ಅನ್ನ ಬಿಟ್ಟೇನು ಬಣ್ಣ ಬಿಡಲಾರೆ 24ರಂದು ‘ರಂಗ ಬಾನಾಡಿ’ ಬಿಡುಗಡೆ
ಕೆಲ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಹುಬ್ಬಳ್ಳಿಯಿಂದ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಜಯಲಕ್ಷ್ಮೀ ಪಾಟೀಲ ಅವರ ಫೋನ್ ಕರೆ. ‘‘ಯಾವಾಗ ಸಾಯ್ತೀನೋ ಗೊತ್ತಿಲ್ರಿ. ನನ್ನ ಬಗ್ಗೆ ಪುಸ್ತಕ ಯಾವಾಗ ಮುಗಿಸ್ತೀರಿ?’’ ಎಂದು ಕೇಳಿದಾಗ ಗಾಬರಿಯಾಗಿ ಅವರನ್ನು ನೋಡಲು ಹೋದೆ. ಸಕ್ಕರೆ ಕಾಯಿಲೆಯಿಂದಾಗಿ ಸುಸ್ತಾಗಿದ್ದ ಅವರು ಬೆಂಗಳೂರಿನಿಂದ ಧಾರಾವಾಹಿಗಳ ಚಿತ್ರೀಕರಣದಲ್ಲಿ ಭಾಗವಹಿಸದೆ ಹುಬ್ಬಳ್ಳಿಯಲ್ಲಿದ್ದರು. ಅವರನ್ನು ಕಂಡಾಗ ‘‘ನನಗ ಆರಾಮ ಇರದೆ ಇರೋದು ಛಲೋ ಆತು. ನೀವು ಈ ಪುಸ್ತಕ ಮುಗಿಸ್ತಿರಲಿಲ್ರಿ?’’ ಎಂದು ತಮಾಷೆ ಮಾಡಿದರು. ಅರ್ಧಕ್ಕೆ ನಿಂತಿದ್ದ ಅವರ ಆತ್ಮಕಥೆಯನ್ನು ಪೂರ್ಣಗೊಳಿಸಿದೆ.
2007ರಲ್ಲಿ ಏಣಗಿ ಬಾಳಪ್ಪ ಅವರ ಕುರಿತ ‘‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿ ಹೊರಬಂದಾಗ ಹುಬ್ಬಳ್ಳಿಯಲ್ಲಿ ಜಯಲಕ್ಷ್ಮೀ ಪಾಟೀಲ ಅವರಿಗೆ ಪ್ರತಿಯೊಂದನ್ನು ಕೊಟ್ಟಿದ್ದೆ. ‘‘ನೀವು ಪ್ರಸಿದ್ಧರ ಬಗ್ಗೆ ಮಾತ್ರ ಬರಿತೀರಿ. ನಮ್ಮಂಥ ಕಲಾವಿದೆಯರ ಬಗ್ಗೆ ಬರೆಯಂಗಿಲ್ರಿ?’’ ಎಂದು ತಕರಾರು ತೆಗೆದರು. ಏಣಗಿ ಬಾಳಪ್ಪ ಕುರಿತ ಕೃತಿಯ ಹಾಗೆಯೇ ತಕ್ಷಣ ಇನ್ನೊಂದು ಕೃತಿ ತರಬಾರದೆಂದು ಅವರಿಗೆ ಹೇಳಿದೆ. ಆಮೇಲೆ ಹುಬ್ಬಳ್ಳಿಯಿಂದ ಮೈಸೂರಿಗೆ ವರ್ಗಾವಣೆಗೊಂಡಾಗ ಅವರ ಭೇಟಿ ಅಪರೂಪವಾಯಿತು. ಆದರೂ ಆಗಾಗ ಭೇಟಿಯಾದಾಗ, ಫೋನಿನಲ್ಲಿ ತಮ್ಮ ಆತ್ಮಕಥೆ ಕುರಿತು ವಿಚಾರಿಸುತ್ತಿದ್ದರು.
ಅವರ ತಾಯಿ, ಅಜ್ಜಿಯಿಂದ ಬಳುವಳಿಯಾಗಿ ಬಂದ ರಂಗಭೂಮಿಯ ನಂಟಿನಿಂದ ‘ಅನ್ನ ಬಿಟ್ಟೇನು ಬಣ್ಣ ಬಿಡಲಾರೆ’ ಎನ್ನುವುದು ಅವರ ನಿರಂತರ ಮತ್ತು ಚಿರಂತನ ಮಾತು. ಅವರ ಕುರಿತ ಈ ಆತ್ಮಕಥೆಯಲ್ಲಿ ಕಲಾವಿದೆಯರ ಸಮಸ್ಯೆಗಳು, ಸಂಕಟಗಳು, ಸವಾಲುಗಳ ಅನಾವರಣವಿದೆ. ಇದು ಕೇವಲ ಅವರ ಆತ್ಮಕಥೆಯಲ್ಲ, ಅವರ ಹಾಗಿರುವ ಸಾವಿರಾರು ಕಲಾವಿದೆಯರ ಆತ್ಮಕಥೆ. ಬಡತನ, ಅನಕ್ಷರತೆ, ಅಸಹಾಯಕತೆಯ ಕಾರಣಗಳಿಂದ ರಂಗಭೂಮಿಗೆ ಕಾಲಿಡುವ ಕಲಾವಿದೆಯರು ಅನೇಕರಿದ್ದರು, ಇದ್ದಾರೆ. ಅದರಲ್ಲೂ ಪುರುಷ ಕಲಾವಿದರಿಗಿರದ ಅನೇಕ ಸಮಸ್ಯೆಗಳು, ಆತಂಕಗಳು ಕಲಾವಿದೆಯರಿಗೆ ಎದುರಾಗುತ್ತವೆ. ಹಾಗೆ ಹೇಳದ, ಹೇಳಿಕೊಳ್ಳಲಾಗದವೇ ಹೆಚ್ಚು. ಆದರೂ ತಮ್ಮ ಬಣ್ಣದ ಬದುಕಿನಲ್ಲಿ ಜಯಿಸಿದ್ದು ಹೇಗೆ ಎಂಬುದರ ಜೊತೆಗೆ ಆ ಕಾಲದ ಕಂಪೆನಿಗಳ ವೈಭವ, ಕಲಾವಿದರ ಪ್ರತಿಭೆ, ಕಲಿಕೆಯ ಕ್ರಮ, ಜಾತಿ ಮೀರಿದ ಬಾಂಧವ್ಯ... ಇಂಥ ಹತ್ತಾರು ಅಂಶಗಳನ್ನು ಹೇಳಿದ್ದರ ದಾಖಲೆ ಇಲ್ಲಿದೆ. ಆದರೆ ಹೇಳದೆ ಉಳಿದವು, ದಾಖಲಾಗದವು ಅನೇಕ ಇವೆ. ಆದರೂ ನಟಿ ಕಲ್ಪನಾ ಅವರನ್ನು ಹತ್ತಿರದಿಂದ ಕಂಡಿದ್ದ, ಅವರ ಸಾವಿನ ಕುರಿತು ಆರ್ದ್ರವಾಗಿ ಹೇಳಿದ ಚಿತ್ರಣವೂ ಇಲ್ಲಿದೆ.
ರಂಗಭೂಮಿಯಲ್ಲಿ ಅವಕಾಶಗಳು ಕಡಿಮೆಯಾದಾಗ ಜಯಲಕ್ಷ್ಮೀ ಅವರು ಸಿನೆಮಾ, ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು, ಹಚ್ಚುತ್ತಿದ್ದಾರೆ. ನಾಟಕಗಳ ಸಲುವಾಗಿ ಊರೂರು ಅಲೆಯುತ್ತ, ಈಗ ಧಾರಾವಾಹಿಗಳಿಗಾಗಿ ಸ್ಥಿತ್ಯಂತರಗೊಂಡ ಬಾನಾಡಿಯಾದರೂ ಬಣ್ಣ ಅವರಿಗೆ ಅಂಟಿದ ನಂಟು; ಬಿಡದ ಅಂಟು. ಪೌರಾಣಿಕ, ಭಕ್ತಿಪ್ರಧಾನ ನಾಟಕಗಳಿಂದ ಕಲಿತು, ಸಾಮಾಜಿಕ ನಾಟಕಗಳಲ್ಲಿ ಮಿಂಚಿದ ಅವರ ರಂಗಪಯಣದ ದಾಖಲೆ ಈ ಕೃತಿಯಲ್ಲಿದೆ. ಅವುಗಳ ಒಂದೆರಡು ಅಧ್ಯಾಯಗಳು ಇಲ್ಲಿವೆ.
* * *
ಸನ್ಮಾನವಾಗದ ನೋಟಿನ ಹಾರ!
ಮಂಗಳೂರಿನ ಶ್ರೀ ನಂದಕೇಶ್ವರ ನಾಟ್ಯ ಸಂಘದಲ್ಲಿದ್ದಾಗ ನಡೆದ ಘಟನೆಯಿದು. ಬಾಲರಾಜ ಜಮಖಂಡಿ ವಿರಚಿತ ‘ಮಂಗಳಾ ನನ್ನ ಅತ್ತಿಗೆ’ ನಾಟಕ ಆಡುತ್ತಿದ್ದೆವು. ಮಂಗಳಾ ಪಾತ್ರ ನನ್ನದು. ಪ್ರೀತಿಸಿದ ವಿಜಯನನ್ನು ಬಿಟ್ಟು ಅನಿವಾರ್ಯವಾಗಿ ಬೇರೆಯವರನ್ನು ಮದುವೆಯಾಗುವೆ. ಆಕಸ್ಮಿಕವಾಗಿ ಅಪಘಾತದಲ್ಲಿ ವಿಜಯ ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ. ನಾನು ಮದುವೆಯಾದವನು ವಿಜಯನ ಅಣ್ಣನೇ ಆಗಿರುತ್ತಾನೆ. ಮುಂದೆ ಗಂಡನ ಅನುಮಾನದಿಂದ ನಾಟಕವು ದುರಂತದಲ್ಲಿ ಅಂತ್ಯವಾಗುತ್ತದೆ.
ಕುಂಬಳೆಯಲ್ಲಿ ಈ ನಾಟಕ ನೋಡಲು ಬಂದ ಹಿರಿಯ ಪ್ರೇಕ್ಷಕರೊಬ್ಬರು ನಾಟಕ ಮುಗಿದ ಮೇಲೆ ಬಂದು ನನ್ನ ಅಭಿನಯ ಹೊಗಳಿ ‘ನಿಮಗೆ ಕಾಣಿಕೆ ಕೊಡಬೇಕು. ಮತ್ತೆ ಬರ್ತೀನಿ’ ಎಂದರು. ಎರಡು ದಿನಗಳ ನಂತರ ಬಂದ ಅವರು ಒಂದು ಸಾವಿರದಷ್ಟು 50 ರೂಪಾಯಿ ನೋಟುಗಳಿಂದ ಹಾರ ಮಾಡಿ, ಅದಕ್ಕೆ ಹೂವುಗಳನ್ನು ಸೇರಿಸಿ ಸನ್ಮಾನಿಸಲು ತಂದರು. ಅವರ ಮನಸ್ಸಿನಲ್ಲಿ ಮಂಗಳಾ ಪಾತ್ರ ಮನೆ ಮಾಡಿತ್ತು. ಆದರೆ ಅಂದು ನಾಟಕ ಬದಲಾವಣೆಯಿಂದಾಗಿ ಪಿ.ಬಿ.ಧುತ್ತರಗಿ ಅವರ ‘ತಾಯಿಕರುಳು’ ಆಡುತ್ತಿದ್ದೆವು. ಇದರಲ್ಲಿ ಗಯ್ಯಾಳಿ ಸೊಸೆ ಸರಸ್ವತಿ ಪಾತ್ರ ನನ್ನದು. ಅತ್ತೆ, ಮಾವ, ಮೈದುನನಿಗೆ ಕಾಟ ಕೊಟ್ಟು, ಅತ್ತೆಯನ್ನು ಕಾಲಿನಿಂದ ಒದ್ದು ಹೊರ ಹಾಕುವ ದೃಶ್ಯವಿತ್ತು. ಹೀಗೆ ನಾಟಕ ಸಾಗುವಾಗ ಕಂಪೆನಿಯ ಮಾಲಕ ಪಿ.ಬಿ.ರೈ ಅವರು ಹಿರಿಯ ಪ್ರೇಕ್ಷಕರನ್ನು ಒಳಗೆ ಕರೆದು ‘‘ಜಯಲಕ್ಷ್ಮೀ ಅವರನ್ನು ಈಗ ಸನ್ಮಾನಿಸುವರು’’ ಎಂದರು. ತಕ್ಷಣ ಆ ಹಿರಿಯ ಪ್ರೇಕ್ಷಕರು ‘‘ಇವರ ಮಂಗಳಾ ಪಾತ್ರ ನೋಡಿ ನೋಟಿನ ಹಾರ ತಂದಿದ್ದು ನಿಜ. ಆದರೆ ಇಂದಿನ ನಾಟಕದ ಸರಸ್ವತಿ ಪಾತ್ರ ನೋಡಿ ಸನ್ಮಾನಿಸಿದರೆ ಊರ ಜನ ನನಗೆ ಏನೆಂದಾರು? ನನ್ನ ಮರ್ಯಾದೆ ಹರಾಜಾಗುತ್ತದೆ. ಅತ್ತೆಯನ್ನು ಒದ್ದು ಮನೆಯಿಂದ ಹೊರಹಾಕಿದ ಇವರನ್ನು ಸನ್ಮಾನ ಮಾಡಲಾರೆ’’ ಎಂದು ನೋಟಿನ ಹಾರದ ಜೊತೆಗೆ ಹೊರಟೇಹೋದರು. ’ಇದು ಕೇವಲ ಪಾತ್ರವಷ್ಟೇ’ ಎಂದು ಕಂಪೆನಿ ಮಾಲಕರು, ಕಲಾವಿದರು ಹೇಳಿದರೂ ಅವರು ಕೇಳಲಿಲ್ಲ. ಮುಂದೆ ‘ಚನ್ನಪ್ಪ ಚೆನ್ನೇಗೌಡ’ ನಾಟಕದ ಪಾರ್ವತಿಯ ನನ್ನ ಪಾತ್ರ ನೋಡಿದ ಆ ಹಿರಿಯ ಪ್ರೇಕ್ಷಕರು ನೋಟಿನ ಹಾರ ಹಾಕಿ ಸನ್ಮಾನಿಸಿ ಸಂತೋಷಪಟ್ಟರು. ಹೃದಯಸ್ಪರ್ಶಿ ನಾಟಕಗಳು ಹೃದಯವಂತರಿಗೆ ಹೇಗೆ ತಟ್ಟುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ.
* * *
ಕಲಾವಿದರ ಕೈಗಂಟು
ಎಂಭತ್ತರ ದಶಕದಲ್ಲಿ ಗದಗ ಜಿಲ್ಲೆಯ ಹೊಳೆಆಲೂರಿನಲ್ಲಿ ಚಿದಂಬರ ಜೋಶಿ ಅವರ ಯಂಕಂಚಿಯ ಕರ್ನಾಟಕ ಕಲಾವೈಭವ ನಾಟಕ ಸಂಘ ಮೊಕ್ಕಾಂ ಹೂಡಿತ್ತು. ‘ನೀನೂ ಸಾಹುಕಾರನಾಗು’ ನಾಟಕಕ್ಕೆ ಹೋಗಿದ್ದೆ. ಜೂನಿಯರ್ ಹೇಮಾಮಾಲಿನಿ ಎಂದು ಕರಪತ್ರದಲ್ಲಿ ನನ್ನ ಫೋಟೋ ಹಾಕಿಸಿದ್ದರು. ಇದರಲ್ಲಿ ಅಪರಂಜಿ ಪಾತ್ರ ನನ್ನದು. ಸೋದರಮಾವನ ಪಾತ್ರಧಾರಿ ಮುಧೋಳ ಅಪ್ಪಣ್ಣ ಅವರ ಮಗ ನಾಗರಾಜ. ಅವರದೂ ಕಾಮಿಡಿ ಪಾತ್ರ. ‘ನನ್ನ ಲಗ್ನಾಗು’ ಎಂದು ಒತ್ತಾಯಿಸುವ ಪಾತ್ರ ಅವರದು. ಸ್ವಲ್ಪ ಕಪ್ಪು ಬಣ್ಣವಿದ್ದ ಪಾತ್ರವದು. ‘‘ಮಾವ, ನಿನ್ನ ಲಗ್ನಾಗಬಹುದು. ನನ್ನ ನಿನ್ನ ಜೋಡಿ ಒಪ್ಪುದಿಲ್ಲ. ಕುಲಸಾಮ್ಯ ಕೆಟ್ರೂ ವರಸಾಮ್ಯ ಕೆಡಬಾರ್ದು ಅಂದ್ರ ನನ್ನ ನಿನ್ನ ಜೋಡಿ ಜನ ಒಪ್ಪಬೇಕಲ್ಲ?’’ ಕೇಳಿದೆ.
‘‘ಯಾಕ ಒಪ್ಪೂದಿಲ್ಲ’’ ಎಂದು ನನ್ನ ಕೈ ಹಿಡಿದು ಪ್ರೇಕ್ಷಕರನ್ನು ಕೇಳಿದ್ರು. ಛಲೋ ಹಾಡ್ತಿದ್ದ ಅವರು ಕೇಳಿದ್ದಕ್ಕೆ ಅಭಿಮಾನಿ ಪ್ರೇಕ್ಷಕರು ‘ಸೂಪರ್’ ಅಂದರು. ‘‘ತಡಿ, ನಮ್ಮವರನ್ನು ಕೇಳ್ತೀನಿ’’ ಅಂದೆ. ‘‘ಹೇಳ್ರಿ ಮಾವಾರ, ಅಣ್ಣಾರ. ಜೋಡಿ ಛಲೋ ಐತೇನ್ರಿ?’’ ಕೇಳಿದೆ.
‘‘ಛಲೋ ಇಲ್ಲ, ಬೇಸಿ ಇಲ್ರಿ’’ ಅಂದರು.
‘‘ನೋಡು ಹೆಂಗಂತಾರ?’’ ಕೇಳಿದೆ.
‘‘ಛಲೋ ಇಲ್ಲ ಅಂದೋರು ನಿನ್ನ ಮ್ಯಾಲ ಕಣ್ಣಿಟ್ಟಾರ. ಈ ಮಾಲು ನಮಗ ಸಿಗಲಿಲ್ಲಂತ. ಹೊಟ್ಟೆಕಿಚ್ಚು ಅವ್ರಿಗೆ’’ ಅಂದರು. ಎಲ್ಲ ಪ್ರೇಕ್ಷಕರು ಚಪ್ಪಾಳೆ ಹೊಡೆದು ನಕ್ಕರು. ಇದು ಇವತ್ತಿಗೂ ‘‘ನೀನೂ ಸಾಹುಕಾರನಾಗು’’ ನಾಟಕದಲ್ಲಿ ಚಾಲ್ತಿಯಲ್ಲಿದೆ. ವೃತ್ತಿ ಕಂಪೆನಿಯಲ್ಲಿ ಕೈಗಂಟು ಅನ್ನುತ್ತಾರೆ. ಕಲಾವಿದರು ತಾವೇ ಸೃಷ್ಟಿಸಿಕೊಂಡು ಆಡುವ ಮಾತಿಗೆ ಕೈಗಂಟು ಎನ್ನುತ್ತಾರೆ.
* * *
ನಾಟಕ ನಿಂತರೆ ಮರ್ಯಾದೆ?
ಅದು 1982-83ರ ಅವಧಿ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹರವಿ ಗ್ರಾಮದಲ್ಲಿ ಜಾತ್ರೆಯ ಸಲುವಾಗಿ ಊರಿನ ಹವ್ಯಾಸಿ ಕಲಾವಿದರು ಆಡುತ್ತಿದ್ದ ನಾಟಕದ ನಟಿಯರಲ್ಲೊಬ್ಬಳು ಪ್ರೀತಿಸಿದವನೊಂದಿಗೆ ಓಡಿಹೋದಳು. ನಾಟಕದ ದಿನದಂದು ಯಾರೂ ಸಿಗುತ್ತಿಲ್ಲ. ಸಿರವಾರದಲ್ಲಿ ಬಿ.ಆರ್.ಅರಿಶಿಣಗೋಡಿ ಅವರ ಶ್ರೀ ಹುಚ್ಚೇಶ್ವರ ನಾಟ್ಯ ಸಂಘವು ಮೊಕ್ಕಾಂ ಮಾಡಿತ್ತು. ಆ ಊರಿನ ಮುಖಂಡರೆಲ್ಲ ಬಂದು ‘‘ಹೆಂಗಾದ್ರೂ ಮಾಡ್ರಿ ಜಯಮ್ಮ’’ ಎಂದು ಕೇಳಿದರು. ಗೆಳತಿ ಶಶಿಪ್ರಭಾ ಆರಾಧ್ಯ ಅವರ ಮಗಳು ಪ್ರಿಯಾ ಹತ್ತನೇ ತರಗತಿಯ ಪರೀಕ್ಷೆ ಮುಗಿಸಿಕೊಂಡು ಬಂದಿದ್ದಳು. ಶಶಿಗೆ ಹೇಳಿದೆ ‘‘ಊರಿನ ಮರ್ಯಾದೆ ಪ್ರಶ್ನೆ’’ ಎಂದೆ. ಆಕೆ ಒಪ್ಪಿಕೊಂಡಳು. ಪ್ರಿಯಾಳನ್ನು ಕರೆದು ‘‘ನಾಟಕ ನಿಂದರಬಾರದು, ಮರ್ಯಾದೆ ಪ್ರಶ್ನೆ’’ ಎಂದೆ.
‘‘ಆಯ್ತು ಆಂಟಿ, ಕಲಿಸಿದ್ರ ಕಲಿತೀನಿ’’ ಅಂದ್ಲು. ಅವಳನ್ನು ಕರೆದುಕೊಂಡು ಹರವಿ ಗ್ರಾಮಕ್ಕೆ ಹೋಗಿ ನೃತ್ಯ, ಮಾತು ಕಲಿಸಿದೆ. ಸಂಭಾಷಣೆ ತಪ್ಪದೆ ಹೇಳಿದಳು. ನಾಟಕ ಯಶಸ್ವಿಯಾಯಿತು. ಜನಪ್ರಿಯಳೂ ಆದಳು. 10-20 ನಾಟಕಗಳಲ್ಲಿ ಅಭಿನಯಿಸಿದಳು. ನನಗೊಂದು, ತನ್ನ ತಾಯಿಗೊಂದು ಸೀರೆ ಕೊಡಿಸಿದಳು. ಆಕೆಯ ತಂದೆ ಕುಮಾರಸ್ವಾಮಿ ಆರಾಧ್ಯ ಅವರು ಅರಿಶಿಣಗೋಡಿ ಅವರ ಕಂಪೆನಿಯಲ್ಲಿ ಕ್ಯಾಷಿಯರ್ ಆಗಿದ್ದರು, ನಟರೂ ಆಗಿದ್ದರು. ಇವತ್ತಿಗೂ ಪ್ರಾಂಫ್ಟ್ (ಸೈಡ್‌ವಿಂಗಿನಲ್ಲಿ ನಿಂತು ಹೇಳಿಕೊಡುವವರು) ಇಲ್ಲದೆ ಸಂಭಾಷಣೆ ಹೇಳುತ್ತಾಳೆ.