ರಂಗ ಸಂಸ್ಕಾರಕ್ಕೆ ಸಾಕ್ಷಿಯಾದ ಸಾಣೇಹಳ್ಳಿ
Photo: facebook.com/ Shivasanchara
‘‘ಈ ನೆಲದಲ್ಲಿ ಸಂಭವಿಸಿದ ವಚನ ಚಳವಳಿಯನ್ನು ನೋಡುವ, ಓದುವ ಅನೇಕ ದೃಷ್ಟಿಕೋನಗಳಿವೆ. ಹಾಗೆಯೇ ಅದನ್ನು ಈ ನೆಲದ ಪ್ರಥಮ ಶೂದ್ರ ಚಳವಳಿ ಎಂದು ಕೂಡಾ ನೋಡಬಹುದಾಗಿದೆ. ಈ ನೆಲದ ಶೂದ್ರ ಅಸ್ಮಿತೆಯನ್ನು, ಸಾಂಸ್ಕೃತಿಕ ಬದುಕನ್ನು, ತಾತ್ವಿಕತೆಯನ್ನು ಕಟ್ಟಿಕೊಡುವ, ಬೆಳೆಸುವ ಜವಾಬ್ದಾರಿಯನ್ನು ಹೊತ್ತಿರುವ ಮಠಗಳು ಅದನ್ನು ನಿಡುಗಾಲದಿಂದಲೂ ಈಡೇರಿಸುತ್ತಾ ಬಂದಿವೆ. ಮಠಗಳು ಧಾರ್ಮಿಕ ಆವರಣಗಳಾದರೂ ಸಾಂಸ್ಕೃತಿಕ ವಿಸ್ತರಣೆಯನ್ನು ಅಲ್ಲಲ್ಲಿ ಪಡೆದುಕೊಂಡಿವೆ. ಬೌದ್ಧಿಕತೆ, ಪ್ರಜಾಸತ್ತಾತ್ಮಕ ಆಶಯಗಳು ಮತ್ತು ತಾತ್ವಿಕ ಆಯಾಮಗಳನ್ನು ಸಮಾನವಾಗಿ ಪೋಷಿಸುತ್ತ ಬಂದಿರುವ ಕೆಲವೇ ಕೆಲವು ಮಠಗಳಿವೆ. ಅಂಥ ಮಠಗಳಲ್ಲಿ ಸಾಣೇಹಳ್ಳಿ ಶ್ರೀಮಠ ಬಹಳ ಮುಖ್ಯವಾದುದು.
ಚಾರಿತ್ರಿಕವಾಗಿಯೂ ಅದು ಈ ದೃಷ್ಟಿಯಿಂದ ತನ್ನ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ. ಮರುಳಸಿದ್ಧ ಪರಂಪರೆಯ ಮಠವೆಂದು ತನ್ನನ್ನು ತಾನು ಕರೆದುಕೊಂಡು, ಗುರುತಿಸಿಕೊಂಡು ತಾನು ಸಮಾಜದ ಎಲ್ಲ ಸ್ತರಗಳ ಸಹವರ್ತಿಯೆಂದು ಸಾಧಿಸಿ ತೋರಿಸಿದೆ. ಪ್ರಸಕ್ತ ಶ್ರೀ ಪಂಡಿತಾರಾಧ್ಯರ ಮಾರ್ಗದರ್ಶನದಲ್ಲಿ ಈ ಮಠವು ಪಡೆದುಕೊಳ್ಳುತ್ತಿರುವ ವಿಸ್ತರಣೆಗಳಲ್ಲಿ ನಾಟಕ, ಕಲೆ, ಸಾಹಿತ್ಯ ಮೊದಲಾದವು ಸಮಾಜದ ಎಲ್ಲ ಸ್ತರಗಳನ್ನು ಮುಟ್ಟುತ್ತಿವೆ. ಭಿನ್ನ ಮಾಧ್ಯಮಗಳ ಮೂಲಕ ಶರಣ ಚಿಂತನೆಯನ್ನು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಬೆಸೆದು ವಿಸ್ತರಿಸುತ್ತಿರುವ ಶ್ರೀಮಠದ ಕಾರ್ಯಕ್ರಮಗಳು ನಾಡಿನ ಮೆಚ್ಚುಗೆ ಗಳಿಸಿವೆ.
ರಾಷ್ಟ್ರೀಯ ನಾಟಕೋತ್ಸವವು ಈ ದೃಷ್ಟಿಯಿಂದ ಕರ್ನಾಟಕದ ಮಹತ್ವದ ಸಾಂಸ್ಕೃತಿಕ ವಿಸ್ತರಣೆಯಾಗಿದೆ. ಪ್ರಜಾಸತ್ತೆ ಪಾಲ್ಗೊಳ್ಳು ವುದು ಇಂಥ ಸಾಂಸ್ಕೃತಿಕ ಕ್ರಿಯಾಶೀಲತೆಯಿಂದ ಎಂಬುದು ಈಗ ಸಾಬೀತಾಗಿದೆ’’ ಎಂದು ಹಿರಿಯ ಲೇಖಕ ಡಾ.ನಟರಾಜ ಬೂದಾಳು ಅವರ ಈ ಮಾತು ಮಹತ್ವವಾದುದು.
27 ವರ್ಷಗಳಿಂದ ಪ್ರತೀ ವರ್ಷ ರಾಷ್ಟ್ರೀಯ ನಾಟಕೋತ್ಸವವನ್ನು ಸಾಣೇಹಳ್ಳಿಯಲ್ಲಿ ಅಲ್ಲಿನ ಮಠಾಧೀಶ ಪಂಡಿತಾರಾಧ್ಯ ಸ್ವಾಮೀಜಿ ಆಯೋಜಿಸುತ್ತಾರೆ. ಪ್ರತೀ ವರ್ಷ ಅವರು ಹಣಕಾಸಿನ ಸಮಸ್ಯೆಯನ್ನು ಎದುರಿಸಿಲ್ಲ. ಮಠದ ಭಕ್ತರೇ ತಮ್ಮ ಕೈಲಾದ ಮಟ್ಟಿಗೆ ನೆರವಾಗುತ್ತಾರೆ. ಮುಖ್ಯವಾಗಿ ಈ ಬಾರಿಯ ನಾಟಕೋತ್ಸವಕ್ಕೆ ಹೆಚ್ಚು ಜನರು ಬಂದರು. ಇದಕ್ಕೆ ನವೆಂಬರ್ 5ರಂದು 50 ಚೀಲ ಅಕ್ಕಿ ಖಾಲಿಯಾಗಿದ್ದು ಸಾಕ್ಷಿ. ಬರಗಾಲವಿದ್ದರೂ ನಾಟಕೋತ್ಸವ ಎನ್ನುವ ಸಂಭ್ರಮ ಬೇಕೆ ಎನ್ನುವ ಚರ್ಚೆಯ ನಡುವೆ ಪಂಡಿತಾರಾಧ್ಯ ಶ್ರೀಗಳು ಹೇಳಿದ್ದು- ‘‘ಬರಗಾಲದಲ್ಲೇ ನಾಟಕೋತ್ಸವ ಮಾಡಬೇಕಿರುವುದು. ನಾಡಿನ ಸಂಪತ್ತು ಎಂದರೆ ಜನಸಂಖ್ಯೆಯಲ್ಲ, ಕಟ್ಟಡಗಳಲ್ಲ, ರಸ್ತೆಗಳಲ್ಲ, ವೈಜ್ಞಾನಿಕ ಪ್ರಗತಿಯಷ್ಟೇ ಅಲ್ಲ. ಸಾಹಿತ್ಯ, ಸಂಗೀತ, ಕಲೆ, ಧರ್ಮ ಇವುಗಳ ಅರಿವನ್ನು ಜನರಿಗೆ ಮಾಡಿಕೊಟ್ಟರೆ ನಿಜವಾದ ಸಂಪತ್ತು. ಆಗ ಬಂದಂಥ ಬರಗಾಲವನ್ನೂ ಎದುರಿಸುವ ಮನೋಸ್ಥೈರ್ಯ ಬರುತ್ತದೆ. ಜಾನಪದ ಸಾಹಿತ್ಯ ಹುಟ್ಟಿದ್ದೇ ಸಂಕಷ್ಟ ಕಾಲದಲ್ಲಿ’’.
‘‘ಪ್ರತೀ ವರ್ಷ 40-50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ವರ್ಷ ಹೇಗೆ ಭರಿಸುತ್ತೀರಿ?’’ ಎಂದು ಜನರು ಕೇಳಿದಾಗ ‘‘ದುಡ್ಡು ಇಟ್ಟುಕೊಂಡು ಯಾವ ಕೆಲಸವನ್ನೂ ಮಾಡುವುದಿಲ್ಲ. ಕೆಲಸ ಮಾಡುತ್ತಾ ಹೋಗ್ತೇವೆ. ಹಣದ ಚಿಂತೆ ಇಟ್ಟುಕೊಂಡು ಯಾವ ಯೋಜನೆ ಹಾಕಿಕೊಳ್ಳುವುದಿಲ್ಲ. ಸುಕನ್ಯಾ ಎಂಬವರು 25 ಕಿಲೊ ಅಕ್ಕಿ ತಂದು ದಯವಿಟ್ಟು ಸ್ವೀಕರಿಸಿ ಎಂದರು. ಇದಕ್ಕೆ ಬೆಲೆ ಕಟ್ಟಲಾಗದು. ಹೀಗೆ ನಾಟಕೋತ್ಸವ ಯಶಸ್ಸಿನ ಹಿಂದೆ ದೊಡ್ಡ ತಂಡವೇ ದುಡಿಯುತ್ತದೆ’’ ಎಂದ ಸ್ವಾಮೀಜಿ ಮಾತು ಗಮನಾರ್ಹ. ನಾಟಕೋತ್ಸವ ಯಶಸ್ವಿಯಾಗಬೇಕೆಂದು ಅಕ್ಕಿ, ಅಡುಗೆಎಣ್ಣೆ, ತರಕಾರಿ, ಹೋಳಿಗೆ ಮೊದಲಾದ ಆಹಾರ ಸಾಮಗ್ರಿಯನ್ನು ಮಠಕ್ಕೆ ತಲುಪಿಸುತ್ತಾರೆ. ಇದು ಪ್ರತೀ ವರ್ಷ ನಡೆಯುವ ವಾಡಿಕೆ.
ಇದೆಲ್ಲ ನಾಟಕ ನೋಡಲು ಬರುವವರಿಗೆ ಪ್ರಸಾದ ವ್ಯವಸ್ಥೆಯಾಗುತ್ತದೆ ಜೊತೆಗೆ ಉಚಿತವಾಗಿ ನಾಟಕಗಳನ್ನು ತೋರಿಸಲಾಗುತ್ತದೆ. ಏಕೆಂದರೆ ಶರಣರ ತತ್ವ, ಸಂದೇಶಗಳನ್ನು ಜನರಿಗೆ ತಿಳಿಸುವುದು ಮುಖ್ಯವಾಗಿದೆ. ಇದನ್ನು ನಾಟಕಗಳ ಮೂಲ ಬಿತ್ತಲಾಗುತ್ತಿದೆ.
***
ನಾಟಕೋತ್ಸವ ಸಮಾರೋಪವಂತೂ ಅಪರೂಪದ ಕಾರ್ಯಕ್ರಮವಾಗಿತ್ತು. ಬರಗಾಲ ಮರೆಸುವ ಹಾಗೆ ನಾಲ್ಕು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿದೆ. ಅದು ಎಚ್.ಎಸ್.ಶಿವಪ್ರಕಾಶ್ ಅವರ ‘ಏಸು ಕಾವಿತ್ತವ್ವ ಮಳೆ ಬಿದ್ದ ನೆಲದಲ್ಲಿ’ ಎನ್ನುವ ಕವಿತೆ ಸಾಲಿನ ಹಾಗೆ ಬುಧವಾರ ಮಧ್ಯಾಹ್ನವೇ ಮಳೆ ಸುರಿಯಿತು. ಹೀಗೆ ಮಳೆ ಸುರಿದು ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭಕ್ಕೆ ಹಾಗೂ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನುಡಿಯಾಯಿತು. ಇದರಿಂದ ಶಿವಕುಮಾರ ಬಯಲುರಂಗ ಮಂದಿರದಲ್ಲಿ ನಡೆಯಬೇಕಿದ್ದ ಸಮಾರಂಭವು ಎಸ್.ಎಸ್.ಒಳಾಂಗಣ ರಂಗಮಂದಿರದಲ್ಲಿ ನಡೆಯಿತು. ಈ ಬಾರಿಯ ಶ್ರೀ ಶಿವಕುಮಾರ ಪ್ರಶಸ್ತಿಯನ್ನು ಕಲಾನಿರ್ದೇಶಕ ಶಶಿಧರ ಅಡಪ ಅವರಿಗೆ ಪ್ರದಾನ ಮಾಡಲಾಯಿತು. ಅದು 50 ಸಾವಿರ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿತ್ತು.
ಸಾಣೇಹಳ್ಳಿಯ ನಾಟಕಗಳಿಗೆ ರಂಗಸಜ್ಜಿಕೆ ಸಿದ್ಧಪಡಿಸಿಕೊಟ್ಟ ಶಶಿಧರ ಅಡಪ ಅವರ ಹಾಗೂ ಸಾಣೇಹಳ್ಳಿಯ ಸಂಬಂಧ ರಂಗಕರ್ಮಿ ಸಿಜಿಕೆ ಅವರಿಂದ. ಪಂಡಿತಾರಾಧ್ಯ ಸ್ವಾಮೀಜಿ ಅವರನ್ನು ಸಾಣೇಹಳ್ಳಿಯಲ್ಲಿ ಭೇಟಿಯಾದ ನಂತರ ರಂಗಭೂಮಿ ಕಟ್ಟಲು ಒಳ್ಳೆಯ ಜಾಗವೆಂದು ಸ್ವಾಮೀಜಿ ಅವರಿಗೆ ಕನಸು ಬಿತ್ತಿದ ಪರಿಣಾಮ ಈಗ ನಾಡಿನ ಪ್ರಮುಖವಾದ ಶ್ರೀ ಶಿವಕುಮಾರ ರಂಗ ಪ್ರಯೋಗಶಾಲೆಯಾಗಿದೆ ಮತ್ತು ‘ಶಿವಸಂಚಾರ’ವೆಂಬ ತಿರುಗಾಟ ಪ್ರಸಿದ್ಧವಾಗಿದೆ. ಪ್ರತೀ ವರ್ಷ ತಿರುಗಾಟದ ಮೂಲಕ ನಾಡಿನಾದ್ಯಂತ ಸಂಚರಿಸುತ್ತಿದೆ.
ಮುಖ್ಯವಾಗಿ ನಾಟಕೋತ್ಸವ ಎನ್ನುವುದೊಂದು ನೆಪ. ಈ ನೆಪದಲ್ಲಿ ನಾಟಕಗಳಾಗುತ್ತವೆ. ವಿಚಾರ ಸಂಕಿರಣ, ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ನಾಡಿನ ರಂಗಕರ್ಮಿಗಳು, ತಜ್ಞರು ಭಾಗವಹಿಸಿ ಒಡನಾಡುವುದರಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೆರವು ಸಿಗುತ್ತಿದೆ. ಅದು ಆರ್ಥಿಕ ನೆರವಲ್ಲ; ಸಂಸ್ಕಾರ. ವಿದ್ಯಾರ್ಥಿಗಳೆಂದರೆ ಮಠದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆಗೆ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಗೂ ಲಾಭವಾಗುತ್ತಿದೆ. ಇಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ನಾಟಕೋತ್ಸವದ ನೆಪದಲ್ಲಿ ಇಲ್ಲಿ ಬಂದು ಸೇರುತ್ತಾರೆ. ಹೀಗಾಗಿ ಇದು ಜಾತ್ರೆ, ಊರಿನ ಹಬ್ಬವಾಗಿದೆ. ಅದು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾದ ಹಬ್ಬ. ಕೇವಲ ಉಂಡುಟ್ಟು ಓಡಾಡಿಕೊಂಡಿರುವ ಹಬ್ಬವಲ್ಲ. ಹೊಟ್ಟೆಯನ್ನೂ ನೆತ್ತಿಯನ್ನೂ ತುಂಬಿಸುವ ಹಬ್ಬವಾಗಿದೆ. ‘‘ನಾಟಕೋತ್ಸವ ನೆಪ ಮಾತ್ರ. ಧ್ಯಾನ, ಮೌನ, ಪ್ರಾರ್ಥನೆ, ಚಿಂತನೆ ನಡೆಯುತ್ತವೆ. ಸಮಕಾಲೀನ ವಿದ್ಯಮಾನಗಳ ಕುರಿತ ಚರ್ಚೆ, ಸಂವಾದ, ಉಪನ್ಯಾಸ ಏರ್ಪಡುತ್ತದೆ. ಎಲ್ಲ ಬಗೆಯ ಪ್ರೇಕ್ಷಕರು ಇಲ್ಲಿಗೆ ಬರುತ್ತಾರೆ. ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಪ್ರೇಕ್ಷಕರು ಬರುತ್ತಾರೆ’’ ಎನ್ನುವ ಅನುಭವ ಸಾಣೇಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಬಿ.ಎಸ್.ಶಿವಕುಮಾರ್ ಅವರ ಅನುಭವ.
***
ಈ ಹಬ್ಬದಲ್ಲಿ ಹಾಡಲೆಂದೇ ಬೆಂಗಳೂರಿನಲ್ಲಿ ಸಂಗೀತ ಶಿಕ್ಷಕರಾಗಿರುವ ಸಿದ್ಧರಾಮ ಕೇಸಾಪುರ ಪ್ರತೀ ವರ್ಷ ಬರುತ್ತಾರೆ. ಅವರು 2001ರಲ್ಲಿ ಡಿಸೆಂಬರ್ 31ರಂದು ವರ್ಷದ ಹರ್ಷ ಕಾರ್ಯಕ್ರಮ ನೋಡಲು ಬಂದಾಗ ವಚನ ಹಾಡಿದರು. ‘‘ಮರುದಿನ ಗುರುಗಳಾದ ಪಂಡಿತಾರಾಧ್ಯ ಶ್ರೀಗಳು ಶಿವಸಂಚಾರಕ್ಕೆ ಹಾಡಲು ಬಾ ಎಂದು ಕರೆದರು. 2002ರ ಶಿವಸಂಚಾರ ತಿರುಗಾಟದ ನಾಟಕಗಳಿಗೆ ಸುತ್ತಾಡಿ ಹಾಡಿದೆ. ಸಿಜಿಕೆ ಅವರು ತತ್ವಪದವಾದ ‘ಬಿದಿರು ನಾನಾರಿಗಲ್ಲದವಳು’ ಹಾಡಿದಾಗ ಸಂಗೀತ ನಿರ್ದೇಶಕ ನೀನೇ ಎಂದರು. ಅವರ ನಿರ್ದೇಶನದ ‘ಸೋರುತಿಹುದು ಮನೆಯ ಮಾಳಿಗೆ’ ನಾಟಕಕ್ಕೆ ಸಂಗೀತ ನೀಡಿದೆ. ಅಲ್ಲಿಂದ ದಾಕ್ಷಾಯಿಣಿ, ಜ್ಯೋತಿ ಹಾಗೂ ನಾನು ತಿರುಗಾಟವಾಡಿ ಸಂಗೀತ ನೀಡಿದೆವು. ‘ಸೋರುತಿಹುದು ಮನೆಯ ಮಾಳಿಗೆ’ ನಾಟಕವು 190ಕ್ಕೂ ಅಧಿಕ ಪ್ರದರ್ಶನ ಕಂಡಿತು. ಅದು ದಾಖಲೆ. ತಿರುಗಾಟದ ಜೊತೆಗೆ ವಚನ ಗಾಯನ ಕಾರ್ಯಕ್ರಮ ನೀಡಲು ಶುರು ಮಾಡಿದೆವು. 2002ರಿಂದ 2010ರ ವರೆಗೆ ಇದ್ದೆ. ‘ಜಂಗಮದೆಡೆಗೆ’, ‘ಕಾಲಜ್ಞಾನಿ ಕನಕ’ ನಾಟಕಗಳ ಹಾಡುಗಳನ್ನು ಕ್ಯಾಸೆಟ್ಗಳಿಗೆ ಹಾಡಿದೆ. ಸಾಣೇಹಳ್ಳಿಯಿಂದ ಸಿನೆಮಾಗಳಲ್ಲಿ ಹಾಡಿದೆ, ನಟಿಸಿದೆ. ಬಾಳಸಂಗಾತಿ ಶ್ರುತಿ ಸಿಕ್ಕಳು. ಬೆಂಗಳೂರಿನ ಮಲ್ಲಸಂದ್ರದ ಸರಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿರುವೆ. ಪ್ರತೀ ವರ್ಷ ನಾಟಕೋತ್ಸವಕ್ಕೆ ಬಂದು ಹಾಡುವೆ’’ ಎನ್ನುವ ಅನುಭವ ಅವರದು.
ಹೀಗೆಯೇ ಅವರೊಂದಿಗೆ ಹಾಡುವ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಊರಿನವರಾದ ಜ್ಯೋತಿ ಕೆ. ಅವರು ಶಿವಸಂಚಾರ ನಾಟಕಗಳಿಗೆ ವಚನಗಳನ್ನು ಹಾಡಲು ಬಂದವರು. ‘‘ಅಶೋಕ ಬಾದರದಿನ್ನಿ ಅವರು ಸಾಣೇಹಳ್ಳಿಗೆ ಕರೆದುಕೊಂಡು ಬಂದರು. ನನ್ನ ತಂಗಿ ದಾಕ್ಷಾಯಿಣಿಯೊಂದಿಗೆ ಬಂದೆ. ನಮಗೆ ಬಿದನೂರ ಸೋದರಿಯರು ಎನ್ನುತ್ತಾರೆ. ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ ಈಗ ಸಂಗೀತ ಶಿಕ್ಷಕಿ. ಹೊಸದುರ್ಗ ತಾಲೂಕಿನ ನಾಗೇನಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಾಕ್ಷಾಯಿಣಿ ಸಂಗೀತ ಶಿಕ್ಷಿಕಿ. ನಾಟಕದಲ್ಲಿ ಅಭಿನಯಿಸಿ, ಹಾಡುಗಳನ್ನು ಹಾಡುತ್ತಿದ್ದೆವು. ಆಮೇಲೆ ಮಠದ ವತಿಯಿಂದ ವಚನ ಸಂಗೀತ ತಂಡದ ಮೂಲಕ ವಚನಗಳನ್ನು ಹಾಡಲು ಹೋದೆವು. 2012ರಲ್ಲಿ ಸಂಗೀತ ಶಿಕ್ಷಕರಾಗಿ ನೇಮಕವಾಗಲು ಸಾಣೇಹಳ್ಳಿಯಿಂದ ಸಾಧ್ಯವಾಯಿತು’’ ಎನ್ನುವ ಹೆಮ್ಮೆ ಅವರದು.
ಶಿವಸಂಚಾರ ಆರಂಭದ ಕಲಾವಿದರಾದ ದಾವಣಗೆರೆಯ ರಾಜು ಬಿ.ಲಕ್ಕಮುತ್ತೇನಹಳ್ಳಿಯವರು. ಅವರು ಇಲ್ಲಿಯೇ ನೆಲೆಸಿ ಶಿವಸಂಚಾರದ ವ್ಯವಸ್ಥಾಪಕರಾಗಿದ್ದಾರೆ. ಮೊದಲು ಕಲಾವಿದರಾಗಿ, ನಂತರ ತಂತ್ರಜ್ಞರಾಗಿ 2002ರಿಂದ ಶಿವಸಂಚಾರದ ಸಂಚಾಲಕರಾಗಿ ದುಡಿಯತ್ತಿದ್ದಾರೆ. ‘‘ಮರೆಯಲಾಗದ ಘಟನೆ ಹೇಳುವೆ; ಉತ್ತರ ಕನ್ನಡ ಜಿಲ್ಲೆಯ ಕೈಗಾಕ್ಕೆ ಶಿವಸಂಚಾರದ ನಾಟಕಗಳನ್ನು ಒಯ್ದಿದ್ದೆವು. ನಾಟಕದ ಮಾರನೆಯ ದಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗುವುದು ಅಭ್ಯಾಸ. ಹಾಗೆ ಕಾಳಿ ನದಿಗೆ ಹೋಗಿದ್ದೆವು. ನದಿಯೊಳಗೆ ದೊಡ್ಡ ದೊಡ್ಡ ಮರದ ದಿಮ್ಮಿಗಳಿದ್ದವು. ಹಾಗೆ ದಿಮ್ಮಿ ಮೇಲೆ ಕುಳಿತು ಫೋಟೊ ತೆಗೆಸಿಕೊಳ್ಳುವಾಗ ಕೈಗಾ ವಿದ್ಯುತ್ ಸ್ಥಾವರದಿಂದ ನೀರು ಬಿಟ್ಟರು. ಆಗ ಪಾದ ಮುಳುಗಿದವು, ಕಾಲು ಮುಳುಗಿದವು. ಕೊನೆಗೆ 15 ಅಡಿ ನೀರು ಬಂತು. ಆ ನೀರಲ್ಲಿ ಈಜಲಾಗುವುದಿಲ್ಲ. ಸಂಜೆ ಆರೂವರೆಗೆ ನಾಟಕವಿತ್ತು. ನನ್ನ ಜೊತೆ ಹನ್ನೊಂದು ಕಲಾವಿದರಿದ್ದರು. ನಮ್ಮ ಕಲಾವಿದರು ಆತಂಕಗೊಂಡು ನಮ್ಮ ಜೀವನ ಮುಗೀತು ಎಂದರು. ಆಗ ಕೈಗಾದಲ್ಲಿ ಅಧಿಕಾರಿಯಾಗಿದ್ದವರು ಚಿಂತಕ ದೇವನೂರ ಶಂಕರ್. ಅವರನ್ನು ಸಂಪರ್ಕಿಸಿದಾಗ ವಿದ್ಯುತ್ ಉತ್ಪಾದನೆ ನಿಲ್ಲಿಸಿ, ನೀರು ಕಮ್ಮಿಯಾಗುವವರೆಗೆ ಕಾದು ಹೊರಗೆ ಬಂದೆವು. ಈ ಸಂಬಂಧ ಫಲಕ ಇರಲಿಲ್ಲವೆಂದು ತಿಳಿಸಿದಾಗ ಮರುದಿನವೇ ಫಲಕ ಹಾಕಿಸಿದರು.’’
ಇಂಥ ಹತ್ತಾರು ಅನುಭವಗಳು ಅವರವು. ಹೀಗೆಯೇ ಅಲ್ಲಿಂದ ಹೊರಬಂದ ಕಲಾವಿದರು, ತಂತ್ರಜ್ಞರು ಈಗ ರಂಗಭೂಮಿಯಲ್ಲದೆ ಟಿವಿ ಧಾರಾವಾಹಿ, ಸಿನೆಮಾಗಳಲ್ಲಿ ಬದುಕು ಕಟ್ಟಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶಿವಕುಮಾರ್ ಅವರು ದಾವಣಗೆರೆಯಲ್ಲಿ ಹೋಟೆಲಲ್ಲಿದ್ದರು. ಅವರನ್ನು ಗುರುತಿಸಿ ಸಾಣೇಹಳ್ಳಿಗೆ ಕಳಿಸಿದವರು ಹಿರಿಯ ಲೇಖಕ, ರಂಗಕರ್ಮಿ ಡಾ.ಎಂ.ಜಿ.ಈಶ್ವರಪ್ಪ.
ಹೀಗೆ ಸಾಣೇಹಳ್ಳಿಯೆಂಬ ಪುಟ್ಟ ಗ್ರಾಮವು ಈಗ ರಂಗಗ್ರಾಮವಾಗಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅದು ರಂಗಭೂಮಿಯಿಂದ ಎಂಬುದು ಮುಖ್ಯ.