ಅತ್ಯಾಚಾರ ಪ್ರಕರಣ: ಮತ್ತೆ ಪರೋಲ್ ಕೋರಿದ ಗುರ್ಮೀತ್ ಸಿಂಗ್!
ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ (Photo: PTI)
ಚಂಡೀಗಢ: ಇಬ್ಬರು ಭಕ್ತರನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಛಾ ಸೌಧ ಮುಖ್ಯಸ್ಥ ಗುರ್ಮೀತ್ ರಹೀಂ ಸಿಂಗ್ 20 ದಿನಗಳ ಅವಧಿಗೆ ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಾನೆ. ಅಕ್ಟೋಬರ್ 5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರೋಲ್ ಕೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಆಗಸ್ಟ್ 13ರಂದು ನೀಡಿದ್ದ 21 ದಿನಗಳ ಪರೋಲ್ ಮೇಲೆ ಬಿಡುಗಡೆಯಾಗಿ ಸೆಪ್ಟೆಂಬರ್ 2ರಂದು ರೋಹ್ಟಕ್ ನ ಸುನಾರಿಯಾ ಜೈಲಿಗೆ ಸಿಂಗ್ ವಾಪಸ್ಸಾಗಿದ್ದ. ಬಹುತೇಕ ಹರ್ಯಾಣದಲ್ಲಿ ಇರುವ ತನ್ನ ಅನುಯಾಯಿಗಳನ್ನು ಒಂದು ನಿರ್ದಿಷ್ಟ ವಿಧಾನದಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಒತ್ತಡ ತರುತ್ತಿದ್ದಾನೆ ಎಂದು ಆಪಾದಿಸಲಾಗಿದೆ.
2017ರಲ್ಲಿ ಜೈಲುಪಾಲಾಗಿರುವ ಸಿಂಗ್ ಎಂಟು ಬಾರಿ ಪರೋಲ್ ನಲ್ಲಿ ಮತ್ತು 10 ಬಾರಿ ಫರ್ಲಾದಲ್ಲಿ ಬಿಡುಗಡೆಯಾಗಿ ಒಟ್ಟು 255 ದಿನ ಅಂದರೆ ಎಂಟು ತಿಂಗಳಿಗಿಂತಲೂ ಹೆಚ್ಚು ಕಾಲ ಜೈಲಿನಿಂದ ಹೊರಗಿದ್ದ. ಈತನ ಹಲವು ಪರೋಲ್ ಮತ್ತು ಫರ್ಲಾಗಳು ಹರ್ಯಾಣ ಹಾಗೂ ಅಕ್ಕಪಕ್ಕದ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲೇ ಆಗಿವೆ ಎನ್ನುವುದು ಗಮನಾರ್ಹ.
20 ದಿನಗಳ ಪರೋಲ್ ಗೆ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ಚುನಾವಣಾ ವಿಭಾಗಕ್ಕೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮನವಿಗೆ ಅನಿವಾರ್ಯವಾದ ತುರ್ತು ಕಾರಣ ಏನು ಎಂಬ ಬಗ್ಗೆ ವಿವರಣೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಚುನಾವಣಾ ವಿಭಾಗ ಕೇಳಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಚುನಾವಣಾ ಆಯೋಗ 2019ರ ಏಪ್ರಿಲ್ ನಲ್ಲಿ ರಾಜ್ಯಗಳಿಗೆ ನೀಡಿದ್ದ ಆದೇಶದಂತೆ, ತೀರಾ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಪರೋಲ್ ನೀಡಬೇಕು ಎಂದು ಸೂಚಿಸಿತ್ತು ಮತ್ತು ಪರೋಲ್ ನಲ್ಲಿ ಬಿಡುಗಡೆಯಾದ ವ್ಯಕ್ತಿ ಯಾವುದೇ ಚುನಾವಣಾ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿತ್ತು.