ರಾಮರಾಜ್ಯದ ಅಣಕ
Photo: PTI
2004ರಲ್ಲಿ ಬಿಜೆಪಿಯು ಅಡ್ವಾಣಿನೇತೃತ್ವದಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆಯೊಂದಿಗೆ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಹೊರಟು ತೀವ್ರ ಮುಖಭಂಗವನ್ನು ಅನುಭವಿಸಿತು. ‘ಅಟಲ್ ಬಿಹಾರಿ ವಾಜಪೇಯಿಯವರ ಐದು ವರ್ಷಗಳ ಆಡಳಿತದಿಂದ ಭಾರತ ಪ್ರಕಾಶಿಸುತ್ತಿದೆ’ ಎಂದು ಹೇಳಿ ಚುನಾವಣೆಯ ಉದ್ದಕ್ಕೂ ಮತವನ್ನು ಕೇಳಿದ ಬಿಜೆಪಿಗೆ ಚುನಾವಣೆಯ ಫಲಿತಾಂಶ ‘ಭಾರತ ಪ್ರಕಾಶಿಸಿಲ್ಲ, ಬದಲಿಗೆ ಕತ್ತಲೆಯಲ್ಲೇ ಇದೆ’ ಎನ್ನುವುದನ್ನು ಸ್ಪಷ್ಟಪಡಿಸಿತು. 2014 ಪ್ರಧಾನಿ ನರೇಂದ್ರ ಮೋದಿಯವರು ‘ಅಚ್ಛೇದಿನ್ ಆನೇವಾಲಾ ಹೇ’ ಎನ್ನುವ ಘೋಷಣೆಯೊಂದಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಎರಡು ಅವಧಿಯಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಬಳಿಕವೂ ಅಚ್ಛೇದಿನ್ನ್ನು ಭಾರತಕ್ಕೆ ತರಲು ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇಶದ ಜನತೆ ‘ನಮಗೆ ಹಳೆಯ ಬುರೇ ದಿನ್ ಸಾಕು. ಅದನ್ನು ಮರಳಿಸಿ’ ಎಂದು ಕೇಳುವಂತಾಗಿದೆ. ದೇಶಕ್ಕೆ ಅಚ್ಛೇದಿನ್ ತರುವುದು ಸಾಧ್ಯವೇ ಇಲ್ಲ ಎನ್ನುವುದು ಬಿಜೆಪಿಗೂ ಗೊತ್ತಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಅಚ್ಛೇದಿನ್ನ್ನು ಕೈ ಬಿಟ್ಟು ‘ರಾಮರಾಜ್ಯ’ವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ರಾಮರಾಜ್ಯ ಸ್ಥಾಪನೆಗೆ ನಾಂದಿ ಹಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಬಿಜೆಪಿ ನಿರ್ಣಯ ತೆಗೆದುಕೊಂಡಿದೆ. ಮುಂದಿನ ಒಂದು ಸಾವಿರ ವರ್ಷಗಳ ಕಾಲದ ರಾಮರಾಜ್ಯ ಸ್ಥಾಪನೆಗೆ ರಾಮಮಂದಿರ ನಿರ್ಮಾಣ ಪೂರಕವಾಗಲಿದೆ ಎಂದು ಅದು ನಿರ್ಣಯದಲ್ಲಿ ಹೇಳಿದೆ.
ಇಷ್ಟಕ್ಕೂ ‘ರಾಮರಾಜ್ಯ’ ಕಲ್ಪನೆಯನ್ನು ಭಾರತದ ರಾಜಕೀಯ ಸ್ಥಿತಿಗತಿಗೆ ಅನ್ವಯ ಮಾಡಿದ್ದು ಮಹಾತ್ಮಾಗಾಂಧೀಜಿ. ಅವರು ರಾಮನನ್ನು ಜೀವನ ಮೌಲ್ಯಗಳ ಮೂಲಕ ಕಂಡುಕೊಂಡಿದ್ದರೇ ಹೊರತು, ರಾಮ ಮಂದಿರಗಳ ಮೂಲಕ ಅಲ್ಲ. ಅವರ ರಾಮರಾಜ್ಯದಲ್ಲಿ ಮಹಿಳೆ ಮಧ್ಯರಾತ್ರಿ ಒಬ್ಬಂಟಿಯಾಗಿ ಸಂಚರಿಸಿದರೂ ಯಾವ ಅಪಾಯವಿಲ್ಲದೆ ಮನೆ ತಲುಪಬಲ್ಲಳು. ಅಲ್ಲಿ ಸಂಪತ್ತಿನ ಶೇಖರಣೆ ಇರಲಿಲ್ಲ. ರಾಮರಾಜ್ಯದ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವಾಗ ಅವರು ಇಸ್ಲಾಮ್ ಧರ್ಮದ ಖಲೀಫರ ಆಡಳಿತದ ಉದಾಹರಣೆಗಳನ್ನೂ ಮಾದರಿಯಾಗಿ ನೀಡುತ್ತಾರೆ. ರಾಮಮಂದಿರಗಳಿಂದ ರಾಮ ರಾಜ್ಯ ಸ್ಥಾಪನೆಯಾಗುತ್ತದೆ ಎಂದು ನಂಬಿದ್ದಿದ್ದರೆ ಆಗಲೇ ಹಳ್ಳಿ ಹಳ್ಳಿಗಳಲ್ಲಿ ರಾಮಮಂದಿರ ನಿರ್ಮಾಣದ ಆಂದೋಲನದ ನೇತೃತ್ವವನ್ನು ಅವರು ವಹಿಸಿಕೊಳ್ಳುತ್ತಿದ್ದರು. ಆದರೆ ಅವರ ರಾಮರಾಜ್ಯದಲ್ಲಿ ಯಾವುದೇ ಮಂದಿರ ದೇವಾಲಯಗಳು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಬದಲಿಗೆ, ಅಲ್ಲಿ ವಚನಪಾಲನೆ, ಸತ್ಯಸಂಧತೆ ನೆಲೆನಿಂತಿದ್ದವು. ಮಹಿಳೆಯರಿಗೆ ರಕ್ಷಣೆಯಿತ್ತು. ಅಗಸನ ಮಾತನ್ನ್ನೂ ದೊರೆಯಾದವನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದ. ನ್ಯಾಯ ನೀಡುವ ಸಂದರ್ಭದಲ್ಲಿ ಸ್ವಜನಪಕ್ಷಪಾತಕ್ಕೆ ಅವಕಾಶವಿರಲಿಲ್ಲ. ತನ್ನವರು-ಪರರು ಎಂದು ನೋಡುತ್ತಿರಲಿಲ್ಲ. ಇಂತಹ ಆದರ್ಶಗಳು ನೆಲೆನಿಂತ ರಾಜ್ಯವೊಂದರ ಕನಸನ್ನು ಅವರು ಕಂಡರು. ಆದರೆ ಗೋಡ್ಸೆ ಪರಿವಾರ ಗಾಂಧಿಯನ್ನು ಕೊಂದು ಅವರ ಕೈಯಿಂದ ರಾಮರಾಜ್ಯದ ಕಲ್ಪನೆಯನ್ನು ಕಿತ್ತು ಅದಕ್ಕೆ ಹಿಂದುತ್ವದ ಬಣ್ಣವನ್ನು ಬಳಿದು ವಿರೋಪಗೊಳಿಸಿತು. ಇಂದು ಮಸೀದಿ ಕೆಡವಿದ ಜಾಗದಲ್ಲಿ ಸ್ಥಾಪಿಸಿದ ರಾಮನ ಮಂದಿರದಿಂದ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿ ಹಾಡಲಾಗಿದೆ ಎಂದು ಘೋಷಿಸಿಕೊಂಡಿದೆ. ಅದಕ್ಕಾಗಿ ಮೋದಿಯನ್ನು ಅಭಿನಂದಿಸಿದೆ.
ಸದ್ಯದ ಮೋದಿ ರಾಜ್ಯವನ್ನು ರಾಮರಾಜ್ಯಕ್ಕೆ ಹೋಲಿಸುವ ಮೂಲಕ ಬಿಜೆಪಿಯು ಗಾಂಧೀಯನ್ನು ಮಾತ್ರವಲ್ಲ ರಾಮನನ್ನೂ ಅವಮಾನಿಸಿದೆ. ದೇಶದ ಇಂದಿನ ಸ್ಥಿತಿಯನ್ನು ಅಂದಿನ ರಾಮರಾಜ್ಯಕ್ಕೆ ಹೋಲಿಸುತ್ತಾ, ರಾಮನ ಕಾಲದ ಆಡಳಿತ ಇಷ್ಟು ಕಳಪೆಯಾಗಿತ್ತೆ ಎಂದು ದೇಶದ ಜನತೆ ತಲೆತಗ್ಗಿಸುವಂತಾಗಿದೆ. ಮೋದಿ ಆಡಳಿತದಲ್ಲಿ ಭಾರತ ತನ್ನ ವಿದೇಶಿ ಸಾಲವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿದೆ. ರೂಪಾಯಿ ಬೆಲೆ ಡಾಲರ್ ಮುಂದೆ ಇಳಿಕೆಯಾಗಿದೆ. ಪೆಟ್ರೋಲ್, ತೈಲದ ಬೆಲೆಯೂ ಹಲವು ಪಟ್ಟು ಹೆಚ್ಚಳವಾಗಿದ್ದು ಬಡವರಿಗೆ ನೀಡಲಾಗುತ್ತಿದ್ದ ಹಲವು ಸಬ್ಸಿಡಿಗಳನ್ನು ಹಂತ ಹಂತವಾಗಿ ಕಸಿದುಕೊಳ್ಳಲಾಗಿದೆ. ಜಿಡಿಪಿಯೂ ಇಳಿಕೆ ಕಂಡಿದೆ. ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಳವಾಗಿದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಎನ್ನುವುದನ್ನು ಸರಕಾರಿ ದಾಖಲೆಗಳೇ ಹೇಳುತ್ತಿವೆ. ದೇಶದ ಜನರ ಸೊತ್ತಾಗಿದ್ದ ಸಾರ್ವಜನಿಕ ವಲಯಗಳನ್ನು ಹಂತ ಹಂತವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದಾನಿ-ಅಂಬಾನಿಗಳಿಗಾಗಿ ದೇಶದ ಬಡ ಜನರನ್ನು ಬಲಿಕೊಡಲಾಗುತ್ತಿದೆ ಎಂದು ಆರ್ಥಿಕ ತಜ್ಞರು ಮೋದಿ ಆರ್ಥಿಕ ನೀತಿಯನ್ನು ವಿಶ್ಲೇಷಿಸುತ್ತಿದ್ದಾರೆ. ಕಪ್ಪು ಹಣವನ್ನು ಬಹಿರಂಗ ಪಡಿಸುವುದಕ್ಕೆ ವಿಫಲವಾಗಿದೆ ಮಾತ್ರವಲ್ಲ, ಕಪ್ಪು ಹಣ ದಾಸ್ತಾನಿಗೆ ಪರೋಕ್ಷ ಸಹಕಾರ ನೀಡುತ್ತಿರುವ ಆರೋಪಗಳನ್ನು ಸರಕಾರ ಎದುರಿಸುತ್ತಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಮಾಡಿದ ಅಕ್ರಮಗಳನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಸರಕಾರ ಪ್ರಜಾಸತ್ತೆಯನ್ನು ಕಾರ್ಪೊರೇಟ್ ದೊರೆಗಳಿಗೆ ಬಲಿಕೊಟ್ಟಿರುವುದು ಬಹಿರಂಗವಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗವಹಿಸಿದ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಮಹಿಳಾ ವಿರೋಧಿ ಸರಕಾರವೆಂದೂ ಬಿರುದಾಂಕಿತವಾಗಿದೆ. ಬಡವರ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗುತ್ತಿದೆ. ಇವೆಲ್ಲವನ್ನೂ ರಾಮರಾಜ್ಯದ ಗುಣಲಕ್ಷಣಗಳು ಎಂದು ಇದೀಗ ಬಿಜೆಪಿ ಬಿಂಬಿಸಲು ಹೊರಟಿದೆ. ಈ ಮೂಲಕ ರಾಮನನ್ನು ಮೋದಿಯ ಮಟ್ಟಕ್ಕೆ ಇಳಿಸಿ ವಿರೂಪಗೊಳಿಸಲು ಮುಂದಾಗಿದೆ.
ಮೋದಿಯ ಇಂದಿನ ಭಾರತವೇ ರಾಮರಾಜ್ಯವಾದರೆ, ಮಣಿಪುರವನ್ನು ಮೂಗು, ಕಿವಿ ಹರಿದುಕೊಂಡು ಚೀರಾಡುತ್ತಿರುವ ಶೂರ್ಪನಖಿಯೆಂದು ಜನರು ಬಗೆಯಬೇಕೆ? ಆರ್ಥಿಕ ಅಸಮಾನತೆಯ ವಿರುದ್ಧ ಬಂಡಾಯವೆದ್ದಿರುವ ದಕ್ಷಿಣದ ರಾಜ್ಯಗಳನ್ನು ರಾಮನಿಂದ ತಲೆ ಕತ್ತರಿಸಲ್ಪಟ್ಟ ಶೂದ್ರ ತಪಸ್ವಿ ಶಂಭೂಕನೆಂದು ಬಗೆಯಬೇಕೆ? ಕೃಷಿ ವಿರೋಧಿ ನೀತಿಗಳ ವಿರುದ್ಧ ಪಂಜಾಬ್, ಹರ್ಯಾಣದಲ್ಲಿ ಬೀದಿಗಿಳಿದಿರುವ ರೈತರನ್ನು, ಮರೆಯಲ್ಲಿ ನಿಂತು ರಾಮ ಹೂಡಿದ ಬಾಣಕ್ಕೆ ಬಲಿಯಾದ ವಾಲಿಗಳೆಂದು ಭಾವಿಸಬೇಕೆ? ಹೆಚ್ಚುತ್ತಿರುವ ಜಾತಿ ಅಸಮಾನತೆಗಳನ್ನು ರಾಮಾಯಣ ಕಾಲದ ವರ್ಣಾಶ್ರಮ ಧರ್ಮದ ಪುನರುತ್ಥಾನವೆಂದು ಬಗೆದು ಜನರು ಜಾತಿ ಅಸಮಾನತೆಯನ್ನು ಒಪ್ಪಿಕೊಳ್ಳಬೇಕೆ? 2022ರಲ್ಲಿ ಭಾರತದಲ್ಲಿ 30 ಸಾವಿರಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ದಿನ ಈ ದೇಶದಲ್ಲಿ 90 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗುತ್ತವೆ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚುತ್ತಿವೆ. ಈ ಸೀತಾಪಹರಣಗಳು ಹೊಸ ರಾಮರಾಜ್ಯದ ಹೆಗ್ಗಳಿಕೆಗಳೇ? ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಗಳು ನಡೆದಿವೆ. ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳನ್ನು ನಡೆಸಿ ಕೊಂದು ಹಾಕಲಾಗಿದೆ. ಸೀತೆಯನ್ನು ರಾಮ ಅಗ್ನಿಗೆ ತಳ್ಳಿದಂತೆ ದೇಶದ ಪಾಲಿನ ಮಹಿಳೆಯರ ಅಗ್ನಿಪರೀಕ್ಷೆಗಳೆ? ಹೌದು ಎಂದು ಬಿಜೆಪಿ ರಾಷ್ಟ್ರೀಯ ಸಮಾವೇಶ ತನ್ನ ನಿರ್ಣಯದಲ್ಲಿ ಘೋಷಿಸಿಕೊಂಡಿದೆ. ರಾಮರಾಜ್ಯ ಸ್ಥಾಪನೆಯ ಆರಂಭವೇ ಇಷ್ಟು ಭೀಕರವಾಗಿದ್ದರೆ, ಇದು ಒಂದು ಸಾವಿರ ವರ್ಷಗಳನ್ನು ತಲುಪಿದಾಗ ಇನ್ನೆಷ್ಟು ಭೀಕರವಾಗಬಹುದು? ಇಲ್ಲಿ ದಲಿತರು, ಮಹಿಳೆಯರು, ಶೂದ್ರರ ಸ್ಥಿತಿ ಎಂತಹ ಹೀನಾಯ ಮಟ್ಟಕ್ಕೆ ತಲುಪಬಹುದು? ಎಂದು ದೇಶದ ಜನರು ಭಯಭೀತಿಗೊಳಗಾಗುವಂತಾಗಿದೆ.
ರಾಮಾಯಣದಲ್ಲಿ ರಾಮ ರಾಜನಾಗಿ ಸ್ಥಾಪಿಸಿದ ಬೃಹತ್ ದೇವಸ್ಥಾನಗಳ ಬಗ್ಗೆ ಯಾವ ಉಲ್ಲೇಖಗಳೂ ಇಲ್ಲ. ರಾಮನ ಆದರ್ಶಗಳನ್ನು, ಆಶಯಗಳನ್ನು ಕೊಂದು ಹಾಕಿ ಅದರ ಮೇಲೆ ರಾಮಮಂದಿರವನ್ನು ನಿರ್ಮಿಸಿ ದೇಶವನ್ನು ರಾಮರಾಜ್ಯವಾಗಿಸಲು ಸಾಧ್ಯವಿಲ್ಲ. ಇಂದು ಬಿಜೆಪಿ ಪ್ರತಿಪಾದಿಸುವ ರಾಮ ರಾಜ್ಯ ರಾಮನ ಅತಿ ದೊಡ್ಡ ಅಣಕವಾಗಿದೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಮಾಡಿದ ಅಕ್ರಮಗಳನ್ನು, ಅನ್ಯಾಯಗಳನ್ನು, ಅತ್ಯಾಚಾರಗಳನ್ನು ರಾಮನ ತಲೆಗೆ ಕಟ್ಟಲಾಗಿದೆ. ತಮ್ಮ ಸಕಲ ಪಾಪಗಳನ್ನು ರಾಮನ ಕೊರಳಿಗೆ ಸುತ್ತಿ ಅಲಂಕರಿಸಿ ಆತನನ್ನು ತಮ್ಮ ಚುನಾವಣಾ ಪ್ರಚಾರದ ಟ್ಯಾಬ್ಲೋ ಮಾಡಲು ಹೊರಟಿರುವ ಬಿಜೆಪಿ ಅದಕ್ಕಾಗಿ ಭವಿಷ್ಯದಲ್ಲಿ ಭಾರೀ ಬೆಲೆಯನ್ನು ತೆರಲಿದೆ.