ರಣವೀರ್ ವಿವಾದದಲ್ಲಿ ಏಳುವ ಪ್ರಶ್ನೆಗಳೇನು?

ಬಿಜೆಪಿ ಹಾಗೂ ಮೋದಿಯವರ ಸನ್ಮಾನಕ್ಕೆ ಪಾತ್ರವಾಗಿರುವ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಣವೀರ್ ಅಲಹಾಬಾದಿಯ ಮೊನ್ನೆ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೆಟೆಂಟ್ ಶೋ’ನಲ್ಲಿ ಪೋಷಕರ ಬಗ್ಗೆ ಮಾಡಿದ ಅಶ್ಲೀಲ ಕಮೆಂಟ್‌ಗೆ ಕ್ಷಮೆ ಯಾಚಿಸಿದ್ದಾರೆ.
ಆದರೆ ಇದೇ ರಣವೀರ್ ಜಾಗದಲ್ಲಿ ಮುನವರ್ ಫಾರೂಕಿ, ಕುನಾಲ್ ಕಾಮ್ರಾ ಇದ್ದಿದ್ದರೆ, ಅವರು ನೇರವಾಗಿ ಜೈಲಿನಲ್ಲಿ ಇರುತ್ತಿದ್ದರಲ್ಲವೆ?
ಅವರ ಸ್ಥಾನದಲ್ಲಿ ವರುಣ್ ಗ್ರೋವರ್, ವೀರ್ ದಾಸ್ ಇದ್ದಿದ್ದರೆ ಅವರನ್ನು ಪೊಲೀಸರು ಬಿಡುತ್ತಿದ್ದರೇ?
ಅವರು ತನಗೆ ಹಾಸ್ಯ ಮಾಡುವುದು ಹೇಗೆಂದು ತಿಳಿದಿಲ್ಲ ಎಂದು ಹೇಳಿದರು. ಆದರೂ, ಅವರು ತಾನು ಮಾಡಿದ್ದನ್ನು ಹಾಸ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ.
ಈಗ ಯಡವಟ್ಟು ಮಾಡಿಕೊಂಡಿದ್ದಕ್ಕೆ ಅವರು ಕ್ಷಮೆ ಯಾಚಿಸಿಯೂ ಆಗಿದೆ. ಆದರೆ ನಾವು ಇದಕ್ಕಿಂತ ದೊಡ್ಡ ಹಾಗೂ ಗಂಭೀರ ವಿಷಯವನ್ನು ಎತ್ತಬೇಕಲ್ಲವೇ?
ಇಂದು ಇಡೀ ಮಡಿಲ ಮೀಡಿಯಾ ರಣವೀರ್ ಅವರ ವಿರುದ್ಧ ಹರಿಹಾಯುತ್ತಿದೆ. ಆದರೆ ಈ ಮಡಿಲ ಮೀಡಿಯಾದವರು ಪ್ರತಿದಿನ ರಾತ್ರಿ ಮಾಡುತ್ತಿರುವುದು ಏನು?
ಪ್ರೈಮ್ ಟೈಮ್‌ನಲ್ಲಿ ಯಾವ ರೀತಿಯ ಅಸಂವೇದನಾಶೀಲ ವಿಷಯಗಳನ್ನು ತಾವು ಹೇಳುತ್ತಿದ್ದೇವೆ ಎನ್ನುವುದು ಅವರಲ್ಲಿ ಯಾರಿಗಾದರೂ ತಿಳಿದಿದೆಯೇ?
ದೊಡ್ಡ ಸಮಸ್ಯೆ ರಣವೀರ್ ಹೇಳಿಕೆ ಮಾತ್ರವಲ್ಲ. ನಮ್ಮ ಸಮಾಜ ಹೇಳಿಕೆಗಳ ಮಟ್ಟದಲ್ಲಿ ಎಷ್ಟು ಅಸಂವೇದನಾಶೀಲವಾಗುತ್ತಿದೆ ಮತ್ತು ಉನ್ನತ ನಾಯಕರೇ ಅಂಥದ್ದನ್ನು ಮಾಡುತ್ತಿದ್ದಾರೆ ಎನ್ನುವುದನ್ನು ನಿರ್ಲಕ್ಷಿಸುವುದು ಸಾಧ್ಯವೆ?
ಸಂಸತ್ತಿನಲ್ಲಿ ನಿಂತಿರುವ, ಜನಸಮೂಹದ ಮುಂದೆ ನಿಂತಿರುವ, ಮಕ್ಕಳ ಮುಂದೆ ನಿಂತಿರುವ, ಸುದ್ದಿ ವಾಹಿನಿಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಅತಿ ದೊಡ್ಡ ನಾಯಕರು ಅದೆಷ್ಟು ಆಘಾತಕಾರಿ ಮತ್ತು ಅಸಂವೇದನಾಶೀಲ ಹೇಳಿಕೆಗಳನ್ನು ನೀಡುತ್ತಾರೆ.
ಅದರ ಬಗ್ಗೆ ಕಮೆಂಟ್ ಮಾಡುವುದು ಸಹ ನಾಚಿಕೆಗೇಡಿನ ಸಂಗತಿ.
ಆದರೆ ಇಂದು ರಣವೀರ್ ಅಲಹಾಬಾದಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಲ್ಯಾಪ್‌ಡಾಗ್ ಮೀಡಿಯಾ ಸ್ವತಃ ಏನು ಮಾಡುತ್ತಿದೆ?
ರಣವೀರ್ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿಯ ಪ್ರೈಮ್ ಟೈಮ್ ಪತ್ರಿಕೋದ್ಯಮ ಮತ್ತು ಪ್ರಚಾರ ಯಂತ್ರದ ಹೆಸರಿನಲ್ಲಿ ತಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ನೋಡಿಕೊಳ್ಳಬೇಕಲ್ಲವೆ? ತಾವು ಏನೆಲ್ಲ ಅನಾಹುತ ಮಾಡಿದ್ದೇವೆ ಎಂದು ನೋಡಿಕೊಳ್ಳಬೇಕಲ್ಲವೆ?
ಗೌರಿ ಲಂಕೇಶ್ ಹತ್ಯೆಯನ್ನು, ವಿನೋದ್ ದುವಾ ಅವರ ಮರಣವನ್ನು ಸೆಲಬ್ರೇಟ್ ಮಾಡಿದವರು ಇವರೇ ಅಲ್ಲವೆ?
ಇವರೊಳಗಿನ ಮಾನವೀಯತೆ ಸಂಪೂರ್ಣವಾಗಿ ಮಾಯವಾಗಿರುವಾಗ, ರಣವೀರ್ ಅಲಹಾಬಾದಿಯ ಬಗ್ಗೆ ಮಾತಾಡಲು ಇವರಿಗೇನು ಹಕ್ಕಿದೆ?
‘‘ಪಾಡ್‌ಕಾಸ್ಟ್ ಅನ್ನು ಎಲ್ಲಾ ವಯಸ್ಸಿನ ಜನರು ವೀಕ್ಷಿಸುತ್ತಾರೆ ಮತ್ತು ಕುಟುಂಬವನ್ನು ನಾನು ಎಂದಿಗೂ ಗೌರವಿಸುತ್ತೇನೆ. ವೇದಿಕೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕಿತ್ತು. ನನ್ನ ಹೇಳಿಕೆಯ ವೀಡಿಯೊಗಳನ್ನು ತೆಗೆಯುವಂತೆ ಕೇಳಿಕೊಂಡಿದ್ದೇನೆ. ಈಗ ಕ್ಷಮೆಯೊಂದನ್ನೇ ಕೇಳಬಲ್ಲೆ, ಮಾನವೀಯತೆಯಿಂದ ನನ್ನನ್ನು ಕ್ಷಮಿಸುತ್ತೀರಿ ಎಂದು ಭಾವಿಸುತ್ತೇನೆ’’ ಎಂದು ರಣವೀರ್ ಹೇಳಿದ್ದಾರೆ.
ರಣವೀರ್ ವಿವಾದದ ಬಳಿಕ ಹಲವು ಗಂಭೀರ ಪ್ರಶ್ನೆಗಳು ಏಳುತ್ತಿವೆ.
ಮೊದಲನೆಯದಾಗಿ, ಸಮಾಜದಲ್ಲಿನ ಅಸಂವೇದನಾಶೀಲತೆಯನ್ನು ಯಾರೂ ಪರಿಹರಿಸುತ್ತಿಲ್ಲ.
ರಣವೀರ್ ಅಲಹಾಬಾದಿಯ ಹೆಸರಿನಲ್ಲಿ ಬಿಜೆಪಿ ಸರಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಾರಂಭಿಸಬಹುದು ಎಂಬ ಆತಂಕವೂ ಇದೆ.
ಅಂದರೆ, ಅಲಹಾಬಾದಿಯ ಅಶ್ಲೀಲ ಹೇಳಿಕೆ ನೆಪ ಮಾಡಿಕೊಂಡು, ನಿರ್ಭಯವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಮತ್ತು ಸರಕಾರವನ್ನು ಪ್ರಶ್ನಿಸುವವರನ್ನು ಗುರಿ ಮಾಡುವ ಸಾಧ್ಯತೆಯೂ ಇದೆ.
ಆದರೆ ಬಿಜೆಪಿ ಮತ್ತು ಲ್ಯಾಪ್‌ಡಾಗ್ ಮೀಡಿಯಾ ತಮ್ಮನ್ನು ತಾವೇ ನೋಡಿಕೊಳ್ಳಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅಂಥವರೇ ಆತ್ಮಹತ್ಯೆಯಂಥ ವಿಷಯವನ್ನೂ ಜೋಕ್ ಮಾಡುವುದನ್ನು ನೋಡಿದರೆ ಏನೆನ್ನುವುದು?
ಮೋದಿ ರಿಪಬ್ಲಿಕ್ ನ್ಯೂಸ್ ಚಾನೆಲ್‌ನ ಕಾರ್ಯಕ್ರಮಕ್ಕೆ ಹೋಗುತ್ತಾರೆ ಮತ್ತು ಆತ್ಮಹತ್ಯೆಯಂತಹ ಪ್ರಮುಖ ವಿಷಯದ ಬಗ್ಗೆ ಹಾಸ್ಯ ಮಾಡುತ್ತಾರೆ.
ಅತ್ಯಾಚಾರ, ಆತ್ಮಹತ್ಯೆ, ಕೊಲೆ ಇಂಥ ವಿಚಾರಗಳಲ್ಲಿ ಜೋಕ್ ಮಾಡುವುದು ಎಷ್ಟು ಕ್ರೂರವಲ್ಲವೆ?
ಅದರಲ್ಲೂ ದೇಶದ ಪ್ರಧಾನಿ, ಅದೂ ಒಂದು ಚಾನೆಲ್‌ನ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಕುರಿತು ಜೋಕ್ ಮಾಡುತ್ತಾರೆ. ಪ್ರಧಾನಿ ಅದನ್ನು ಮಾಡಬೇಕಿತ್ತೇ?
ಇನ್ನೊಂದು ಉದಾಹರಣೆ.
ರಮೇಶ್ ಬಿಧೂರಿ ಸಂಸತ್ತಿನೊಳಗೆ ಇನ್ನೋರ್ವ ಸಂಸದರನ್ನು ಭಯೋತ್ಪಾದಕ ಎಂದು ಕರೆದಿದ್ದರು.
ಪ್ರದೀಪ್ ಭಂಡಾರಿಯಂಥ, ಸುದ್ದಿ ವಾಹಿನಿಯಲ್ಲಿ ತೀರಾ ಅಶ್ಲೀಲ ಮಾತಾಡುವ ವ್ಯಕ್ತಿಯನ್ನು ಬಿಜೆಪಿ ತನ್ನ ವಕ್ತಾರರನ್ನಾಗಿ ಇರಿಸುತ್ತದೆ. ಅಂಥ ಜನರು ಬಿಜೆಪಿಯಲ್ಲಿ ಸ್ಥಾನ ಪಡೆಯುತ್ತಾರೆ.
ಪ್ರಧಾನಿ ಒಮ್ಮೆ ಡಿಸ್ಲೆಕ್ಸಿಯಾ ರೋಗಿಗಳನ್ನು ಗೇಲಿ ಮಾಡುತ್ತಿದ್ದರು ಎಂಬುದನ್ನು ಗಮನಿಸಬೇಕು.
ಡಿಸ್ಲೆಕ್ಸಿಯಾ ರೋಗಿಗಳು ಯಾರು?
ಅವರು ಓದಲು ಸಹ ಬಾರದ ಮಕ್ಕಳು.
ಪುಸ್ತಕ ಅವರ ಮುಂದೆ ಇದೆ, ಅವರು ಒಂದು ಸಾಲನ್ನು ಓದುತ್ತಾರೆ ಮತ್ತು ಇನ್ನೊಂದು ಸಾಲನ್ನು ಓದಲು ಸಾಧ್ಯವಾಗುವುದಿಲ್ಲ. ಅಂಥವರನ್ನು ಕೂಡ ಪ್ರಧಾನಿ ಮೋದಿ ಗೇಲಿ ಮಾಡಿದ್ದರು.
ಇಂಥವರು ರಣವೀರ್ ಅಲಹಾಬಾದಿಯ ವಿರುದ್ಧ ಏಕೆ ಹರಿಹಾಯುತ್ತಾರೆ?
ದೇಶದ ಹಲವು ನಾಯಕರು ಅನುರಾಗ್ ಠಾಕೂರ್ ಅವರಂಥ ಮನೋಭಾವವನ್ನು ಹೊಂದಿದ್ದಾರೆ.
ಚುನಾವಣಾ ವೇದಿಕೆಯಲ್ಲಿ ಅವರು ಗುಂಡಿಕ್ಕಿ ಕೊಲ್ಲುವ ಬಗ್ಗೆ ಮಾತಾಡುತ್ತಾರೆ. ಚುನಾವಣಾ ವೇದಿಕೆಯಲ್ಲಿ ಅವರು ಗುಂಡಿಕ್ಕಿ ಕೊಲ್ಲುವ ಬಗ್ಗೆ ಮಾತಾಡುತ್ತಾರೆ.
ನಿಶಿಕಾಂತ್ ದುಬೆ ಎಂಬ ಈ ವ್ಯಕ್ತಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಕಾಂಗ್ರೆಸ್ ಶಾಸಕಿ ದೀಪಿಕಾ ಅವರಿಗೆ ‘ನಗರ ವಧು’ ಎಂಬ ಪದ ಬಳಸುತ್ತಾರೆ. ಸಂಸತ್ತಿನಲ್ಲಿ ತನಗೆ ರಕ್ಷಣೆ ಇದೆ ಎಂದು ಅವರಿಗೆ ಗೊತ್ತಿದೆ. ಹೀಗಿರುವಾಗ, ನಾವು ರಣವೀರ್ ಅಲಹಾಬಾದಿಯ ಮೇಲೆ ಮಾತ್ರ ಕೋಪಗೊಳ್ಳುತ್ತಿದ್ದೇವೆ.
ಅವರು ಹೇಳಿದ್ದಕ್ಕೆ ಕ್ಷಮೆ ಯಾಚಿಸಿದರು. ವಿಷಯ ಅಲ್ಲಿಗೆ ಕೊನೆಗೊಳ್ಳಲಿ.
ಆದರೆ ಆತನಿಗೆ ನೀತಿ ಪಾಠ ಹೇಳುವ ಮಡಿಲ ಮಾಧ್ಯಮಗಳು ತಮ್ಮನ್ನು ತಾವೇ ಮೊದಲು ನೋಡಿಕೊಳ್ಳಬೇಕು.
ಶ್ರೀದೇವಿ ಸಾವಿನ ಬಗ್ಗೆ ಅಸಭ್ಯವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಇವರೇ ಆಗಿದ್ದರು.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಗ್ಗೆ ಅಸಭ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಮತ್ತು ರಿಯಾ ಚಕ್ರವರ್ತಿಯನ್ನು ನಿಂದಿಸುತ್ತಿದ್ದವರು ಇವರೇ ಆಗಿದ್ದರು.
ಈ ಜನರು ಪತ್ರಿಕೋದ್ಯಮದ ಹೆಸರಿನಲ್ಲಿ ಏನೇನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ.
ಇಂದು ಈ ಜನರು ರಣವೀರ್ ಅಲಹಾಬಾದಿಯ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ತಮ್ಮ ಆತ್ಮಸಾಕ್ಷಿಯನ್ನು ಪರಿಶೀಲಿಸಬೇಕಾಗಿದೆ.
ನಾಯಕರಿಂದ ಹಿಡಿದು ಪತ್ರಕರ್ತರವರೆಗೆ ಸಮಾಜದ ಎಲ್ಲಾ ಜನರು ಇಂಥದ್ದನ್ನೇ ಮಾಡಿದ್ದಿದೆ.
ದುರ್ಗಾ ವಿಸರ್ಜನೆ ಯಾತ್ರೆ ನಡೆಯುವಾಗ, ಮಸೀದಿಗಳ ಮುಂದೆ ನಿಂತು ಡಿಜೆ ಹಾಡುಗಳ ಅಬ್ಬರ ಮಾಡಲಾಗುತ್ತದೆ.
ಅದರಲ್ಲಿ ಯಾವ ಸಂಸ್ಕೃತಿ, ಯಾವ ಧರ್ಮವಿದೆ?
ವಾಸ್ತವವೆಂದರೆ ಕಳೆದ 10-11 ವರ್ಷಗಳಲ್ಲಿ ಈ ದ್ವೇಷವನ್ನು ಕಾನೂನುಬದ್ಧ ಎನ್ನುವಂತೆ ಮಾಡಲಾಗಿದೆ.
ಡಿಸ್ಲೆಕ್ಸಿಯಾ ಅಥವಾ ಆತ್ಮಹತ್ಯೆಯ ಬಗ್ಗೆ ನೀಡಲಾದ ತೀರಾ ಕೀಳು ಮಟ್ಟದ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಸಮಾಜ, ಅದರ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿಯೇ ಇಲ್ಲ.
ವಿಷಮಯ ಮಡಿಲ ಮೀಡಿಯಾದ ಅಂತಹ ಕಾರ್ಯಕ್ರಮಗಳನ್ನು ನೋಡುವ ಸಮಾಜ, ತಾನು ಕೂಡ ಈ ರೀತಿಯ ಚಿಂತನೆಯಲ್ಲಿ ಮುಳುಗಿಹೋಗಲು ನೋಡುತ್ತದೆ.
ಅದರ ಮಾತುಗಳನ್ನು ಕೇಳಿ ಸಮಾಜ ಒಳಗಿನಿಂದ ಅನಾರೋಗ್ಯಕ್ಕೆ ಒಳಗಾಗುವುದು ನಿಶ್ಚಿತ.
ಒಳಗಿನಿಂದ ಅನಾರೋಗ್ಯಕ್ಕೆ ಒಳಗಾದಾಗ ಮಾತುಗಳೂ ಅಷ್ಟೇ ಅನಾರೋಗ್ಯಕರವಾಗಿ, ಸಂವೇದನಾ ರಹಿತವಾಗಿ, ಅಸಭ್ಯವಾಗಿ ಇರುತ್ತವೆ.
ಇದು ಕೋಮು ಸಾಮರಸ್ಯದ ಬಗ್ಗೆ ಮಾತನಾಡಬೇಕಾದ ಸಮಯ.
ಏಕತೆಯ ಬಗ್ಗೆ ಮಾತನಾಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿರುವ ಸಮಯ ಇದು.
ಮುಂದಿನ ಪೀಳಿಗೆಗಾಗಿ ಅನಾರೋಗ್ಯಕರ ಸಮಾಜವನ್ನು ಬಿಡಲು ಸಾಧ್ಯನಾ?
ಸಮಾಜವನ್ನು ದ್ವೇಷದಲ್ಲಿ ಮುಳುಗಿಸಿದವರಿಂದ ಇದೆಲ್ಲವನ್ನೂ ಪಾರು ಮಾಡಬೇಕಿದೆ.