ರಶ್ಯ ವಿಪಕ್ಷ ಮುಖಂಡ ನವಾಲ್ನಿ ಜೈಲಿನಲ್ಲಿ ಸಾವು : ವರದಿ
ಅಲೆಕ್ಸಿ ನವಾಲ್ನಿ (Photo:X/@navalny)
ಮಾಸ್ಕೋ: ದೀರ್ಘಾವಧಿಯಿಂದ ಬಂಧನದಲ್ಲಿರುವ ರಶ್ಯದ ವಿಪಕ್ಷ ಮುಖಂಡ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಾಜಕೀಯ ವಿರೋಧಿ ಅಲೆಕ್ಸಿ ನವಾಲ್ನಿ (47 ವರ್ಷ) ರಶ್ಯದ ಆಕ್ರ್ಟಿಕ್ ಜೈಲಿನಲ್ಲಿ ಶುಕ್ರವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
19 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ನವಾಲ್ನಿಯನ್ನು ಮಾಸ್ಕೋದ ಈಶಾನ್ಯಕ್ಕೆ ಸುಮಾರು 1,900 ಕಿ.ಮೀ ದೂರದ ಖಾರ್ಪ್ ನಗರದಲ್ಲಿರುವ ಐಕೆ-3 ಜೈಲಿನಲ್ಲಿ ಬಂಧನಲ್ಲಿಡಲಾಗಿತ್ತು.
ಜೈಲಿನ ಒಳಗೆ ದಿನನಿತ್ಯದಂತೆ ಶುಕ್ರವಾರ ಬೆಳಿಗ್ಗೆ ವಾಯುವಿಹಾರ ನಡೆಸಿದ ಬಳಿಕ ನವಾಲ್ನಿ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡರು. ತೀವ್ರ ಅಸ್ವಸ್ಥರಾಗಿದ್ದ ಅವರು ಚೇತರಿಸಿಕೊಳ್ಳಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. `ಜೈಲಿನ ವೈದ್ಯಕೀಯ ಸಿಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಆಂಬ್ಯುಲೆನ್ಸ್ ಕರೆಸಿಕೊಂಡರು. ಪ್ರಾಥಮಿಕ ಚಿಕಿತ್ಸೆ ಒದಗಿಸಿದರೂ ಫಲ ನೀಡಲಿಲ್ಲ. ಕೈದಿ ಮೃತಪಟ್ಟಿರುವುದಾಗಿ ಆಂಬ್ಯುಲೆನ್ಸ್ ನ ವೈದ್ಯರು ಘೋಷಿಸಿದರು. ಸಾವಿನ ಕಾರಣವನ್ನು ಪರಿಶೀಲಿಸಲಾಗುತ್ತಿದೆ' ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ರಶ್ಯದ ಅತ್ಯಂತ ಜನಪ್ರಿಯ ವಿರೋಧ ಪಕ್ಷದ ಮುಖಂಡರಾಗಿರುವ ನವಾಲ್ನಿ, ದಶಕಗಳಿಗೂ ಹಿಂದೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅವರ ನಿಕಟವರ್ತಿಗಳಾಗಿದ್ದ ಗಣ್ಯ ಮುಖಂಡರನ್ನು ಕಟುವಾಗಿ ಟೀಕಿಸುವ ಮೂಲಕ ಮತ್ತು ರಶ್ಯ ಆಡಳಿತದಲ್ಲಿ ವ್ಯಾಪಿಸಿದ್ದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುವ ಮೂಲಕ ಪ್ರಾಮುಖ್ಯತೆ ಪಡೆದಿದ್ದರು.
ನವಾಲ್ನಿ ಸಾವಿನ ಬಗ್ಗೆ ಪುಟಿನ್ಗೆ ಮಾಹಿತಿ ನೀಡಲಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. 2020ರ ಆಗಸ್ಟ್ ನಲ್ಲಿ ಸೈಬೀರಿಯಾದಲ್ಲಿ ನವಾಲ್ನಿಗೆ ವಿಷಪ್ರಾಶನ ಮಾಡಿರುವುದಾಗಿ ವರದಿಯಾಗಿತ್ತು. 2021ರಲ್ಲಿ ಜರ್ಮನಿಯಿಂದ ರಶ್ಯಕ್ಕೆ ಮರಳಿದ್ದ ನವಾಲ್ನಿಯನ್ನು 2021ರ ಜನವರಿಯಿಂದ ಬಂಧನದಲ್ಲಿ ಇಡಲಾಗಿತ್ತು.
ನವಾಲ್ನಿ ಮೃತಪಟ್ಟಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ. ಅವರ ವಕೀಲರು ಈಗ ಖಾರ್ಪ್ ನಗರಕ್ಕೆ ಧಾವಿಸಿದ್ದಾರೆ ಎಂದು ನವಾಲ್ನಿಯ ಪತ್ರಿಕಾ ಕಾರ್ಯದರ್ಶಿ ಹೇಳಿದ್ದಾರೆ. ನವಾಲ್ನಿ ಜೈಲಿನಲ್ಲಿ ಮೃತಪಟ್ಟಿರುವುದನ್ನು ಜೈಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪತ್ನಿಗೆ ಅಂತಿಮ ಸಂದೇಶ
ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ಸಂದರ್ಭ ಅಲೆಕ್ಸಿ ನವಾಲ್ನಿ ತನ್ನ ಪತ್ನಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ರವಾನಿಸಿದ್ದು `ತನ್ನನ್ನು 15 ದಿನಗಳಾವಧಿಗೆ ಶಿಕ್ಷೆಯ ಸೆಲ್ಗೆ ರವಾನಿಸಲಾಗಿದೆ ಎಂದಿದ್ದರು. ಪತ್ನಿಯೊಂದಿಗೆ ಕಳೆದಿದ್ದ ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದ ನವಾಲ್ನಿ, ನೀನು ಈಗಲೂ ನನ್ನ ಜತೆಯೇ ಇದ್ದೀಯಾ ಎಂಬ ಭಾವನೆಯೇ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ” ಎಂದಿದ್ದರು.