ಕಾಗೆ ಹಾರಿಸಿ ಚುನಾವಣೆ ಗೆಲ್ಲಲು ಹೊರಟಿರುವ ಬಿಜೆಪಿ ನಾಯಕರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಯನ್ನು ಎದುರಿಸಲು ರಾಜ್ಯ ಬಿಜೆಪಿ ನಾಯಕರ ಕೈಯಲ್ಲಿ ಯಾವುದೇ ಜನಪರ ವಿಷಯಗಳಿಲ್ಲದೇ ಇರುವುದು ಅವರ ವರ್ತನೆಗಳಿಂದ ಬಹಿರಂಗವಾಗುತ್ತಿದೆ. ಇತ್ತೀಚೆಗಷ್ಟೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯ ಹಿಂದೆ ಬಿದ್ದಿದ್ದ ಬಿಜೆಪಿ ಇದೀಗ ‘ಹನುಮಾನ್ ಚಾಲೀಸ’ದ ಹಿಂದೆ ಬಿದ್ದಿದೆ. ವೀಡಿಯೊವೊಂದರಲ್ಲಿ ರಾಜಕೀಯ ನಾಯಕನೊಬ್ಬನ ಪರವಾಗಿ ನೀಡುತ್ತಿರುವ ಘೋಷಣೆಯನ್ನು ‘ಪಾಕಿಸ್ತಾನ ಪರ ಘೋಷಣೆ’ ಎಂದು ಬಿಂಬಿಸಲು ಯತ್ನಿಸಿದ ನಾಯಕರು, ಇದೀಗ ಮೊಬೈಲ್ ಅಂಗಡಿಯಲ್ಲಿ ನಡೆದಿರುವ ವೈಯಕ್ತಿಕ ಜಗಳಕ್ಕೆ ‘ಹನುಮಾನ್ ಚಾಲೀಸಾ’ವನ್ನು ಜೋಡಿಸಲು ಯತ್ನಿಸುತ್ತಿದ್ದಾರೆ. ಈ ನಾಡಿನ ಜನಸಾಮಾನ್ಯರ ಬದುಕಿಗೆ ಸಂಬಂಧ ಪಟ್ಟ ಬರ, ಕುಡಿಯುವ ನೀರಿನ ಕೊರತೆ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಹಣ ಇವೆಲ್ಲದರ ಬಗ್ಗೆ ಮೌನವಾಗಿದ್ದ ಬಿಜೆಪಿ ನಾಯಕರು, ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ನಗರದಲ್ಲಿ ಎಲ್ಲೋ ಯಾರೋ ಕೂಗಿದ ಘೋಷಣೆಯನ್ನು, ಪುಂಡರು ಪರಸ್ಪರ ಹೊಡೆದಾಡಿಕೊಂಡ ಪ್ರಕರಣವನ್ನು ನಾಡಿನ ಸಮಸ್ಯೆಯಾಗಿ ಬಿಂಬಿಸಲು ಹೊರಟಿದ್ದಾರೆ. ಪಾಕಿಸ್ತಾನ ಘೋಷಣೆ ಆರೋಪದಲ್ಲಿ ಯಾವ ಅಸ್ಪಷ್ಟತೆಯಿತ್ತೋ, ಈಗ ಹನುಮಾನ್ ಚಾಲೀಸಾ ಪಠಿಸುವುದಕ್ಕೆ ತಡೆಯೊಡ್ಡಿದ್ದಾರೆ ಎನ್ನುವ ಆರೋಪದಲ್ಲೂ ಅದೇ ಅಸ್ಪಷ್ಟತೆಯಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮೊದಲು ನೀಡಿದ ದೂರಿನಲ್ಲಿ ಈ ಬಗ್ಗೆ ಯಾವುದೇ ವಿವರಗಳು ಇರಲಿಲ್ಲ. ಬೆಂಗಳೂರಿನಂತಹ ನಗರಕ್ಕೆ ಹೋಲಿಸಿದರೆ ಇಂತಹ ಸಣ್ಣ ಪುಟ್ಟ ಪ್ರಕರಣಗಳು ಪ್ರತೀ ದಿನ ನಡೆಯುತ್ತವೆ. ಆದರೆ ಯಾವಾಗ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಯಿತೋ ಅದರ ಬೆನ್ನಿಗೇ ಬೆಂಗಳೂರಿಗೆ ಬೆಂಕಿ ಹಚ್ಚಲು ಶೋಭಾ ತನ್ನ ನಾಲಗೆಯನ್ನು ಹರಿಯ ಬಿಡತೊಡಗಿದ್ದಾರೆ. ಜನಪರ ಕೆಲಸ ಮಾಡದೇ ಹೀಗೆ ನಾಲಗೆ ಹರಿ ಬಿಡುತ್ತಾ ಸಮಯ ಕಳೆದ ಕಾರಣಕ್ಕಾಗಿಯೇ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಅಲ್ಲಿನ ಬಿಜೆಪಿ ಕಾರ್ಯಕರ್ತರು ಇವರನ್ನು ಎತ್ತಂಗಡಿ ಮಾಡಿಸಿದ್ದಾರೆ. ಈ ವಿಫಲ ಸಂಸದೆಯನ್ನು ಇದೀಗ ಬೆಂಗಳೂರಿನ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಅದರ ಪರಿಣಾಮ ಬೆಂಗಳೂರಿನ ಜನರ ಕಣ್ಣ ಮುಂದಿದೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ಬಗ್ಗೆ ಬಿಜೆಪಿಯ ಒತ್ತಡಕ್ಕೆ ಮಣಿದು ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಬಂಧಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಅಪರಾಧಿಗಳು ಎನ್ನುವಂತಿಲ್ಲ. ಯಾಕೆಂದರೆ, ವೀಡಿಯೊದಲ್ಲಿ ಕೂಗಿದ ಘೋಷಣೆಯ ಬಗ್ಗೆ ಇನ್ನೂ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಾಗಿಲ್ಲ. ರಾಜಕೀಯ ದುರುದ್ದೇಶಕ್ಕೆ ಸೃಷ್ಟಿಯಾದ ಪ್ರಕರಣ ಇದಾದರೂ, ಅದಕ್ಕಾಗಿ ಅಮಾಯಕ ಜನರು ಮಾತ್ರ ತಮ್ಮ ಬದುಕನ್ನೇ ತೆರಬೇಕಾಗುತ್ತದೆ. ಭೋಪಾಲದಲ್ಲಿ ಆರು ವರ್ಷಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಆರೋಪದಲ್ಲಿ ಜೈಲಿಗೆ ತಳ್ಳಲ್ಪಟ್ಟು ನರಕ ಯಾತನೆಯನ್ನು ಅನುಭವಿಸಿದ್ದ 17 ಮುಸ್ಲಿಮ್ ಯುವಕರು ಕಳೆದ ವರ್ಷ ಆರೋಪ ಮುಕ್ತಗೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಬಲವಂತದಿಂದ ದೂರುದಾರ ದೂರು ನೀಡಿರುವುದು ಮತ್ತು ಸಾಕ್ಷಿದಾರರಿಂದ ಸುಳ್ಳು ಹೇಳಿಕೆಗಳನ್ನು ನೀಡಿಸಿರುವುದು ಆರು ವರ್ಷಗಳ ಬಳಿಕ ಬಹಿರಂಗವಾಗಿದೆ. ಈ ಆರೋಪಿಗಳ ಪೈಕಿ 40ರ ಹರೆಯದ ವ್ಯಕ್ತಿಯೊಬ್ಬ 2019ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೆ ಆತ್ಮಹತ್ಯೆಗೆ ಶರಣಾದ ಮೂರು ವರ್ಷಗಳಲ್ಲಿ ಉಳಿದ ಆರೋಪಿಗಳನ್ನು ನಿರಪರಾಧಿಗಳು ಎಂದು ಕೋರ್ಟ್ ಬಿಡುಗಡೆ ಮಾಡಿದೆ.
ಈ ಪ್ರಕರಣದಲ್ಲಿ ದೂರುದಾರ ದೂರನ್ನೇ ಸಲ್ಲಿಸಿರಲಿಲ್ಲ. ಬದಲಿಗೆ ಬಂಧನಗಳ ಬಳಿಕ ಪೊಲೀಸರು ದೂರನ್ನು ಸೃಷ್ಟಿಸಿದ್ದರು ಎನ್ನುವುದನ್ನು ದೂರುದಾರ ಸುಭಾಷ್ ಕೋಲಿ ಮಾಧ್ಯಮಗಳಿಗೆ ತಿಳಿಸಿದ್ದರು. 2017ರಲ್ಲಿ ನಡೆದಿದ್ದ ಈ ಘಟನೆಯನ್ನು ಅಲ್ಲಿನ ಮಾಧ್ಯಮಗಳು ಪ್ರಚೋದನಕಾರಿಯಾಗಿ ವರದಿ ಮಾಡಿದ್ದವು. ಇದರಲ್ಲಿ 16 ವರ್ಷದ ಬಾಲಕರಿಬ್ಬರನ್ನೂ ಆರೋಪಿಯಾಗಿ ಗುರುತಿಸಿ ಅವರನ್ನು ಬಂಧಿಸಲಾಗಿತ್ತು. 2022ರಲ್ಲಿ ಬಾಲಾಪರಾಧಿಗಳ ನ್ಯಾಯಾಲಯವು ಇವರನ್ನು ಬಿಡುಗಡೆಗೊಳಿಸಿತ್ತು. ಆದರೆ ಮುಂದೆ ಅವರಿಬ್ಬರೂ ಶಾಲೆಗಳ ಮೆಟ್ಟಿಲನ್ನು ತುಳಿಯಲು ಸಾಧ್ಯವಾಗಲಿಲ್ಲ. ಈ ಪ್ರಕರಣದಲ್ಲಿ ತನಗೆ ‘ದೇಶದ್ರೋಹಿ’ ಎಂದು ಹಣೆಪಟ್ಟಿ ಕಟ್ಟಿದ್ದ ಅವಮಾನವನ್ನು ಸಹಿಸಲಾಗದೆ ರುಬಾಬ್ ನವಾಬ್ ಎಂಬವರು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ತನ್ನ ಪುತ್ರನ ಬಂಧನದಿಂದ ಆಘಾತಕ್ಕೀಡಾಗಿದ್ದ ಮುಗದ್ದರ್ ತಡ್ವಿ 2021ರಲ್ಲಿ ಮೃತಪಟ್ಟಿದ್ದಾರೆ. 2023ರಲ್ಲಿ ಘೋಷಣೆ ಕೂಗಿರುವುದು ಬರೇ ವದಂತಿ ಎಂದು ನ್ಯಾಯಾಲಯ ಹೇಳಿ, ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಆದರೆ ಘೋಷಣೆಯನ್ನೇ ಕೂಗದ 17 ಮಂದಿ ಜೈಲಿನಲ್ಲಿ ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿಯಾಗಿತ್ತು. ಇದೇ ಸಂದರ್ಭದಲ್ಲಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದ ಪೊಲೀಸರು ಹಾಗೂ ಅಮಾಯಕರ ಬಗ್ಗೆ ರೋಚಕ ವರದಿಗಳನ್ನು ಬರೆದ ಪತ್ರಿಕೆಗಳಿಗೆ ಯಾವ ಶಿಕ್ಷೆಯೂ ಆಗಲಿಲ್ಲ,.
ವಿಪರ್ಯಾಸವೆಂದರೆ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪಗಳುಳ್ಳ 20ಕ್ಕೂ ಅಧಿಕ ಪ್ರಕರಣಗಳು ಸುಳ್ಳು ಎನ್ನುವುದು ವಿಚಾರಣೆಯ ಸಂದರ್ಭದಲ್ಲಿ ಸಾಬೀತಾಗಿವೆ. ಆಲ್ಟ್‌ನ್ಯೂಸ್ ಸುಮಾರು ಇಂತಹ 22 ಪ್ರಕರಣಗಳನ್ನು ಹಂಚಿಕೊಂಡಿವೆ. 2021ರಲ್ಲಿ ಉಜ್ಜಯಿನಿಯಲ್ಲಿ ಮುಸ್ಲಿಮರು ಸೇರಿದ ಸಮಾವೇಶವೊಂದರಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಎಬಿಪಿ ನ್ಯೂಸ್ ಪತ್ರಕರ್ತ ಟ್ವೀಟ್ ಮಾಡಿದ್ದ. ಇದನ್ನೇ ಮುಂದಿಟ್ಟುಕೊಂಡು ಹಲವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು. ದೇಶದ ಎಲ್ಲ ಪ್ರಮುಖ ಚಾನೆಲ್‌ಗಳು ಇದನ್ನು ಸಂಭ್ರಮದಿಂದ ವರದಿ ಮಾಡಿದ್ದವು. ‘ಖಾಜಿ ಸಾಬ್ ಝಿಂದಾಬಾದ್’ ಎಂದು ಕೂಗಿದ್ದು ಪತ್ರಕರ್ತನ ಕಿವಿಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೇಳಿಸಿತ್ತು. ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ಪುನರಾವರ್ತನೆಗೊಂಡಿತು. ಇಲ್ಲೂ ಘೋಷಣೆ ಕೂಗಿದ್ದಾರೆ ಎಂದು ಕೂಗಿ ಹೇಳಿದ್ದು ಪತ್ರಕರ್ತರೇ ಆಗಿದ್ದಾರೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ವದಂತಿಗಳನ್ನು ಹಬ್ಬಿಸಿರುವುದು ಪತ್ರಕರ್ತರೇ. ವಿಚಾರಣೆಯ ಬಳಿಕ ಆರೋಪ ಸುಳ್ಳು ಎಂದು ಅಮಾಯಕರನ್ನು ಬಿಡುಗಡೆ ಮಾಡಲಾಗುತ್ತದೆಯಾದರೂ, ಈ ವದಂತಿಗಳನ್ನು ಹರಡಿ ಅಮಾಯಕರ ಬಂಧನಕ್ಕೆ ಕಾರಣರಾದ ಪತ್ರಕರ್ತರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಈ ಹಿಂದೆ ಸಿಂಧಗಿಯಲ್ಲೇ ರಾಮಸೇನೆಯ ಕಾರ್ಯಕರ್ತರೇ ಪಾಕಿಸ್ತಾನದ ಧ್ವಜ ಹಾರಿಸಿ ಅವುಗಳನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ಪಾಕಿಸ್ತಾನ ಧ್ವಜ ಹಾರಾಟವನ್ನು ಸಂಭ್ರಮದಿಂದ ವರದಿ ಮಾಡಿದ್ದ ಪತ್ರಕರ್ತರು, ಆ ಬಳಿಕ ನಿಜವಾದ ಆರೋಪಿಗಳ ಹೆಸರು ಬಹಿರಂಗವಾದಾಗ ಅದನ್ನು ಪ್ರಕಟಿಸಲು ಉತ್ಸಾಹ ತೋರಿಸಲಿಲ್ಲ. ಅಂದರೆ ಪಾಕಿಸ್ತಾನ ಘೋಷಣೆ, ಧ್ವಜ ಹಾರಾಟದ ಹೆಸರಿನಲ್ಲಿ ಸಮಾಜದ ನೆಮ್ಮದಿ ಕೆಡಿಸುವುದಷ್ಟೇ ಇವರ ಗುರಿ.
ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಕಾಗೆ ಹಾರಿಸಿ ರಾಜ್ಯದ ಗೃಹ ಸಚಿವರನ್ನು ಏಮಾರಿಸಲು ಬಹುತೇಕ ಯಶಸ್ವಿಯಾಗಿರುವ ಬಿಜೆಪಿ ನಾಯಕರು ಇದೀಗ ‘ಹನುಮಾನ್ ಚಾಲೀಸಾ ಕೂಗಲು ಅಡ್ಡಿ ಪಡಿಸಲಾಗಿದೆ’ ಎನ್ನುವ ಕಾಗೆಯನ್ನು ಹಾರಿಸಲು ಮುಂದಾಗಿದ್ದಾರೆ. ಆದರೆ ಸಿಸಿ ಕ್ಯಾಮರಾ ದೃಶ್ಯವೇ ಸತ್ಯ ಏನು ಎನ್ನುವುದನ್ನು ಹೇಳುತ್ತಿದೆ. ಮೊಬೈಲ್ ಅಂಗಡಿಯಲ್ಲಿ ನಡೆದ ಮಾತಿನ ಚಕಮಕಿಗೆ ಕೋಮು ದ್ವೇಷದ ಬಣ್ಣ ಬಳಿದು ಅದರ ಹೆಸರಿನಲ್ಲಿ ಚುನಾವಣೆಯನ್ನು ಗೆಲ್ಲಲು ಹೊರಟಿರುವ ರಾಜ್ಯ ಬಿಜೆಪಿ ಎಂತಹ ದೀನಾವಸ್ಥೆಯಲ್ಲಿದೆ ಎನ್ನುವುದು ಈ ಮೂಲಕ ಬಹಿರಂಗವಾಗಿದೆ. ಬಿಜೆಪಿ ನಾಯಕರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಪ್ರಕರಣವನ್ನು ಮುಂದಿಟ್ಟು ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿ ಕೆಡಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಸ್ವಯಂ ಪ್ರಕರಣ ದಾಖಲಿಸಬೇಕಾಗಿದೆ.