ಕಣಿವೆಯ ಹಾಡು -ಒಂದು ಹೃದಯಸ್ಪರ್ಶಿ ಪ್ರಯೋಗ
ಯಾವುದೇ ಸಮಾಜ ಮತ್ತು ಅದರೊಳಗಿನ ಮನುಷ್ಯ ಲೋಕ ದಿನನಿತ್ಯ ಎದುರಿಸುವ ಸಿಕ್ಕು ಸವಾಲುಗಳನ್ನು ಸಮಕಾಲೀನ ವಾಸ್ತವಗಳೊಂದಿಗೆ ಸಮೀಕರಿಸುತ್ತಲೇ ಗತ ಚರಿತ್ರೆಯ ಹೆಜ್ಜೆಗಳೊಡನೆ ಗುರುತಿಸುವಂತೆ ಮಾಡುವಲ್ಲಿ ಹಾಗೂ ಭವಿಷ್ಯದ ಹಾದಿಗಳ ಕಾಣ್ಕೆಯನ್ನು, ವಿಶಾಲ ಸಮಾಜದ ಮುಂದಿರಿಸಲು ಇರುವ ಹಲವಾರು ಅಭಿವ್ಯಕ್ತಿ ಮಾಧ್ಯಮಗಳ ಪೈಕಿ ರಂಗಭೂಮಿ ಅಗ್ರಶ್ರೇಣಿಯಲ್ಲಿ ನಿಲ್ಲುತ್ತದೆ. ಸಾಮಾನ್ಯ ಜನರನ್ನು ಎಲ್ಲ ಸ್ತರಗಳಲ್ಲೂ ತಲುಪುವ ಒಂದು ದೃಶ್ಯ ಸಂವಹನ ಸಾಧನವಾಗಿ ರಂಗಭೂಮಿ ತನ್ನ ಹಲವು ಆಯಾಮಗಳಲ್ಲಿ ಸಮಾಜದ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ರೂಪುಗೊಳ್ಳುತ್ತಾ ಬಂದಿದೆ. ರಂಗ ನಿರೂಪಕರಿಗೆ ಹಾಗೂ ನಿರ್ದೇಶಕರಿಗೆ ಇರುವ ಬೌದ್ಧಿಕ ಸ್ವಾಯತ್ತತೆಯ ಹಾಗೂ ತಾತ್ವಿಕ ಸ್ವಾತಂತ್ರ್ಯವು ಯಾವುದೇ ಪಠ್ಯವನ್ನು ವರ್ತಮಾನದ ಸಮಾಜಕ್ಕೆ ಅರ್ಥವಾಗುವಂತೆ ತಲುಪಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ.
ಈ ಸಾಧ್ಯತೆಗಳನ್ನು ಬಳಸಿಕೊಂಡು ಸಾಕಾರಗೊಳಿಸುವ ಬದ್ಧತೆ, ಮುಂಗಾಣ್ಕೆ ಮತ್ತು ಸಾಮಾಜಿಕ ಕಳಕಳಿ ರಂಗಕರ್ಮಿಗಳಿಗೆ ಇದ್ದೆಡೆ ಅತ್ಯುತ್ತಮ ನಾಟಕಗಳು ಹೊರಬರುತ್ತಲೇ ಇರುತ್ತವೆ. ರಂಗನಿರೂಪಕರ, ನಿರ್ದೇಶಕರ ಹಾಗೂ ರಂಗತಂಡಗಳ ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ಮನುಜ ಸಂವೇದನೆಗಳು ಸಮಕಾಲೀನ ಸಮಾಜದೊಳಗಿನ ಅಪಸವ್ಯಗಳನ್ನು ಗುರುತಿಸುತ್ತಲೇ, ದೇಶಭಾಷೆಗಳ ಗಡಿಗಳನ್ನೂ ದಾಟಿ ಜನಸಂವೇದನೆಯ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೊಸ ರಂಗಪ್ರಯೋಗಗಳಿಗೆ ತೆರೆದುಕೊಳ್ಳಲು ನೆರವಾಗುತ್ತವೆ. ಕನ್ನಡ ರಂಗಭೂಮಿ ಅಂತಹ ನೂರಾರು ನಾಟಕಗಳಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಸಾಂಸ್ಕೃತಿಕ ನಗರಿ ಮೈಸೂರು ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಾ ಬಂದಿದೆ. ಈ ಶ್ರೀಮಂತಿಕೆಯ ಹಾದಿಯಲ್ಲೇ ಮತ್ತೊಂದು ಅಪೂರ್ವ ಪ್ರಯತ್ನವನ್ನು ಮೈಸೂರಿನ ಮಂಡ್ಯ ರಮೇಶ್‌ಅವರ ನಟನ ಪಯಣ ರೆಪರ್ಟರಿ ತಂಡ ‘ಕಣಿವೆಯ ಹಾಡು’ ನಾಟಕದ ಮೂಲಕ ಮಾಡಿದೆ.
ಮೂಲ ನಾಟಕದ ಕಥಾವಸ್ತು
ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅತೊಲ್ ಫ್ಯೂಗಾರ್ಡ್‌ಅವರ ‘ದ ವ್ಯಾಲಿ ಸಾಂಗ್’ ಎಂಬ ಅಪೂರ್ವ ಕೃತಿಯನ್ನು ಡಾ. ಮೀರಾ ಮೂರ್ತಿ ಅವರು ‘ಕಣಿವೆಯ ಹಾಡು’ ಎಂದು ಕನ್ನಡೀಕರಿಸಿದ್ದಾರೆ. ಸಮಕಾಲೀನ ಜನಜೀವನದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಎರಡು ತಲೆಮಾರುಗಳ ನಡುವಿನ ಆಲೋಚನಾ ವಿಧಾನದ ಅಂತರ ಹಾಗೂ ಅಲ್ಲಿ ಸಂಭವಿಸುವ ತಿಕ್ಕಾಟಗಳನ್ನು ಕಟ್ಟಿಕೊಡುವ ‘ಕಣಿವೆಯ ಹಾಡು’ ಇಂದಿಗೂ ಜಗತ್ತು ಎದುರಿಸುತ್ತಿರುವ ನಗರೀಕರಣ ಮತ್ತು ಗ್ರಾಮೀಣ ಬದುಕಿನ ಮೇಲೆ ಅದರ ಪರಿಣಾಮವನ್ನು ಕೇವಲ ಮೂರು ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ. ನಾಟಕಕಾರನೇ ಒಂದು ಪಾತ್ರವಾಗುವ ಮೂಲಕ, ಇನ್ನೆರಡು ಪಾತ್ರಗಳನ್ನು ಸೃಷ್ಟಿಸುವ ಈ ಕಥಾ ಹಂದರದ ವ್ಯಾಪ್ತಿ ಚಿಕ್ಕದಾಗಿ ಕಂಡರೂ, ಈ ಪಾತ್ರಗಳ ಮೂಲಕ ಫ್ಯೂಗಾರ್ಡ್ ನೀಡುವ ಸಂದೇಶ ದೇಶಭಾಷೆಗಳ ಗಡಿಯನ್ನು ದಾಟಿ ವಿಶ್ವವ್ಯಾಪಿಯಾಗಿ ಕಂಡುಬರುತ್ತದೆ. ಹಿರಿಯ-ಕಿರಿಯ ತಲೆಮಾರಿನ ನಡುವೆ ಏರ್ಪಡುವ ತಾತ್ವಿಕ ಸಂಘರ್ಷ ಹಾಗೂ ಬದುಕಿನ ಸಂಕೀರ್ಣತೆಯ ವಿಭಿನ್ನ ಆಯಾಮಗಳನ್ನು ಹಿಡಿದಿಡುವ ‘ಕಣಿವೆಯ ಹಾಡು’ ಭಾರತ ಇಂದಿಗೂ ಎದುರಿಸುತ್ತಿರುವ ಗ್ರಾಮ-ನಗರ ಸಂಘರ್ಷದ ಒಂದು ಎಳೆಯನ್ನೂ ಬಿಚ್ಚಿಡುತ್ತದೆ.
ಗ್ರಾಮೀಣ ಬದುಕಿನಲ್ಲಿ ಭೂಮಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ತನ್ನ ಎಲ್ಲ ಕನಸುಗಳನ್ನೂ ನಿಶ್ಚಿತ ನಾಲ್ಕು ಗೋಡೆಗಳ ನಡುವೆಯೇ ಕಟ್ಟಿಕೊಂಡು ಬದುಕುವುದನ್ನು ‘ಕಣಿವೆಯ ಹಾಡು’ ಅಬ್ರಾಮ್ ಜೋಂಕರ್ಸ್ ಎಂಬ ರೈತನ ಮೂಲಕ ಬಿಂಬಿಸುತ್ತದೆ.
ಮನುಜ ಸಂಬಂಧಗಳು ಎಷ್ಟೇ ದೂರವಾದರೂ, ಸಂಪರ್ಕಗಳು ವಿಚ್ಛೇದನ ಎದುರಿಸಿದರೂ ಭೂಮಿ ಮನುಷ್ಯನಿಗೆ ಸಾಂತ್ವನ ನೀಡುತ್ತದೆ. ಈ ಸಾಂತ್ವನ ಶಾಶ್ವತವಾಗಿರುತ್ತದೆ. ಭೂಮಿಯೊಡಗಿನ ಮನುಜ ಸಂಬಂಧ ಚಿರಕಾಲ ಉಳಿಯುತ್ತದೆ ಎಂಬ ಸಂದೇಶವನ್ನು ನೀಡುತ್ತಲೇ ನಾಟಕಕಾರ ಫ್ಯೂಗಾರ್ಡ್ ಹೊಸ ಬದುಕಿನ ರೆಕ್ಕೆಗಳನ್ನು ಬಿಚ್ಚಿ ಸ್ವತಂತ್ರವಾಗಿ ಹಾರಾಡಬಯಸುವ ಯುವ ಮನಸ್ಸುಗಳನ್ನು ಅದೇ ಭೂಮಿಕೆ ಕಟ್ಟಿಹಾಕಲೂ ಆಗುವುದಿಲ್ಲ, ಆ ಯುವ ಹೃದಯ ಕಟ್ಟಿಕೊಳ್ಳುವ ಕನಸುಗಳನ್ನು ಭಂಗಗೊಳಿಸಲೂ ಆಗುವುದಿಲ್ಲ ಎಂಬ ಆಧುನಿಕ ಬದುಕಿನ ಸಂದೇಶವನ್ನೂ ನೀಡುತ್ತಾನೆ. ಎರಡು ತಲೆಮಾರುಗಳನ್ನು ಭೌತಿಕವಾಗಿ ದೂರ ಇರಿಸುವ ಆಧುನಿಕ ಜಗತ್ತಿನ ಬದುಕು ಮನುಜ ಸಂಬಂಧಗಳನ್ನು ಎಂದಿಗೂ ಭಗ್ನಗೊಳಿಸುವುದಿಲ್ಲ, ಭಗ್ನಗೊಳಿಸಕೂಡದು ಎಂಬ ಸಂದೇಶವನ್ನೂ ‘ಕಣಿವೆಯ ಹಾಡು’ ನೀಡುತ್ತದೆ.
ನೃತ್ಯ-ಗಾಯನ-ಭಾವಾಭಿನಯದ ಹೂರಣ
ಮೂರು ಪಾತ್ರಗಳಿಂದ ಕೂಡಿದ ಕಥಾಹಂದರವನ್ನು ಇಬ್ಬರು ನಟರ ಮೂಲಕ ಸಾದರ ಪಡಿಸುವ ಮೂಲ ನಾಟಕದ ಸವಾಲನ್ನು ಸಮರ್ಪಕವಾಗಿ ನಿಭಾಯಿಸಿರುವ ನಿರ್ದೇಶಕ ಡಾ. ಶ್ರೀಪಾದ್ ಭಟ್ ಇಬ್ಬರು ಕಲಾವಿದರೊಳಗಿನ ಕಲಾ ಪ್ರತಿಭೆಯನ್ನು ಸಂಪೂರ್ಣವಾಗಿ ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜೋಂಕರ್ಸ್ ಪಾತ್ರದಲ್ಲಿ ವೃದ್ಧನಾಗಿ, ಮತ್ತೊಂದು ಪಾತ್ರದಲ್ಲಿ ವಯಸ್ಕನಾಗಿ ಮೇಘ ಸಮೀರ್ ಅವರ ನಟನೆ ನಿಜಕ್ಕೂ ಮನಮುಟ್ಟುವಂತಿದೆ. ದೇಹಭಾಷೆಯೊಂದಿಗೆ ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಹಾಗೂ ತನ್ನ ಮೃತಪತ್ನಿಯೊಡನೆ ಸಂಭಾಷಿಸುವಾಗಿನ ಸ್ವಗತದ ಸನ್ನಿವೇಶಗಳಲ್ಲಿ ಸಮೀರ್ ತಮ್ಮ ಕಲಾ ಪ್ರತಿಭೆಗೆ ಮೆರುಗು ನೀಡುತ್ತಾರೆ. ಮೊಮ್ಮಗಳೊಡಗಿನ ಹುಡುಗಾಟಗಳಲ್ಲಿ, ತಮಾಷೆಯ ಪ್ರಸಂಗಗಳಲ್ಲಿ ತೋರುವ ತನ್ಮಯತೆಯನ್ನೇ ಸಮೀರ್, ಜೋಂಕರ್ಸ್ ಮೊಮ್ಮಗಳು ವೆರೋನಿಕಾಳ ನಿರ್ಧಾರದಿಂದ ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳಲ್ಲೂ ತೋರುವ ಮೂಲಕ ತಮ್ಮ ಕಲಾಪ್ರೌಢಿಮೆಯನ್ನು ಮೆರೆದಿದ್ದಾರೆ.
ಒಂದು ಕಥಾವಸ್ತು ಎಷ್ಟೇ ಗಂಭೀರವಾಗಿದ್ದರೂ, ಕಥಾ ಹಂದರ ತೆಳುವಾಗಿದ್ದಾಗ ಅದನ್ನು ಸಾದರಪಡಿಸುವ ಕಲಾವಿದರ ನಟನಾ ಪ್ರತಿಭೆ ಎಲ್ಲವನ್ನೂ ಆವರಿಸುವ ಮೂಲಕ ಹೊಸ ಹೊಳಹು ನೀಡುವುದನ್ನು ಅನೇಕ ನಾಟಕ/ಸಿನೆಮಾಗಳಲ್ಲಿ ಕಾಣಬಹುದು (ಡಾ. ರಾಜ್ ಅವರ ಕಸ್ತೂರಿ ನಿವಾಸ ಒಂದು ಅತ್ಯುತ್ತಮ ನಿದರ್ಶನ). ‘ಕಣಿವೆಯ ಹಾಡು’ ನಾಟಕವೂ ಬಹಳವೇ ಗಂಭೀರ ಕಥಾವಸ್ತುವಿನೊಂದಿಗೆ ರಂಗರೂಪ ಪಡೆದಿದ್ದರೂ, ಕತೆಯ ಹಂದರ ಮತ್ತು ವಿಸ್ತಾರ ತೆಳುವಾದದ್ದು. ಆದರೆ ಪರಿಣಾಮಕಾರಿಯೂ ಹೌದು. ಈ ಕತೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವೆರೋನಿಕಾಳ ಪಾತ್ರ ವೈವಿಧ್ಯ ಮತ್ತು ಸಹಜ ಭಾವಾಭಿನಯದ ದೃಶ್ಯಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ. ಇಡೀ ನಾಟಕವನ್ನು ವೆರೋನಿಕಾ (ದಿಶಾ ರಮೇಶ್)ಆವರಿಸಿಕೊಳ್ಳುತ್ತಾಳೆ.
ವೆರೋನಿಕಾ ಹಾಡುತ್ತಾಳೆ, ಕುಣಿಯುತ್ತಾಳೆ, ಪಶ್ಚಿಮ ಸಂಗೀತಕ್ಕೆ ಹೆಜ್ಜೆ ಹಾಕುತ್ತಾಳೆ, ನರ್ತಿಸುತ್ತಾಳೆ ಹಾಗೆಯೇ ತನ್ನ ಗಾಯನ-ನೃತ್ಯದ ಮೂಲಕವೇ ತನ್ನೊಳಗೆ ಚಿಗುರುತ್ತಲೇ ಇರುವ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾಳೆ. ದಿಶಾ ರಮೇಶ್ ವೆರೋನಿಕಾ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ರೀತಿಯಲ್ಲಿ ತಮ್ಮ ಗಾಯನ-ನೃತ್ಯ- ಸಂಭಾಷಣೆ ಹಾಗೂ ಅಭಿವ್ಯಕ್ತಿಗಳನ್ನು ಪ್ರೇಕ್ಷಕರ ಮುಂದಿರಿಸುತ್ತಾರೆ. ದಿಶಾ ರಮೇಶ್ ಅವರ ನೃತ್ಯ ಪ್ರತಿಭೆ ಮತ್ತು ಗಾನ ಪ್ರತಿಭೆ ಎರಡೂ ‘ಕಣಿವೆಯ ಹಾಡು’ ನಾಟಕದಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಉಚ್ಚ ಸ್ಥಾಯಿಯಲ್ಲಿ ಹಾಡುವುದರೊಂದಿಗೆ ಪ್ರೇಕ್ಷಕರನ್ನು ಸ್ತಂಭಿಭೂತವಾಗಿಸುವ ದಿಶಾ ರಮೇಶ್ ವೆರೋನಿಕಾಳ ಪಾತ್ರವನ್ನು ನೋಡುವವರ ನಡುವೆ ತಂದು ನಿಲ್ಲಿಸುವುದು ಇಡೀ ನಾಟಕದ ವೈಶಿಷ್ಟ್ಯ ಮತ್ತು ಹಿರಿಮೆ. ಹಾಗೆಯೇ ಅಜ್ಜನೊಡನೆ ಮಾಡುವ ವಾಗ್ವಾದಗಳು, ಹೂಡುವ ಜಗಳ, ಮರುಕ್ಷಣವೇ ಪ್ರೀತಿಯಿಂದ ಲಲ್ಲೆಗರೆವ ಮುದ್ದಿನ ಮೊಮ್ಮಗಳ ಚೇಷ್ಟೆ, ಹೀಗೆ ಹಲವು ಆಯಾಮಗಳಲ್ಲಿ ದಿಶಾ ರಮೇಶ್ ತಮ್ಮ ಭಾವಾಭಿನಯದ ಶ್ರೇಷ್ಠತೆಯನ್ನು ಮೆರೆದಿದ್ದಾರೆ.
ರವೀಂದ್ರನಾಥ ಠಾಗೋರ್ ಮತ್ತು ವೋಲೆ ಸೊಯೆಂಕಾ ಅವರ ಹಾಡುಗಳನ್ನು ಕನ್ನಡೀಕರಿಸುವ ಮೂಲಕ ಸ್ಥಳೀಯ ಸಾಂಸ್ಕೃತಿಕ ಸೂಕ್ಷ್ಮಗಳಿಗೆ ಸ್ಪಂದಿಸುವುದರಲ್ಲಿ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹಾಗೂ ಇಡೀ ತಂಡ ಯಶಸ್ವಿಯಾಗಿದೆ. ಈ ಹಾಡುಗಳು ಒಂದೆಡೆ ವೆರೋನಿಕಾಳ ಕನಸಿಗೆ ಗರಿ ಮೂಡಿಸಿದರೆ ಮತ್ತೊಂದೆಡೆ ಜೋಂಕರ್ಸ್‌ನ ಆತಂಕಗಳನ್ನು ಹೆಚ್ಚಿಸುತ್ತದೆ. ಎರಡು ತಲೆಮಾರುಗಳ ನಡುವೆ ಸಹಜವಾಗಿ ಮೂಡಬಹುದಾದ ಬಿರುಕುಗಳು ಹೇಗೆ ಹಿರಿಯ ತಲೆಮಾರನ್ನು ಕಂಗೆಡಿಸುತ್ತದೆ, ಕಿರಿಯರಲ್ಲಿ ಗೊಂದಲ ಮೂಡಿಸುತ್ತದೆ ಎನ್ನುವುದನ್ನು ಸಮರ್ಪಕವಾಗಿ ಬಿಂಬಿಸುವ ‘ಕಣಿವೆಯ ಹಾಡು’ ಈ ಜಟಿಲ ಸವಾಲನ್ನು ಗೆಲ್ಲಲೇ ಬೇಕಾದ ಯುವ ಪೀಳಿಗೆಯ ಅನಿವಾರ್ಯತೆಗಳನ್ನೂ ಸಹಜವಾಗಿ ಕಟ್ಟಿಕೊಡುತ್ತದೆ.
ವರ್ತಮಾನದ ಸಂದರ್ಭದಲ್ಲೂ ತಮ್ಮ ನೆಲದಲ್ಲಿ ತಾವೇ ಪರಕೀಯರಾಗಿಬಿಡುವ ಮಣ್ಣಿನ ಮಕ್ಕಳ, ಮೂಲ ನಿವಾಸಿಗಳ ತಳಮಳ ಹಾಗೂ ತೊಳಲಾಟಗಳನ್ನು ಜೋಂಕರ್ಸ್ ಮೂಲಕ ಪ್ರಸ್ತುತ ಪಡಿಸುವ ‘ಕಣಿವೆಯ ಹಾಡು’, ಎಷ್ಟೇ ಆತಂಕ-ಅಪಾಯಗಳನ್ನು ಎದುರಿಸಿದರೂ ನಗರದ ಬದುಕಿಗೆ ಅನಿವಾರ್ಯವಾಗಿ ತೆರೆದುಕೊಳ್ಳುವ ಹೊಸ ಪೀಳೀಗೆಯ ತುಡಿತ-ಆಕಾಂಕ್ಷೆ ಹಾಗೂ ಮನೋಭಾವನೆಗಳನ್ನು ಸಹ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ. ಈ ಸಂಘರ್ಷದ ನಡುವೆಯೇ ಅಜ್ಜ-ಮೊಮ್ಮಗಳ ಮಧುರ ಬಾಂಧವ್ಯವು ಅರಳಿ, ವಿಕಸಿಸಿ, ಹಲವು ಸವಾಲುಗಳನ್ನು ಎದುರಿಸಿ ಕೊನೆಗೆ ಪರಸ್ಪರ ಅಪ್ಪಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ವೆರೋನಿಕಾ ಮತ್ತು ಜೋಂಕರ್ಸ್ ಇದಕ್ಕೆ ಸಾಕ್ಷಿಯಾಗುತ್ತಾರೆ.
ಪ್ರೇಕ್ಷಕರನ್ನು ನೂರು ನಿಮಿಷಗಳ ಕಾಲ ಹಿಡಿದಿಡುವ ‘ಕಣಿವೆಯ ಹಾಡು’ ದೀರ್ಘ ಕಾಲ ಮನಸ್ಸಿನಲ್ಲಿ ಉಳಿಯುವಂತಹ ಒಂದು ರಂಗಪ್ರಯೋಗ. ಇದಕ್ಕೆ ಕಾರಣ ದಿಶಾ ರಮೇಶ್ ಮತ್ತು ಮೇಘ ಸಮೀರ್ ಅವರ ತನ್ಮಯತೆ-ತಲ್ಲೀನತೆ, ಸಹಜಾಭಿನಯ ಮತ್ತು ಭಾವಾಭಿವ್ಯಕ್ತಿಯ ನಟನೆ. ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ತನ್ಮಯತೆಯಿಂದ ನಿಭಾಯಿಸಿರುವ ಶ್ರೀಪಾದ್ ಭಟ್ ಅವರ ದಕ್ಷತೆಗೆ ಮೆರುಗು ನೀಡುವಂತೆ ಇಬ್ಬರು ಕಲಾವಿದರ ಅಭಿನಯವೂ ಮೇಳೈಸಿರುವುದು ಇಡೀ ನಾಟಕದ ವೈಶಿಷ್ಟ್ಯ. ‘ಕಣಿವೆಯ ಹಾಡು’ ಪ್ರೇಕ್ಷಕರ ಹೃದಯದ ಹಾಡಿನಂತೆ ನೆನಪುಗಳಲ್ಲಿ ಉಳಿಯುವಂತಹ ಒಂದು ಅಪೂರ್ವ ಪ್ರಯೋಗ. ದಕ್ಷಿಣ ಆಫ್ರಿಕಾದ ಕತೆಯೊಂದನ್ನು ಕನ್ನಡಕ್ಕೆ ಅಳವಡಿಸಿ ಸ್ಥಳೀಯ ಸ್ಪರ್ಶ ನೀಡುವುದೇ ಅಲ್ಲದೆ ಸಂವೇದನಾಶೀಲತೆಯೊಂದಿಗೆ ಪ್ರಸ್ತುತಪಡಿಸಿರುವ ಮಂಡ್ಯ ರಮೇಶ್ ಅವರ ನಟನ ಪಯಣ ರೆಪರ್ಟರಿಗೆ ಅಭಿನಂದನೆ ಸಲ್ಲಲೇಬೇಕು.