ಭ್ರಷ್ಟರನ್ನು ಪವಿತ್ರರನ್ನಾಗಿ ಮಾಡುವ ಬಿಜೆಪಿ ವಾಷಿಂಗ್ ಮೆಶಿನ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದಲ್ಲಿ ಆಪರೇಶನ್ ಕಮಲದ ಮೂಲಕ ಸರಕಾರ ರಚನೆ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಿ ತಿಪ್ಪೆಗೆಸೆಯಲ್ಪಟ್ಟ ಸ್ವಯಂ ಘೋಷಿತ 'ಚಾರಿತ್ರ್ಯವಂತ'ರ ಪಕ್ಷ ಬಿಜೆಪಿ ಮಹಾರಾಷ್ಟ್ರದಲ್ಲಿ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದೆ. ಶರದ್ ಪವಾರ್ ಅವರ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಿ ಅಜಿತ್ ಪವಾರ್ ಬಣವನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ತನ್ನ ಜೊತೆಗೆ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಸೇರಿದಂತೆ ನಲವತ್ತು ಎನ್‌ಸಿಪಿ ಶಾಸಕರು ಬಿಜೆಪಿ ಸೇರಿದ್ದಾರೆಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ.
ಬಿಜೆಪಿ ಸೇರಿದವರೆಲ್ಲ ಭಾರೀ ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿದವರು.ಇವರೆಲ್ಲರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿದ್ದಾರೆ. ಇಂಥ ಹೊಲಸು ಭ್ರಷ್ಟಾಚಾರಿಗಳು ಬಿಜೆಪಿ ಸೇರಿದರೆ ಒಮ್ಮಿಂದೊಮ್ಮೆಲೇ ಪವಿತ್ರಾತ್ಮರಾಗುತ್ತಾರೆ. ಇವರನ್ನು ತೊಳೆದು ಸ್ವಚ್ಛ ಮಾಡುವ ವಾಷಿಂಗ್ ಮೆಶಿನ್ ಬಿಜೆಪಿ ಬಳಿ ಇದೆ ಎಂದು ಪ್ರತಿಪಕ್ಷಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲದಿಲ್ಲ. ಹಿಂದೆ ಕರ್ನಾಟಕ ಮಾತ್ರವಲ್ಲ ಮಧ್ಯಪ್ರದೇಶದಲ್ಲೂ ಬಿಜೆಪಿ ಇಂಥದೇ ಕಸರತ್ತು ಮಾಡಿ ಅಧಿಕಾರಕ್ಕೆ ಬಂತು. ಹಾಗೆ ನೋಡಿದರೆ ಬಿಜೆಪಿಗೆ ಯಾವುದೇ ರಾಜ್ಯದಲ್ಲಿ ಜನತೆ ಬಹುಮತ ನೀಡಿದ ಉದಾಹರಣೆಗಳು ಕಡಿಮೆ.ಅದು ಅಧಿಕಾರಕ್ಕೆ ಬರುವುದು ಆಪರೇಶನ್ ಕಮಲದ ಮೂಲಕ ಮಾತ್ರ.
ಮಹಾರಾಷ್ಟ್ರದ ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಮಹಾರಾಷ್ಟ್ರದ ಸಹಕಾರ ಬ್ಯಾಂಕ್ ಹಗರಣ ಮತ್ತು ನೀರಾವರಿ ಹಗರಣಗಳನ್ನು ಉಲ್ಲೇಖಿಸಿ ಅವರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಪ್ರಧಾನಿ ಯಾರ ವಿರುದ್ಧ ಬೆದರಿಕೆ ಹಾಕಿದ್ದರೋ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಕ್ಲೀನ್ ಚಿಟ್ ನೀಡಲಾಗಿದೆ.
ಸಾರ್ವತ್ರಿಕ ಚುನಾವಣೆ ನಂತರ 2019ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ)ಅಜಿತ್ ಪವಾರ್ ಮೂಲಕ ಇಬ್ಭಾಗ ಮಾಡಲು ಯತ್ನಿಸಿದ್ದ ಬಿಜೆಪಿ ನಾಲ್ಕು ವರ್ಷಗಳ ನಂತರ ಆ ಕಾರ್ಯದಲ್ಲಿ ಯಶಸ್ವಿಯಾಗಿದೆ. ಅಜಿತ್ ಪವಾರ್ ಶರದ್ ಪವಾರ್ ಅವರ ಅಣ್ಣ ಅನಂತ ಪವಾರ್ ಅವರ ಮಗ. ಇತ್ತೀಚೆಗೆ ವಿಧಾನಸಭೆಯ ಪ್ರತಿಪಕ್ಷನಾಯಕನ ಸ್ಥಾನದಿಂದ ತನ್ನನ್ನು ಮುಕ್ತಗೊಳಿಸಬೇಕೆಂದು ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು.
ಅಜಿತ್ ಪವಾರ್ ಅವರ ಜೊತೆಗೆ ಮಹಾರಾಷ್ಟ್ರದ ಬಿಜೆಪಿ ಮೈತ್ರಿ ಸರಕಾರ ಸೇರಿದ ಎಂಟು ಶಾಸಕರಲ್ಲಿ ಶರದ್ ಪವಾರ್ ಅವರ ಕಟ್ಟಾ ಬೆಂಬಲಿಗರಾಗಿದ್ದ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಛಗನ್ ಭುಜಬಲ್ ಸೇರಿದ್ದು ತೀವ್ರ ಆಘಾತವನ್ನುಂಟು ಮಾಡಿದೆ.
ಒಂದೆಡೆ ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡು ಇಡೀ ರಾಜ್ಯ ಧಗಧಗಿಸುತ್ತಿರುವಾಗ ಆ ಬಗ್ಗೆ ಕಿಂಚಿತ್ ಯೋಚನೆ ಮಾಡದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ದೇಶದ ಉಳಿದ ಭಾಗಗಳಲ್ಲಿ ಪ್ರತಿಪಕ್ಷಗಳನ್ನು ಒಡೆದು ದುರ್ಬಲಗೊಳಿಸಲು ಸಿಬಿಐ ಮತ್ತು ಐಟಿಯಂಥ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರಲ್ಲಿ ದಿಗಿಲನ್ನುಂಟು ಮಾಡಿದೆ. ಹೀಗಾಗಿ ಪ್ರತಿಪಕ್ಷಗಳನ್ನು ಒಡೆದು ದುರ್ಬಲಗೊಳಿಸುವ ಯತ್ನ ನಡೆದಿದೆ. ಮೋದಿಯವರು ವಿದೇಶಕ್ಕೆ ಹೋದಾಗ ಅಲ್ಲಿ ''ಭಾರತ ಪ್ರಜಾಪ್ರಭುತ್ವದ ತಾಯಿ'' ಎಂದು ಹೇಳುತ್ತಲೇ ಭಾರತದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಉತ್ತಮ ಆಡಳಿತ ನೀಡಿದ್ದರೆ ಇಂಥ ಕಸರತ್ತುಗಳನ್ನು ಮಾಡುವ ಅಗತ್ಯವಿರಲಿಲ್ಲ. ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಇಂಥ ಅಗ್ಗದ ಪ್ರಹಸನಗಳನ್ನು ನಡೆಸುತ್ತಿದೆ
ಆದರೆ ಶರದ್ ಪವಾರ್ ಅವರನ್ನು ಅಷ್ಟು ಹಗುರವಾಗಿ ಅಂದಾಜು ಮಾಡಲು ಆಗುವುದಿಲ್ಲ. ಇಂಥ ಸವಾಲುಗಳನ್ನು ಎದುರಿಸಿ ಅವರು ಬೆಳೆದು ನಿಂತಿದ್ದಾರೆ. ಈಗ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶರದ್ ಪವಾರ್ ಇದನ್ನೊಂದು ಸವಾಲಾಗಿ ಸ್ವೀಕರಿಸಿ ಬಿಜೆಪಿಗೆ ಸಮಯ ನೋಡಿ ಎದಿರೇಟು ಕೊಡಬಹುದು. ಜನತೆಯ ಬೆಂಬಲವಿಲ್ಲದೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಪವಿತ್ರರನ್ನಾಗಿ ಮಾಡುವುದು ಬಿಜೆಪಿಯ ರಿಮೋಟ್ ಕಂಟ್ರೋಲ್ ಎಂದೇ ಹೆಸರಾದ ಸಂಘಪರಿವಾರದವರಿಗೂ ಅನೈತಿಕ ಅನ್ನಿಸಿಲ್ಲ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವುದಾಗಿ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ಸಂಘ ಪರಿವಾರದ ನಾಯಕರು ತಲುಪಿದ ಅಧೋಗತಿಗೆ ಮಹಾರಾಷ್ಟ್ರ ಒಂದು ಉದಾಹರಣೆಯಾಗಿದೆ. ಬಿಜೆಪಿ ತನ್ನದು ಕಾಂಗ್ರೆಸ್‌ಗಿಂತ ಭಿನ್ನ ಸಂಸ್ಕೃತಿ ಎಂದು ಹೇಳುತ್ತದೆ. ಆದರೆ ಕಾಂಗ್ರೆಸ್ ಜನಾದೇಶವನ್ನು ಬುಡಮೇಲು ಮಾಡಿದ ಉದಾಹರಣೆಗಳಿಲ್ಲ. ಜನಾದೇಶವನ್ನು ಬುಡಮೇಲು ಮಾಡಲು ಆಪರೇಶನ್ ಕಮಲದಂಥ ಅನೈತಿಕ ಕೆಲಸಕ್ಕೆ ಕೈಹಾಕಿದ್ದು ಬಿಜೆಪಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷವನ್ನೇ ಮುಗಿಸಿದ ಅಂದರೆ ಅದನ್ನು ಇಬ್ಭ್ಬಾಗ ಮಾಡಿದ ಕುಖ್ಯಾತಿ ಬಿಜೆಪಿಯದು.
ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡ ಯಾವ ಪ್ರಾದೇಶಿಕ ಪಕ್ಷವೂ ಸುರಕ್ಷಿತವಾಗಿ ಉಳಿದಿಲ್ಲ.