ಪೌರಾಣಿಕ ನಾಟಕದ ಹೂರಣ; ಸ್ವಾತಂತ್ರ್ಯ ಸಂಗ್ರಾಮದ ತೋರಣ

ಭೀಷ್ಮ ದ್ರೋಣ ಪರಶುರಾಮ|
ಭೀಮಾರ್ಜುನಾದಿ ಸುತರ ಪೆತ್ತ॥
ವೀರಮಾತೆಗೆ ಜೈ॥
ದೇಶಸೇವೆಯಿಂದ ಸುಖಿಪ|
ದೇಶಾಭಿಮಾನಿಗಳಿಗೆ ಜೈ॥
ಧೀರ ಬಾಪೂ ಶೂರ ನೆಹರೂ|
ಶ್ರೇಷ್ಠ ಪುರುಷ ಗಾಂಧಿ ಪೆತ್ತ
ವೀರ ಮಾತೆಗೆ ಜೈ ಜೈ ಜೈ ಜೈ॥
ಇದು ಕೋಲ ಶಾಂತಪ್ಪ ಅವರ ‘ಉತ್ತರಭೂಪ’ ನಾಟಕದ ನಾಂದಿಪದ್ಯ. ಇದನ್ನು ಅವರು 1930ರಲ್ಲಿ ರಚಿಸಿದ್ದರು. ಇದಕ್ಕೂ ಮೊದಲು ಅಂದರೆ 1924ರ ಡಿಸೆಂಬರ್ 26ರಂದು ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನವು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿತ್ತು. ಇದರ ಶತಮಾನೋತ್ಸವ ಅಂಗವಾಗಿ ಕಳೆದ ವರ್ಷ ಅಂದರೆ 2024ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನವು ನಡೆಯಿತು. ಈ ಸಂದರ್ಭದಲ್ಲಿ ರಂಗ ಲೇಖಕ ಡಾ. ರಾಮಕೃಷ್ಣ ಮರಾಠೆ ಅವರು ರಚಿಸಿದ ‘ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ’ ಕೃತಿ ಬಿಡುಗಡೆಗೊಂಡಿತು.
ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ. ರಾಮಕೃಷ್ಣ ಮರಾಠೆ ಅವರು ಉತ್ತರ ಕರ್ನಾಟಕ ರಂಗಭೂಮಿ ಕುರಿತು ಪಿಎಚ್.ಡಿ. ಪಡೆದವರು. ಪಿಎಚ್.ಡಿ. ಅಧ್ಯಯನ ಕೈಗೊಂಡಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ರಂಗಭೂಮಿಯ ಕೊಡುಗೆ ಕುರಿತು ಅಧ್ಯಯನ ಕೈಗೊಳ್ಳಬೇಕಿತ್ತು. ಈ ಕೃತಿಯ ಮೂಲಕವಾದರೂ ಆ ಕೊರತೆಯನ್ನು ನೀಗಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಕುರಿತು ಮತ್ತೆ ಪ್ರಸ್ತಾಪಿಸುವೆ; ಮಹಾತ್ಮಾ ಗಾಂಧೀಜಿ ಅವರ ಮನಮುಟ್ಟುವ ಮಾತುಗಳನ್ನು ಕೇಳಿ ಮನಗಂಡವರು ಅನೇಕರು. ಇದರಲ್ಲಿ ಸಾಹಿತಿಗಳು, ರಂಗಕರ್ಮಿಗಳೂ ಇದ್ದರು. ಅದಾಗಲೇ ‘ಕಿತ್ತೂರ ಚೆನ್ನಮ್ಮ’ ನಾಟಕ ರಚಿಸಿ ‘ಕ್ರಾಂತಿಕಾರಿ ನಾಟಕಕಾರ’ ಎಂದು ಹೆಸರಾದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಈ ಅಧಿವೇಶನದಲ್ಲಿ ಹಾಜರಿದ್ದರು. ಅಲ್ಲದೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಸಂದೇಶ ಸಾರುವ ‘ಪವಿತ್ರ ಖಾದಿ’ ನಾಟಕ ರಚಿಸಿ, ಆಡಲೆಂದೇ ಅಧಿವೇಶನದಲ್ಲಿ ಭಾಗವಹಿಸಿದ್ದರು. ಆದರೆ ಸಾಧ್ಯವಾಗದ ಕಾರಣ ಬೆಳಗಾವಿಯಲ್ಲಿಯೇ ಕೆಲವೇ ಪ್ರೇಕ್ಷಕರ ಎದುರು ನಾಟಕವಾಡುತ್ತಾರೆ. ಅವರ ‘ಅಸ್ಪಶ್ಯತಾ ನಿವಾರಣೆ’ ನಾಟಕದಲ್ಲಿ ಗಾಂಧೀಜಿಯವರನ್ನು ಜಾತವೇದ ಮುನಿಗಳಿಗೆ ಹಾಗೂ ನೆಹರೂ ಅವರನ್ನು ಬಸವಣ್ಣ ಅವರಿಗೆ ಹೋಲಿಸಿ ನಾಟಕ ರಚಿಸಿದರು. ‘ಕಥಾವಸ್ತು ಚಾರಿತ್ರಿಕ. ವಿಷಯ ವಿವೇಚನೆ ಸಮಕಾಲೀನ. ಇದು ಶಿವಲಿಂಗ ಸ್ವಾಮಿಗಳ ನಾಟ್ಯ ಪರಿಣತಿ’ ಎಂದು ಗರುಡ ಶ್ರೀಪತಿರಾಯರು ಹೇಳಿದ್ದರು. ಈ ನಾಟಕದಲ್ಲಿ ಬಸವಣ್ಣ ಹೇಳುವ ಮಾತು- ‘‘ಜಾತವೇದ ಮುನಿಗಳು 21 ದಿವಸ ಉಪವಾಸ ಕೈಗೊಂಡಿದ್ದಾರೆ. ಯಾವ ದಿನ ಆ ಮಹಾತ್ಮರ ತಪಸಿದ್ಧಿ ಆಗುವುದೋ ಆ ದಿನವೇ ನಮ್ಮ ರಾಷ್ಟ್ರದ ಉದ್ಧಾರ’’ ಎನ್ನುವ ಮೂಲಕ ಗಾಂಧೀಜಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಕುರಿತು ಪ್ರೇಕ್ಷಕರಿಗೆ ತಿಳಿಸುವುದರ ಜೊತೆಗೆ ಸ್ವಾತಂತ್ರ್ಯ ಚಳವಳಿಗೆ ಜನರನ್ನು ಹುರಿದುಂಬಿಸುವುದಾಗಿತ್ತು. ವಿದೇಶಿ ಬಟ್ಟೆಗಳನ್ನು ತೊಡುವುದರ ವಿರುದ್ಧ ಕುರಿತ ಈ ನಾಟಕ ನೋಡಿದ ಪ್ರೇಕ್ಷಕರು ರಂಗಮಂದಿರದಿಂದ ಹೊರಬಂದ ಕೂಡಲೇ ವಿದೇಶಿ ಬಟ್ಟೆಗಳನ್ನು ಸುಟ್ಟು ತಮ್ಮ ಊರುಗಳಿಗೆ ತೆರಳುತ್ತಿದ್ದರು.
ಹೀಗೆಯೇ ಗಾಂಧೀಜಿ ಅವರ ಖಾದಿ ಆಂದೋಲನ ಪ್ರೇರಣೆಯಿಂದ ರಚನೆಗೊಂಡ ನಾಟಕ ಕಂದಗಲ್ಲ ಹನುಮಂತರಾಯರ ‘ಅಕ್ಷಯಾಂಬರ’. ನೂಲುವ ಚರಕವನ್ನು ಶ್ರೀಕೃಷ್ಣನ ಸುದರ್ಶನ ಚಕ್ರಕ್ಕೂ ಖಾದಿ ಬಟ್ಟೆಯನ್ನು ದ್ರೌಪದಿಯ ಮಾನ ಕಾಯ್ದ ಅಕ್ಷಯಾಂಬರಕ್ಕೂ ಹೋಲಿಸಿ ಬರೆದದ್ದು ಈ ನಾಟಕದ ವಿಶೇಷ. ಗೋಕಾಕದ ಬಸವಣ್ಣೆಪ್ಪ ಅವರ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿಯು ‘ರಾಜದ್ರೋಹ’ ನಾಟಕವನ್ನು ಆಡಿತು. ಸ್ವಾತಂತ್ರ್ಯ ಸಿಕ್ಕ ಮೇಲೆ ಚಳವಳಿಯ ನಾಯಕರ ಸ್ಥಾನಮಾನ ಏನಾಗಬಹುದು ಕುರಿತ ನಾಟಕವಿದಾಗಿತ್ತು. ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್ ಅವರ ಪಾತ್ರಗಳಿದ್ದವು.
ಇನ್ನು ‘ಕಿತ್ತೂರ ಚೆನ್ನಮ್ಮ’ ನಾಟಕ ಆಡುವ ಸಲುವಾಗಿಯೇ ಸಾಹಿತ್ಯ ಸೇವಾ ಸಂಗೀತ ನಾಟಕ ಮಂಡಳಿ ಎಂಬ ಕಂಪೆನಿ ಕಟ್ಟಿದವರು ಅಬ್ಬಿಗೇರಿಯ ಸಂಗನಗೌಡ ಪಾಟೀಲ. ವಕೀಲರೂ ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದ ಅವರು ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದೇ ಹೊತ್ತಿಗೆ ಗರುಡ ಸದಾಶಿವರಾಯರ ನಾಟಕ ಕಂಪೆನಿ ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿಯು ಬೆಳಗಾವಿಯಲ್ಲಿ ಮೊಕ್ಕಾಂ ಮಾಡಿತ್ತು. 1925ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಬೆನಗಲ್ ರಾಮರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಆಗ ಗರುಡ ಸದಾಶಿವರಾಯರಿಗೆ ‘ನಾಟಕಾಲಂಕಾರ’ ಬಿರುದು ನೀಡಿ ಸತ್ಕರಿಸಲಾಯಿತು.
ಮುಖ್ಯವಾಗಿ ಗರುಡ ಸದಾಶಿವರಾಯರ ಕಂಸವಧ, ಪಾದುಕಾ ಪಟ್ಟಾಭಿಷೇಕ, ಲಂಕಾದಹನ, ಚವತಿ ಚಂದ್ರ, ಮಾಯಾಬಜಾರ್ ನಾಟಕಗಳಲ್ಲಿ ಪೌರಾಣಿಕ ನಾಟಕದ ಹೂರಣವಿದ್ದರೂ ಸ್ವಾತಂತ್ರ್ಯ ಚಳವಳಿ ಕುರಿತು ತೋರಣವಿತ್ತು. ಅವರ ಕಂಸವಧ ಅರ್ಥಾತ್ ಮಾತೃಬಂಧ ವಿಮೋಚನ ಎನ್ನುವುದಾಗಿದೆ. ಅಲ್ಲದೆ ಸ್ವಾತಂತ್ರ್ಯ ಚಳವಳಿಗಾರರಿಗೆ ಎಂ.ಒ. ಮೂಲಕ ದುಡ್ಡು ಕಳಿಸುತ್ತಿದ್ದ ಗರುಡ ಸದಾಶಿವರಾಯರು, ತಮ್ಮ ನಾಟಕ ಮಂಡಳಿಗೆ ಬಂದ ಚಳವಳಿಗಾರರಿಗೆ ಆಶ್ರಯವನ್ನೂ ನೀಡುತ್ತಿದ್ದರು.
ಇದೇ ರೀತಿ ಏಣಗಿ ಬಾಳಪ್ಪ ಹಾಗೂ ಎಲ್.ಎಸ್.ಇನಾಮದಾರ ಅವರು ಕೂಡಿ ನಡೆಸುತ್ತಿದ್ದ ವೈಭವಶಾಲಿ ನಾಟ್ಯ ಸಂಘವು ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯ ಜಾತ್ರೆಯಲ್ಲಿ ಮೊಕ್ಕಾಂ ಮಾಡಿತ್ತು. ಆಗ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವಾಲಿ ಚೆನ್ನಪ್ಪ, ಬೆಂಕಿಸ್ವಾಮಿ ಎಂದು ಪ್ರಸಿದ್ಧರಾಗಿದ್ದ ಚಿನ್ಮಯಸ್ವಾಮಿ ಓಂಕಾರಮಠ ಹಾಗೂ ಇತರರು ಪೊಲೀಸರಿಂದ ಬಂದೂಕುಗಳನ್ನು ಕಸಿದುಕೊಳ್ಳುವ ಯೋಜನೆ ರೂಪಿಸಿದ್ದರು. ಇದು ಹೇಗೋ ಪೊಲೀಸರಿಗೆ ಗೊತ್ತಾಗಿ ಅವರನ್ನು ಹುಡುಕುತ್ತಿರುತ್ತಾರೆ. ಆಗ ಹೋರಾಟಗಾರರು ಆಶ್ರಯವನ್ನು ಅರಸಿ ಬಂದಿದ್ದು ಏಣಗಿ ಬಾಳಪ್ಪ ಅವರ ಕಂಪೆನಿಯನ್ನು. ಆಗ ಪ್ರಸಾಧನ ಕಲಾವಿದ ರಾಮಚಂದ್ರ ಪೇಂಟರ್ ಅವರು ಹೋರಾಟಗಾರರಿಗೆ ಬಣ್ಣ ಹಚ್ಚಿ, ಗಡ್ಡ, ಮೀಸೆ ಅಂಟಿಸುತ್ತಾರೆ. ಇವರನ್ನು ಹುಡುಕಿಕೊಂಡು ಬಂದ ಪೊಲೀಸರು ನಿರಾಶರಾಗಿ ಮರಳುತ್ತಾರೆ. ಎಲ್.ಎಸ್. ಇನಾಮದಾರ ಅವರು ಬರೆದ ‘ಚಲೇಜಾವ್’ ನಾಟಕವನ್ನೂ ಅವರು ಆಡುತ್ತಿದ್ದರು. ಹೀಗೆಯೇ ಗರುಡ ಸದಾಶಿವರಾಯರ ಗರಡಿಯಲ್ಲಿ ಬೆಳೆದ ದತ್ತಂಭಟ್ಟ ಒಡೆಯರ ಅವರು ಶ್ರೀ ಗಜಾನನ ನಾಟಕ ಮಂಡಳಿ, ಜಮಖಂಡಿ ಕಂಪೆನಿ ಶುರು ಮಾಡಿದರು. ಅವರು ಆಡುತ್ತಿದ್ದ ‘ಮೈಲಾರ ಮಹಾದೇವ’ ನಾಟಕವು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತು. ಹುಲಿಮನೆ ಸೀತಾರಾಮ ಶಾಸ್ತ್ರಿಗಳ ರಚನೆಯ ‘ಟಿಪ್ಪು ಸುಲ್ತಾನ’ ನಾಟಕವು ಜಯಕರ್ನಾಟಕ ನಾಟಕ ಮಂಡಳಿಯಿಂದ ಪ್ರಯೋಗಗೊಂಡಿತು. ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಚೆನ್ನಪ್ಪ ವಾಲಿ ಅವರು ತಮ್ಮ ಸೋದರ ಶಿವಯೋಗಪ್ಪ ವಾಲಿ ಹಾಗೂ ಗೆಳೆಯ ಶಿವಬಸಪ್ಪ ಬೆಳವಡಿ ಅವರ ಬೆಂಬಲದಿಂದ ಲೋಕಸೇವಾ ಸಂಗೀತ ನಾಟಕ ಮಂಡಳಿ ಆರಂಭಿಸಿ ‘ಸಂಗೊಳ್ಳಿ ರಾಯಣ್ಣ’ ನಾಟಕವಾಡಿದರು. ಆದರೆ ರಾಯಣ್ಣನ ನಾಟಕವೆಂದರೆ ಪೊಲೀಸರ ದಾಳಿ, ನಾಟಕ ಪ್ರತಿಗಳ ಜಪ್ತಿ, ಕಲಾವಿದರ ಬಂಧನ ನಡೆಯುತ್ತಿದ್ದುದು ಸಾಮಾನ್ಯ ಸಂಗತಿಗಳಾಗಿದ್ದವು. ಆಗ ಕಲಾವಿದರು ‘ನಾಟಕ ಪ್ರತಿಗಳನ್ನು ಪೊಲೀಸರು ಜಪ್ತಿ ಮಾಡಿದರೇನಂತೆ ನಮ್ಮ ನಾಲಿಗೆ ಮೇಲೆ ನಾಟಕದ ಪೂರ್ಣ ಪಾಠ ಅಚ್ಚೊತ್ತಿದಂತಿದೆ. ಅದನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ನಾಟಕವಾಡುವ ಹುಮ್ಮಸ್ಸು ವ್ಯಕ್ತಪಡಿಸುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ‘ಕಿತ್ತೂರು ಚೆನ್ನಮ್ಮ’ ನಾಟಕದ ನಂತರ ಹೆಸರು ಮಾಡಿದ್ದು ‘ನರಗುಂದ ಬಂಡಾಯ’ ನಾಟಕ. ಬ್ರಿಟಿಷ್ ಅಧಿಕಾರಿಯ ವಿರುದ್ಧ ಹೋರಾಡಿದ ನರಗುಂದ ಬಾಬಾಸಾಹೇಬ ಮತ್ತು ಅವನ ಕುಟುಂಬದ ಕಥೆಯನ್ನು ರಂಗದ ಮೇಲೆ ತಂದವರು ಗದಗದ ಅಚ್ಯುತರಾವ್ ಹುಯಿಲಗೋಳ. ಇದನ್ನು ಪ್ರಯೋಗಿಸಿದವರು ಅಸುಂಡಿ ಕಂಪೆನಿಯ ಲಕ್ಷ್ಮಣರಾವ್ ಅಸುಂಡಿ.
ಹೀಗೆ ‘ರಂಗಭೂಮಿಗೆ ಚಳವಳಿಯ ದೀಕ್ಷೆ ತೊಡಿಸಿ, ಅದನ್ನು ಜನಜಾಗೃತಿಯ ಪರಿಣಾಮಕಾರಿ ಮಾಧ್ಯಮವನ್ನಾಗಿ ಮಾಡಿದವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಅಗ್ರಗಣ್ಯರು. ಅವರ ಆಶಯದಂತೆ ಪೌರಾಣಿಕ ನಾಟಕಗಳು, ಐತಿಹಾಸಿಕ ನಾಟಕಗಳು ಮರಾಠಿ ರಂಗಭೂಮಿಯಲ್ಲಿ ಪ್ರಯೋಗವಾದವು. ಪ್ರೇಕ್ಷಕರು ಚಳವಳಿಗಾರರಾಗಿ ರೂಪುಗೊಳ್ಳತೊಡಗಿದರು. ಇದರಿಂದ ಚವಳವಳಿಗೆ ಹೊಸ ಚೈತನ್ಯ ಪ್ರಾಪ್ತವಾಯಿತು. ಈ ತರಹದ ಚಟುವಟಿಕೆಗಳು ಕನ್ನಡ ರಂಗಭೂಮಿಯನ್ನು ಪ್ರವೇಶಿಸಲು ತಡವಾಗಲಿಲ್ಲ. ಕೀರ್ತನಕಾರರು ಉರಾಡಿಕೊಂಡು ತಿರುಗಾಡುತ್ತಿದ್ದಂತೆಯೇ ನಾಟಕ ಕಂಪೆನಿಗಳೂ ದೇಶ, ಭಾಷೆಯ ಸೀಮೆಯ ದಾಟಿ ಸಂಚರಿಸಿದವು. ಅವುಗಳ ಪ್ರದರ್ಶನಗಳಿಂದ ಚಳವಳಿ ಹುರಿಗೊಂಡು ಇಡೀ ದೇಶವೇ ಸ್ವಾತಂತ್ರ್ಯದೆಡೆಗೆ ಒಮ್ಮುಖವಾಗಿ ಸಂಚರಿಸುವಂತಾಯಿತು. ಹೀಗೆ ಸ್ವಾತಂತ್ರ್ಯಪೂರ್ವದ ಕನ್ನಡ ರಂಗಭೂಮಿಯ ಸಾಧನೆ ನಮ್ಮ ಬೆನ್ನ ಹಿಂದಿನ ಬೆಳಕಾಗಿರಲಿಯೆಂದು ಆಶಿಸೋಣ’ ಎನ್ನುವ ಮರಾಠೆಯವರ ಮಾತು ಮನಗಾಣಬೇಕು. ಇಂಥ ಮಹತ್ವದ ಕೃತಿ ಕೊಟ್ಟ ಅವರನ್ನು ಅಭಿನಂದಿಸುವೆ. ಈ ಕೃತಿಗೆ ಡಾ.ಬಸವರಾಜ ಜಗಜಂಪಿ ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ.
ರಂಗಾಸಕ್ತರಿಗೆ, ರಂಗಕರ್ಮಿಗಳಿಗೆ ಉಪಯುಕ್ತ ಮಾಹಿತಿ ನೀಡುವ ಆಕರ ಗ್ರಂಥವಿದು. ಇದನ್ನು ಪ್ರಕಟಿಸಿದವರು ನಾಟಕ ಅಕಾಡಮಿ ಸಿಬ್ಬಂದಿ ಹಾಗೂ ಭಾಗವತರು ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿಕೊಂಡಿರುವ ಕೆ. ರೇವಣ್ಣ.