿಬಿರಗಳೂ ನಡೆದವು ಜೊತೆಗೆ ‘ನಾನು ಮತ್ತು ಕಲಾಕ್ಷೇತ್ರ’ ಎಂಬ ಸರಣಿ ಭಾಷಣಗಳಾದವು’’ ಎಂದು ನೆನಪಿಸಿಕೊಂಡರು ಶಶಿಧರ ಭಾರಿಘಾಟ್.
ಈ ವರ್ಷ ರವೀಂದ್ರ ಕಲಾಕ್ಷೇತ್ರಕ್ಕೆ ಅರವತ್ತು ವರ್ಷ. ರವೀಂದ್ರನಾಥ್ ಟಾಗೋರ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ 1961ರಲ್ಲಿ ಕೇಂದ್ರ ಸರಕಾರವು ಆಯ್ದ ರಾಜ್ಯಗಳಲ್ಲಿ ರವೀಂದ್ರ ರಂಗಮಂದಿರಗಳನ್ನು ನಿರ್ಮಿಸಲು ನಿರ್ಧರಿಸಿತು. ಕೋಲ್ಕತಾ, ಮುಂಬೈ, ಹೈದರಾಬಾದ್, ಭೋಪಾಲ್ ಹಾಗೂ ಬೆಂಗಳೂರಲ್ಲಿ ರಂಗಮಂದಿರಗಳನ್ನು ಕಟ್ಟಲು ಯೋಜಿಸಲಾಯಿತು. ಇದಕ್ಕಾಗಿ ಕೇಂದ್ರ ಸರಕಾರವು ಎರಡು ಲಕ್ಷ ರೂಪಾಯಿ ನೀಡಿತು. ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ಎಚ್.ಸಿ.ಮಹಾದೇವಪ್ಪ ಹಾಗೂ ತಮಿಳಿನ ಖ್ಯಾತ ಸಿನೆಮಾನಟ ಶಿವಾಜಿ ಗಣೇಶನ್ ಅವರು ತಲಾ 22 ಸಾವಿರ ರೂಪಾಯಿ ದೇಣಿಗೆ ನೀಡಿದರು. ನಂತರ ಶಿವಾಜಿ ಗಣೇಶನ್ ಅವರು ಟೌನ್‌ಹಾಲ್‌ನಲ್ಲಿ ತಮ್ಮ ತಂಡದಿಂದ ಕಲಾಕ್ಷೇತ್ರ ಕಟ್ಟಲು ಸಹಾಯಾರ್ಥಕ್ಕಾಗಿ ‘ವೀರಪಾಂಡ್ಯ ಕಟ್ಟಬೊಮ್ಮನ್’ ನಾಟಕವಾಡಿದರು. 1960ರ ಸೆಪ್ಟಂಬರ್ 16ರಂದು ಕೇಂದ್ರ ಸಚಿವರಾಗಿದ್ದ ಪ್ರೊ.ಹುಮಾಯೂನ್ ಕಬೀರ್ ಅವರು ರವೀಂದ್ರ ಕಲಾಕ್ಷೇತ್ರಕ್ಕೆ ಅಡಿಗಲ್ಲು ಹಾಕಿದರೆ, ಕಟ್ಟಡ ನಿರ್ಮಾಣಕ್ಕೆ ಕಲಾವಿದರಾದ ಎಚ್.ಸಿ.ಮಹಾದೇವಪ್ಪ ಕಾಳಜಿ ವಹಿಸಿದರು. 1963ರ ಮಾರ್ಚ್ 9ರಂದು ರವೀಂದ್ರ ಕಲಾಕ್ಷೇತ್ರವನ್ನು ಪ್ರೊ.ಹುಮಾಯೂನ್ ಕಬೀರ್ ಉದ್ಘಾಟಿಸಿದರು. ಅಲ್ಲಿಂದ ರಂಗ ಪರಂಪರೆ ಬೆಳೆಸಿದ ಹೆಗ್ಗಳಿಕೆ ರವೀಂದ್ರ ಕಲಾಕ್ಷೇತ್ರಕ್ಕೆ ಸಲ್ಲಬೇಕು.
ಈಗ ಅದಕ್ಕೆ ವಜ್ರಮಹೋತ್ಸವ ಸಂಭ್ರಮವೆಂದು ಈ ಡಿಸೆಂಬರ್ ತಿಂಗಳಿಂದ ಮಾರ್ಚ್‌ವರೆಗೆ ‘ನಾಟಕ ಬೆಂಗ್ಳೂರು’ ಎಂದು ರಂಗ ಸಂಭ್ರಮ ಆಚರಿಸಲಾಗುತ್ತಿದೆ. ಡಿಸೆಂಬರ್ 4ರಿಂದ 21ರವರೆಗೆ, 2024ರ ಜನವರಿ 3ರಿಂದ 17ರ ವರೆಗೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ವಿಶ್ವ ರಂಗಭೂಮಿ ದಿನಾಚರಣೆ ಯಾದ ಮಾರ್ಚ್ 27ರಂದು ಉತ್ಸವ ಕೊನೆಗೊಳ್ಳಲಿದೆ. ಇದಕ್ಕಾಗಿ ಉತ್ಸವದಲ್ಲಿ ಭಾಗವಹಿಸುವ ರಂಗತಂಡಗಳು 30 ಕಾಲೇಜು ಗಳನ್ನು ಆಯ್ದುಕೊಂಡು ‘ಕಾಲೇಜುಗಳ ಕಡೆಗೆ ಹವ್ಯಾಸಿ ರಂಗ ನಡಿಗೆ’ ಯೋಜನೆಯೊಂದಿಗೆ ಕಾಲೇಜು ಹಾಗೂ ಹವ್ಯಾಸಿ ರಂಗಭೂಮಿ ಯನ್ನು ಗಟ್ಟಿಯಾಗಿ ಬೆಸೆಯುವ ಪ್ರಯತ್ನಗಳಾಗಲಿವೆ. ಇದರಲ್ಲಿ ನಾಟಕ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ, ರಂಗಗೀತೆಗಳ ಗಾಯನ ತರಬೇತಿ ಶಿಬಿರ, ನೇಪಥ್ಯ ತರಬೇತಿ ಶಿಬಿರ, ನಾಟಕ ವಿಮರ್ಶಾ ಸ್ಪರ್ಧೆ ಏರ್ಪಡಿಸಲಾಗುವುದು.
ಇದರೊಂದಿಗೆ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆರು ಉತ್ತಮ ನಾಟಕಗಳಿಗೆ ಬಹುಮಾನ ಇರಲಿದೆ. ಸಾಮಾನ್ಯ ವಿಭಾಗದಲ್ಲಿ ಮೂರು ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಮೂರು ನಾಟಕಗಳನ್ನು ಆಯ್ಕೆ ಮಾಡಲಾಗುವುದು. ಇದಲ್ಲದೆ ಸ್ಮರಣ ಸಂಚಿಕೆಯನ್ನು ಹೊರತರುವ ಯೋಜನೆಯಿದೆ. ಇಂಥ ಅಪರೂಪದ ಉತ್ಸವದಲ್ಲಿ ಕಲಾಗಂಗೋತ್ರಿ, ನಟರಂಗ, ರಂಗಸಂಪದ, ಸ್ಪಂದನ, ಬೆನಕ, ಸಮುದಾಯ, ನಾಟ್ಯದರ್ಪಣ, ಪ್ರಯೋಗರಂಗ, ಅಂತರಂಗ, ಸಂಚಯ, ದೃಶ್ಯ, ಅಭಿನಯ ತರಂಗ, ವಿಜಯನಗರ ಬಿಂಬ, ಅದಮ್ಯ, ರಂಗಪಯಣ, ಅನೇಕ, ರಂಗಸಿರಿ, ರಂಗನಿರಂತರ, ಸಂಚಾರಿ ಥಿಯೇಟರ್, ಜನಪದರು, ಸಮಾಜಮುಖಿ ರಂಗಬಳಗ, ಥೇಮಾ, ಪ್ರದರ್ಶನ ಕಲಾವಿಭಾಗ- ಬೆಂಗಳೂರು ವಿವಿ, ರಂಗ ಚಿರಂತನ, ಸಾಫಲ್ಯ, ರಂಗಶಾಲಾ, ಪ್ರಕಸಂ, ಬಿಎಟಿ, ಆಹಾರ್ಯ, ಸುಸ್ಥಿರ, ರಂಗಾಸ್ಥೆ, ಬೆಂಗಳೂರು ಪ್ಲೇಯರ್ಸ್, ಜಂಗಮ ಕಲೆಕ್ಟಿವ್, ಐಶ್ವರ್ಯ ಕಲಾನಿಕೇತನ, ಸಮಷ್ಟಿ ತಂಡಗಳು ಭಾಗವಹಿಸಿವೆ. ಇದರ ಪರಿಣಾಮ ‘‘15 ವರ್ಷಗಳಿಂದ ನಾಟಕ ಬೆಂಗಳೂರು ಮೂಲಕ ಪ್ರತೀ ವರ್ಷ 15-22 ನಾಟಕಗಳು ಅಂದರೆ ಇದುವರೆಗೆ 300ಕ್ಕೂ ಅಧಿಕ ನಾಟಕಗಳಾಗಿವೆ’’ ಎನ್ನುವ ಖುಷಿ ಶಶಿಧರ್ ಭಾರಿಘಾಟ್ ಅವರದು.
16ನೇ ‘ನಾಟಕ ಬೆಂಗ್ಳೂರು’ ಉತ್ಸವಕ್ಕೆ ಡಿಸೆಂಬರ್ 4ರಂದು ಚಾಲನೆ ಸಿಕ್ಕಿದ್ದು, ಉದ್ಘಾಟನಾ ಸಮಾರಂಭದಂದು ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಗೊಂಡಿತು. ಈ ನಾಟಕವೇ ಪ್ರದರ್ಶನಗೊಳ್ಳಲು ಕಾರಣವಿದೆ; ಸರಿಯಾಗಿ 44 ವರ್ಷಗಳ ಹಿಂದೆ ಡಿಸೆಂಬರ್ 4ರಂದು ‘ಮುಖ್ಯಮಂತ್ರಿ’ ನಾಟಕದ ಮೊದಲ ಪ್ರದರ್ಶನ ಕಲಾಕ್ಷೇತ್ರ ಹಿಂಭಾಗದ ಬಯಲು ಮಂದಿರದಲ್ಲಿ ಆಗಿತ್ತು. ಇದರ ನೆನಪಿಗೆ ಅದೇ ದಿನ ‘ಮುಖ್ಯಮಂತ್ರಿ’ ನಾಟಕದ 820ನೇ ಪ್ರದರ್ಶನವಾಯಿತು. ಮೊನ್ನೆ ಬುಧವಾರ (ಡಿಸೆಂಬರ್ 6) ‘ಅಲೆಮಾರಿ ಭಾರತ’ ನಾಟಕ ಪ್ರದರ್ಶನಗೊಂಡಿತು. ಇದು ಕನ್ನಡ ಪ್ರಾಧ್ಯಾಪಕ ಬೇಲೂರು ರಘುನಂದನ್ ರಚಿಸಿ, ನಿರ್ದೇಶಿಸಿದ ನಾಟಕ. ವಿಶೇಷ ಎಂದರೆ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ‘ರಂಗ ಚಿರಂತನ’ ಎಂಬ ವಿದ್ಯಾರ್ಥಿಗಳ ತಂಡವು ‘ಅಲೆಮಾರಿ ಭಾರತ’ ನಾಟಕವಾಡಿತು. ಈ ಕಾಲೇಜಿನ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರ ಹಾಗೆ ಅಭಿನಯಿಸಿದ್ದು ಗಮನಾರ್ಹ. ‘‘ಈ ನಾಟಕದ ಮೂಲಕ 40 ವಿದ್ಯಾರ್ಥಿಗಳು ತೊಡಗಿಕೊಂಡರು. ಇದರಿಂದ ನಾಟಕ ನೋಡಲು ಅವರ ಪೋಷಕರು, ಸಹಪಾಠಿಗಳು, ಗೆಳೆಯರು ಬಂದರು. ಇದು ಹೊಸ ಸಾಧ್ಯತೆ. ಇದರೊಂದಿಗೆ ಹವ್ಯಾಸಿ ತಂಡಗಳು ಸೇರಿ ಸಹಕಾರಿ ತತ್ವದಡಿ ನಾಟಕಗಳಾಗುತ್ತಿವೆ. ನಾಟಕಗಳ ಸಿದ್ಧತೆ, ಟಿಕೆಟ್ ಹಂಚುವಿಕೆ, ಹೊಸ ಪ್ರೇಕ್ಷಕರನ್ನು ಕರೆತರುವುದು ಬಹಳ ಮುಖ್ಯ’’ ಎಂದು ಬೇಲೂರು ರಘುನಂದನ್ ಸಂತಸ ಹಂಚಿಕೊಂಡರು.
ಮತ್ತೆ ಡಾ.ಬಿ.ವಿ.ರಾಜಾರಾಂ ಅವರ ಮಾತುಗಳೊಂದಿಗೆ ಮುಗಿಸುವೆ- ‘‘ನಾಟಕ ಬೆಂಗ್ಳೂರು ಸಲುವಾಗಿ ಅಕ್ಟೋಬರ್ ತಿಂಗಳಿಂದ ಸಿದ್ಧತೆಗಳು ಶುರುವಾದವು. ಮಾರ್ಚ್‌ವರೆಗೆ ರಂಗಪಯಣ ನಡೆಯಲಿದೆ. ಕಲಾವಿದರ ಕಾಶಿ ಕಲಾಕ್ಷೇತ್ರ. ನಮ್ಮಂಥ ಹಿರಿಯ ರಂಗಕರ್ಮಿಗಳಿಗೆ ಹಾಗೂ ಹಿರಿಯ ರಂಗತಂಡಗಳಿಗೆ ರವೀಂದ್ರ ಕಲಾಕ್ಷೇತ್ರದೊಂದಿಗೆ ಅವಿನಾಭಾವ ಹಾಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಕಲಾಕ್ಷೇತ್ರವನ್ನು ಅಭಿಮಾನದಿಂದ, ಗೌರವದಿಂದ ಕಾಣುತ್ತೇವೆ. ಪುಟ್ಟಣ್ಣಚೆಟ್ಟಿ ಟೌನ್‌ಹಾಲಿನಲ್ಲಿ ಶಾಲೆ, ಕಾಲೇಜುಗಳ ಕಾರ್ಯಕ್ರಮಗಳಾಗಲಿ. ರವೀಂದ್ರ ಕಲಾಕ್ಷೇತ್ರವು ರಂಗಭೂಮಿಗೇ ಮೀಸಲಾಗಬೇಕು. ಖಾಯಂ ಸಿಬ್ಬಂದಿ ಇರಬೇಕು. ಧ್ವನಿ ವ್ಯವಸ್ಥೆ, ಲೈಟಿಂಗ್ ಸೇರಿದಂತೆ ಸಣ್ಣಪುಟ್ಟ ದುರಸ್ತಿಗಳಾಗಬೇಕಿದೆ...’’