ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳಿಗೆ ವಿದ್ಯಾರ್ಥಿಗಳು ಹೊಣೆಗಾರರೆ?
ಸಾಂದರ್ಭಿಕ ಚಿತ್ರ PC: pinterest.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಟುಕನ ಕೈಗೆ ಕತ್ತರಿ ಕೊಟ್ಟು, ಆಪರೇಷನ್ ಥಿಯೇಟರ್ ಒಳಗೆ ಬಿಟ್ಟುಕೊಟ್ಟಂತಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಇತ್ತೀಚೆಗೆ ನಡೆಸುತ್ತಿರುವ ಪ್ರಯೋಗಗಳು. ಹೊಸ ಶಿಕ್ಷಣ ನೀತಿ, ಒಟ್ಟು ಶಿಕ್ಷಣ ವ್ಯವಸ್ಥೆಯ ಸ್ವರೂಪಕ್ಕೆ ಧಕ್ಕೆ ತರುವ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಸರಕಾರ ವಿದ್ಯಾರ್ಥಿಗಳನ್ನು ತನ್ನ ಪ್ರಯೋಗಗಳ ಗಿನಿಪಿಗ್ಗಳನ್ನಾಗಿಸಲು ಹೊರಟಿದೆ. ಆಧುನಿಕತೆ ಮತ್ತು ವೈಚಾರಿಕತೆಗೆ ಪೂರಕವಾಗಿ ಶಿಕ್ಷಣವನ್ನು ಹೆಚ್ಚು ಸೃಜನಶೀಲಗೊಳಿಸಿ, ಆ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳನ್ನು ‘ಉರು ಹೊಡೆಯುವ’ ಹಳೆತಂತ್ರಕ್ಕೆ ಮತ್ತೆ ತಳ್ಳಲು ಹೊರಟಿದೆ. ಅದರ ಭಾಗವಾಗಿಯೇ, ನೋ ಡಿಟೆನ್ಶನ್ ಪಾಲಿಸಿ ಅಥವಾ ಅನುತ್ತೀರ್ಣ ರಹಿತ ನೀತಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಇನ್ನು ಮುಂದೆ ವಾರ್ಷಿಕ ಪರೀಕ್ಷೆಯಲ್ಲಿ ನಿರ್ದಿಷ್ಟ ಅಂಕಗಳನ್ನು ಪಡೆಯದ 5 ಮತ್ತು ಎಂಟನೆಯ ತರಗತಿ ಮಕ್ಕಳನ್ನು ಸರಕಾರ ಅನುತ್ತೀರ್ಣಗೊಳಿಸಬಹುದಾಗಿದೆ. ಈ ಮೂಲಕ ಮತ್ತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ‘ಪಾಸು-ಫೇಲು’ ಅಗ್ನಿ ಪರೀಕ್ಷೆಯನ್ನು ದಾಟಿ ಮುಂದೆ ಹೋಗಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಶಿಕ್ಷಣದ ಹಕ್ಕಿನ ಮೂಲ ಕಾಯ್ದೆಯ ಪ್ರಕಾರ 8ನೇ ತರಗತಿಯನ್ನು ಪೂರ್ಣಗೊಳಿಸುವವರೆಗೆ ಯಾವುದೇ ಮಗುವನ್ನು ಶಾಲೆಯಿಂದ ಹೊರ ಹಾಕುವುದನ್ನು ಮತ್ತು ಅನುತ್ತೀರ್ಣಗೊಳಿಸುವುದನ್ನು ನಿಷೇಧಿಸಲಾಗಿತ್ತು. ಇದಕ್ಕೆ ಹಲವು ಕಾರಣಗಳಿವೆ. ಪ್ರಾಥಮಿಕ ಕಲಿಕೆಯ ಅವಧಿಯಲ್ಲಿ, ವಿದ್ಯಾರ್ಥಿಗಳ ಎಳೆ ಮನಸ್ಸು ಎನ್ನುವುದು ಈಗಷ್ಟೇ ಬೀಜವನ್ನು ತನ್ನೊಳಗೆ ತೆಗೆದುಕೊಳ್ಳುವ ಹಸಿ ಮಣ್ಣು. ಅಲ್ಲಿ ಬೀಜ ಮೊಳಕೆ ಒಡೆಯುವ ಮೊದಲೇ, ಮಣ್ಣು ಮತ್ತು ಬೀಜದ ಗುಣಮಟ್ಟದ ಕುರಿತಂತೆ ನಿರ್ಧಾರಗಳನ್ನು ತಳೆಯುವ ಅಧಿಕಾರ ಯಾರಿಗೂ ಇಲ್ಲ. ಈ ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ದಡ್ಡರು ಮತ್ತು ಬುದ್ಧಿವಂತರು ಎಂದು ವಿಭಜಿಸುವುದು ಎಳವೆಯಲ್ಲೇ ಮಕ್ಕಳೊಳಗೆ ಕೀಳರಿಮೆಯನ್ನು ಬಿತ್ತಿದಂತೆ. ಅವರ ವ್ಯಕ್ತಿತ್ವ ಇನ್ನೂ ಸ್ಪಷ್ಟ ರೂಪವನ್ನೇ ಪಡೆಯದ ಹೊತ್ತಿನಲ್ಲಿ ಅವರನ್ನು ಅನುತ್ತೀರ್ಣಗೊಳಿಸುವುದು ಅವರ ಒಳಗಿನ ಪ್ರತಿಭೆಯನ್ನು ಚಿವುಟಿದಂತೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಅವರೊಳಗೆ ಕಲಿಯುವ ಉತ್ಸಾಹವನ್ನು ತುಂಬುವ ಬದಲು, ಅವರನ್ನು ಶಿಕ್ಷಣವೇ ನಿರಾಶೆಗೆ ತಳ್ಳಿದಂತಾಗುತ್ತದೆ.
ಹಾಗೆಂದು, ಈ ಅವಧಿಯಲ್ಲಿ ಮಕ್ಕಳು ಪಠ್ಯದಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳಬೇಕಾಗಿಲ್ಲ ಎಂದಲ್ಲ. ಕಲಿಸುವ ವಿಧಾನಗಳಿಗೆ ಸರಕಾರ ಆದ್ಯತೆಯನ್ನು ನೀಡಬೇಕು. ಅವರ ಸಮಗ್ರ ವಿಕಾಸಕ್ಕೆ ಒಂದು ವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು ಈ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ನಡೆಸಿ ಅವರು ಉರು ಹೊಡೆದಿರುವುದನ್ನು ಕಕ್ಕಿಸುವುದನ್ನೇ ಪರೀಕ್ಷೆ ಎಂದು ಕರೆಯುವುದನ್ನು ಮೊದಲು ಸರಕಾರ ನಿಲ್ಲಿಸಬೇಕು. ಪರೀಕ್ಷೆಗಳು ಇನ್ನಷ್ಟು ಸೃಜನಶೀಲವಾಗಬೇಕು. ಅದು ಅವರ ಒಳಗಿರುವ ಪ್ರತಿಭೆಯ ಬೇರೆ ಬೇರೆ ಮಗ್ಗಲುಗಳನ್ನು ತೀಡುವಂತಿರಬೇಕು. ಈ ನಿಟ್ಟಿನಲ್ಲಿ ಪ್ರತಿ ತಿಂಗಳೂ ಮಕ್ಕಳ ಕಲಿಕೆಯ ಮೌಲ್ಯಮಾಪನಗಳು ನಡೆಯಬೇಕು. ಅದು ಕೇವಲ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳಿಗೆ ಸೀಮಿತವಾಗಬೇಕಾಗಿಲ್ಲ. ಆಟದ ಬಯಲು, ರಂಗಮಂದಿರ, ಶಾಲೆಯ ಕೈತೋಟ, ಚಿತ್ರಕಲೆ ಹೀಗೆ ಪರೀಕ್ಷೆಯ ವ್ಯಾಪ್ತಿಯನ್ನು ಹಿಗ್ಗಿಸಬೇಕು. ವರ್ಷಕ್ಕೆ ಎರಡು ಬಾರಿ ಕೆಲವು ಗಂಟೆಗಳ ಕಾಲ ಕಲಿತದ್ದನ್ನು ಕಕ್ಕಿಸುವ ಕೆಲಸಕ್ಕಿಂತ ಪ್ರತಿ ತಿಂಗಳು ಕಲಿತದನ್ನು ಮೌಲ್ಯಮಾಪನ ಮಾಡುತ್ತಾ, ಮತ್ತೆ ಹೊಸದಾಗಿ ಕಲಿಕೆಗೆೆ ಸಿದ್ಧಗೊಳಿಸುವ ವ್ಯವಸ್ಥೆ ಅತ್ಯುತ್ತಮ ವಿಧಾನವಾಗಿದೆ. ಸರಕಾರ ನಡೆಸುವ ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದರೆ ಮತ್ತೆ ಎರಡು ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಅದರಲ್ಲೂ ವಿಫಲರಾದರೆ ಅದೇ ತರಗತಿಯಲ್ಲಿ ಮತ್ತೆ ಕಲಿಯಬೇಕು. ಒಂದು ವರ್ಷದಲ್ಲಿ ಕಲಿತಿರುವುದನ್ನು ಬರೇ ಎರಡು ತಿಂಗಳಲ್ಲಿ ಮತ್ತೆ ಕಲಿತು ಬರೆದು ಅವರು ಉತ್ತೀರ್ಣರಾಗಲು ಯೋಗ್ಯರಾಗುವುದು ಹೇಗೆ? ಒಂದು ವೇಳೆ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳ ಗತಿಯೇನು?
ಕೊರೊನೋತ್ತರ ದಿನಗಳಲ್ಲಿ ಶಾಲೆಗಳನ್ನು ತೊರೆಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ವರದಿಗಳು ಹೇಳುತ್ತವೆ. ಲಾಕ್ಡೌನ್ ಸಂದರ್ಭದಲ್ಲಿ ಶಾಲೆ ತೊರೆದ ಸಾವಿರಾರು ಮಕ್ಕಳು ಮರಳಿ ಶಾಲೆಯ ಮೆಟ್ಟಿಲನ್ನು ತುಳಿದಿಲ್ಲ. ಬದಲಿಗೆ ಅವರು ಬಾಲಕಾರ್ಮಿಕರಾಗಿ ತಮ್ಮ ಬದುಕನ್ನು ಸವೆಸುತ್ತಿದ್ದಾರೆ. ಶಾಲೆ ತೊರೆದವರನ್ನು ಮರಳಿ ಶಾಲೆಗೆ ಸೇರಿಸಲು ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರಗಳಾಗಲಿ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಂಡಿಲ್ಲ. ಬದಲಿಗೆ ಸರಕಾರ ಜಾರಿಗೊಳಿಸಲು ಯತ್ನಿಸುತ್ತಿರುವ ನೂತನ ಶಿಕ್ಷಣ ನೀತಿ ಒಟ್ಟು ವ್ಯವಸ್ಥೆಯನ್ನು ಇನ್ನಷ್ಟು ಅಯೋಮಯಗೊಳಿಸಿದೆ ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ನಿರ್ದಿಷ್ಟ ಅಂಕ ಪಡೆದಿಲ್ಲ ಎಂದು ಅನುತ್ತೀರ್ಣಗೊಳಿಸಿದರೆ ಅವರು ಶಾಲೆ ತೊರೆಯುವಂತೆ ಪರೋಕ್ಷವಾಗಿ ಸರಕಾರವೇ ಒತ್ತಡ ಹೇರಿದಂತಾಗುತ್ತದೆ. ಅನುತ್ತೀರ್ಣರಾದವರನ್ನು ಸಮಾಜ, ಪೋಷಕರು ಹೇಗೆ ಸ್ವೀಕರಿಸುತ್ತಾರೆೆ ಎನ್ನುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಸೂಕ್ತ ಅಂಕಗಳು ಸಿಕ್ಕಿಲ್ಲ ಎಂದು ಆತ್ಮಹತ್ಯೆಗೈಯುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಐದನೇ ತರಗತಿ ಮತ್ತು ಎಂಟನೇ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಿದರೆ, ಬಡವರ್ಗದ ಮಕ್ಕಳು ಅನಿವಾರ್ಯವಾಗಿ ಶಾಲೆ ತೊರೆಯ ಬೇಕಾದ ಸ್ಥಿತಿ ನಿರ್ಮಾಣ ಮಾಡಿದಂತಾಗುತ್ತದೆ. ಹಾಗೆ ಶಾಲೆ ತೊರೆದವರು ನಗರಗಳ ಹೊಟೇಲುಗಳಲ್ಲಿ ಅಥವಾ ಗ್ರಾಮೀಣ ಪ್ರದೇಶದ ಹಟ್ಟಿಗಳಲ್ಲಿ, ತೋಟಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯಬೇಕಾಗುತ್ತದೆ.
ಇಷ್ಟಕ್ಕೂ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುವುದಕ್ಕೆ ಶಿಕ್ಷಣ ವ್ಯವಸ್ಥೆಯ ಕೊಡುಗೆಯೇ ಇಲ್ಲವೆ? ದೇಶಾದ್ಯಂತ ಶಿಕ್ಷಕರ ಕೊರತೆಯಿಂದಲೇ ಸಾವಿರಾರು ಸರಕಾರಿ ಶಾಲೆಗಳು ಪಾಲು ಬಿದ್ದಿವೆ. ತರಗತಿ ಕೊಠಡಿಗಳಿಲ್ಲದಿರುವುದು, ಮೂಲಭೂತ ಸೌಕರ್ಯಗಳ ಕೊರತೆ, ಸುಸಜ್ಜಿತ ಗ್ರಂಥಾಲಯಗಳಿಲ್ಲದೇ ಇರುವುದು ಇವೆಲ್ಲವೂ ವಿದ್ಯಾರ್ಥಿಗಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತವೆೆ. ಆದುದರಿಂದ, ಮೊದಲು ನಮ್ಮ ಶಾಲೆಗಳ ಯೋಗ್ಯತೆಯ ಬಗ್ಗೆ ಪರೀಕ್ಷೆಗಳು ನಡೆದು ಅವುಗಳ ಉತ್ತೀರ್ಣ, ಅನುತ್ತೀರ್ಣ ನಿರ್ಧಾರವಾಗಬೇಕು. ಏಕೋಪಾಧ್ಯಾಯ ಶಾಲೆಗಳೆಷ್ಟು, ಕಟ್ಟಡಗಳ ಕೊರತೆಗಳಿಂದ ನರಳುತ್ತಿರುವ ಶಾಲೆಗಳೆಷ್ಟು, ಇವುಗಳು ನಮ್ಮ ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳೇನು ಎನ್ನುವುದರ ಅಧ್ಯಯನ ನಡೆಸದೇ, ತನ್ನ ವೈಫಲ್ಯಗಳಿಗೆ ವಿದ್ಯಾರ್ಥಿಗಳನ್ನು ಬಲಿಪಶು ಪಡುವುದು ಸರಿಯಲ್ಲ. ಇದು ಎಲ್ಲರಿಗೂ ಶಿಕ್ಷಣದ ಹಕ್ಕು ಎನ್ನುವ ಸಂವಿಧಾನದ ಆಶಯಕ್ಕೆ ದ್ರೋಹ ಬಗೆಯುತ್ತದೆ. ಆದುದರಿಂದ, ಸರಕಾರ ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಂಕಗಳ ಕೊರತೆಯಿರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಬದಲು, ಅರ್ಹ ಅಂಕಗಳನ್ನು ಪಡೆಯುವಂತೆ ಅವರನ್ನು ತಯಾರುಗೊಳಿಸುವ ವಿಧಾನಗಳ ಬಗ್ಗೆ ಚಿಂತಿಸುವುದು ಇಂದಿನ ಅಗತ್ಯವಾಗಿದೆ.