ಶರಣತ್ವ ಸಾರುವ ‘ಶಿವಸಂಚಾರ’ ನಾಟಕಗಳು
ಈವರ್ಷದ ಸಾಣೇಹಳ್ಳಿಯ ಶಿವಸಂಚಾರ ತಂಡ ಮೂರು ನಾಟಕಗಳೊಂದಿಗೆ ತಿರುಗಾಟಕ್ಕೆ ಸಜ್ಜಾಗಿದೆ. ಇದಕ್ಕೆ ಮುಂಚಿತವಾಗಿ ನವೆಂಬರ್ 2ರಿಂದ 8ರ ವರೆಗೆ ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಈ ಮೂರೂ ನಾಟಕಗಳು ಪ್ರದರ್ಶನ ಕಂಡು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿವೆ.
ಕಳೆದ 26 ವರ್ಷಗಳಿಂದ ನಿರಂತರವಾಗಿ ಶಿವಸಂಚಾರ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ತಿರುಗಾಟದ ಮೂಲಕ ನಾಟಕಗಳು ಪದರ್ಶನಗೊಳ್ಳುತ್ತಿವೆ. ಇದರ ಶಕ್ತಿ, ಪ್ರೇರಣೆಯಾಗಿರುವವರು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ‘ಶಿವಸಂಚಾರ ಮೈದಾಳಿದ್ದೇ ರಂಗಭೂಮಿಯ ಮೂಲಕ ಜನರನ್ನು ಜಾಗೃತಿಗೊಳಿಸಲು, ಅರಿವನ್ನು ವಿಸ್ತರಿಸಲು’ ಎನ್ನುವ ಅವರ ಮಾತು ನಿಜ. ಹಾಗೆಯೇ ಶರಣರ ತತ್ವಗಳನ್ನು ನಾಟಕಗಳ ಮೂಲಕ ಪ್ರಸಾರಗೊಳಿಸುತ್ತಿರುವ ಅವರ ಕಾಯಕ ನಿರಂತರ. ಇದು ಅವರ ಗುರುಗಳಾಗಿದ್ದ ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಕಲಿತುದು. ಜನರಿಗೆ ಅರಿವು ಮೂಡಿಸಲು ರಂಗಭೂಮಿ ಸುವರ್ಣ ಮಾಧ್ಯಮ ಎಂದು ಅರಿತಿದ್ದ ಶಿವಕುಮಾರ ಸ್ವಾಮೀಜಿ ಅವರು 1950ರಲ್ಲಿ ‘ತರಳಬಾಳು ಕಲಾಸಂಘ’ ಕಟ್ಟಿ, ತಾವೇ ನಾಟಕಗಳನ್ನು ರಚಿಸಿ, ಆಡಿಸಿದ್ದರ ತಳಹದಿಯ ಮೇಲೆ ಪಂಡಿತಾರಾಧ್ಯ ಸ್ವಾಮೀಜಿ ಅವರು ಕಟ್ಟಿದ ಶಿವಕುಮಾರ ಕಲಾಸಂಘ, ಶಿವಸಂಚಾರ ಬೃಹದಾಕಾರವಾಗಿ ಬೆಳೆದಿವೆ.
ಶರಣರ ತತ್ವಗಳನ್ನು ಪ್ರಸಾರಗೊಳಿಸಲು ಅವರು ಉಪನ್ಯಾಸ, ವಿಚಾರ ಸಂಕಿರಣಗಳ ಜೊತೆಗೆ ತಾವೇ ಆಶೀರ್ವಾದದ ಮೂಲಕ ಲಾಗಾಯ್ತಿನಿಂದಲೂ ಶ್ರಮಿಸುತ್ತಿದ್ದಾರೆ. ಇದರೊಂದಿಗೆ ನಾಟಕಗಳನ್ನೂ ಪ್ರದರ್ಶಿಸುತ್ತಿದ್ದಾರೆ. ಇವುಗಳ ಮೂಲಕ ಹೆಚ್ಚು ಜನರನ್ನು ತಲುಪಲು ಸಾಧ್ಯ ಎನ್ನುವುದನ್ನು ಅವರು ಅರಿತಿದ್ದಾರೆ. ಇದೆಲ್ಲ ಯಾಕಾಗಿ ಕೈಗೊಂಡಿದ್ದಾರೆ ಎಂದರೆ ಅವರು ಹೇಳುವುದು ಹೀಗೆ- ‘‘ವಿಜ್ಞಾನ, ತಂತ್ರಜ್ಞಾನದ ಬಳಕೆಯಿಂದ ಮಾನವ ಶರಣತ್ವದತ್ತ ಸಾಗಬೇಕಿತ್ತು. ಶರಣತ್ವ ಎಂದರೆ ಅಂತರಂಗ, ಬಹಿರಂಗ ಶುದ್ಧಿಯ ಜೊತೆಗೆ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದು. ಇಂದಿನ ಪರಿಸ್ಥಿತಿ ಹಾಗಿಲ್ಲ. ಶರಣತ್ವದಿಂದ ಬಹುದೂರ ಸರಿದು ಸ್ವೇಚ್ಛೆಯಿಂದ ವರ್ತಿಸುವ ಜನರೇ ಹೆಚ್ಚಾಗಿದ್ದಾರೆ. ವ್ಯಕ್ತಿಗೌರವ ಮತ್ತು ಮನುಷ್ಯತ್ವ ಮರೆಯಾಗಿ ಅಹಂಕಾರ, ಕಾಮನೆಗಳ ವೈಭವೀಕರಣ ನಡೆಯುತ್ತಿದೆ’’ ಎಂದು ಆತಂಕಪಡುತ್ತಾರೆ.
ನಾಟಕ: ಕಲ್ಯಾಣದ ಬಾಗಿಲು
ರಚನೆ: ಡಾ.ನಟರಾಜ್ ಬೂದಾಳು
ನಿರ್ದೇಶನ: ಸಿ.ಬಸವಲಿಂಗಯ್ಯ
ಸಹನಿರ್ದೇಶನ: ದಿಲೀಪ್
ವಿನ್ಯಾಸ: ಮನು ಚಕ್ರವರ್ತಿ
ಸಂಗೀತ ಸಿ.ಬಸೂ ಸಿರಿಮನೆ
ಈ ಹಿನ್ನೆಲೆಯಲ್ಲಿ ಈ ಬಾರಿಯ ಶಿವಸಂಚಾರದ ನಾಟಕಗಳನ್ನು ಗಮನಿಸೋಣ. ಮೊದಲ ನಾಟಕ ‘ಜತೆಗಿರುವನು ಚಂದಿರ’. ಇದನ್ನು 40 ವರ್ಷಗಳ ಹಿಂದೆ ಜಯಂತ ಕಾಯ್ಕಿಣಿ ರಚಿಸಿದ್ದರೂ ಈಗಲೂ ಪ್ರಸಕ್ತವಾಗುವ ನಾಟಕ. ಇಡೀ ನಾಟಕದಲ್ಲಿ ಗಮನ ಸೆಳೆಯುತ್ತವೆ ಜಯಂತ ಕಾಯ್ಕಿಣಿ ಅವರ ಕಾವ್ಯಾತ್ಮಕ ಸಾಲುಗಳ ಸಂಭಾಷಣೆಗಳು. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಪುಟ್ಟ ಗ್ರಾಮದಲ್ಲಿದ್ದ, ಬ್ರೆಡ್ ಮಾರುವ ಬಡೇಮಿಯಾ ತನ್ನ ಮೂವರು ಪುತ್ರಿಯರೊಂದಿಗೆ ಬದುಕು ಕಟ್ಟಿಕೊಳ್ಳುವ ಹಾಗೂ ಬಡೇಮಿಯಾ ಮೂಲಕ ನಡೆಯುವ ವಿದ್ಯಮಾನಗಳ ಚಿತ್ರಣದ ಅನಾವರಣ ಇಲ್ಲಿದೆ. ಅನಕ್ಷರತೆಯಿಂದ ಸಾಕ್ಷರರಾಗುವ, ಸ್ವಜಾತಿಯಿಂದ ಅಂತರ್ಜಾತಿ ಮದುವೆಯಾಗುವ, ಕೈಯಿಂದ ಬಟ್ಟೆ ಹೊಲಿಯುತ್ತಿದ್ದ ದರ್ಜಿಯು ಹೊಲಿಗೆ ಯಂತ್ರ ಕೊಳ್ಳುವ... ಹೀಗೆ ಗ್ರಾಮದವರ ಬದುಕು ಬದಲಾಗುವಾಗ ಬ್ರಿಟಿಷರ ಒಡೆದು ಆಳುವ ನೀತಿಯಿಂದ ತಮ್ಮ ಊರು ತೊರೆಯುವಾಗಲೂ ತಮ್ಮ ಜೊತೆ ಚಂದಿರ ಇದ್ದಾನೆಂಬ ಭರವಸೆ ಹೊಂದುತ್ತಾರೆ. ಇದನ್ನು ಹುಲಗಪ್ಪ ಕಟ್ಟಿಮನಿ ನಿರ್ದೇಶಿಸಿದ್ದು, ಹಳೆಯ ಹಿಂದಿ ಹಾಡುಗಳನ್ನು ನಾಟಕಕ್ಕೆ ಪೂರಕವಾಗಿ ಬಳಸಿಕೊಂಡಿದ್ದು ಚೆನ್ನಾಗಿದೆ.
ಎರಡನೆಯ ನಾಟಕ ‘ಕಲ್ಯಾಣದ ಬಾಗಿಲು’. ನಟರಾಜ ಬೂದಾಳು ಅವರ ಗಟ್ಟಿಯಾದ, ತಾತ್ವಿಕ ನೆಲೆಯ ಹಾಗೂ ಅಧ್ಯಾತ್ಮ ಚಿಂತನೆಯ ಮತ್ತು ಗಮನಾರ್ಹವಾದ ಸಂಭಾಷಣೆಗಳಿಂದ ನಾಟಕ ಗಮನ ಸೆಳೆಯುತ್ತದೆ. ‘ಕಲ್ಯಾಣದ ಬಾಗಿಲು’ ಎನ್ನುವುದು ಕೇವಲ ಶರಣರ ಕಲ್ಯಾಣದ ಬಾಗಿಲಲ್ಲ. ಅದು ಎಲ್ಲ ನಾಥರು, ಬೌದ್ಧರು, ಸೂಫಿಗಳು ಮೊದಲಾದ ಸಾಧಕರು- ತಾತ್ವಿಕರು ಎದುರಾಗುತ್ತಾರೆ. ಅದರಲ್ಲೂ ಸಿದ್ಧ ಪರಂಪರೆಯ ಸರಹಪಾದರ ಜೀವನ ಕುರಿತು ಘಟನೆಗಳೂ ದೃಶ್ಯಗಳಾಗಿವೆ. ಅವರ
ಸಿದ್ಧನಾಗಿಲ್ಲದಿರಲು ಸಿದ್ಧನಾಗು
ಅಭದ್ರತೆಯಲ್ಲಿ ಭದ್ರವಾಗಿರು
ನಿನ್ನ ಮನವ ಅಲಂಕರಿಸದೆ ಎದುರಾಗು
ಏನನ್ನೂ ಹೊತ್ತು ತರಬೇಡ, ನಿನ್ನನಂತೂ ಬೇಡವೇ ಬೇಡ
ನಿನ್ನೆಲ್ಲ ಯೋಚನೆಗಳ ಕೆಳಗಿಟ್ಟು ನೀನಿರುವಂತೆ ಬಾ
ಎನ್ನುವಲ್ಲಿ ನಾಟಕದ ಹೂರಣವಿದೆ ಮತ್ತು ತಿರುಳಿದೆ. ಬುದ್ಧ, ಬಸವ, ಅಂಬೇಡ್ಕರ್ ಪಾತ್ರಧಾರಿಗಳಾಗಿ ಬರುತ್ತ ತತ್ವ, ಸಂದೇಶಗಳನ್ನು ಸಾರುತ್ತಾರೆ. ನಾಟಕದ ಕೊನೆಗೆ ಡಾ.ಅಂಬೇಡ್ಕರರು ಸಂವಿಧಾನ ಹಿಡಿದುಕೊಂಡು ಸಾಗುವಾಗ ಅವರೊಂದಿಗೆ ಎಲ್ಲರೂ ಹೆಜ್ಜೆ ಹಾಕುತ್ತಾರೆ. ನಾಟಕಕ್ಕೆ ಪೂರಕವಾಗಿ ತತ್ವಪದಗಳು ಆವರಿಸಿವೆ. ಎಲ್ಲ ಶರಣರ, ತತ್ವಕಾರರ ಆಶಯದಂತೆ ಸಮಾನತೆ ಸಾಧಿಸಬೇಕು ಎನ್ನುವ ಸಂದೇಶದ ನಾಟಕ ಪ್ರೇಕ್ಷಕರನ್ನು ತಟ್ಟುತ್ತದೆ, ತಿವಿಯುತ್ತದೆ. ಸಿ.ಬಸವಲಿಂಗಯ್ಯ ಅವರ ನಿರ್ದೇಶನದ ಈ ನಾಟಕ ತಕ್ಷಣ ಸೆಳೆಯದಿದ್ದರೂ ಕಾಡುತ್ತದೆ.
ಮೂರನೆಯ ನಾಟಕ ‘ತಾಳಿಯ ತಕರಾರು’. ಇದು ವೃತ್ತಿ ರಂಗಭೂಮಿಯ ಹೆಸರಾಂತ ನಾಟಕ. ಈಗಲೂ ಇದನ್ನು ‘ಕಿವುಡ ಮಾಡಿದ ಕಿತಾಪತಿ’ ಎಂದು ಅನೇಕ ಕಂಪೆನಿಗಳು ಆಡಿವೆ, ಆಡುತ್ತಿವೆ. ಗ್ರಾಮ ಹಾಗೂ ನಗರಗಳಲ್ಲಿದ್ದವರ ಗುಣ, ಸ್ವಭಾವ, ಒಳ್ಳೆತನ, ಕೆಟ್ಟತನ... ಹೀಗೆ ಸಾಮಾಜಿಕ ನಾಟಕಕ್ಕೆ ಬೇಕಾದ ಅಂಶಗಳಿರುವ ಈ ನಾಟಕದಲ್ಲಿ ಹಾಸ್ಯವೇ ಪ್ರಧಾನ ಜೊತೆಗೆ ನೀತಿಯೂ ಇದೆ. ಸಾಳುಂಕೆ ಅವರ ಉತ್ತರ ಕರ್ನಾಟಕ ಭಾಷೆಯ ಸೊಗಡು, ಕಾವ್ಯಾತ್ಮಕ ಸಂಭಾಷಣೆಗಳು ಆಕರ್ಷಿಸುತ್ತವೆ. ಈ ನಾಟಕದ ಪಾರ್ಥಸಾರಥಿಯ ಉಗ್ಗುವಿಕೆ, ಸುಮಿತ್ರನ ಕಿವುಡುತನಗಳೇ ಹಾಸ್ಯದ ಜೀವಾಳ. ಪ್ರೇಕ್ಷಕರನ್ನು ಹೆಚ್ಚು ನಗಿಸುವ, ಸಾಮಾನ್ಯರನ್ನೂ ತಕ್ಷಣ ಸೆಳೆವ ನಾಟಕವಿದು. ಮಾಲತೇಶ ಬಡಿಗೇರ ಅವರ ನಿರ್ದೇಶನದ ಈ ನಾಟಕ ಪಕ್ಕಾ ಕಂಪೆನಿ ನಾಟಕವಾಗಿದೆ.
ನಾಟಕ: ತಾಳಿಯ ತಕರಾರು
ರಚನೆ: ಕೆ.ಎನ್.ಸಾಳುಂಕೆ
ನಿರ್ದೇಶನ, ವಿನ್ಯಾಸ: ಮಾಲತೇಶ ಬಡಿಗೇರ
ಹೀಗೆ ಸಾಮರಸ್ಯ, ಸಮಾನತೆ ಹೇಳುವುದರ ಜೊತೆಗೆ ಮನರಂಜನೆಯೊಂದಿಗೆ ನೈತಿಕತೆ ನೆಲೆಯ ಬದುಕು ಮುಖ್ಯ ಎಂದು ಸಾರುತ್ತವೆ ಈ ನಾಟಕಗಳು. ದೇವರಾಜ ಗಂಟಿ, ಅರುಣ್‌ಕುಮಾರ್, ಲೋಹಿತ್‌ಕುಮಾರ್, ಮಧುಶೇಖರ್ ಎಂ.ಸಿ., ಕಿರಣ್ ನಾಯಕ್, ಭಾಸ್ಕರ ಹಿತ್ತಲಮನಿ, ಪಂಪನಗೌಡ, ಚೇತನ ಬಿ.ಕಾಟೇನಹಳ್ಳಿ, ಸೂರ್ಯ ಚಂದನ್, ಹನುಮಂತ ನಾಯ್ಕರ್, ಡಿ.ಉದಯಕುಮಾರ್, ಎನ್.ವಿ.ನಾಗೇಂದ್ರ, ಕೆ.ಎಂ.ಕವಿತಾ, ಎಸ್.ಸಂಗೀತಾ, ಸುಮಾ ಕಣವಿ, ಶ್ರುತಿ ಶರಣ್ ಇವರೆಲ್ಲ ಕಲಾವಿದರು. ಇವರೊಂದಿಗೆ ತಂತ್ರಜ್ಞರಾಗಿ, ವ್ಯವಸ್ಥಾಪಕರಾಗಿ ಎನ್. ಜೀವನ್ ಗೌಡ ಜೊತೆಗಿರುತ್ತಾರೆ. ಅಲ್ಲದೆ ಬಿ.ರಾಜು ಅವರ ಸಾಥಿಯೂ ಇರುತ್ತದೆ.
ಕಳೆದ ವರ್ಷ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಕಲಿತವರೆಲ್ಲ ಈ ವರ್ಷ ತಿರುಗಾಟದಲ್ಲಿ ಭಾಗವಹಿಸುತ್ತಾರೆ. ಅವರ ಶಿಸ್ತು ಈಗಿನ ಕಂಪೆನಿ ನಾಟಕಗಳ ಕಲಾವಿದರಿಗೆ ಬೇಕಾಗಿದೆ. ಹಾಗೆಯೇ ಕಂಪೆನಿ ಕಲಾವಿದರ ಸಮಯಪ್ರಜ್ಞೆ, ಅಭಿನಯವನ್ನು ‘ಶಿವಸಂಚಾರ’ ಕಲಾವಿದರು ರೂಢಿಸಿಕೊಳ್ಳಬೇಕಾಗಿದೆ. ಸಂಭಾಷಣೆಗಳನ್ನು ಕಂಠಪಾಠ ಮಾಡಿ ಒಪ್ಪಿಸಿದಾಗ ಅಭಿನಯ ಸೊರಗುತ್ತದೆ. ಇದಕ್ಕಾಗಿ ಸಂಭಾಷಣೆಯನ್ನು ಒಪ್ಪಿಸದೆ, ಪಾತ್ರವನ್ನು ಅನುಭವಿಸಿ ಅಭಿನಯಿಸುವುದು ಅಗತ್ಯವಾಗಿದೆ ಜೊತೆಗೆ ತಾವೊಬ್ಬರೇ ಮಿಂಚಬೇಕು ಎನ್ನುವ ಹಂಬಲ ಬಿಟ್ಟು ‘ಹಂಚಿಕೊಂಡು ತಿಂದರೆ ಹಬ್ಬ’ ಎನ್ನುವಂತೆ ಎಲ್ಲರ ಮೂಲಕ ನಾಟಕಗಳು ಯಶಸ್ವಿಯಾಗುತ್ತವೆ ಎನ್ನುವುದನ್ನು ಕಲಾವಿದರು ಮನಗಾಣಬೇಕು.