ಕರಾವಳಿ ರಂಗಭೂಮಿಗೆ ‘ಸುವರ್ಣ’ ಕೊಡುಗೆ
ಕಳೆದ ವಾರ ನಿಧನರಾದ ರಂಗಕರ್ಮಿ, ಸಿನೆಮಾ ನಿರ್ಮಾಪಕ ಹಾಗೂ ನಿರ್ದೇಶಕ ಸದಾನಂದ ಸುವರ್ಣ ಅವರು ಸರಳ, ಸಜ್ಜನ ಎಂದು ಬಾಯಿಮಾತಿಗೆ ಹೇಳುವುದಲ್ಲ. ಹಾಗೆಯೇ ಬದುಕಿದವರು.
ತೊಂಭತ್ತರ ದಶಕದಲ್ಲಿ ಜಡವಾ ಗಿದೆ ಎಂದೆನಿಸಿದ್ದ ಕರಾವಳಿಯ ರಂಗಭೂಮಿಗೆ ಮತ್ತೆ ಚೈತನ್ಯ ತುಂಬಿದವರು ಅವರು. ಮುಂಬೈಯಿಂದ ಮಂಗಳೂರಿಗೆ ಬಂದು ನೆಲೆಗೊಂಡು ‘ಉರುಳು’ ನಾಟಕ ನಿರ್ದೇಶಿಸುವ ಮೂಲಕ ಕರಾವಳಿಯಲ್ಲಿ ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಅವರ ಇನ್ನೊಂದು ನಿರ್ದೇಶನದ ‘ಕೋರ್ಟ್ ಮಾರ್ಷಲ್’ ನಾಟಕ ಬಹಳ ಜನಪ್ರೀತಿ ಗಳಿಸಿತು. ಬಳಿಕ ‘ಮಳೆ ನಿಲ್ಲುವವರೆಗೆ’, ಜಡಭರತ ಅವರ ‘ಕದಡಿದ ನೀರು’ ನಾಟಕವನ್ನು ತುಳುವಿಗೆ ರೂಪಾಂತರಿಸಿ ನಿರ್ದೇಶಿಸಿದರು. ಹೀಗೆ ೨೫ ವರ್ಷಗಳ ವರೆಗೆ ಕರಾವಳಿ ರಂಗಭೂಮಿಯನ್ನು ಜೀವಂತವಾಗಿರಿಸಿದರು. ಈ ಮೂಲಕ ಹೊಸ ಕಲಾವಿದರನ್ನು, ಹೊಸ ತಂತ್ರಜ್ಞರನ್ನು ಹುಟ್ಟುಹಾಕಿದ ಹೆಗ್ಗಳಿಕೆ ಅವರದು.
ತಾಲೀಮಲ್ಲದೆ ನಾಟಕದ ಪ್ರತಿಯೊಂದರಲ್ಲೂ ಶಿಸ್ತನ್ನು ಬಯಸುತ್ತಿದ್ದ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ (೨೪.೧೨.೧೯೩೧). ಮೂಲ್ಕಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಮುಂಬೈನಲ್ಲಿ ಪ್ರೌಢಶಾಲೆ ಪೂರೈಸಿ, ಅಲ್ಲಿಯೇ ನಾಟ್ಯ ಅಕಾಡಮಿಯ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದರು. ಭಾರತೀಯ ವಿದ್ಯಾಭವನದ ರಾಜೇಂದ್ರ ಪ್ರಸಾದ್ ಮಾಸ್ ಕಮ್ಯುನಿಕೇಷನ್ ಕಾಲೇಜಿನಿಂದ ಸಮೂಹ ಮಾಧ್ಯಮ (ಸಿನೆಮಾ, ಆಕಾಶವಾಣಿ, ಟೆಲಿವಿಷನ್) ಡಿಪ್ಲೊಮಾ ನಂತರ ಇಂಡಿಯನ್ ಅಮೆರಿಕನ್ ಸೊಸೈಟಿಯಿಂದ ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪಡೆದು ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆಯಿಂದ ಚಲನಚಿತ್ರ ರಸಗ್ರಹಣ ಶಿಬಿರದ ಡಿಪ್ಲೊಮಾ ಪಡೆದರು. ಇದರೊಂದಿಗೆ ಮುಂಬೈನಲ್ಲಿ ರಾತ್ರಿ ಹೈಸ್ಕೂಲ್‌ನಲ್ಲಿ ಐದು ವರ್ಷ ಅಧ್ಯಾಪಕರಾಗಿದ್ದ ಅವರು ನಂತರ ಮುಂಬೈನಲ್ಲಿ ಬಣ್ಣಗಳ ವ್ಯಾಪಾರಿಯಾಗಿದ್ದರು. ಆದರೆ ಬಣ್ಣದ ಅಂದರೆ ರಂಗಭೂಮಿಯ ನಂಟನ್ನು ಕಳೆದುಕೊಳ್ಳಲಿಲ್ಲ. ನಾಟಕ ರಚನೆ, ನಟನೆ, ನಿರ್ದೇಶನವೆಂದು ಸುಮಾರು ಐವತ್ತು ವರ್ಷಗಳವರೆಗೆ ಮುಂಬೈ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
‘ಅಭಾಗಿನಿ’, ‘ವಿಷಮ ಘಳಿಗೆ’, ‘ಕುಲಗೌರವ’, ‘ಕದ್ದವನೆ ಕಳ್ಳ’, ‘ಕಣ್ಣು ತೆರೆಯಿತು’, ‘ಭಗ್ನಮಂದಿರ’, ‘ಹಳ್ಳದಿಂದ ಹಾದಿಗೆ’, ‘ರೂಪದರ್ಶನ’, ‘ಗುಡ್ಡದ ಭೂತ’, ‘ಕುರುಡನ ಸಂಗೀತ’, ‘ಧರ್ಮಚಕ್ರ’, ‘ರಜಪೂತ ಪವಾಡ’, ‘ಆಕಸ್ಮಿಕ’ ಇವು ಅವರ ಸ್ವತಂತ್ರ ನಾಟಕಗಳು. ಹಿಂದಿಯಿಂದ ‘ಉರುಳು’, ಇಂಗ್ಲಿಷ್‌ನಿಂದ ‘ಚಕ್ರವ್ಯೆಹ’, ಬಂಗಾಲಿಯಿಂದ ‘ಅಣ್ಣನ ಮದುವೆ’ ಹಾಗೂ ‘ಬಾಲೆ ಬಂಗಾರ’ ನಾಟಕಗಳನ್ನು ರೂಪಾಂತರಿಸಿದರು. ಮುಂಬೈನ ಉದಯಕಲಾ ನಿಕೇತನ, ಕನ್ನಡ ಕಲಾ ಕೇಂದ್ರಗಳಿಗೆ ನಾಟಕಗಳನ್ನು ನಿರ್ದೇಶಿಸಿದರು. ಬಳಿಕ ‘ರಂಗಸ್ಥಳ’ ಎಂಬ ರಂಗ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಅವರು, ಹಲವಾರು ಕಲಾವಿದರಿಗೆ ತರಬೇತಿ ನೀಡಿ, ನಾಟಕಗಳನ್ನು ನಿರ್ದೇಶಿಸುವ ಮೂಲಕ ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತಂದರು.
ರಂಗಭೂಮಿಯಲ್ಲದೆ ಕಿರುತೆರೆ, ಸಿನೆಮಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡರು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದು ಹೊರಬಂದಿದ್ದ ಗಿರೀಶ್ ಕಾಸರವಳ್ಳಿ ಅವರು ಯು.ಆರ್. ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕೃತಿಯನ್ನು ಸಿನೆಮಾ ಸಲುವಾಗಿ ಸಿದ್ಧಪಡಿಸಿದ್ದರು. ಇದನ್ನು ನಿರ್ಮಿಸಿದವರು ಸದಾನಂದ ಸುವರ್ಣ ಅವರು. ಇದು ಅತ್ಯುತ್ತಮ ಚಲನಚಿತ್ರವೆಂದು ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಜರ್ಮನಿಯ ಡ್ಯುಕಾಡ್ ಪ್ರಶಸ್ತಿಯೊಂದಿಗೆ ಒಟ್ಟು ೧೮ ಪ್ರಶಸ್ತಿಗಳು ಈ ಸಿನೆಮಾಕ್ಕೆ ದಕ್ಕಿದವು. ಹೀಗೆ ಕಾಸರವಳ್ಳಿ ಅವರು ಚಿತ್ರಕಥೆ ಸಿದ್ಧಪಡಿಸಿಕೊಂಡು ನಿರ್ಮಾಪಕರಿಗಾಗಿ ಹುಡುಕಾಡುವಾಗ ತಾವೇ ನಿರ್ಮಾಪಕರಾಗುವ ಮೂಲಕ ಕಾಸರವಳ್ಳಿ ಅವರನ್ನು ಕನ್ನಡಕ್ಕೆ ಅತ್ಯುತ್ತಮ ಸಿನೆಮಾ ನಿರ್ದೇಶಕರಾಗಿ ಪರಿಚಯಿಸಿದ ಹೆಗ್ಗಳಿಕೆ ಅವರದು. ಹೀಗೆ ಬೆಳಕಿಗೆ ಬಂದವರಲ್ಲಿ ನಟ ಪ್ರಕಾಶ್ ರೈ ಕೂಡಾ ಒಬ್ಬರು. ತಮ್ಮ ತುಳು ನಾಟಕ ಆಧರಿಸಿದ ‘ಗುಡ್ಡದ ಭೂತ’ವನ್ನು ದೂರದರ್ಶನಕ್ಕೆ ಧಾರಾವಾಹಿಯಾಗಿ ಸುವರ್ಣ ಅವರು ನಿರ್ದೇಶಿಸಿದರು. ಇದರಲ್ಲಿ ಪ್ರಕಾಶ್ ರೈ ಅವರು ಅಭಿನಯಿಸುವ ಮೂಲಕ ಬೆಳಕಿಗೆ ಬಂದರು. ಚಂದನಕ್ಕೆ ತುಳುನಾಡ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ನಿರ್ದೇಶನ. ಅಲ್ಲದೆ ಅವರ ನಿರ್ದೇಶನದ ಸಾಹಿತಿ ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಕೃತಿ ಆಧರಿಸಿದ ಸಾಕ್ಷ್ಯಚಿತ್ರವು ೧೨ ಕಂತುಗಳಲ್ಲಿ ಚಂದನದಲ್ಲಿ ಪ್ರಸಾರವಾಯಿತು.
ಆಮೇಲೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಬರನ ಕಥೆ’, ‘ಮನೆ’, ‘ಕ್ರೌರ್ಯ’ ಸಿನೆಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ದುಡಿದರು. ೧೯೮೯ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ‘ಕುಬಿ ಮತ್ತು ಇಯಾಲ’ ಸಿನೆಮಾವನ್ನು ನಿರ್ಮಿಸಿ, ನಿರ್ದೇಶಿಸಿದ ಅವರಿಗೆ ಅತ್ಯುತ್ತಮ ಚಿತ್ರ, ಉತ್ತಮ ನಿರ್ದೇಶಕ ಹಾಗೂ ಉತ್ತಮ ಚಿತ್ರಕಥೆಯೆಂದು ರಾಜ್ಯ ಪ್ರಶಸ್ತಿಗಳು ಬಂದವು. ಈ ಸಿನೆಮಾವು ಕೊಲ್ಕತಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ, ಸಿಡ್ನಿ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತು.
ಹೀಗಿದ್ದಾಗ ೧೯೯೧ರಲ್ಲಿ ಮಂಗಳೂರಿನ ಕನ್ನಡ ಹವ್ಯಾಸಿ ರಂಗಭೂಮಿ ಸೊರಗಿದ್ದಾಗ, ಅಲ್ಲಿಯೇ ನೆಲೆ ನಿಂತು ಜಗನ್ ಪವರ್ ಬೇಕಲ್ ಅವರ ಸಂಕೇತ ತಂಡಕ್ಕೆ ‘ಉರುಳು’ ನಾಟಕವನ್ನು ನಿರ್ದೇಶಿಸಿದರು. ಇದರಲ್ಲಿ ಚಂದ್ರಹಾಸ ಉಳ್ಳಾಲ, ಲಕ್ಷ್ಮಣ ಕುಮಾರ್ ಮಲ್ಲೂರು ಹಾಗೂ ಸುಧಾಕರ ಸಾಲಿಯಾನ್ ಅಭಿನಯಿಸಿದ್ದರು. ಹೀಗೆ ಮೂರೇ ಪಾತ್ರಗಳಿದ್ದ ನಾಟಕವು ೬೭ ಪ್ರದರ್ಶನಗಳನ್ನು ಕಂಡಿತು. ಬಳಿಕ ತಮ್ಮದೇ ಸುವರ್ಣ ಪ್ರತಿಷ್ಠಾನ ತಂಡಕ್ಕೆ ‘ಕೋರ್ಟ್ ಮಾರ್ಷಲ್’ ನಾಟಕವನ್ನು ಸುವರ್ಣರು ನಿರ್ದೇಶಿಸಿದರು. ಇದು ೭೦ ಪ್ರದರ್ಶನಗಳನ್ನು ಕಂಡಿತು. ಮತ್ತೆ ಈ ನಾಟಕವು ಬರುವ ಆಗಸ್ಟ್ ೩೧ರಂದು ಮಂಗಳೂರಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಂದ್ರಹಾಸ ಉಳ್ಳಾಲ ಖಚಿತಪಡಿಸಿದರು. ‘‘ಅವರು ಮಾನವತಾವಾದಿ. ಯಾವುದೇ ಸಿದ್ಧಾಂತಗಳಿಗೆ ತೀವ್ರವಾಗಿ ಅಂಟಿಕೊಳ್ಳದೆ ಸ್ವಚ್ಛ ಬದುಕನ್ನು ಬಾಳಿದವರು. ಸಂಕಷ್ಟದಲ್ಲಿರುವವರಿಗೆ ಗುಟ್ಟಾಗಿ ಸಹಾಯಹಸ್ತ ನೀಡಿದವರು. ತಮ್ಮ ದೇಹವನ್ನು ದಾನ ಮಾಡಿ ಮಾದರಿಯಾಗಿ ಬದುಕಿದರು’’ ಎನ್ನುವುದು ಚಂದ್ರಹಾಸ ಉಳ್ಳಾಲ ಅವರ ಮಾತು. ‘‘ಅವರ ವ್ಯಕ್ತಿತ್ವ ಸಮುದ್ರ ಇದ್ದ ಹಾಗೆ. ಆಳಕ್ಕಿಳಿದಾಗ ನಮಗೆ ಸಮುದ್ರ ಪರಿಚಯವಾಗುತ್ತದೆಯಲ್ಲ ಹಾಗೆ ಸುವರ್ಣ ಅವರು. ಅವರ ಒಡನಾಟದಿಂದ ಸುವರ್ಣದಂಥ ಅವರ ವ್ಯಕ್ತಿತ್ವದ ಪರಿಚಯವಾಯಿತು’’ ಎನ್ನುತ್ತಾರೆ ಅವರ ನಿಡುಗಾಲದ ಒಡನಾಡಿ ನಟೇಶ್ ಉಳ್ಳಾಲ.
ಪತ್ರಕರ್ತೆ ಹಾಗೂ ಲೇಖಕಿಯಾಗಿದ್ದ ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಸುವರ್ಣ ಅವರ ಕುರಿತು ಎಂಫಿಎಲ್ ಅಧ್ಯಯನ ಕೈಗೊಂಡಿದ್ದರು. ನಂತರ ಅವರು ‘ಸುವರ್ಣ ಸಂಪದ’ ಕೃತಿ ಹೊರತಂದಿದ್ದರು ಜೊತೆಗೆ ಕರ್ನಾಟಕ ನಾಟಕ ಅಕಾಡಮಿಗೆ ‘ರಂಗ ಜಂಗಮ’ ಕೃತಿ ರಚಿಸಿದ್ದರು. ಮುಖ್ಯವಾಗಿ ಸುವರ್ಣ ಅವರ ಮಹಡಿಮನೆಯಲ್ಲಿ ಸೀತಾಲಕ್ಷ್ಮೀ ಅವರು ತಮ್ಮ ಹೆತ್ತವರೊಂದಿಗೆ ವಾಸವಿದ್ದು, ಸುವರ್ಣ ಅವರನ್ನೂ ನೋಡಿಕೊಳ್ಳುತ್ತಿದ್ದರು. ಆದರೆ ಕ್ಯಾನ್ಸರ್‌ನಿಂದ ಸೀತಾಲಕ್ಷ್ಮೀ ನಿಧನರಾದಾಗ ಕಂಗಾಲಾಗಿದ್ದರು. ತಮ್ಮ ಮಗಳ ಸಾವನ್ನು ಅರಗಿಸಿಕೊಳ್ಳಲಾಗದ ವಿ.ಗ.ನಾಯಕ ಅವರು ತಮ್ಮ ಊರಾದ ಉತ್ತರ ಕನ್ನಡ ಜಿಲ್ಲೆ ಕುಮಟಾ ಬಳಿ ನೆಲೆಗೊಳ್ಳಲು ಹೊರಟಾಗ ಸುವರ್ಣ ಅವರು ಅನಾಥರಾದರು. ಆದರೆ ಕೊನೆಯವರೆಗೂ ಅವರೊಂದಿಗೆ ಇದ್ದವರು ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಳ್ಳಾಲ.
ಪ್ರಚಾರಕ್ಕೆ, ಪ್ರಸಿದ್ಧಿಗೆ ಹಾತೊರೆಯದ ಹಾಗೂ ಪ್ರಶಸ್ತಿಗೆ ಹಪಹಪಿಸದ ಸುವರ್ಣರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಅಕಾಡಮಿ ಹಾಗೂ ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ಬಿ.ವಿ.ಕಾರಂತ ಸೇರಿದಂತೆ ಮೊದಲಾದ ಪ್ರಶಸ್ತಿಗಳ ಪುರಸ್ಕತರಾಗಿದ್ದರು. ಇಂಥ ಸುವರ್ಣರು ಕಳೆದ ವಾರ (೧೬ ಜುಲೈ ೨೦೨೪) ನಿಧನರಾದಾಗ ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ಆದರೆ ಅವರು ನಿರ್ದೇಶಿಸಿದ ನಾಟಕಗಳ ಮೂಲಕ ಜೀವಂತವಾಗಿರುತ್ತಾರೆ.