ಸಾಣೇಹಳ್ಳಿಯ ಬದಾಮಿ ಎಂಬ ರಂಗದಂಪತಿ
ಸಾಣೇಹಳ್ಳಿ ಎಂದಾಕ್ಷಣ ರಂಗಾಸಕ್ತರಿಗೆ ಕಿವಿ ನಿಮಿರುತ್ತವೆ. ರಂಗಕರ್ಮಿಗಳು ಗೊತ್ತು ಎನ್ನುತ್ತಾರೆ. ಅದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಪುಟ್ಟ ಗ್ರಾಮ. ಅದು ರಂಗಭೂಮಿಯಲ್ಲಿ ದಾಖಲೆ ಮಾಡಿದೆ. ಇದಕ್ಕೆ ಕಾರಣರಾದವರು; ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಶಿವಕುಮಾರ ಕಲಾ ಸಂಘದ ಮೂಲಕ ಆಗಾಗ ನಾಟಕವಾಡಿಸುತ್ತಿದ್ದ ಸಾಣೇಹಳ್ಳಿ ಶ್ರೀಗಳಿಗೆ ಸಿಜಿಕೆ ಒಡನಾಟ ಸಿಕ್ಕಿತು. ಅವರ ಒತ್ತಾಯದ ಪರಿಣಾಮ ಸಾಣೇಹಳ್ಳಿಯಲ್ಲಿ ರೆಪರ್ಟರಿ ಶುರು ಮಾಡಿದರು. ಶಿವಕುಮಾರ ಕಲಾ ಸಂಘಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಿ ತರಬೇತಿ ನೀಡಿ, ಒಂದು ವರ್ಷದ ನಂತರ ಶಿವಸಂಚಾರ ಎಂಬ ತಿರುಗಾಟದ ಮೂಲಕ ಬಹಳ ಪರಿಣಾಮ ಬೀರಿದರು. ವಚನಕಾರರ ತತ್ವ, ಸಂದೇಶಗಳನ್ನು ಕೇವಲ ಉಪನ್ಯಾಸ, ಆಶೀರ್ವಚನ ಮೂಲಕ ನೀಡದೆ ನಾಟಕಗಳ ಮೂಲಕ ಪರಿಣಾಮಕಾರಿ ಪ್ರಸಾರಗೊಳಿಸಿದ ಹೆಗ್ಗಳಿಕೆ ಶ್ರೀಗಳದು. ಇವರ ಗರಡಿಯಲ್ಲಿ ಪಳಗಿದ ಅನೇಕರಲ್ಲಿ ವೈ.ಡಿ.ಬದಾಮಿ ಹಾಗೂ ಮಂಜುಳಾ ಬದಾಮಿ ದಂಪತಿ. ಬದಾಮಿ ಅವರಿಗೆ ಈಗ 60 ವರ್ಷ. 45 ವರ್ಷಗಳ ರಂಗಭೂಮಿ ನಂಟು.
ಸಾಣೇಹಳ್ಳಿಯವರೇ ಆದ ಮಂಜುಳಾ ಅವರನ್ನು 28 ವರ್ಷಗಳ ಹಿಂದೆ ಮದುವೆಯಾಗಿ, ಅಲ್ಲಿನ ವಾಸಿಯಾಗಿ, ಅಲ್ಲಿನವರೇ ಆದ ಬದಾಮಿ ಮೂಲತಃ ವಿಜಾಪುರದವರು. ಹೈಸ್ಕೂಲಿನಲ್ಲಿ ಓದುವಾಗಲೇ ಗಣೇಶ ಚತುರ್ಥಿ ಸಂದರ್ಭದಲ್ಲಿ ಬಸವರಾಜ ಬೊಮ್ಮನಜೋಗಿ ಅವರು ನಿರ್ದೇಶಿಸಿದ ‘ತಬ್ಬಲಿ’ ನಾಟಕದಲ್ಲಿ ಪೊಲೀಸನ ಪಾತ್ರ ಸಿಕ್ಕಿದ್ದರೂ ಕೊನೆಗೆ ಹಾಸ್ಯ ಪಾತ್ರಕ್ಕೆ ಬಣ್ಣ ಹಚ್ಚಿದರು. ಈ ನಾಟಕ ನೋಡಿದ ಶಾಸಕರೊಬ್ಬರು ಬದಾಮಿ ಅವರನ್ನು ಸನ್ಮಾನಿಸಿದರು. ಜೊತೆಗೆ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನವೂ ಬಂತು. ಬಳಿಕ ಶ್ರೀಕಾಂತ ನೀಲಗಾರ ಅವರ ನಿರ್ದೆಶನದ ‘ನೀರು ನೀರಡಿಕೆ’, ‘ಮಧ್ಯಮರು’ ಹಾಗೂ ‘ಕೋಡಗನ ಕೋಳಿ ನುಂಗಿತ್ತಾ’ ನಾಟಕಗಳಲ್ಲಿ ಪಾತ್ರ ನಿರ್ವಹಿಸುವಾಗ ವಿಜಾಪುರದಲ್ಲಿ ಅದಾಗಲೇ ಪ್ರಸಿದ್ಧವಾಗಿದ್ದ ಕಲಾಮಾಧ್ಯಮ ತಂಡದವರು ಇವರ ಅಭಿನಯ ಮೆಚ್ಚಿದರು. ಕಲಾಮಾಧ್ಯಮದಲ್ಲಿ ಅಶೋಕ ಬಾದರದಿನ್ನಿ, ಜಿ.ಎನ್. ದೇಶಪಾಂಡೆ ಅಲ್ಲದೆ ಬದಾಮಿ ಅವರ ಅಣ್ಣ ಸಂಗಮೇಶ ಬದಾಮಿ ಅವರು ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆಗ ಕಲಾಮಾಧ್ಯಮದಲ್ಲಿ ಅಭಿನಯಿಸುವ ಅವಕಾಶ ಸಿಗುವುದು ಅಪರೂಪವಾಗಿತ್ತು. ಹೀಗಿದ್ದಾಗ ಅಶೋಕ ಬಾದರದಿನ್ನಿ ನಿರ್ದೇಶಿಸಿದ ‘ಸ್ವರ್ಗಸ್ಥ’, ಜಿ.ಎಚ್.ರಾಘವೇಂದ್ರ ಅವರ ‘ಬಾಗಲಾ ತೆಗಿರಪೊ ಬಾಗಲಾ’ ನಾಟಕ ಹಾಗೂ ಚಂಪಾ ಅವರ ‘ಅಪ್ಪ’ ನಾಟಕದಲ್ಲಿ ಅಭಿನಯಿಸಿದರು. ಹೀಗಿದ್ದಾಗ ವಿಜಾಪುರದ ಪಿಡಿಜೆ ಹೈಸ್ಕೂಲಿನ ಆವರಣದಲ್ಲಿ ಪ್ರದರ್ಶನಗೊಂಡ ನೀನಾಸಂನ ನಾಟಕಗಳನ್ನು ನೋಡಿ ಪ್ರಭಾವಿತರಾದರು. ನಂತರ ನೀನಾಸಂನಲ್ಲಿ ರಂಗ ತರಬೇತಿಗೆ ಅರ್ಜಿ ಆಹ್ವಾನಿಸಿದಾಗ ಕಲಾಮಾಧ್ಯಮದ ಜಿ.ಎನ್. ದೇಶಪಾಂಡೆ ಹಾಗೂ ರಂಗಕರ್ಮಿ ಶ್ರೀನಿವಾಸ ತಾವರಗೇರಾ ಅವರ ಶಿಫಾರಸು ಪತ್ರಗಳ ಮೂಲಕ ಅರ್ಜಿ ಗುಜರಾಯಿಸಿದರು. ಮುಂದೆ ನೀನಾಸಂನಿಂದ ಸಂದರ್ಶನಕ್ಕೆ ಕರೆ ಬಂದಾಗ ಅಡಚಣೆಯಿಂದಾಗಿ ಒಂದು ದಿನ ತಡವಾಗಿ ಹೋದರು. ಆಗ ಪ್ರಾಂಶುಪಾಲರಾಗಿದ್ದ ಚಿದಂಬರರಾವ್ ಜಂಬೆ ಅವರು ಸಂದರ್ಶನದ ದಿನ ಬರದೆ ಮರುದಿನ ಬಂದಿರಲ್ಲ ಎಂದು ಕೇಳಿದಾಗ ಬಸ್ಸಿನ ಅನುಕೂಲ ಇಲ್ಲದ್ದನ್ನು ಹೇಳಿದರು. ಅವಕಾಶ ಸಿಗುವುದಿಲ್ಲವೆಂದು ಇನ್ನೇನು ವಿಜಾಪುರದ ಬಸ್ ಹತ್ತಬೇಕೆಂದುಕೊಂಡಾಗ ಅದಾಗಲೇ ಅಲ್ಲಿದ್ದ ನಟರಾಜ ಏಣಗಿ, ಲಕ್ಷ್ಮೀ ಕಬ್ಬೇರಹಳ್ಳಿ, ಬಂಡು ಕುಲಕರ್ಣಿ ಅವರು ತಡೆದು ನಿಲ್ಲಿಸಿದರು. ಮರುದಿನ ಜಂಬೆ ಅವರು ಕರೆದು ನೀನಾಸಂ ಸೇರಲು ಅವಕಾಶ ನೀಡಿದರು. ಅಲ್ಲಿಂದ ಊರಿಗೆ ಹೋಗಿ, ಹದಿನೈದು ದಿನಗಳ ನಂತರ ನೀನಾಸಂ ಸೇರಿದರು. ಹೀಗೆ ಜಂಬೆ ಅವರು ಅವಕಾಶ ನೀಡಿದ್ದನ್ನು ಬದಾಮಿ ಮರೆತಿಲ್ಲ. ‘‘ಜಂಬೆ ಅವರು ಅಪ್ಪನ ಹಾಗೆ. ಹೊರಗೆ ಕಠೋರವೆನಿಸಿದರೂ ಒಳಗೆ ಕರುಣಾಮಯಿ. ಮಹಾಬಲೇಶ್ವರ ಅವರು ತಾಯಿಯಿದ್ದ ಹಾಗೆ. ಕೆ.ವಿ.ಸುಬ್ಬಣ್ಣ ಅವರು ತಾತ ಇದ್ದ ಹಾಗೆ’’ ಎನ್ನುತ್ತಾರೆ ಅವರು.
ನೀನಾಸಂನಲ್ಲಿ ಒಂದು ವರ್ಷದ ತರಬೇತಿ ಮುಗಿಸಿದ ಬಳಿಕ ನಾಲ್ಕು ವರ್ಷಗಳವರೆಗೆ ತಿರುಗಾಟದಲ್ಲಿದ್ದ ಬದಾಮಿ ಅವರಿಗೆ ಪರಿಚಿತರಾದವರು ಮಂಜುಳಾ ಅವರು. ಬಳಿಕ ಪ್ರೀತಿ ಚಿಗುರೊಡೆದಾಗ ಮಂಜುಳಾ ಅವರು ಸಾಣೇಹಳ್ಳಿಗೆ ಆಹ್ವಾನಿಸಿದರು. ಅಲ್ಲಿದ್ದ ಮಂಜುಳಾ ಅವರ ದೊಡ್ಡಪ್ಪನ ಮಗ ಎಸ್.ಕೆ.ಪರಮೇಶ್ವರಯ್ಯ ಅವರು ಶಿವಕುಮಾರ ಕಲಾ ಸಂಘದ ಕಾರ್ಯದರ್ಶಿಯಾಗಿದ್ದರು. ಅವರ ಮೂಲಕ ಪಂಡಿತಾರಾಧ್ಯ ಶ್ರೀಗಳನ್ನು ಕಂಡರು. ಅವರು ಸಾಣೇಹಳ್ಳಿಯಲ್ಲಿ ಮಕ್ಕಳಿಗೆ ರಂಗ ತರಬೇತಿ ಶಿಬಿರ ನಡೆಸಲು ಅವಕಾಶ ನೀಡಿದರು. ಶಿಬಿರದಲ್ಲಿ ‘ನಾಯಿಮರಿ’ ನಾಟಕವನ್ನು ಬದಾಮಿ ನಿರ್ದೇಶಿಸಿದರು. ನಂತರ ಶ್ರೀಗಳ ಆಹ್ವಾನದ ಮೇರೆಗೆ ಸಾಣೇಹಳ್ಳಿಯಲ್ಲಿ ಉಳಿದರು. ಜೊತೆಗೆ ಮಂಜುಳಾ ಅವರ ಮೂಲಕ ರಂಗಪಯಣ ಕೈಗೊಂಡರು. ಹೀಗಿದ್ದಾಗಲೇ ದಲಿತ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಬಂದಿದ್ದ ಸಿಜಿಕೆ ಅವರು ರೆಪರ್ಟರಿ ಆರಂಭಿಸಲು ಒತ್ತಾಯಿಸಿದರು. ಅಲ್ಲಿ ಆರಂಭಗೊಂಡ ರೆಪರ್ಟರಿ ಜೊತೆಗಿದ್ದ ಬದಾಮಿ ಅವರನ್ನು ಎಸ್.ಆರ್. ಕೃಷ್ಣಮೂರ್ತಿ ಅವರ ಮೂಲಕ ಪಂಡಿತಾರಾಧ್ಯ ಶ್ರೀಗಳು ‘‘ಮಂಜುಳಾ ಅವರನ್ನು ಮದುವೆಯಾಗುತ್ತಾರೆಯೇ?’’ ಎಂದು ಕೇಳಿದರು. ಆಗ ಮಂಜುಳಾ ಅವರ ಮನೆಯಲ್ಲೂ ಒಪ್ಪಿ, ಬದಾಮಿ ಅವರ ಮನೆಯವರೂ ಒಪ್ಪಿ 1997ರಲ್ಲಿ ಬಸವ ಜಯಂತಿಯಂದು ರಂಗದಂಪತಿಯಾದರು. ಬಳಿಕ ಶಿವಸಂಚಾರ ತಿರುಗಾಟದಲ್ಲಿ ಇಬ್ಬರೂ ಪಾತ್ರ ನಿರ್ವಹಿಸಿದರು. ಮಹಾದೇವ ಬಣಕಾರ ಅವರ ‘ಉರಿಲಿಂಗಪೆದ್ದಿ’, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕುರಿತ ರಾಜಶೇಖರ ಹನುಮಲಿ ಅವರು ರಚಿಸಿದ ‘ಮಹಾಬೆಳಗು’ ನಾಟಕ ಹಾಗೂ ಶ್ರೀರಂಗರ ‘ಶೋಕಚಕ್ರ’ ನಾಟಕಗಳ ತಿರುಗಾಟದಲ್ಲಿ ಬದಾಮಿ ದಂಪತಿ ಇದ್ದರು. 2008ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾದ ಬದಾಮಿ ಅವರು ನಂತರ ಶಿವಸಂಚಾರದ ತಿರುಗಾಟದಲ್ಲಿ ಭಾಗವಹಿಸಲಿಲ್ಲ. ಆದರೆ ಈಗಲೂ ರೆಪರ್ಟರಿಯೊಂದಿಗೆ ನಂಟಿದೆ. ಶಿವಸಂಚಾರಕ್ಕೆ ನಾಟಕಗಳನ್ನು ನಿರ್ದೇಶಿಸುತ್ತಾರೆ. ‘‘ಇದೆಲ್ಲವೂ ಗುರುಗಳಾದ ಶ್ರೀಗಳ ಆಶೀರ್ವಾದದಿಂದ ಸಾಧ್ಯವಾಗಿದೆ’’ ಎನ್ನುತ್ತಾರೆ ಅವರು. ಶಿವಕುಮಾರ ಕಲಾ ಸಂಘವಲ್ಲದೆ ಶಿವಸಂಚಾರದ ಜೊತೆಗೆ ನಿರಂತರವಾಗಿ ಒಡನಾಟವಿಟ್ಟುಕೊಂಡಿರುವ ಅವರು, ಗ್ರಾಮರಂಗ ಸಾಂಸ್ಕೃತಿ ಟ್ರಸ್ಟ್ ಕಟ್ಟಿಕೊಂಡು ಅನವರತ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಮಂಜುಳಾ ಅವರು ನಟನೆ, ನಿರ್ದೇಶನ, ವಸ್ತ್ರವಿನ್ಯಾಸ, ಪ್ರಸಾಧನದಲ್ಲಿ ಸಕ್ರಿಯರಾಗಿದ್ದಾರೆ. ಅವರ ಅಭಿನಯದ ‘ವಸುಂಧರೆ’ ನಾಟಕವು 44 ಪ್ರದರ್ಶನಗಳನ್ನು ಕಂಡಿದೆ. ಶಶಿಕಾಂತ ಯಡಹಳ್ಳಿ ಅವರ ‘ಸೀತಾಂತರಾಳ’ ಎಂಬ ಏಕವ್ಯಕ್ತಿ ನಾಟಕವು ದೇಶದಾದ್ಯಂತ 126 ಪ್ರದರ್ಶನಗಳಾಗಿವೆ. ಈಚೆಗೆ ಅವರು ಪಂಡಿತಾರಾಧ್ಯ ಶ್ರೀಗಳ ರಚನೆಯ ‘ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕೆ’ ಎಂಬ ಏಕವ್ಯಕ್ತಿ ನಾಟಕವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ಬದಾಮಿ ಅವರದು. ಇಂಥ ಮಂಜುಳಾ ಹಾಗೂ ಬದಾಮಿ ಅವರು ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಬದಾಮಿ ಅವರು ‘ಕರ್ಣ’, ‘ಧಾರಾಶೀಕೊ’, ‘ತುಘಲಕ್’, ‘ಒಂದು ಬೊಗಸೆ ನೀರು’, ‘ಆತ್ಮಬಯಲು’ ನಿರ್ದೇಶಿಸಿದ ಇತರ ಏಕವ್ಯಕ್ತಿ ನಾಟಕಗಳು. ಆಗಸ್ಟ್ ತಿಂಗಳಲ್ಲಿ ಕೊಲಂಬಾಕ್ಕೆ ಪ್ರವಾಸ ಕೈಗೊಳ್ಳುವ ಸಾಣೇಹಳ್ಳಿ ತಂಡಕ್ಕೆ ಅವರು ನಿರ್ದೇಶಿಸಿದ ‘ಮರಣವೇ ಮಹಾನವಮಿ’ ನಾಟಕವು ಅಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಅವರು ಅಭಿನಯಿಸುತ್ತಾರೆ ಕೂಡಾ.
ಹೀಗೆ ಸದಾ ರಂಗಭೂಮಿಯ ಒಡನಾಟದಲ್ಲಿರುವ ಈ ದಂಪತಿಗೆ ಇಬ್ಬರು ಪುತ್ರಿಯರು. ಸಾಣೇಹಳ್ಳಿ ಶ್ರೀಗಳ ರೆಪರ್ಟರಿಯ ಆಸ್ಥಾನ ಕಲಾವಿದರು.