ಸಮಾಜವನ್ನು ಎಚ್ಚರಿಸುವ ‘ಮೈ ಫ್ಯಾಮಿಲಿ’

‘‘ಬದುಕಿನ ಭರದಲ್ಲಿ ಬದುಕುವುದನ್ನೇ ಮರೆತಿದ್ದೇವೆ’’ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ! ಮನುಷ್ಯ ಇಂದು ದುಡ್ಡಿನ ಬೆನ್ನು ಬಿದ್ದಿದ್ದಾನೆ. ಹೊಟ್ಟೆ, ನೆತ್ತಿಗೆ ಸಾಕಾಗುವಷ್ಟಕ್ಕೆ ಅವನ ಓಟ ಸೀಮಿತವಾಗಿಲ್ಲ. ಇನ್ನೂ ಬೇಕು, ಮತ್ತಷ್ಟು ಬೇಕು ಎನ್ನುವ ಹಪಾಹಪಿಗೆ ಬಿದ್ದು ನಾಗಾಲೋಟದ ವೇಗವನ್ನು ಪಡೆದುಕೊಂಡಿದ್ದಾನೆ. ಹೆತ್ತವರ ಇಂತಹ ಧಾವಂತದ ಬದುಕಿನಿಂದ ಮಕ್ಕಳ ಮನಸ್ಥಿತಿ ಅಪಾಯದ ಅಂಚನ್ನು ತಲುಪಿದೆ. ಶಾಲೆಯಲ್ಲಿ ಒಂದು ರೀತಿಯ ಒತ್ತಡವಾದರೆ ಮನೆಗೆ ಬಂದಾಗ ಮತ್ತೊಂದು ರೀತಿಯ ಒತ್ತಡ. ಒಂದೇ ಮನೆಯಲ್ಲಿದ್ದೂ ಗಂಡ-ಹೆಂಡತಿ, ಮಕ್ಕಳು ಪರಸ್ಪರ ಮುಖ ನೋಡದ, ಮಾತನಾಡದಂತಹ ಸ್ಥಿತಿ. ಹೊರಗೆಲ್ಲೂ ಹೋಗಬೇಡಿ, ಮನೆಯಲ್ಲಿಯೇ ಇದ್ದು ಟಿ.ವಿ., ವೀಡಿಯೊ ಗೇಮ್, ಮೊಬೈಲ್ ಜೊತೆ ಆಟವಾಡಿಕೊಂಡಿರಿ ಎನ್ನುವ ಹೆತ್ತವರಿಗೆ, ನಾಲ್ಕು ಗೋಡೆಗಳ ಮಧ್ಯದಲ್ಲಿ ಬಂದಿಯಾಗಿ ಕೇವಲ ಗ್ಯಾಜೆಟ್‌ಗಳೊಂದಿಗೆ ಆಟವಾಡುವುದರಿಂದ ತಮ್ಮ ಮಕ್ಕಳ ಮೇಲೆ ಅವು ಬೀರಬಹುದಾದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿಲ್ಲ.
ಮೂರ್ನಾಲ್ಕು ದಶಕಗಳ ಹಿಂದಿನ ಮಕ್ಕಳಿಗೆ ನಿದ್ರೆಯಲ್ಲಿ ಬರುತ್ತಿದ್ದ ಕನಸುಗಳಿಗೂ ಇಂದಿನ ತಲೆಮಾರಿನ ಮಕ್ಕಳ ನಿದ್ರೆಯಲ್ಲಿ ಬರುವ ಕನಸುಗಳಿಗೂ ಅಜಗಜಾಂತರವಿದೆ. ಇಂದಿನ ಮಕ್ಕಳು ಮಾನಸಿಕ ತುಮುಲಗಳಿಂದ ಜರ್ಜರಿತರಾಗಿ ಹೋಗಿದ್ದಾರೆಂಬುದನ್ನು ‘ಮೈ ಫ್ಯಾಮಿಲಿ’ ಎಂಬ ನಾಟಕ ಇಂದಿನ ಪಾಲಕರಿಗೆ ಎಚ್ಚರಿಕೆಯನ್ನು ನೀಡುತ್ತದೆ. ಇಂದಿನ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿ ಕೊಡುತ್ತದೆ ಈ ನಾಟಕ. ‘‘ಶಿಕ್ಷಕರು, ಹೆತ್ತವರು, ಮಕ್ಕಳನ್ನು ಅವರ ಉತ್ತಮ ಭವಿಷ್ಯಕ್ಕಾಗಿ ರೂಪಿಸುತ್ತಿದ್ದೇವೆ ಎಂದು ಭಾವಿಸಿದ್ದಾರೆ. ಸಮಾಜದ ಎಲ್ಲರೂ ಮಕ್ಕಳ ಕಣ್ಣಿನಲ್ಲಿ ತಮ್ಮನ್ನು ನೋಡಿಕೊಳ್ಳಬೇಕಾದ ನಾಟಕವಿದು’’ ಎಂದು ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಅವರು ಹೇಳುತ್ತಾರೆ.
ಇಂದಿನ ಮಕ್ಕಳು ಭಯ, ಒತ್ತಡ, ಅಸ್ಥಿರ ಭಾವಗಳನ್ನು ಹೊಂದಿ ನಲುಗಿ ಹೋಗಿದ್ದಾರೆ. ಹೆತ್ತವರಿಗೆ ಗಳಿಕೆ, ಸ್ವಾವಲಂಬನೆ, ಸ್ವಾಭಿಮಾನ, ಸಮಾನತೆ, ಆತ್ಮಗೌರವಗಳೇ ಮುಖ್ಯ ಎನಿಸಿವೆ. ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮನಸ್ತಾಪಗಳನ್ನು ಹೊಂದಿ ಬೇರೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ಇದರಿಂದ ತಮ್ಮ ಮಕ್ಕಳ ಮೇಲಾಗುವ ಪರಿಣಾಮಗಳು ಏನು ಎಂದು ತಿಳಿದುಕೊಳ್ಳುವ ವ್ಯವಧಾನವೂ ಅವರಿಗಿಲ್ಲ ಎಂಬುದನ್ನು ಮೈ ಫ್ಯಾಮಿಲಿ ನಾಟಕ ಹೇಳುತ್ತದೆ.
ತಾವು ಹುಟ್ಟಿ, ಆಡಿ ಬೆಳೆದ ಹಳ್ಳಿಗಳನ್ನು ಮರೆಯುತ್ತಿರುವ, ಹೊಟ್ಟೆ ಬಟ್ಟೆ ಕಟ್ಟಿ ಬೆಳೆಸಿ ಓದಿಸಿದ ಹೆತ್ತವರನ್ನು ತೊರೆದು ಪಟ್ಟಣ ಸೇರುತ್ತಿರುವ ಯುವ ಜನರ ಕತೆಯನ್ನೂ ಹೇಳುತ್ತದೆ ಮೈ ಫ್ಯಾಮಿಲಿ ನಾಟಕ. ಶಾಲೆ ಹಾಗೂ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಬಾಲ್ಯವನ್ನು ಕಳೆದುಬಿಡುವ ಇಂದಿನ ಮಕ್ಕಳಿಗೆ ಕಾಡು, ಬೆಟ್ಟ-ಗುಡ್ಡ, ಹಕ್ಕಿ-ಪಕ್ಷಿ, ಜಾತ್ರೆ-ಹಬ್ಬ, ಹಾಡು-ನಾಟಕಗಳ ಪರಿಚಯವಿಲ್ಲ. ಪ್ರಕೃತಿಯ ಮಡಿಲಲ್ಲಿ ವಿಕಸಿತಗೊಳ್ಳಬೇಕಾದ ಮಕ್ಕಳ ಬದುಕು ಪಟ್ಟಣಗಳ ಫ್ಲ್ಯಾಟ್‌ಗಳೆಂಬ ಬಂದಿಖಾನೆಗಳಲ್ಲಿ ಮುರುಟಿ ಹೋಗುತ್ತಿದೆ. ಇದನ್ನೆಲ್ಲ ಕಂಡು ಪರಿತಪಿಸುವ ಮನೆಗೆಲಸದ ಹುಡುಗಿ ಸಿರಿ ಮೈ ಫ್ಯಾಮಿಲಿ ನಾಟಕದ ಕೇಂದ್ರ ಬಿಂದು. ಶಾಲೆಯ ರಜಾ ದಿನಗಳಲ್ಲಿ ತನ್ನ ಯಜಮಾನಿಯ ಮನವೊಲಿಸಿ ಮಕ್ಕಳನ್ನು ತನ್ನ ಹಳ್ಳಿಗೆ ಕರೆದೊಯ್ಯುವ ಸಿರಿ ತನ್ನ ಹಳ್ಳಿಯ ಸೌಂದರ್ಯ, ಅಲ್ಲಿಯ ಮುಗ್ಧ ಮನಸ್ಸುಗಳನ್ನು ಹಾಗೂ ಸಂಸ್ಕೃತಿಯನ್ನು ಮಕ್ಕಳಿಬ್ಬರಿಗೂ ಪರಿಚಯ ಮಾಡಿಸಿ ಅವರನ್ನು ಗ್ಯಾಜೆಟ್‌ಗಳ ಲೋಕದಿಂದ ಗಮ್ಮತ್ತಿನ ಲೋಕಕ್ಕೆ ಕರೆದೊಯ್ಯುವ ಪಯಣ ಮೈ ನವಿರೇಳಿಸುತ್ತದೆ. ಪಟ್ಟಣಗಳ ಎಲ್ಲ ಮನೆಗಳಿಗೂ ಇಂತಹ ಒಬ್ಬೊಬ್ಬ ಸಿರಿ ಇದ್ದರೆ ಆ ಮನೆಗಳು ನಂದನವನಗಳಾಗುತ್ತವೆ ಎನ್ನಿಸುತ್ತದೆ.
ಗಣೇಶ್ ಮಂದಾರ್ತಿ ಅವರ ಪ್ರಬುದ್ಧ ನಿರ್ದೇಶನದಲ್ಲಿ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತು ನಾಟಕ. ಮಾತಿನಲ್ಲಿ ಹೇಳಲಾಗದ್ದನ್ನು ಪಪೆಟ್‌ಗಳ ಮೂಲಕ ಶ್ರವಣ್ ಹೆಗ್ಗೋಡು ಅವರು ರಂಗದ ಮೇಲೆ ಮ್ಯಾಜಿಕ್ ಮಾಡಿದ್ದಾರೆ. ಗಿಡ-ಮರ, ಅಳಿಲು, ಗುಟುಕು ನೀಡುವ ಪಕ್ಷಿಗಳು, ಚೇಳು-ಏಡಿ, ಕಾಮಿಕ್ ಕ್ಯಾರೆಕ್ಟರ್ ಹಲ್ಕ್ ಪಪೆಟ್ ರೂಪದಲ್ಲಿ ರಂಗದ ಮೇಲೆ ನಡೆದಾಡಿ ನಾಟಕಕ್ಕೆ ಮೆರುಗನ್ನು ಹೆಚ್ಚಿಸಿದವು.
ಕೆಲವು ವರ್ಷಗಳ ಹಿಂದೆ ಮಕ್ಕಳ ನಾಟಕ ರಚನಾ ಶಿಬಿರದಲ್ಲಿ ಹತ್ತನೇ ತರಗತಿಯ ಗೌತಮಿ ಎಂಬ ಹುಡುಗಿ ಬರೆದ ನಾಟಕದ ಕತೆಯನ್ನು ಮೂಲವಾಗಿಟ್ಟುಕೊಂಡು ಈ ನಾಟಕ ರೂಪುಗೊಂಡಿದೆ. ಎಲ್ಲ ಕಲಾವಿದರೂ ತಮ್ಮ ಅಭಿನಯ ನೃತ್ಯಗಳಿಂದ ನೋಡುಗರ ಗಮನ ಸೆಳೆದರು. ಸಿರಿ ಪಾತ್ರದ ರಕ್ಷಿತಾ ಟಿ.ಎಲ್. ಹಾಗೂ ಜವರಯ್ಯ ಪಾತ್ರದ ದುರ್ಗಾಪರಮೇಶ್ ತಮ್ಮ ಪ್ರಬುದ್ಧ ಅಭಿನಯದಿಂದ ನೆನಪಿನಲ್ಲಿ ಉಳಿಯುತ್ತಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಮೈಸೂರು ರಂಗಾಯಣದ ಕಲಾವಿದರು ಮೈ ಫ್ಯಾಮಿಲಿ ನಾಟಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.