ಸಣ್ಣಪುಟ್ಟ ನಗರಗಳಲ್ಲೂ ವಾಯು ಮಾಲಿನ್ಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಾಯು ಮಾಲಿನ್ಯದಿಂದ ಬಹುದೊಡ್ಡ ನಗರಗಳಲ್ಲಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಅಧ್ಯಯನ ಕೇಂದ್ರದ (ಸಿಎಸ್ಟಿಪಿ) ಇತ್ತೀಚಿನ ಅಧ್ಯಯನದ ಪ್ರಕಾರ ಕರ್ನಾಟಕದ ಎರಡನೇ ಸ್ತರದ ನಗರಗಳು ವಾಯು ಮಾಲಿನ್ಯದಿಂದ ಜನಜೀವನದ ದೈನಂದಿನ ಬದುಕು ಅಸಹನೀಯವಾಗುವ ಅಪಾಯ ಎದುರಾಗಿದೆ. ಹೀಗೆಯೇ ಬಿಟ್ಟರೆ ೨೦೩೦ರಲ್ಲಿ ಸಣ್ಣಪುಟ್ಟ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣವು ಶೇ. ೪೦ರಷ್ಟು ಹೆಚ್ಚಳವಾಗಲಿದೆ. ಇದಕ್ಕೆ ಕಾರಣ ನಮ್ಮ ಸರಕಾರಗಳು ಮಾಲಿನ್ಯ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದಾಗಿದೆ. ೧೭ ರಾಜ್ಯಗಳ ೭೫ ನಗರಗಳಲ್ಲಿ ಈ ಸಂಸ್ಥೆ ಮಾಡಿದ ಅಧ್ಯಯನದ ಪ್ರಕಾರ ಪರಿಸ್ಥಿತಿ ಕಳವಳಕಾರಿಯಾಗಿದೆ. ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ನಗರಗಳು ಅತಿಯಾದ ವಾಯು ಮಾಲಿನ್ಯ ಹೊಂದಿರುವ ನಗರಗಳು ಎಂದು ವರ್ಗೀಕರಿಸಲಾಗಿದೆ.
ಈ ಸಂಸ್ಥೆಯ ಅಧ್ಯಯನದ ಪ್ರಕಾರ ದಾವಣಗೆರೆಯಲ್ಲಿ ಮಾಲಿನ್ಯ ಕಣಗಳ ಹೊರಸೂಸುವಿಕೆ ಪ್ರಮಾಣ ಉಳಿದ ನಗರಗಳಿಗಿಂತ ಹೆಚ್ಚಾಗಿದೆ. ‘ಸ್ಮಾರ್ಟ್ ಏರ್’ ಎಂಬ ಇನ್ನೊಂದು ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಮಂಗಳೂರು, ಮಡಿಕೇರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರಗಳನ್ನು ಅತಿ ಕಡಿಮೆ ಮಾಲಿನ್ಯದ ನಗರಗಳೆಂದು ಗುರುತಿಸಿರುವುದು ಕುತೂಹಲಕರವಾಗಿದೆ. ವಾಸ್ತವವಾಗಿ ಈ ಎಲ್ಲ ನಗರಗಳಲ್ಲೂ ಮಾಲಿನ್ಯದ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿಗದಿ ಮಾಡಿದ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಎರಡನೇ ಅತಿ ಕಡಿಮೆ ಮಾಲಿನ್ಯದ ನಗರ ಎಂದು ಗುರುತಿಸಲಾದ ಮಡಿಕೇರಿಯಲ್ಲಿ ಮಾಲಿನ್ಯದ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಮೂರು ಪಟ್ಟು ಅಧಿಕವಿದೆ.
ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಕಲಬುರಗಿಯಂತಹ ನಗರಗಳಲ್ಲಿ ಒಮ್ಮಿಂದೊಮ್ಮೆಲೆ ವಾಯುಮಾಲಿನ್ಯ ಉಂಟಾಗಲು ಕಾರಣವೇನು? ಕಾರಣ ಹುಡುಕಲು ತಡಕಾಡಬೇಕಿಲ್ಲ. ಎರಡನೇ ಸ್ತರದ ಈ ನಗರಗಳ ಅಭಿವೃದ್ಧಿಯ ಬಗ್ಗೆ ಬಹುಕಾಲದಿಂದ ಸರಕಾರಗಳು ನಿರ್ಲಕ್ಷ್ಯ ತಾಳಿರುವುದೇ ಇದಕ್ಕೆ ಕಾರಣ. ಕರ್ನಾಟಕದ ಅಭಿವೃದ್ಧಿ ಅಂದರೆ ಬೆಂಗಳೂರಿನ ಅಭಿವೃದ್ಧಿ ಎಂದು ನಮ್ಮ ಸರಕಾರಗಳು ರಾಜಧಾನಿಯಾದ ಬೆಂಗಳೂರಿಗೆ ವಿಶೇಷ ಆದ್ಯತೆ ನೀಡಿ ಯೋಜನೆಗಳನ್ನು ರೂಪಿಸುತ್ತಾ ಬಂದವು. ಬೆಂಗಳೂರು ಬಿಟ್ಟರೆ ಇತರ ಸಣ್ಣಪುಟ್ಟ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಖಾಸಗಿ ವಾಹನಗಳನ್ನು ಜನರು ಅವಲಂಬಿಸಬೇಕಾಯಿತು. ಇದರಿಂದ ಸಂಚಾರ ದಟ್ಟಣೆ ಮಾತ್ರವಲ್ಲ ವಾಯುಮಾಲಿನ್ಯ ಉಂಟಾಯಿತು.
ಎರಡನೆಯದಾಗಿ ಸಣ್ಣಪುಟ್ಟ ನಗರಗಳಲ್ಲಿ ಯೋಜನಾಬದ್ಧ ಬೆಳವಣಿಗೆ ಆಗಲಿಲ್ಲ. ಲಂಗು ಲಗಾಮಿಲ್ಲದ ಕಟ್ಟಡ ನಿರ್ಮಾಣ ಚಟುವಟಿಕೆ ಹಾಗೂ ಕಾರ್ಖಾನೆಗಳಿಂದ ಉಂಟಾಗುವ ಮಾಲಿನ್ಯ ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ಹುಬ್ಬಳ್ಳಿ, ಧಾರವಾಡ, ಕಲಬುರಗಿ, ದಾವಣಗೆರೆಯಂತಹ ನಗರಗಳು ವಾಯುಮಾಲಿನ್ಯದಿಂದ ಬಸವಳಿದು ಹೋಗಿವೆ.
ಉತ್ತರ ಕರ್ನಾಟಕದ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಲು ಸರಕಾರದ ನಿರ್ಲಕ್ಷ್ಯ ಕಾರಣವಾದರೆ, ಮಡಿಕೇರಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಅತಿಯಾದ ಪ್ರವಾಸೋದ್ಯಮ ಚಟುವಟಿಕೆಗಳು ಕಾರಣವೆಂದರೆ ಅತಿಶಯೋಕ್ತಿಯಲ್ಲ. ಅಷ್ಟೇ ಅಲ್ಲ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಿಯಂತ್ರಿತವಾಗಿ ನಿರ್ಮಾಣ ವಾಗುತ್ತಿರುವ ರೆಸಾರ್ಟ್ಗಳು, ಹೋಮ್ ಸ್ಟೇಗಳು, ನಿರಂತರವಾಗಿ ನಡೆಯುತ್ತಿರುವ ಅರಣ್ಯ ನಾಶ, ಅರಣ್ಯ ಒತ್ತುವರಿ ಹಾಗೂ ವಾಹನ ಸಂಚಾರ ವಾಯುಮಾಲಿನ್ಯಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಅಧ್ಯಯನ ಕೇಂದ್ರ ಕೆಲವು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಮೂಲಸೌಕರ್ಯವನ್ನು ಉತ್ತಮ ಪಡಿಸಬೇಕು ಹಾಗೂ ಕಲ್ಲಿದ್ದಲಿನ ಬದಲಾಗಿ ಶುದ್ಧ ಇಂಧನವನ್ನು ಬಳಸಬೇಕು, ರಸ್ತೆಗಳು ಹಾಳಾಗದಂತೆ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಬೇಕು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು, ಕಾರ್ಖಾನೆಗಳು ಹಾಗೂ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆ ವಾಹನ, ರೈಲು ಸಂಚಾರವನ್ನು ರದ್ದುಗೊಳಿಸಿ ಲಾಕ್ಡೌನ್ ಘೋಷಿಸಲಾಗಿತ್ತು. ಆಗ ಪರಿಸರ ಮಾಲಿನ್ಯ ಕಡಿಮೆಯಾಗಿತ್ತೆಂದು ವರದಿಗಳು ತಿಳಿಸಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಅಧ್ಯಯನ ಕೇಂದ್ರದ ಸಲಹೆಯಂತೆ ಮಾಲಿನ್ಯ ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡರೆ ವಾಯುಮಾಲಿನ್ಯ ಪ್ರಮಾಣವನ್ನು ಶೇ. ೩೫ರಷ್ಟು ಕಡಿಮೆ ಮಾಡಬಹುದು. ಇದಕ್ಕೆ ತುರ್ತಾಗಿ ಸರಕಾರದ ಸ್ಪಂದನೆ ಅಗತ್ಯ. ಸರಕಾರ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಕ್ಷಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ರಾಜ್ಯದ ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಕಲಬುರಗಿಯಂತಹ ಎರಡನೇ ಸ್ತರದ ನಗರಗಳಲ್ಲಿ ವಾಯುಮಾಲಿನ್ಯ ಇನ್ನಷ್ಟು ಹೆಚ್ಚಿ ಪರಿಸ್ಥಿತಿ ಬಿಗಡಾಯಿಸಬಹುದು. ಅತಿಯಾದ ವಾಯುಮಾಲಿನ್ಯ ದಿಂದ ನಾಗರಿಕರ ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.ಹಾಗಾಗದಂತೆ ಸರಕಾರ ಎಚ್ಚರ ವಹಿಸಬೇಕಾಗಿದೆ.
ವಾಯುಮಾಲಿನ್ಯದಿಂದ ಮನುಷ್ಯನ ಶ್ವಾಸಕೋಶದ ಮೇಲೆ ತುಂಬಾ ಕೆಟ್ಟ ಪರಿಣಾಮ ಉಂಟಾಗುತ್ತದೆ. ಅಷ್ಟೇ ಅಲ್ಲ ಎಳೆ ಮಕ್ಕಳ ಸೂಕ್ಷ್ಮ ದೇಹದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ವೈದ್ಯಕೀಯ ಪರಿಣಿತರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಕಲಬುರಗಿ, ಬಿಜಾಪುರದಂತಹ ನಗರಗಳಲ್ಲಿ ಧೂಳಿನ ಕಣಗಳಿಂದ ಉಸಿರಾಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಸರಕಾರ ವಾಯು ಮಾಲಿನ್ಯ ಮಾತ್ರವಲ್ಲ ಶಬ್ದ ಮಾಲಿನ್ಯ, ಜಲ ಮಾಲಿನ್ಯ, ಒಟ್ಟಾರೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.