ರಾಮಿ ರಂಗ ಪಯಣದ ದಾಖಲೆ
‘‘ರಂಗಭೂಮಿಗೆ ಜೀವವಿದೆ. ಇದೊಂದು ಜೀವನ್ಮುಖಿ ಕ್ರಿಯೆ. ಇಲ್ಲಿ ಚೈತನ್ಯವಿದೆ, ಸಾಮಾಜಿಕ ಸಂವಹನವಿದೆ. ಸ್ನೇಹಗಳನ್ನು ಬೆಳೆಸಿ ಉಳಿಸುತ್ತದೆ. ರಂಗಭೂಮಿಯ ನಟನೆಯಾಗಲಿ, ಸಂಪರ್ಕವಾಗಲಿ, ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ನನ್ನ ಬದುಕಿನ ಮೇಲೆ ಗಾಢ ಪರಿಣಾಮ ಬೀರಿದ, ನನ್ನ ವ್ಯಕ್ತಿತ್ವಕ್ಕೆ ಹೊಸ ಆಯಾಮಗಳನ್ನು ನೀಡಿದ, ಈ ಇಳಿವಯಸ್ಸಿನಲ್ಲೂ ನಾಟಕವೆಂದರೆ ನಾನು ಪುಟಿದೇಳುವಂತೆ ಮಾಡುವ ಚುಂಬಕ ಶಕ್ತಿ ರಂಗಭೂಮಿಗಿದೆ’’ ಎನ್ನುತ್ತಾರೆ ಈಚೆಗೆ 89ನೇ ವರ್ಷಕ್ಕೆ ಕಾಲಿಟ್ಟಿರುವ ಮೈಸೂರಿನ ರಂಗಭೂಮಿ ಕಲಾವಿದೆ ರಾಮೇಶ್ವರಿ ವರ್ಮಾ. ಆತ್ಮೀಯರಿಗೆಲ್ಲ ರಾಮಿ ಎಂದೇ ಚಿರಪರಿಚಿತರು. ಅವರ ರಂಗಭೂಮಿ ನಂಟಿನ ಕುರಿತು ‘ಬಿಟ್ಟೇನೆಂದರೂ ಬಿಡದು- ಈ ಮಾಯೆ’ ಪುಸ್ತಕವನ್ನು ಮೀನಾ ಮೈಸೂರು ಸಂಪಾದಿಸಿದ್ದು ಗಮನಾರ್ಹವಾಗಿದೆ. ಇದನ್ನು ಮೀನಾ ಅವರು ತಮ್ಮ ಅಪರಾಜಿತೆ ಪ್ರಕಾಶನದ ಮೊದಲ ಪುಸ್ತಕವಾಗಿ ಪ್ರಕಟಿಸಿದ್ದಾರೆ.
ರಾಮಿ ಅವರ ತಂದೆ ‘ತಾಯಿನಾಡು’ ಪತ್ರಿಕೆ ನಡೆಸುತ್ತಿದ್ದ ಪತ್ರಕರ್ತ ಪಿ.ಆರ್.ರಾಮಯ್ಯ. ಅವರ ತಾಯಿ ಜಯಲಕ್ಷ್ಮಮ್ಮ ಬೆಂಗಳೂರಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದವರು. ಬೆಂಗಳೂರಲ್ಲಿ ಹುಟ್ಟಿ, ಬೆಳೆದ ರಾಮಿ ಅವರಿಗೆ 1954-55ರಲ್ಲಿ ರಂಗಭೂಮಿಯ ನಂಟು ಶುರುವಾಯಿತು. ಆಗ ಅವರು ಮುಂಬೈನ ಜೈ ಹಿಂದ್ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿನಿಯಾಗಿದ್ದರು. ಕಾಲೇಜಿನ ಕನ್ನಡ ಸಂಘದ ಮೂಲಕ ಆಗ ಪ್ರಾಧ್ಯಾಪಕರಾಗಿದ್ದ ಕೆಜಿವಿ ಕೃಷ್ಣ ನಿರ್ದೇಶಿಸಿದ ಶಿವರಾಮ ಕಾರಂತರ ‘ಕಿಸಾಗೌತಮಿ’ ಹಾಗೂ ‘ಗಗ್ಗಯ್ಯನ ಗಡಿಬಿಡಿ’ ನಾಟಕಗಳಿಗೆ ರಾಮಿ ಬಣ್ಣ ಹಚ್ಚಿದರು. ಇದಕ್ಕೂ ಮೊದಲು ಅವರು ಬೆಂಗಳೂರಲ್ಲಿದ್ದಾಗ ತಪ್ಪದೆ ನಾಟಕಗಳನ್ನು ನೋಡುತ್ತಿದ್ದರು. ಮುಂಬೈನಲ್ಲಿಯೇ ಶಶಿ ದೇಶಪಾಂಡೆ (ಶ್ರೀರಂಗರ ಮಗಳು) ಅವರು ರಾಮಿಗೆ ಸಹಪಾಠಿಯಾಗಿದ್ದರು. ಬೆಂಗಳೂರಿನಲ್ಲಿ ಶಶಿ ದೇಶಪಾಂಡೆ ಅವರ ಮನೆಗೆ ಹೋದಾಗ ಅಲ್ಲಿ ಶ್ರೀರಂಗರ ಪರಿಚಯವಾಯಿತು. ಆಗ ಅವರು ಬೆಂಗಳೂರು ಆಕಾಶವಾಣಿಯಲ್ಲಿ ನಾಟಕ ನಿರ್ಮಾಪಕರಾಗಿದ್ದರು. ನಂತರ ಆಕಾಶವಾಣಿಯ ಕಲಾವಿದೆಯಾಗುವುದರ ಜೊತೆಗೆ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದರು. 1968ರಲ್ಲಿ ಬಾಲಗೋಪಾಲ ವರ್ಮಾ ಅವರನ್ನು ಮದುವೆಯಾದ ನಂತರ ಮೈಸೂರಿನಲ್ಲಿ ನೆಲೆಗೊಂಡರು.
ಬಹಳ ಮುಖ್ಯವಾಗಿ ಈ ಪುಸ್ತಕ ರಚನೆ ಕುರಿತು ತಮ್ಮ ಅನುಮಾನಗಳನ್ನು ಹೀಗೆ ವಿವರಿಸಿದ್ದಾರೆ- ‘ಯಾರಿಗಾದರೂ ಇದನ್ನು ಓದಬೇಕು ಎಂದು ಅನ್ನಿಸಬಹುದು ಮತ್ತು ರಂಗಭೂಮಿಯ ನನ್ನ ಪಯಣದ ಪುಟಗಳನ್ನು ಓದಿ ಕೆಲವರಿಗಾದರೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಬಹುದೇನೋ ಮತ್ತು ನನ್ನ ಜೊತೆ ರಂಗಭೂಮಿಯಲ್ಲಿ ಸಹಪಯಣಿಗರಾಗಿದ್ದ ಸ್ನೇಹಿತರು ಮತ್ತೊಮ್ಮೆ ಆ ಪಯಣದ ನೆನಪುಗಳನ್ನು ಮೆಲುಕು ಹಾಕಲು ಇಷ್ಟವಾಗಬಹುದೇನೋ ಎಂಬ ಸಣ್ಣ ಆಸೆ. ನಾನು ಒಬ್ಬ ಮಧ್ಯಮ ವರ್ಗದ ಮಹಿಳೆ. ನನ್ನ ಕಾಲದಲ್ಲಿ ಮಹಿಳೆಯರು ರಂಗಭೂಮಿಯಲ್ಲಿ ಹೇಗೆ ತೊಡಗಿಸಿಕೊಂಡಿದ್ದರು? ಅವರ ಸ್ಥಿತಿಗತಿಗಳು, ಅವಕಾಶಗಳು ಮುಂತಾದ ದಾಖಲಾತಿಗಳನ್ನು ಹುಡುಕುತ್ತಿರುವವರಿಗೆ ಉಪಯೋಗವಾಗಬಹುದು’ ಎನ್ನುವ ಆಶಯ ಚೆನ್ನಾಗಿದೆ.
ಈ ಕೃತಿಯ ಮೊದಲಿಗೆ ಮೈಸೂರು ಹವ್ಯಾಸಿ ರಂಗಭೂಮಿಯಲ್ಲಿ ಅವರು ಅಭಿನಯಿಸಿದ ನಾಟಕಗಳ ಕುರಿತು ಅದರಲ್ಲೂ ಸಮತೆಂತೋ, ಸಮುದಾಯ ಹಾಗೂ ಕಲಸುರುಚಿ ತಂಡಗಳೊಂದಿಗೆ ನಟಿಸಿದ ನಾಟಕಗಳ ವಿವರಗಳಿವೆ. ಅದರಲ್ಲೂ ನಾಟಕದ ಕುರಿತು ಪರಿಚಯ, ಯಾರೆಲ್ಲ ನಟಿಸಿದರು ಜೊತೆಗೆ ಪತ್ರಿಕಾ ವಿಮರ್ಶೆಗಳನ್ನೂ ಅವರು ದಾಖಲಿಸಿದ್ದಾರೆ.
ಆಮೇಲೆ ನಾಟಕ ನಿರ್ದೇಶಕಿಯಾಗಿ ತಮ್ಮ ಅನುಭವಗಳನ್ನು ಅವರು ಹೇಳಿದ್ದಾರೆ. ಮೊದಲಿಗೆ ಅವರು ಮಹಾಶ್ವೇತಾದೇವಿ ಅವರ ‘ರುಡಾಲಿ’ ಕೃತಿಯನ್ನು ನಾಟಕವಾಗಿ ನಿರ್ದೇಶಿಸಿದರು. 30 ಕಲಾವಿದರನ್ನು ಒಟ್ಟುಗೂಡಿಸಿಕೊಂಡು ನಾಟಕ ನಿರ್ದೇಶಿಸುವಾಗ ಆದ ಸವಾಲುಗಳನ್ನು ಎದುರಿಸಿದ ಬಗೆ ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಈ ನಾಟಕದ ಪ್ರದರ್ಶನ ಒಂದೆರಡು ದಿನಗಳಿದ್ದಾಗ ಕಲಾವಿದೆಯೊಬ್ಬರು ಕೈ ಕೊಟ್ಟಾಗ ನಟಿ ಗಿರಿಜಾ ಲೋಕೇಶ್ ಅವರನ್ನು ಕೇಳಿಕೊಂಡಾಗ, ಅವರು ಒಪ್ಪಿ ಅಭಿನಯಿಸಿದ್ದನ್ನು ಅವರು ಮರೆತಿಲ್ಲ. ನಂತರ ಮಹೇಶ್ ಎಲಕುಂಚವಾರ ಅವರ ‘ಸೊನಾಟ’ ಎಂಬ ಮರಾಠಿ ನಾಟಕವನ್ನು ಗಿರೀಶ್ ಕಾರ್ನಾಡ್ ಅವರು ಅನುವಾದಿಸಿದ್ದನ್ನು ರಾಮಿ ನಿರ್ದೇಶಿಸಿದರು. ಈ ನಾಟಕದ ನಿರ್ದೇಶನದ ಸಂದರ್ಭದಲ್ಲಿ ಅವರಿಗೆ ಖುಷಿ ಕೊಟ್ಟ ಸಂಗತಿಗಳನ್ನು ಹೀಗೆ ಹೇಳಿದ್ದಾರೆ- ‘‘ತಾಲೀಮಿನ ಸಮಯದಲ್ಲಿ ನಡೆಯುತ್ತಿದ್ದ ನಾಟಕದ ತಿರುಳನ್ನು ಬಗೆಯುವ ಚರ್ಚೆಗಳು, ವಾದವಿವಾದಗಳು ಮುಖ್ಯ. ನಾವುಗಳೆಲ್ಲ ಮಹಿಳೆಯರೇ ಆದ್ದರಿಂದ ಈ ನಾಟಕದ ಚರ್ಚೆಗಳ ಹಿನ್ನೆಲೆಯಲ್ಲಿ ನಮ್ಮ ಸ್ವಂತ ಅನುಭವ, ನೋವು-ನಲಿವುಗಳನ್ನು ಕೂಡ ಈ ನಾಟಕದೊಂದಿಗೆ ಸೇರಿಸಿಕೊಳ್ಳುತ್ತ, ಚರ್ಚಿಸುತ್ತ ಹೋದದ್ದು ಗಮನಾರ್ಹ. ಇದರಿಂದಾಗಿ ಈ ನಾಟಕದ ತಾಲೀಮು ಒಂದು ರೀತಿಯ ಅಪೂರ್ವ ಅನುಭವ’’ ಎಂದಿದ್ದಾರೆ. ಇದರೊಂದಿಗೆ ಅವರು ನಿರ್ದೇಶಿಸಿದ ಏಕವ್ಯಕ್ತಿ ನಾಟಕ ‘ನಾನಿಲ್ಲಿರಬೇಕಾಗಿತ್ತು’ ಇದನ್ನು ಜಯಶ್ರೀ ಹೆಗಡೆ ಪ್ರಸ್ತುತಪಡಿಸಿದರು.
ಬಳಿಕ ಸಿಂಗಾಪುರದಲ್ಲಿನ ರಂಗಭೂಮಿಯ ನಂಟಿನ ಕುರಿತು ರಾಮಿ ನಿರೂಪಿಸಿದ್ದಾರೆ. ಅವರ ಮಗಳು ಸೌಮ್ಯಾ ವರ್ಮಾ ಅವರು ಸಿಂಗಾಪುರದಲ್ಲಿ ನೆಲೆ ನಿಂತಿದ್ದರ ಜೊತೆಗೆ ರಂಗಭೂಮಿ ಶಿಕ್ಷಕಿಯಾಗಿದ್ದಾರೆ. ಸಿಂಗಾಪುರದಲ್ಲಿದ್ದಾಗಲೇ ‘ಪತ್ತೇ ನಿಮಿದಂ’ ಎಂಬ ತಮಿಳು, ‘ದಸ್ತಕ್’ ಎಂಬ ಹಿಂದಿ ನಾಟಕಗಳಲ್ಲಿ ರಾಮಿ ಅಭಿನಯಿಸಿದರು. ‘‘ಅಲ್ಲಿ ತಾಲೀಮಿನ ವೇಳೆಯಲ್ಲಿ ಎಲ್ಲ ತಂಡಗಳು ಪಾಲಿಸಲೇಬೇಕಾದ ಕೆಲವು ಅಂಶಗಳೆಂದರೆ ವ್ಯಾಯಾಮ, ಏಕಾಗ್ರತೆಯಿಂದ ನಡೆಯುತ್ತಲೇ ಸಂಭಾಷಣೆ ಹೇಳುವುದು ಜೊತೆಗೆ ಸಮಯಪಾಲನೆ. ಬಾಂಧವ್ಯ, ಸಾಮರಸ್ಯ, ಸಮಾನ ಆಸಕ್ತಿ, ತಂಡದ ಜೀವನೋತ್ಸಾಹ, ಆಂತರಿಕ ಶಿಸ್ತು, ಇವೆಲ್ಲದರ ಸಂಗಮವೇ ರಂಗಭೂಮಿ ಎಂದು ಭಾವಿಸಿರುವೆ’’ ಎಂದು ರಾಮಿ ಹೇಳಿದ್ದನ್ನು ಮರೆಯಲಾಗದು.
ಅವರು ವಿದೇಶದಲ್ಲಿ ನೋಡಿದ ನಾಟಕಗಳ ಅಧ್ಯಾಯ ಮುಖ್ಯವಾಗಿದೆ. ‘‘ರಂಗಭೂಮಿಯ ಹುಚ್ಚು ನನ್ನನ್ನು ಎಲ್ಲಿ ಹೋದರೂ ಬಿಡದು. ಹೊರದೇಶದ ಪ್ರವಾಸಗಳಲ್ಲೂ ಕಾಡುತ್ತಿತ್ತು. ಹೀಗಾಗಿ ನಾನು ಸುತ್ತಾಡಿದ ದೇಶಗಳಲ್ಲೆಲ್ಲಾ ನಾಟಕಗಳನ್ನು ನೋಡಿರುವೆ’’ ಎನ್ನುವುದು ಅವರ ಮಾತು. ಜಪಾನ್, ನ್ಯೂಯಾರ್ಕ್, ಎಡಿನ್‌ಬರೊದಲ್ಲಿ ನೋಡಿದ ನಾಟಕಗಳ ವಿವರಗಳನ್ನು ಅವರು ಕೊಡುತ್ತಾರೆ. ಅದರಲ್ಲೂ ಎಡಿನ್‌ಬರೊದಲ್ಲಿ ಪ್ರತೀ ರವಿವಾರ ಮಕ್ಕಳಿಗಾಗಿ ದೊಡ್ಡವರು ಆಡುವ ನಾಟಕವನ್ನು ಅವರು ನೋಡಿದ್ದಾರೆ. ‘ಪೈಯ್ಡ್ ಪೇಪರ್ ಆಫ್ ಹೆಮ್ಲಿನ್’ ನಾಟಕವನ್ನು ಮಕ್ಕಳೊಂದಿಗೆ ಮಕ್ಕಳಾಗಿ ನೋಡಿದ್ದನ್ನು ಅವರು ಆನಂದಿಸಿದ್ದಾರೆ. ಹೀಗೆಯೇ ಇಂಗ್ಲೆಂಡಿನ ಸ್ಟ್ರಾಟ್‌ಫರ್ಡ್‌ಗೆ ಹೋಗಿ ಷೇಕ್ಸ್‌ಪಿಯರ್‌ನ ಹುಟ್ಟಿದ ಸ್ಥಳ, ಷೇಕ್ಸ್‌ಪಿಯರ್ ರಂಗಮಂದಿರ, ಸಭಾಂಗಣ, ರಂಗಮಂಚ, ಬೆಳಕು, ವೇಷಭೂಷಣ, ಗ್ರೀನ್‌ರೂಮ್ ನೋಡಿದ ನಂತರ ಅಲ್ಲಿ ‘ಹ್ಯಾಮ್ಲೆಟ್’ ನಾಟಕವನ್ನೂ ನೋಡಿದರು. ಅಲ್ಲದೆ ಲಂಡನ್‌ನ ಗ್ಲೋಬ್ ಥಿಯೇಟರ್‌ನಲ್ಲಿ ಷೇಕ್ಸ್‌ಪಿಯರನ ಕಾಲದ ನಾಟಕಗಳನ್ನು ಆಡುವ ರಂಗಮಂದಿರವನ್ನು ನೋಡಿದ್ದಾರೆ.
ಬಳಿಕ ನಮ್ಮ ನಾಡಲ್ಲಿ ನೋಡಿದ ನಾಟಕಗಳ ಕುರಿತು ವಿಶ್ಲೇಷಿಸಿದ್ದಾರೆ. ಅದರಲ್ಲೂ ಅವರ ಗಂಡ ಬಾಲಗೋಪಾಲ ವರ್ಮಾ, ವಿಶ್ವನಾಥ ಮಿರ್ಲೆ, ನ.ರತ್ನ ಅವರೊಂದಿಗೆ ಬೆಂಗಳೂರಿನಲ್ಲಿ ನಾಟಕಗಳನ್ನು ನೋಡಲೆಂದೇ ಮೈಸೂರಿನಿಂದ ಕಾರು ಹತ್ತಿಕೊಂಡು ಹೋಗಿದ್ದನ್ನು ಸ್ಮರಿಸುತ್ತಾರೆ. ಆದರೆ 1979ರ ನಂತರ ಪೆಟ್ರೋಲ್ ಬೆಲೆ ಹೆಚ್ಚಾದ ಮೇಲೆ ಬೆಂಗಳೂರಿಗೆ ಹೋಗಿ ನಾಟಕ ನೋಡಿ ಬರುವುದು ಕಡಿಮೆಯಾಯಿತೆಂದು ಬೇಸರದಿಂದ ಹೇಳಿಕೊಂಡಿದ್ದಾರೆ. ನಾಟಕ ಅಕಾಡಮಿ ಸದಸ್ಯೆಯಾಗಿ ತಾವು ಕೈಗೊಂಡ ಚಟುವಟಿಕೆಗಳನ್ನೂ ಅವರು ಹೇಳಿಕೊಂಡಿದ್ದಾರೆ.
ಮಕ್ಕಳಿಗಾಗಿಯೇ ಕಿನಾರ (ಕಿರಿಯರ ನಾಟಕ ರಂಗ) ತಂಡವನ್ನು 1981ರಲ್ಲಿ ಸ್ವಾಮಿಮಹಾದೇವಾನಂದ ಅವರೊಂದಿಗೆ ಆರಂಭಿಸಿ ಶಿಬಿರ ಹಮ್ಮಿಕೊಂಡಿದ್ದನ್ನು ಹೇಳಿದ್ದಾರೆ. ನಂತರ ಮೈಸೂರಿನ ರಂಗಮಂದಿರಗಳು, ಮೈಸೂರು ಹವ್ಯಾಸಿ ರಂಗಭೂಮಿ ಬೆಳೆದು ಬಂದ ಬಗೆ, ಮೈಸೂರು ಹವ್ಯಾಸಿ ರಂಗತಂಡಗಳ ವೈಶಿಷ್ಟ್ಯವನ್ನು ಬರೆದಿದ್ದಾರೆ.
ಸಾಮಾನ್ಯವಾಗಿ ನಾಟಕಗಳಲ್ಲಿ ಅಭಿನಯಿಸುವುದಷ್ಟೇ ಮುಖ್ಯ ಎಂದು ಅರಿತಿರುವ ಅನೇಕ ಕಲಾವಿದರಿಗೆ ರಾಮಿ ಮಾದರಿಯಾಗಿದ್ದಾರೆ. ಏಳೆಂಟು ವರ್ಷಗಳ ಅನೇಕ ತೊಡರುಗಳನ್ನು ದಾಟಿಕೊಂಡು ಹೊರಬಂದ ಈ ಕೃತಿಯನ್ನು ಡಾ.ರೂಪಾ ಬರ್ನಾರ್ಡ್ ಸಹಕಾರದೊಂದಿಗೆ ಮೀನಾ ಮೈಸೂರು (9845790862) ಸಂಪಾದಿಸುವುದರ ಜೊತೆಗೆ ಪ್ರಕಟಿಸಿರುವುದಕ್ಕೆ ಅಭಿನಂದಿಸುವೆ.