ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ

ಗ್ರಾಮೀಣರ ಉಪ ಆದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿತಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಇದು ಕೆಲಸ ಮಾಡುವ ಹಕ್ಕನ್ನು ಖಾತರಿ ಪಡಿಸುವ ಗುರಿ ಹೊಂದಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ. ಕೃಷಿಯಲ್ಲಿ ಕೂಲಿ ಕೆಲಸ ವರ್ಷದ ಕೆಲವು ತಿಂಗಳಿಗೆ ಸೀಮಿತವಾಗಿರುವುದರಿಂದ, ಗ್ರಾಮೀಣರಿಗೆ ನರೇಗಾ ಒಂದು ಪೂರಕ ಆದಾಯ ಮೂಲವಾಗಿದೆ. ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ ನೂರು ದಿನ ಕೆಲಸ ನೀಡಬೇಕಾಗುತ್ತದೆ. ಆದರೆ, ನರೇಗಾ ಸಂಘರ್ಷ ಮೋರ್ಚಾ ಪ್ರಕಾರ, ಕೆಲಸದ ದಿನಗಳು 2023-24ರಲ್ಲಿ 52 ದಿನಗಳಿಂದ 2024-25ರಲ್ಲಿ 44.6 ದಿನಗಳಿಗೆ ಕುಸಿದಿವೆ. ವೇತನ ಪಾವತಿಯಲ್ಲಿ ವಿಳಂಬ ದಿನೇದಿನೇ ಹೆಚ್ಚುತ್ತಿದೆ. ಕಾಯ್ದೆ ಪ್ರಕಾರ, ಹದಿನೈದು ದಿನಗಳೊಳಗೆ ವೇತನ ನೀಡಬೇಕು ಎಂದಿದ್ದರೂ, ಕೆಲವೊಮ್ಮೆ ಎರಡು ತಿಂಗಳಾದರೂ ವೇತನ ಪಾವತಿ ಆಗುತ್ತಿಲ್ಲ. ವಿಳಂಬವಾದಲ್ಲಿ, 16ನೇ ದಿನದಿಂದ ದಿನವೊಂದಕ್ಕೆ ಶೇ. 0.05ರಂತೆ ಪರಿಹಾರ ನೀಡಬೇಕು. ದಂಡ ಕೂಡ ಪಾವತಿಯಾಗುತ್ತಿಲ್ಲ. ನರೇಗಾ ಜಾಲತಾಣದ ಪ್ರಕಾರ, ಕರ್ನಾಟಕದಲ್ಲಿ ಕಾರ್ಮಿಕರಿಗೆ 10 ಲಕ್ಷ ದಿನಗಳ ವೇತನ ಬಾಕಿಯಿದೆ.
ಆ್ಯಪ್ ಆಧರಿತ ರಾಷ್ಟ್ರೀಯ ಮೊಬೈಲ್ ಮೇಲುಸ್ತುವಾರಿ ವ್ಯವಸ್ಥೆಗೆ 2023ರಲ್ಲಿ ಚಾಲನೆ ನೀಡಲಾಯಿತು. ಸೋರಿಕೆ ಮತ್ತು ಭ್ರಷ್ಟಾಚಾರ ತಡೆಗೆ ರೂಪಿಸಿದ ಈ ತಂತ್ರಜ್ಞಾನ ಆಧರಿತ ಪರಿಹಾರ ಕ್ರಮ ಸಮಸ್ಯಾತ್ಮಕವಾಗಿದ್ದು, ಕಾರ್ಯಕರ್ತರು-ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ, ಕಳೆದ ಕೆಲವು ವರ್ಷದಿಂದ ಯೋಜನೆಗೆ ಕೇಂದ್ರ ಸರಕಾರ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ. ಕೇಂದ್ರ ಪ್ರತೀ ವರ್ಷ ಅನುದಾನ ಹೆಚ್ಚಿಸುತ್ತಿದ್ದರೂ, ಮೊತ್ತವು ಕೆಲಸದ ಬೇಡಿಕೆ ಮತ್ತು ವೇತನ ಹೆಚ್ಚಳಕ್ಕೆ ಅನುಗುಣವಾಗಿಲ್ಲ. ಸಂಸದೀಯ ಸ್ಥಾಯಿ ಸಮಿತಿ ತನ್ನ ಜನವರಿ 2025ರ ವರದಿಯಲ್ಲಿ ‘ವೇತನ ಹೆಚ್ಚಳ ಯಥೋಚಿತವಾಗಿಲ್ಲ. ಕಾರ್ಯಕ್ರಮದಡಿ 2008ರಿಂದ ನೀಡಲಾದ ವೇತನ ಅಸಮರ್ಪಕ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿಲ್ಲ’ ಎಂದು ಹೇಳಿದೆ.
ಪ್ರತೀ ಆರ್ಥಿಕ ವರ್ಷದ ಅಂತ್ಯದಲ್ಲಿ ಅನುದಾನದ ಕೊರತೆಯಿಂದ ವೇತನ ನೀಡಿಕೆ ವಿಳಂಬವಾಗುತ್ತಿದೆ. ನರೇಗಾ ಕೆಲಸಕ್ಕೆ ಅಧಿಕ ಬೇಡಿಕೆ ಇರುವುದರಿಂದ, ಹೆಚ್ಚುವರಿ ಅನುದಾನಕ್ಕೆ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸಬೇಕಾಗುತ್ತದೆ; ಕಡತಗಳ ಅಲೆದಾಟದಿಂದ ವಿಳಂಬವಾಗುತ್ತಿದ್ದು, ವೇತನ ಪಾವತಿ ತಡವಾಗುತ್ತಿದೆ. ಜೊತೆಗೆ, ಇದೊಂದು ಬೇಡಿಕೆಯನ್ನು ಆಧರಿಸಿದ ಕಾರ್ಯಕ್ರಮ ಎಂಬ ನೆಪ ನೀಡಿ, ಕೆಲವು ವರ್ಷಗಳಿಂದ ಸರಕಾರವು ನರೇಗಾದ ಬಜೆಟ್ ಅನುದಾನವನ್ನು ಹೊಂದಾಣಿಕೆ ಮಾಡುತ್ತಿದೆ. 2021ರಲ್ಲಿ ಕೋವಿಡ್-19 ಪಿಡುಗಿನಿಂದ ಕೆಲಸಕ್ಕೆ ಬೇಡಿಕೆ ಹೆಚ್ಚು ಇತ್ತು. ಆದ್ದರಿಂದ, ಅನುದಾನವನ್ನು 61,500 ಕೋಟಿ ರೂ.ನಿಂದ 1,11,500 ಕೋಟಿ ರೂ.ಗೆ ಹೆಚ್ಚಿಸಲಾಯಿತು. ಆನಂತರವೂ ಕೆಲವು ವರ್ಷಗಳಲ್ಲಿ ಅನುದಾನ ಹೆಚ್ಚಿಸಲಾಗಿದೆ. 2024-25ರಲ್ಲಿ 86,000 ಕೋಟಿ ರೂ. ನೀಡಲಾಯಿತು. ಇದು 2023-24ಕ್ಕಿಂತ ಶೇ. 4ರಷ್ಟು ಕಡಿಮೆ. ಹಾಲಿ ಬಜೆಟ್ (2025-26)ನಲ್ಲಿಅನುದಾನ ಹೆಚ್ಚಳ ಆಗಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ವೇತನ ಪಾವತಿ ವಿಳಂಬ
2024-25ರ ನರೇಗಾ ವೇತನದಲ್ಲಿ 974.38 ಕೋಟಿ ರೂ. ಪಾವತಿ ಆಗಬೇಕಿದೆ. ಇದು ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ನರೇಗಾದಲ್ಲಿ ವೇತನ ವಿಳಂಬ ಮತ್ತು ಅನುದಾನ ಕೊರತೆ ಹಲವು ವರ್ಷಗಳಿಂದ ಮುಂದುವರಿದಿದೆ. ದೋಷಯುಕ್ತ ಡಿಜಿಟಲ್ ಹಾಜರಿ ವ್ಯವಸ್ಥೆಯಿಂದ ಮತ್ತಷ್ಟು ನಷ್ಟ ಆಗುತ್ತಿದೆ. ಅನುದಾನ ಕೊರತೆಯಿಂದ ಪ್ರತೀ ವರ್ಷ ಕೇವಲ ಒಂದು ಸಣ್ಣ ಶೇಕಡಾವಾರು ಕುಟುಂಬಗಳು ಮಾತ್ರ ಪೂರ್ಣ 100 ದಿನಗಳ ಕೆಲಸವನ್ನು ಪಡೆಯುತ್ತಿವೆ.
ಕೆಲಸಕ್ಕೆ ಬೇಡಿಕೆ ಹೆಚ್ಚಿದಂತೆ ಸರಕಾರ ನರೇಗಾ ಅನುದಾನ ಪರಿಷ್ಕರಿಸಿದೆ. ಆದರೆ, ವಾಸ್ತವಿಕ ವೆಚ್ಚವು ನಿಗದಿಯಾದ ಅನುದಾನಕ್ಕಿಂತ ಹೆಚ್ಚು ಇದೆ. 2023-24ರಲ್ಲಿ 86,000 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಪ್ರತಿಯಾಗಿ 89,153 ಕೋಟಿ ರೂ.ಖರ್ಚಾಗಿದೆ. ಇದರರ್ಥವೇನೆಂದರೆ, ಸರಕಾರ ಈ ಕಾರ್ಯಕ್ರಮಕ್ಕೆ ಅಗತ್ಯವಿರುವಷ್ಟು ಅನುದಾನ ನೀಡುತ್ತಿಲ್ಲ. ನರೇಗಾಕ್ಕೆ ಹೆಚ್ಚು ಬೇಡಿಕೆ ಇದ್ದರೂ, ಬಜೆಟ್ ಅನ್ನು ಮೊಟಕುಗೊಳಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಯೋಜನೆಯ ವೇತನ ಬಾಕಿಯಲ್ಲಿ ಏರಿಳಿತ ಕಂಡುಬಂದಿದೆ. 2020-21ರಲ್ಲಿ 512.75 ಕೋಟಿ ರೂ. ಹಾಗೂ 2024-25ರಲ್ಲಿ 974.38 ಕೋಟಿ ರೂ.ಬಾಕಿ ಉಳಿದುಕೊಂಡಿದೆ. ಮಹಾರಾಷ್ಟ್ರ 379.98 ಕೋಟಿ ರೂ. ಮತ್ತು ಬಿಹಾರ 66.84 ಕೋಟಿ ರೂ.ಗೂ ಅಧಿಕ ಬಾಕಿ ವೇತನ ಪಾವತಿಸಬೇಕಿದೆ. ಈ ರಾಜ್ಯಗಳಲ್ಲಿ ಕ್ರಮವಾಗಿ 7.9 ದಶಲಕ್ಷ ಮತ್ತು 9.7 ದಶಲಕ್ಷ ಕಾರ್ಮಿಕರಿದ್ದಾರೆ ಎಂದು ಸಂಖ್ಯಾಶಾಸ್ತ್ರ ಸಚಿವಾಲಯದ ವರದಿ ಹೇಳಿದೆ. ಹಲವು ರಾಜ್ಯಗಳು ಅನುದಾನದ ತೀವ್ರ ಕೊರತೆ ಎದುರಿಸುತ್ತಿವೆ; ತಮಿಳುನಾಡು 3,440.99 ಕೋಟಿ ರೂ. ಮತ್ತು ಉತ್ತರ ಪ್ರದೇಶ 2,770.66 ಕೋಟಿ ರೂ. ಕೊರತೆ ಹೊಂದಿವೆ. ಇದು ಪಾವತಿಯಲ್ಲಿ ವಿಳಂಬವನ್ನು ಹಾಗೂ ಕಾರ್ಯಕ್ರಮದ ಮೇಲಿನ ಆರ್ಥಿಕ ಒತ್ತಡವನ್ನು ತೋರಿಸುತ್ತದೆ.
ಡಿಸೆಂಬರ್ 2024ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ವರದಿಯು ನರೇಗಾ ಅಡಿಯಲ್ಲಿ ವೇತನ ಪಾವತಿ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅನುದಾನದ ಸಕಾಲಿಕ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಹಣಕಾಸಿನ ಕಾರ್ಯವಿಧಾನಗಳನ್ನು ಸುಧಾರಿಸಿಕೊಳ್ಳಬೇಕೆಂದು ಸಮಿತಿಯು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚಿಸಿದೆ.
ಕೆಲಸದ ಕೊರೆ
ವೇತನ ವಿಳಂಬವು ನರೇಗಾದಲ್ಲಿ ಗ್ರಾಮೀಣರ ಭಾಗವಹಿಸುವಿಕೆ ಮೇಲೆ ವಿಪರಿಣಾಮ ಬೀರುತ್ತಿದೆ. 2024-25ರಲ್ಲಿ 61.7 ದಶಲಕ್ಷ ಕುಟುಂಬಗಳು ಕಾರ್ಯಕ್ರಮದಡಿ ಕೆಲಸಕ್ಕೆ ಬೇಡಿಕೆ ಇರಿಸಿದ್ದವು; 55.4 ದಶಲಕ್ಷ ಕುಟುಂಬಗಳಿಗೆ ಕೆಲಸ ಸಿಕ್ಕಿತು. 2023-24ರಲ್ಲಿ 65.1 ದಶಲಕ್ಷ ಕುಟುಂಬಗಳು ಕೆಲಸಕ್ಕಾಗಿ ಬೇಡಿಕೆ ಇಟ್ಟಿದ್ದರೂ, ಕೆಲಸ ಸಿಕ್ಕಿದ್ದು 59.9 ದಶಲಕ್ಷ ಕುಟುಂಬಗಳಿಗೆ ಮಾತ್ರ. ಭ್ರಷ್ಟಾಚಾರದ ತನಿಖೆ, ವೇತನ ವಿಳಂಬ ಮತ್ತು ಕೆಲಸದ ಅಲಭ್ಯತೆ ಸಮಸ್ಯೆಗೆ ಪರಿಹಾರ, ಜಾಬ್ ಕಾರ್ಡ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ವಿಭಾಗ ಮಟ್ಟದಲ್ಲಿ ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸಬೇಕು ಎಂದು ಕಾರ್ಮಿಕರು ಬಿಹಾರದಲ್ಲಿ ಪ್ರತಿಭಟನೆ ನಡೆಸಿದ್ದರು. ಯಂತ್ರಗಳನ್ನು ಬಳಸದೆ ಮಾನವ ಸಂಪನ್ಮೂಲದಿಂದ ಕಾಮಗಾರಿ ಮಾಡಬೇಕು ಎಂದು ನಿಯಮವಿದ್ದರೂ, ಜೆಸಿಬಿ/ಟ್ರ್ಯಾಕ್ಟರ್ ಬಳಕೆ ಅವ್ಯಾಹತವಾಗಿದೆ. ಗ್ರಾಮ ಪಂಚಾಯತ್‌ಮಟ್ಟದಲ್ಲಿ ಅಪಾರ ಭ್ರಷ್ಟಾಚಾರವೂ ನಡೆದಿದೆ.
ನಿರುದ್ಯೋಗ ಭತ್ತೆ ಪಾವತಿ
2005ರ ನರೇಗಾ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಕೆಲಸ ಕೇಳಿದವರಿಗೆ 15 ದಿನದಲ್ಲಿ ಕೆಲಸ ಒದಗಿಸದಿದ್ದರೆ, ಅವರು ರಾಜ್ಯ ಸರಕಾರದಿಂದ ನಿರುದ್ಯೋಗ ಭತ್ತೆ ಪಡೆಯಲು ಅರ್ಹರಾಗುತ್ತಾರೆ. ಈ ಭತ್ತೆ ಕೂಡ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಒಟ್ಟು ಬಾಕಿ 3.21 ಕೋಟಿ ರೂ.ಮುಟ್ಟಿದೆ. ಸುಪ್ರೀಂ ಕೋರ್ಟ್ ತನ್ನ 2016 ರ ತೀರ್ಪಿನಲ್ಲಿ, ‘‘ವೇತನ ಅಥವಾ ನಿರುದ್ಯೋಗ ಭತ್ತೆಯನ್ನು ಸಕಾಲದಲ್ಲಿ ನೀಡಲು ವಿಫಲವಾದರೆ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಆಗಲಿದೆ. ರಾಜ್ಯಗಳು ಕಾಯ್ದೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು’’ ಎಂದು ಹೇಳಿತ್ತು.
‘‘ಗ್ರಾಮೀಣಾಭಿವೃದ್ಧಿ ಇಲಾಖೆಯು ನರೇಗಾ ಅನುದಾನವನ್ನು ಸಕಾಲಿಕವಾಗಿ ಬಿಡುಗಡೆ ಮಾಡಬೇಕು. ಯೋಜನೆಯ ಯಶಸ್ಸು ಸಕಾಲಿಕ ಮತ್ತು ಸಮರ್ಪಕ ಅನುದಾನ ಬಿಡುಗಡೆಯನ್ನು ಅವಲಂಬಿಸಿದೆ’’ ಎಂದು 2024-25ರ ಸ್ಥಾಯಿ ಸಮಿತಿ ವರದಿ ಹೇಳಿದೆ. 2023-24ರ ವರದಿಯಲ್ಲೂ ‘‘ವೇತನದ ಸಕಾಲಿಕ ಬಿಡುಗಡೆ, ಸಾಮಗ್ರಿಗಳ ಬಿಡುಗಡೆ ಇತ್ಯಾದಿ ಯೋಜನೆಯ ಪ್ರಗತಿ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ’’ ಎಂದು ಸಮಿತಿ ಹೇಳಿತ್ತು.
ಉಸಿರುಗಟ್ಟಿಸಲು ಪ್ರಯತ್ನ
ಕೆಲಸದ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಕಾರ್ಯಕ್ರಮವನ್ನು ಹಳ್ಳ ಹತ್ತಿಸುವ ಪ್ರಯತ್ನ ನಡೆಯುತ್ತಿದೆ. 2020ರಿಂದ 2024ರವರೆಗೆ ಪ್ರತೀ ವರ್ಷವೂ ಲಭ್ಯವಾದ ಕೆಲಸದ ದಿನಗಳ ಪ್ರಮಾಣ ಕಡಿಮೆ ಇದೆ; ಆದರೆ, ಬೇಡಿಕೆ ಹೆಚ್ಚು ಇದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ ಆಗುತ್ತಿಲ್ಲ. ವಲಸಿಗರಿಗೆ ನಗರ ಪ್ರದೇಶದಲ್ಲಿ ವಸತಿ, ಆಹಾರ ಮತ್ತು ಜೀವನಾಧಾರದ ಖಾತ್ರಿ ಇರುವುದಿಲ್ಲ. ಅವರು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕಬೇಕಾಗುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಾಯೋಜಿತ ವರದಿಯು, ‘‘ನೀಲಿ ಕಾಲರ್ ಕಾರ್ಮಿಕರು ಇಕ್ಕಟ್ಟಾದ ಕೊಠಡಿ, ಟೆಂಟ್‌ಗಳಲ್ಲಿ ವಾಸಿಸುತ್ತಿದ್ದು, ಮೂಲಭೂತ ಸೌಕರ್ಯ, ಆರೋಗ್ಯ ಸೇವೆಗಳು ಮತ್ತು ಶಾಲೆಗಳ ಅಲಭ್ಯತೆಯಿಂದ ಬಳಲುತ್ತಿದ್ದಾರೆ. ವಲಸೆ ಕಾರ್ಮಿಕರು, ವಿಶೇಷವಾಗಿ, ಮಹಿಳೆಯರು ಮತ್ತು ಮಕ್ಕಳು, ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಋತುಮಾನಕ್ಕೆ ಅನುಗುಣವಾದ ವಲಸೆಯಿಂದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ವಿತರಿಸುವ ಪಡಿತರ ಇತ್ಯಾದಿಯಿಂದಲೂ ವಂಚಿತರಾಗುತ್ತಿದ್ದಾರೆ’’ ಎಂದು ಹೇಳಿತ್ತು.
ಕೃಷಿ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆ ಸಂಬಂಧಿತ ಅನಿಶ್ಚಿತತೆಯಿಂದ ನಗರ ಪ್ರದೇಶಗಳಿಗೆ ವಲಸೆ ಹೆಚ್ಚುತ್ತಿದೆ. ಇಂತಹ ಸನ್ನಿವೇಶದಲ್ಲಿ ನರೇಗಾ ಕಾರ್ಯಕ್ರಮದ ಬಲವರ್ಧನೆ ಅಗತ್ಯವಿದೆ. ಹೆಚ್ಚು ಅನುದಾನ ಹಾಗೂ ಕೆಲಸದ ದಿನಗಳ ಹೆಚ್ಚಳದ ಮೂಲಕ ಗ್ರಾಮೀಣ ಪ್ರದೇಶದ ರೈತರು-ಕೃಷಿ ಕಾರ್ಮಿಕರ ಪೂರಕ ಆದಾಯ ಮೂಲವನ್ನು ಬಲಪಡಿಸಬೇಕಿದೆ. ಬದಲಾಗಿ ಸರಕಾರ ತದ್ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ.