ಹಿರೇಹೊನ್ನಿಹಳ್ಳಿಯ ಗಜಾನನ ನಾಟ್ಯಕಲಾ ಸಂಘಕ್ಕೆ ಹೊನ್ನಹಬ್ಬ
ನಮ್ಮ ಗ್ರಾಮೀಣ ರಂಗಭೂಮಿ ಈಗಲೂ ಶ್ರೀಮಂತವಾಗಿದೆ. ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ನಾಟಕವಾಡುವುದು ರೂಢಿ. ಹೀಗೆ ಅನವರತ ನಡೆಯುವುದು ಅಪರೂಪ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘವು ಕಳೆದ 50 ವರ್ಷಗಳಿಂದ ಸತತವಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿದೆ.
1950ರಿಂದ 60ರವರೆಗೆ ಸಂಘವು ಮೂಲ ಹಿರಿಯರಾದ ಕಲಾತಪಸ್ವಿ ಗಿರಿಯಪ್ಪ ಶಿವಬಸಪ್ಪ ಬಡಿಗೇರ, ಕಾಳಪ್ಪ ಅಡಿವೆಪ್ಪ ಬಡಿಗೇರ, ಫಕ್ಕೀರಪ್ಪ ಬಸ್ತಿ, ನೀಲಗಿರೆಪ್ಪ ರಾಮಪ್ಪ ಕಮ್ಮಾರ, ಶಿವಬಸಪ್ಪ ಬಸಲಿಂಗಪ್ಪ ಬಡಿಗೇರ, ಕಂಟೆಪ್ಪ ಮೂಗಪ್ಪ ಬಡಿಗೇರ, ಅಡಿವೆಪ್ಪ ನೀಲಪ್ಪ ಬಡಿಗೇರ, ಮಹದೇವಗೌಡ ಪಾಟೀಲ, ಶಿವಪ್ಪ ಕಂಬಾರ (ಕ್ಯಾರಕೊಪ್ಪ) ಹಾಗೂ ಇನ್ನೂ ಮುಂತಾದ ಕಲಾವಿದರು ಸೇರಿ ಅಂದಿನ ಕಾಲದಲ್ಲಿ ಬರಿ ದೊಡ್ಡಾಟಗಳಿಗೆ ಸೀಮಿತವಾಗಿತ್ತು. ನಂತರ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ನಾಟಕಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ರಾಜದ್ರೋಹ, ರಾಜಖಡ್ಗ, ಶನಿಮಹಾತ್ಮೆ, ಚೌತಿಚಂದ್ರಮ ಹೀಗೆ ಹಲವಾರು ನಾಟಕಗಳನ್ನು ರಂಗದ ಮೇಲೆ ಪ್ರದರ್ಶನ ನೀಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು.
ಆನಂತರ ಈ ಸಂಘವನ್ನು ರಂಗ ದಿಗ್ಗಜರಾದ ಕಾಳಪ್ಪ ಅಡಿವೆಪ್ಪ ಬಡಿಗೇರ ಹಾಗೂ ಫಕ್ಕೀರಪ್ಪ ಬಸ್ತಿ, ಬಸೆಟ್ಟೆಪ್ಪ ದೇಸೂರ ಇವರು ಮುನ್ನಡೆಸಿದರು. ಇವರ ಗರಡಿಯಲ್ಲಿ ಬೆಳೆದ ಮಲ್ಲೇಶಪ್ಪ ಬಸಲಿಂಗಪ್ಪ ಧನಿಗೊಂಡ, ರಾಮಪ್ಪ ಚನಬಸಪ್ಪ ಹಡಪದ, ಬಂಡೆಪ್ಪ ಯಲ್ಲಪ್ಪ ಶಿರಕೋಳ, ಯಲ್ಲಪ್ಪ ಬಸವಣ್ಣೆಪ್ಪ ಕಿಚಡಿ, ಮೈಲಾರಪ್ಪ ಗಿರೆಪ್ಪ ಬಡಿಗೇರ, ಸೋಮಲಿಂಗಪ್ಪ ಕಾಳಪ್ಪ ಬಡಿಗೇರ, ನಿಂಗಪ್ಪ ಕಲ್ಲಪ್ಪ ಅಣ್ಣಿಗೇರಿ, ನಿಂಗಪ್ಪ ಬಸಪ್ಪ ಕಮ್ಮಾರ, ಬಸವಂತಪ್ಪ ಚನಬಸಪ್ಪ ಹಡಪದ, ಗೂಳಪ್ಪ ಬಸವಂತಪ್ಪ ಕಾರಿ, ನಿಜಗುಣೆಪ್ಪ ಬಸಪ್ಪ ಕಮ್ಮಾರ, ಚನಬಸಪ್ಪ ದೇಸೂರ, ಮಾದೇವಪ್ಪ ಕುಸುಗಲ್, ವೀರಪ್ಪ ದೇಸೂರ, ಶಿವಲಿಂಗಪ್ಪ ಬಸಪ್ಪ ಜೋಡಳ್ಳಿ, ಚಂಬಣ್ಣ ದೇಸೂರ, ನಿಂಗಪ್ಪ ಲಂಗೋಟಿ, ಬಸವಣ್ಣೆಪ್ಪ ಕುಂದಗೋಳ, ಮುಹಮ್ಮದ್ ಅಲಿ ವರೂರ, ಮೈಲಾರಪ್ಪ ಕಾಳಪ್ಪ ಕಮ್ಮಾರ, ತಮ್ಮಣ್ಣ ಕಾಳಪ್ಪ ಕಮ್ಮಾರ, ಪ್ರಭಾಕರ ಬಾಂಬುಲೆ, ಮಾದೇವಪ್ಪ ಶೀಲಿ ಇವರು ಬೆಳದಿಂಗಳು, ಜೀವನಯಾತ್ರೆ, ಸೌಭಾಗ್ಯ ಲಕ್ಷ್ಮೀ, ಸಹೋದರ, ಸತಿಯ ಸೌಭಾಗ್ಯ, ರತ್ನ ಮಾಂಗಲ್ಯ, ಆದರ್ಶ ಪ್ರೇಮ, ಸೂಳೆಯ ಮಗ ಇನ್ನೂ ಹಲವಾರು ನಾಟಕಗಳನ್ನು ಅಭಿನಯಿಸಿದರು. ಇದರಲ್ಲಿ ಹೆಚ್ಚಿನವು ಜುಬಿಲಿ ಕವಿ ಎಚ್.ಎನ್. ಹೂಗಾರ ಬರೆದ ನಾಟಕಗಳೇ ಇವೆ. ಇದರ ಜೊತೆಗೆ ಎಂ. ಸೈಯದ್ ಮಾಸ್ತರ ಹುಬ್ಬಳ್ಳಿ ಮತ್ತು ರಾಮಣ್ಣ ಬಡಿಗೇರ ಹಾರ್ಮೋನಿಯಂ ಮತ್ತು ತಬಲಾ ವಿರೂಪಾಕ್ಷಪ್ಪ ಹೂಗಾರ ಮತ್ತು ಸಹ ಹಾರ್ಮೋನಿಯಂ ಮಾಸ್ತರ ಮಲ್ಲೇಶಪ್ಪ ಕಾಳಪ್ಪ ಬಡಿಗೇರ ಇವರ ಜೊತೆಗೂಡಿ ಕಲಾವಿದೆಯರಾದ ಝುಬೇದಾ ಕಲ್ಕತ್ತಾ, ಗೀತಾರಾಣಿ ಶಿಂದೆ, ಗೀತಾರಾಣಿ ಬೆಂಗಳೂರು, ಜಿ.ವಿ. ಶಾರದಾ, ಪರಿಮಳಾ ಕಲಾವಂತ, ಪುಷ್ಪಮಾಲಾ ಅಣ್ಣಿಗೇರಿ, ಆರ್. ಮೈನಾವತಿ ಮುಂತಾದ ಕಲಾವಿದರು ಸೇರಿ ಹಿರೇಹೊನ್ನಿಹಳ್ಳಿಯ ಗಜಾನನ ಸಂಘವನ್ನು ಇಡೀ ಧಾರವಾಡ-ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಬಾಯಲ್ಲಿ ನೆಲೆಯೂರುವಂತೆ ಮಾಡಿ ರಂಗಭೂಮಿಯನ್ನು ಜೀವಂತವಾಗಿರಿಸಿದರು.
ನೂರಾರು ನಾಟಕಗಳಲ್ಲಿ ಅಭಿನಯಿಸಿ ಕಲಾರಸಿಕರ ಮನಗೆದ್ದ ಈ ಎಲ್ಲಾ ಕಲಾವಿದರು ಕಷ್ಟಪಟ್ಟಿದ್ದು ಅಷ್ಟು ಇಷ್ಟಲ್ಲ. ಸಂಘದ ಆರ್ಥಿಕ ಸ್ಥಿತಿ ಹದಗೆಟ್ಟಾಗ ಪ್ರತಿಯೊಬ್ಬ ಕಲಾವಿದರೂ ಸೇರಿ ಹಿಂಜರಿಯದೆ ರೈತರ ಹೊಲಗಳಲ್ಲಿ ಭತ್ತ ಕೊಯ್ಯವುದು, ಕಳೆ ತೆಗೆಯುವುದು ಹಾಗೂ ಇನ್ನಿತರ ಗುತ್ತಿಗೆ ಕೆಲಸ ಕಾರ್ಯಗಳನ್ನು ಮಾಡಿ ಅದರಿಂದ ಬಂದ ಹಣದಿಂದ ಸಂಘವನ್ನು ಮುನ್ನಡೆಸಿ, ಸಂಘಕ್ಕೆ ಸ್ವಂತ ಹಾರ್ಮೋನಿಯಂ ಪೆಟ್ಟಿಗೆ, ತಬಲಾ ಹಾಗೂ ಇತರ ಸಂಗೀತ ಪರಿಕರಗಳನ್ನು ತಗೆದುಕೊಂಡರು.
ಇದಲ್ಲದೆ ಪ್ರತೀ ಹಳ್ಳಿ ಹಳ್ಳಿಗಳಿಗೂ ಕಾಲ್ನಡಿಗೆಯಲ್ಲಿ ಹೋಗಿ ತಮ್ಮ ನಾಟಕದ ಪ್ರಚಾರ ಕಲೆಯನ್ನು ತಾವೇ ನಿರ್ವಹಿಸುತ್ತಿದ್ದರು.
ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ, ಜನರಿಗೆ ಮನ ಮುಟ್ಟುವಂತೆ ಸಮಾಜಕ್ಕೆ ಮಾದರಿ ಯಾಗುವಂತೆ ಸಾಮಾಜಿಕ, ಹಾಸ್ಯಮಿಶ್ರಿತ ಮತ್ತು ಜಾನಪದ ಕಲೆಯ ಬಗ್ಗೆ ತಿಳಿ ಹೇಳಿ ಅಭಿನಯಿಸುತ್ತಿದ್ದರು.
ಆನಂತರ ಬಂದ ಪೀಳಿಗೆಯವರಲ್ಲಿ ಬಸವಂತಪ್ಪ ಚನ್ನಬಸಪ್ಪ ಹಡಪದ, ನಿಂಗಪ್ಪ ಬಸಪ್ಪ ಕಮ್ಮಾರ ಇವರ ಗರಡಿಯಲ್ಲಿ ಅಡಿವೆಪ್ಪ ಕಾಳಪ್ಪ ಬಡಿಗೇರ, ಬಸವಣ್ಣೆಪ್ಪ ನಿಂ. ಹೊಲ್ತಿಕೋಟಿ, ಷಣ್ಮುಖಪ್ಪ ಬಡಿಗೇರ, ಷಣ್ಮುಖಪ್ಪ ತಾರಿಹಾಳ, ಮಾದೇವಪ್ಪ ಹಡಪದ, ಮಾದೇವಪ್ಪ ಕಮ್ಮಾರ, ಪ್ರಭುಲಿಂಗ ಬಡಿಗೇರ, ಕಲ್ಲಪ್ಪ ಕಮ್ಮಾರ, ಬಸವರಾಜ ಬಡಿಗೇರ, ಬಸವಣ್ಣೆಪ್ಪ ಕಿಚಡಿ, ಮಾಲತೇಶ ಕಮ್ಮಾರ, ಮೂಗಪ್ಪ ಬಡಿಗೇರ, ದ್ಯಾಮಣ್ಣ ಬಡಿಗೇರ, ಮೋಹನ ಬಾಂಬುಲೆ, ಶಿವಪುತ್ರಪ್ಪ ಬಡಿಗೇರ, ಬಸವಣ್ಣೆಪ್ಪ ರಾಮನಾಳ, ಗುರುಪುತ್ರಪ್ಪ ಬಡಿಗೇರ, ಗಂಗಾಧರ ಕಮ್ಮಾರ ಮೊರಬ ಇನ್ನೂ ಮುಂತಾದ ಕಲಾವಿದರು ಸೇರಿ ಅಣ್ಣತಂಗಿ, ಕಲಿತ ಕಳ್ಳ, ಗರತಿಯ ಶಾಪ, ತಾಳಿಯ ತಕರಾರು, ದುಡುಕು ಬಲುಕೆಡಕು, ನೀನೂ ಸಾಹುಕಾರನಾಗು, ಕೆಟ್ಟ ಮೇಲೆ ಬುದ್ಧಿ ಬಂತು ಇನ್ನೂ ಹಲವಾರು ನಾಟಕಗಳನ್ನು ರಂಗದ ಮೇಲೆ ಅಭಿನಯಿಸಿದ್ದಾರೆ. ಇವರ ಜೊತೆಗೆ ತಬಲಾದ ಮಾರ್ತಾಂಡ ಕಮ್ಮಾರ, ಕಲಾವಿದೆಯರಲ್ಲಿ ಪ್ರಮುಖರಾದ ನಿರ್ಮಲಾ ಬೈಲಹೊಂಗಲ, ಮೀನಾಕ್ಷಿ ಬೈಲಹೊಂಗಲ, ಸುಜಾತಾ ದಾವಣಗೇರಿ, ಸುನಂದಾ ಹೊಸಪೇಟೆ, ಲೀಲಾ ಸಾಗರ, ತೇಜಸ್ವಿನಿ ಪಾಟೀಲ, ಸೀನರಿ ಎಚ್ಚರಪ್ಪ ಬಡಿಗೇರ ಹಾಗೂ ಹುಬ್ಬಳ್ಳಿಯ ಭುಜಂಗ ಡ್ರಾಮಾ ಸೀನ್ಸ್ ಸಹಕಾರದಿಂದ ಸಂಘವನ್ನು ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಆನಂತರ ಬಸವಂತಪ್ಪ ಹಡಪದ ಹಾಗೂ ಮಾರ್ತಾಂಡ ಕಮ್ಮಾರ ಮತ್ತು ನೀನಾಸಂ ಕಲಾವಿದರಾದ ಸುತಗಟ್ಟಿಯ ರಮೇಶ ಸಂಗೊಳ್ಳಿ ಮತ್ತು ಗುರುಪುತ್ರಪ್ಪ ಕಾಳಪ್ಪ ಬಡಿಗೇರ ಇವರ ಗರಡಿಯಲ್ಲಿ ಬೆಳೆದ ಕಲಾವಿದರಲ್ಲಿ ಅಶೋಕ ನಿಂಗಪ್ಪ ಅಣ್ಣಿಗೇರಿ, ಮೈಲಾರಪ್ಪ ಸೋಮಲಿಂಗಪ್ಪ ಬಡಿಗೇರ, ಮೈಲಾರಪ್ಪ ಕಾಳಪ್ಪ ಬಡಿಗೇರ, ಕಾಳಪ್ಪ ದ್ಯಾಮಣ್ಣ ಕಮ್ಮಾರ, ಚನಬಸಪ್ಪ ಮಲ್ಲೇಶಪ್ಪ ತಾರಿಹಾಳ, ಮಡಿವಾಳಪ್ಪ ಈಶ್ವರಪ್ಪ ಬಡಿಗೇರ, ನಿಂಗಪ್ಪ ಮಾದೇವಪ್ಪ ನೆನಕ್ಕಿ, ಜುಂಜಪ್ಪ ಅಡಿವೆಪ್ಪ ಬಡಿಗೇರ, ಪ್ರಭು ಈರಪ್ಪ ತಾರಿಹಾಳ, ಶಿವಕಲ್ಲಪ್ಪ ರುದ್ರಪ್ಪ ಎಮ್ಮೆಟ್ಟಿ, ಗುರುಸಿದ್ದಪ್ಪ ಮೈಲಾರಪ್ಪ ಬಡಿಗೇರ, ಗುರುಸಿದ್ದಪ್ಪ ಸೋಮಲಿಂಗಪ್ಪ ಬಡಿಗೇರ, ಪ್ರಭು ದ್ಯಾಮಣ್ಣ ಕಮ್ಮಾರ, ಉಮೇಶ ಸಂಗಪ್ಪ ನೆನಕ್ಕಿ, ಮಂಜುನಾಥ ಮಾದೇವಪ್ಪ ಹಡಪದ, ಫಕ್ಕೀರಪ್ಪ ದ್ಯಾಮಣ್ಣ ಬೈರಿಕೊಪ್ಪ, ಶೇಖರಯ್ಯ ಮಲ್ಲಯ್ಯ ಕಂಬಿ, ಮಂಜುನಾಥ ಮಲ್ಲೇಶಪ್ಪ ಧನಿಗೊಂಡ, ಪ್ರಭು ಯಲ್ಲಪ್ಪ ಕಿಚಡಿ, ಮಹೇಶ ಬಸವಂತಪ್ಪ ಹಡಪದ, ಸುರೇಶ ಮಾದೇವಪ್ಪ ಹಡಪದ, ಸಿದ್ರಾಮ ಯಲ್ಲಪ್ಪ ತಾರಿಹಾಳ, ವಿರೂಪಾಕ್ಷಪ್ಪ ಮಾದೇವಪ್ಪ ಶಿರಕೋಳ, ಮಹೇಶ ತಮ್ಮಣ್ಣ ಕಮ್ಮಾರ, ರಮೇಶ ಬಂಡೆಪ್ಪ ಶಿರಕೋಳ, ಚಂದ್ರಪ್ಪ ಶಂಕ್ರಪ್ಪ ಪಟ್ಟಣಶೆಟ್ಟಿ, ಸೋಮಲಿಂಗಪ್ಪ ನಾಗಪ್ಪ ಶಿರಕೋಳ, ಶಿವಪ್ಪ ಬಂಡೆಪ್ಪ ಶಿರಕೋಳ, ಬಸವರಾಜ ಶಿವಲಿಂಗಪ್ಪ ಗುಡಗೇರಿ, ಶಿವಲಿಂಗಪ್ಪ ಶಿವಪ್ಪ ನೆನಕ್ಕಿ, ಚಂದ್ರಕಾಂತ ಸೋಮಲಿಂಗಪ್ಪ ಬಡಿಗೇರ, ಕಾಳಪ್ಪ ಅಡಿವೆಪ್ಪ ಬಡಿಗೇರ, ಇವರು ಗ್ರಾಮದ ಜನರ ಸಹಾಯ ಸಹಕಾರದಿಂದ ಪೊಲೀಸಪ್ಪನ ಪ್ರಲಾಪ, ಮಧು ಮಾಲತಿ, ಪುಣ್ಯಭೂಮಿ, ಪ್ರೇಮದ ಅಮಲು, ಮಾತು ಬಿದ್ದಿತು ಮೌನ ಗೆದ್ದಿತು, ರತಿ ಮನ್ಮಥ, ಗುರುಶಿಷ್ಯರ ಸಂಬಂಧ, ಸ್ನೇಹ ಬಂಧನ, ಸತ್ಯಕ್ಕೆ ಸೋತಿತು ಸರಕಾರ, ಅಣ್ಣ ಯೋಗಿ ಅತ್ತಿಗೆ ತ್ಯಾಗಿ, ಪಾಪದ ಪಿಂಡ ಹೊತ್ತ ಪತಿವ್ರತೆ, ಗರತಿ ನನ್ನ ತಂಗಿ, ನನ್ನ ತಂಗಿ ಅಂಥವಳಲ್ಲಾ, ಈಗ ಹ್ಯಾಂಗಾತು?, ವರದಕ್ಷಿಣೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ದಾರಿ ತಪ್ಪಿದ ನಾರಿ, ಸಾವು ಗೆದ್ದ ಸೈನಿಕ, ರೈತನ ಬಾಳು ಕಣ್ಣೀರಿನ ಗೋಳು, ಹಿರೋಯಿನ್ ಬೇಕಾಗಿದ್ದಾಳೆ, ಹೆಂಡತಿಯೇ ನಿನಗೆ ನಮೋ ನಮಃ, ಗುಂಗ ಹಿಡಿಸ್ಯಾಳ ಗಂಗಿ ಹೀಗೆ ಹಲವಾರು ನಾಟಕಗಳ ಅನೇಕ ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ.
ಈ ಸಂಘದಲ್ಲಿ ಇದುವರೆಗೆ ಒಟ್ಟು ಮೂರು ತಲೆಮಾರುಗಳು ದಾಟಿ ಹೋಗಿದ್ದು ಪ್ರಸಕ್ತ ನಾಲ್ಕನೇ ತಲೆಮಾರಿನ ಕಲಾವಿದರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 2010ರ ನಂತರ ಸಂಘದ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪ ಎಂ. ಬಡಿಗೇರ ಅವರು ಕ್ರಿಯಾಶೀಲವಾಗಿ ಮುನ್ನಡೆಸಿ ಸಂಘದ ಕಾರ್ಯಚಟುವಟಿಕೆಗಳನ್ನು ಚಿತ್ರಕಲೆ, ಸಾಹಿತ್ಯ, ಸಂಗೀತ, ಜಾನಪದ ಕಲೆಗಳ ಕ್ಷೇತ್ರಗಳಿಗೆ ರಾಜ್ಯಾದ್ಯಂತ ವಿಸ್ತರಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ, ದಸರಾ ಉತ್ಸವ, ಜಿಲ್ಲಾ ಉತ್ಸವ, ಹತ್ತು ಹಲವು ಕಡೆ ಜರುಗಿರುವ ಜಾತ್ರೆಗಳಲ್ಲಿ ನಾಟಕ ನಾಟಕ ಅಕಾಡೆಮಿ ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳ ಸಹಯೋಗದ ಮೂಲಕ ನಾಟಕ ಪ್ರದರ್ಶನಗಳನ್ನು, ಜಾನಪದ ಸಾಹಿತ್ಯ ಸಂಗೀತದಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರೆಪರ್ಟರಿ ರೂಪದಲ್ಲಿ ಬೆಳೆದು ಬಂದಿದೆ.
ಇದೀಗ ಹಿರೇಹೊನ್ನಿಹಳ್ಳಿಯ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘವು ತನ್ನ ನಾಡು, ನುಡಿ, ಸಾಹಿತ್ಯ ಸಂಗೀತ, ನಾಟಕ ಕಲೆಗಳಲ್ಲಿ 50 ವರ್ಷಗಳನ್ನು ಪೂರ್ಣಗೊಳಿಸಿರುವುದರ ಪ್ರಯುಕ್ತ ಅದರ ಸವಿನೆನಪಿಗಾಗಿ ಹಾಗೂ ಸಂಭ್ರಮಕ್ಕಾಗಿ ಜನವರಿ 5ರಂದು ಹಿರೇಹೊನ್ನಿಹಳ್ಳಿಯ ಶ್ರೀ ಬಸವಾ ಇಂಡಸ್ಟ್ರೀಸ್ ಆವರಣದಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದೆ. ಅಂದು ಸಂಘದ ಹೆಜ್ಜೆ ಗುರುತುಗಳ ಛಾಯಾಚಿತ್ರ ಉದ್ಘಾಟನೆ, ಸಂಘದ ಕಲಾವಿದರ ಭಾವಚಿತ್ರ ಅನಾವರಣ, ನಾದ ನೃತ್ಯ ವೈಭವ, ರಂಗಗೀತೆಗಳ ಹಾಡು, ಹಾಸ್ಯ ಕವಿ ಎಂ.ಡಿ. ಗೋಗೇರಿ ವಿರಚಿತ ‘ಅಡಮುಟ್ಟ ಗಂಡ ಯಡವಟ್ಟ ಹೆಂಡತಿ’ ನಾಟಕ ಪ್ರದರ್ಶನ ಸಮಾರಂಭ ಏರ್ಪಡಿಸಿದೆ.
ಈ ವರ್ಷ ಪೂರ್ತಿ ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸಿ ನವೆಂಬರ್ ತಿಂಗಳಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಲಾಗುವುದು ಎನ್ನುವ ಸಂಘದ ಈಗಿನ ಅಧ್ಯಕ್ಷ ಗುರುಸಿದ್ಧಪ್ಪ ಬಡಿಗೇರ ಉತ್ಸಾಹದಲ್ಲಿದ್ದಾರೆ.
‘‘ಒಟ್ಟು ಇದುವರೆಗೆ ಮೂರು ತಲೆಮಾರುಗಳು ಈ ಸಂಘದಲ್ಲಿ ದಾಟಿ ಹೋಗಿದ್ದು, ಪ್ರಸ್ತುತ ನಾಲ್ಕನೆಯ ತಲೆಮಾರಿನ ಕಲಾವಿದರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅನುಕೂಲತೆಗಳು ಕಡಿಮೆ. ಪಟ್ಟಣಗಳಿಗೆ, ನಗರಗಳಿಗೆ ವಲಸೆ ಹೋಗುವ ಯುವಕರು ಹೆಚ್ಚಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಘದ ಚಟುವಟಿಕೆಗಳನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಹಾಗೂ ಸವಾಲು ನಮ್ಮ ಮುಂದಿದೆ’’ ಎನ್ನುತ್ತಾರೆ ಗುರುಸಿದ್ಧಪ್ಪ ಬಡಿಗೇರ.
‘‘ರಂಗಭೂಮಿಯಲ್ಲಿ ನಮ್ಮೂರಿನ ಮಕ್ಕಳನ್ನು ತೊಡಗಿಸಿಕೊಳ್ಳಲು ಸಂಘದಿಂದ ಸಾಧ್ಯವಾಗಿದೆ. ವಲಸೆ ಹೋಗದ ಯುವಕರನ್ನು, ಒಕ್ಕಲುತನದಲ್ಲಿ ತೊಡಗಿರುವ ಹರೆಯದ ಹಾಗೂ ಮಧ್ಯವಯಸ್ಕರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತಿದ್ದೇವೆ. ನಾಟಕದ ಅಭಿರುಚಿ ಉಳಿಸುವಲ್ಲಿ, ಬೆಳೆಸುವಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದೇವೆ’ ಎನ್ನುವ ಆತ್ಮವಿಶ್ವಾಸ ಬಡಿಗೇರ ಅವರದು.