‘ಸಮುದಾಯ’ದ ‘ತುಘಲಕ್’ಗೆ 100ರ ಸಂಭ್ರಮ
ಕಾರ್ನಾಡರ ‘ತುಘಲಕ್’ ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿವೆ.
‘ತುಘಲಕ್’ ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್‌ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ, ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಂಡಿದೆ. ‘ತುಘಲಕ್’ ನಾಟಕದ ಹಲವು ಸಾಧ್ಯತೆಗಳಲ್ಲಿ ಇದೂ ಒಂದು ಸಾಧ್ಯತೆ. ಇಂದಿನ ಸಮಕಾಲೀನ ವಸ್ತು ಸ್ಥಿತಿಯ ಆಶಯವನ್ನು ಆಕೃತಿಗೊಳಿಸುವ ಪ್ರಮುಖ ಸಾಧ್ಯತೆ. ‘ಸಮುದಾಯ’ ಪ್ರಯೋಗಿಸುತ್ತಿರುವ ‘ತುಘಲಕ್’ ನಾಟಕದ ಈ ಓದು ‘ತುಘಲಕ್’ ಅನ್ನು ಒಂದು ಐತಿಹಾಸಿಕ ವ್ಯಕ್ತಿಯ ಕಥೆಯ ಓದನ್ನಾಗಿಸದೆ ಸಮಕಾಲೀನ ರಾಜಕೀಯದ ಹಲವು ಅರ್ಥ ಪರಂಪರೆಯ ಓದನ್ನಾಗಿಸಲು ಪ್ರಯತ್ನಿಸಿದೆ. ಮೇಲ್ನೋಟಕ್ಕೆ ‘ತುಘಲಕ್’ ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ.
ಧರ್ಮ ಮತ್ತು ರಾಜಕೀಯದ, ಅರಮನೆ ಮತ್ತು ಗುರುಮನೆಯ ನಡುವಿನ ಅನೈತಿಕ ಸಂಬಂಧಗಳು, ಧರ್ಮದ ದಾಳವನ್ನು ಉಪಯೋಗಿಸಿ ಪ್ರಭುತ್ವವನ್ನು ನಡೆಸುತ್ತಿರುವಂಥ ಮಾರುಕಟ್ಟೆಯ ಹುನ್ನಾರಗಳು, ರಾಜನ ರೋಗ ಪ್ರಜೆಗಳ ಗಾಯವಾಗಿ ಮಾರ್ಪಡುವಂತಹ ವ್ಯಂಗ್ಯ.. ಹಿಂಸಾರತಿಯನ್ನು ಅನುಭವಿಸುವಂಥ ಬಹು ದೊಡ್ಡ ಆಟ ಈ ನಾಟಕದಲ್ಲಿದೆ.
ವರ್ತಮಾನದ ಬದುಕು ತನ್ನ ಜೀವದಿಂದ ಕಾವ್ಯರಸವನ್ನು ಬಿಟ್ಟುಕೊಟ್ಟಿರುವಂಥ ಈ ಸ್ಥಿತಿಯಲ್ಲಿ ಪುರುಷಕೇಂದ್ರಿತವಾದ ರಾಜಕೀಯ ತರ್ಕವನ್ನೇ ಬದುಕಾಗಿಸಿ ಸ್ವೀಕರಿಸಿಕೊಂಡಿರುವ ಈ ಹೊತ್ತಿನಲ್ಲಿ ಇದರ ಸಾಂಕೇತಿಕ ಮಂಡನೆಯಾಗಿ ನಾವು ನಾಟಕದೊಳಗಿನ ಗದ್ಯ ತರ್ಕಗಳನ್ನೇ ಮುನ್ನೆಲೆಗೆ ತಂದು ಆಟವಾಡಿದ್ದೇವೆ. ಹಾಗಾಗಿ ಈ ಕಾಲದ ಒಂದು ಹೊಸ ಓದಾಗಿಯೂ ಈ ನಾಟಕ ಮಂಡಿಸಲ್ಪಟ್ಟಿದೆ.
ಸಮುದಾಯ, ಬೆಂಗಳೂರು
1974ರಲ್ಲಿ ಸಾಂಸ್ಕೃತಿಕ ಚಳವಳಿ ಮೂಲಕ ಸಮುದಾಯ ಹುಟ್ಟಿಕೊಂಡಿತು. ರಂಗಭೂಮಿಯಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುವ ಅನೇಕ ನಾಟಕಗಳನ್ನು ರಂಗ ಪ್ರಯೋಗ ಮಾಡುತ್ತಾ ಬಂದಿರುವ ಸಮುದಾಯ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಬೀದಿ ನಾಟಕ, ರಂಗ ಪ್ರಯೋಗ, ವಿಚಾರ ಸಂಕಿರಣಗಳನ್ನೂ ಒಳಗೊಂಡಂತೆ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಯನ್ನು ನಡೆಸಿದೆ. ಮಾಕ್ಸಿಂ ಗಾರ್ಕಿಯ ‘ತಾಯಿ’, ಸರ್ವೇಶ್ವರ ದಯಾಳ್ ಸಕ್ಸೇನ ಅವರ ‘ಕುರಿ’, ಪಿ. ಲಂಕೇಶ್ ರಚಿತ ‘ಸಂಕ್ರಾಂತಿ’, ಎಚ್.ಎಸ್. ಶಿವಪ್ರಕಾಶ್ ಅವರ ‘ಮಹಾಚೈತ್ರ’, ‘ಕತ್ತಲೆ ದಾರಿ ದೂರ’, ಆಂಟೆನ್ ಚೆಕೋವ್ ಅವರ ‘ವಾರ್ಡ್ ನಂ. 6’, ಮಹಾಶ್ವೇತಾ ದೇವಿ ಬರೆದ ‘ರುಡಾಳಿ’ ನಾಟಕಗಳಲ್ಲದೆ, ಪೂರ್ಣ ಚಂದ್ರ ತೇಜಸ್ವಿ ಅವರ ‘ಜುಗಾರಿ ಕ್ರಾಸ್’, ಕೆ.ವೈ. ನಾರಾಯಣ ಸ್ವಾಮಿ ರಚಿತ ಪಂಪಭಾರತ, ಮುಂತಾದ ಹಲವು ನಾಟಕಗಳನ್ನು ಪ್ರದರ್ಶನ ಮಾಡಿದೆ. ‘ಪಂಪಭಾರತ’ ನೂರು ಪ್ರದರ್ಶನಗಳನ್ನು ಕಂಡಿದ್ದು, ಈಗ ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕವು ನೂರನೇ ಪ್ರದರ್ಶನ ಕಾಣುತ್ತಿರುವುದು ವಿಶೇಷ.