ಹೊಸ ವಿನ್ಯಾಸದ, ಅದೇ ವಿಶ್ವಾಸದ ‘ಕಾಣೆ ಆದವರು’

‘‘ನನ್ನ ಉಡುಪು ಮಾಡಿದವರ್ಯಾರು? ಬಿಗಿಯಾದ ರವಿಕೆಯೊಳಗೆ ಸಿಕ್ಕಿಹಾಕಿಕೊಳ್ಳಬೇಕೆಂದು ಯಾರು ನಿರ್ಧರಿಸುತ್ತಾರೆ? ಕಚ್ಚುವ ಜಿಪ್, ಬಿಗಿಯಾದ ಬಟನ್... ಇವೆಲ್ಲವುಗಳು ಬಂಧನಗಳೆ. ಇವನ್ನೆಲ್ಲ ಕಿತ್ತು ಬಿಸಾಡಿ ಹಗುರಾಗಬೇಕೆನಿಸುತ್ತದೆ...’’ ಹೀಗೆ ಕಲಾವಿದೆ ಗೀತಾ ಮೋಂಟಡ್ಕ ಹೇಳಿದಾಗ ಪ್ರೇಕ್ಷಕರು ಮೂಕರಾದರು.
ಬಟ್ಟೆಯ ಕುರಿತು ಇನ್ನೊಂದು ದೃಶ್ಯದಲ್ಲಿ ಕವಯಿತ್ರಿ ಎಚ್.ಎಸ್.ಮಧುರಾಣಿ ಅವರ ಕವಿತೆಯನ್ನು ಶಶಿಕಲಾ ಅವರು ಓದುತ್ತಾರೆ. ಅದು;
ಹೆಣ್ಣನ್ನು ಪೂಜಿಸುವುದೆಂದರೆ
ಅವಳನ್ನು ಹಾಡಹಗಲೇ ಬೆತ್ತಲಾಗಿಸಿ, ಸುಖಿಸಿ
ಬಲಿ ಹಿಡಿಯುವುದೇ ಇರಬಹುದು
ಸಪ್ತಮಾತೃಕೆಯೂ ಚಂಡಿ ಚಾಮುಂಡಿಯರೂ
ಮಹಿಷ ಮರ್ದಿನಿಯರೂ ಕಡೆಗೆ ಪೂತನಿ
ಶೂರ್ಪನಖಿಯರೂ ಹೆಣ್ತನವನ್ನು
ಹಿಡಿಗೈಯೊಳಗೆ ಮುಚ್ಚಿಕೊಂಡು ಓಡಿರಬಹುದು
ಬೇರೆಲ್ಲಾ ಪೊಳ್ಳು ಕತೆಗಳಿರಬಹುದು
ಪಾರ್ವತಿ, ಲಕ್ಷ್ಮೀ, ಸರಸ್ವತಿಯರು ಮಾತ್ರ
ಬೆಚ್ಚಗೆ ಗಂಡಂದಿರ ವಕ್ಷಪದ್ಮದೊಳಗೆ ಕೈಲಾಸ
ವೈಕುಂಠಗಳಲ್ಲಿ, ನರರಾಕ್ಷಸರು ನುಗ್ಗದೆಡೆಯಲ್ಲಿ
ಇಲ್ಲಿ ಏನೂ ನಡೆದೇ ಇಲ್ಲವೆಂಬಂತೆ
ಪತಿಯರ ಪಾದಸೇವೆಗೈಯುತ್ತಾ ಭಾಗ್ಯವತಿಯರಾಗಿ
ಕುಶಲೋಪರಿ ಮಾತಾಡುತ್ತಾ ವೀಳ್ಯ ಮೆಲ್ಲುವಾಗ...
ನಾನಿಲ್ಲಿ ಹರಿದು ಹೋಗಿರುವ ನಮ್ಮೆಲ್ಲರ ಮಾನವನ್ನು
ಯಾವ ನ್ಯಾಯವಸ್ತ್ರದಲ್ಲಿ ತೇಪೆ ಹಾಕುವುದೆಂದು
ತಿಳಿಯದೆ...
ಅವಳ ಮೈಯಿಂದ ಹರಿದಿರಬಹುದಾದ ರಕ್ತವನ್ನು
ಯಾವ ಪವಿತ್ರ ನದಿಯ ನೀರಿನಿಂದ
ತೊಳೆಯಬಹುದೆಂದು ಅರಿಯದೆ...
ಹೆಣ್ಣುಗಳು ಸೀರೆಯುಟ್ಟೂ ಬೆತ್ತಲಾಗಿರುವ
ಈ ಅರಾಜಕ ನಗರಿಗಳಲ್ಲಿ
ಇನ್ನು ಈ ಹೊಸ ವ್ಯಾಖ್ಯೆಯ ಪ್ರಜಾಪ್ರಭುತ್ವಕ್ಕೆ
ಹೇಗೆ ಹೊಂದಿಕೊಳ್ಳುವುದೆಂದು
ಹೆದರಿ, ನಡುಗಿ, ಹಿಡಿಯಂತಾಗಿ
ಈಗ ಬಟ್ಟೆ ತೊಡುವುದೆಂದರೆ ಹೇಗೆ?
ಯಾವ ಜಾತಿಯದ್ದು ತೊಡಲೆಂಬ
ಯೋಚನೆಯಲ್ಲಿ ಮುಳುಗಿದ್ದೇನೆ...
ಇದು ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಂಗಾಯಣದ ಹಿರಿಯ ಕಲಾವಿದರು ಪ್ರಸ್ತುತಪಡಿಸಿದ ‘ಕಾಣೆ ಆದವರು’ ನಾಟಕದ ಮಹತ್ವದ ದೃಶ್ಯಗಳು ಜೊತೆಗೆ ಇಡೀ ನಾಟಕ ಚಂದದ ದೃಶ್ಯಕಾವ್ಯವಾಗಿತ್ತು. ನಾಟಕದ ಆರಂಭದಲ್ಲಿ ಗಿಡದ ಹತ್ತಿರ ನಿಂತುಕೊಳ್ಳುವ ಕೆ.ಆರ್.ನಂದಿನಿ, ಗೀತಾ ಮೋಂಟಡ್ಕ ಹಾಗೂ ಬಿ.ಎನ್. ಶಶಿಕಲಾ ಅವರು ದಿನನಿತ್ಯದ ಕೆಲಸಕ್ಕೆ ಅಣಿಯಾಗಬೇಕೆಂದು ತುರುಬು ಕಟ್ಟಿಕೊಳ್ಳುತ್ತಾರೆ. ಇದನ್ನು ಕ್ಲೋಸ್ ಅಪ್‌ನಲ್ಲಿ ತೋರಿಸಿದ್ದು ಚೆನ್ನಾಗಿತ್ತು. ಹೀಗೆ ಸಾಮಾನ್ಯ ಚಟುವಟಿಕೆಗಳನ್ನು ಕಲಾತ್ಮಕವಾಗಿ ತೋರಿಸಿದ ನಿರ್ದೇಶಕ ಸೌರವ್ ಜಾಣ್ಮೆ ಮೆಚ್ಚಬೇಕು. ಹಾಗೆ ತುರುಬು ಕಟ್ಟಿಕೊಂಡ ನಂತರ ಕಾಫಿ ಮಾಡುವುದು, ಕಸಗುಡಿಸುವುದು, ರಂಗೋಲಿ ಹಾಕುವುದು, ಚಾಪೆ ಮೇಲೆ ಕುಳಿತುಕೊಂಡು ಕವಿತೆ ಓದುವುದು, ಫಿಶ್ ಪಾಂಡಿನಲ್ಲಿರುವ ಮೀನಿನೊಂದಿಗೆ ಮಾತನಾಡುವ ಗೀತಾ ‘‘ನಿನ್ನನ್ನು ಸಮುದ್ರಕ್ಕೆ ಬಿಡ್ತೀನಿ. ಬಿಡುಗಡೆ ಸಿಗುತ್ತೆ. ನನಗೂ ಬಿಡುಗಡೆ ಬೇಕು’’ ಎನ್ನುವ ಮಾತು ಗಮನಾರ್ಹ. ಹೀಗೆಯೇ ಸೆಗಣಿಯ ಮೂಲಕ ಗೀತಾ ಮೋಂಟಡ್ಕ ಅವರು ಜೋರಾಗಿ ಕುಳ್ಳು ತಟ್ಟುತ್ತಿದ್ದಾಗ ಪ್ರೇಕ್ಷಕರನ್ನೇ ತಟ್ಟುತ್ತಿದ್ದಾರೆ ಎನ್ನಿಸುತ್ತಿತ್ತು. ಹಾಗೆಯೇ ನಿತ್ಯ ತಾವು ಸಿದ್ಧಗೊಳ್ಳುವ ಅಂದರೆ ತಲೆ ಬಾಚಿಕೊಳ್ಳುವುದರಿಂದ ಹಿಡಿದು ಕಚೇರಿಗೆ ಹೊತ್ತಾಯಿತೆಂದು ಹೊರಡುವವರ ಗಡಿಬಿಡಿಯನ್ನು ತೋರಿಸಿದ್ದು ಅನನ್ಯ.
ರಂಗದ ಮೇಲೆ ಗೀತಾ ಮೋಂಟಡ್ಕ ಅವರು ಫಿಶ್ ಫ್ರೈ ಮಾಡುವ ದೃಶ್ಯವೊಂದು ಚೆನ್ನಾಗಿದೆ. ಹಾಗೆ ಫಿಶ್ ಫ್ರೈ ಮಾಡುತ್ತಲೇ ‘‘ಅಡುಗೆ ಮಾಡುವಾಗ ಹುರಿದು, ಕತ್ತರಿಸಿ, ಬೇಯಿಸಿ ಸಾಕಾಗಿಹೋಗಿದೆ. ಅಡುಗೆ ಮಾಡುವುದು ಪವಿತ್ರ ಆಚರಣೆಯಾ? ಇದು ಯಾರಿಗೋಸ್ಕರ? ನನಗೋಸ್ಕರನಾ? ಎಷ್ಟೊಂದು ಯಾಂತ್ರಿಕ? ಎಷ್ಟು ನಿರೀಕ್ಷಿತ? ಪ್ರತೀ ಅಡುಗೆ ಮಾಡುವಾಗ ನನ್ನ ದೇಹದ ಒಂದು ಭಾಗ ಹರಿದು ಹಂಚಿಹೋಗುತ್ತದೆ’’ ಎನ್ನುವ ಸಂಕಟವನ್ನು ಹೊರಹಾಕುತ್ತಾರೆ.
ಮುಖ್ಯವಾಗಿ ಇದು ಡಿವೈಸ್ ನಾಟಕ. ಈಗಿನ ಟ್ರೆಂಡಿನ ಹಾಗೆ ಡಿವೈಸ್ ನಾಟಕವಾಗಿದೆ ಅಂದರೆ ಕಲೆಯ ಜೊತೆಗೆ ಆ್ಯಕ್ಟಿವಿಸಮ್ ಒಳಗೊಂಡಿರುತ್ತದೆ. ಜೊತೆಗೆ ಕಲಾವಿದರು ಹಾಗೂ ನಿರ್ದೇಶಕರು ಸೇರಿ ಚರ್ಚಿಸುತ್ತ ಕಟ್ಟಿದ ನಾಟಕ. ಇದು ಬ್ರೆಕ್ಟ್ ಶೈಲಿ. ಸಮಾಜದ ಬದಲಾವಣೆಗಾಗಿ ರಂಗಭೂಮಿ ಎನ್ನುತ್ತಿದ್ದ ಬ್ರೆಕ್ಟ್, ತನ್ನ ನಾಟಕಗಳನ್ನು ಹಾಗೆ ರೂಪಿಸಿದ. ಹೀಗೆಯೇ ರಂಗಾಯಣದ ಕಲಾವಿದೆಯರು ಮಹಿಳೆಯರ ತಲ್ಲಣಗಳನ್ನು, ಸಂಕಟಗಳನ್ನು, ಸಮಸ್ಯೆಗಳನ್ನು, ಆತಂಕಗಳನ್ನು ಅನಾವರಣಗೊಳಿಸಿದ ನಾಟಕವಿದು. ಈ ಮೂಲಕ ತಮ್ಮ ರಂಗಾನುಭವಗಳನ್ನು ಎರಕ ಹೊಯ್ದಿದ್ದಾರೆ.
ತಾವು ಮಾನಸಿಕವಾಗಿ ಕಾಣೆಯಾಗಿದ್ದಲ್ಲದೆ ದೈಹಿಕವಾಗಿ ಕಾಣೆಯಾದವರ ಕುರಿತೂ ಪ್ರಸ್ತಾಪವಿದೆ. ದೂರದಲ್ಲಿರುವ ಮಗಳಿಗೆ ತಾಯಿ ಪತ್ರ ಬರೆದು, ನಿನ್ನ ಬಾಲ್ಯದ ಗೆಳತಿ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಳೆಂದು ತಿಳಿಸುತ್ತಾಳೆ. ಹೀಗೆಯೇ ಕಾಣೆಯಾದವರ ಕುರಿತು ಪೊಲೀಸ್ ಠಾಣೆಗೆ ಹೋಗಿ ವಿಚಾರಿಸುವ ದೃಶ್ಯವೂ ಗಮನಾರ್ಹ. ಕಾಣೆಯಾದವರು ಏನಾಗುತ್ತಾರೆ ಎಂದು ಪ್ರಶ್ನಿಸುವ ಮೂಲಕ ಹಲವಾರು ಆಯಾಮಗಳನ್ನು ಕಟ್ಟಿಕೊಡುತ್ತಾರೆ. ಬದುಕಿದ್ದೂ ಕಾಣೆಯಾದವರ ಹಾಗೆ ಇರುವ ಮಹಿಳೆಯರ ಮಾಹಿತಿಯೂ ಇದೆ ಅಂದರೆ ಗಂಡ, ಮಕ್ಕಳು, ಸಂಸಾರದ ಜಂಜಾಟದಲ್ಲಿ ಕಾಣೆಯಾದವರ ಪ್ರತಿನಿಧಿಗಳಾಗಿ ಅವರು ಕಾಣಿಸಿಕೊಂಡರು.
ನಾಟಕದ ಕೊನೆಯ ದೃಶ್ಯದಲ್ಲಿ ಹಳೆಯ ನಾಟಕಗಳ ತಮ್ಮ ಪಾತ್ರಗಳ ಸಂಭಾಷಣೆ ಹೇಳುವ ಕಲಾವಿದೆಯರು ಪುಟ್ಟ ಪುಟ್ಟ ದೋಣಿಗಳನ್ನು ಎತ್ತಿಡುತ್ತಾರೆ. ಚಿಕ್ಕವರಿದ್ದಾಗ ಕಲಾವಿದರಾಗಬೇಕೆಂಬ ಕನಸೆಂಬ ದೋಣಿಯನ್ನು ಬಿಟ್ಟರು. ಇದರಿಂದ ತಮಗೆ ಬಿಡುಗಡೆ ಸಿಕ್ಕಿರುವುದು ರಂಗಭೂಮಿ ಮೂಲಕ ಎನ್ನುವ ಅಚಲ ನಿಲುವು ಅವರದು. ಇದರೊಂದಿಗೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ‘ಅಗ್ನಿವರ್ಣ’ ನಾಟಕದ ಹಾಡನ್ನೂ ಹಾಡಿದರು.
ಚಿನ್ನ ಕನಸೇ ಉಳಕೋ ಕಡೆಯವರೆಗೂ
ನಿನ್ನ ಕೆಡಿಸೋರು ಹಿಡಿದಾರು ಸೆರಗು
ಈ ಹಾಡಿನ ಮೂಲಕ ನಾಟಕ ಕೊನೆಗೊಳ್ಳುತ್ತದೆ. ಈಮೂಲಕ ಮಹಿಳೆಯರನ್ನು ಎಚ್ಚರಿಸುತ್ತಾರೆ, ಎಚ್ಚರಿಕೆ ಕೊಡುತ್ತಾರೆ. ಜೊತೆಗೆ ಕನಸು ಉಳಿಯಲಿ ಎನ್ನುವ ಆಶಯವೂ ಇದೆ. ಈ ಕುರಿತು ಗೀತಾ ಮೋಂಟಡ್ಕ ಅವರು ‘‘ನಮ್ಮನ್ನು ಬಂಧಿಸಿರುವ ಅಗೋಚರ ಸರಪಳಿಗಳು ಇಲ್ಲದೆ ಇರ್ತಿದ್ರೆ ಜೀವನ ಹೇಗಿರುತ್ತಿತ್ತು? ಎಲ್ಲಿ ಗೋಡೆಗಳು ಮತ್ತು ಸೀಮಾರೇಖೆಗಳು ಇಲ್ಲವೋ, ಎಲ್ಲಿ ಇದು ನನ್ನದೋ ಇದು ನಿನ್ನದೋ ಅನ್ಯಾಯ, ಭೇದಭಾವ ಇಲ್ಲವೋ, ಕನಸು ಕಾಣುವುದು ಶ್ರೀಮಂತಿಕೆ ಮೇಲೆ ಎಲ್ಲಿ ಅವಲಂಬಿತವಾಗಿಲ್ಲವೋ, ಎಲ್ಲಿ ಬಡತನ ಮತ್ತು ಅನಕ್ಷರತೆ ಕಟ್ಟಿ ಹಾಕಲಿಲ್ಲವೋ ಅಂಥ ದೇಶವನ್ನು ಕಲ್ಪಿಸಿಕೊಳ್ಳಲು ನಿನಗೆ ಸಾಧ್ಯನಾ? ಗೊತ್ತು, ನಂಬೋಕೆ ಅಸಾಧ್ಯ. ರಮಣೀಯವಾದ ಕಲ್ಪನೆ ಅಸಂಬದ್ಧ. ಒಂದು ರೀತಿಯ ಮೂರ್ಖತನ. ಹಾಗಾದರೆ ಸ್ವತಂತ್ರದ ಕನಸು ಕಾಣೋದು ನಿಜವಾಗಲೂ ಮೂರ್ಖತನವಾ? ಒಂದು ದಿನ ನಾವೆಲ್ಲ ಸ್ವತಂತ್ರರಾಗ್ತೀವಿ, ಮುಕ್ತರಾಗ್ತೀವಿ. ಅಲ್ಲಿಯವರೆಗೆ ನಾವು ಕನಸು ಕಾಣ್ತಾನೇ ಇರ್ತೀವಿ...’’ ಎನ್ನುತ್ತಾರೆ.
ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ ಕಳೆದ ವರ್ಷದ ವಿದ್ಯಾರ್ಥಿ ಸೌರವ್ ಪೊದ್ದಾರ್ ಹೊಸ ವಿನ್ಯಾಸದ ಮೂಲಕ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಅಷ್ಟೇ ವಿಶ್ವಾಸದಿಂದ ಮತ್ತು ಸಮರ್ಥವಾಗಿ ರಂಗಾಯಣದ ಕಲಾವಿದರು ಅಭಿನಯಿಸದೆ ಪಾತ್ರಗಳೇ ತಾವಾಗಿದ್ದಾರೆ.