ಹಿರಿಯರಿಂದ ಹಿರಿಯರಿಗಾಗಿ ‘ಶಾಂತಿ ಕುಟೀರ’
ಕಳೆದ ಶುಕ್ರವಾರ ಸಂಜೆ ಮೈಸೂರಿನ ಕಲಾಮಂದಿರ ಪಕ್ಕದ ಕಿರು ರಂಗಮಂದಿರ ಕಿಕ್ಕಿರಿದಿತ್ತು. ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ತಂಡದ ಹೊಸ ನಾಟಕ ‘ಅಯಾನ್ ಶಾಂತಿ ಕುಟೀರ’ ನೋಡುವ ಸಲುವಾಗಿ ಪ್ರೇಕ್ಷಕರಿಂದ ಕಿರು ರಂಗಮಂದಿರ ಭರ್ತಿಯಾಗಿತ್ತು. ಇದು ಹಿರಿಯರಿಂದ ಹಿರಿಯರಿಗಾಗಿ ಆಡಿದ ನಾಟಕವಾಗಿತ್ತು. 89 ವರ್ಷ ವಯಸ್ಸಿನ ನ.ರತ್ನ ಅವರು ಈ ನಾಟಕ ಬರೆದು, ಶ್ರೀನಾಥ್ ಎಂಬ ಪಾತ್ರವನ್ನೂ ನಿರ್ವಹಿಸಿದರು. 88 ವರ್ಷ ವಯಸ್ಸಿನ ರಾಮೇಶ್ವರಿ ವರ್ಮಾ, 85 ವರ್ಷ ವಯಸ್ಸಿನ ಶ್ರೀಮತಿ ಹರಿಪ್ರಸಾದ್, 76 ವರ್ಷ ವಯಸ್ಸಿನ ರಾಜಶೇಖರ ಕದಂಬ, 70 ದಾಟಿರುವ ಚ.ಸರ್ವಮಂಗಳ... ಹೀಗೆ ಅರವತ್ತು ದಾಟಿದವರೇ ಹೆಚ್ಚಿದ್ದರು. ಕಡಿಮೆ ವಯಸ್ಸಿನ ಪಾತ್ರಗಳು ಕಮ್ಮಿಯೇ.
ನಗರದಲ್ಲಿರುವ ಹಿರಿಯರ ಸಮಸ್ಯೆಗಳು, ಸಂಕಟಗಳು, ಸವಾಲುಗಳ ಕುರಿತ ಈ ನಾಟಕ ಒಂದು ಗಂಟೆ ಇಪ್ಪತ್ತು ನಿಮಿಷದಾಗಿತ್ತು. ದ್ವಾರಕಾನಾಥ್, ಜಯಶ್ರೀ ಹೆಗಡೆಯವರ ಧ್ವನಿ ಹೊರತುಪಡಿಸಿದರೆ ಉಳಿದವರ ಧ್ವನಿ ಸಣ್ಣ. ಹೀಗಾಗಿ ಭರ್ತಿಯಾದ ರಂಗಮಂದಿರದಲ್ಲಿ ಸಂಭಾಷಣೆ ಸರಿಯಾಗಿ ಕೇಳುತ್ತಿರಲಿಲ್ಲ. ಅದರಲ್ಲೂ ಇವರೆಲ್ಲ ಮೈಕುಗಳಿಗೆ ದೂರವಾಗಿ ಮಾತನಾಡಿದ ಪರಿಣಾಮವೂ ಕಾರಣ. ಈ ಎಲ್ಲ ಹಿರಿಯರನ್ನು ಒಟ್ಟುಗೂಡಿಸಿ ನಾಟಕವಾಡಿಸಿದ ಎಚ್.ಎಸ್.ಉಮೇಶ್ ಅವರನ್ನು ಅಭಿನಂದಿಸುವೆ. ಹಾಗೆಯೇ ಹಿರಿಯರು ನಾಟಕವಾಡಿದ್ದು ಅಭಿನಂದನಾರ್ಹ. ಅವರ ಪ್ರಯತ್ನ ದೊಡ್ಡದು. ಆದರೆ ಯಶ ಕಂಡಿದ್ದು ಕಡಿಮೆ. ಹೇಗೆಂದರೆ ಎದುರು ಪಾತ್ರಧಾರಿಯ ಮಾತುಗಳು ಮುಗಿಯುವ ಮೊದಲೇ ರಾಮೇಶ್ವರಿ ವರ್ಮಾ ಮಾತನಾಡುತ್ತಿದ್ದರು. ಹೀಗೆಯೇ ಉಳಿದ ಪಾತ್ರಗಳಿಗೂ ಅನ್ವಯಿಸಬಹುದು. ಮೊದಲ ಪ್ರಯೋಗವಾಗಿದ್ದಕ್ಕೋ ಏನೋ? ನಾಟಕದ ಬಂಧ ಇನ್ನಷ್ಟು ಬಿಗಿಯಾಗಿರಬೇಕಿತ್ತು ಜೊತೆಗೆ ಫೈನ್ ಟ್ಯೂನ್ ಬೇಕಿತ್ತು.
ಅಮೆರಿಕದಲ್ಲಿರುವ ಮಕ್ಕಳ ಹತ್ತಿರ ಹೋದರೂ ಮನೆಯಲ್ಲಿಯೇ ಕೊಳೆಯುವ ಪರಿಸ್ಥಿತಿಯ ಲಕ್ಷ್ಮಮ್ಮ, ‘‘ಎಲ್ಲೂ ಹೋಗೋ ಹಾಗಿಲ್ಲ. ಜೊತೆಯಲ್ಲಿ ಯಾರೂ ಇಲ್ಲದೆ ಎಲ್ಲೂ ಹೋಗಬೇಡಿ ಅಂತ ಮಕ್ಕಳ ನಿರ್ಬಂಧ. ನಾವು ಅಲ್ಲಿ ಸೆರೆಯಾಳುಗಳು, ಒಂಟಿ ಸೆರೆಯಾಳುಗಳು’’ ಎನ್ನುವ ಮೂಲಕ ವಿದೇಶದಲ್ಲಿರುವ ತಮ್ಮ ಸ್ಥಿತಿ ಕುರಿತು ಹೇಳುತ್ತಾರೆ. ಹೀಗೆಯೇ ಮುಕುಂದನ್ ಪಾತ್ರಧಾರಿಯ ಅವಸ್ಥೆ. ‘‘ಒಬ್ಬನೇ ಹೋಗಕೂಡದು, ಅಪಾಯ ಅಂತ ಮಕ್ಕಳ ಎಚ್ಚರಿಕೆ. ತಪ್ಪಿಸಿಕೊಂಡು ಬಿಟ್ಟರೆ ಅನ್ನೋ ಭಯ. ಹೀಗಾಗಿ ಒಂಟಿತನದ ನರಕಕ್ಕಿಂತ ಇಲ್ಲಿ ನಿಮ್ಮೆಲ್ಲರ ಜೊತೆ ಪ್ರೀತಿಯಿಂದ ಬದುಕುವುದೇ ಸಂತೋಷ’’ ಎನ್ನುವ ಮಾತು ಗಮನಾರ್ಹ.
ಆದರೆ ನವೀನ ಹಾಗೂ ಅವರ ಗಂಡ ಕುಟೀರಕ್ಕೆ ಹತ್ತಿರವಿರುವ ಊರಲ್ಲಿ ಮನೆ ಕಟ್ಟಿಸಿದ್ದರೂ ಅವರ ಮಗ ತನ್ನ ಹೆಸರಿಗೆ ಮನೆ ಮಾಡಿಸಿಕೊಂಡು, ಅವರನ್ನು ಕುಟೀರಕ್ಕೆ ಸೇರಿಸಿದ್ದಾನೆ. ಕುಟೀರ ಎಂದರೆ ವೃದ್ಧಾಶ್ರಮ. ಆದರೆ ವೃದ್ಧಾಶ್ರಮ ಎನ್ನಬೇಡಿ ಎನ್ನುವುದು ಕುಟೀರ ನೋಡಿಕೊಳ್ಳುವ ನಸೀರ್ ಅವರ ಮಾತು. ಅವರ ತಾತ ಸುಲೇಮಾನ್ ಅವರ ಆತ್ಮಕ್ಕೆ, ಮನಸ್ಸಿಗೆ ಬಹಳ ಬೇಸರ ಆಗುತ್ತೆ ಎನ್ನುವ ಅಭಿಪ್ರಾಯ ಅವರದು. ಇದಕ್ಕಾಗಿ ‘ಅಯಾನ್ ಶಾಂತಿ ಕುಟೀರ’ ಎನ್ನುವ ಹೆಸರಿಟ್ಟಿದ್ದಾರೆ. ಅಯಾನ್ ಅಂದರೆ ದೇವರ ಪ್ರಸಾದ ಎಂದರ್ಥ. ಸುಲೇಮಾನ್ ಅವರು ಮಾಧವಾಚಾರ್ಯ ಅವರ ಮನೆಯಲ್ಲಿದ್ದು ಶಾಲೆ ಕಲಿತಿರುವುದನ್ನು ನಸೀರ್ ನೆನಪಿಸಿಕೊಳ್ಳುತ್ತಾರೆ.
ಮುಂದಿನ ದೃಶ್ಯದಲ್ಲಿ ಮಾಧವಾಚಾರ್ಯ ಹಾಗೂ ಅವರ ಹೆಂಡತಿ ರೈಲು ನಿಲ್ದಾಣದಲ್ಲಿ ಮುಂಬೈ ಮೂಲಕ ಅಮೆರಿಕಕ್ಕೆ ಕರೆದುಕೊಂಡು ಹೋಗುತ್ತೇನೆಂದ ಮಗನ ಕಾಯುತ್ತ ಕುಳಿತಿರುವುದನ್ನು ಕಾಣುವ ಸಹಪ್ರಯಾಣಿಕ ವಿಚಾರಿಸುವುದು, ಅಷ್ಟರಲ್ಲಿ ಸುಲೇಮಾನ್ ಗಮನಿಸಿ ಮಾಧವಾಚಾರ್ಯರನ್ನು ಗುರುತಿಸಿ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಹೆತ್ತ ಮಗನೇ ಮಾಧವಾಚಾರ್ಯರನ್ನು ಅಮೆರಿಕಕ್ಕೆ ಕರೆದೊಯ್ಯದೆ ಮೋಸ ಮಾಡಿದಾಗ, ಅವರ ಮನೆಯಲ್ಲಿದ್ದು ಓದಿದ ಸುಲೇಮಾನ್ ತಮ್ಮ ಮನೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಜೊತೆಗೆ ಗುರುವಿನ ಋಣ ತೀರಿಸುತ್ತಾರೆ. ನಂತರ ತನ್ನ ಮಕ್ಕಳ ನಡೆಯಿಂದ ಬೇಸತ್ತ ಮಾಧವಾಚಾರ್ಯರು ತೀರಿಕೊಳ್ಳುತ್ತಾರೆ. ಅವರ ಹೆಂಡತಿಗೆ ಹಾಗೂ ಅವರಂಥ ಹಿರಿಯರಿಗೆ ಅನುಕೂಲವಾಗಲೆಂದು ಕುಟೀರ ಕಟ್ಟಿಸುತ್ತಾರೆ ಸುಲೇಮಾನ್. ಹೀಗೆಯೇ ಮುಂದಿನ ದೃಶ್ಯಗಳು ಹಿರಿಯರ ಅಸಹಾಯಕತೆ, ಒಂಟಿತನ ಅನಾವರಣಗೊಳಿಸುತ್ತವೆ. ಇಷ್ಟರ ನಡುವೆ ತರಕಾರಿ ತಂದು ಮಾರುವ ಕಾಳಮ್ಮನೂ ಒಂಟಿ. ಇದಕ್ಕಾಗಿ ‘‘ಆಶ್ರಮ ಸೇರಬಹುದಲ್ಲ?’’ ಎಂದು ಲಕ್ಷ್ಮಮ್ಮ ಕೇಳಿದಾಗ ‘‘ನಮಗೆಲ್ಲಾ ಎಟುಕೊಲ್ಲ. ನಮ್ಮ ಹಳ್ಳಿನೇ ನಮಗೆ ಆಶ್ರಮ. ಅಲ್ಲಿ ಒಬ್ಬರಿಗೆ ಒಬ್ಬರು ಆಗಿ ಬರ್ತಾರೆ’’ ಎನ್ನುವ ಮಾತು ಮಾರ್ಮಿಕ. ನಂತರದ ದೃಶ್ಯದಲ್ಲಿ ಕೃಷ್ಣನಿಗೂ ಕ್ರಿಸ್ತನಿಗೂ ಸಾಮ್ಯತೆ ಇರುವ ಕುರಿತ ಮಾತಿನ ನಡುವೆಯೇ ನವೀನ ‘‘ಮಗ ಶೇಖರ್ ಬಂದು ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಸಂತೋಷವಾಗಿ ಇರಬಹುದು. ಕೊನೆಗೆ ನನ್ನ ಮನೆಯಲ್ಲಿ ಕೊನೆ ಉಸಿರು ಎಳೆಯಬಹುದು’’ ಎಂದು ಹಂಬಲಿಸುತ್ತಾರೆ. ಹೀಗೆಂದಾಗ ಗೇಟಿನ ಸದ್ದಾಗಿ ಅವಸರದಲ್ಲಿ ನವೀನ ಅವರು ಹೋದಾಗ ಬೀದಿನಾಯಿ ಕಂಡು, ಅದನ್ನೇ ಸ್ವಲ್ಪ ಹೊತ್ತು ಮಾತಾಡಿಸಿ ಬರುತ್ತಾರೆ. ಆದರೂ ಮಗನು ಬರುತ್ತಾನೆಂದು ಎಲ್ಲರಿಗೂ ಹೇಳಿ ಸಂಭ್ರಮಿಸುತ್ತಾರೆ. ಈ ನಡುವೆ ತನ್ನ ಮಗ ಶೇಖರನ ಮಗ ಅಮೆರಿಕದಲ್ಲಿದ್ದು ಆಫ್ರಿಕನ್ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ನಂತರ ಅಪ್ಪ-ಮಗನ ನಡುವೆ ಜಗಳವಾಗಿ ಸಂಬಂಧ ಕಡಿದುಹೋಗಿದ್ದನ್ನು ನವೀನ ಸ್ಮರಿಸುತ್ತಾರೆ. ಕೊನೆಗೆ ತಮ್ಮ ಜನ್ಮದಿನದಂದು ಮಗನು ಬರುತ್ತಾನೆಂದು ಕಾಯುತ್ತಾರೆ. ಆದರೆ ಆಸ್ಟ್ರೇಲಿಯಕ್ಕೆ ವಿಹಾರಾರ್ಥವಾಗಿ ಹೋಗುವ ಸಲುವಾಗಿ ವೀಸಾಕ್ಕಾಗಿ ಹೋಗುವ ಅನಿವಾರ್ಯತೆಗೆ ಬರಲಾಗದೆಂದು ಪತ್ರ ಕಳಿಸುತ್ತಾನೆ ಶೇಖರ್. ಕೊನೆಗೆ ನವೀನ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಬದುಕಿಗೆ ಅಂತ್ಯ ಹಾಡುತ್ತಾರೆ. ಆಗಲೂ ಅಂತ್ಯಕ್ರಿಯೆಯನ್ನು ಕುಟೀರದವರೇ ನಿರ್ವಹಿಸಿ, ಖರ್ಚು ಕೊಡುವೆ, ತಾನು ಆಸ್ಟ್ರೇಲಿಯಕ್ಕೆ ಹೋಗುವ ತಯಾರಿಯಲ್ಲಿದ್ದೇನೆಂದು ಶೇಖರ್ ಫೋನ್ ಮಾಡಿ ಹೇಳಿದಾಗ ಮುಕುಂದನ್ ಸಿಟ್ಟಿಗೇಳುತ್ತಾರೆ. ಆಮೇಲೆ ನವೀನ ಅವರ ಸಾವಿನ ಕುರಿತು ತಿಳಿದ ಮೀಡಿಯಾದವನೊಬ್ಬ ಹತ್ತು ಲಕ್ಷ ರೂ. ಬೇಡಿಕೆ ಇಡುವುದು, ಈ ಬಗ್ಗೆ ತಿಳಿದ ಸಿ.ಟಿ. ಎಂಬ ಸಚಿವರು ಸಮಾಧಾನಪಡಿಸುತ್ತಾರೆ. ಈ ನಡುವೆ ಶಂಕ್ರಪ್ಪ ಎಂಬ ಪಾತ್ರಧಾರಿಯನ್ನು ಗುರಪ್ಪ ಎಂದು ಹುಡುಕಿಕೊಂಡು ಬರುವ ಇನ್‌ಸ್ಪೆಕ್ಟರ್, ಠಾಣೆಗೆ ಕರೆದೊಯ್ಯುತ್ತಾರೆ. ನಂತರ ಶಂಕ್ರಪ್ಪ ನಿರಪರಾಧಿಯೆಂದು ಸಾಬೀತಾಗುವ ಮೂಲಕ ನಾಟಕ ಕೊನೆಗೊಳ್ಳುತ್ತದೆ.
ಇಂಥ ನಾಟಕೀಯ ಅಂಶಗಳಿದ್ದರೂ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.