ವಿಜಾಪುರ ಮಂದಿಯೂ ಮರೆತರೆ ನಟಕೇಸರಿಯನ್ನು?
ಉತ್ತರ ಕರ್ನಾಟಕದಲ್ಲಿ ನಟಕೇಸರಿ ಹಂದಿಗನೂರು ಸಿದ್ರಾಮಪ್ಪ (15.9.1900-10.11.1947) ಅವರ ಹೆಸರು ರಂಗಾಸಕ್ತರಿಗೆಲ್ಲ ಗೊತ್ತು. ಅವರ ನಾಟಕ, ಅಭಿನಯ ನೋಡಿದವರು ಎಂಭತ್ತು-ತೊಂಭತ್ತು ವರ್ಷ ದಾಟಿದ್ದಾರೆ. ಹಾಗೆ ಉಳಿದವರೂ ಕಮ್ಮಿ. ಕಳೆದ ವಾರ ವಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕಾಲಿಟ್ಟಾಗ ಪ್ರವೇಶಕ್ಕೇ ಹಂದಿಗನೂರು ಸಿದ್ರಾಮಪ್ಪ ಅವರ ಭಾವಚಿತ್ರ ಕಂಡು ಕೈ ಮುಗಿದೆ. ಅವರ ಹೆಸರನ್ನು ವಿಜಾಪುರ(ವಿಜಯಪುರ)ದ ಯಾವುದೇ ರಸ್ತೆಗೂ ಇಟ್ಟಿಲ್ಲ. ಸದ್ಯ ಅವರ ಹೆಸರನ್ನು ಕಂದಗಲ್ ಹನುಮಂತರಾಯ ರಂಗಮಂದಿರ ಹಿಂಭಾಗದಲ್ಲಿ ಸಿದ್ಧಗೊಳ್ಳುತ್ತಿರುವ ಬಯಲು ರಂಗಮಂದಿರಕ್ಕೆ ಇಡಲು ನಿರ್ಧರಿಸಲಾಗಿದೆ. ಇನ್ನು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಅವರ ಹೆಸರಿನ ಸ್ಮಾರಕ ಭವನ ನನೆಗುದಿಗೆ ಬಿದ್ದಿದೆ. ಸಿಂದಗಿಯ ಆರ್.ಡಿ. ಪಾಟೀಲ ಕಾಲೇಜು ಎದುರಿನ, ವಿಜಾಪುರ ರಸ್ತೆಯ ಬದಿಯಲ್ಲಿ ಭವನ ನಿರ್ಮಾಣಗೊಳ್ಳಬೇಕಿದ್ದುದು ಹತ್ತಾರು ವರ್ಷಗಳ ಹಿಂದೆ. ನಿಗದಿಗೊಳಿಸಿದ ಜಾಗದಲ್ಲಿ ನಾಮಫಲಕ ಮಾತ್ರವಿದೆ. ಕಟ್ಟಡ ಕಾಮಗಾರಿ ಆಗಬೇಕಿದೆ. ಅನುದಾನ ಬಿಡುಗಡೆಗೊಂಡರೂ ಭವನ ನಿರ್ಮಾಣವಾಗಿಲ್ಲ. ಸಿಂದಗಿಯಲ್ಲಿಯೇ ಅವರ ಸ್ಮಾರಕ ಭವನ ಆಗುತ್ತಿರುವುದು ಏಕೆಂದರೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದವರು ಸಿದ್ರಾಮಪ್ಪ ಅವರು. ರಜಪೂತ ಜನಾಂಗದವರಾದ ಅವರು ಅಭಿಜಾತ ಕಲಾವಿದರು. ಸಾಮಾನ್ಯವಾಗಿ ರಜಪೂತ ಜನಾಂಗದವರು ರಂಗಭೂಮಿಯತ್ತ ವಾಲಿದ್ದು ಅಪರೂಪ. ಈ ಕಾರಣಕ್ಕಾಗಿ ಅವರ ಸಮುದಾಯವನ್ನು ಹೆಸರಿಸಿದೆ.
1998ರಲ್ಲಿ ವಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ 50ನೇ ಪುಣ್ಯಸ್ಮರಣೆ ನಡೆದಿತ್ತು. ಆಮೇಲೆ ಅವರ ಹೆಸರು ಕೇಳುವುದು ಅಪರೂಪವಾಗಿದೆ. ಅವರ ಮೊದಲ ಪತ್ನಿ ಗಿರಿಜಾಬಾಯಿ, ಎರಡನೆಯ ಪತ್ನಿ ಯಶೋದಾಬಾಯಿ. ಗಿರಿಜಾಬಾಯಿ ಅವರ ಮಕ್ಕಳಾದ ಕೃಷ್ಣಾಬಾಯಿ ಹಾಗೂ ಲಕ್ಷ್ಮೀಬಾಯಿ ಅವರು ರಂಗಕಲಾವಿದರಾಗಿದ್ದರು. ಇವರಿಬ್ಬರೂ ಹತ್ತನ್ನೆರಡು ವರ್ಷಗಳ ಹಿಂದೆ ತೀರಿಕೊಂಡರು. ಈ ಎಲ್ಲ ಮಾಹಿತಿ ಹಂಚಿಕೊಂಡ ವಿಜಾಪುರದ ಕನ್ನಡ ಉಪನ್ಯಾಸಕ, ಲೇಖಕ ಎ.ಎಲ್.ನಾಗೂರ ಅವರು ‘‘ಸಿಂದಗಿಯಲ್ಲಿ ಆದಷ್ಟು ಬೇಗ ಭವನ ನಿರ್ಮಾಣಗೊಳ್ಳಬೇಕು. ಅಲ್ಲಿ ನಿರಂತರವಾಗಿ ರಂಗಚಟುವಟಿಕೆಗಳು ನಡೆಯಬೇಕು. ಈ ಮೂಲಕ ಅವರ ಹೆಸರನ್ನು ಜೀವಂತವಾಗಿಟ್ಟಂತಾಗುತ್ತದೆ. ಅವರ ಕುರಿತು ಸರಿಯಾದ ಪ್ರಚಾರವಿಲ್ಲ. ಫೋಟೊಗಳೂ ಸಿಗುವುದಿಲ್ಲ. ಅವರ ಹೆಸರಿನಲ್ಲಿ ಉತ್ತರ ಕರ್ನಾಟಕದ ರಂಗಭೂಮಿಗಾಗಿ ದುಡಿದವರಿಗೆ ಪ್ರಶಸ್ತಿ ಕೊಡುವಂತಾಗಬೇಕು’’ ಎಂದು ಒತ್ತಾಯಿಸಿದ್ದಾರೆ.
ಸಿದ್ರಾಮಪ್ಪ ಅವರು ಮೊದಲು ಗಾನರತ್ನ ಗಂಗೂಬಾಯಿ ಗುಳೇದಗುಡ್ಡ ಅವರ ಶ್ರೀಕೃಷ್ಣ ನಾಟಕ ಮಂಡಳಿ ಸೇರಿದರು. ನಂತರ ಆ ಕಂಪೆನಿ ಬಿಟ್ಟು ಬಸವರಾಜ ಮನಸೂರ ಅವರೊಂದಿಗೆ ಯರಾಶಿ ಭರಮಪ್ಪ ಅವರ ವಾಣಿ ವಿಲಾಸ ನಾಟಕ ಸಂಘ ಸೇರಿದರು. ಅಲ್ಲಿ ಮೂರು ವರ್ಷಗಳ ಬಳಿಕ ಕಂಪೆನಿ ನಿಂತಿತು. ಈ ವಾಣಿ ವಿಲಾಸ ಕಂಪೆನಿಯ ಸರಂಜಾಮುಗಳನ್ನು ವಿಷ್ಣುಪಂತರು ಖರೀದಿಸಿದರು. ಈ ವಿಷ್ಣುಪಂತರು, ತಡವಳದ ನಾನಾಸಾಹೇಬರ ಪುತ್ರ. ನಾನಾಸಾಹೇಬರು ಶ್ರೀಮಂತರು. ಆದರೆ ವಿಷ್ಣುಪಂತ ಕುಲಕರ್ಣಿ ಅವರಿಗೆ ನಾಟಕದ ಹುಚ್ಚು. ಇದರಿಂದ ವಾಣಿ ವಿಲಾಸ ಕಂಪೆನಿಯ ವಸ್ತುಗಳನ್ನು ಖರೀದಿಸಿ ವಿಶ್ವರಂಜಿನಿ ನಾಟಕ ಸಂಘವೆಂದು ಸೊಲ್ಲಾಪುರದಲ್ಲಿ ಆರಂಭಿಸಿದರು. ಈ ಕಂಪೆನಿಯ ಉಸ್ತುವಾರಿಯನ್ನು ವಿಷ್ಣುಪಂತ ಅವರು, ತಮ್ಮ ಗೆಳೆಯರಾದ ಹಕ್ಕಂಡಿ ವೀರಪ್ಪ ಅವರಿಗೆ ವಹಿಸಿದರು. ಈ ಕಂಪೆನಿಯ ಮೊದಲನೇ ನಾಟಕ ‘ಉಷಾ ಸ್ವಯಂವರ’. ಪಾಠಕ್ ಶಾಸ್ತ್ರಿ ವಿರಚಿತ ಮರಾಠಿ ನಾಟಕವನ್ನು ಬಸವರಾಜ ಮನಸೂರ ಹಾಗೂ ಹಂದಿಗನೂರು ಸಿದ್ರಾಮಪ್ಪ ಕನ್ನಡಕ್ಕೆ ತಂದರು. ಇದರಲ್ಲಿ ಬಾಣಾಸುರನ ಪಾತ್ರದಿಂದ ಪ್ರಸಿದ್ಧರಾದರು ಸಿದ್ರಾಮಪ್ಪ. ಬಾಣಾಸುರನ ಪಾತ್ರದ ಗಿರಿಜಾಮೀಸೆ, ರೌದ್ರ ಮುಖ, ಕಂಚಿನಕಂಠವು ಪ್ರೇಕ್ಷಕರನ್ನು ಸೆಳೆದವು. ಆಮೇಲೆ ಕಂದಗಲ್ ಹನುಮಂತರಾಯರ ಲಲಿತಕಲೋದ್ಧಾರಕ ನಾಟಕ ಸಂಘದಲ್ಲಿ ‘ಅಕ್ಷಯಾಂಬರ’ ನಾಟಕದಲ್ಲಿ ಕೃಷ್ಣನ ಪಾತ್ರದ ಮೂಲಕ ಸಿದ್ರಾಮಪ್ಪ ಇನ್ನಷ್ಟು ಪ್ರಸಿದ್ಧರಾದರು.
103 ವರ್ಷ ಬದುಕಿದ್ದ ರಂಗಭೂಮಿ ಕಲಾವಿದರಾಗಿದ್ದ ಏಣಗಿ ಬಾಳಪ್ಪ ಅವರು, ಸಿದ್ರಾಮಪ್ಪ ಕುರಿತು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಬಾಗಲಕೋಟೆ ಜಿಲ್ಲೆಯ ಕಲಾದಗಿಯ ಎಲ್.ಎಲ್. ಇನಾಮದಾರರು ಅವರೊಂದಿಗೆ ಏಣಗಿ ಬಾಳಪ್ಪ ಅವರು 1940ರಲ್ಲಿ ಪಾಲುದಾರಿಕೆಯಲ್ಲಿ ವೈಭವಶಾಲಿ ಸಂಗೀತ ನಾಟಕ ಮಂಡಳಿಯನ್ನು ಆರಂಭಿಸಿದ್ದರು. ವಿಜಾಪುರ ಜಿಲ್ಲೆಯ ಚಡಚಣದ ಜಾತ್ರೆಯಲ್ಲಿ ಅವರ ಕಂಪೆನಿ ಮೊಕ್ಕಾಂ ಮಾಡಿತ್ತು. ಹಂದಿಗನೂರು ಸಿದ್ರಾಮಪ್ಪ ಅವರ ವಿಶ್ವಕಲಾ ರಂಜಿನಿ ಕಂಪೆನಿಯೂ ಬೀಡು ಬಿಟ್ಟಿತ್ತು. ಬಾಳಪ್ಪ ಅವರ ಕಂಪೆನಿಯು ಇನಾಮದಾರರ ‘ಪಠಾಣಿ ಪಾಷಾ’, ‘ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ’ ಇಂಥ ಹೊಸ ನಾಟಕಗಳನ್ನು ಆಡುತ್ತಿದ್ದರೆ, ಸಿದ್ರಾಮಪ್ಪ ಅವರ ವಿಶ್ವಕಲಾ ರಂಜಿನಿ ಕಂಪೆನಿಯು ಹಳೆಯ ನಾಟಕಗಳನ್ನು ಆಡುತ್ತಿತ್ತು. ಪ್ರತೀ ವರ್ಷ ಅದೇ ನಾಟಕವನ್ನು, ಅದೇ ಪಾತ್ರವನ್ನು ಮಾಡಿದರೂ ಪ್ರೇಕ್ಷಕರು ಮುಗಿಬಿದ್ದು ಅವರ ನಾಟಕಗಳನ್ನು ನೋಡುತ್ತಿದ್ದರು. ಬಾಳಪ್ಪ ಅವರ ಕಂಪೆನಿಯ ಹೊಸ ನಾಟಕಗಳನ್ನು ಹೆಚ್ಚಿನ ಪ್ರೇಕ್ಷಕರು ಮೆಚ್ಚಿದರು. ಇದರಿಂದ ಅವರ ಕಂಪೆನಿಯ ಆದಾಯವೂ ಹೆಚ್ಚಿತು.
ಇದರಿಂದ ಖುಷಿಯಾದ ಇನಾಮದಾರರು, ಚಡಚಣದ ಜಾತ್ರೆಯಲ್ಲಿಯೇ ಅದೊಂದು ದಿನ ನಾಟಕದ ಕೊನೆಗೆ ‘‘ಸಿದ್ರಾಮಪ್ಪ ಅವರದು ಹರಕ ತಬಲಾ, ಮುರುಕ ಡಗ್ಗಾ, ಸ್ವರವಿಲ್ಲದ ಹಾರ್ಮೋನಿಯಂ ಪೆಟ್ಟಿಗೆ. ಹಿಂಗ ನಾಟಕ ಆಡಿದ್ರ ರೊಕ್ಕ ಸಿಗತೈತಿ?’’ ಎಂದು ಕೇಳಿದರು. ಪರದೆ, ಸಂಗೀತಕ್ಕೆ ಮಹತ್ವ ಕೊಡದೆ ತಮ್ಮ ನಟನೆಗೆ ಮಾತ್ರ ಮಹತ್ವ ಕೊಟ್ಟವರು ಸಿದ್ರಾಮಪ್ಪ ಅವರು. ಇದರ ಮಹತ್ವ ತಿಳಿಯದ ಇನಾಮದಾರರು ಖುಷಿಯಲ್ಲಿ ತಮ್ಮ ಕಂಪೆನಿಯದು ಹೊಸ ಪ್ರಯೋಗವೆಂದು ತಿಳಿದು ಮಾತನಾಡಿದ್ದರು. ಇದು ಸಿದ್ರಾಮಪ್ಪ ಅವರ ಕಿವಿಗೂ ಬಿತ್ತು. ಮರುದಿನ ಏಣಗಿ ಬಾಳಪ್ಪ ಅವರನ್ನು ತಮ್ಮ ಕಂಪೆನಿಗೆ ಬರಲು ತಿಳಿಸಿದರು.
‘‘ಬಾಳಪ್ಪ, ಇನಾಮದಾರರು ನಮ್ಮ ಕಂಪೆನಿಗೆ ಹಿಂದ ಅಂದಾರಂತಲ್ಲ?’’ ಕೇಳಿದರು.
‘‘ಹೌದ್ರಿ ಮಾತಾಡ್ಯಾರ’’ ಬಾಳಪ್ಪ ಹೇಳಿದರು.
‘‘ಹಂಗ ಮಾತಾಡಿದ್ದಕ್ಕ ನನಗ ವ್ಯಥೆ ಆಗಿಲ್ಲ, ಅಸಮಾಧಾನ ಆಗಿಲ್ಲ. ಆದ್ರ ನಾನು ಏನು ಅನ್ನೋದು ಅವರಿಗೆ ಗೊತ್ತಿಲ್ಲ. ನನಗ ವ್ಯಥೆ ಆಗಿದ್ದು ನನ್ನ ಬಗ್ಗೆ ತಿಳಿದಿದ್ದ ನೀನು ವಿರೋಧಿಸಬೇಕಿತ್ತು. ನೀನು ಯಾಕ ಪ್ರತಿಕ್ರಿಯೆ ನೀಡಲಿಲ್ಲ? ಅದಕ್ಕ ವ್ಯಥೆ ಆಗೈತಿ’’ ಎಂದು ಬೇಸರದಿಂದ ಸಿದ್ರಾಮಪ್ಪ ಹೇಳಿದರು. ಇದರಿಂದ ಅವರು ಎರಡು ಕಾರ್ಯಗಳನ್ನು ಒಟ್ಟಿಗೇ ಮಾಡಿದರು. ಹೇಗೆಂದರೆ ತಮ್ಮ ಯೋಗ್ಯತೆಯ ಜೊತೆಗೆ ಬಾಳಪ್ಪ ಅವರ ಯೋಗ್ಯತೆಯನ್ನೂ ಹೆಚ್ಚಿಸಿದರು.
ಸಿದ್ರಾಮಪ್ಪ ಅವರ ಕಂಪೆನಿಗೆ ಬಡತನ ಹೇಗೆ ಕಾಡುತ್ತಿತ್ತು ಎಂದರೆ, ಅವರ ಕಂಪೆನಿಯಲ್ಲಿ ರಾಜನ ಪಾತ್ರ ಮಾಡಿದ್ದವರು ಈರಪ್ಪ ಬಿರಾದಾರ. ಅವರು ಶಿಕ್ಷಕರಾಗಿದ್ದು, ತತ್ವಪದಕಾರರಾಗಿದ್ದರು. ಕಿರೀಟಗಳಿಗೆ ಮಣಿಗಳನ್ನು ಅಂಟಿಸಲೂ ಆರ್ಥಿಕ ಮುಗ್ಗಟ್ಟು. ಇದಕ್ಕಾಗಿ ಬೋರಂಗಿಗಳ ರೆಕ್ಕೆಗಳನ್ನು ಕಿತ್ತು, ಅಂಟಿನ ಮೂಲಕ ಕಿರೀಟಗಳಿಗೆ ಈರಪ್ಪ ಅಂಟಿಸುತ್ತಿದ್ದರು. ಇದರಿಂದ ಪ್ರೇಕ್ಷಕರಿಗೆ ಅನುಮಾನ ಬರುತ್ತಿರಲಿಲ್ಲ. ಇಂಥ ಜವಾರಿ ಕಲಾವಿದರು ಇದ್ದರೆಂಬುದು ಗಮನಾರ್ಹ.
ಸಿದ್ರಾಮಪ್ಪ ಅವರು ಸಿನೆಮಾದಲ್ಲೂ ನಟಿಸಿದರು. ಅದು ‘ಚಂದ್ರಹಾಸ’. ಈ ಸಿನೆಮಾದಲ್ಲಿ ದುಷ್ಟಬುದ್ಧಿ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ಮುಂಬೈಯ ಪಂಪಾ ಪಿಕ್ಚರ್ಸ್ ಈ ಸಿನೆಮಾವನ್ನು ನಿರ್ಮಿಸಿತು. ಇದರ ಚಿತ್ರೀಕರಣ ಕೊಲ್ಲಾಪುರದ ಸ್ಟುಡಿಯೋದಲ್ಲಿ ನಡೆದಿತ್ತು. ಚಿತ್ರೀಕರಣದಲ್ಲಿದ್ದಾಗಲೇ ಸಿದ್ರಾಮಪ್ಪ ಅವರು ತಮ್ಮ ಮಗಳು ಕೃಷ್ಣಾಬಾಯಿಗೆ 21.5.1947ರಲ್ಲಿ ಪತ್ರ ಬರೆದರು. ನಂತರ ಸಿನೆಮಾ ಬಿಡುಗಡೆಯಾದುದು 19.11.1947. ಬಿಡುಗಡೆಯಾಗುವ ಹತ್ತು ದಿನಗಳ ಮೊದಲು ಅವರು ನಿಧನರಾದರು. ಶಾಂತೇಶ ಪಾಟೀಲ ನಿರ್ದೇಶನದ ‘ಚಂದ್ರಹಾಸ’ ಸಿನೆಮಾದಲ್ಲಿ ಚಂದ್ರಹಾಸ ಪಾತ್ರಧಾರಿಯಾಗಿ ವಿಕಾಸ ಷಾ ಹಾಗೂ ವಿಷಯೇ ಪಾತ್ರಧಾರಿಯಾಗಿ ಬಿ.ಶಾರದಾ ಅಭಿನಯಿಸಿದ್ದರು.
47 ವರ್ಷವಷ್ಟೇ ಬದುಕಿದ್ದ ಸಿದ್ರಾಮಪ್ಪ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ, ಆರ್ಥಿಕ ಸಂಕಷ್ಟ, ಮನೆಯ ಕಷ್ಟಗಳಿಗೆ ನಲುಗಿದ್ದ ಅವರು ರಂಗದ ಮೇಲೆ ರಾಜನೇ. ಅಂಥವರನ್ನು ನೆನೆಯುವುದು ಅಗತ್ಯ ಮತ್ತು ಅನಿವಾರ್ಯವಾಗಬೇಕು ಎಂದು ರಂಗಪ್ರೀತಿಯಿಂದ ಒತ್ತಾಯಿಸುವೆ.