ದೆವ್ವದ ಬಾಯಲ್ಲಿ ಭಗವದ್ಗೀತೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನಿಂದ ಎರಡೆರಡು ಬಾರಿ ಛೀಮಾರಿಗೊಳಗಾಗಿದ್ದ ಸ್ವಯಂಘೋಷಿತ ಯೋಗಗುರು ಬಾಬಾ ರಾಮ್‌ದೇವ್ ಆಧುನಿಕ ಔಷಧಿಗಳ ಬಗ್ಗೆ ಮತ್ತೆ ಟೀಕೆಗಳನ್ನು ಮಾಡಿದ್ದಾರೆ. ಪತಂಜಲಿ ಯೋಗ ಪೀಠದಲ್ಲಿ ಕಳೆದ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ‘‘ವಿಷಕಾರಿ ಅಲೋಪತಿ ಔಷಧಿಗಳು ಲಕ್ಷಾಂತರ ಭಾರತೀಯರನ್ನು ಕೊಂದು ಹಾಕಿದೆ’’ ಎಂಬ ಹೇಳಿಕೆ ನೀಡಿದ್ದಾರೆ. ‘‘ಅಲೋಪತಿ ಔಷಧಿಗಳಿಂದ ಲಕ್ಷಾಂತರ ಮಂದಿ ನರಳುತ್ತಿದ್ದು ಮತ್ತು ಜೀವ ಕಳೆದುಕೊಳ್ಳುತ್ತಿದ್ದು ವೈದ್ಯಕೀಯ ಸ್ವಾತಂತ್ರ್ಯದ ಕನಸು ಇನ್ನೂ ನನಸಾಗಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಮತ್ತು ವಿಶ್ವಾದ್ಯಂತ ಸಂಘರ್ಷಗಳಲ್ಲಿ ಲಕ್ಷಾಂತರ ಮಂದಿ ಮೃತಪಟ್ಟಂತೆ, ಇದೀಗ ಕೃತಕ ಔಷಧಿಗಳಿಂದ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಪತಂಜಲಿ ವೆಲ್‌ನೆಸ್ ಬ್ಯಾನರ್‌ನಡಿಯಲ್ಲಿ ಸ್ವದೇಶಿ ಚಳವಳಿಯ ವೇಗ ವರ್ಧನೆಗೆ ಮುಂದಾಗಿದೆ. ಈ ಮೂಲಕ ದೇಶೀಯ ಹಾಗೂ ಪ್ರಾಕೃತಿಕ ಆರೋಗ್ಯ ಕ್ರಮಗಳಿಗೆಜನ ದೊಡ್ಡ ಸಂಖ್ಯೆಯಲ್ಲಿ ಬದಲಾಗುವಂತೆ ಪ್ರಯತ್ನ ನಡೆಸಲಿದೆ’’ ಎಂದೂ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಮತ್ತು ಬಾಬಾ ರಾಮ್‌ದೇವ್ ನಡುವೆ ವರ್ಷಗಳಿಂದ ನಡೆಯುತ್ತಿರುವ ಸಂಘರ್ಷಗಳ ಮುಂದುವರಿದ ಭಾಗ ಇದಾಗಿದೆ. ಸಂಘ ನೀಡಿದ ದೂರಿನ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಇವರು ಸುಪ್ರೀಂಕೋರ್ಟ್‌ನ ಮುಂದೆ ಹಾಜರಾಗುವ ಸನ್ನಿವೇಶ ನಿರ್ಮಾಣವಾಯಿತು. ಆಯುರ್ವೇದದ ಹೆಸರಿನಲ್ಲಿ ರಾಮ್‌ದೇವ್ ನಡೆಸುತ್ತಿರುವ ದಂಧೆಯ ವಿರುದ್ಧ ವೈದ್ಯಕೀಯ ಸಂಘ ಈ ಹಿಂದೆ ಹಲವು ಬಾರಿ ದೂರುಗಳನ್ನು ನೀಡಿದೆ. ಈ ಕಾರಣದಿಂದಲೇ, ಪತಂಜಲಿಯ ಸ್ವದೇಶಿ ಉತ್ಪನ್ನಗಳ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸ್ವದೇಶಿ ಉತ್ಪನ್ನ, ಸ್ವದೇಶಿ ಔಷಧಿಗಳ ಹೆಸರಿನಲ್ಲಿ ಈಗಾಗಲೇ ಅಪಾರ ಸರಕಾರಿ ಸವಲತ್ತುಗಳನ್ನು ತನ್ನದಾಗಿಸಿಕೊಂಡಿರುವ ರಾಮ್‌ದೇವ್ ಎನ್ನುವ ನಕಲಿ ಉದ್ಯಮಿಯ ದಾರಿಗೆ ಭಾರತೀಯ ವೈದ್ಯಕೀಯ ಸಂಘ ಒಂದು ದೊಡ್ಡ ತಡೆಯಾಗಿದೆ. ಈ ಕಾರಣದಿಂದಲೇ, ಮತ್ತೆ ಅಲೋಪತಿ ಔಷಧಿಗಳ ವಿರುದ್ಧ ಟೀಕೆಗಳನ್ನು ಮಾಡುತ್ತಾ, ತನ್ನ ಔಷಧಿಗಳ ಮಾರುಕಟ್ಟೆಗೆ ಪ್ರಯತ್ನ ನಡೆಸಿದ್ದಾರೆ.
ಇಂದಿನ ದಿನಗಳಲ್ಲಿ ಆಯುರ್ವೇದ ಮತ್ತು ಇನ್ನಿತರ ವೈದ್ಯಕೀಯ ಪ್ರಕಾರಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದೇ ಅಲೋಪತಿ ಅಥವಾ ಆಧುನಿಕ ಔಷಧಿಗಳ ದುಷ್ಪರಿಣಾಮಗಳ ಕಡೆಗೆ ಬೆಟ್ಟು ಮಾಡುವ ಮೂಲಕ. ಅಲೋಪತಿ ಔಷಧಿಗಳ ಮೇಲಿರುವ ಟೀಕೆಗಳು ಸುಳ್ಳು ಎಂದು ಇದರ ಅರ್ಥವಲ್ಲ. ಅನೇಕ ಸಂದರ್ಭದಲ್ಲಿ ಔಷಧಿಯೇ ರೋಗಿಯ ಸಾವಿಗೆ ಕಾರಣವಾಗುವುದಿದೆ. ಆಧುನಿಕ ಔಷಧಿಗಳನ್ನು ಸುತ್ತುವರಿದಿರುವ ಕಾರ್ಪೊರೇಟ್ ಶಕ್ತಿಗಳು ಅದನ್ನು ರೋಗಿಗಳ ಪಾಲಿಗೆ ವಿಷಕಾರಿಯಾಗಿಸಿದೆ ಎನ್ನುವ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ಆದರೆ ಇದೇ ಸಂದರ್ಭದಲ್ಲಿ ಇಂದು ಆಧುನಿಕ ಜಗತ್ತನ್ನು ಕಾಪಾಡುತ್ತಿರುವುದು ಕೂಡ ಅಲೋಪತಿ ಔಷಧಿಗಳು ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ಜಗತ್ತು ಪ್ಲೇಗ್, ಕಾಲರಾ, ಸಿಡುಬು ಸೇರಿದಂತೆ ನೂರಾರು ಮಾರಕ ಕಾಯಿಲೆಗಳ ವಿರುದ್ಧ ಹೋರಾಡುತ್ತಾ ಇಲ್ಲಿಯವರೆಗೆ ಬಂದಿದೆ. ಬರೇ ಏಳೆಂಟು ದಶಕಗಳ ಹಿಂದೆ, ಸಾಂಕ್ರಾಮಿಕ ಕಾಯಿಲೆಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದವು. ಪೋಲಿಯೊಗಳಿಂದಾಗಿ ದೊಡ್ಡ ಸಂಖ್ಯೆಯ ಅಂಗವಿಕಲ ಮಕ್ಕಳು ಹುಟ್ಟುವಂತಾಗಿತ್ತು. ಸಾವಿನ ಪ್ರಮಾಣಗಳು ಹೆಚ್ಚಿತ್ತು. ಆದರೆ ಇಂದು ಅಂತಹ ಮಾರಕ ಸಾಂಕ್ರಾಮಿಕ ರೋಗಗಳು ನಮ್ಮ ನಡುವಿನಿಂದ ಅಳಿದು ಹೋಗಿವೆ. ಸಾಂಕ್ರಾಮಿಕ ರೋಗಗಳಿಂದ ಸಾಯುವವರ ಪ್ರಮಾಣ ಭಾರೀ ಇಳಿಕೆ ಕಂಡಿದೆ. ಹಿಂದೆ ಕ್ಷಯ ರೋಗ ಬಂದರೆ ಮರಣ ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಿತಿಯಿತ್ತು. ಇಂದು ಕ್ಷಯದಂತಹ ಮಾರಕ ಕಾಯಿಲೆಗಳು ಇಳಿಕೆಯಾಗಿವೆ. ಇಂತಹ ಸಾಂಕ್ರಾಮಿಕ ರೋಗಗಳಿಂದ ಜಗತ್ತನ್ನು ರಕ್ಷಿಸಿದ್ದು ಅಲೋಪತಿ ಅಥವಾ ಆಧುನಿಕ ಔಷಧಿಗಳು ಎನ್ನುವುದನ್ನು ನಾವು ಮರೆಯುವಂತಿಲ್ಲ. ಇಂದಿನ ಆಹಾರ ಪದ್ಧತಿ, ಜೀವನ ಶೈಲಿಯ ಪರಿಣಾಮವಾಗಿ ಹೊಸ ಹೊಸ ರೋಗಗಳು ಹುಟ್ಟುತ್ತಿವೆ. ಎಚ್‌ಐವಿ, ಕ್ಯಾನ್ಸರ್ ಮೊದಲಾದ ರೋಗಗಳಿಗಂತೂ ನಾವು ಅಲೋಪತಿಯನ್ನು ನೆಚ್ಚದೇ ಉಪಾಯವೇ ಇಲ್ಲ. ಇಂದಿಗೂ ಹಲವು ಮಾರಕ ಕಾಯಿಲೆಗಳಿಗೆ, ರೋಗಗಳಿಗೆ ಆಯುರ್ವೇದಗಳ ಬಳಿ ಔಷಧಿಗಳೇ ಇಲ್ಲ.
ಅಲೋಪತಿ ಔಷಧ ಸುಲಭದಲ್ಲಿ ಟೀಕೆಗಳಿಗೆ ತುತ್ತಾಗುತ್ತದೆ. ಯಾವುದೇ ಒಂದು ಕಾಯಿಲೆಗೆ ಆಯುರ್ವೇದಿಕ್ ಔಷಧಿ ಐಚ್ಛಿಕ ಆಯ್ಕೆಯಷ್ಟೇ ಆಗಿರುತ್ತದೆ. ರೋಗವನ್ನು ಗುಣಪಡಿಸಲೇ ಬೇಕಾದ ಹೊಣೆಗಾರಿಕೆ ಅದರ ಮುಂದಿರುವುದಿಲ್ಲ. ಆಯುರ್ವೇದದಿಂದ ಒಂದು ಕಾಯಿಲೆ ನಿಧಾನಕ್ಕೆ ವಾಸಿಯಾದರೆ ಅದು ತಕ್ಷಣ ಪ್ರಚಾರ ಪಡೆಯುತ್ತದೆ. ಇದೇ ಸಂದರ್ಭದಲ್ಲಿ ರೋಗವಾಸಿಯಾಗದೇ ಇದ್ದರೆ ಅದನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲಾಗುವುದಿಲ್ಲ. ಆದರೆ ಅಲೋಪತಿ ಔಷಧಿಗಳಿಗೆ ಇಂತಹ ವಿನಾಯಿತಿಗಳಿಲ್ಲ. ಔಷಧಿ ದುಷ್ಪರಿಣಾಮ ಬೀರಿದ್ದೇ ಆದರೆ ಅಥವಾ ಗುಣಪಡಿಸಲು ಅದು ವಿಫಲವಾದರೆ ಅದನ್ನು ತಕ್ಷಣವೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಯಾಕೆಂದರೆ, ಅಲೋಪತಿ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳುತ್ತದೆ. ಅಲೋಪತಿಯನ್ನು ಟೀಕಿಸುತ್ತಲೇ, ಪತಂಜಲಿಯಂತಹ ಆಯುರ್ವೇದಿಕ್ ಸಂಸ್ಥೆಗಳು ‘‘ನಮಗೂ ಅಲೋಪತಿ ಔಷಧಿಯನ್ನು ಬಳಸಲು ಅವಕಾಶಕೊಡಿ’’ ಎಂದು ನ್ಯಾಯಾಲಯದ ಮೆಟ್ಟಿಲೇರುವುದು ಇನ್ನೊಂದು ವಿಪರ್ಯಾಸವಾಗಿದೆ. ಎಷ್ಟ್ಟೋ ಆಯುರ್ವೇದಿಕ್ ಔಷಧಿಗಳಲ್ಲಿ ಅಲೋಪಥಿ ಅಂಶಗಳು ಪತ್ತೆಯಾದ ಉದಾಹರಣೆಗಳಿವೆ. ಪತಂಜಲಿಯೂ ತನ್ನ ಔಷಧಿಗಳಲ್ಲಿ ಅಲೋಪತಿ ಅಂಶಗಳನ್ನು ಬಳಸುತ್ತದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ರಕ್ಷಿಸುವ ಸಂದರ್ಭದಲ್ಲಿ ಅಲೋಪತಿ ಔಷಧಿಗಳು ಹಲವರನ್ನು ಕೊಂದಿರಬಹುದು. ಆದರೆ ಆಧುನಿಕ ಔಷಧಿಗಳು ರಕ್ಷಿಸಿದ ಜನರಿಗೆ ಹೋಲಿಸಿದರೆ ಈ ಸಾವು ನೋವುಗಳು ತೀರಾ ಅಲ್ಪವಾದುದು.
ಆಯುರ್ವೇದ ನಿಧಾನಗತಿಯಲ್ಲಿ ಹಲವು ರೋಗಗಳನ್ನು ಗುಣ ಪಡಿಸುತ್ತದೆ. ಆದರೆ ಅದಕ್ಕೆ ಅದರದೇ ಆದ ಮಿತಿಗಳೂ ಇವೆ. ಇದೇ ಸಂದರ್ಭದಲ್ಲಿ ಆಯುರ್ವೇದ, ಸ್ವದೇಶಿ ಚಿಂತನೆಯ ಹೆಸರಿನಲ್ಲಿ ಪತಂಜಲಿ ಸಂಸ್ಥೆ ಮಾಡಿರುವ ವಿಷಕಾರಿ ಕಲಬೆರಕೆ ಅಲೋಪತಿ ಔಷಧಿಗಳಲ್ಲಿರುವ ವಿಷಕ್ಕಿಂತಲೂ ಭೀಕರವಾದುದು ಎನ್ನುವುದು ಇದೀಗ ದೇಶಕ್ಕೆ ಸ್ಪಷ್ಟವಾಗುತ್ತಿದೆ. ಸ್ವದೇಶಿ ಉತ್ಪನ್ನ ಮತ್ತು ಔಷಧಿಗಳ ಹೆಸರಿನಲ್ಲಿ ರಾಮ್‌ದೇವ್ ಸಂಸ್ಥೆ ಪಡೆದಿರುವ ಸರಕಾರಿ ಸವಲತ್ತು, ರಿಯಲ್ ಎಸ್ಟೇಟ್ ದಂಧೆಗಳ ಕಡೆ ಮಾಧ್ಯಮಗಳು ಆಗಾಗ ಬೆಳಕು ಚೆಲ್ಲುತ್ತಲೇ ಇವೆ. ಸ್ವದೇಶಿ ಹೆಸರಿನಲ್ಲಿ ರಾಮ್‌ದೇವ್ ಸಂಸ್ಥೆ ಮಾರಾಟ ಮಾಡುತ್ತಿರುವ ವಸ್ತುಗಳ ಗುಣಮಟ್ಟವೂ ಹಲವು ಬಾರಿ ಪ್ರಶ್ನೆಗೊಳಗಾಗಿದೆ. ಹಲವು ಬಾರಿ ಈ ಸಂಸ್ಥೆಗೆ ದಂಡವಿಧಿಸಲಾಗಿದೆ. ಕೊರೋನವನ್ನು ತಡೆಯುತ್ತೇನೆ ಎಂದು ನಕಲಿ ಔಷಧಿಯನ್ನು ಮಾರುಕಟ್ಟೆಗೆ ಇಳಿಸುವ ಪ್ರಯತ್ನ ನಡೆಸಿ ವಿಶ್ವದ ಮುಂದೆ ನಗೆಪಾಟಲಿಗೀಡಾದವರು ರಾಮ್‌ದೇವ್. ಎಲ್ಲಕ್ಕಿಂತ ಮುಖ್ಯವಾಗಿ ಯೋಗದ ಹೆಸರಿನಲ್ಲಿ ದಂಧೆ ನಡೆಸುತ್ತಾ, ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿರುವವರು. ಅಲೋಪತಿ ಔಷಧಿಗಳ ಮೇಲಿನ ನಿಯಂತ್ರಣದಿಂದ ಹೇಗೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಜನಸಾಮಾನ್ಯರನ್ನು ದೋಚುತಿವೆಯೋ, ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ರಾಮ್‌ದೇವ್ ಕೂಡ ಅದನ್ನೇ ಮಾಡುತ್ತಾ ಬರುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಸ್ವದೇಶಿ ಚಿಂತನೆಯ ಹೆಸರಿನಲ್ಲಿ ಇವರು ಯುವಜನರಲ್ಲಿ ಬಿತ್ತುತ್ತಿರುವ ವಿಷಕಾರಿ ಚಿಂತನೆಗಳು ಎಲ್ಲಕ್ಕಿಂತ ಅಪಾಯಕಾರಿ. ಸ್ವದೇಶಿ ಮಂತ್ರದ ಹೆಸರಿನಲ್ಲಿ ಸ್ವದೇಶವನ್ನೇ ಲೂಟಿ ಮಾಡುತ್ತಿರುವ ಪತಂಜಲಿಯ ಮುಂದೆ, ಅಲೋಪತಿ ಔಷಧಿಗಳ ಅನಾಹುತ ಏನೇನೂ ಅಲ್ಲ. ಅಲೋಪತಿಯ ಕುರಿತಂತೆ ರಾಮ್‌ದೇವ್ ಆರೋಪಗಳನ್ನು, ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಎಂದು ನಿರ್ಲಕ್ಷಿಸುವುದು ದೇಶದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.