ಕುಂಭಮೇಳ ಯಾತ್ರಿಕರ ನಂಬಿಕೆಗೆ ದ್ರೋಹ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂರು ಬಾರಿ ಗಂಗೆಯಲ್ಲಿ ಮುಳುಗಿದರೂ ಶುದ್ಧಿಯಾಗದ ಪಾಪ ಮತ್ತು ಅಕ್ರಮಗಳಿಗಾಗಿ ಉತ್ತರ ಪ್ರದೇಶ ಸರಕಾರ ಗುರುತಿಸಿಕೊಂಡಿದೆೆ. ವಿಶ್ವದ ಗಮನವನ್ನು ಸೆಳೆದಿರುವ ಬೃಹತ್ ಕುಂಭಮೇಳಕ್ಕೆ ಬಂದು ಸೇರಿರುವ ಕೋಟ್ಯಂತರ ಭಕ್ತರು ಉತ್ತರ ಪ್ರದೇಶ ಸರಕಾರ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಬೇಜವಾಬ್ದಾರಿಗೆ ಭಾರೀ ಬೆಲೆ ತೆರುತ್ತಿದ್ಧಾರೆೆ. ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ ರಾಜ್‌ನ ನದಿಯ ನೀರಿನಲ್ಲಿ ಮಾನವ ಮತ್ತು ಪ್ರಾಣಿಗಳ ಮಲದಲ್ಲಿ ಕಂಡು ಬರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಮಟ್ಟ ಅತ್ಯಧಿಕವಾಗಿದ್ದು ಇದು ಕುಡಿಯುವುದಕ್ಕಾಗಲಿ, ಸ್ನಾನ ಮಾಡುವುದಕ್ಕಾಗಲಿ ಯೋಗ್ಯವಾದ ನೀರು ಅಲ್ಲ ಎನ್ನುವುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದೆ. ಇದು ಯಾವುದೋ ರಾಜಕಾರಣಿ ಬಾಯಿ ಮಾತಿನಲ್ಲಿ ಮಾಡಿದ ಆರೋಪವಲ್ಲ. ಕುಂಭಮೇಳ ಆರಂಭವಾಗುತ್ತಿರುವ ಸಂದರ್ಭದಲ್ಲೇ ಅಂದರೆ ಜನವರಿ ಮೊದಲವಾರದಲ್ಲಿ ಗಂಗಾನದಿಯ ನೀರಿನ ಸ್ಯಾಂಪಲನ್ನು ಪಡೆದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆ ನಡೆಸಿ ನೀಡಿದ ವರದಿಯಾಗಿದೆ. ಈ ಮಂಡಳಿ ಕೇಂದ್ರ ಸರಕಾರದ ವ್ಯಾಪ್ತಿಯಲ್ಲೇ ಬರುವುದರಿಂದ, ಉತ್ತರ ಪ್ರದೇಶ ಸರಕಾರ ಇದನ್ನು ವಿರೋಧ ಪಕ್ಷದ ಸಂಚು ಎಂದು ಆರೋಪಿಸಿ ತಳ್ಳಿ ಹಾಕುವಂತೆಯೂ ಇಲ್ಲ. ಕೇಂದ್ರ ಸರಕಾರವನ್ನು ಟೀಕಿಸಿ ತನ್ನ ಮಾನವನ್ನು ಉಳಿಸಿಕೊಳ್ಳುವಂತೆಯೂ ಇಲ್ಲ.
ಇಲ್ಲಿ ಸರಕಾರ ಎರಡು ಗಂಭೀರ ಆರೋಪವನ್ನು ಎದುರಿಸುತ್ತಿದೆ. ಒಂದು, ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಗಂಗೆಯನ್ನು ಶುದ್ಧಿ ಮಾಡಿದ ಬಳಿಕವೂ ಗಂಗೆಗೆ ಈ ಸ್ಥಿತಿಯನ್ನು ಆದಿತ್ಯನಾಥ್ ಸರಕಾರ ಯಾಕೆ ತಂದಿಟ್ಟಿತು ಎನ್ನುವ ಪ್ರಶ್ನೆಗೆ ಅಲ್ಲಿನ ಸರಕಾರ ಉತ್ತರಿಸಬೇಕಾಗಿದೆ. ಹಾಗೆಯೇ, ಗಂಗಾನದಿಯ ನೀರು ಇಷ್ಟರಮಟ್ಟಿಗೆ ಕೆಟ್ಟು ಹೋಗಿದ್ದರೂ ಅದು ಉತ್ತರ ಪ್ರದೇಶ ಸರಕಾರದ ಗಮನಕ್ಕೆ ಯಾಕೆ ಬರಲಿಲ್ಲ? ಅಥವಾ ಗಮನಕ್ಕೆ ಬಂದಿದ್ದರೂ, ವಾಸ್ತವವನ್ನು ಅದು ಮುಚ್ಚಿಟ್ಟಿತೆ? ಕುಂಭಮೇಳದಲ್ಲಿ ಕೋಟ್ಯಂತರ ಜನರು ಬಂದು ಸ್ನಾನ ಮಾಡುತ್ತಾರೆ ಮತ್ತು ನೀರನ್ನು ಸೇವಿಸುತ್ತಾರೆ ಎನ್ನುವುದು ಗೊತ್ತಿರುವಾಗ, ಜನರಿಗೆ ಮುನ್ನೆಚ್ಚರಿಕೆಯನ್ನು ಸರಕಾರ ಯಾಕೆ ನೀಡಲಿಲ್ಲ? ಕನಿಷ್ಟ್ಟ ಈ ಬಗ್ಗೆ ಎಚ್ಚರಿಕೆಯನ್ನು ನೀಡಿ, ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ ಎಂಬ ಪ್ರಕಟಣೆಯನ್ನು ಸರಕಾರ ಅಧಿಕೃತವಾಗಿ ನೀಡಬಹುದಿತ್ತಲ್ಲ? ಎನ್ನುವ ಪ್ರಶ್ನೆಯನ್ನು ಪರಿಸರ ತಜ್ಞರು ಮತ್ತು ಮೇಳದಲ್ಲಿ ಭಾಗವಹಿಸಿದ ಯಾತ್ರಾರ್ಥಿಗಳು ಕೇಳುತ್ತಿದ್ದಾರೆ. ಕನಿಷ್ಠ ಯಾತ್ರಾರ್ಥಿಗಳಿಗೆ ಸ್ನಾನ ಮಾಡುವುದಕ್ಕೆ ಮತ್ತು ಕುಡಿಯುವುದಕ್ಕಾಗಿ ಪ್ರತ್ಯೇಕವಾಗಿ ನೀರನ್ನು ಪೈಪ್‌ನಲ್ಲಿ ಹರಿಸುವ ವ್ಯವಸ್ಥೆಯನ್ನು ಮಾಡಬಹುದಿತ್ತು ಎಂದೂ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಸ್ವಾಮೀಜಿಗಳು, ಸಂತರು ಕೂಡ ಸರಕಾರದ ಬೇಜವ್ದಾರಿಗಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾತನಾಡಿ, ‘‘ಕುಂಭಮೇಳ ಆರಂಭವಾಗುವುದಕ್ಕಿಂತ ಮುನ್ನವೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗಂಗಾ ಹಾಗೂ ಯಮುನಾ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿತ್ತು. ಅದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು. ಮುಖ್ಯವಾಗಿ ಚರಂಡಿ ನೀರು ನದಿಗೆ ಹರಿಯುವುದನ್ನು ತಡೆಗಟ್ಟುವಂತೆ ಸೂಚಿಸಿತ್ತು. ಆದರೆ ಉತ್ತರ ಪ್ರದೇಶ ಸರಕಾರ ಇವೆಲ್ಲವನ್ನೂ ನಿರ್ಲಕ್ಷಿಸಿದೆ’’ ಎಂದು ಆರೋಪಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯು ಬಹಿರಂಗವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಆದಿತ್ಯನಾಥ್ ‘‘ಈ ವರದಿಯು ಕೋಟ್ಯಂತರ ಜನರ ನಂಬಿಕೆಯೊಂದಿಗೆ ಆಟವಾಡಿದಂತೆ. ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ, ಕುಡಿಯಲೂ ಯೋಗ್ಯವಾಗಿದೆ. ಮಹಾಕುಂಭದ ಹೆಸರು ಕೆಡಿಸಲು ಅಪಪ್ರಚಾರ ಅಭಿಯಾನವೊಂದು ನಡೆಯುತ್ತಿದೆ’’ ಎಂದು ಹೇಳಿಕೆ ನೀಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಿಜಕ್ಕೂ ಭಕ್ತರ ಭಾವನೆಗಳೊಂದಿಗೆ ಆಟವಾಡುತ್ತಿರುವವರು ಯಾರು? ವರದಿ ಕೊಟ್ಟಿರುವುದು ಮಾಲಿನ್ಯ ನಿಯಂತ್ರಣ ಮಂಡಳಿಯಾಗಿರುವುದರಿಂದ, ಕೇಂದ್ರ ಸರಕಾರ ಗಂಗಾನದಿಯ ನೀರಿನ ಬಗ್ಗೆ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆಯೆ? ತನ್ನದೇ ಸರಕಾರದ ವ್ಯಾಪ್ತಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶ್ವಾಸಾರ್ಹತೆಯನ್ನು ಅವರು ಅನುಮಾನಿಸುತ್ತಿದ್ದಾರೆಯೆ? ಸರಕಾರದ ಮಾನ ಉಳಿಸಿಕೊಳ್ಳಬೇಕು ಎನ್ನುವ ಏಕೈಕ ಉದ್ದೇಶದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದ ಬಳಿಕವೂ ‘‘ನೀರಿನ ಗುಣಮಟ್ಟ ಚೆನ್ನಾಗಿದೆ. ಸ್ನಾನವೂ ಮಾಡಬಹುದು, ಕುಡಿಯುವುದಕ್ಕೂ ಅಡ್ಡಿಯಿಲ್ಲ’’ ಎಂಬ ಹೇಳಿಕೆಯನ್ನು ಆದಿತ್ಯನಾಥ್ ಯಾವ ಆಧಾರದಲ್ಲಿ ನೀಡಿದರು? ಮಾಲಿನ್ಯ ನಿಯಂತ್ರಣ ಮಂಡಳಿಯ ಬದಲಿಗೆ ಇನ್ನಾವುದಾದರೂ ತಜ್ಞರಿಂದ ಅವರು ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದರೆ? ಅರ್ಹ ತಜ್ಞರಿಂದ ಪರೀಕ್ಷೆಗೊಳಪಟ್ಟು ವರದಿ ಬಂದ ಬಳಿಕವೂ ‘‘ವರದಿಯನ್ನು ನಂಬಬೇಡಿ. ನೀರಿನ ಗುಣಮಟ್ಟ ಚೆನ್ನಾಗಿಯೇ ಇದೆ’’ ಎಂದು ಮುಖ್ಯಮಂತ್ರಿ ಕರೆ ನೀಡಿ, ಕುಂಭಮೇಳಕ್ಕೆ ಸೇರಿದ ಕೋಟ್ಯಂತರ ಹಿಂದೂಗಳ ದಾರಿ ತಪ್ಪಿಸುತ್ತಾರೆ ಎನ್ನುವುದು ಜನದ್ರೋಹದ ಕೃತ್ಯವಲ್ಲವೆ? ಇವರ ವಿರುದ್ಧ ನ್ಯಾಯಾಲಯ ಸ್ವಯಂ ಪ್ರಕರಣ ದಾಖಲಿಸುವುದು ಅತ್ಯಗತ್ಯವಾಗಿದೆ.
ಗಂಗಾನದಿಯ ನೀರು ಅಶುದ್ಧಗೊಂಡಿರುವುದು ಹೊಸ ವಿಷಯವೇನೂ ಅಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಆರಂಭದಲ್ಲಿ ಮೊದಲು ಚಾಲನೆ ನೀಡಿದ್ದೇ ‘ನಮಾಮಿ ಗಂಗೆ’ ಯೋಜನೆಗೆ. ಈ ಮೂಲಕ ಗಂಗಾನದಿಯ ಶುದ್ಧೀಕರಣಕ್ಕೆ. 2015ರಿಂದ 2021ರವರೆಗೆ ಆರಂಭದಲ್ಲಿ ಈ ಯೋಜನೆಗೆ 20,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಆದರೆ ಶುದ್ಧಗೊಳಿಸುವ ಗುರಿ ಮುಟ್ಟದೇ ಇದ್ದಾಗ 22,500 ಕೋಟಿ ರೂಪಾಯಿ ಅನುದಾನವನ್ನು ನೀಡಲಾಯಿತು. ಮಾತ್ರವಲ್ಲ, ಯೋಜನೆಯನ್ನು 2026ರವರೆಗೆ ವಿಸ್ತರಿಸಲಾಯಿತು. ಗಂಗಾನದಿ ಶುದ್ಧೀಕರಣಕ್ಕಾಗಿ 484 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 302 ಕಾಮಗಾರಿಗಳು ಪೂರ್ತಿಯಾಗಿವೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ. ಇದೇ ಸಂದರ್ಭದಲ್ಲಿ ಗಂಗಾನದಿ ಹರಿಯುತ್ತಿರುವ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಕೊಳಚೆ ನೀರು ಶುದ್ಧೀಕರಣಘಟಕಗಳಲ್ಲಿ 125 ಘಟಕಗಳು ಪೂರ್ತಿಯಾಗಿವೆ. ಇಷ್ಟೆಲ್ಲ ಕಾಮಗಾರಿಗಳ ಬಳಿಕವೂ ಗಂಗಾನದಿ ಪೂರ್ಣಪ್ರಮಾಣದಲ್ಲಿ ಶುದ್ಧಿಯಾಗಿಲ್ಲ. ಯಾಕೆಂದರೆ ಎಷ್ಟೇ ಕ್ರಮ ತೆಗೆದುಕೊಂಡರೂ, ಗಂಗಾನದಿ ದಂಡೆಯಲ್ಲಿರುವ ನಗರಗಳು, ಪಟ್ಟಣಗಳು ಈಗಲೂ ಪ್ರತೀ ದಿನ 300 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರನ್ನು ನೇರವಾಗಿ ಗಂಗೆಗೆ ಹರಿಸುತ್ತಿವೆ. ಇಲ್ಲಿರುವ ಕೈಗಾರಿಕೆಗಳ ಮುಖ್ಯವಾಗಿ ಚರ್ಮದ ಕಾರ್ಖಾನೆಯ ಕೋಟಿಗಟ್ಟಳೆ ಲೀಟರ್ ಕೊಳಚೆ ನೀರು ಗಂಗೆಗೆ ಹರಿಯುತ್ತಿದೆ. ಪ್ರಯಾಗರಾಜ್‌ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುವಂತಿಲ್ಲ ಮತ್ತು ಅದನ್ನು ಕುಡಿಯುವಂತಿಲ್ಲ ಎನ್ನುವುದು ಸ್ಥಳೀಯರಿಗೆ ಗೊತ್ತಿರುವ ವಿಷಯವೇ ಆಗಿದೆ. ಆದರೆ ಸರಕಾರದ ತಪ್ಪು ಮಾಹಿತಿಯಿಂದಾಗಿ ಕೋಟ್ಯಂತರ ಜನರು ಪ್ರಯಾಗ ರಾಜ್‌ನಲ್ಲಿ ಸ್ನಾನಮಾಡುವಂತಾಗಿದೆ, ನೀರು ಕುಡಿಯುವಂತಾಗಿದೆ. ಸಂಗಮದ ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಭಕ್ತರು ಸ್ನಾನ ಮಾಡುತ್ತಿರುವುದರಿಂದ ದುಪ್ಪಟ್ಟಾಗಿದೆ. ಒಟ್ಟಿನಲ್ಲಿ, ಉತ್ತರ ಪ್ರದೇಶ ಸರಕಾರ ಕುಂಭಮೇಳದಲ್ಲಿ ಕೋಟ್ಯಂತರ ಮಂದಿ ಯಾತ್ರಿಕರು ಮಲದ ಅಂಶವಿರುವ ಗಂಗಾನದಿ ನೀರಿನಲ್ಲಿ ಸ್ನಾನಮಾಡುವುದಕ್ಕೆ ಮತ್ತು ಅದನ್ನು ಸೇವಿಸುವುದಕ್ಕೆ ನೇರ ಕಾರಣವಾಗಿದೆ. ಭಕ್ತರ ನಂಬಿಕೆಗೆ ದ್ರೋಹವೆಸಗಿದ ಈ ಮಹಾಪಾಪವನ್ನು ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಯಾವ ನದಿಯಲ್ಲಿ ಮುಳುಗಿ ತೊಳೆದುಕೊಳ್ಳುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು.