ಮುನ್ನೂರು ನಾಟಕ ವಿರಚಿತ ರಾಜಾನಂದ್
ಹುಟ್ಟಿದೊಂದೂರು, ಬೆಳದದ್ದೊಂದೂರು, ನೆಲೆ ನಿಂತಿದ್ದು ರಂಗಭೂಮಿಯಲ್ಲಿ. ಬಾಲ್ಯದಲ್ಲೇ ಬಲಿತ ರಂಗಾಸಕ್ತಿಯನ್ನು ಪೋಷಿಸಿಕೊಂಡು ಬಂದ ಪರಿಣಾಮ, ರಂಗಭೂಮಿಯಲ್ಲಿ ನೆಲೆ ಕಂಡು, ಸಿನೆಮಾ ರಂಗದಲ್ಲಿ ಬೆಳಗಿದರೂ ರಂಗಭೂಮಿ ನಂಟು ಬಿಡಲಿಲ್ಲ. ಹೀಗಾಗಿ ಮುನ್ನೂರಕ್ಕೂ ಅಧಿಕ ನಾಟಕಗಳನ್ನು ರಚಿಸಿದವರು ರಾಜಾನಂದ್. ಹಳೆ ತಲೆಮಾರಿನ ಸಿನೆಮಾಸಕ್ತರಿಗೆಲ್ಲ ಅವರು ಗೊತ್ತು. ಮೈಸೂರು ಭಾಗದಲ್ಲಿ ಈಗಲೂ ಹಳಬರಿಗೆಲ್ಲ ರಾಜಾನಂದ್ ಎಂದರೆ ಬಹಳ ಇಷ್ಟದ ಕಲಾವಿದರು. ಆದರೆ ಹೊಸಬರಿಗೆ ಗೊತ್ತಿಲ್ಲ. ಅವರು ರಚಿಸಿದ ನಾಟಕಗಳಾಗುತ್ತಿಲ್ಲ, ಅವರ ಕುರಿತು ಉಪನ್ಯಾಸ, ವಿಚಾರ ಸಂಕಿರಣ ನಡೆಯುತ್ತಿಲ್ಲ, ಅವರ ಹೆಸರಿನದೊಂದು ರಸ್ತೆ ಕೂಡಾ ಮೈಸೂರಿನಲ್ಲಿಲ್ಲ. ಹೀಗಿದ್ದಾಗ ಅವರ ನಾಟಕಗಳಲ್ಲಿ ಒಂದಾದ ‘ಮಲೆಯ ಮಾದೇಶ್ವರ ಮಹಾತ್ಮೆ’ ನಾಟಕವನ್ನು ಪ್ರಕಟಿಸಿದವರು ಎಚ್.ಎಸ್. ಗೋವಿಂದಗೌಡರು. ಇವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ ನಿವೃತ್ತರಾದರೂ ಅತೀವ ರಂಗಾಸಕ್ತರು ಜೊತೆಗೆ ರಂಗ ಕಲಾವಿದರು. ಅಲ್ಲದೆ ರಂಗ ರತ್ನಾಕರ ಸಂಸ್ಥೆ ಸ್ಥಾಪಿಸಿ, ರಂಗಗೀತೆಗಳ ಸೀಡಿ ಹೊರತಂದಿದ್ದಾರೆ. ಜೊತೆಗೆ 27 ನಾಟಕಗಳನ್ನು ಸಂಪಾದಿಸಿ ತಮ್ಮ ಹನ್ಯಾಳು ಪ್ರಕಾಶನ ಮೂಲಕ ಪ್ರಕಟಿಸಿದ್ದಾರೆ. 2019ರಲ್ಲಿ ರಾಜಾನಂದ್ ಅವರ ಮೂರು ನಾಟಕಗಳನ್ನು, 2021ರಲ್ಲಿ ಐದು ನಾಟಕಗಳನ್ನು ಕೆ.ಟಿ.ವೀರಪ್ಪ ಅವರ ಜೊತೆ ಸಂಪಾದಿಸಿದ್ದಾರೆ. 77 ವರ್ಷ ವಯಸ್ಸಿನ ಅವರದು ಬತ್ತದ ಉತ್ಸಾಹ. ಈಗಲೂ ರಂಗ ಚಟುವಟಿಕೆಗಳನ್ನು ಆಯೋಜಿಸುತ್ತಾರೆ.
ಇನ್ನು ರಾಜಾನಂದ್ ಅವರು ಬದುಕಿದ್ದು, ಬದುಕು ಕಟ್ಟಿಕೊಂಡಿದ್ದು ವಿಸ್ಮಯ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿ 1927ರ ಡಿಸೆಂಬರ್ 2ರಂದು ಮಲ್ಲಪ್ಪ-ವೆಂಕಟಲಕ್ಷ್ಮಮ್ಮ ದಂಪತಿಗೆ ಜನಿಸಿದ ಅವರನ್ನು ಎಲ್ಲರೂ ರಾಜಣ್ಣ ಎಂದೇ ಕರೆಯುತ್ತಿದ್ದರು. ಆದರೆ ಅವರ ತಾಯಿ ಒಂದು ವರ್ಷದೊಳಗಿರುವಾಗಲೇ ತೀರಿಕೊಂಡರು. ಆಗ ರಾಜಣ್ಣ ಸೋದರತ್ತೆ ದಂಡಮ್ಮ ಬೆಳೆಸಿದರು. ರಾಜಣ್ಣನಿಗೆ ಒಳ್ಳೆಯ ಕಂಠವಿದ್ದ ಪರಿಣಾಮ ಎಲ್ಲರೂ ಪ್ರೋತ್ಸಾಹಿಸುವವರೆ. ಅವರ ಊರಲ್ಲಿದ್ದ ನಾಟಕದ ಮೇಷ್ಟ್ರು ಪೂಜಪ್ಪ ಅವರು ರಾಜಣ್ಣನನ್ನು ಪ್ರೋತ್ಸಾಹಿಸಿದರು. ಆಗ ಆಡುತ್ತಿದ್ದ ‘ಕೇಳಿಕೆ’ ಬಯಲುನಾಟಕಗಳಾದ ‘ಪ್ರಹ್ಲಾದ ಚರಿತ್ರೆ’ ನಾಟಕದಲ್ಲಿ ಪ್ರಹ್ಲಾದ ಪಾತ್ರದ ಮೂಲಕ ರಂಗಪ್ರವೇಶಿಸಿದರು ಬಾಲಕ ರಾಜಣ್ಣ. ಆಗ ಅವರಿಗೆ ಐದಾರು ವರ್ಷವಷ್ಟೆ. ಬಳಿಕ ‘ಲಂಕಾದಹನ’ ನಾಟಕದಲ್ಲಿ ಸಣ್ಣ ಕಪಿ ‘ಅಂಗದ’ನ ಪಾತ್ರಕ್ಕೆ ಬಣ್ಣ ಹಚ್ಚಿದರು. ಮೇಷ್ಟ್ರು ಪೂಜಪ್ಪ ಅವರು ಹೇಳಿಕೊಟ್ಟಂತೆ ಅಭಿನಯಿಸಿದರು. ಆಗ ನಾಟಕಗಳಲ್ಲಿ ಹಾಡುತ್ತ, ಕುಣಿಯುತ್ತ ಗಾಯಕನಟರಾಗುವುದು ಅಗತ್ಯವಾಗಿತ್ತು. ಹೀಗಿದ್ದಾಗ ರಾಜಣ್ಣನ ತಂದೆ ಮಲ್ಲಪ್ಪನವರೂ ನಿಧನರಾದರು. ಆಗ ರಾಜಣ್ಣನಿಗೆ ಆರು ವರ್ಷ. ಇಷ್ಟೊತ್ತಿಗೆ ನಾಟಕದ ಮನೆಗಳಿಗೆ, ಭಜನಾಮಂದಿರಗಳಿಗೆ ಹೋಗುವುದು ಅಭ್ಯಾಸವಾಗಿತ್ತು. ಆದರೆ ರಾಜಣ್ಣನ ಕುಟುಂಬದವರಿಗೆ ಇದು ಇಷ್ಟವಾಗಲಿಲ್ಲ. ಇದನ್ನೆಲ್ಲ ಬಿಡಬೇಕು ಇಲ್ಲವೇ ಮನೆಯಿಂದ ಹೊರಹೋಗಬೇಕು ಎನ್ನುವ ಒತ್ತಡ ಬಂತು. ಇದೇ ಸಂದರ್ಭದಲ್ಲಿ ಅವರನ್ನು ಸಾಕುತ್ತಿದ್ದ ದಂಡಮ್ಮ ಕೂಡಾ ಅಸುನೀಗಿದರು. ಇದರಿಂದ ತಬ್ಬಲಿಯಾದ ರಾಜಣ್ಣ ಹೊತ್ತು ಕಳೆಯಲು ಭಜನಾ ಮಂದಿರಗಳಿಗೆ, ನಾಟಕ ನಡೆಯುವ ತಾಲೀಮಿನ ಮನೆಗಳಿಗೆ ಹೋಗುವುದು ಅಭ್ಯಾಸವಾಯಿತು. ಇದನ್ನು ಕುಟುಂಬದವರು ವಿರೋಧಿಸುವುದರ ಜೊತೆಗೆ ಊಟವನ್ನೂ ಹಾಕಲಿಲ್ಲ. ಆಗ ಮನೆ ತೊರೆದ ರಾಜಣ್ಣ ಸೇರಿದ್ದು ಹಕ್ಕಿಪಿಕ್ಕಿ ನಾಟಕ ಕಂಪೆನಿಗೆ. ಅದು ದೊಡ್ಡ ಕಂಪೆನಿಯಲ್ಲ. ರಾತ್ರಿ ನಾಟಕವಾಡಿ, ಹಗಲು ಹೊತ್ತು ಭಿಕ್ಷೆ ಬೇಡುವ ಹಕ್ಕಿಪಿಕ್ಕಿಯವರೊಂದಿಗೆ ಕೆಲದಿನಗಳಿದ್ದ ಬಾಲಕ ರಾಜಣ್ಣ ಅಲ್ಲಿಂದಲೂ ಹೊರಬೀಳಬೇಕಾಯಿತು. ಅಲ್ಲಿಂದ ನಡೆಯುತ್ತ ಬಾಣಾವರ ತಲುಪಿ ರೈಲುನಿಲ್ದಾಣದಲ್ಲಿ ಕುಳಿತು ತನಗಾರು ದಿಕ್ಕಿಲ್ಲವೆಂದು ಬಿಕ್ಕಿ ಬಿಕ್ಕಿ ಅಳುವಾಗ ಪಕ್ಕದಲ್ಲಿದ್ದವರು ಭುವನಪ್ಪ ಕಲಕೋಟಿ ಎಂಬ ನಾಟಕ ಕಲಾವಿದರು. ಅವರು ವಿಜಾಪುರದವರಾದರೂ ಚಿಕ್ಕಬಳ್ಳಾಪುರದ ಕರಿಯಪ್ಪನವರ ನಾಟಕ ಕಂಪೆನಿಯಲ್ಲಿ ಹಾರ್ಮೋನಿಯಂ ಮೇಷ್ಟ್ರಾಗಿ, ನಾಟಕಗಳ ನಿರ್ದೇಶನಕ್ಕೆ ಬಂದಿದ್ದರು. ಹಾಗೆ ಸಿಕ್ಕ ರಾಜಣ್ಣನ ಪೂರ್ವಾಪರ ವಿಚಾರಿಸಿ, ತಮ್ಮೊಂದಿಗೆ ಕರಿಯಪ್ಪನವರ ಕಂಪೆನಿಗೆ ಕರೆದುಕೊಂಡು ಹೋಗಿ ತಮ್ಮ ಮಗ ಎಂದು ಪರಿಚಯಿಸಿದರು. ಆದರೆ ಭುವನಪ್ಪ ಅವರಿಗೆ ರಾಜಣ್ಣ ನಾಟಕ ಕಂಪೆನಿಗೆ ಸೇರುವುದು ಇಷ್ಟವಿರಲಿಲ್ಲ. ಇದಕ್ಕಾಗಿ ತಾವೇ ವಿದ್ಯಾಭ್ಯಾಸ ನೀಡಲು ಮುಂದಾದರು. ಆದರೆ ರಂಗಭೂಮಿ ಕುರಿತು ಅತಿಯಾದ ಒಲವಿರಿಸಿಕೊಂಡಿದ್ದ ರಾಜಣ್ಣನಿಗೆ ಬಣ್ಣ ಹಚ್ಚಿಕೊಳ್ಳಬೇಕೆಂಬ ತುಡಿತ. ಕೊನೆಗೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ‘ನಾನು ಹೇಳಿದಂತೆ ಹೇಳು’ ಎಂದು ಭುವನಪ್ಪ ಹೇಳಿ ‘ಸಾಹಿತ್ಯಾಭ್ಯಾಸ ಮಾಡ್ತೀನಿ, ದೊಡ್ಡ ಕವಿಯಾಗ್ತೀನಿ’ ಎಂದರು. ಆದರೆ ರಾಜಣ್ಣ ‘ಬಣ್ಣ ಹಚ್ಚಿಕೊಳ್ತಿನಪ್ಪ, ಪಾತ್ರ ಮಾಡಲೇಬೇಕು’ ಎಂದ. ‘ಇದೇ ಅಂತಿಮ ನಿರ್ಧಾರವಾ?’ ಎಂದು ಭುವನಪ್ಪ ಕೇಳಿದಾಗ ‘ಹೌದು’ ಎಂದು ಬಾಲಕ ರಾಜಣ್ಣ ಅಚಲವಾಗಿ ಹೇಳುತ್ತಾನೆ. ಕೊನೆಗೆ ಭುವನಪ್ಪ ಒಪ್ಪಿ ‘ನಾನೇ ಬಣ್ಣ ಹಚ್ಚುತ್ತೀನಿ’ ಎಂದು ಕರಿಯಪ್ಪನವರ ಹತ್ತಿರ ಕರೆದುಕೊಂಡು ಹೋಗಿ ‘‘ನಾಳೆ ಹಿರಣ್ಯಕಶಿಪು ಪಾತ್ರ ನಾನೇ ಮಾಡ್ತೀನಿ. ಪ್ರಹ್ಲಾದನ ಪಾತ್ರವನ್ನು ರಾಜ ಮಾಡ್ತಾನೆ. ಡಂಗೂರ ಸಾರಿಸಿ’’ ಎನ್ನುತ್ತಾರೆ. ಡಂಗೂರ ಸಾರಿದ ಪರಿಣಾಮ ಬಾಣಾವರ ಸುತ್ತಲಿನ ಗ್ರಾಮದ ರಂಗಾಭಿಮಾನಿಗಳು ನಾಟಕ ನೋಡಲು ಬಂದರು. ತಿಂಗಳವರೆಗೂ ‘ಪ್ರಹ್ಲಾದ ಚರಿತ್ರೆ’ ನಾಟಕ ಯಶಸ್ವಿಯಾಗಿ ಮುಂದುವರಿಯಿತು.
ಮುಂದೆ ಕರಿಯಪ್ಪನವರ ಕಂಪೆನಿ ನಿಂತ ಮೇಲೆ ತಮ್ಮ ಊರಾದ ವಿಜಾಪುರ ಜಿಲ್ಲೆಯ ಕಲಕೋಟಿಗೆ ಭುವನಪ್ಪನವರು ರಾಜಣ್ಣನನ್ನು ಕರೆದುಕೊಂಡು ಹೋದರು. ಅಲ್ಲಿಯೂ ‘ಪ್ರಹ್ಲಾದ ಚರಿತ್ರೆ’ ನಾಟಕವನ್ನಾಡಿದರು. ಆದರೆ ಸಾಲ ಕೊಟ್ಟ ಸಾಹುಕಾರರು ತಮ್ಮದೇ ಕಂಪೆನಿಯಾಗಿಸಿಕೊಳ್ಳಬೇಕೆಂಬ ದುರಾಸೆಗೆ ಆತಂಕಕ್ಕೆ ಒಳಗಾದ ಭುವನಪ್ಪ ಅವರು ವಿಷ ಕುಡಿದು ಮೃತಪಡುತ್ತಾರೆ. ಇದರಿಂದ ಕಂಗಾಲಾದ ರಾಜಣ್ಣ ಅಲ್ಲಿಂದ ನಡೆಯುತ್ತ ಹೊರಟ. ನಡೆದು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಾಗ ಸ್ಥಳೀಯರು ಆರೈಕೆ ಮಾಡಿ ‘ಹೀಗೆ ನಡೆದುಕೊಂಡು ಹೊರಟರೆ ಹುಬ್ಬಳ್ಳಿ ಸಿಗುತ್ತದೆ’ ಎಂದು ಹೇಳುತ್ತಾರೆ. ಹಾಗೆ ಹುಬ್ಬಳ್ಳಿ ಸೇರುವ ರಾಜಣ್ಣ ‘ಸಮಾಜ ವಿಕಾಸ ನಾಟಕ ಮಂಡಳಿ’ ಸೇರಿದರು. ಇಲ್ಲಿಂದ ಗೋಕಾಕ ಕಂಪನಿ, ಜಮಖಂಡಿ ಕಂಪೆನಿ, ದೊಡ್ಡವಾಡ ಕಂಪೆನಿಗಳಲ್ಲಿ ‘ಸತ್ಯನಾರಾಯಣ ವ್ರತ’, ‘ಬಸವೇಶ್ವರ’, ‘ಮಾವನಮನೆ’, ‘ಬಾಳೆ ಬಂಗಾರ’, ‘ರಾವ್ ಬಹಾದ್ದೂರ್’, ‘ಚಿಕ್ಕಮ್ಮ’, ‘ಗಂಡನಮನೆ’ ಮೊದಲಾದ ನಾಟಕಗಳಲ್ಲಿ ಹಲವು ಪಾತ್ರ ಮಾಡಿ ಸೈ ಎನ್ನಿಸಿಕೊಂಡರು. ಇಲ್ಲಿಂದ ಮೈಸೂರಿಗೆ ಬಂದು ರಂಗಕರ್ಮಿ ಯೋಗಾನರಸಿಂಹ ಪ್ರೋತ್ಸಾಹದಿಂದ ಹಿರಣ್ಣಯ್ಯ ಮಿತ್ರ ಮಂಡಳಿ ಸೇರಿದರು. ಆಗ ಮಿತ್ರ ಮಂಡಳಿಯು ‘ಸಂಪೂರ್ಣ ರಾಮಾಯಣ’ ನಾಟಕವಾಡುತ್ತಿತ್ತು. ಇದರಲ್ಲಿ ಭರತನ ಪಾತ್ರವನ್ನು ರಾಜಣ್ಣ ನಿರ್ವಹಿಸಿದರು. ಅಲ್ಲದೆ ‘ಲಂಚಾವತಾರ’ ನಾಟಕದಲ್ಲಿ ಮೀಸೆ ಮುನಿಯಪ್ಪ ಪಾತ್ರವೂ ಸಿಕ್ಕಿತು. ಇಲ್ಲಿಯೇ ಐದಾರು ವರ್ಷ ಕಳೆದು 1961ರಲ್ಲಿ ಅರಸೀಕೆರೆಯ ವಿಮಲಮ್ಮ ಅವರನ್ನು ನಂಜನಗೂಡಿನಲ್ಲಿ ಮದುವೆಯಾದರು. ಮುಂದೆ ಗುಬ್ಬಿ ವೀರಣ್ಣ ಅವರ ಅಳಿಯ ಚನ್ನಪ್ಪ ಅವರು ‘ಸತ್ಯವ್ರತ’ ನಾಟಕಕ್ಕೆ ಕರೆದೊಯ್ದು ರಾಜಣ್ಣ ಎನ್ನುವವರು ಬೇರೆ ಬೇರೆ ಇದ್ದಾರೆಂದು ರಾಜಣ್ಣನಿಗೆ ರಾಜಾನಂದ್ ಎಂದು ಕರೆದು ಸಿಹಿ ಹಂಚಿದರು. ಅಲ್ಲಿಂದ ರಾಜಾನಂದ್ ಎಂದು ಪ್ರಸಿದ್ಧಿಯಾದರು. ಹಿರಣ್ಣಯ್ಯ ಮಿತ್ರ ಮಂಡಳಿಯಿಂದ ಹೊರಬಂದ ಮೇಲೆ ವಿ.ವಿ. ನಾಯಕ್ ಅವರು ರಾಜಾನಂದ್ ಅವರನ್ನು ಕರೆದುಕೊಂಡು ಹೋಗಿ ‘ಟಿಪ್ಪುಸುಲ್ತಾನ್’ ನಾಟಕದಲ್ಲಿ ಟಿಪ್ಪು ಹಾಗೂ ಕಾರ್ನವಾಲಿಸ್ ಪಾತ್ರಗಳಿಗೆ ಬಣ್ಣ ಹಚ್ಚಿಸಿದರು. ಇದು ಒಂದು ವರ್ಷದವರೆಗೆ ನಡೆಯಿತು. ಬಳಿಕ 1965ರಲ್ಲಿ ರಾಜಾನಂದ್ ರಂಗ ವೈಭವ ಎಂಬ ಸ್ವಂತ ಕಂಪೆನಿ ಕಟ್ಟಿ ಕೆಲ ವರ್ಷ ನಡೆಸುತ್ತಾರೆ. ಕಂಪೆನಿ ಕಟ್ಟಿದರೂ ಐತಿಹಾಸಿಕ, ಪೌರಾಣಿಕ ಅಲ್ಲದೆ ಸಾಮಾಜಿಕ ನಾಟಕಗಳಲ್ಲೂ ಬಣ್ಣ ಹಚ್ಚಿದರು. ಕರುಳು ಹಿಂಡುವ ಬಡವನ ಪಾತ್ರದಿಂದ ಹಿಡಿದು ಗಾಂಭೀರ್ಯ ತುಂಬುವ ರಾಜನ ಪಾತ್ರಕ್ಕೂ ಅವರು ಸೈ. ತಮ್ಮ ವಿಶಿಷ್ಟ ಕಂಠದಿಂದ ಗಮನಸೆಳೆದಿದ್ದರು.
ಅವರ ಪತ್ನಿ ವಿಮಲಮ್ಮ ಅವರು ಮೈಸೂರಿನಲ್ಲಿ ನೆಲೆಸೋಣವೆಂದು ಹೇಳಿದಾಗ ಮೈಸೂರಿನ ವಾಸಿಯಾದರು. ಜಮಖಂಡಿ ಕಂಪೆನಿಯಲ್ಲಿದ್ದಾಗ ಪರಿಚಯವಾಗಿದ್ದ ಕೆ.ಎಸ್.ರಾವ್ ಅವರು ಶಂಕರ್ ಸಿಂಗ್ (ಸಿನೆಮಾ ನಿರ್ಮಾಪಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಂದೆ) ಅವರನ್ನು ಪರಿಚಯಿಸಿದರು. ಆಗ ಅವರು ‘ಧನಪಿಶಾಚಿ’ ಸಿನೆಮಾ ನಿರ್ಮಿಸುವಾಗ ಪಾತ್ರ ದೊರೆಯಿತು. ಹೀಗೆ ಅವರು ಅಭಿನಯಿಸಿದ ಮೊದಲ ಸಿನೆಮಾ ‘ಧನಪಿಶಾಚಿ’ಯಾದರೂ ಮೊದಲು ಬಿಡುಗಡೆಗೊಂಡಿದ್ದು ‘ಚಕ್ರತೀರ್ಥ’. ಪೆಕೆಟಿ ಶಿವರಾಂ ಅವರ ಶಿಫಾರಸಿನಿಂದ ‘ಚಕ್ರತೀರ್ಥ’ ಸಿನೆಮಾದಲ್ಲಿ ಅವಕಾಶ ಸಿಕ್ಕಿತು. ಹೀಗೆ ಅವರು 318 ಸಿನೆಮಾಗಳಲ್ಲಿ ನಟಿಸಿದರು. ಆದರೂ ಅವರು ರಂಗಭೂಮಿಯ ನಂಟು ಬಿಡಲಿಲ್ಲ. 300 ನಾಟಕಗಳನ್ನು, 9 ಸಾವಿರ ಕವನಗಳನ್ನು, 7 ಸಾವಿರ ವೈಚಾರಿಕ ಲೇಖನಗಳನ್ನು, 1,008 ಮುಕ್ತಕಗಳನ್ನು, 1,008 ಗಾದೆಗಳನ್ನಲ್ಲದೆ ಮೈಸೂರು ಆಕಾಶವಾಣಿಗೂ ನಾಟಕಗಳನ್ನು ರಚಿಸಿದರು. ಆಮೇಲೆ ಅವರಿಗೆ ಸಿನೆಮಾದಲ್ಲಿ ಪಾತ್ರಗಳು ಕಡಿಮೆಯಾದವು. ಕಾಡುವ ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ದೃಷ್ಟಿಯೂ ಮಂದವಾಯಿತು. ಗ್ಯಾಂಗ್ರಿನ್ ಸಹ ಕಾಡಿತು. ಕೊನೆಗೆ 2004ರ ಆಗಸ್ಟ್ 25ರಂದು ಮೈಸೂರಿನ ಎನ್.ಆರ್.ಮೊಹಲ್ಲಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಅನಾಥ ಬಾಲಕನೊಬ್ಬ ರಂಗಕರ್ಮಿಯಾಗಿ ಬದ್ಧತೆಯಿಂದ ಬೆಳೆದು, ಸಿನೆಮಾರಂಗದಲ್ಲೂ ಬೆಳಗಿದ್ದು ಅಪರೂಪ. ಹೆಸರು ರಾಜಾನಂದ್ ಎಂದಿದ್ದರೂ ಅಂಧಕಾಲದಲ್ಲಿ ಅಂದರೆ ದೃಷ್ಟಿಹೀನರಾಗಿ ಬದುಕಿದರು. ಜೊತೆಗೆ ಆರ್ಥಿಕ ಸಂಕಷ್ಟದಿಂದಲೂ ಬಳಲಿದರು.