ಸೋತ ಮಹಿಳೆ, ಮಣ್ಣು ಮುಕ್ಕಿದ ಕುಸ್ತಿ!
Photo: facebook.com/basheerbm.bm
ಒಂದೆಡೆ ತನ್ನನ್ನು ಪ್ರಶ್ನಿಸಿದ ಸಂಸದರನ್ನೆಲ್ಲ ಅಮಾನತುಗೊಳಿಸಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಕಾರ ‘ಯಶಸ್ವೀ ಅಧಿವೇಶನ’ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಕುಸ್ತಿ ಕ್ರೀಡೆಯಲ್ಲೂ ಇದೇ ರಾಜಕೀಯ ತಂತ್ರವನ್ನು ಅನುಸರಿಸುತ್ತಿದೆ. ಎಲ್ಲ ಕುಸ್ತಿ ಕ್ರೀಡಾಳುಗಳನ್ನು ಒಕ್ಕೂಟದಿಂದ ಹೊರಗಿಟ್ಟು, ಅವರ ವಿರುದ್ಧ ರಾಜಕಾರಣಿಗಳು ತಮ್ಮ ವಿಜಯ ಬಾವುಟವನ್ನು ಹಾರಿಸಿದ್ದಾರೆ. ಮಹಿಳಾ ಕ್ರೀಡಾಳುಗಳ ವಿರುದ್ಧ ಲೈಂಗಿಕ ಶೋಷಣೆಗೈದ ಆರೋಪ ಹೊತ್ತ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಕುಸ್ತಿ ಪಟುಗಳ ಹೋರಾಟವನ್ನು ಭಾರತದ ಹೊಲಸು ರಾಜಕೀಯ ಮಣಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಕ್ರೀಡಾಳುಗಳ ಹಿತಾಸಕ್ತಿಗಿಂತ ತಮಗೆ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎನ್ನುವುದನ್ನು ಕೊನೆಗೂ ಘೋಷಿಸಿರುವ ಕೇಂದ್ರ ಸರಕಾರ, ಬ್ರಿಜ್ ಭೂಷಣ್ ಅವರನ್ನು ಕುಸ್ತಿ ಒಕ್ಕೂಟದಿಂದ ದೂರವಿಡಲು ಸಿದ್ಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಕಾರಣಾಂತರಗಳಿಂದ ಬ್ರಿಜ್ ಭೂಷಣ್ರನ್ನು ಅಧ್ಯಕ್ಷನಾಗಿಸಲು ಸಾಧ್ಯವಿಲ್ಲದೇ ಇರುವುದರಿಂದ, ಆತನ ಆಪ್ತ ಸಂಜಯ್ ಸಿಂಗ್ರನ್ನು ಡಬ್ಲ್ಯುಎಫ್ಐಯ ನೂತನ ಅಧ್ಯಕ್ಷನಾಗಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ ಪ್ರದೇಶದ ಕುಸ್ತಿ ಸಂಘದ ಉಪಾಧ್ಯಕ್ಷರಾಗಿದ್ದ ಸಂಜಯ್ ಸಿಂಗ್ ೪೦ ಮತಗಳನ್ನು ಪಡೆದು ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ವಿರುದ್ಧ ಭಾರತಕ್ಕೆ ಕುಸ್ತಿ ಪಂದ್ಯಗಳಲ್ಲಿ ಹಲವು ಪದಕಗಳನ್ನು ತಂದುಕೊಟ್ಟ ಅನಿತಾ ಅವರು ಏಳು ಮತಗಳನ್ನಷ್ಟೇ ಪಡೆದರು. ಇದೇ ಸಂದರ್ಭದಲ್ಲಿ ಸಂಜಯ್ ಸಿಂಗ್ ಆಯ್ಕೆಯನ್ನು ಪ್ರತಿಭಟಿಸಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಇನ್ನೆಂದಿಗೂ ಕುಸ್ತಿ ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿದ್ದಾರೆ.
ಪ್ರಜಾಸತ್ತಾತ್ಮಕವಾಗಿ ಸಂಜಯ್ ಸಿಂಗ್ ಆಯ್ಕೆ ನಡೆದಿದೆ ಎಂದು ಸರಕಾರ ಹೇಳಿಕೊಳ್ಳಬಹುದಾದರೂ ಈ ಆಯ್ಕೆ ಕುಸ್ತಿ ಕ್ರೀಡೆಗೆ ಭವಿಷ್ಯದಲ್ಲಿ ಮಾರಕವಾಗಲಿದೆ. ಈ ಆಯ್ಕೆಯ ಮೂಲಕ ‘ಮಹಿಳಾ ಕುಸ್ತಿ ಕ್ರೀಡಾಳುಗಳಿಗೆ ಕಿರುಕುಳ ಮುಂದುವರಿಯಲಿರುವ ಸೂಚನೆ ದೊರಕಿದೆ’ ಎಂದು ಸಾಕ್ಷಿ ಮಲಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಕಣ್ಣೀರು ಹಾಕುತ್ತಲೇ ಕುಸ್ತಿ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಈ ಮೂಲಕ, ದೇಶದ ಕುಸ್ತಿ ಕ್ರೀಡಾಳುಗಳನ್ನು ಪ್ರೋತ್ಸಾಹಿಸಬೇಕಾಗಿದ್ದ ಒಕ್ಕೂಟವೇ ಇಂದು ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಳುವೊಬ್ಬಳ ಭವಿಷ್ಯವನ್ನು ಬಲಿತೆಗೆದುಕೊಂಡಿದೆ. ಹಾಗೆಯೇ ಈಗಲೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಳುಗಳು ತಮ್ಮ ಭವಿಷ್ಯದ ಬಗ್ಗೆ ಆತಂಕವನ್ನು ಹೊಂದುವಂತಾಗಿದೆ. ಬ್ರಿಜ್ ಭೂಷಣ್ ಆಪ್ತರಾಗಿರುವ ಸಂಜಯ್ ಸಿಂಗ್ರಿಂದ ಕ್ರೀಡಾಳುಗಳಿಗೆ ನ್ಯಾಯ ಸಿಗುತ್ತದೆ ಎನ್ನುವ ನಿರೀಕ್ಷೆ ಯಾರಿಗೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕುಸ್ತಿಯ ಕ್ಷೇತ್ರಕ್ಕೆ ಮಹಿಳೆಯರು ಕಾಲಿಡಬೇಕಾದರೆ ಎರಡೆರಡು ಬಾರಿ ಯೋಚಿಸುವಂತಹ ವಾತಾವರಣವನ್ನು ಕುಸ್ತಿ ಒಕ್ಕೂಟವೇ ಸೃಷ್ಟಿಸಿದೆ. ಬಹುಶಃ ಕುಸ್ತಿ ಕ್ರೀಡಾಳುಗಳನ್ನು ದಮನಿಸುವುದಕ್ಕಾಗಿಯೇ ಒಂದು ದೇಶ ಕುಸ್ತಿ ಒಕ್ಕೂಟವನ್ನು ಹೊಂದಿದ್ದರೆ ಅದು ಭಾರತವೇ ಇರಬೇಕು.
ಬ್ರಿಜ್ಭೂಷಣ್ ಸಿಂಗ್ ಕುಸ್ತಿ ಪಟುಗಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರೀಡಾಳುಗಳು ನಡೆಸಿದ ಪ್ರತಿಭಟನೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿ ಭಾರತ ತೀವ್ರ ಮುಜುಗರವನ್ನು ಅನುಭವಿಸುವಂತಾಗಿತ್ತು. ನ್ಯಾಯ ಕೇಳಿದ ಕ್ರೀಡಾಳುಗಳ ವಿರುದ್ಧ ಈ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಲಾಠಿಚಾರ್ಜ್ ಮಾಡಲಾಯಿತು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಕ್ರೀಡಾಳುಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದರು. ಇದು ಏಕಕಾಲದಲ್ಲಿ ಮಹಿಳಾ ಸಬಲೀಕರಣದ ಮೇಲೆ ಹಾಗೂ ಕ್ರೀಡಾ ಕ್ಷೇತ್ರದ ಮೇಲೆ ನಡೆದ ದಾಳಿಯಾಗಿತ್ತು. ಕುಸ್ತಿ ಭಾರತದ ಸಾಂಪ್ರದಾಯಿಕ ಕ್ರೀಡೆಯಾಗಿದ್ದರೂ ಇದು ಪುರುಷ ಪ್ರಧಾನ ಕ್ರೀಡೆಯಾಗಿದೆ. ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದೇ ಕಷ್ಟ ಎನ್ನುವ ವಾತಾವರಣ ಗ್ರಾಮೀಣ ಪ್ರದೇಶದಲ್ಲಿರುವಾಗ, ಕುಸ್ತಿಯಂತಹ ಪುರುಷ ಪ್ರಧಾನ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವುದು ಸಣ್ಣ ಮಾತಲ್ಲ. ಕುಸ್ತಿ ಕ್ರೀಡೆಯಲ್ಲಿ ಅಂತರ್ರಾಷ್ಟ್ರೀಯ ಸಾಧನೆಗಳನ್ನು ಮೆರೆದ ಮಹಿಳೆಯರು, ಏಕಕಾಲದಲ್ಲಿ ಮಹಿಳಾ ಸಬಲೀಕರಣದ ಪ್ರತಿನಿಧಿಗಳಾಗಿ ಭಾರತದ ಎಲ್ಲ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ‘ಬೇಟಿ ಬಚಾವೋ’ ಆಂದೋಲನಕ್ಕಾಗಿ ಸರಕಾರ ದೊಡ್ಡ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿದೆ. ಆದರೆ ಮಹಿಳಾ ಕುಸ್ತಿ ಪಟುಗಳ ಜೊತೆಗೆ ಸರಕಾರದ ವರ್ತನೆ ಯಾವ ರೀತಿಯಲ್ಲೂ ಬೇಟಿ ಬಚಾವೋ ಆಂದೋಲನಕ್ಕೆ ಪೂರಕವಾಗಿರಲಿಲ್ಲ. ಬದಲಿಗೆ ಶೋಷಣೆಗಳ ವಿರುದ್ಧ ಪ್ರತಿಭಟಿಸಿದರೆ, ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದರೆ ಮಹಿಳೆಯರ ಸ್ಥಿತಿ ಏನಾಗುತ್ತದೆ ಎನ್ನುವ ಎಚ್ಚರಿಕೆಯನ್ನು ದೇಶದ ಮಹಿಳೆಯರಿಗೆ ಸರಕಾರ ನೀಡಿತ್ತು. ಇದೇ ಸಂದರ್ಭದಲ್ಲಿ ಕ್ರೀಡಾಳುಗಳು ರಾಜಕಾರಣಿಗಳ ಮುಂದೆ ತಗ್ಗಿ ಬಗ್ಗಿ ನಡೆದರೆ ಮಾತ್ರ ಅವಕಾಶ ಎನ್ನುವ ಸಂದೇಶವನ್ನು ಎಲ್ಲ ಕ್ರೀಡಾಳುಗಳಿಗೂ ರವಾನಿಸಿತು. ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆ ಭಾರತಕ್ಕೆ ಹೊಸತಲ್ಲ. ಇದರ ವಿರುದ್ಧ ಹಲವು ಮಹಿಳಾ ಕ್ರೀಡಾಳುಗಳು ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ ಮಹಿಳಾ ಕುಸ್ತಿ ಪಟುಗಳಿಗೆ ಒದಗಿದ ದೈನೇಸಿ ಸ್ಥಿತಿ, ಭಾರತದ ದೇಶದಲ್ಲಿ ಮಹಿಳಾ ಕ್ರೀಡಾಳುಗಳ ಸ್ಥಾನ-ಮಾನ ಏನು ಎನ್ನುವುದು ವಿಶ್ವದ ಮುಂದೆ ಸಾಬೀತಾಯಿತು.
ಮುಂದೆ ಬ್ರಿಜ್ ಭೂಷಣ್ ಕುಸ್ತಿ ಒಕ್ಕೂಟ ಅಧ್ಯಕ್ಷ ಸ್ಥಾನದಿಂದ ಅನಿವಾರ್ಯವಾಗಿ ಕೆಳಗಿಳಿದರು. ಮಹಿಳಾ ಕ್ರೀಡಾಳುಗಳ ಮೇಲೆ ನಡೆದ ಲೈಂಗಿಕ ಶೋಷಣೆಯ ಬಗ್ಗೆ ತನಿಖೆಯೂ ನಡೆಯಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಸ್ತಿ ಕ್ರೀಡೆಯ ಮಾನವನ್ನು ಉಳಿಸುವ ಮಹತ್ತರ ಹೊಣೆಗಾರಿಕೆ ಸರಕಾರದ ಮೇಲಿತ್ತು. ಮೊತ್ತ ಮೊದಲಾಗಿ ಕುಸ್ತಿ ಕ್ರೀಡಾ ಕ್ಷೇತ್ರಕ್ಕೆ ಕಾಲಿಡಲು ಅನುಮಾನಿಸುವಂತಹ ಮಹಿಳೆಯರಿಗೆ ಸ್ಫೂರ್ತಿಯನ್ನು ತುಂಬಲು ಒಬ್ಬ ಮಹಿಳಾ ಕುಸ್ತಿ ಪಟುವನ್ನೇ ಅಧ್ಯಕ್ಷೆಯನ್ನಾಗಿಸುವುದು ಸರಕಾರದ ಕರ್ತವ್ಯವಾಗಿತ್ತು. ಕುಸ್ತಿ ಒಕ್ಕೂಟದ ಚುನಾವಣೆಯಲ್ಲಿ ಹಿರಿಯ ಮಹಿಳಾ ಕುಸ್ತಿ ಪಟು ಗೆಲ್ಲುವುದು ಈ ದೇಶದ ಕುಸ್ತಿ ಕ್ರೀಡೆಯ ಅಗತ್ಯವಾಗಿತ್ತು. ಆದರೆ ತನ್ನ ರಾಜಕೀಯ ಬಲ ಮತ್ತು ವರ್ಚಸ್ಸಿನ ಮೂಲಕ ಇಡೀ ಕುಸ್ತಿ ಸಮುದಾಯವನ್ನು ತನ್ನ ಪರವಾಗಿ ಒಲಿಸಿಕೊಳ್ಳುವಲ್ಲಿ ಬ್ರಿಜ್ ಭೂಷಣ್ ಸಿಂಗ್ ಯಶಸ್ವಿಯಾದರು. ಬ್ರಿಜ್ ಭೂಷಣ್ ಕುಟುಂಬ ಸದಸ್ಯರು ಅಥವಾ ನಿಕಟವರ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಕ್ರೀಡಾ ಸಚಿವರು ಭರವಸೆ ನೀಡಿದ್ದರಾದರೂ, ಆ ಭರವಸೆಯನ್ನು ಈಡೇರಿಸಲು ಅವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಸಂಜಯ್ ಸಿಂಗ್ ಆಯ್ಕೆ ಸ್ಪಷ್ಟಪಡಿಸಿದೆ. ಕುಸ್ತಿ ಒಕ್ಕೂಟದ ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆಯೇ ಒಲಿಂಪಿಕ್ನಲ್ಲಿ ಪದಕ ತಂದ ಮಹಿಳಾ ಕ್ರೀಡಾ ಪಟುವೊಬ್ಬರು ನಿವೃತ್ತಿಯನ್ನು ಘೋಷಿಸುತ್ತಾರಾದರೆ, ಈ ನೂತನ ಅಧ್ಯಕ್ಷ ಕುಸ್ತಿ ಕ್ರೀಡೆಗೆ ಎಷ್ಟರಮಟ್ಟಿಗೆ ಜೀವ ತುಂಬಬಲ್ಲ? ಮಹಿಳೆಯರನ್ನು ಶೋಷಿಸುವುದಕ್ಕೆ ಮತ್ತು ಕುಸ್ತಿ ಕ್ರೀಡೆಯನ್ನು ಸರ್ವನಾಶ ಮಾಡುವುದಕ್ಕೆ ಒಂದು ಒಕ್ಕೂಟದ ಅಗತ್ಯವಿದೆಯೇ ಎಂದು ದೇಶದ ಎಲ್ಲ ಕ್ರೀಡಾಳುಗಳು ಪ್ರಶ್ನಿಸುವಂತಾಗಿದೆ.
ಒಟ್ಟಿನಲ್ಲಿ ಕ್ರೀಡೆಯ ವಿರುದ್ಧ ರಾಜಕೀಯ ಗೆದ್ದಿದೆ. ಮಹಿಳೆಯ ವಿರುದ್ಧ ಪುರುಷ ದಬ್ಬಾಳಿಕೆ ಗೆದ್ದಿದೆ. ಮುಂದಿನ ದಿನಗಳಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈ ಹೊಲಸು ರಾಜಕೀಯ ಮತ್ತು ಪುರುಷ ದಬ್ಬಾಳಿಕೆಯೇ ದೇಶವನ್ನು ಪ್ರತಿನಿಧಿಸಲಿದೆ ಎನ್ನುವ ವಾಸ್ತವವನ್ನು ನಾವೆಲ್ಲ ಒಪ್ಪಿಕೊಳ್ಳಲೇ ಬೇಕಾಗಿದೆ.