ಪ್ರಧಾನಿಯ ಗಂಟಲಲ್ಲಿ ಸಿಕ್ಕಿಕೊಂಡ ‘ಆ್ಯಪಲ್’
Photo: PTI
ತಪ್ಪು ಮಾಡಿದ ಭಯ, ಅಭದ್ರತೆ, ಕೀಳರಿಮೆ, ಇನ್ನೊಬ್ಬರನ್ನು ನಿಯಂತ್ರಿಸುವ ಸರ್ವಾಧಿಕಾರಿ ಮನಸ್ಥಿತಿಗಳಿರುವ ಮನುಷ್ಯರಷ್ಟೇ ಇನ್ನೊಬ್ಬರ ಮಾತುಗಳನ್ನು ಕದ್ದುಕೇಳುವ ಸ್ಥಿತಿಗೆ ತಲುಪುತ್ತಾರೆ. ಇದು ಒಂದು ಸರಕಾರಕ್ಕೂ ಅನ್ವಯವಾಗುತ್ತದೆ. ಈ ಹಿಂದೆ ಅಭದ್ರವಾಗಿದ್ದ ರಾಮಕೃಷ್ಣ ಹೆಗಡೆ ಸರಕಾರವೂ ಹೀಗೆಯೇ ಫೋನ್ ಕದ್ದಾಲಿಸುವ ಪ್ರಯತ್ನದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ‘ಆಪರೇಶನ್ ಕಮಲ’ ಹೆಸರಿನಲ್ಲಿ ಸರಕಾರವನ್ನು ಬೀಳಿಸುವ, ಶಾಸಕರನ್ನು ಖರೀದಿಸುವ ಪ್ರಕರಣಗಳು ಹೆಚ್ಚಿದಷ್ಟೂ ವಿರೋಧಿಗಳ ದೂರವಾಣಿಗಳನ್ನು ಕದ್ದಾಲಿಸುವ ಪ್ರಕರಣಗಳೂ ಹೆಚ್ಚಿವೆ. ಈ ಬಗ್ಗೆ ಹಲವು ರಾಷ್ಟ್ರಮಟ್ಟದ ನಾಯಕರು ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಸದ್ಯ ಯಾವ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿಲ್ಲವಾದರೂ, ಪದೇ ಪದೇ ಬೇಹುಗಾರಿಕೆಗಾಗಿ ಸುದ್ದಿಯಲ್ಲಿದೆ. ದಶಕಗಳ ಹಿಂದೆ ಇದೇ ಮೋದಿಯವರು ಮಹಿಳೆಯೊಬ್ಬರ ಮೇಲೆ ಬೇಹುಗಾರಿಕೆ ನಡೆಸಿದ ಆರೋಪವನ್ನು ಎದುರಿಸಿದ್ದರು. ಇದೀಗ ನೋಡಿದರೆ, ದೇಶದ ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ನ್ಯಾಯಾಧೀಶರ ಮಾತುಗಳನ್ನು ಕದ್ದು ಕೇಳುತ್ತಿರುವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಯಾವುದೋ ಗಂಭೀರ ಅಪರಾಧವನ್ನು ಮುಚ್ಚಿಡಲು ಯತ್ನಿಸುತ್ತಿರುವ ವ್ಯಕ್ತಿ ಮಾತ್ರ ಈ ನಾಡಿನ ನಾಗರಿಕರ ಮಾತುಗಳನ್ನು ಈ ರೀತಿ ಕದ್ದು ಕೇಳುವುದಕ್ಕೆ ಸಾಧ್ಯ.
ಎರಡು ವರ್ಷಗಳ ಹಿಂದೆ ದೇಶಾದ್ಯಂತ ಪೆಗಾಸಸ್ ಗೂಢಚಾರಿಕೆ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. 16 ಅಂತರ್ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಜೊತೆ ಸೇರಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ, ಭಾರತ ಸರಕಾರವು ಇಸ್ರೇಲ್ ಮೂಲದ ಸ್ಪೈ ವೇರ್ ಬಳಸಿ ದೇಶದ 40ಕ್ಕೂ ಹೆಚ್ಚು ಪತ್ರಕರ್ತರು, ರಾಜಕಾರಣಿಗಳು, ಅಧಿಕಾರಿಗಳ ಮೊಬೈಲ್ ಫೋನ್ಗಳನ್ನು ಕದ್ದಾಲಿಸುತ್ತಿದೆ ಎನ್ನುವುದು ಬೆಳಕಿಗೆ ಬಂತು. ಸರಕಾರವು ಇಸ್ರೇಲ್ನಿಂದ ಈ ಸ್ಪೈವೇರ್ನ್ನು ಖರೀದಿಸಿರುವುದನ್ನೂ ತನಿಖಾ ತಂಡ ಬಯಲಿಗೆಳೆಯಿತು. 2019ರಲ್ಲೇ ಈ ಆರೋಪ ಕೇಳಿ ಬಂದಿತ್ತಾದರೂ ಅದು ಪೂರ್ಣವಾಗಿ ಜೀವ ಪಡೆದದ್ದು ಮಾಧ್ಯಮಗಳ ಜಂಟಿ ವಿಶೇಷ ಕಾರ್ಯಾಚರಣೆಯ ಬಳಿಕ. ಸಿದ್ಧಾರ್ಥ ವರದರಾಜನ್, ಎಂ.ಕೆ. ವೇಣು ಅವರಂತಹ ಹಿರಿಯ ಪತ್ರಕರ್ತರು ಮಾತ್ರವಲ್ಲ, ಕೆಲವು ನ್ಯಾಯಾಧೀಶರ ಪೋನ್ಗಳನ್ನೂ ಸರಕಾರ ಈ ಸ್ಪೈವೇರ್ ಮೂಲಕ ಕದ್ದು ಕೇಳುತ್ತಿದೆ ಎನ್ನುವುದು ಬಹಿರಂಗವಾಯಿತು. ಯಾವುದೋ ಕಾನೂನು ಬಾಹಿರ ಸಂಘಟನೆಗಳು ಈ ಕೃತ್ಯವನ್ನು ಎಸಗಿದ್ದರೆ, ದೇಶದ್ರೋಹದ ಕಾಯ್ದೆಯನ್ನು ಜಡಿದು ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಸರಕಾರದ ಮೇಲೆಯೇ ಈ ಆರೋಪ ಬಂದಿರುವಾಗ, ಯಾರು, ಯಾರನ್ನು ಬಂಧಿಸಬೇಕು? ಎನ್ನುವ ಪ್ರಶ್ನೆ ಎದುರಾಯಿತು. ‘ತನಿಖೆ ಮಾಡುತ್ತೇನೆ’ ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿತಾದರೂ, ಆರೋಪಿಯೇ ಆರೋಪಗಳ ಬಗ್ಗೆ ತನಿಖೆ ನಡೆಸುವುದು ಎಷ್ಟರಮಟ್ಟಿಗೆ ವಿಶ್ವಾಸಾರ್ಹ?
ಪೆಗಾಸಸ್ ಬೇಹುಗಾರಿಕೆಯ ಬಗ್ಗೆ ಸುಪ್ರೀಂಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಈ ಬೇಹುಗಾರಿಕೆ ನಿಜವೇ ಆಗಿದ್ದರೆ ಅತ್ಯಂತ ಕಳವಳಕಾರಿಯಾಗಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪೆಗಾಸಸ್ನ್ನು ಭಾರತದ ಕೆಲವು ಪತ್ರಕರ್ತರು ಮತ್ತು ವಿರೋಧ ಪಕ್ಷದ ನಾಯಕರ ಮೇಲೆ ಬಳಸಿರುವುದು ವಿಧಿ ವಿಜ್ಞಾನ ತನಿಖೆಯಿಂದ ಸಾಬೀತಾಗಿತ್ತು. ಇನ್ನು, ಇದನ್ನು ಯಾರು ಬಳಸಿದ್ದಾರೆ ಎನ್ನುವುದು ಪ್ರಶ್ನೆ. ಇಸ್ರೇಲಿನ ಎನ್ಎಸ್ಒ ಕಂಪೆನಿ ಈ ಪೆಗಾಸಸ್ನ್ನು ಮಾರಿವೆ. ಅವರು ಅಧಿಕೃತವಾಗಿ ಸರಕಾರಗಳಿಗಷ್ಟೇ ಮಾರಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದುದರಿಂದ ಭಾರತ ಸರಕಾರವೇ ಇದನ್ನು ಖರೀದಿಸಿರಬೇಕು. ಆದರೆ ಸರಕಾರ ಸಾರಾಸಗಟಾಗಿ ಆರೋಪವನ್ನು ನಿರಾಕರಿಸಿತ್ತು. ಇದೇ ಸಂದರ್ಭದಲ್ಲಿ ‘ಪೆಗಾಸಸ್ನ್ನು ಭಾರತ ಸರಕಾರ ಖರೀದಿಸಿದೆಯೇ? ಇಲ್ಲವೆ?’ ಎನ್ನುವುದಕ್ಕೆ ಉತ್ತರ ಬಯಸಿ ದಾವೆದಾರರು ಸುಪ್ರೀಂಕೋರ್ಟ್ನ ಮೊರೆ ಹೊಕ್ಕರು. ವಿಪರ್ಯಾಸವೆಂದರೆ, ಒಂದೆಡೆ ಪೆಗಾಸಸ್ ಬೇಹುಗಾರಿಕೆಯನ್ನು ಅಲ್ಲಗಳೆದ ಸರಕಾರವೇ ಇನ್ನೊಂದೆಡೆ, ‘ಮಾಹಿತಿ ದೇಶದ ಭದ್ರತೆಗೆ ಸಂಬಂಧ ಪಟ್ಟ್ಟಿದ್ದರಿಂದ ಉತ್ತರಿಸಲು ಸಾಧ್ಯವಿಲ್ಲ’ ಎಂದು ಜಾರಿಕೊಂಡಿತು. ನ್ಯಾಯಾಲಯವೂ ಈ ಬಗ್ಗೆ ಮಾಹಿತಿಯನ್ನು ನೀಡಲು ಸರಕಾರವನ್ನು ಒತ್ತಾಯಿಸಲಿಲ್ಲ. ಬದಲಿಗೆ ಆರೋಪಗಳನ್ನು ಪರಿಶೀಲಿಸಲು ತಾಂತ್ರಿಕ ಸಮಿತಿಯನ್ನು ರಚಿಸಿತು. ಆದರೆ ಈ ಸಮಿತಿಗೂ ಸರಕಾರ ಸಹಕರಿಸಲಿಲ್ಲ ಎನ್ನುವುದನ್ನು ಸ್ವತಃ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಒಟ್ಟಿನಲ್ಲಿ ಪೆಗಾಸಸ್ ಮೂಲಕ ಸರಕಾರ ಈ ನಾಡಿನ ಗಣ್ಯ ವ್ಯಕ್ತಿಗಳ ಬೇಹುಗಾರಿಕೆ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್ ಕೂಡ ಯಾವುದೇ ನಿರಾಕರಣೆ ಮಾಡಿಲ್ಲ. ಈ ಬೇಹುಗಾರಿಕೆಯನ್ನು ಯಾವುದೇ ಕುಖ್ಯಾತ ವ್ಯಕ್ತಿಗಳ ವಿರುದ್ಧ ಮಾಡಿರುವುದಲ್ಲ. ಆದುದರಿಂದ ಇದು ಯಾವುದೇ ರೀತಿಯಲ್ಲಿ ದೇಶದ ಆಂತರಿಕ ಭದ್ರತೆಯೊಂದಿಗೆ ತಳಕು ಹಾಕಿಕೊಂಡಿಲ್ಲ. ಪೆಗಾಸಸ್ನ್ನು ಪ್ರಧಾನಿ ಮೋದಿಯವರು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆ. ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ದೇಶದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ಆದುದರಿಂದ, ನಿಜಕ್ಕೂ ದೇಶದ ಆಂತರಿಕ ಭದ್ರತೆಗೆ ಯಾರಿಂದ ಅಪಾಯವಿದೆ ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದಾಗಿದೆ.
ಇದರ ಬೆನ್ನಿಗೇ, ‘ಆ್ಯಪಲ್’ನ್ನು ಕದ್ದು ತಿನ್ನಲು ಹೊರಟು, ಅದೂ ಈಗ ಪ್ರಧಾನಿಯ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ‘ಸರಕಾರಿ ಪ್ರಾಯೋಜಿತ ಕಳ್ಳರು ನಿಮ್ಮ ಐಫೋನ್ಗಳಿಗೆ ಕನ್ನ ಹಾಕಿದಂತೆ ಕಂಡು ಬರುತ್ತಿದೆ’ ಎನ್ನುವ ಸಂದೇಶವನ್ನು ಆ್ಯಪಲ್ ಕಂಪೆನಿ ವಿರೋಧಪಕ್ಷದ ಹಲವು ನಾಯಕರಿಗೆ ಹಾಗೂ ಕನಿಷ್ಠ ಮೂವರು ಪತ್ರಕರ್ತರಿಗೆ ರವಾನಿಸಿದೆ. ಅಷ್ಟೇ ಅಲ್ಲ ‘‘ಈ ಸರಕಾರಿ ಪ್ರಾಯೋಜಿತ ಕಳ್ಳರು ಸಾಂಪ್ರದಾಯಿಕ ಸೈಬರ್ ಕ್ರಿಮಿನಲ್ಗಳಂತಲ್ಲ. ಅತ್ಯುತ್ಕೃಷ್ಟ ದರ್ಜೆಯ ಸಂಪನ್ಮೂಲಗಳನ್ನು ಇವರು ಬಳಸುತ್ತಿದ್ದಾರೆ. ಹಾಗಾಗಿ ಇಂತಹ ದಾಳಿಗಳನ್ನು ತಡೆಯುವುದು ಅಥವಾ ಪತ್ತೆ ಹಚ್ಚುವುದು ಕಷ್ಟದಾಯಕವಾಗಿದೆ’’ ಎಂದೂ ತನ್ನ ಸ್ಪಷ್ಟೀಕರಣದಲ್ಲಿ ಆ್ಯಪಲ್ ತಿಳಿಸಿದೆ. ಆ್ಯಪಲ್ನ ಈ ಆರೋಪದಿಂದ ಪಾರಾಗಲು ಸರಕಾರ ಆ್ಯಪಲ್ನ ಸಿಬ್ಬಂದಿಯನ್ನೇ ತನಿಖೆಗೊಳಪಡಿಸಲು ಮುಂದಾಗಿದೆ. ಇಂತಹ ಆರೋಪಗಳನ್ನು ಮಾಡಿರುವುದಕ್ಕಾಗಿ ಸರಕಾರ ಆ್ಯಪಲ್ ಸಂಸ್ಥೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ನೋಡುತ್ತಿದೆ. ಇಷ್ಟು ಗಂಭೀರ ಆರೋಪವನ್ನು ಸರಕಾರಗಳ ವಿರುದ್ಧ ಯಾವುದೇ ಖಾಸಗಿ ಕಂಪೆನಿಗಳು ಮಾಡಲು ಸಾಧ್ಯವಿಲ್ಲ. ಇದರಿಂದ ಕಂಪೆನಿಗೆ ಸಾಕಷ್ಟು ನಷ್ಟಗಳಿವೆ. ಇಷ್ಟಾದರೂ ತನ್ನ ಗ್ರಾಹಕರ ಮೇಲಿನ ಕಾಳಜಿಯಿಂದ ಈ ಸಂದೇಶವನ್ನು ಅದು ರವಾನಿಸಿದೆ. ಆದುದರಿಂದ ಸರಕಾರದ ಸಂಪನ್ಮೂಲವನ್ನು ಬಳಸಿಕೊಂಡು ದುಷ್ಕರ್ಮಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆಯೋ ಅಥವಾ ಸ್ವತಃ ಸರಕಾರವೇ ಬೇಹುಗಾರಿಕೆಯಲ್ಲಿ ತೊಡಗಿದೆಯೋ ಎನ್ನುವುದು ಮೊದಲು ಸ್ಪಷ್ಟವಾಗಬೇಕಾಗಿದೆ. ಆದರೆ ಸರಕಾರ ಸಂದೇಶ ನೀಡಿದ ಆ್ಯಪಲ್ ಸಂಸ್ಥೆಯನ್ನೇ ಬೆದರಿಸಿ ಬಾಯಿಮುಚ್ಚಿಸಲು ಮುಂದಾಗಿದೆ.
ಭಾರತದಲ್ಲಿ ಮಾತ್ರವಲ್ಲ, ಇತರ 150 ದೇಶಗಳಲ್ಲಿ ಆ್ಯಪಲ್ ಈ ಸಂದೇಶವನ್ನು ನೀಡಿದೆ ಎಂದು ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನೋಡುತ್ತಿದೆ. ಪೆಗಾಸಸ್ ತಂತ್ರಜ್ಞಾನ ಬಳಕೆಯೂ ಭಾರತದಲ್ಲಿ ಮಾತ್ರ ನಡೆದಿರಲಿಲ್ಲ. ಹತ್ತು ಹಲವು ದೇಶಗಳು ಇದನ್ನು ತನ್ನ ನಾಗರಿಕರ ವಿರುದ್ಧ ಬಳಸಿಕೊಂಡಿದ್ದವು ಮತ್ತು ಅವುಗಳಲ್ಲಿ ಹೆಚ್ಚಿನ ದೇಶಗಳು ಸರ್ವಾಧಿಕಾರಿ ಆಡಳಿತಗಾರರ ಕಪಿಮುಷ್ಟಿಯಲ್ಲಿದ್ದವು. ಪ್ರಜಾಸತ್ತಾತ್ಮಕ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು, ತನ್ನ ವಿರುದ್ಧದ ಪ್ರತಿರೋಧದ ಧ್ವನಿಗಳನ್ನು ದಮನಿಸಲು ಬಯಸುವ ಸರ್ವಾಧಿಕಾರಿಯಷ್ಟೇ ಇಂತಹ ಬೇಹುಗಾರಿಕೆಯನ್ನು ನಡೆಸಲು ಸಾಧ್ಯ.
ಗಣ್ಯರ ಮೊಬೈಲ್ಗಳ ಬದಲಿಗೆ ಈ ದೇಶದ ಮಧ್ಯಮ ವರ್ಗದ ಜನರ ಮೊಬೈಲ್ಗಳನ್ನು ಕದ್ದು ಕೇಳಿದ್ದೇ ಆದರೆ ಈ ದೇಶಕ್ಕೆ ಒಂದಿಷ್ಟು ಪ್ರಯೋಜನವಾಗಬಹುದಿತ್ತು. ಶ್ರೀಸಾಮಾನ್ಯರು ಪರಸ್ಪರ ಹಂಚಿಕೊಳ್ಳುತ್ತಿರುವ ಬಡತನ, ಹಸಿವು, ಬೆಲೆಯೇರಿಕೆ, ಅನಾರೋಗ್ಯ ಮೊದಲಾದ ಸಂಕಟಗಳು ಆ ಮೂಲಕವಾದರೂ ಪ್ರಧಾನಿ ಮೋದಿಯವರನ್ನು ತಲುಪಿದಂತಾಗುತ್ತಿತ್ತು. ಪ್ರಧಾನಿ ಮೋದಿಯವರು ಬೇಹುಗಾರಿಕೆಯ ತಂತ್ರಜ್ಞಾನವನ್ನು ಖಂಡಿತ ಬಳಸಲಿ. ಆದರೆ ಅದನ್ನು ತನ್ನ ‘ಅಚ್ಛೇದಿನ್’ನ ಅಸಲಿಯತ್ತನ್ನು ಆಲಿಸುವುದಕ್ಕಾಗಿ ಬಡ ಶ್ರೀ ಸಾಮಾನ್ಯರ ಮೇಲೆ ಬಳಸಲಿ ಎನ್ನುವುದು ದೇಶದ ಜನರ ವಿನಂತಿಯಾಗಿದೆ.