‘‘ನಟರಷ್ಟೇ ಆಗಬೇಡಿ; ನೇಪಥ್ಯ ಕಲಾವಿದರಾಗಿ’’ -ಪುರುಷೋತ್ತಮ್ ತಲವಾಟ
‘‘ನಟರಾದರೆ ಹೊಟ್ಟೆ ತುಂಬಲ್ಲ ಅಂದರೆ ದುಡ್ಡು ಕೊಡಲ್ಲ. ಆದರೆ ನಿರ್ದೇಶಕರಾದರೆ, ನೇಪಥ್ಯ ಕಲಾವಿದರಾದರೆ ದುಡ್ಡು ಕೊಡುತ್ತ್ತಾರೆ. ಪ್ರತೀ ತರಬೇತಿಯಲ್ಲಿ ಹೇಳುವೆ. ನಟನೆ ಜೊತೆಗೆ ನೇಪಥ್ಯದ ಕೆಲಸ ಕಲಿಯಿರಿ’’ ಎಂದು ಮುಗಳ್ನಕ್ಕರು ನೇಪಥ್ಯ ಕಲಾವಿದ ಪುರುಷೋತ್ತಮ್ ತಲವಾಟ.
ಮೈಸೂರಿನ ರಂಗಾಯಣ ಕಲಾವಿದರಿಗೆ ನೇಪಥ್ಯ ಕುರಿತು ತರಬೇತಿ ನೀಡಲು ಬಂದಿರುವ ಅವರು, ಮಾತಿಗೆ ಸಿಕ್ಕರು.
‘‘ಈಗಿನ ಹೆಚ್ಚಿನ ಯುವತಲೆಮಾರು ರಂಗದ ಮೇಲೆ ಮಿಂಚಬೇಕೆಂದು ರಂಗಭೂಮಿಗೆ ಬರುತ್ತಾರೆ. ಯಾರೋ ರಂಗಸಜ್ಜಿಕೆ ಮಾಡುತ್ತಾರೆ. ಯಾರೋ ಸೆಟ್ ಹಾಕುತ್ತಾರೆ. ಯಾರೋ ಮೇಕಪ್ ಮಾಡುತ್ತಾರೆ. ಹೀಗಾದಾಗ ನಟನೆಯೊಂದೇ ಸಾಕು ಎನ್ನುವ ಮನಸ್ಥಿತಿಗೆ ಬರುತ್ತಾರೆ. ಆದರೆ ನಟರಷ್ಟೇ ಆಗಬೇಡಿ. ನೇಪಥ್ಯ ಕಲಾವಿದರಾಗಿ. ನಿರಂತರವಾಗಿ ಕೆಲಸ ಸಿಗುತ್ತದೆ. ಆದರೆ ಆಸಕ್ತಿಯಿಲ್ಲ, ಪ್ರೋತ್ಸಾಹ ಸಿಗಲ್ಲ, ಪ್ರಚಾರ ಸಿಗಲ್ಲ ಎನ್ನುವ ಮಾತು ಮರೆತುಬಿಡಿ. ಆಸಕ್ತಿಯಿದ್ದರೆ, ಕೆಲಸ ಕಲಿತರೆ ಪ್ರೋತ್ಸಾಹ ಸಿಗುತ್ತದೆ. ಪ್ರಚಾರ ನಿಧಾನವಾಗಿಯಾದರೂ ಸಿಗುತ್ತದೆ. ನಾಟಕ ಮುಗಿದ ಮೇಲೆ ಕಲಾವಿದರನ್ನು ಪರಿಚಯಿಸುವ ಜೊತೆಗೆ ನೇಪಥ್ಯ ಕಲಾವಿದರನ್ನೂ ಪರಿಚಯಿಸಬೇಕು’’ ಎನ್ನುವ ಒತ್ತಾಯ ಅವರದು. ಮೇಕಪ್ ಜೊತೆಗೆ ರಂಗಪರಿಕರ, ರಂಗಸಜ್ಜಿಕೆ, ವಸ್ತ್ರಾಲಂಕಾರ ಕುರಿತು ಅವರು ಶಿಬಿರಗಳಲ್ಲಿ ತರಬೇತಿ ನೀಡುತ್ತಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹತ್ತಿರದ ತಲವಾಟ ಗ್ರಾಮದವರಾದ ಅವರಿಗೆ ನಾಟಕದ ಗೀಳು ಬಂದಿದ್ದು ಸಾಗರದಲ್ಲಿ ರಾಮಚಂದ್ರಯ್ಯ ಅವರು ಗಜಾನನ ನಾಟಕ ಮಂಡಳಿ ಕಟ್ಟಿಕೊಂಡಿದ್ದಾಗ. ಇದರಲ್ಲಿನ ನಾಟಕಗಳನ್ನು ಆಡುವ ಮೂಲಕ, ನಾಟಕದ ಮಾತು ಕಲಿತರೆ ನಟರೆಂದು ತಿಳಿದುಕೊಂಡರು. ಆಗ ಸಾಗರದಲ್ಲಿದ್ದ ಗುರುರಾಜ ರಾವ್ ಬಾಪಟ್ ಅವರು ‘ಜೂಲಿಯಸ್ ಸೀಜರ್’ ನಾಟಕವಾಡಿಸಲು ಮುಂದಾದರು. ತಲವಾಟ ಅವರಿಗೆ ಬ್ರೂಟಸ್ ಪಾತ್ರ ಸಿಕ್ಕಿತು. ಆದರೆ ವಸ್ತ್ರಾಲಂಕಾರಕ್ಕೆ ಏನು ಮಾಡುವುದು? ಇದಕ್ಕಾಗಿ ಉಡುಪಿಗೆ ಹೋಗಿ ಯಾರನ್ನೋ ಕೇಳಿದಾಗ ಕೊಡಲಿಲ್ಲ. ಅವರ ಗೆಳೆಯರಾದ ಗೋಪಾಲಕೃಷ್ಣ ಕೊಳತ್ತಾಯ ಅವರು ಎನ್ಸೈಕ್ಲೊಪಿಡಿಯಾ ತೋರಿಸಿದರು. ಪೇಪರ್ ಪಲ್ಪ್ ಮೂಲಕ ಮಣ್ಣಿನ ಕಿರೀಟ, ಎದೆಕವಚದ ಜೊತೆಗೆ ಕತ್ತಿ, ಗುರಾಣಿಯನ್ನು ತಲವಾಟ ಸಿದ್ಧಗೊಳಿಸಿದರು. ನಾಟಕ ಯಶಸ್ವಿಯೂ ಆಯಿತು. ಪಾತ್ರಕ್ಕಿಂತ ನೇಪಥ್ಯದ ಕೆಲಸ ಮಹತ್ವದ್ದು ಎಂದರಿತರು. ಸಂಗೀತ ಹೊರತುಪಡಿಸಿ ಎಲ್ಲ ವಿಭಾಗದಲ್ಲೂ ತೊಡಗಿಕೊಂಡರು. ಆದರೆ ಅಕಾಡಮಿಕ್ ಓದಲು ಅವರಿಗೆ ಬೇಜಾರಿತ್ತು. ಹೀಗಾಗಿ ಅವರ ತಂದೆ ನಾಗೇಂದ್ರ ಭಟ್ ಹೊಡೆದುಬಡಿದು ಶಾಲೆಗೆ ಸೇರಿಸಿದರು. ತಾಳಗುಪ್ಪದಲ್ಲಿ ಪ್ರೌಢಶಾಲೆ ಶುರುವಾದಾಗ ಅವರ ತಂದೆ ಎಳೆದುಕೊಂಡು ಹೋಗಿ ಸೇರಿಸಿದರು. ಅಲ್ಲಿ ವಿಜ್ಞಾನದ ಚಿತ್ರಗಳನ್ನು ಬರೆದಾಗ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿತು. ತಮ್ಮ ಸಹಪಾಠಿಗಳಿಗೂ ಚಿತ್ರಗಳನ್ನು ಬರೆದುಕೊಡುತ್ತಿದ್ದರು. ಎಸೆಸೆಲ್ಸಿ ನಂತರ ಮುಂದೇನು ಎಂದುಕೊಂಡಾಗ ಅವರ ಚಿಕ್ಕಪ್ಪನ ಮಗ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದರು. ‘‘ಮೈಸೂರಿನಲ್ಲಿ ಚಿತ್ರ ಬರೆಯುವುದನ್ನು ಕಲಿಸುವ ಶಾಲೆಯಿದೆ. ಅಲ್ಲಿಗೆ ಸೇರಿಸುವೆ’’ ಎಂದಾಗ ಮನೆಯವರಿಗೆಲ್ಲ ಗಾಬರಿ. ಚಿತ್ರ ಬಿಡಿಸುವುದನ್ನು ಕಲಿಸುವ ಶಾಲೆಯಿದೆಯೇ ಎಂದು. ಹಾಗೆ ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯ (ಈಗಿನ ಕಾವಾದ)ದಲ್ಲಿ ಫೈನ್ ಆರ್ಟ್ಸ್ನಲ್ಲಿ ಡಿಪ್ಲೊಮಾ ಪದವಿ ಪಡೆಯುವುದರ ಜೊತೆಗೆ ಮಹಾರಾಜ ಕಾಲೇಜಿನಲ್ಲಿ (ಸಂಜೆ ತರಗತಿ) ಪಿಯುಸಿ ಮುಗಿಸಿದರು.
ಹೀಗೆ ಓದು ಮುಗಿದ ಮೇಲೆ ವಾಪಸ್ ತಲವಾಟಿಗೆ ಹೋದರು. ನೀನಾಸಂ ಶುರುವಾಗುವ ಮೊದಲು ಅಲ್ಲಿಗೆ ಓಡಾಡಿ ಚಿತ್ರಕಲೆ ಕುರಿತು ಹೇಳಿಕೊಡುತ್ತಿದ್ದರು. ಇಷ್ಟರಲ್ಲಿ ಚಿದಂಬರರಾವ್ ಜಂಬೆ ಅವರು ಕೆಳದಿಯಲ್ಲಿ ಮೇಕಪ್ ನಾಣಿ ಅವರನ್ನು ಕರೆಸಿ ಪ್ರಸಾಧನ (ಮೇಕಪ್) ತರಬೇತಿ ಶಿಬಿರ ಏರ್ಪಡಿಸಿದಾಗ ತಲವಾಟ ಅವರೂ ಭಾಗವಹಿಸಿದರು. ಆಮೇಲೆ ಮೇಕಪ್ ನಾಣಿ ಅವರ ಬಳಿ ಬೆಂಗಳೂರಿಗೂ ಹೋಗಿ ಕಲಿತರು. ಆದರೆ ಕಲಿತುದನ್ನು ಪ್ರಯೋಗಿಸುವುದು ಎಲ್ಲಿ ಎಂಬ ಆಲೋಚನೆಗೆ ತಮ್ಮ ಊರಿನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಮೇಕಪ್ ಮಾಡಿದರು. ಆಗೆಲ್ಲ ‘‘ಎಂಥಕ್ಕೆ ಮೇಕಪ್? ಮೈಕಿಗೆ ಕೊಡಲು ದುಡ್ಡಿಲ್ಲ. ಹಾರ ತರಲು ದುಡ್ಡಿಲ್ಲ’’ ಎಂದು ಶಾಲೆಯವರು ಪೇಚಾಡಿದಾಗ ಇವರು ಪುಕ್ಕಟೆಯಾಗಿ ಮೇಕಪ್ ಮಾಡುವೆ ಎಂದಾಗ ಶಾಲೆಯ ಮುಖ್ಯ ಶಿಕ್ಷಕಿ ತನಗೂ ಮೇಕಪ್ ಮಾಡಿ ಎಂದರಂತೆ! ಹೀಗಿರುವಾಗ ನೀನಾಸಂಗೆ ಜಂಬೆ ಅವರು ಪ್ರಾಂಶುಪಾಲರಾಗಿ ಬಂದ ಮೇಲೆ ಆಹ್ವಾನಿಸಿದರು. ನೀನಾಸಂನಲ್ಲಿ ಮೇಕಪ್ ಜೊತೆಗೆ ಲೈಟಿಂಗ್, ಕರ್ಟನ್, ಪ್ರತಿಧ್ವನಿ ನಿಯಂತ್ರಣ ಕೆಲಸ ಮಾಡತೊಡಗಿದರು. ಇದನ್ನು ಕಂಡ ಶಿವಮೊಗ್ಗದ ಜಿಲ್ಲಾಧಿಕಾರಿ ಪಾಂಡೆ ಅವರು, ಶಿವಮೊಗ್ಗದ ಕುವೆಂಪು ರಂಗಮಂದಿರಕ್ಕೆ ಪ್ರತಿಧ್ವನಿ ನಿಯಂತ್ರಣ ಕೆಲಸ ವಹಿಸಿದರು. ಬಳಿಕ ಅಮೆರಿಕದ ಫೋರ್ಡ್ ಫೌಂಡೇಷನ್, ನೀನಾಸಂಗೆ ಗ್ರಾಮೀಣ ರಂಗಭೂಮಿಯ ಉತ್ತೇಜನಕ್ಕೆ ಅನುದಾನ ನೀಡಿತು. ಇದರಿಂದ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲವಾಟ ಅವರು, ಜಯತೀರ್ಥ ಜೋಶಿ ಅವರೊಂದಿಗೆ ನಾಟಕವಾಡಿಸಿದರು. ಇಷ್ಟರಲ್ಲಿ ಕೆ.ವಿ.ಅಕ್ಷರ ಅವರು ಇಂಗ್ಲೆಂಡ್ನಿಂದ ವಾಪಸ್ ಬಂದರು. ‘‘ಲೈಟ್ಸ್, ಕರ್ಟನ್, ಮೈಕ್ ಇವೆ. ಬಸ್ ಕೂಡಾ ಇದೆ. ರೆಪರ್ಟರಿ ಮಾಡೋಣ’’ ಎಂದರು. ಇದರಿಂದ 1983ರಲ್ಲಿ ಮೊದಲ ಬಾರಿಗೆ ನೀನಾಸಂ ತಿರುಗಾಟ ಶುರುವಾಯಿತು. ಆಗ ಮ್ಯಾನೇಜರ್ ಆದವರು ತಲವಾಟ. ಅವರು ನಿರಂತರವಾಗಿ ಒಂಭತ್ತು ವರ್ಷಗಳವರೆಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು. ಪ್ರತೀ ವರ್ಷ ರಂಗಸಜ್ಜಿಕೆ, ಪರಿಕರ, ಮೇಕಪ್ ಜೊತೆಗೆ ಕಲಾವಿದರಿಗೆ ಹುಷಾರಿಲ್ಲವೆಂದಾಗ ಅಭಿನಯಿಸಿದರು. ಆಮೇಲೆ ನೀನಾಸಂನಲ್ಲಿ ಒಂದೆರಡು ವರ್ಷ ಕೆಲಸ ಮಾಡಿ ಹೊರಬಂದರು. ಬಳಿಕ ಸಾಣೇಹಳ್ಳಿ, ಕೊಪ್ಪಳದ ವಿಸ್ತಾರ ಶಾಲೆ, ಮೈಸೂರು ರಂಗಾಯಣ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು, ಬೆಂಗಳೂರಿನ ಆರ್ಆರ್ಸಿಯಲ್ಲಿ ಮೇಕಪ್ ತರಬೇತಿ ನೀಡಿದರು. ರಂಗಕರ್ಮಿ ಎಸ್. ಮಾಲತಿ ಅವರನ್ನು ಮದುವೆಯಾದ ಮೇಲೆ ಕೇರಳ, ತಮಿಳುನಾಡು, ಗೋವಾ, ದಿಲ್ಲಿಯ ಎನ್ಎಸ್ಡಿಯಲ್ಲೂ ಮೇಕಪ್ ಶಿಬಿರ ಕೈಗೊಂಡರು.
‘‘ಸೆಟ್ ಅಂದರೆ ಮನೆ ಅಥವಾ ಗುಡಿಸಲು ಬೇಕೆಂದರೆ ಅದನ್ನೇ ಸಿದ್ಧಪಡಿಸುತ್ತಿದ್ದೆವು. ಈಗ ಹಾಗಲ್ಲ, ಪೇಂಟಿಂಗ್ ಬಳಸಬಹುದು, ಕಟೌಟ್ ಬಳಸಬಹುದು. ಪ್ರೆಜೆಕ್ಷನ್ ಕೂಡಾ ಬಳಸಬಹುದು. ಎಸ್.ಮಾಲತಿ ಅವರು ‘ಬುದ್ಧ ಹೇಳಿದ ಕಥೆ’ ನಾಟಕ ನಿರ್ದೇಶಿಸುವಾಗ ಮಕ್ಕಳಿಗೆ ಜಿಂಕೆಗಳ ಮುಖವಾಡ ಹಾಕುವುದು ಬೇಡವೆಂದರು. ಮುಖವಾಡ ಹಾಕಿದರೆ ನಗೋದು, ಅಳೋದು, ಅಭಿನಯವೂ ಗೊತ್ತಾಗಲ್ಲ ಎಂದಾಗ ತಲೆಗೆ ಕೋಡು ಕಟ್ಟಿ, ಕಣ್ಣಿಗೆ ಪಟ್ಟಿ ಕಟ್ಟಿದೆ. ಪೇಪರ್ ಪಲ್ಪ್ ನಂತರ ಫೋಮ್ ಬಂತು. ಆಮೇಲೆ ಮಾಸ್ಕ್ ಮಾಡುವುದನ್ನೂ ಬಿಟ್ಟೆ’’ ಎನ್ನುವ ಮೂಲಕ ಬದಲಾದ ಕ್ರಮವನ್ನು ವಿವರಿಸಿದರು.
ಗಿರೀಶ್ ಕಾಸರವಳ್ಳಿ ಅವರ ‘ದ್ವೀಪ’, ‘ಹಸೀನಾ’, ‘ಕನಸೆಂಬ ಕುದುರೆಯನೇರಿ’ ಸಿನೆಮಾಗಳಲ್ಲದೆ, ಕಾಸರವಳ್ಳಿ ಅವರ ‘ಒಂದು ಕೊಲೆಯ ಸುತ್ತ’ ಕಿರುಚಿತ್ರವೂ ಸೇರಿದಂತೆ 20ಕ್ಕೂ ಅಧಿಕ ಸಿನೆಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. 76 ವರ್ಷ ವಯಸ್ಸಿನ ತಲವಾಟ ಅವರು ರಂಗಶಿಬಿರಗಳಲ್ಲಿ ನೇಪಥ್ಯದ ಮಹತ್ವ ಹೇಳಿಕೊಡುತ್ತಾರೆ. ನೇಪಥ್ಯ ಕಲಾವಿದರಿಗೆ ಕೊಡುವ ದಿಲ್ಲಿಯ ಚಮ್ಮನ್ಲಾಲ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿ, ಮೇಕಪ್ ನಾಣಿ ಪ್ರಶಸ್ತಿ, ಅ.ನಾ. ರಮೇಶ್ ಪ್ರಶಸ್ತಿ ಜೊತೆಗೆ 2020ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು ಅವರು.