ನ್ಯಾಯ ವ್ಯವಸ್ಥೆಯ ಮೇಲೆ ಬುಲ್ಡೋಜರ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶಾದ್ಯಂತ ನ್ಯಾಯ ವ್ಯವಸ್ಥೆಗೆ ಪರ್ಯಾಯವಾಗಿ ಚಾಲ್ತಿಯಲ್ಲಿರುವ ‘ಬುಲ್ಜೋಜರ್ ನ್ಯಾಯ’ದ ವಿರುದ್ಧ ಇತ್ತೀಚೆಗೆ ಸುಪ್ರೀಂಕೋರ್ಟ್ ಕೆಂಡ ಕಾರಿದೆ. ಈ ಕಾರ್ಯಾಚರಣೆಯ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿರುವ ನ್ಯಾಯಾಲಯ ‘‘ಆಸ್ತಿಯೊಂದು ಆರೋಪಿಯೊಬ್ಬನ ಹೆಸರಿನಲ್ಲಿ ಇದೆ ಎಂಬ ಒಂದೇ ಕಾರಣಕ್ಕಾಗಿ ಅದನ್ನು ಧ್ವಂಸಗೊಳಿಸಬಾರದು. ಅಷ್ಟೇ ಅಲ್ಲ, ಒಂದು ವೇಳೆ ಆತ ದೋಷಿಯೆಂದು ಸಾಬೀತಾದರೂ ಆತನ ಮನೆಯನ್ನು ಧ್ವಂಸಗೊಳಿಸುವಂತಿಲ್ಲ’’ ಎಂದು ಸ್ಪಷ್ಟ ಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಅಗತ್ಯವನ್ನು ಅದು ಎತ್ತಿ ಹಿಡಿಯಿತು. ಬುಲ್ಡೋಜರ್ ನ್ಯಾಯ ವ್ಯವಸ್ಥೆಯ ವಿರುದ್ಧ ನ್ಯಾಯಾಲಯಗಳ ಆಕ್ರೋಶ ಇದೇ ಮೊದಲೇನೂ ಅಲ್ಲ. ಒಂದೆಡೆ ನ್ಯಾಯಾಲಯ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವಂತೆಯೇ, ನ್ಯಾಯಾಲಯದ ಆದೇಶಗಳ ಮೇಲೆಯೇ ಬುಲ್ಡೋಜರ್‌ಗಳನ್ನು ಓಡಿಸಲಾಗುತ್ತಿದೆ. ಯಾವುದೇ ಕ್ರಿಯೆಗಳಿಲ್ಲದ ಬರಿದೇ ಬಾಯಿ ಮಾತಿನ ಆಕ್ರೋಶದಿಂದ ಈ ಬುಲ್ಡೋಜರ್‌ಗಳನ್ನು ತಡೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎನ್ನುವುದು ಸಾಬೀತಾಗುತ್ತಲೇ ಇದೆ. ಬುಲ್ಡೋಜರ್ ಮೂಲಕ ಅಕ್ರಮವಾಗಿ ಮನೆಗಳನ್ನು ಧ್ವಂಸಗೊಳಿಸಿದ ಸರಕಾರಕ್ಕೆ ತಕ್ಷಣವೇ ದುಪ್ಪಟ್ಟು ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿದ್ದಿದ್ದರೆ, ಈ ಬುಲ್ಡೋಜರ್‌ಗಳಿಗೆ ಯಾವತ್ತೋ ಲಗಾಮುಗಳು ಬೀಳುತ್ತಿದ್ದವು. ನ್ಯಾಯ ವ್ಯವಸ್ಥೆಯೂ ಈ ಬುಲ್ಡೋಜರ್ ನ್ಯಾಯವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಇದು ಹೇಳುತ್ತಿದೆ.
ಈ ದೇಶದಲ್ಲಿ ‘ಬುಲ್ಡೋಜರ್ ಪ್ರಯೋಗ’ದ ಜೊತೆಗೆ ‘ನ್ಯಾಯ’ವನ್ನು ಜೋಡಿಸುವುದು ಮತ್ತು ಗೋವಿನ ಹೆಸರಿನಲ್ಲಿ ದಾಂಧಲೆ ನಡೆಸುವವರನ್ನು ‘ಗೋರಕ್ಷಕ’ರೆಂದು ಕರೆಯುವುದು ಬೇರೆ ಬೇರೆಯಲ್ಲ. ದ್ವೇಷ ರಾಜಕಾರಣದ ಮುಂದುವರಿದ ಭಾಗವಾಗಿ ಇಲ್ಲಿ ಬುಲ್ಜೋಜರ್‌ನ್ನು ನ್ಯಾಯ ವ್ಯವಸ್ಥೆಗೆ ಪರ್ಯಾಯವಾಗಿ ಬೀದಿಗಿಳಿಸಲಾಗಿದೆ. ಬಹುತೇಕ ಬುಲ್ಡೋಜರ್ ಪ್ರಯೋಗಗಳು ನಡೆದಿರುವುದು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಆರೋಪಿಗಳ ನಿವಾಸಗಳ ಮೇಲೆ ಮಾತ್ರ. ನಿಜಕ್ಕೂ ಬುಲ್ಡೋಜರ್ ಪ್ರಯೋಗದ ಉದ್ದೇಶವೇ ಸಮಾಜದಲ್ಲಿ ನ್ಯಾಯವನ್ನು, ಶಾಂತಿಯನ್ನು ಸ್ಥಾಪಿಸುವುದಾಗಿದ್ದರೆ, ಇತ್ತೀಚೆಗೆ ಗೋರಕ್ಷಣೆಯ ಹೆಸರಿನಲ್ಲಿ ಆರ್ಯನ್ ಮಿಶ್ರ ಎಂದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ಆರೋಪಿಗಳ ಮನೆಗಳು ಇಷ್ಟು ಹೊತ್ತಿಗೆ ಧ್ವಂಸವಾಗಿರುತ್ತಿದ್ದವು. ಅಂದರೆ ಈ ದೇಶದ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಸುವ ದಾಳಿಗೆ ಒಂದು ನೆಪವಾಗಿಯಷ್ಟೇ ಬುಲ್ಡೋಜರ್‌ನ್ನು ಬಳಸಲಾಗಿದೆ. ಇತ್ತೀಚೆಗೆ ಮುಸ್ಲಿಮರೆಂದು ತಪ್ಪಾಗಿ ಆರ್ಯನ್ ಮಿಶ್ರನನ್ನು ನಕಲಿ ಗೋರಕ್ಷಕರು ಕೊಂದು ಹಾಕಿದಂತೆಯೇ ಪ್ರಮಾದಗಳ ರೂಪದಲ್ಲಿ ಕೆಲವೊಮ್ಮೆ ಮುಸ್ಲಿಮೇತರರ ನಿವಾಸಗಳ ಮೇಲೂ ಬುಲ್ಡೋಜರ್ ಹರಿದಿರುವ ಉದಾಹರಣೆಗಳಿವೆ.
ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಯಾರನ್ನೂ ದೋಷಿಯೆಂದು ಬಿಂಬಿಸುವ ಅಧಿಕಾರ ಪೊಲೀಸರಿಗಿಲ್ಲ. ಕಾನೂನು ವ್ಯವಸ್ಥೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳ ಮೇಲೆ ಆರೋಪಗಳನ್ನಷ್ಟೇ ಹೊರಿಸುತ್ತದೆ. ಅದರ ಸತ್ಯಾಸತ್ಯತೆ ತೀರ್ಮಾನವಾಗುವುದು ನ್ಯಾಯಾಲಯದಲ್ಲಿ. ನ್ಯಾಯಾಲಯದಲ್ಲಿ ಸಾಬೀತಾದ ಬಳಿಕವಷ್ಟೇ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಬುಲ್ಡೋಜರ್ ನ್ಯಾಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಸೇರಿ ಆರೋಪಿಯನ್ನು ದೋಷಿಯೆಂದು ಘೋಷಿಸುತ್ತಾರೆ. ಬಳಿಕ ನಿವಾಸಿಗಳ ಮನೆಯನ್ನು ಅಕ್ರಮ ಎಂದು ಘೋಷಿಸಿ ಅವುಗಳನ್ನು
ಪೊಲೀಸರ ಬೆಂಬಲದೊಂದಿಗೆ ಧ್ವಂಸಗೊಳಿಸಲಾಗುತ್ತದೆ. ನಾಳೆ ಇದೇ ಆರೋಪಿಗಳು ನಿರಪರಾಧಿಗಳು ಎಂದು ಘೋಷಣೆಯಾದರೆ, ಅವರಿಗೆ ಅವರ ಮನೆಗಳನ್ನು ಸರಕಾರ ಮರು ನಿರ್ಮಾಣ ಮಾಡಿ ಕೊಡುವುದಿಲ್ಲ. ಇವರು ನಿರಪರಾಧಿಗಳೆಂದು ಸಾಬೀತಾಗುವಷ್ಟರಲ್ಲಿ ಧ್ವಂಸಗೊಳಿಸಿದ ಜಾಗದಲ್ಲಿ ಇನ್ನಾರೋ ಮನೆ, ಕಟ್ಟಡಗಳನ್ನು ನಿರ್ಮಿಸಿರುತ್ತಾರೆ. ಈ ಹಿಂದೆ ನಗರ ಪ್ರದೇಶಗಳಲ್ಲಿ ಕೊಳೆಗೇರಿಗಳ ಗುಡಿಸಲುಗಳನ್ನು ಸ್ಥಳೀಯ ಆಡಳಿತ ಇದೇ ಮಾದರಿಯಲ್ಲಿ ಧ್ವಂಸಗೊಳಿಸುತ್ತಿತ್ತು. ಕೊಳೆಗೇರಿಗಳು ವಾಸಿಸುವ ಜಮೀನಿನ ಮೇಲೆ ಕಾರ್ಪೊರೇಟ್ ಶಕ್ತಿಗಳ ಕಣ್ಣು ಬಿದ್ದದ್ದೇ ಆದರೆ, ರಾತ್ರೋ ರಾತ್ರಿ ಗುಡಿಸಲುಗಳಿಗೆ ಬೆಂಕಿ ಬೀಳುತ್ತಿತ್ತು. ಗುಡಿಸಲುಗಳು ಬೂದಿಯಾಗಿ ಅಲ್ಲಿರುವ ಜನರು ಬೀದಿ ಪಾಲಾದ ಬೆನ್ನಿಗೇ ಸ್ಥಳೀಯ ಆಡಳಿತ ಆ ಜಮೀನನ್ನು ವಶ ಕ್ಕೆ ತೆಗೆದುಕೊಳ್ಳುತ್ತಿತ್ತು. ಇಂದಿಗೂ, ಮುಸ್ಲಿಮರು ಬಹುಸಂಖ್ಯಾತರಾಗಿರುವ ವಸತಿಪ್ರದೇಶಗಳ ಮೇಲೆ ಸ್ಥಳೀಯ ಆಡಳಿತದ ಕಣ್ಣು ಬಿದ್ದರೆ ಮೊದಲು ಅಲ್ಲಿರುವ ಮನೆಗಳನ್ನು ಅಕ್ರಮವೆಂದು ಘೋಷಿಸಿ ಬಳಿಕ ರಾತ್ರೋರಾತ್ರಿ ಅವುಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತದೆ. ಬುಲ್ಡೋಜರ್ ಹರಿಸುವುದಕ್ಕಾಗಿಯೇ ಕೆಲವೊಮ್ಮೆ ಸ್ಥಳೀಯರನ್ನು ಆಡಳಿತ ಪ್ರಚೋದಿಸಿ ಹಿಂಸಾಚಾರಕ್ಕಿಳಿಸುವುದೂ ಇದೆ. ಈ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಬೀದಿಗಿಳಿದು ಯಾವುದೇ ಪ್ರತಿಭಟನೆಗಳನ್ನು ನಡೆಸಬಾರದು ಎನ್ನುವುದು ಈ ಅನ್ಯಾಯ ವ್ಯವಸ್ಥೆಯ ಇನ್ನೊಂದು ಗುರಿಯಾಗಿದೆ. ಸರಕಾರ ತೆಗೆದುಕೊಂಡ ಯಾವುದೇ ಸರ್ವಾಧಿಕಾರಿ ತೀರ್ಮಾನಗಳನ್ನು ಪ್ರಶ್ನಿಸಿದ್ದೇ ಆದರೆ, ನಿಮ್ಮ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತೇವೆ ಎನ್ನುವ ಸಂದೇಶ ಈ ಬುಲ್ಡೋಜರ್ ಅನ್ಯಾಯ ವ್ಯವಸ್ಥೆಯ ಹಿಂದಿದೆ.
ದೇಶದ್ಯಾಂತ ನಡೆಯುತ್ತಿರುವ ನಕಲಿ ಎನ್‌ಕೌಂಟರ್‌ಗಳ ಇನ್ನೊಂದು ವಿಕೃತ ರೂಪ ಇದು. ಅಪರಾಧಿಗಳು ಪೊಲೀಸರ ಮೇಲೆ ದಾಳಿ ನಡೆಸಿದಾಗ ಪೊಲೀಸರು ಅನಿವಾರ್ಯವಾಗಿ ಪ್ರತಿದಾಳಿ ನಡೆಸುವುದನ್ನು ಎನ್‌ಕೌಂಟರ್ ಎಂದು ಕರೆಯಲ್ಪಡುತ್ತದೆ. ಆದರೆ ಅಪರಾಧಿಗಳು ದುರ್ಬಲ ಸಮುದಾಯಕ್ಕೆ ಸೇರಿದ್ದೇ ಆದರೆ ಪೊಲೀಸರೇ ಆರೋಪಿಯನ್ನು ದೋಷಿಯೆಂದು ಘೋಷಿಸಿ ಶಿಕ್ಷೆ ವಿಧಿಸುತ್ತಾರೆ. ಅದನ್ನೇ ನಾವು ನಕಲಿ ಎನ್‌ಕೌಂಟರ್‌ಗಳೆಂದು ಕರೆಯುತ್ತಾ ಬಂದಿದ್ದೇವೆ. ಇಂತಹ ನಕಲಿ ಎನ್‌ಕೌಂಟರ್‌ಗಳನ್ನೇ ಉತ್ತರ ಪ್ರದೇಶದ ಮುಖ್ಯಮಂತ್ರಿ ತನ್ನ ಸರಕಾರದ ಸಾಧನೆಯಾಗಿ ಬಿಂಬಿಸುತ್ತಾ ಬರುತ್ತಿದ್ದಾರೆ. ನಕಲಿ ಎನ್‌ಕೌಂಟರ್ ಸಂದರ್ಭದಲ್ಲಿ, ಪೊಲೀಸರು ಒಂದು ಸುಳ್ಳು ಕತೆಯನ್ನಾದರೂ ಕಟ್ಟುತ್ತಾರೆ. ಆದರೆ ಬುಲ್ಡೋಜರ್ ನ್ಯಾಯ ವ್ಯವಸ್ಥೆಯಲ್ಲಿ, ಅಂತಹ ಯಾವುದೇ ಕತೆ ಕಟ್ಟಲಾಗುವುದಿಲ್ಲ. ಒಂದು ವೇಳೆ ಈ ಅನ್ಯಾಯ ವ್ಯವಸ್ಥೆಯನ್ನು ನ್ಯಾಯಾಲಯ ಗಂಭೀರವಾಗಿ ತೆಗೆದುಕೊಂಡರೆ, ಆರೋಪಿಗಳ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂಬ ನಕಲಿ ದಾಖಲೆಗಳನ್ನು ಸಿದ್ಧಗೊಳಿಸಲಾಗುತ್ತದೆ. ನಿಜಕ್ಕೂ ಬುಲ್ಡೋಜರ್ ಓಡುತ್ತಿರುವುದು ಬಡವರ ವಸತಿಗಳ ಮೇಲಲ್ಲ, ಬದಲಿಗೆ ನ್ಯಾಯವ್ಯವಸ್ಥೆಯ ಮೇಲೆ. ಈ ದೇಶದ ನ್ಯಾಯಾಲಯಗಳನ್ನು ನಿರಾಕರಿಸಿ, ಬುಲ್ಡೋಜರ್‌ಗಳನ್ನೇ ಪರ್ಯಾಯ ನ್ಯಾಯಾಲಯವನ್ನಾಗಿಸುವ ಪ್ರಯತ್ನವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ತನ್ನ ಮೇಲೆಯೇ ಬುಲ್ಡೋಜರ್ ಹರಿಯುತ್ತಿರುವುದನ್ನು ಈ ನ್ಯಾಯ ವ್ಯವಸ್ಥೆ ಅಸಹಾಯಕವಾಗಿ ನೋಡುತ್ತಿದೆ.
ಬುಲ್ಡೋಜರ್ ಎನ್ನುವ ಅನ್ಯಾಯ ವ್ಯವಸ್ಥೆಯನ್ನು ತಡೆಯಲು ನ್ಯಾಯಾಲಯದ ಮುಂದಿರುವುದು ಒಂದೇ ಮಾರ್ಗ. ಪ್ರತಿಭಟನೆ ನಡೆಸಿದ್ದಾರೆ ಅಥವಾ ದಾಂಧಲೆ ಎಸಗಿದ್ದಾನೆಂಬ ನೆಪದಲ್ಲಿ ಯಾರದೇ ಮನೆಗಳನ್ನು ಧ್ವಂಸ ಮಾಡಿದರೂ ರಾಜ್ಯ ಸರಕಾರವನ್ನು ನೇರವಾಗಿ ಅದಕ್ಕೆ ಹೊಣೆ ಮಾಡಬೇಕು. ಅಷ್ಟೇ ಅಲ್ಲ, ಅದಕ್ಕೆ ಆದೇಶ ನೀಡಿದ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು. ಮತ್ತು ಸಂತ್ರಸ್ತರಿಗೆ ದುಪ್ಪಟ್ಟು ಪರಿಹಾರವನ್ನು ನೀಡಲು ಆದೇಶಿಸಬೇಕು. ಇದು ಸಾಧ್ಯವಾಗಿಲ್ಲ ಎಂದಾದರೆ, ಬುಲ್ಡೋಜರ್ ನ್ಯಾಯ ವ್ಯವಸ್ಥೆಯನ್ನೇ ಸಂವಿಧಾನ ಬದ್ಧಗೊಳಿಸಿ, ವಿವಿಧ ಭ್ರಷ್ಟಾಚಾರ, ಕ್ರಿಮಿನಲ್ ಪ್ರಕರಣ, ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಎಲ್ಲ ರಾಜಕಾರಣಿಗಳ ಮನೆಗಳ ಮೇಲೂ ಬುಲ್ಡೋಜರ್ ಓಡಿಸುವುದಕ್ಕೆ ಸಾಧ್ಯವಾಗುವಂತೆ ಕಾನೂನೊಂದನ್ನು ಜಾರಿಗೊಳಿಸಬೇಕು. ಜನಸಾಮಾನ್ಯರ ತಪ್ಪುಗಳಿಗೆ ಅನ್ವಯವಾಗುವ ಬುಲ್ಡೋಜರ್‌ಗಳು ರಾಜಕಾರಣಿಗಳಿಗೂ ಅನ್ವಯವಾದಾಗ ಮಾತ್ರ ಬುಲ್ಡೋಜರ್ ಎನ್ನುವ ಅನ್ಯಾಯದ ವ್ಯವಸ್ಥೆಯನ್ನು ‘ನ್ಯಾಯ ವ್ಯವಸ್ಥೆ’ ಎಂದು ಒಪ್ಪಿಕೊಳ್ಳಬಹುದು.