Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಮೂರು ಹಗಲು, ಮೂರು ರಾತ್ರಿಗಳ ಮಹಾಬೆರಗು

ಮೂರು ಹಗಲು, ಮೂರು ರಾತ್ರಿಗಳ ಮಹಾಬೆರಗು

ಗಣೇಶ ಅಮೀನಗಡಗಣೇಶ ಅಮೀನಗಡ21 March 2025 2:12 PM IST
share
ಮೂರು ಹಗಲು, ಮೂರು ರಾತ್ರಿಗಳ ಮಹಾಬೆರಗು
ರಂಗೋತ್ಸವಕ್ಕಾಗಿ ಲಾಂಛನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನೋಡಿ ವಿಮರ್ಶೆ ಬರೆವ ಸ್ಪರ್ಧೆಗಳನ್ನು ಏರ್ಪಡಿಸಿದ್ದರಿಂದ ವಿದ್ಯಾರ್ಥಿಗಳು ಭಾಗವಹಿಸುವುದರ ಜೊತೆಗೆ ನಾಟಕಗಳನ್ನೂ ನೋಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡ 15 ವಿದ್ಯಾರ್ಥಿಗಳಿಗೆ ಕ್ಯಾನ್ವಾಸ್, ಬ್ರಶ್, ಪೇಂಟ್ ಅನ್ನು ರಂಗಾಯಣ ವತಿಯಿಂದ ಕೊಡಿಸಿದ್ದರಿಂದ ವಿಷಮ ವಿವಾಹದಂಥ ಹಳೆಯ ನಾಟಕ, ಹಂದಿಗನೂರು ಸಿದ್ರಾಮಪ್ಪ ಅವರಂಥ ಮೇರುನಟರ ಪೇಂಟಿಂಗ್ ಸೃಷ್ಟಿಗೊಂಡವು.

ಅಲ್ಲಿ ಏನಿತ್ತು? ಏನಿಲ್ಲ?

ಹಗಲು ಹೊತ್ತು ವಿಚಾರ ಸಂಕಿರಣ, ಚಿತ್ರಕಲೆ ಹಾಗೂ ರಂಗದಾಖಲೆಗಳ ಪ್ರದರ್ಶನ. ಸಂಜೆ ರಂಗ ಸಂವಾದ, ರಂಗಗೌರವ, ರಂಗಗೀತೆಗಳ ಗಾಯನ, ಕೊನೆಗೆ ನಾಟಕ ಪ್ರದರ್ಶನ. ಹೀಗೆ ರಂಗಾಸಕ್ತರಿಗೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮೂರು ದಿನಗಳವರೆಗೆ ರಂಗರಸದೌತಣವಿತ್ತು.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ಇದೇ ಮಾರ್ಚ್ 15ರಿಂದ 17ರ ವರೆಗೆ ಆಯೋಜಿಸಿದ್ದ ಕನ್ನಡ, ತಮಿಳು ಹಾಗೂ ತೆಲುಗು ನಾಟಕಗಳ ರಂಗೋತ್ಸವವು ಹೋಳಿಹಬ್ಬದಷ್ಟೇ ರಂಗಾಗಿತ್ತು. ಇದನ್ನು ದಾವಣಗೆರೆಯ ವಿದ್ಯಾನಗರದ ದೃಶ್ಯಕಲಾ ಮಹಾವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಪರಿಣಾಮ ಅಲ್ಲಿನ ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದರ ಯಶಸ್ಸಿಗೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಬಹಳ ಶ್ರಮಿಸಿದರು.

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪರಿಣಾಮ ಚಿತ್ರಕಲಾ ವಿದ್ಯಾರ್ಥಿಗಳು ಸಕ್ರಿಯರಾಗಿ ತೊಡಗಿಕೊಂಡರು. ರಂಗೋತ್ಸವಕ್ಕಾಗಿ ಲಾಂಛನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನೋಡಿ ವಿಮರ್ಶೆ ಬರೆವ ಸ್ಪರ್ಧೆಗಳನ್ನು ಏರ್ಪಡಿಸಿದ್ದರಿಂದ ವಿದ್ಯಾರ್ಥಿಗಳು ಭಾಗವಹಿಸುವುದರ ಜೊತೆಗೆ ನಾಟಕಗಳನ್ನೂ ನೋಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡ 15 ವಿದ್ಯಾರ್ಥಿಗಳಿಗೆ ಕ್ಯಾನ್ವಾಸ್, ಬ್ರಶ್, ಪೇಂಟ್ ಅನ್ನು ರಂಗಾಯಣ ವತಿಯಿಂದ ಕೊಡಿಸಿದ್ದರಿಂದ ವಿಷಮ ವಿವಾಹದಂಥ ಹಳೆಯ ನಾಟಕ, ಹಂದಿಗನೂರು ಸಿದ್ರಾಮಪ್ಪ ಅವರಂಥ ಮೇರುನಟರ ಪೇಂಟಿಂಗ್ ಸೃಷ್ಟಿಗೊಂಡವು. ಇವೆಲ್ಲವೂ ನಾಟಕ ನಡೆಯುತ್ತಿದ್ದ ಬಯಲು ರಂಗಮಂದಿರದ ಆವರಣದಲ್ಲಿ ಪ್ರದರ್ಶನಗೊಂಡವು. ರಂಗೋತ್ಸವ ಸಲುವಾಗಿಯೇ ಏರ್ಪಡಿಸಿದ ಲಾಂಛನ ಸ್ಪರ್ಧೆಗೆ 48 ವಿದ್ಯಾರ್ಥಿಗಳು ಭಾಗವಹಿಸಿ 48 ಲಾಂಛನಗಳನ್ನು ಸಿದ್ಧಪಡಿಸಿದರು. ಇದರಲ್ಲಿ ಚಿದಾನಂದ ಅವರ ಲಾಂಛನ ಆಯ್ಕೆಯಾಗಿದ್ದು, ಮೂರು ಸಾವಿರ ರೂಪಾಯಿ ಬಹುಮಾನವೂ ಪಡೆಯಿತು. ಮುಖ್ಯವಾಗಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಜೊತೆಗೆ ದೃಶ್ಯಕಲಾ ಕಾಲೇಜಿನ ಹಾಗೂ ಇತರ ಕಾಲೇಜಿನ ವಿದ್ಯಾರ್ಥಿಗಳು ನಾಟಕಗಳನ್ನು ನೋಡಿದರು. ಇದರಲ್ಲಿ ಅನೇಕರು ಮೊದಲ ಬಾರಿಗೆ ನಾಟಕ ನೋಡಿದವರೂ ಇದ್ದರು. ಹೀಗೆ ದಾವಣಗೆರೆ ರಂಗಾಯಣಕ್ಕೆ ಮೊದಲ ಬಾರಿಗೆ ರಾಷ್ಟ್ರೀಯ ನಾಟಕೋತ್ಸವ ಮೂಲಕ ಹೊಸ ಪ್ರೇಕ್ಷಕರನ್ನು ತಲುಪಿದ ಹೆಗ್ಗಳಿಕೆ ಸಲ್ಲಬೇಕು. ಅದರಲ್ಲೂ ದೃಶ್ಯಕಲಾ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಾಟಕಗಳಾಗಿದ್ದು ಮೊದಲ ಬಾರಿಗೆ.

ಪೇಂಟಿಂಗ್ ಜೊತೆಗೆ ಇನ್ನೊಂದು ಗಮನ ಸೆಳೆದುದು ರಂಗ ದಾಖಲಾತಿ. ಅಜ್ಜಂಪುರ ಕೃಷ್ಣಮೂರ್ತಿ ಅವರು ತಮ್ಮ ಅನನ್ಯ ರಂಗ ದಾಖಲಾತಿ ಕೇಂದ್ರದಿಂದ 1975ರಿಂದ ಇಲ್ಲಿಯವರೆಗೆ ನಿರಂತರವಾಗಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರಯೋಗಗೊಳ್ಳುವ ನಾಟಕಗಳ ಕುರಿತು, ರಂಗಕರ್ಮಿಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆ, ಪರಿಚಯವನ್ನು ಸಂಗ್ರಹಿಸಿ ಪ್ರದರ್ಶಿಸಿದರು. ವೃತ್ತಿಯಲ್ಲಿ ಅವರು ಕೃಷಿಕರು. ಆದರೆ ಪ್ರವೃತ್ತಿಯಲ್ಲಿ ಅಜ್ಜಂಪುರದ ಗೆಳೆಯರ ಬಳಗ ರಂಗತಂಡದ ಕಲಾವಿದರು. ನೀನಾಸಂನ ಮೊದಲ ಸಾಲಿನ ವಿದ್ಯಾರ್ಥಿಯಾದ ಅವರು ಅಭಿನಯದ ಜೊತೆಗೆ ಸಂಘಟನೆ, ಶಿಬಿರದ ನಿರ್ದೇಶಕರಾಗಿ ದುಡಿದಿದ್ದಾರೆ. 75 ವರ್ಷ ವಯಸ್ಸಿನ ಅವರ ರಂಗ ಸಂಗ್ರಹದ ದಾಖಲಾತಿಯೂ ದಾಖಲೆಯೇ. ಇದರೊಂದಿಗೆ ಶತಾಯುಷಿ ರಂಗ ಕಲಾವಿದ ಗುಬ್ಬಿ ಚನ್ನಬಸಯ್ಯ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ. ನಾಗರತ್ನಮ್ಮ ಮರಿಯಮ್ಮನಹಳ್ಳಿ ಹಾಗೂ ಹಿರಿಯ ಕಲಾವಿದೆ ಜಯಲಕ್ಷ್ಮಿ ಹೆಗಡೆ ಅವರೊಂದಿಗಿನ ಸಂವಾದದ ಮೂಲಕ ತಮ್ಮ ರಂಗಾನುಭವಗಳನ್ನು ಹಂಚಿಕೊಂಡರು. ಅದರಲ್ಲೂ ಗುಬ್ಬಿ ಚನ್ನಬಸಯ್ಯ ಅವರು ‘ಬಂದದ್ದೆಲ್ಲ ನಂದು, ಹೋದದ್ದೆಲ್ಲ ನಂದಲ್ಲ’ ಎನ್ನುವ ಮಾತನ್ನೇ ಆಧಾರವಾಗಿಟ್ಟುಕೊಂಡು ರಂಗೋತ್ಸವ ಉದ್ಘಾಟಿಸಿದ ಡಾ.ಮುಖ್ಯಮಂತ್ರಿ ಚಂದ್ರು ಅವರು ಸಮಕಾಲೀನ ರಾಜಕೀಯಕ್ಕೆ ಹೋಲಿಸಿ ಅದರಲ್ಲೂ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರಿತೇ ಮಾತನಾಡಿದ್ದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿತು. ಹಾಗೆಯೇ ರಾಮಾಯಣ, ಮಹಾಭಾರತವನ್ನು ಅರ್ಥ ಮಾಡಿಕೊಂಡಿದ್ದು ರಂಗಭೂಮಿ ಮೂಲಕ ಎಂದು ಮುಖ್ಯಮಂತ್ರಿ ಚಂದ್ರು ಅವರ ಮಾತು ಗಮನಾರ್ಹ.

‘ಬದಲಾಗುತ್ತಿರುವ ವೃತ್ತಿ ರಂಗಸ್ವರೂಪ’ ಕುರಿತು ಮಾತನಾಡಿದ ವಿಶ್ವನಾಥ ವಂಶಾಕೃತಮಠ ಅವರು ‘‘ಕಂಚಿನ ಕಂಠದ ಪಾತ್ರಧಾರಿಗಳಿದ್ದರು, ಅದ್ಭುತ ಪರದೆಗಳಿದ್ದವು, ದೊಂದಿಗಳ ಬೆಳಕಿನಲ್ಲಿ ನಾಟಕಗಳಾಗುತ್ತಿದ್ದವು. ಆದರೆ ಇಂದು ಅದ್ಭುತ ಪರದೆಗಳಿಲ್ಲ. ಕಂಚಿನ ಕಂಠದ ಕಲಾವಿದರಿಲ್ಲ. ಅಸ್ಖಲಿತವಾಗಿ ಸಂಭಾಷಣೆ ಹೇಳುವ ನಟರಿಲ್ಲ. ಆವತ್ತಿನ ಆಜಾನುಬಾಹು, 56 ಇಂಚಿನ ಎದೆ ಹೊಂದಿದ ಕಲಾವಿದರಿಲ್ಲ. ಇದಕ್ಕೆ ಹವಾಮಾನ, ಜೈವಿಕ ಬದಲಾವಣೆಗಳು ಕಾರಣ. ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ ನಾಟಕಗಳನ್ನು ಆಡಲಾಗುತ್ತಿಲ್ಲ. ಈಗೇನಿದ್ದರೂ ಸಾಮಾಜಿಕ ನಾಟಕಗಳ ಕಾಲ. ಎಂಭತ್ತರ ದಶಕದಲ್ಲಿ 70-80 ಕಂಪೆನಿಗಳಿದ್ದವು. 2000ದಲ್ಲಿ 30-40 ಕಂಪೆನಿಗಳಿದ್ದವು. ಕಳೆದ ವರ್ಷದ ಸಮೀಕ್ಷೆಯಲ್ಲಿ 26 ಕಂಪೆನಿಗಳು ಮಾತ್ರ ಉಳಿದಿವೆ. ಆರು ಕಂಪೆನಿಗಳು ವೀರಗಾಸೆ, ಅಲೆಮಾರಿ ಜನಾಂಗದವರವು. ಸದಭಿರುಚಿಯ ನಾಟಕಕಾರರಲ್ಲದೆ, ಸದಭಿರುಚಿಯ ಪ್ರೇಕ್ಷಕರಿದ್ದರು. ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಕಂಪೆನಿ ಮಾಲಕರು ಹಳೆಯ ನಾಟಕಗಳ ಹೆಸರುಗಳನ್ನು ಬದಲಾಯಿಸಿ ಆಡುತ್ತಿದ್ದಾರೆ’’ ಎನ್ನುವ ಅಸಮಾಧಾನ ಅವರದು.

‘‘ರೈತ ಚಳವಳಿಗಳನ್ನು ಹತ್ತಿಕ್ಕಲಾಗುತ್ತಿದೆ. ಉದ್ಯೋಗಕ್ಕಾಗಿ ಯುವಕರು ಬೀದಿಯಲ್ಲಿದ್ದಾರೆ. ಇಂಥ ವಿಷಯಗಳ ಕುರಿತು ನಾಟಕಗಳನ್ನಾಡಬೇಕು. ಹಳೆಯ ಚಿನ್ನಾಭರಣಗಳನ್ನು ಬಿಸಾಕದೆ ಹೊಸ ಆಭರಣಗಳನ್ನಾಗಿಸಿ ಧರಿಸುವ ಹಾಗೆ ಪರಂಪರೆಯನ್ನು ಬಿಡದೆ ಹೊಸತನ್ನು ರೂಢಿಸಿಕೊಳ್ಳಬೇಕು’’ ಎನ್ನುವ ಆಶಯ ಪ್ರಾಧ್ಯಾಪಕ ಮುಹಮ್ಮದ್ ಅಲಿ ಹೊಸೂರು ಅವರದಾಗಿತ್ತು. ಹೀಗೆಯೇ ಆಶಾವಾದ ಹೊತ್ತವರು ಹಿರಿಯ ಪತ್ರಕರ್ತ ಅಜಿತ್ ಘೋರ್ಪಡೆ- ಇಂದಿನ ಕನ್ನಡ ವೃತ್ತಿ ರಂಗಭೂಮಿಯ ಪರಿಸ್ಥಿತಿಯು ಬಹುಪಾಲು ನಿರಾಶಾದಾಯಕವಾಗಿದೆಯಾದರೂ ಇಂದಲ್ಲ ನಾಳೆ ಸುಧಾರಿಸುತ್ತದೆ ಎಂಬ ಆಶಾಕಿರಣವೊಂದಿದೆ. ಗತವೈಭವ ಮರುಕಳಿಸುವಂತೆ ಮಾಡಲು ಇಂದಿನ ಪರಿಸ್ಥಿತಿಯ ಪಿತೂರಿ, ಒತ್ತಡಗಳಲ್ಲಿ ಸಾಧ್ಯವೇ ಇಲ್ಲ ಎನಿಸುತ್ತಿದೆ. ಆದರೂ ಕೆಲ ಕಂಪೆನಿಗಳು ರಂಗಪಾವಿತ್ರ್ಯ, ಶಿಸ್ತು, ಶ್ರದ್ಧೆಯ ಚೌಕಟ್ಟಿನಲ್ಲಿ ಇರುವುದರಿಂದ ಈ ಆಶಾಕಿರಣ ಮೂಡಿದೆ. ಇದು ಪ್ರಕಾಶಮಾನವಾಗಿ ಬೆಳಗೀತು ಎಂಬ ಆಶಾವಾದ ತಳೆಯೋಣ. ಯಾಕೆಂದರೆ ಪಂ.ಪುಟ್ಟರಾಜ ಗವಾಯಿಗಳ ಕಂಪೆನಿಯು ಮಾದರಿಯಾಗಿ ಇನ್ನೂ ನಮ್ಮ ಮುಂದೆ ಇದೆ. ರಂಗಭೂಮಿಯ ಶಿಸ್ತು, ಶ್ರದ್ಧೆ, ಮರ್ಯಾದೆಯ ಚೌಕಟ್ಟಿನಲ್ಲಿ ಅದು ನಡೆಯುತ್ತಿದೆ. ಹಾಗೆ ನಡೆಯುವ ಕಲಾವಿದರೂ ಇದ್ದಾರೆ. ಹಾಗೆಂದೇ ವೃತ್ತಿ ರಂಗಭೂಮಿ ಇನ್ನೂ ಸಂಪೂರ್ಣ ಹದಗೆಟ್ಟಿಲ್ಲ. ಗತವೈಭವದ ಅರ್ಧದಷ್ಟಾದರೂ ಮರುಕಳಿಸಲಿ ಎಂದು ಆಶಿಸೋಣ. ಇದಕ್ಕೆ ಪೂರಕವಾಗಿ ಹಿರಿಯ ಲೇಖಕರಾದ ಡಾ.ಎ.ಬಿ.ರಾಮಚಂದ್ರಪ್ಪ ಅವರು ಮತ್ತೊಂದು ಆಶಯವನ್ನು ವ್ಯಕ್ತಪಡಿಸಿದರು- ‘‘ರಂಗಭೂಮಿಯ ಮೂಲಕ ಸಂವಿಧಾನದ ಆಶಯಗಳನ್ನು ತಲುಪಿಸಬೇಕು. ಯುವಜನರಿಗೆ ಈ ದೇಶದ ಇಆಂವಿಧಾನಿಕ ಮೌಲ್ಯಗಳನ್ನು, ಸಾಮಾಜಿಕ ಜವಾಬ್ದಾರಿಗಳನ್ನು ಮತ್ತು ಪಾರಂಪರಿಕ ಮೌಲ್ಯಗಳನ್ನು ತಲುಪಿಸುವುದರ ಜೊತೆಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ ದೊಡ್ಡ ಜವಾಬ್ದಾರಿ ವೃತ್ತಿ ರಂಗಭೂಮಿ ಮೇಲಿದೆ. ವೃತ್ತಿ ರಂಗಭೂಮಿಯು ನಮ್ಮ ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಬೇಕು. ಆದರೆ ವೃತ್ತಿ ರಂಗಭೂಮಿಯನ್ನು ಆಳಿದವರು ಪುರುಷರೇ. ಹೀಗಿದ್ದಾಗ ಮಹಿಳೆಯರು ಪಾತ್ರ ನಿರ್ವಹಿಸುತ್ತಾರೆಂದರೆ ಕೀಳಾಗಿ ನೋಡುವವರೇ ಹೆಚ್ಚು. ಅವರನ್ನು ತುಚ್ಛೀಕರಿಸಿ ನೋಡದೆ, ಕೀಳಾಗಿ ಮಾತಾಡದೆ ಗೌರವದಿಂದ ಕಾಣಬೇಕು. ಇದು ಸಾಮಾಜಿಕ ಜವಾಬ್ದಾರಿ ಆಗಬೇಕು’’ ಎನ್ನುವ ಸಲಹೆ ಅವರದು.

‘‘ಆದರೆ ಅಂದಿನ ನಾಟಕಗಳಲ್ಲಿಯ ಹಾಸ್ಯಕ್ಕೂ ಇಂದಿನ ನಾಟಕಗಳಲ್ಲಿಯ ಹಾಸ್ಯಕ್ಕೂ ಅಜಗಜಾಂತರವಿದೆ. ಅಂದಿನದು ರಾಜಹಾಸ್ಯ (ರಾಯಲ್ ಕಾಮಿಡಿ). ಇಂದಿನದು ರಾಡಿ ಹಾಸ್ಯ. ಈ ಮಾತನ್ನು ಹೇಳಲು ನನಗೆ ಕಿಂಚಿತ್ತೂ ಹಿಂಜರಿಕೆ, ಭಯ, ಭಿಡೆ ಏನೂ ಇಲ್ಲ. ಅಂದಿನ ನಾಟಕಗಳಲ್ಲಿ ಹಾಸ್ಯದ ಮಾತುಗಳಲ್ಲಿಯೂ ಮಹತ್ವದ ‘ಬೋಧೆ’ ಇತ್ತು. ಇಂದಿನ ಬಹುಪಾಲು ನಾಟಕಗಳ ಹಾಸ್ಯದ ಮಾತುಗಳಲ್ಲಿರುವುದು ಬರೀ ಬೂದಿ’’ ಎನ್ನುವ ಅಜಿತ್ ಘೋರ್ಪಡೆ ಅವರ ಮಾತುಗಳನ್ನು ಕಂಪೆನಿಗಳವರು ಗಮನಿಸಬೇಕು.

ರಂಗೋತ್ಸವದ ಮೂರು ದಿನಗಳವರೆಗೆ ಕಾರ್ಯಕ್ರಮ ನಿರೂಪಿಸಿ, ರಂಗಗೀತೆಗಳನ್ನು ಹಾಡಿದವರು ಡಾ. ಶೃತಿ ರಾಜ್. ವಿಶೇಷವೆಂದರೆ; ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಏರ್ಪಡಿಸಿದ್ದ ರಂಗ ಸಂಗೀತ ಶಿಬಿರದಲ್ಲಿ ಕಲಿತ ರಂಗಗೀತೆಗಳನ್ನೇ ಅವರು ಹಾಡಿದರು.

ಇನ್ನು ಪ್ರಯೋಗಗೊಂಡ ನಾಟಕಗಳೆಂದರೆ; ಮಹಾದೇವ ಹೊಸೂರು ರಚನೆಯ, ಜೇವರ್ಗಿ ರಾಜಣ್ಣ ನಿರ್ದೇಶನದ ಶ್ರೀ ವಿಶ್ವಜ್ಯೋತಿ ಪಂಚಾಕ್ಷರ ನಾಟಕ ಸಂಘ ಪ್ರಸ್ತುತಪಡಿಸಿದ ನಾಟಕ ‘ಅಕ್ಕ ಅಂಗಾರ ತಂಗಿ ಬಂಗಾರ’. ಮರುದಿನ ಪಾಂಡಿಚೇರಿಯ ವೆಲಿಪ್ಪಡೈ ಥಿಯೇಟರ್ ಮೂಮೆಂಟ್ ತಂಡವು ಎಸ್.ರಾಮಸ್ವಾಮಿ ರಚಿಸಿ, ನಿರ್ದೇಶಿಸಿದ ‘ನಡಾಪಾವಾಡೈ’ ಎಂಬ ತಮಿಳು ನಾಟಕವನ್ನು ಪ್ರಯೋಗಿಸಿತು. ಇದರ ಮರುದಿನ ಹೈದರಾಬಾದಿನ ಶ್ರೀ ವೆಂಕಟೇಶ್ವರ ಸುರಭಿ ಥಿಯೇಟರ್ ತಂಡವು ಸುರಭಿ ಜಯಚಂದ್ರ ವರ್ಮಾ ರಚಿಸಿ, ನಿರ್ದೇಶಿಸಿದ ‘ಮಾಯಾಬಜಾರ್’ ಎಂಬ ತೆಲುಗು ನಾಟಕವನ್ನು ಪ್ರಸ್ತುತಪಡಿಸಿತು. ಈ ನಾಟಕಕ್ಕಂತೂ ಪ್ರೇಕ್ಷಕರು ಕಿಕ್ಕಿರಿದಿದ್ದರು.

ಹೀಗೆ ಮೂರು ಹಗಲು, ಮೂರು ರಾತ್ರಿಗಳ ಮಹಾಬೆರಗು ಎಂದವರು ಮಲ್ಲಿಕಾರ್ಜುನ ಕಡಕೋಳ. ‘‘ಅನೇಕ ಮಾದರಿಗಳನ್ನು ಕಂಡುಕೊಳ್ಳಲು ಸಾಧ್ಯವಾಯಿತು. ನಮ್ಮ ವೃತ್ತಿ ರಂಗಭೂಮಿ ಕುರಿತ ಅಸ್ಮಿತೆ ಕಂಡುಕೊಳ್ಳಲು ವಿಚಾರ ಸಂಕಿರಣ ಆಯೋಜಿಸಿದ್ದೆವು. ಮಯಾಬಜಾರ್ ನಾಟಕವಂತೂ ಇನ್ನೊಮ್ಮೆ ಆಡಿಸಿರಿ ಎಂದ ಪ್ರೇಕ್ಷಕರು ಹೆಚ್ಚಿದ್ದಾರೆ. ಈ ರಂಗೋತ್ಸವದ ಮುಂದುವರಿದ ಭಾಗವಾಗಿ ವಿಶ್ವ ರಂಗಭೂಮಿ ದಿನವಾದ ಮಾರ್ಚ್ 27ರಂದು ಮೈಸೂರಿನ ಪುಟ್ಟಣ್ಣಯ್ಯ ಅವರ ತಂಡದಿಂದ ರಂಗಸಂಗೀತ ಏರ್ಪಡಿಸಿದ್ದೇವೆ ಜೊತೆಗೆ ವಿದ್ಯಾರ್ಥಿಗಳ ರಂಗ ವಿಮರ್ಶೆಗಳಿಗೆ ಬಹುಮಾನ ಕೊಡ್ತೇವೆ’’ ಎಂದು ಅವರು ಖುಷಿ ಹಂಚಿಕೊಂಡರು.

ಅವರು ತಮ್ಮ ರಂಗಾಯಣದ ಮೂಲಕ ಹಚ್ಚಿದ ರಂಗಬೆಳಗು ಸದಾ ಬೆಳಗಲಿ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X