ಉಣ್ಣುವ ಅನ್ನದ ಮೇಲಿನ ಹಕ್ಕು ಕಳೆದುಕೊಳ್ಳುವ ಮುನ್ನ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಕ್ರಮವಾಗಿ ಗಾಂಜಾ ಬೆಳೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆರೋಪಿಗಳನ್ನು ಬಂಧಿಸಿ ಜೈಲಿಗೂ ತಳ್ಳಲಾಗುತ್ತದೆ. ಆದರೆ ಗುಜರಾತಿನ ರೈತರು ತಮ್ಮ ಕೃಷಿ ಭೂಮಿಯಲ್ಲಿ ಆಲೂಗಡ್ಡೆಯನ್ನು ಬೆಳೆದ ಕಾರಣಕ್ಕಾಗಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು ಮಾತ್ರವಲ್ಲ, ಅವರ ಕೃತ್ಯಕ್ಕಾಗಿ ಒಂದು ಕೋಟಿ ರೂ.ಗೂ ಅಧಿಕ ದಂಡವನ್ನು ಪಾವತಿಸಬೇಕು ಎಂದು ರೈತರನ್ನು ನ್ಯಾಯಾಲಯಕ್ಕೆ ಎಳೆಯಲಾಯಿತು. ತಮ್ಮದೇ ಕೃಷಿ ಭೂಮಿಯಲ್ಲಿ, ದೈನಂದಿನ ಬದುಕಿನಲ್ಲಿ ಬಳಸುವ ಆಲೂಗಡ್ಡೆಯನ್ನು ಬೆಳೆಯುವುದು ಅಪರಾಧ ಎನ್ನುವುದು ಆ ರೈತರಿಗೆ ಗೊತ್ತಾಗಿದ್ದೇ ಆಗ. ಈ ಅಪರಾಧಕ್ಕಾಗಿ ರೈತರನ್ನು ಕೋರ್ಟಿಗೆಳೆದಿರುವುದು, ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ (ಪಿಐಎಚ್) ಕಂಪೆನಿ. ಗುಜರಾತ್‌ನ ಅಹ್ಮದಾಬಾದ್‌ನ ರೈತರು ತಮ್ಮ ಬಳಿಯಿರುವ ಸುಮಾರು 5 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದರು. 2019ರಲ್ಲಿ ಪೆಪ್ಸಿಕೋ ಕಂಪೆನಿ ನಾಲ್ಕು ರೈತರ ವಿರುದ್ಧ ಕೋರ್ಟಿನ ಮೆಟ್ಟಿಲೇರಿತು. ಈ ರೈತರು ಬೆಳೆದ ಆಲೂಗಡ್ಡೆ ತನ್ನ 'ಲೇಸ್' ಚಿಪ್ಸ್‌ಗೆ ಬಳಕೆ ಮಾಡಲಾಗುತ್ತಿದ್ದು, ಇದರ ಹಕ್ಕು ತನ್ನ ಬಳಿಯಿದೆ ಎಂದು ಹೇಳಿಕೊಂಡಿತ್ತು. ತನ್ನ ಬಳಿಯಿದ್ದ ಪೇಟೆಂಟ್ ಆಲೂಗಡ್ಡೆಯನ್ನು ಬೆಳೆದು ಅಪಾರ ನಷ್ಟವುಂಟು ಮಾಡಿರುವುದಕ್ಕಾಗಿ ರೈತರು ತಲಾ 1. 5 ಕೋಟಿ ರೂ.ಯನ್ನು ದಂಡ ನೀಡಬೇಕು ಎಂದು ಕೇಳಿಕೊಂಡಿದ್ದರು. ತಲೆತಲಾಂತರಗಳಿಂದ ಆಲೂಗಡ್ಡೆಯನ್ನು ದೈನಂದಿನ ಬದುಕಿನ ಪ್ರಮುಖ ಆಹಾರವಾಗಿ ಬಳಸಿಕೊಂಡು ಬಂದಿರುವ ಜನಸಾಮಾನ್ಯರಿಗೆ, ಆಲೂಗಡ್ಡೆಯ ಮೇಲಿನ ಹಕ್ಕು ತಮ್ಮದಾಗಿ ಉಳಿದಿಲ್ಲ ಎನ್ನುವುದು ತಿಳಿಯುವಾಗ ತಡವಾಗಿ ಬಿಟ್ಟಿತ್ತು. ಈಗಾಗಲೇ ಹತ್ತು ಹಲವು ಆಘಾತಗಳಿಂದ ತತ್ತರಿಸಿ ಕೂತಿರುವ ರೈತರ ಪಾಲಿಗೆ ಪೆಪ್ಸಿಕೋ ನಡೆ ಆಘಾತಕಾರಿಯಾಗಿತ್ತು. ತಾವು ಬೆಳೆಯುವ ಬೆಳೆಯ ಮೇಲೆ ವಿದೇಶದ ಅದ್ಯಾವುದೋ ಕಂಪೆನಿ ಹಕ್ಕು ಚಲಾಯಿಸುವುದನ್ನು ಒಪ್ಪುವುದು ಅವರಿಗೆ ಕಷ್ಟವಾಗಿತ್ತು. ಗುಜರಾತ್‌ನ ರೈತರು ಮಾತ್ರವಲ್ಲ, ಇಡೀ ದೇಶ ಇದರ ವಿರುದ್ಧ ಒಂದಾಗಿ ಧ್ವನಿಯೆತ್ತಿತು. ಜನರ ಪ್ರತಿರೋಧ ಯಾವ ಮಟ್ಟ ತಲುಪಿತ್ತು ಎಂದರೆ, 2019ರ ಮೇ ತಿಂಗಳಲ್ಲಿ ರೈತರ ವಿರುದ್ಧದ ಎಲ್ಲಾ ಮೊಕದ್ದಮೆಗಳನ್ನು ಕಂಪೆನಿ ನಿಶ್ಶರ್ತವಾಗಿ ಹಿಂದೆಗೆಯಿತು. ಇಲ್ಲವಾದರೆ ಅದರ ಪರಿಣಾಮ ತನ್ನ ಕಂಪೆನಿ ಉತ್ಪಾದನೆಗಳ ಮೇಲೆ ಬೀರಬಹುದು ಎನ್ನುವ ಭಯ ಅದಕ್ಕಿತ್ತು. ಆದರೆ ಅಷ್ಟರಲ್ಲೇ ರೈತರು ಬಹಳಷ್ಟು ಕಿರುಕುಗಳವನ್ನು ಅನುಭವಿಸಿದ್ದರು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಆಲೂಗಡ್ಡೆಯನ್ನು ಬೆಳೆಯುವ ಬಗ್ಗೆ ಅವರಿಗೆ ಆತಂಕವಿತ್ತು.
ಯಾಕೆಂದರೆ ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ ಪಿವಿಪಿ ಪ್ರಮಾಣಪತ್ರವನ್ನು ಪೆಪ್ಸಿಕೋ ಕಂಪೆನಿ ಮುಂದೆಯೂ ರೈತರ ವಿರುದ್ಧ ಅಸ್ತ್ರವಾಗಿ ಬಳಸುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ಪಿವಿಪಿ ವಿರುದ್ಧ ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2021 ಡಿಸೆಂಬರ್‌ನಲ್ಲಿ, ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರವು, ರೈತರ ಹಕ್ಕುಗಳ ಕಾರ್ಯಕರ್ತೆ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಪೆಪ್ಸಿಕೋದ ಪಿವಿಪಿ ಪ್ರಮಾಣಪತ್ರ ರದ್ದುಪಡಿಸುವ ಆದೇಶವನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪೆಪ್ಸಿಕೋ ಇಂಡಿಯಾ ದಿಲ್ಲಿ ಹೈಕೋರ್ಟ್ ಗೆ ಹೋಗಿತ್ತು. ಇದೀಗ ದಿಲ್ಲಿ ಹೈಕೋರ್ಟ್‌ನಲ್ಲೂ ಪೆಪ್ಸಿಕೋಗೆ ಸೋಲಾಗಿದೆ. ಜುಲೈ 5ರಂದು ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ನವೀನ್ ಚಾವ್ಲಾ, ಪೆಪ್ಸಿ ಕಂಪೆನಿಯ ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ ಮತ್ತು ಅದನ್ನು ವಜಾಗೊಳಿಸಿದ್ದಾರೆ. ಇದು ಭಾರತದ ರೈತರ ಭಾಗಶಃಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೇಗೆ ಬಹುರಾಷ್ಟ್ರೀಯ ಕಂಪೆನಿಗಳು ಹಿಂಬಾಗಿಲ ಮೂಲಕ ಈ ದೇಶದೊಳಗೆ ಪ್ರವೇಶಿಸಿ ರೈತರು ಬೆಳೆಯುವ ಆಹಾರ ಪದಾರ್ಥಗಳ ಮೇಲೆ ತಮ್ಮ ಹಕ್ಕುಗಳನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ನಾವು ನಮ್ಮದೇ ನೆಲದಲ್ಲಿ ನಮ್ಮದೇ ಆಹಾರ ಬೆಳೆಗಳ ಮೇಲೆ, ಔಷಧಿ ಗಿಡಗಳ ಮೇಲೆ ಹಕ್ಕುಗಳನ್ನು ಕಳೆದುಕೊಳ್ಳತೊಡಗಿದ್ದೇವೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ಮತ್ತು ದೇಶ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಬಹುಷಃ ಇದು, 2001ರ ಸಸಿ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ಭಾರತೀಯ ನ್ಯಾಯಾಲಯವೊಂದು ಇತ್ಯರ್ಥಪಡಿಸಿದ ಮೊದಲ ಪಿವಿಪಿ ಪ್ರಮಾಣಪತ್ರ ರದ್ದತಿ ಸಂಬಂಧಿ ಪ್ರಕರಣವಾಗಿದೆ. ಡಬ್ಲುಟಿಒ ಟ್ರಿಪ್ಸ್ ಒಪ್ಪಂದಕ್ಕೆ ಅನುಸಾರವಾಗಿ ಭಾರತೀಯ ಕಾನೂನು ನಿರ್ಮಾಪಕರು ರೂಪಿಸಿರುವ ರೈತರ ಹಕ್ಕುಗಳ ರಕ್ಷಣಾ ಕಾಯ್ದೆ ಇಂದು ರೈತರ ಪಾಲಿಗೆ ಅಳಿದುಳಿದಿರುವ ಆಶಾಕಿರಣವಾಗಿದೆ. ಈ ಕಾನೂನಿನ 39(1)(ಜಿ) ಪರಿಚ್ಛೇದವು ರೈತರಿಗೆ ಬೀಜದ ಸ್ವಾತಂತ್ರವನ್ನು ನೀಡಿದೆ. ಈ ಪರಿಚ್ಛೇದದಡಿ ರೈತರು ಬೀಜಗಳನ್ನು ಸಂಗ್ರಹಿಸಿಡಬಹುದಾಗಿದೆ, ಬಳಸಬಹುದಾಗಿದೆ, ಬಿತ್ತನೆ ಮಾಡಬಹುದಾಗಿದೆ, ಮರುಬಿತ್ತನೆ ಮಾಡಬಹುದಾಗಿದೆ, ವಿನಿಮಯ ಮಾಡಬಹುದಾಗಿದೆ, ಇತರರಿಗೆ ನೀಡಬಹುದಾಗಿದೆ ಹಾಗೂ ತಳಿಯೊಂದರ ಬೀಜ ಸೇರಿದಂತೆ ತಮ್ಮ ಕೃಷಿ ಉತ್ಪನ್ನಗಳನ್ನು ರೈತರು ಬ್ರಾಂಡ್‌ರಹಿತ ವಿಧಾನದಲ್ಲಿ ಮಾರಾಟ ಮಾಡಬಹುದಾಗಿದೆ.
ಎಫ್‌ಎಲ್-2027 ಎಂಬ ಆಲೂಗಡ್ಡೆ ತಳಿಯ ಮೇಲೆ ಪಿವಿಪಿ ಪ್ರಮಾಣಪತ್ರ ಹೊಂದಿರುವ ಪೆಪ್ಸಿ, 2018 ಮತ್ತು 2019ರಲ್ಲಿ ಗುಜರಾತ್‌ನ ಹಲವು ಆಲೂಗಡ್ಡೆ ರೈತರ ವಿರುದ್ಧ ಕಾನೂನುಬಾಹಿರವಾಗಿ ಮೊಕದ್ದಮೆ ಹೂಡಿತ್ತು. ರೈತರ ಬೀಜದ ಹಕ್ಕುಗಳ ಕುರಿತ ಭಾರತೀಯ ಕಾನೂನು, ಸಂರಕ್ಷಿತ ತಳಿಗಳು ಸೇರಿದಂತೆ ತಮಗೆ ಬೇಕಾದ ಯಾವುದೇ ಬೀಜವನ್ನು ಪಡೆಯುವ ಹಕ್ಕನ್ನು ರೈತರಿಗೆ ನೀಡುತ್ತದೆ ಎಂದು ಗೊತ್ತಿದ್ದರೂ ಕಂಪೆನಿ ಈ ಕ್ರಮ ತೆಗೆದುಕೊಂಡಿತ್ತು. ಆದರೆ ಇದರ ವಿರುದ್ಧದ ಈ ಗೆಲುವನ್ನು ಶಾಶ್ವತ ಎನ್ನುವಂತಿಲ್ಲ. ಭಾರತದ ಆಹಾರ ಬೆಳೆಗಳ ಮೇಲೆ ಹಕ್ಕು ಸಾಧಿಸಲು ಕಾರ್ಪೊರೇಟ್ ಕಂಪೆನಿಗಳು ಈಗಾಗಲೇ ಬೇರೆ ರೀತಿಯ ತಂತ್ರಗಳನ್ನು ಅನುಸರಿಸುತ್ತಿದೆ. ಒತ್ತಡಗಳನ್ನು ಹಾಕುತ್ತಿದೆ. ಅದಕ್ಕೆ ಪೂರಕವಾಗಿ ಸರಕಾರದ ಆರ್ಥಿಕ ನೀತಿಯೂ ಕೆಲಸ ಮಾಡುತ್ತಿದೆ. ಬಿಟಿ ಹತ್ತಿ, ಬಿಟಿ ಬದನೆ ಇವೆಲ್ಲವೂ ಇವುಗಳ ಬೇರೆ ಬೇರೆ ರೂಪಗಳು. ಇವೆಲ್ಲವನ್ನು ಸಮರ್ಥವಾಗಿ ನ್ಯಾಯಾಲಯದಲ್ಲಿ ಎದುರಿಸುವ ಶಕ್ತಿ ಭಾರತೀಯ ರೈತರಿಗಿದೆಯೇ ಎನ್ನುವ ಅನುಮಾನವಂತೂ ಇದ್ದೇ ಇದೆ. ಒಂದೆಡೆ ಅನಾವೃಷ್ಟಿಯ ಜೊತೆಗೆ ಹೋರಾಟ. ಇನ್ನೊಂದೆಡೆ ಕಾರ್ಪೊರೇಟ್ ಧನಿಗಳಿಗೆ ಪೂರಕವಾಗಿರುವ, ರೈತ ವಿರೋಧಿಯಾಗಿರುವ ಸರಕಾರದ ನೀತಿಗಳ ವಿರುದ್ಧ ಹೋರಾಟ, ಇವುಗಳ ಜೊತೆಗೆ ತಾವು ತಲೆ ತಲಾಂತರಗಳಿಂದ ಬೆಳೆಯುತ್ತಾ ಬಂದಿರುವ ಕೃಷಿ ಬೀಜಗಳ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆಲ್ಲಬೇಕಾಗಿದೆ. ದೇಶದಲ್ಲಿ ಕೃಷಿಯೆನ್ನುವುದು ಹೇಗೆ ರೈತರ ಪಾಲಿಗೆ ಒಂದು ಯುದ್ಧವಾಗಿ ಪರಿವರ್ತನೆಗೊಂಡಿದೆ ಎನ್ನುವುದನ್ನು ಇದರಿಂದ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಬೃಹತ್ ಕಂಪೆನಿಗಳು ಭಾರತದಲ್ಲಿನ ಉತ್ಪನ್ನಗಳ ಒಂದೊಂದೇ ಪೇಟೆಂಟ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಇದರ ವಿರುದ್ಧ ಸರಕಾರದ ನೇತೃತ್ವದಲ್ಲೇ ವ್ಯವಸ್ಥಿತ ಹೋರಾಟ ನಡೆಯಬೇಕಾಗಿದೆ. ಆಹಾರೋತ್ಪನ್ನಗಳ ಪೇಟೆಂಟ್‌ಗಳು ಭಾರತದ ಕೈಯಲ್ಲೇ ಉಳಿಯುವಂತೆ ನೋಡಿಕೊಳ್ಳುವುದು ಆಹಾರ ಭದ್ರತೆಯ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಇಲ್ಲವಾದರೆ ಹೆಸರಿಗಷ್ಟೇ ಸರಕಾರವಿದ್ದು ಈ ದೇಶದ ನೆಲ, ಜಲಗಳ ಮೇಲಿನ ಎಲ್ಲ ಹಕ್ಕುಗಳನ್ನು 'ಪೇಟೆಂಟ್' ಹೆಸರಿನಲ್ಲಿ ವಿದೇಶಿ ಕಂಪೆನಿಗಳು ತಮ್ಮದಾಗಿಸಿಕೊಳ್ಳುವ ದಿನಗಳು ಬರಲಿವೆ. ನಾವು ತಿನ್ನುವ ಆಹಾರದ ಬೀಜದ ಹಕ್ಕು ನಮ್ಮದಲ್ಲ ಎಂದಾದರೆ, ರೈತರ ಪಾಲಿನ ಭೂಮಿ ಫಲವತ್ತಾಗಿದ್ದೂ 'ಬಂಜೆ'ಯಾಗಬೇಕಾಗುತ್ತದೆ. ಆಹಾರ ಬೆಳೆಗಳ ಜೊತೆ ಜೊತೆಗೇ ಈ ಭೂಮಿಯ ಮೇಲಿನ ಹಕ್ಕನ್ನೂ ರೈತರು ಕಳೆದುಕೊಳ್ಳ ಬೇಕಾಗುತ್ತದೆ. ಆದುದರಿಂದ ಆಲೂಗಡ್ಡೆಯ ಮೇಲೆ ಹಕ್ಕು ಸಾಧಿಸುವ ಪೆಪ್ಸಿಕೋ ಪ್ರಯತ್ನ ನಮಗೊಂದು ಪಾಠವಾಗಬೇಕಾಗಿದೆ. ಈ ಪಾಠದ ಬೆಳಕಿನಲ್ಲಿ ನಮ್ಮ ಹೋರಾಟ ಮುಂದುವರಿಯಬೇಕಾಗಿದೆ.