ಬಿಹಾರ: ಮತ್ತೆ ಹಾವಿನತ್ತ ಜಿಗಿದ ಕಪ್ಪೆ
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಾಸಭಾ ಚುನಾವಣೆಯಲ್ಲಿ ಟಿಎಂಸಿ, ಆಪ್ ಏಕಾಂಗಿ ಸ್ಪರ್ಧೆಯನ್ನು ಘೋಷಿಸಿದ ಬೆನ್ನಿಗೇ ನಿತೀಶ್ ನೇತೃತ್ವದ ಜೆಡಿಯು ಕೂಡ ‘ಇಂಡಿಯಾ’ದಿಂದ ಕಳಚಿಕೊಳ್ಳುವ ನಿರ್ಧಾರಕ್ಕೆ ಬಂದಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅಂತರವನ್ನು ಕಾಪಾಡಿಕೊಂಡಿದ್ದರು. ಇಂಡಿಯಾದಿಂದ ಕಳಚಿಕೊಳ್ಳುವುದು ಮಾತ್ರವಲ್ಲ, ಎನ್ಡಿಎ ಜೊತೆಗೆ ಅವರು ಮರಳಿ ಮೈತ್ರಿಯನ್ನು ಮಾಡಿಕೊಳ್ಳಲಿದ್ದಾರೆ ಎನ್ನುವ ವದಂತಿಯೂ ಹರಡಿದೆ. ಇದೇ ಸಂದರ್ಭದಲ್ಲಿ ಇದನ್ನು ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶವಾಹ ತಳ್ಳಿ ಹಾಕಿದ್ದಾರೆ. ‘‘ಈಗ ಹರಡಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಇತರ ಅಂಗಪಕ್ಷಗಳ ಕುರಿತು ತಾಳಿರುವ ನಿಲುವು ಹಾಗೂ ಸೀಟು ಹಂಚಿಕೆಯ ವಿಷಯಗಳಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯನ್ನು ಸಾಧ್ಯವಾದಷ್ಟು ಬೇಗನೇ ಅಂತಿಮಗೊಳಿಸಬೇಕು’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘‘ಒಂದು ವೇಳೆ ಸೀಟು ಹಂಚಿಕೆಯಲ್ಲಿ ಏರುಪೇರಾದರೆ ನಾವು ಇಂಡಿಯಾದಿಂದ ಹೊರಗೆ ಬರಲಿದ್ದೇವೆ ಮಾತ್ರವಲ್ಲ, ಎನ್ಡಿಎ ಜೊತೆಗೆ ಮರಳಿ ಮೈತ್ರಿ ಮಾಡಿಕೊಳ್ಳಲಿದ್ದೇವೆ’’ ಎನ್ನುವ ಎಚ್ಚರಿಕೆಯೂ ಅವರ ಈ ಹೇಳಿಕೆಯಲ್ಲಿದೆ. ಒಂದು ವೇಳೆ ಇಂಡಿಯಾದಿಂದ ಅವರು ಹೊರಬಿದ್ದದ್ದೇ ಆದರೆ, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎನ್ಡಿಎ ಜೊತೆಗೆ ಮೈತ್ರಿ ಅನಿವಾರ್ಯವಾಗುತ್ತದೆ. ಒಂದು ವೇಳೆ ಅವರು ಎನ್ಡಿಎಗೆ ಮರಳಿದ್ದಾದರೆ ಐದನೇ ಬಾರಿಯ ‘ನಿಷ್ಠಾಂತರ’ವಾಗಿ ಅದು ದಾಖಲಾಗುತ್ತದೆ.
ಇತ್ತ ತೃಣಮೂಲ ಕಾಂಗ್ರೆಸ್ ಜೊತೆಗೆ ಕಾಂಗ್ರೆಸ್ ಮುಖಂಡರು ಮಾತುಕತೆ ಮುಂದುವರಿಸಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿ ಪಾಲುದಾರರಾಗಿರುವ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಚೌಕಾಶಿ ಮಾಡಿದರೆ ಅದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ನಿಂದ ಸಿಡಿದು ತೃಣಮೂಲ ಕಾಂಗ್ರೆಸ್ನ್ನು ಕಟ್ಟಿ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಳವಾಗಿ ಬೇರಿಳಿಸಿಕೊಂಡಿದ್ದಾರೆ. ಇಂಡಿಯಾ ಮೈತ್ರಿ ಕಾರಣಕ್ಕಾಗಿ ಪಶ್ಚಿಮಬಂಗಾಳದಲ್ಲಿ ಪಕ್ಷದ ಹಿಡಿತವನ್ನು ಸಡಿಲಗೊಳಿಸುವುದು ಅವರ ಮಟ್ಟಿಗೆ ಲಾಭದಾಯಕವಲ್ಲ. ಆದುದರಿಂದ, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಪ್ರಾದೇಶಿಕ ಸಾಮರ್ಥ್ಯವನ್ನು ಗೌರವಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಕ್ಷೇತ್ರಗಳನ್ನು ಬಿಟ್ಟುಕೊಡಲೇ ಬೇಕು. ಈ ನಿಟ್ಟಿನಲ್ಲಿ, ಮಮತಾ ಬ್ಯಾನರ್ಜಿ ಮತ್ತು ಆಪ್ ಜೊತೆಗೆ ಮಾತುಕತೆಗಳು ಮುಂದುವರಿಯಬೇಕು. ಇದೇ ಸಂದರ್ಭದಲ್ಲಿ, ನಿತೀಶ್ ಕುಮಾರ್ ಅವರದು ಮಾತ್ರ ‘ಸಮಯ ಸಾಧಕ’ ನಡೆಯಾಗಿದೆ. ಆಪ್ ಅಥವಾ ತೃಣಮೂಲ ಕಾಂಗ್ರೆಸ್ನಂತೆ ಅವರು ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಲು ಅವರು ಸಿದ್ಧರಿಲ್ಲ. ಇಂಡಿಯಾ ಜೊತೆಗೆ ಮೈತ್ರಿ ಕುದುರಲಿಲ್ಲವೆಂದರೆ ಅವರು ಎನ್ಡಿಎಗೆ ಮರಳಲಿದ್ದಾರೆ. ತನ್ನ ರಾಜಕೀಯ ಹಿತಾಸಕ್ತಿಗೆ ಅಗತ್ಯವೆಂದಾಗ ಕೋಮುವಾದಿಗಳ ಜೊತೆಗೆ ಸಂಗ ಮಾಡುವುದಕ್ಕೆ ನಿತೀಶ್ ಯಾವತ್ತೂ ಹಿಂಜರಿದವರಲ್ಲ. 2022ರಲ್ಲಿ ಬಿಜೆಪಿ ಮೈತ್ರಿಯನ್ನು ಏಕಾಏಕಿ ಮುರಿದು ಆರ್ಜೆಡಿ ಜೊತೆಗೆ ಕೈ ಜೋಡಿಸಿದಾಗ ‘ಸಮಯ ಸಾಧಕ, ವಚನ ಭ್ರಷ್ಟ’ ಎಂದು ಕಟುವಾಗಿ ಬಿಜೆಪಿ ನಿಂದಿಸಿತ್ತು. ಆದರೆ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ನಿತೀಶ್ ಇಂಡಿಯಾದಿಂದ ಹೊರ ಬಿದ್ದದ್ದೇ ಆದರೆ ಅದರ ಜೊತೆ ಮೈತ್ರಿ ಮಾಡುವುದಕ್ಕೆ ಬಿಜೆಪಿ ಅಥವಾ ಎನ್ಡಿಎ ತುದಿಗಾಲಿನಲ್ಲಿ ನಿಂತಿದೆ. ಯಾಕೆಂದರೆ ಬಿಹಾರದಲ್ಲಿ ನಿತೀಶ್ ಸ್ನೇಹ ಬಿಜೆಪಿಗೆ ಅತ್ಯಗತ್ಯವಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದರ ಹಿಂದೆಯೂ ಹಿಂದುಳಿದ ವರ್ಗವನ್ನು ಓಲೈಸುವ ರಾಜಕೀಯ ತಂತ್ರವಿತ್ತು. ನಿತೀಶ್ ಕೂಡ ಈ ನಿರ್ಧಾರವನ್ನು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ. ನಿತೀಶ್ರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಭಾಗವಾಗಿ ಕರ್ಪೂರಿಗೆ ಭಾರತ ರತ್ನ ನೀಡಲಾಗಿದೆ ಎನ್ನುವ ವಿಶ್ಲೇಷಣೆಯನ್ನು ಸಂಪೂರ್ಣ ತಿರಸ್ಕರಿಸುವುದಕ್ಕೆ ಸಾಧ್ಯವಿಲ್ಲ.
ಯಾವುದೇ ಸಿದ್ಧಾಂತ, ಬದ್ಧತೆಯಿಲ್ಲದೆ, ಅಧಿಕಾರ ಕೇಂದ್ರಿತವಾದ ನಿಲುವುಗಳ ಮೂಲಕ ‘‘ಪಲ್ಟೂ ಕುಮಾರ್’ ಎಂದೇ ಗುರುತಿಸಿಕೊಂಡಿರುವ ನಿತೀಶ್ ಕುಮಾರ್, ಎನ್ಡಿಎ ಜೊತೆಗೆ ಕೈ ಜೋಡಿಸಿರುವುದರಿಂದ ಜೆಡಿಯುಗಿಂತ ಬಿಜೆಪಿಗೇ ಅಧಿಕ ಲಾಭ. ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯನ್ನು ಮುರಿದು ಆರ್ಜೆಡಿ ಜೊತೆಗೆ ಸೇರಿಕೊಳ್ಳಬೇಕಾದ ಅನಿವಾರ್ಯ ಹೇಗೆ ಸೃಷ್ಟಿಯಾಯಿತು ಎನ್ನುವುದನ್ನು ನಿತೀಶ್ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಅದಾಗಲೇ ಶಿವಸೇನೆಯನ್ನು ಒಡೆದು ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದ ಅಮಿತ್ ಶಾ, ಬಿಹಾರದಲ್ಲಿ ಜೆಡಿಯು ಶಾಸಕರನ್ನು ಕೊಂಡುಕೊಳ್ಳುವ ಪ್ರಯತ್ನ ನಡೆಸಿದ್ದರು. ತುಸು ಯಾಮಾರಿದ್ದರೂ ಜೆಡಿಯು ಒಡೆದು ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಸರಕಾರ ರಚನೆಯನ್ನು ಮಾಡುತ್ತಿತ್ತು. ಅಪಾಯವನ್ನು ಅರಿತು ಅವರು ತಕ್ಷಣ ಬಿಜೆಪಿಯ ಜೊತೆಗೆ ಮೈತ್ರಿಯನ್ನು ಮುರಿದು ಆರ್ಜೆಡಿ ಜೊತೆ ಸೇರಿಕೊಂಡರು. ಬಿಹಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಜೊತೆಗಿನ ಮೈತ್ರಿಯಲ್ಲಿ ಅವರು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಬಿಹಾರದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನವನ್ನು ಪಡೆದುಕೊಂಡರೂ, ಭಿಕ್ಷೆಯ ರೂಪದಲ್ಲಿ ನಿತೀಶ್ಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿತ್ತು. ರಾಷ್ಟ್ರಮಟ್ಟದ ವರ್ಚಸ್ಸನ್ನು ಹೊಂದಿದ್ದ ಸಮಾಜವಾದಿ ನಾಯಕ ನಿತೀಶ್ ಕುಮಾರ್, ಮೋದಿಯ ಮುಂದೆ ನಡು ಬಗ್ಗಿಸಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಅವೆಲ್ಲವನ್ನು ಮರೆತು ಮತ್ತೆ ಮೋದಿಯ ಮುಂದೆ ನಡು ಬಗ್ಗಿಸುವುದಕ್ಕೆ ನಿತೀಶ್ ಸಿದ್ಧರಾಗಿದ್ದಾರೆ.
ಮುಖ್ಯಮಂತ್ರಿಯಾಗಿ ನಿತೀಶ್ ಜಾತಿ ಗಣತಿಯನ್ನು ನಡೆಸಿದ್ದಲ್ಲದೆ, ಅದನ್ನು ಬಿಡುಗಡೆ ಮಾಡುವಲ್ಲೂ ಅವರು ಯಶಸ್ವಿಯಾಗಿದ್ದರು. ಇದೇ ಸಂದರ್ಭದಲ್ಲಿ ಜಾತಿ ಗಣತಿಯನ್ನು ಬಿಜೆಪಿ ಕಟುವಾಗಿ ವಿರೋಧಿಸಿದೆ. ಜಾತಿಗಣತಿಯ ಮೂಲಕ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅರ್ಥದಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ಹೇಳಿಕೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಜಾತಿಗಣತಿಯ ಪರವಿರುದ್ಧ ಚರ್ಚೆಯೂ ನಿರ್ಣಾಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಜಾತಿಗಣತಿಯನ್ನು ತನ್ನ ಮಿತ್ರಪಕ್ಷವಾಗಿರುವ ಬಿಜೆಪಿಗಾಗಿ ಕಸದ ಬುಟ್ಟಿಗೆ ಹಾಕಲಿದ್ದಾರೆಯೆ? ಎನ್ನುವ ಪ್ರಶ್ನೆಯೂ ಎದ್ದಿದೆ. ನಿತೀಶ್ ಬೆನ್ನಿಗಿರುವ ಹಿಂದುಳಿದ ವರ್ಗದ ಮತಗಳನ್ನು ಲೋಕಸಭೆಯಲ್ಲಿ ಸೆಳೆಯುವುದಕ್ಕಾಗಿಯೇ ಬಿಜೆಪಿ ಮತ್ತೆ ಮೈತ್ರಿಗಾಗಿ ಕೈ ಚಾಚಿದೆ. ಈ ಮೂಲಕ ಹಾವು ಮತ್ತು ಕಪ್ಪೆಯ ನಡುವೆ ಮತ್ತೆ ಸ್ನೇಹದ ಬಾಗಿಲು ತೆರೆದುಕೊಂಡಿದೆ. ಈ ಬಾರಿ ಹಾವಿನ ಬಾಯಿಯಿಂದ ನಿತೀಶ್ ಪಾರಾಗುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ ಹಾವು ಇನ್ನಷ್ಟು ತಯಾರಿಯೊಂದಿಗೆ ಕಪ್ಪೆಯೆಡೆಗೆ ಸ್ನೇಹ ಹಸ್ತವನ್ನು ಚಾಚಿದೆ. ನಿತೀಶ್ ಸ್ವಾರ್ಥ ರಾಜಕಾರಣ ಇಂಡಿಯಾವನ್ನು ಮಾತ್ರವಲ್ಲ, ಬಿಹಾರದಲ್ಲಿ ಜೆಡಿಯುನ ಅಳಿದುಳಿದ ಗುರುತನ್ನೂ ಅಳಿಸಿ ಹಾಕಲಿದೆ. ಜೊತೆಗೆ ಬಿಹಾರದ ಹಿಂದುಳಿದವರ್ಗಗಳ ಹಿತಾಸಕ್ತಿಗಳನ್ನು ಕೂಡ.