ಸ್ವಚ್ಛತಾ ಆಂದೋಲನದ ಕಠೋರ ಅಣಕ; ಮಲ ಹೊರುವ ಪದ್ಧತಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೇರಿದ ಕೆಲವೇ ತಿಂಗಳಲ್ಲಿ ಹಮ್ಮಿಕೊಂಡ ಸ್ವಚ್ಛತಾ ಆಂದೋಲನದ ಗತಿಯೇನಾಯಿತು ಎನ್ನುವುದನ್ನು ಇದೀಗ ಸರಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ. ಮೋದಿಯವರ ಕನಸಿನ ಸ್ವಚ್ಛತಾ ಆಂದೋಲನಕ್ಕೆ ಈ ದೇಶದ ಪಾಲಿಗೆ ಅನಿಷ್ಟವೆಂದು ಗುರುತಿಸಲಾಗಿದ್ದ ಮಲಹೊರುವ ಪದ್ಧತಿಯನ್ನಾದರೂ ಇಲ್ಲವಾಗಿಸಲು ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರೆ, ಉತ್ತರ ನಿರಾಶಾದಾಯಕವಾಗಿದೆ. ಈ ಪದ್ಧತಿ ನಿರ್ಮೂಲನವಾಗಿಲ್ಲ ಎಂದೂ ಹೇಳುವಂತಿಲ್ಲ. ಯಾಕೆಂದರೆ ಸರಕಾರಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮಲಹೊರುವ ಪದ್ಧತಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ಕಳೆದ ಮಂಗಳವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ರಾಮದಾಸ್ ಅಠಾವಳೆ, 2018ರಿಂದ 2023ರವರೆಗೆ 339 ಸ್ವಚ್ಛತಾ ಕಾರ್ಯಕರ್ತರು ಕೆಲಸದ ಸಂದರ್ಭದಲ್ಲಾದ ಅವಘಡಗಳಿಂದ ಮೃತಪಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ. 2023ರಲ್ಲಿ ಮಹಾರಾಷ್ಟ್ರದಲ್ಲಿ 5, ಗುಜರಾತಿನಲ್ಲಿ 3 ಮತ್ತು ಜಾರ್ಖಂಡ್ನಲ್ಲಿ 1 ಹೀಗೆ ಒಟ್ಟು 9 ಸಾವುಗಳು ಸಂಭವಿಸಿವೆ ಎಂದು ಅವರು ವಿವರಗಳನ್ನು ನೀಡಿದ್ದಾರೆ. ಆದರೆ ಪೌರಕಾರ್ಮಿಕರ ಪರ ಹೋರಾಟಗಾರರು ಈ ಅಂಕಿಅಂಶಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. 2023ರಲ್ಲಿ ದೇಶಾದ್ಯಂತ ಕನಿಷ್ಠ 53 ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ 2 ಸಾವುಗಳು ಸಂಭವಿಸಿವೆ. ಲೋಕಸಭೆಯಲ್ಲಿ ತಪ್ಪು ಅಂಕಿಅಂಶಗಳನ್ನು ನೀಡಿರುವುದು ಮಾತ್ರವಲ್ಲ, ಮಲಹೊರುವ ಪದ್ಧತಿಯ ಬಗ್ಗೆ ಸದ್ಯಕ್ಕೆ ಯಾವ ವರದಿಗಳೂ ಬಂದಿಲ್ಲ ಎಂದೂ ಸಚಿವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಮತ್ತು ಸಬಲೀಕರಣ ಸಚಿವಾಲಯದ ಆ್ಯಪ್ ‘ಸ್ವಚ್ಛತಾ ಅಭಿಯಾನ’ದಲ್ಲಿನ ಡೇಟಾ ದೇಶದಲ್ಲಿ ದೈಹಿಕವಾಗಿ ಮಲಗುಂಡಿ ಸ್ವಚ್ಛತೆ ಅಥವಾ ಮ್ಯಾನುವಲ್ ಸ್ಕಾವೆಂಜಿಗ್ನ 6,253 ಪ್ರಕರಣಗಳನ್ನು ಗುರುತಿಸಿದೆ. ವಿಪರ್ಯಾಸವೆಂದರೆ ಇದು ಅಧಿಕೃತ ಅಂಕಿಗಳೇ ಎನ್ನುವುದು ಸ್ವತಃ ಸಚಿವಾಲಯಕ್ಕೇ ಸ್ಪಷ್ಟವಿಲ್ಲ. ಸಚಿವಾಲಯವು ಈ ಆ್ಯಪ್ನ್ನು 2020ರಲ್ಲಿ ಆರಂಭಿಸಿತ್ತು. ಕಡಿಮೆ ವೆಚ್ಚದಲ್ಲಿ ನಿಖರವಾದ ಅಂಕಿಅಂಶಗಳನ್ನು ಒದಗಿಸುವುದು ಆ್ಯಪ್ನ ಉದ್ದೇಶವಾಗಿತ್ತು. ಆದರೆ ಸರಕಾರ ಸ್ವತಃ ಯಾವುದೇ ಸಮೀಕ್ಷೆಗಳನ್ನು ನಡೆಸಿ ಇಲ್ಲಿ ಪ್ರಕರಣಗಳನ್ನು ದಾಖಲಿಸಿಲ್ಲ. ಸಾರ್ವಜನಿಕರೇ ದಾಖಲಿಸಿದ ಮಾಹಿತಿಗಳ ಆಧಾರವನ್ನು ಒಳಗೊಂಡಿವೆ. ಇದರ ವಿರುದ್ಧವೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ಈವರೆಗೆ 58,098 ಮ್ಯಾನುವಲ್ ಸ್ಕಾವೆಂಜಿಂಗ್ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ನಿಗಮ ಹೇಳುತ್ತಿದೆ. ಹೀಗೆ, ಮಲಹೊರುವ ಪದ್ಧತಿಯನ್ನು ಗುರುತಿಸುವ ವಿಷಯದಲ್ಲೇ ಸರಕಾರದಲ್ಲಿ ಗೊಂದಲಗಳಿವೆ. ಮಲಹೊರುವ ಪದ್ಧತಿ ದೇಶದಲ್ಲಿ ಇಲ್ಲ ಎಂದು ಘೋಷಿಸುವ ಭರದಲ್ಲಿ ಸರಕಾರ, ಈ ಪ್ರಕರಣಗಳನ್ನು ಮುಚ್ಚಿಡುವ ಕೆಲಸವನ್ನು ಮಾಡುತ್ತಿದೆ ಎಂದು ಪೌರಕಾರ್ಮಿಕರು ಆರೋಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಒಳಚರಂಡಿಗಳಿಗೆ ಇಳಿಸಿ ಕಾರ್ಮಿಕರ ಕೈಯಿಂದಲೇ ಶುಚಿಗೊಳಿಸುವ ಪ್ರಕರಣಗಳು ದಿನನಿತ್ಯ ನಡೆಯುತ್ತವೆ. ಮ್ಯಾನ್ ಹೋಲ್ನಲ್ಲಿ ಸಾಯುವ ಕಾರ್ಮಿಕರನ್ನು ‘ಮಲಹೊರುವ ಪದ್ಧತಿ’ಯಿಂದ ಹೊರಗಿಡಲಾಗುತ್ತಿದೆ. ಆದರೆ ಮ್ಯಾನ್ಹೋಲ್ ಶುಚೀಕರಣವೂ ಮಲಹೊರುವ ಪದ್ಧತಿಯ ಮುಂದುವರಿದ ಭಾಗ ಎನ್ನುವುದನ್ನು ಸರಕಾರ ಒಪ್ಪಿಕೊಳ್ಳುವ ಅಗತ್ಯವಿದೆ.
ಯಾವುದೇ ಅನಿಷ್ಟಗಳನ್ನು ಇಲ್ಲವಾಗಿಸುವ ಮೊದಲು, ಆ ಅನಿಷ್ಟಗಳು ನಮ್ಮ ನಡುವೆ ಜೀವಂತವಿರುವುದನ್ನು ಒಪ್ಪಿಕೊಳ್ಳುವ ಅಗತ್ಯವಿದೆ. ಗಾಯಗಳನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟರೆ ಗಾಯಗಳು ಒಣಗುವುದಿಲ್ಲ. ಬದಲಿಗೆ ಅದು ಇನ್ನಷ್ಟು ಕೊಳೆತು ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ. ಅದಕ್ಕೆ ಔಷಧಿ ಹಚ್ಚಿ ಗುಣಪಡಿಸಬೇಕಾದರೆ ದೇಹದ ಮೇಲೆ ಗಾಯಗಳಿರುವುದನ್ನು ಮೊದಲು ಗುರುತಿಸಬೇಕಾಗುತ್ತದೆ. ಸರಕಾರ ಮಲಹೊರುವ ಪದ್ಧತಿಯನ್ನು ಗುರುತಿಸುವುದಕ್ಕೇ ಹಿಂದೇಟು ಹಾಕುತ್ತಿದೆ. ಹೀಗಿರುವಾಗ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಸಾಧ್ಯ?. ಎಲ್ಲಕ್ಕಿಂತ ಮುಖ್ಯವಾಗಿ, ‘ಮ್ಯಾನುವಲ್ ಸ್ಕಾವೆಂಜರ್ಗಳ ಗುರುತಿಸುವಿಕೆಯು ಯಾವಾಗಲೂ ಉದ್ಯೋಗ ಆಧಾರಿತವಾಗಿರುತ್ತದೆ, ಜಾತಿ ಆಧಾರಿತವಲ್ಲ’ ಎಂದು ಸಚಿವಾಲಯ ಸ್ಪಷ್ಟಪಡಿಸುತ್ತದೆ. ಆದರೆ ಈ ವೃತ್ತಿಯನ್ನು ನಿರ್ವಹಿಸುವ ಶೇ. 99 ಮಂದಿ ಒಂದು ನಿರ್ದಿಷ್ಟ ಜಾತಿಗೆ ಸೇರಿರುವುದು ಈ ದೇಶದಲ್ಲಿ ಆಕಸ್ಮಿಕವಲ್ಲ. ಯಾವುದೇ ಮೇಲ್ಜಾತಿಯ ಜನರು ಈ ವೃತ್ತಿಯನ್ನು ನಿರ್ವಹಿಸುವುದಿಲ್ಲ ಎನ್ನುವ ವಾಸ್ತವವನ್ನು ಸಚಿವಾಲಯ ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಹಲವೆಡೆ ಈ ಶುಚಿತ್ವವನ್ನು ನೆರವೇರಿಸುವ ಸಮುದಾಯವನ್ನು ‘ಭಂಗಿ’ಗಳೆಂದು ಕರೆಯುತ್ತಾರೆ ಮತ್ತು ಈ ಸಮುದಾಯ ಈ ವೃತ್ತಿಯನ್ನು ನಿರ್ವಹಿಸುತ್ತಿರುವ ಕಾರಣಕ್ಕಾಗಿಯೇ ಸಮಾಜದ ಮುಖ್ಯವಾಹಿನಿಯಿಂದ ಹೊರಗಿದೆೆ. ಉತ್ತರ ಭಾರತದಲ್ಲಿ ಈ ಸಮುದಾಯ ವೃತ್ತಿಯನ್ನು ನಿರ್ವಹಿಸಲು ನಿರಾಕರಿಸಿದಾಗ ಅವರ ಮೇಲೆ ದೌರ್ಜನ್ಯಗಳು ನಡೆದಿರುವ ಉದಾಹರಣೆಗಳಿವೆ. ನಾಗರಿಕರೆಂದು ಕರೆಸಿಕೊಂಡ ಸಮಾಜ ಅವರನ್ನು ಬಹಿಷ್ಕರಿಸಿದ್ದೂ ಇದೆ. ಈ ಸಮುದಾಯ ಬೇರೆ ವೃತ್ತಿಯನ್ನು ನಿರ್ವಹಿಸಲು ಮುಂದಾದಾಗ ಅದಕ್ಕೆ ಅವಕಾಶ ಕೊಡದೆ ಅವರನ್ನು ಬಗ್ಗು ಬಡಿಯಲಾಗುತ್ತದೆ. ಆದುದರಿಂದ, ಭಾರತದಲ್ಲಿ ಮಲಹೊರುವ ಪದ್ಧತಿ ಕೇವಲ ಒಂದು ವೃತ್ತಿಯಲ್ಲ. ಅದೊಂದು ಜಾತಿ ಆಧಾರಿತ ವೃತ್ತಿ. ಸಮಾಜ ವ್ಯವಸ್ಥಿತವಾಗಿ ಆ ವೃತ್ತಿಯನ್ನು ಪ್ರೋತ್ಸಾಹಿಸುತ್ತಿದೆ. ಸರಕಾರ ನೇರವಾಗಿ ಅದರಲ್ಲಿ ಹಸ್ತಕ್ಷೇಪ ಮಾಡಿ ಅವರನ್ನು ಮೇಲೆತ್ತುವುದಕ್ಕೆ ಕಾರ್ಯಕ್ರಮಗಳನ್ನು ರೂಪಿಸದೆ ಇದ್ದರೆ ಈ ವೃತ್ತಿಯನ್ನು ತಡೆಯಲು ಸಾಧ್ಯವಿಲ್ಲ. ಭಾರತವನ್ನು ವಿಶ್ವಗುರುವಾಗಿಸುವ ಪ್ರಧಾನಿ ಮೋದಿಯವರ ಕನಸಿಗೆ ಮಲಹೊರುವ ಪದ್ಧತಿ ಅತಿದೊಡ್ಡ ಕಳಂಕವಾಗಿದೆ. ಮೋದಿಯವರ ಸ್ವಚ್ಛತಾ ಆಂದೋಲನ ದೇಶವನ್ನು ಶುಚಿಗೊಳಿಸುವುದು ಇರಲಿ, ಮನುಷ್ಯರು ಮಲದಗುಂಡಿಗಳಿಗೆ, ಮ್ಯಾನ್ ಹೋಲ್ಗಳಿಗೆ ಇಳಿಯುವುದರಿಂದ ತಡೆಯುವಲ್ಲಿ ಯಶಸ್ವಿಯಾಗಿದ್ದರೂ ಸಾರ್ಥಕವಾಗಿಬಿಡುತ್ತಿತ್ತು. ಚಂದ್ರನ ಕಡೆಗೆ ರಾಕೆಟ್ ಹಾರಿಸಿದ ಹೆಗ್ಗಳಿಕೆಯನ್ನು ಹೊಂದಿರುವ ನಾವು ಮಲದಗುಂಡಿಗೆ, ಮ್ಯಾನ್ಹೋಲ್ಗಳಿಗೆ ಇಳಿಯಲು ಯಂತ್ರಗಳನ್ನು ಬಳಕೆ ಮಾಡಲು ವಿಫಲರಾಗಿರುವುದು ಖೇದಕರ. ಇದೀಗ ಅಂಕಿಅಂಶಗಳನ್ನೇ ಮರೆಮಾಚಿ ದೇಶದಲ್ಲಿ ಮಲಹೊರುವ ಪದ್ಧತಿ ಇಲ್ಲ ಎಂದು ಸಾಬೀತು ಮಾಡಲು ಸರಕಾರ ಹೆಣಗುತ್ತಿರುವುದು, ಸ್ವಚ್ಛತಾ ಆಂದೋಲನದ ಬಹುದೊಡ್ಡ ಅಣಕವಾಗಿದೆ. ಇತ್ತೀಚಿನ ದಿನಗಳಲ್ಲಿ ಹೀಗೆ ಅಂಕಿಅಂಶಗಳನ್ನು ತಿದ್ದುವ ಮೂಲಕ ತನ್ನ ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಸರಕಾರ ನಡೆಸುತ್ತಿದೆ. ಕೊರೋನದಲ್ಲಿ ಲಕ್ಷಾಂತರ ಜನರು ಸತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳುತ್ತಿದ್ದರೆ, ಸರಕಾರದ ಅಂಕಿಅಂಶಗಳು ಬೇರೆಯದನ್ನೇ ಹೇಳುತ್ತಿವೆ. ಲಾಕ್ಡೌನ್ನ ಸಂದರ್ಭದಲ್ಲಿ ಸತ್ತು ಹೋದ ಕಾರ್ಮಿಕರ ಬಗ್ಗೆ ಸರಕಾರದ ಬಳಿ ಅಂಕಿಅಂಶಗಳೇ ಇಲ್ಲ. ಆದುದರಿಂದ ಆ ಸಾವಿಗೆ ಸರಕಾರ ಹೊಣೆಗಾರನಾಗಬೇಕಾಗಿಲ್ಲ. ಕೊರೋನ, ಲಾಕ್ಡೌನ್ನಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಿದ್ದರೂ ನರೇಗಾದಲ್ಲಿ ಉದ್ಯೋಗಗಳ ಬೇಡಿಕೆ ಇಳಿಕೆಯಾಗಿದೆ ಎಂದು ಸರಕಾರ ಹೇಳುತ್ತದೆ ಮತ್ತು ಅದಕ್ಕೆ ಮೀಸಲಾಗಿರಿಸಿದ ಹಣವನ್ನು ಕಡಿತಗೊಳಿಸುತ್ತದೆ. ಇತ್ತೀಚೆಗೆ ಎರಡು ಕೋಟಿ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸರಕಾರ ಕಿತ್ತು ಹಾಕಿರುವುದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಬಿಪಿಎಲ್ ಕಾರ್ಡ್ಗಳನ್ನು ಕಿತ್ತು ಹಾಕಿ ಈ ದೇಶದಲ್ಲಿ ಬಡವರೇ ಇಲ್ಲ ಎಂದು ಸರಕಾರ ಘೋಷಿಸಿದರೆ ಅಚ್ಚರಿಯೇನೂ ಇಲ್ಲ.