ಮೂವರು ಉಪಮುಖ್ಯಮಂತ್ರಿಗಳು ರಾಜ್ಯದ ಜನರ ಅಗತ್ಯವೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮುಂದಿನ ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಮೂವರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವುದು ಸೂಕ್ತ ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ಆಗ್ರಹಿಸಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮೂವರು ಉಪಮುಖ್ಯಮಂತ್ರಿಗಳನ್ನು ಮಾಡಿದೆ. ಅದನ್ನು ಮಾದರಿಯಾಗಿಟ್ಟುಕೊಂಡು ಕರ್ನಾಟಕದಲ್ಲೂ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದರೆ ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಉಪಮುಖ್ಯಮಂತ್ರಿಗಳ ಆಯ್ಕೆ ರಾಜ್ಯದ ಅಭಿವೃದ್ಧಿಯ ಅಗತ್ಯವಲ್ಲ, ಚುನಾವಣೆಯ ಅಗತ್ಯ ಎನ್ನುವುದನ್ನು ಅವರೇ ಈ ಮೂಲಕ ಘೋಷಿಸಿದ್ದಾರೆ. ಚುನಾವಣೆಯ ಗೆಲುವಿಗಾಗಿ ರಾಜ್ಯದ ಜನರ ಮೇಲೆ ಮೂವರು ಉಪಮುಖ್ಯಮಂತ್ರಿಗಳನ್ನು ಹೇರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗೆ ಸಹಕಾರಿ ಸಚಿವರೇ ಉತ್ತರಿಸಬೇಕು. ‘ಸರ್ವರಿಗೂ ಸಮಪಾಲು, ಸಮಬಾಳು’ ಎನ್ನುವುದು ಸಹಕಾರಿ ತತ್ವದ ಅಡಿಪಾಯವಾಗಿದೆ. ಆದರೆ ಚುನಾವಣೆಯ ಹೆಸರಿನಲ್ಲಿ ರಾಜ್ಯವನ್ನು ಹಂಚಿ ತಿನ್ನುವುದಕ್ಕಾಗಿ ಈ ಮಾತನ್ನು ದುರ್ವಾಖ್ಯಾನಗೊಳಿಸುವುದು ಸಹಕಾರಿ ಸಚಿವರಿಗೆ ತಕ್ಕುದಾದ ಮಾತಲ್ಲ. ಜನರ ಸಂಪತ್ತನ್ನು ಜನರಿಗೆ ಹಂಚಿಕೊಡುವ ಸಂದರ್ಭದಲ್ಲಿ ಮೇಲಿನ ಸಾಲು ಬಳಕೆಯಾಗಬೇಕು.
ಬಿಜೆಪಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದನ್ನು ಮಾದರಿಯಾಗಿಸಬೇಕು ಎಂದು ಅವರು ಹೇಳಿದ್ದಾರೆ. ಇದಕ್ಕೆ ಪರಮೇಶ್ವರ್, ಸತೀಶ್ ಜಾರಕಿಹೊಳಿಯಂತಹ ನಾಯಕರು ಪರೋಕ್ಷ ಸಮ್ಮತಿಯನ್ನು ನೀಡಿದ್ದಾರೆ. ಮೂವರು ಉಪಮುಖ್ಯಮಂತ್ರಿ ಯಾವ ಕಾರಣಕ್ಕೂ ಒಂದು ಪಕ್ಷದ ಅಥವಾ ಒಂದು ಸರಕಾರದ ಹೆಗ್ಗಳಿಕೆಯಾಗುವುದಿಲ್ಲ. ಮೂವರು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆಯೆಂದರೆ ಆ ಪಕ್ಷದಲ್ಲಿ, ಸರಕಾರದಲ್ಲಿ ಭಿನ್ನಮತ ಅತಿರೇಕಕ್ಕೆ ತಲುಪಿದೆ ಎಂದು ಅರ್ಥ. ರಾಜ್ಯ ಮೊತ್ತ ಮೊದಲ ಬಾರಿ ಮೂವರು ಉಪ ಮುಖ್ಯಮಂತ್ರಿಗಳನ್ನು ಕಂಡದ್ದು ಬಿಜೆಪಿ ಸರಕಾರದೊಳಗೆ ಭಿನ್ನಮತ ಮಿತಿ ಮೀರಿದಾಗ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ ರಾಜ್ಯದ ಮೇಲೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೇರಲಾಯಿತು. ಇದಾದ ಬಳಿಕ 2019ರಲ್ಲಿ ಅದೇ ಬಿಜೆಪಿ ಸರಕಾರ ಮೂವರು ಉಪ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿತು. ಈ ರಾಜ್ಯ ಮೂವರು ಉಪಮುಖ್ಯಮಂತ್ರಿಗಳನ್ನು ಹೊಂದಿದ್ದಾಗ, ಅತಿ ಹೆಚ್ಚು ಭ್ರಷ್ಟಾಚಾರಗಳಿಗಾಗಿ ಗುರುತಿಸಿಕೊಂಡಿತು. ಯಡಿಯೂರಪ್ಪ ಅವರ ನೇತೃತ್ವದ ಸರಕಾರಕ್ಕೆ ಈ ಮೂವರು ಉಪಮುಖ್ಯಮಂತ್ರಿಗಳೇ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದರು. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೂ ಭಾರೀ ಹಿನ್ನಡೆ ಉಂಟಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಮೂವರು ಉಪಮುಖ್ಯಮಂತ್ರಿಗಳಿಂದ ಚುನಾವಣೆಯನ್ನು ಗೆಲ್ಲಬಹುದು ಎನ್ನುವ ಮಾತು ಕೂಡ ಇಲ್ಲಿ ಸುಳ್ಳಾಗಿದೆ. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದರು ಮಾತ್ರವಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಮುಖ್ಯಮಂತ್ರಿ ಸ್ಥಾನಕ್ಕೆ ಒಬ್ಬರಿಗಿಂತ ಅಧಿಕ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾಗ ಮತ್ತು ಆ ಭಿನ್ನಮತವನ್ನು ಇತ್ಯರ್ಥ ಮಾಡಲು ವಿಫಲವಾದಾಗ ಮಾತ್ರ ಒಂದಕ್ಕಿಂತ ಅಧಿಕ ಉಪ ಮುಖ್ಯಮಂತ್ರಿಗಳನ್ನು ನೇಮಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಒಬ್ಬ ಉಪಮುಖ್ಯಮಂತ್ರಿಯನ್ನು ನೇಮಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಈ ಬಾರಿ ಮುಖ್ಯಮಂತ್ರಿಯಾಗಲು ಕೊನೆಯವರೆಗೂ ಪಟ್ಟು ಹಿಡಿದಿದ್ದರು. ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟಂತೆ ಇಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಅವರು ಬಯಸಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನೊಳಗೆ ಮತ್ತೆ ಜಗ್ಗಾಟ ಶುರುವಾದರೆ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೂ ಸರಕಾರದೊಳಗೆ ಜಗ್ಗಾಟ ನಡೆಯುತ್ತಿದೆ ಎನ್ನುವ ಅಂಶವನ್ನು ಸಚಿವ ರಾಜಣ್ಣ ಅವರು ಬಹಿರಂಗಪಡಿಸಿದ್ದಾರೆ.
ಸಚಿವ ರಾಜಣ್ಣ ಅವರ ಹೇಳಿಕೆ ವರಿಷ್ಠರಿಗೆ ಒಡ್ಡಿದ ಪರೋಕ್ಷ ಬೆದರಿಕೆಯಂತಿದೆ. ಉಪಮುಖ್ಯಮಂತ್ರಿ ಸ್ಥಾನವನ್ನು ಹಂಚದೇ ಇದ್ದರೆ ಅದರ ದುಷ್ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಈಗಾಗಲೇ ಹಲವರು ಕಣ್ಣಿಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಸತೀಶ್ ಜಾರಕಿ ಹೊಳಿ ಮತ್ತು ಪರಮೇಶ್ವರ್ ಹೆಸರು ಕೇಳಿ ಬರುತ್ತಿದೆ. ಈ ಬೇಡಿಕೆಗೆ ಇವರು ಆಗಾಗ ಎಣ್ಣೆ ಸುರಿಯುತ್ತಾ ಬಂದಿದ್ದಾರೆ. ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಇವರು ಖಂಡಿಸಿಲ್ಲ. ಬದಲಿಗೆ ‘ವರಿಷ್ಠರ ತೀರ್ಮಾನಕ್ಕೆ’ ಬಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮಾನ್ಯತೆ ಇಲ್ಲ ಎನ್ನುವುದು ಇವರೆಲ್ಲರಿಗೂ ಚೆನ್ನಾಗಿಯೇ ಗೊತ್ತು. ಮುಖ್ಯಮಂತ್ರಿಗೆ ಸಿಗುವ ಎಲ್ಲ ಸವಲತ್ತುಗಳು ಈ ‘ಮುಖ್ಯಮಂತ್ರಿ’ಗಳಿಗೂ ಸಿಗುತ್ತದೆ ಎನ್ನುವುದು ಬಿಟ್ಟರೆ, ಯಾವುದೇ ಅಧಿಕೃತ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಇವರಿಗೆ ಅವಕಾಶವಿಲ್ಲ. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಇವರು ಅಧಿಕಾರವನ್ನು ಕೈಗೆತ್ತಿಕೊಳ್ಳಬಹುದೇ ಹೊರತು, ಮುಖ್ಯಮಂತ್ರಿ ಇರುವವರೆಗೂ ಇವರದು ‘ಡಮ್ಮಿ ಸ್ಥಾನ’ವಾಗಿರುತ್ತದೆ. ಇಷ್ಟಾದರೂ ಈ ಸ್ಥಾನಕ್ಕೆ ಯಾಕೆ ಹಂಬಲಿಸುತ್ತಾರೆ ಎಂದರೆ, ಮುಖ್ಯಮಂತ್ರಿ ಸ್ಥಾನವನ್ನು ಭವಿಷ್ಯದಲ್ಲಿ ತಮ್ಮದಾಗಿಸಲು ಉಪಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಳ್ಳುವುದು ಮಹತ್ವದ ಮೈಲುಗಲ್ಲಾಗಿದೆ. ಎಸ್.ಎಂ. ಕೃಷ್ಣ, ಜೆ. ಎಚ್. ಪಟೇಲ್, ಸಿದ್ದರಾಮಯ್ಯ ಇವರೆಲ್ಲ ಮೊದಲು ಉಪಮುಖ್ಯಮಂತ್ರಿ ಸ್ಥಾನವನ್ನು ತಮ್ಮದಾಗಿಸಿಕೊಂಡು ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು. ಮುಖ್ಯಮಂತ್ರಿಯಾಗುವುದಕ್ಕೆ ಇರುವ ಪ್ರಮುಖ ಅರ್ಹತೆಯೇ ಉಪಮುಖ್ಯಮಂತ್ರಿಯಾಗುವುದು ಎನ್ನುವ ನಂಬಿಕೆ ರಾಜಕೀಯ ವಲಯದಲ್ಲಿದೆ. ಆದುದರಿಂದಲೇ, ಮುಖ್ಯಮಂತ್ರಿ ಹುದ್ದೆಯು ಸರಕಾರಕ್ಕೆ ಅನಗತ್ಯ ಹೊರೆಯಾಗಿ ಅಸ್ತಿತ್ವದಲ್ಲಿದೆ. ಮುಂದಿನ ದಿನಗಳಲ್ಲಿ ಈ ಡಿಸಿಎಂ ಮೂರರ ಗಡಿದಾಟಿ ಹತ್ತು ತಲುಪಿದರೂ ಅಚ್ಚರಿಯೇನೂ ಇಲ್ಲ.
ರಾಜ್ಯ ಸರಕಾರ ‘ಗ್ಯಾರಂಟಿ’ ಎನ್ನುವ ಹುಲಿಸವಾರಿ ಮಾಡುತ್ತಿದೆಯೆನ್ನುವುದನ್ನು ಕಾಂಗ್ರೆಸ್‌ನ ನಾಯಕರು ಮರೆಯಬಾರದು. ತುಸು ಯಾಮಾರಿದರೂ ಈ ಹುಲಿಯೇ ರಾಜ್ಯ ಸರಕಾರವನ್ನು ಬಲಿ ತೆಗೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ, ಉಪಮುಖ್ಯಮಂತ್ರಿಗಳ ಹೆಸರಿನಲ್ಲಿ ಗೊಂದಲಗಳು, ಭಿನ್ನಮತಗಳು ಆರಂಭವಾದರೆ ಅದು ಲೋಕಸಭೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಮಾತ್ರವಲ್ಲ, ಈಗಾಗಲೇ ಭರ್ಜರಿ ಬಹುಮತ ಪಡೆದಿರುವ ಸರಕಾರದ ಮೇಲೂ ಕೆಟ್ಟ ಪರಿಣಾಮವನ್ನು ಬೀರಬಹುದು. ಬಿಜೆಪಿ ಕಾನೂನು ವ್ಯವಸ್ಥೆಯನ್ನು ಕೆಡಿಸುವುದಕ್ಕೆ ಗರಿಷ್ಠ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಡಾ. ಜಿ. ಪರಮೇಶ್ವರ್‌ರಂತಹ ಹಿರಿಯರು ತಮಗೆ ಸಿಕ್ಕಿರುವ ಗೃಹ ಖಾತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ಗಮನಕೊಡಬೇಕು. ತಮಗೆ ಸಿಕ್ಕಿರುವ ಖಾತೆಗಳನ್ನೇ ಸರಿಯಾಗಿ ನಿರ್ವಹಿಸದೇ ಇಲ್ಲದಿರುವ ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವುದು, ಪೆಟ್ರೋಲ್ ಹಿಡಿದು ಕಾಯುತ್ತಿರುವ ಬಿಜೆಪಿ ನಾಯಕರ ಕೈಗೆ ಸ್ವತಃ ಕಾಂಗ್ರೆಸ್ ನಾಯಕರೇ ಬೆಂಕಿ ಕಡ್ಡಿ ಗೀರಿ ಕೊಟ್ಟಂತೆ.