ದಾವಣಗೆರೆಯ ರಂಗಬೆಣ್ಣೆ‘ಪ್ರತಿಮಾ ಸಭಾ’
ದಾವಣಗೆರೆಯಲ್ಲಿ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಜೊತೆಗೆ ರಂಗಚಟುವಟಿಕೆಗಳಿಗೆ ಹೆಸರಾದದ್ದು ‘ಪ್ರತಿಮಾ ಸಭಾ’ ತಂಡ. ಇಲ್ಲಿ ಬೆಣ್ಣೆದೋಸೆಯು ಹೊಟ್ಟೆ ಯನ್ನು ತುಂಬಿಸಿದರೆ, ಪ್ರತಿಮಾ ಸಭಾವು ನೆತ್ತಿಯನ್ನು ತುಂಬಿಸುವುದರ ಜೊತೆಗೆ ಮನಸ್ಸನ್ನು ಅರಳಿಸುವಂಥದ್ದು.
ಸಾಮಾನ್ಯವಾಗಿ ದಾವಣಗೆರೆ ಅಂದಾಕ್ಷಣ ಕರ್ನಾಟಕದ ಮ್ಯಾಂಚೆಸ್ಟರ್, ಜವಳಿನಗರ, ವ್ಯಾಪಾರಿನಗರ, ಎಣ್ಣೆಗಿರಣಿಗಳ ನಗರ ಈಚಿನ ವರ್ಷಗಳಲ್ಲಿ ಶಿಕ್ಷಣನಗರ ಎಂದೂ ಕರೆಸಿಕೊಳ್ಳುತ್ತಿದೆ. ಇದರೊಂದಿಗೆ ಕಂಪೆನಿ ನಾಟಕಗಳ ತವರೂರು ಎಂದೇ ಪ್ರಸಿದ್ಧಿ. ಏಕಕಾಲಕ್ಕೆ ಐದು ಕಂಪೆನಿಗಳು ಬೀಡು ಬಿಟ್ಟು ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಕಾಲವಿತ್ತು. ಇಲ್ಲಿನವರೇ ಆದ ಚಿಂದೋಡಿ ಶಾಂತವೀರಪ್ಪ ಅವರು 1928ರಲ್ಲಿ ಕೆಬಿಆರ್ ಡ್ರಾಮಾ ಕಂಪೆನಿ (ಕರಿಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ) ಶುರು ಮಾಡಿದರು. ಇದರ ಮೊದಲ ನಾಟಕ ‘ಕೊಟ್ಟೂರೇಶ್ವರ ಮಹಾತ್ಮೆ’ ನಾಟಕ ಕೊಟ್ಟೂರಲ್ಲಿ ಆರಂಭವಾಯಿತು. ಈ ಕಂಪೆನಿಯು ಇನ್ನೈದು ವರ್ಷಕ್ಕೆ ಶತಮಾನ ಕಾಣಲಿದೆ.
ಆಮೇಲೆ ಶಾಂತವೀರಪ್ಪ ಅವರ ಹಿರಿಯ ಪುತ್ರರಾದ ವೀರಪ್ಪ ಸೇರಿದಂತೆ ವೀರಪ್ಪ ಅವರ ಸೋದರರಾದ ದೊಡ್ಡಕರಿಬಸಪ್ಪ, ಸಣ್ಣಕರಿಬಸಪ್ಪ, ಶಿವರಾಜ, ಶಾಂತರಾಜ ಹಾಗೂ ಸೋದರಿ ಚಿಂದೋಡಿ ಲೀಲಾ ರಂಗಭೂಮಿಯಲ್ಲೇ ತೊಡಗಿಸಿಕೊಂಡರು. ಆಮೇಲೆ ಚಿಂದೋಡಿ ಲೀಲಾ ಅವರು ಈ ಕಂಪೆನಿಯ 80ನೇ ವರ್ಷಕ್ಕೆ ಅಮೃತ ಮಹೋತ್ಸವ ಆಚರಿಸಿದರು. ಕಂಚಿಕೇರಿ ಕೊಟ್ರಪ್ಪ ನಾಟಕ ಕಂಪೆನಿ, ಕವಲಿ ಚನ್ನಬಸಪ್ಪ ಅವರ ಕಂಪೆನಿಗಳೂ ಇದ್ದವು. ಹೀಗಿರುವಾಗ ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪ ಛತ್ರದ ಹತ್ತಿರವಿದ್ದ ಸುನಂದಾ ರಂಗಮಂಟಪದಲ್ಲಿ ಪ್ರತೀ ವರ್ಷ ಹಿಕೈ ಸ್ಮಾರಕ ಅಂದರೆ ಹಿರಣ್ಣಯ್ಯ, ಕೈಲಾಸಂ ಸ್ಮಾರಕದ ನಾಟಕದ ಸ್ಪರ್ಧೆಗಳು ನಡೆಯುತ್ತಿದ್ದವು. ಈ ಸ್ಪರ್ಧೆಗೆ ರಾಜ್ಯದಾದ್ಯಂತ ಹಲವಾರು ತಂಡಗಳು ಭಾಗವಹಿಸುತ್ತಿದ್ದವು. ಆಗ ‘ಅಖಿಲ ಕರ್ನಾಟಕ ಕ್ಷಾಮ ನಿವಾರಣಾ ಸಮ್ಮೇಳನ’ ಎಂಬ ಆಶುನಾಟಕವನ್ನು ಅಭಿನಯಿಸುತ್ತಿದ್ದವರು ಸಾಹಿತಿ ಸಾ.ಶಿ.ಮರುಳಯ್ಯ, ಪ್ರಾಧ್ಯಾಪಕರಾದ ಎನ್.ಕೆ.ಚನ್ನಪ್ಪ, ಚನ್ನಬಸಪ್ಪ ಹಾಗೂ ಬಿ.ಜಿ.ನಾಗರಾಜ್. ಇವರೊಂದಿಗೆ ಬಿ.ಟಿ.ಸೋಮಣ್ಣ, ಸಿ.ಕೇಶವಮೂರ್ತಿ ಬಣ್ಣ ಹಚ್ಚುತ್ತಿದ್ದರು. ಇವರೆಲ್ಲ ಕಂಪೆನಿ ನಾಟಕಗಳ ನಟರ ಹಾಗೆ ಪ್ರಸಿದ್ಧರಾಗಿದ್ದರು. ಈ ಅವಧಿಯಲ್ಲಿಯೇ ದಾವಣಗೆರೆಯಲ್ಲಿ ಶುರುವಾಗಿದ್ದು ‘ಪ್ರತಿಮಾ ಸಭಾ’ ಎಂಬ ತಂಡ. ಕಥೆಗಾರ ಎ.ಎನ್.ಪ್ರಸನ್ನ ಹಾಗೂ ಭೌತಶಾಸ್ತ್ರದ ಅಧ್ಯಾಪಕ ಎಸ್.ಹಾಲಪ್ಪ ಅವರು ಸಭಾವನ್ನು ಶುರು ಮಾಡಿದರು.
ಬಳಿಕ ಟಿ.ಪ್ರಸನ್ನರ ‘ಗೃಹಸ್ಥಾಶ್ರಮ’, ಚಂಪಾ ಅವರ ‘ಕೊಡೆಗಳು’, ‘ಟಿಂಗರ ಬುಡ್ಡಣ್ಣ’, ‘ಕುಂಟ ಕುಂಟಾ ಕುರವತ್ತಿ’, ಬೇಂದ್ರೆಯವರ ‘ಸಾಯೋ ಆಟ’ ನಾಟಕಗಳನ್ನು ಪ್ರದರ್ಶಿಸಲಾಯಿತು. ನೀನಾಸಂನ ತಿರುಗಾಟದ ನಾಟಕಗಳೂ ಪ್ರದರ್ಶನಗೊಂಡವು. ಇದಾದ ಮೇಲೆ ಅಂದರೆ 1980ರಲ್ಲಿ ರಂಗಶಿಬಿರವನ್ನು ಪ್ರತಿಮಾ ಸಭಾ ಆಯೋಜಿಸಿತು. ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದು ಬಂದಿದ್ದ ಅಶೋಕ ಬಾದರದಿನ್ನಿ ಅವರು ರಂಗಶಿಬಿರದ ನಿರ್ದೇಶಕರಾದರು. ಬೆಳಗ್ಗೆ ನಾಟಕಕ್ಕೆ ಬೇಕಾದ ಧ್ವನಿ ಹಾಗೂ ದೈಹಿಕ ವ್ಯಾಯಮವಾದರೆ, ಸಂಜೆ ನಾಟಕದ ಓದು, ಪಾತ್ರಗಳ ಹಂಚಿಕೆ, ತಾಲೀಮು ಶುರುವಾದವು. ಆದರೆ ತಾಲೀಮು ನಡೆಸಲು ಜಾಗವಿಲ್ಲದಾಗ ಮೋತಿವೀರಪ್ಪ ಪ್ರೌಢಶಾಲೆಯಲ್ಲಿ ನಡೆಯಿತು. ಅಶೋಕ ಬಾದರದಿನ್ನಿ ಅವರು ಲಂಕೇಶರ ‘ತೆರೆಗಳು’ ನಾಟಕವನ್ನು ಆಯ್ದುಕೊಂಡು ತರಬೇತಿ ನೀಡಿದರು. ಈ ನಾಟಕದಲ್ಲಿ ಸಭಾದ ಸದಸ್ಯರಾದ ವಕೀಲರು, ಕಾಲೇಜು ಅಧ್ಯಾಪಕರು, ವೈದ್ಯರು ಹಾಗೂ ಪತ್ರಕರ್ತರು ಬಣ್ಣ ಹಚ್ಚಿದರು. ಇದರೊಂದಿಗೆ ಅಶೋಕ ಬಾದರದಿನ್ನಿ ಅವರು ಮಧ್ಯಾಹ್ನದ ಹೊತ್ತಲ್ಲಿ ಕಾನೂನು ಕಾಲೇಜಿಗೆ ‘ಟಿಂಗರ ಬುಡ್ಡಣ್ಣ’ ಹಾಗೂ ಶಾಲೆಯ ಮಕ್ಕಳಿಗೆ ‘ಪಂಜರಶಾಲೆ’ ನಾಟಕ ನಿರ್ದೇಶಿಸಿದರು.
ನಂತರ ಲಂಕೇಶರ ‘ಸಂಕ್ರಾಂತಿ’ ನಾಟಕವನ್ನು ಸಭಾ ಪ್ರದರ್ಶಿಸಿತು. ಈ ನಾಟಕವನ್ನು ತರಳಬಾಳು ಮಠದ ಆಹ್ವಾನದ ಮೇರೆಗೆ ಸಿರಿಗೆರೆಯಲ್ಲಿ ಪ್ರದರ್ಶಿಸಲಾಯಿತು. ಈ ನಾಟಕದಲ್ಲಿ ಬಸವಣ್ಣನ ಪಾತ್ರಕ್ಕೆ ಬಣ್ಣ ಹಚ್ಚಿದವರು ಕನ್ನಡ ಅಧ್ಯಾಪಕರಾದ ಡಾ.ಎಂ.ಜಿ. ಈಶ್ವರಪ್ಪ ಅವರು. ‘‘ಅವರ ದುಂಡುಮುಖ, ಅಸ್ಖಲಿತ ವಾಣಿ, ಅವುಗಳನ್ನು ಪ್ರತಿಪಾದಿಸುವ ವಿಧಾನದಿಂದ ಆ ಪಾತ್ರ ನಮ್ಮ ಮನಸ್ಸನ್ನು ಸೆರೆಹಿಡಿದಿತ್ತು. ಬಸವಣ್ಣ ಹೇಗಿದ್ದರು ಎಂದು ನೋಡಿದವರು ಯಾರೂ ಇಲ್ಲ. ಆದರೆ ಈಶ್ವರಪ್ಪನವರು ಬಸವಣ್ಣನವರ ಪಾತ್ರಕ್ಕೆ ನ್ಯಾಯ ಒದಗಿಸಿ ಬಸವಣ್ಣ ಹೀಗೇ ಇದ್ದಿರಬೇಕು ಎನ್ನುವುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿಸಿದ್ದರು ಎಂದರೆ ಅತಿಶಯೋಕ್ತಿ ಏನಲ್ಲ’’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದ್ದಾರೆ. ಇಂಥ ಈಶ್ವರಪ್ಪ ಅವರು ಸಭಾದಲ್ಲಿ ಸಕ್ರಿಯರಾಗಿರುವುದರ ಜೊತೆಗೆ 1979ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ರಾಷ್ಟ್ರಮಟ್ಟದ ಕಾಲೇಜು ಅಧ್ಯಾಪಕರಿಗೆ ಕೇರಳದ ತ್ರಿಶೂರಿನಲ್ಲಿ ಏರ್ಪಡಿಸಿದ್ದ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಶಿಬಿರದಲ್ಲಿ ಚಂಪಾ ಅವರ ‘ಕೊಡೆಗಳು’ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು. ಹೀಗೆಯೇ ಕರ್ನಾಟಕ ನಾಟಕ ಅಕಾಡಮಿಯ ಶಿಷ್ಯವೇತನದ ಮೂಲಕ 1983ರಲ್ಲಿ ಬಿ.ವಿ.ಕಾರಂತ ಅವರ ಮಾರ್ಗದರ್ಶನದಲ್ಲಿ ಭೋಪಾಲಿನ ಭಾರತ ಭವನ ಹಾಗೂ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಎರಡು ತಿಂಗಳವರೆಗೆ ರಂಗಭೂಮಿ ಅಧ್ಯಯನ ಕೈಗೊಂಡರು.
ಅಲ್ಲದೆ ರಾಜಕಾರಣಿ ಎಂ.ಪಿ.ಪ್ರಕಾಶ್ ಹಾಗೂ ಜಾನಪದ ತಜ್ಞ ಮುದೇನೂರು ಸಂಗಣ್ಣ ಅವರು ತಮ್ಮ ಹೂವಿನಹಡಗಲಿಗೆ ನಾಟಕ ಆಹ್ವಾನಿಸಿ, ಪ್ರದರ್ಶನಕ್ಕೆ ಅವಕಾಶ ನೀಡಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗೆಯೇ ಅನೇಕ ಕಡೆ ಪ್ರದರ್ಶನಗಳಾದ ನಂತರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂದೆ ಇರುವ ಸಂಸ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಂಡಿತು. ಇದರಿಂದ ಅಶೋಕ ಬಾದರದಿನ್ನಿ ಪ್ರಸಿದ್ಧರಾದರು ಜೊತೆಗೆ ಸಭಾ ತಂಡವೂ ಪ್ರಸಿದ್ಧವಾಯಿತು.
ಇದಾದ ಮೇಲೆ ಅಂದರೆ 1981ರಲ್ಲಿ ದಾವಣಗೆರೆ ಹತ್ತಿರದ ಕೊಂಡಜ್ಜಿಯಲ್ಲಿ ಕರ್ನಾಟಕ ನಾಟಕ ಅಕಾಡಮಿಯು ನಾಟಕ ರಚನಾ ಶಿಬಿರವನ್ನು ಆಯೋಜಿಸಿತು. ಶಿಬಿರದ ನಿರ್ದೇಶಕರು ಪ್ರಸನ್ನ. ಹತ್ತು ದಿನಗಳವರೆಗೆ ನಡೆದ ಶಿಬಿರದ ಹೊಣೆಯನ್ನು ಸಭಾ ಹೊತ್ತುಕೊಂಡಿತು. ಜೊತೆಗೆ ಸಭಾದ ಅನೇಕರು ಶಿಬಿರದಲ್ಲಿ ಭಾಗವಹಿಸಿದರು. ಈ ಶಿಬಿರದಲ್ಲಿ ಕೆ.ವಿ.ಸುಬ್ಬಣ್ಣ, ತ್ರಿಶೂರಿನ ಶಂಕರ ಪಿಳ್ಳೈ, ಮುದೇನೂರು ಸಂಗಣ್ಣ, ಚಂದ್ರಶೇಖರ ಕಂಬಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಈ ಶಿಬಿರದಿಂದ ಪತ್ರಕರ್ತ ಗೋಪಾಲ ವಾಜಪೇಯಿ, ಹೂಲಿ ಶೇಖರ್, ಕಂಬಾಳು ಸಿದ್ಧಗಂಗಯ್ಯ ಪ್ರೇರಣೆಗೊಂಡು ನಾಟಕಕಾರರಾದುದು ಇತಿಹಾಸ. ಇದರೊಂದಿಗೆ 1981ರಲ್ಲಿ ಕೆಬಿಆರ್ ಡ್ರಾಮಾ ಕಂಪೆನಿಯ ಥಿಯೇಟರಿನಲ್ಲಿ ನಾಟಕೋತ್ಸವವನ್ನು ಸಭಾ ಹಮ್ಮಿಕೊಂಡಿತು. ಏಣಗಿ ಬಾಳಪ್ಪ ಅವರ ‘ಜಗಜ್ಯೋತಿ ಬಸವೇಶ್ವರ’, ‘ಸಂಗ್ಯಾಬಾಳ್ಯಾ’, ‘ಕಬೀರ’, ದಂಗೆಯ ಮುಂಚಿನ ದಿನಗಳು, ಮುಖ್ಯಮಂತ್ರಿ ಚಂದ್ರು ಅವರ ‘ಮುಖ್ಯಮಂತ್ರಿ’, ಟಿ.ಎಸ್.ನಾಗಾಭರಣ ಅವರ ‘ಆಸ್ಫೋಟ’ ನಾಟಕಗಳು ಪ್ರದರ್ಶನಗೊಂಡಾಗ ಪ್ರೇಕ್ಷಕರು ಕಿಕ್ಕಿರಿದಿದ್ದರು.
ಮತ್ತೆ 1985ರಲ್ಲಿ ವಾಲ್ಟರ್ ಡಿಸೋಜ ಅವರು ರಂಗ ತರಬೇತಿ ಶಿಬಿರ ನಡೆಸಿ, ಭೀಷ್ಮ ಸಹಾನಿ ಅವರ ‘ಸಂತೆಯಲ್ಲಿ ನಿಂತ ಕಬೀರ’ ನಾಟಕ ನಿರ್ದೇಶಿಸಿದರು. ಅದೇ ವರ್ಷ ಕೆ.ವಿ.ಸುಬ್ಬಣ್ಣ ಅವರು ದಾವಣಗೆರೆಗೆ ಬಂದು ರಂಗಶಿಬಿರವನ್ನು ನೀನಾಸಂ ಮೂಲಕ ಫೋರ್ಡ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದರು. ಇದಕ್ಕಾಗಿ ಬಾಡಿಗೆ ಮನೆಯೊಂದನ್ನೇ ಪಡೆದರು. ಅವರ ನೀನಾಸಂ ಶಾಲೆಯ ವಿದ್ಯಾರ್ಥಿಗಳೂ ಬಂದರು. ಈ ಶಿಬಿರದಲ್ಲಿ ಸಿದ್ಧಗೊಂಡ ನಾಟಕಗಳ ಪ್ರದರ್ಶನಕ್ಕೆ ರಂಗ ಪಂಚಮಿ ಎಂದು ಹೆಸರಿಸಲಾಯಿತು. ಕೆ.ವಿ.ಅಕ್ಷರ ಅವರು ಮ್ಯಾಕ್ಸಿಂ ಗಾರ್ಕಿಯ ‘ತಾಯಿ’ ನಾಟಕವನ್ನು ಸಿಪಿಐ ಸಂಘಟನೆಗೆ ಆಡಿಸಿದರು. ಆಗ ದಾವಣಗೆರೆಯ ನಗರಸಭೆಯಲ್ಲಿ ಸಿಪಿಐ ಆಡಳಿತವಿತ್ತು. ಚಿದಂಬರ ರಾವ್ ಜಂಬೆ ಅವರು ದಾವಣಗೆರೆ ಪಕ್ಕದ ಶಾಮನೂರಲ್ಲಿ ‘ಚೋರ ಚರಣದಾಸ’ ನಾಟಕವಾಡಿಸಿದರೆ, ಕೆ.ಜಿ.ಕೃಷ್ಣಮೂರ್ತಿ ಅವರು ಸಭಾದ ಸದಸ್ಯರಿಗಾಗಿ ಬ್ರೆಕ್ಟ್‌ನ ‘ಸೆಜುವಾನಿನ ಸಾಧ್ವಿ’ ನಾಟಕವನ್ನು, ನೀನಾಸಂ ಶಾಲೆಯ ವಿದ್ಯಾರ್ಥಿಗಳು ದಾವಣಗೆರೆಯ ಶಾಲೆಯ ಮಕ್ಕಳಿಗೆ ‘ಹೆಡ್ಡಾಯಣ’ ಹಾಗೂ ಅನುಭವ ಮಂಟಪ ಶಾಲೆಯ ಮಕ್ಕಳಿಗೆ ‘ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು’ ನಾಟಕಗಳನ್ನು ಆಡಿಸಿದರು. ಹೀಗೆ ಒಮ್ಮೆಲೇ ಐದು ಕಡೆ ಶಿಬಿರಗಳ ಜವಾಬ್ದಾರಿ ಹೊತ್ತು ಸಭಾವು ಸಮರ್ಥವಾಗಿ ನಿಭಾಯಿಸಿತು. ಹೀಗೆ ರಂಗಪಂಚಮಿ ನಾಟಕೋತ್ಸವವು ರಂಗಹಬ್ಬವಾಯಿತು. ಮುಖ್ಯವಾಗಿ ಲೈಟ್ ಮತ್ತು ಡಿಮ್ಮರ್‌ಗಳಿಲ್ಲದೆ ಪರದಾಡುತ್ತಿದ್ದ ಸಭಾ ಸಂಘಟನೆಗೆ ಕೆ.ವಿ.ಸುಬ್ಬಣ್ಣ ಅವರು ಫೋರ್ಡ್ ಫೌಂಡೇಷನ್ ಮೂಲಕ ಕೊಡಿಸಿದಾಗ ಸಿಪಿಐ ಸಂಘಟನೆಯು ಪ್ರತಿಭಟನೆಯನ್ನು ವ್ಯಕ್ತಪಡಿಸಿತು.
ಹೀಗೆ ಸಭಾವು ಯಶಸ್ಸಿನ ಮೆಟ್ಟಿಲುಗಳನ್ನೇರಿತು. 1990ರಲ್ಲಿ ಸುರೇಶ ಆನಗಳ್ಳಿ ಅವರು ರಂಗಶಿಬಿರವಲ್ಲದೆ ‘ನಂದರಾಜ ಪ್ರಹಸನ’ ನಿರ್ದೇಶಿಸಿದರು. ಇದರಿಂದ ಸದಸ್ಯರಲ್ಲದ ಪ್ರೇಕ್ಷಕರು ಕೂಡಾ ಸಭಾದ ಹಾಗೂ ಇತರ ತಂಡಗಳ ನಾಟಕಗಳನ್ನು ನೋಡಿ ಸದಭಿರುಚಿ ಹೆಚ್ಚಿಸಿಕೊಂಡರು. ‘ರಸಋಷಿ ಕುವೆಂಪು’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶಿಸಲು ಬಂದಿದ್ದ ಸಿ.ಆರ್.ಸಿಂಹ ಅವರು ‘‘ದಾವಣಗೆರೆಯ ಪ್ರೇಕ್ಷಕರು ಪ್ರಬುದ್ಧರು. ಅವರಿಗೆ ನಾಟಕ ಇಷ್ಟವಾದರೆ ಚಪ್ಪಾಳೆ ತಟ್ಟುತ್ತಾರೆ ಇಲ್ಲವಾದರೆ ಎದ್ದು ಹೋಗುತ್ತಾರೆ’’ ಎಂದು ತಿಳಿಸಿದ್ದರು. ಇದಕ್ಕೂ ಮೊದಲು ನಡೆದ ಸ್ವಾರಸ್ಯಕರ ಪ್ರಸಂಗ ಚೆನ್ನಾಗಿದೆ. ಶ್ರೀರಂಗ ಅವರ ‘ಏನ ಬೇಡಲಿ ನಿನ್ನ ಬಳಿಗೆ ಬಂದು’ ನಾಟಕ ಪ್ರದರ್ಶನ. ಇದು ಕಂಪೆನಿ ಥಿಯೇಟರಿನಲ್ಲಿ ಆಯೋಜಿಸಲಾಗಿತ್ತು. ನಾಟಕ ಆರಂಭವಾಗುವ ಮೊದಲೇ ಪ್ರೇಕ್ಷಕರ ಮಧ್ಯದಲ್ಲಿ ಕಲಾವಿದರೊಬ್ಬರು ಕುಳಿತಿದ್ದರು. ನಾಟಕ ಶುರುವಾದ ಸ್ವಲ್ಪ ಹೊತ್ತಿಗೆ ಸೂತ್ರಧಾರನೊಂದಿಗೆ ಪ್ರೇಕ್ಷಕರ ಮಧ್ಯದಲ್ಲಿ ಕುಳಿತಿದ್ದ ಕಲಾವಿದ ಸಂಭಾಷಣೆಗೆ ಇಳಿದಾಗ ಪ್ರೇಕ್ಷಕರು ಸುಮ್ಮನಿರಿಸಲು ಯತ್ನಿಸಿದರು. ಆದರೆ ಕಲಾವಿದ ಸುಮ್ಮನಿರದೆ ಸಂಭಾಷಣೆ ಮುಂದುವರಿಸಿದಾಗ ನಾಟಕಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಇತರ ಪ್ರೇಕ್ಷಕರು ಸುಮ್ಮನಿರಲು ಒತ್ತಾಯಿಸಿದರು. ಕೊನೆಗೆ ಕಲಾವಿದನನ್ನು ಎಳೆದು ಕೂಡಿಸಿದಾಗ ಸೂತ್ರಧಾರನೇ ಪ್ರೇಕ್ಷಕರನ್ನು ಸಮಾಧಾನಪಡಿಸಿ, ನಾಟಕವನ್ನು ಮುಂದುವರಿಸಿದ. ಹೀಗೆ ದಾವಣಗೆರೆಯ ಪ್ರೇಕ್ಷಕರು ಹೊಸ ಬಗೆಯ ನಾಟಕಕ್ಕೆ ತೆರೆದುಕೊಂಡ ಪರಿ ಇದು.
ಹೀಗೆ ಬೆಳೆದ ಸಭಾದ ಸದಸ್ಯತ್ವ ಕೂಡಾ ಕುತೂಹಲಕಾರಿ. ಎಪ್ಪತ್ತರ ದಶಕದಲ್ಲಿ ಪ್ರತೀ ಸದಸ್ಯರಿಗೆ 20 ರೂಪಾಯಿ ಇತ್ತು. ದಂಪತಿಗಳು ಸದಸ್ಯರಾದರೆ 35 ರೂಪಾಯಿ ನಿಗದಿಗೊಳಿಸಲಾಗಿತ್ತು. ಆದರೆ 300 ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಯಿತು. ತೊಂಭತ್ತರ ದಶಕದಲ್ಲಿ ತಲಾ ಸದಸ್ಯರಿಂದ 100 ರೂಪಾಯಿ ಶುಲ್ಕ ಪಡೆದರೆ, ದಂಪತಿಗಳಿಂದ 150 ರೂಪಾಯಿ ಸಂಗ್ರಹಿಸಲಾಯಿತು. ಪ್ರತೀ ನಾಟಕಕ್ಕೆ ಟಿಕೆಟುಗಳನ್ನು ಅಂಚೆ ಮೂಲಕ ಕಳುಹಿಸಲಾಗುತ್ತಿತ್ತು. ಆದರೆ 300 ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲು ಕಾರಣ; ಜಾಗದ ಸಮಸ್ಯೆ ಜೊತೆಗೆ ಹೆಚ್ಚು ಸದಸ್ಯರಾದರೆ ನಾಟಕ ತೋರಿಸಲು ಕಷ್ಟವಾಗಬಹುದು ಎಂದು. ಸದಸ್ಯರಲ್ಲದವರಿಗೆ ಟಿಕೆಟ್ ಖರೀದಿಸಲು ಅವಕಾಶ ನೀಡಲಾಯಿತು. ಆದರೆ ಸದಸ್ಯತ್ವ ಸಿಗದವರು ಗಲಾಟೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಸಭಾದ ಸದಸ್ಯರಾಗುವುದು ಘನತೆಯ ವಿಷಯವಾಯಿತು. 300 ಸದಸ್ಯರಲ್ಲಿ ಇನ್ನೂರು ಜನ ಸದಸ್ಯತ್ವವನ್ನು ನವೀಕರಿಸಿಕೊಂಡರೆ ಉಳಿದ 100 ಸದಸ್ಯರು ಹೊಸಬರಾಗುತ್ತಿದ್ದರು. ಹೀಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿತು.
ಇದರೊಂದಿಗೆ ಸಭಾದ ಒಡನಾಡಿಗಳು ನಾಡಿನ ಅನೇಕ ರಂಗಕರ್ಮಿಗಳಾಗಿದ್ದರು. ಏಣಗಿ ಬಾಳಪ್ಪ, ಬಿ.ವಿ.ಕಾರಂತ, ಎನ್.ಆರ್.ಮಾಸೂರ, ಸಿಜಿಕೆ, ಅಶೋಕ ಬಾದರದಿನ್ನಿ, ಪ್ರಸನ್ನ, ಶ್ರೀನಿವಾಸಪ್ರಭು, ಬಿ.ಜಯಶ್ರೀ, ಉಮಾಶ್ರೀ, ಗಿರಿಜಾ ಲೋಕೇಶ್, ಲಕ್ಷ್ಮೀ ಚಂದ್ರಶೇಖರ್, ಕೆ.ವಿ.ಅಕ್ಷರ ಮೊದಲಾದವರು. ಸಭಾದೊಂದಿಗೆ ವಿಶ್ವಾಸ ಹೆಚ್ಚಿದ್ದರಿಂದ ಬಿ.ವಿ.ಕಾರಂತರು ದಾವಣಗೆರೆಯಲ್ಲಿಯೇ 1986ರಲ್ಲಿ ರಂಗಾಯಣಕ್ಕಾಗಿ ಕಲಾವಿದರ ಸಂದರ್ಶನವನ್ನು ಆಯೋಜಿಸಿದರು.
ಹೀಗೆ ರಂಗ ಚಟುವಟಿಕೆಗಳ ಮೂಲಕ ರಂಗಾಸಕ್ತಿಯನ್ನು ಹೆಚ್ಚಿಸಿದ ಹೆಗ್ಗಳಿಕೆ ಸಭಾದ್ದು. ರಂಗಭೂಮಿಯ ಚಟುವಟಿಕೆಗಳಲ್ಲದೆ ಸಿನೆಮಾ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಿದೆ.
ಈಗಲೂ ರಂಗಾಯಣದ ನಾಟಕಗಳು, ನೀನಾಸಂ ತಿರುಗಾಟದ ನಾಟಕಗಳು, ಸಾಣೇಹಳ್ಳಿ ಶಿವಸಂಚಾರದ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಪಿ.ಜೆ.ರಂಗನಾಥ್, ಜಿ.ಎನ್. ಸತ್ಯಮೂರ್ತಿ, ಬಾ.ಮ.ಬಸವರಾಜಯ್ಯ, ಡಾ. ಪಂಚಾಕ್ಷರಪ್ಪ, ಗೊಡಬನಾಳ ಬಸವರಾಜ್, ಬಿ.ಎನ್. ಮಲ್ಲೇಶ್ ಹಾಗೂ ಕುಲಕರ್ಣಿ ಜಗದೀಶ್ ಅವರು ಪ್ರತಿಮಾ ಸಭಾ ಕಾರ್ಯಕರ್ತರು. ಇವರೊಂದಿಗೆ ಡಾ.ಎಂ.ಜಿ. ಈಶ್ವರಪ್ಪ ಅವರು ಸಭಾ ಸಕ್ರಿಯ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ದುಡಿದಿದ್ದಾರೆ.
ಹೀಗೆ ಅ‘ಪ್ರತಿಮಾ’ವಾಗಿ ಬೆಳೆದ ಸಭಾದ ಯಶಸ್ಸಿನ ಕಥೆ ಇದು.