ಬಸ್ ಟಿಕೆಟ್ ದರ ಏರಿಕೆ: ಕೇಂದ್ರದ ಪರೋಕ್ಷ ಪಾತ್ರವೆಷ್ಟು?
ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ದಿನದಿಂದ, ವಿರೋಧ ಪಕ್ಷಗಳು ‘ಸಾರಿಗೆ ನಿಗಮ ನಷ್ಟದಲ್ಲಿದೆೆ’ ಎಂದು ಗದ್ದಲ ಎಬ್ಬಿಸುತ್ತಾ ಬಂದಿದ್ದವು. ಅವರ ಗುರಿ ಸಾರಿಗೆ ನಿಗಮಗಳ ಉದ್ಧಾರ ಖಂಡಿತ ಆಗಿರಲಿಲ್ಲ. ಸರಕಾರ ಮಹಿಳೆಯರಿಗಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯನ್ನು ವಿಫಲಗೊಳಿಸುವುದು ಉದ್ದೇಶವಾಗಿತ್ತು. ಶಕ್ತಿ ಯೋಜನೆ ಜಾರಿಗೊಂಡ ಮೊದಲ ದಿನವೇ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಹುಯಿಲೆಬ್ಬಿಸತೊಡಗಿದರು. ಆದರೆ ಅಂತಹದೇನೂ ಸಂಬವಿಸದೇ ಇದ್ದಾಗ, ‘ಶಕ್ತಿಯೋಜನೆಯಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತ್ತಿದ್ದಾರೆ’ ಎಂದು ಹಳಹಳಿಸತೊಡಗಿದರು. ಉದೂ ಫಲಿಸದೇ ಇದ್ದಾಗ ‘ಸಾರಿಗೆ ನಿಗಮಗಳು ದಿವಾಳಿಯಾಗಿವೆ...ಸಿಬ್ಬಂದಿಗೆ ವೇತನ ನೀಡುವುದಕ್ಕೂ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಸರಕಾರ ಮಹಿಳೆಯರಿಗೆ ನೀಡಿದ ಉಚಿತ ಪ್ರಯಾಣ ಯೋಜನೆ’ ಎಂದು ರಂಪಾಟ ಶುರು ಹಚ್ಚತೊಡಗಿದರು. ಇದೀಗ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಏರಿಕೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಈ ಏರಿಕೆಯನ್ನು ವಿರೋಧ ಪಕ್ಷಗಳು ಸಂಭ್ರಮಿಸುತ್ತಿದ್ದು, ಸರಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕಿದ ಮೊದಲ ಗೆಲುವು ಎಂಬಂತೆ ವರ್ತಿಸುತ್ತಿವೆೆ. ತನ್ನ ಗ್ಯಾರಂಟಿ ವಿರೋಧಿ ಹೋರಾಟಗಳಿಗೆ ಟಿಕೆಟ್ ದರ ಏರಿಕೆಯನ್ನು ಅಸ್ತ್ರವಾಗಿ ಬಳಸಲು ಮುಂದಾಗಿದೆ.
ಹಾಗೆಂದು ಟಿಕೆಟ್ ದರ ಏರಿಕೆ ನ್ಯಾಯಯುತ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕಾಏಕಿ ಶೇ. 15ರಷ್ಟು ಹೆಚ್ಚಳಗೊಳಿಸಿದರೆ ಅದರ ದುಷ್ಪರಿಣಾಮವನ್ನು ಶ್ರೀಸಾಮಾನ್ಯ ಅನುಭವಿಸಲೇಬೇಕಾಗುತ್ತದೆ. ‘‘ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ, ಕೆಎಸ್ಸಾರ್ಟಿಸಿ ಟಿಕೆಟ್ ದರ ಏರಿಕೆಯಾಗಿ ಐದು ವರ್ಷವಾಗಿದೆ. ಐದು ವರ್ಷದಲ್ಲಿ ಈಗ ಡೀಸೆಲ್ ದರವೂ ತೀವ್ರ ಹೆಚ್ಚಳವಾಗಿದೆ. ಬೆಲೆಯೇರಿಕೆ ಅನಿವಾರ್ಯ’’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರದ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ‘‘ಬೆಲೆಯೇರಿಕೆಗೆ ಶಕ್ತಿ ಯೋಜನೆ ಕಾರಣ. ಮಹಿಳೆಯರಿಗೆ ಉಚಿತ-ಪುರುಷರಿಗೆ ಹೊರೆ ಎಂಬ ನೀತಿಯನ್ನು ಸರಕಾರ ಅನುಸರಿಸುತ್ತಿದೆ’’ ಎಂದು ಆರೋಪಿಸಿದ್ದಾರೆ. ‘‘ಬೆಲೆಯೇರಿಕೆಯ ಮೂಲಕ ಸರಕಾರ ಸುಲಿಗೆ ಮಾಡುತ್ತಿದೆ’’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ಆದರೆ ಸಾರಿಗೆ ಸಚಿವರು, ಈ ಬೆಲೆಯೇರಿಕೆಗೆ ಶಕ್ತಿ ಯೋಜನೆ ಕಾರಣವಲ್ಲ ಎಂದಿದ್ದಾರೆ. ಶಕ್ತಿ ಯೋಜನೆಯಿಂದ ಇಲಾಖೆಗೆ ಲಾಭವಾಗಿದೆ. ಆದರೆ ಬಿಜೆಪಿ ಸರಕಾರ ಸಾವಿರಾರು ಕೋಟಿ ರೂ. ಸಾಲವನ್ನು ಬಿಟ್ಟು ಹೋಗಿರುವುದು ಕೂಡ ಬೆಲೆಯೇರಿಕೆಗೆ ಕಾರಣ. ಹಿಂದಿನ ಸರಕಾರದಲ್ಲಿ ಸಂಬಳದ ಸಮಸ್ಯೆಯಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್ ಟಿಕೆಟ್ ದರ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಸ್ಟಿಕೆಟ್ ದರವನ್ನು ವಿರೋಧಿಸುವುದಕ್ಕಾಗಿ ವಿರೋಧ ಪಕ್ಷಗಳು ಶಕ್ತಿಯೋಜನೆಯನ್ನು ಟೀಕಿಸುತ್ತಿರುವುದೇ ಅವರಿಗೆ ತಿರುಗು ಬಾಣವಾಗುತಿದೆ. ‘ಮಹಿಳೆಯರಿಗೆ ಉಚಿತ-ಪುರುಷರಿಗೆ ಹೊರೆ’ ಎನ್ನುವುದೇ ತರ್ಕಹೀನವಾದದು. ಈ ನಾಡಿನ ಮಹಿಳೆ ಒಬ್ಬ ಪುರುಷನ ಮಗಳು, ತಂಗಿ, ಅಕ್ಕ, ಮಡದಿ ... ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕುಟುಂಬದ ಭಾಗವಾಗಿ ಬೆಸೆದಿರುತ್ತಾಳೆ. ಮಹಿಳೆಯರಿಗೆ ನೀಡುವ ಯಾವುದೇ ಉಚಿತಗಳ ಪರೋಕ್ಷ ಫಲಾನುಭವಿಗಳು ಪುರುಷರೇ ಆಗಿರುತ್ತಾರೆ. ಮಹಿಳೆಯರಿಗೆ ನೀಡುವ ಯಾವುದೇ ಯೋಜನೆಗಳು ಒಂದಿಡೀ ಕುಟುಂಬವನ್ನೇ ಸಬಲೀಕರಿಸುವುದರಿಂದ, ಮಹಿಳೆಯರು-ಪುರುಷರು ಎಂದು ಬೇರ್ಪಡಿಸಿ ನೋಡುವುದು ಸರಿಯಾದ ವಿಧಾನವಲ್ಲ. ಮಹಿಳೆಯರನ್ನು ಸಬಲೀಕರಿಸುವ ಯಾವುದೇ ಯೋಜನೆಗಳ ಲಾಭವನ್ನು ಹಣದ ಮೂಲಕ ಅಳೆಯುವುದು ಸರಿಯಲ್ಲ. ಅದು ಸಮಾಜಕ್ಕೆ ಬೇರೆ ಬೇರೆ ರೂಪಗಳಲ್ಲಿ ಮರಳಿ ಸೇರುವುದು. ಮಹಿಳೆಯರ ಸ್ವಾವಲಂಬೀ ಬದುಕಿಗೆ ಶಕ್ತಿಯೋಜನೆ ನೀಡುತ್ತಿರುವ ಕೊಡುಗೆ ಬಹುದೊಡ್ಡದು. ಇದು ಸಾಮಾಜಿಕ ವಲಯದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತ್ತಿದೆ. ಇಷ್ಟಕ್ಕೂ ಸಾರಿಗೆ ಇಲಾಖೆ ಎನ್ನುವುದು ಸರಕಾರ ನಡೆಸುವ ಉದ್ಯಮ ಅಲ್ಲ. ಅದರ ಉದ್ದೇಶವೇ ಸೇವೆ. ಆದುದರಿಂದ, ಸಾರಿಗೆ ಇಲಾಖೆ ತನ್ನ ಸೇವೆಯ ಉದ್ದೇಶವನ್ನು ಎಷ್ಟರಮಟ್ಟಿಗೆ ಈಡೇರಿಸಿಕೊಂಡಿದೆ ಎನ್ನುವುದು ಪರಿಗಣನೆಗೆ ಬರಬೇಕು. ಇದರ ಜೊತೆ ಜೊತೆಗೇ ಇಲಾಖೆಯ ನಷ್ಟವನ್ನು ಎದುರಿಸಲು ದಾರಿ ಹುಡುಕಬೇಕು.
ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರಲಿಲ್ಲ. ಆಗಲೂ ಸಾರಿಗೆ ಇಲಾಖೆ ಲಾಭದಲ್ಲೇನೂ ಇರಲಿಲ್ಲ. ಈ ಬಾರಿ ಮಹಿಳೆಯರಿಗೆ ಕೊಟ್ಟು ಪುರುಷರಿಂದ ಕಿತ್ತುಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಕನಿಷ್ಠ ಈ ಸರಕಾರ ಕೊಟ್ಟು ಕಿತ್ತುಕೊಳ್ಳುತ್ತಿದೆ. ಆದರೆ ಹಿಂದಿನ ಸರಕಾರ ಬರೇ ಕಿತ್ತುಕೊಳ್ಳುವ ಬಗ್ಗೆಯೋಚಿಸುತ್ತಿತ್ತೇ ಹೊರತು, ಬಡವರಿಗೆ, ಮಹಿಳೆಯರಿಗೆ ಕೊಡುವ ಬಗ್ಗೆ ಯೋಚಿಸಿರಲಿಲ್ಲ. ಆಗ ಕರ್ನಾಟಕದ ಖಜಾನೆಯೇನೂ ತುಂಬಿತುಳುಕುತ್ತಿರಲಿಲ್ಲ. ಆದುದರಿಂದ ಸಾರಿಗೆ ಇಲಾಖೆಯ ನಷ್ಟಗಳನ್ನು ಸರಕಾರದ ವೈಫಲ್ಯವಾಗಿ ಗುರುತಿಸಬೇಕಾಗಿಲ್ಲ. ಆದರೆ ಶೇ. 15ರಷ್ಟು ಒಮ್ಮೆಲೆ ಬೆಲೆಯೇರಿಸುವ ಬದಲು, ಬೇರೆ ವಿಧಾನಗಳಿಂದ ಇದನ್ನು ತುಂಬಿಕೊಳ್ಳಲು ಸಾಧ್ಯತೆಗಳಿರಲಿಲ್ಲವೇ ಎನ್ನುವ ಪ್ರಶ್ನೆಗೆ ಸಚಿವರು ಉತ್ತರಿಸಬೇಕಾಗುತ್ತದೆ. ಹಾಗೆ ನೋಡಿದರೆ, ಇಂದು ಜಿಎಸ್ಟಿ ಹೆಸರಿನಲ್ಲಿ ಕೇಂದ್ರ ಸರಕಾರ ನಡೆಸುತ್ತಿರುವ ಲೂಟಿಯ ಮುಂದೆ, ಕೊಟ್ಟು ಕಿತ್ತುಕೊಳ್ಳುವ ರಾಜ್ಯದ ಸರಕಾರದ ತಂತ್ರ ಎಷ್ಟೋ ವಾಸಿ. ಬೆಲೆಯೇರಿಕೆಯ ಮೂಲಕ ಜನರನ್ನು ಲೂಟಿ ಮಾಡುವುದೇ ರಾಜ್ಯ ಸರಕಾರದ ಉದ್ದೇಶವಾಗಿದ್ದರೆ, ಅದು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹ ಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ರಾಜ್ಯ ಸರಕಾರದ ಆಡಳಿತ ಸಹನೀಯವಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ.
ರಾಜ್ಯ ಸರಕಾರ ಉಚಿತಗಳನ್ನು ನೀಡಿದರೆ ಅದನ್ನೂ ಟೀಕಿಸುವ ವಿರೋಧ ಪಕ್ಷಗಳು, ಕೇಂದ್ರ ಸರಕಾರ ಜನರ ಮೇಲೆ ಹೇರುತ್ತಿರುವ ತೆರಿಗೆಯ ಬಗ್ಗೆ ಯಾಕೆ ಮೌನವಾಗಿವೆೆ? ಇಂದು, ಆರೋಗ್ಯ ವಿಮೆಗೂ ದುಬಾರಿ ಜಿಎಸ್ಟಿಯನ್ನು ಕಟ್ಟಬೇಕಾಗಿದೆ. ಬಡವರ ಮನೆಗಳ ನಿರ್ಮಾಣಗಳ ಮೇಲೂ ಜಿಎಸ್ಟಿ ಹೇರಲಾಗಿದೆ. ಹಳೆಯ ಕಾರುಗಳನ್ನು ಮಾರಬೇಕಾದರೂ, ಅದರಿಂದ ಲಕ್ಷಾಂತರ ರೂಪಾಯಿಯನ್ನು ಜಿಎಸ್ಟಿ ರೂಪದಲ್ಲಿ ಸರಕಾರ ಕಿತ್ತುಕೊಳ್ಳುತ್ತದೆ. ಸರಿ, ಕಿತ್ತುಕೊಂಡ ತೆರಿಗೆಯಲ್ಲಿ ಕರ್ನಾಟಕದ ಪಾಲನ್ನು ಪ್ರಾಮಾಣಿಕವಾಗಿ ನೀಡುತ್ತದೆಯೇ ಎಂದರೆ ಅದೂ ಇಲ್ಲ. ಕರ್ನಾಟಕಕ್ಕೆ ನೀಡಬೇಕಾದ ಪರಿಹಾರದ ಹಣವನ್ನು ಕೇಂದ್ರದ ಜೊತೆಗೆ ಅಧಿಕಾರಯುತವಾಗಿ ಕೇಳುವ ಧೈರ್ಯವಿಲ್ಲದ ಬಿಜೆಪಿ ನಾಯಕರು, ರಾಜ್ಯ ಸರಕಾರ ಬೆಲೆಯೇರಿಕೆ ಮಾಡಬಾರದು ಎಂದು ಒತ್ತಾಯಿಸುವ ನೈತಿಕತೆಯನ್ನು ಹೊಂದಿದ್ದಾರೆಯೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಬಳಿಕವೂ ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಇಳಿಕೆ ಮಾಡಲು ಸಿದ್ಧವಾಗಿಲ್ಲ. ಈ ಸಂದರ್ಭದಲ್ಲೂ ಬಿಜೆಪಿ ನಾಯಕರು ಮೌನವಾಗಿದ್ದರು. ಇವೆಲ್ಲವೂ ಪರೋಕ್ಷವಾಗಿ ಸಾರಿಗೆ ಇಲಾಖೆಯ ನಷ್ಟದ ಮೇಲೆ ಪರಿಣಾಮ ಬೀರಿಲ್ಲವೆ? ಮತ್ತು ಇದರ ವಿರುದ್ಧ ಧ್ವನಿಯೆತ್ತದೆ ಇದೀಗ ರಾಜ್ಯ ಸರಕಾರ ಟಿಕೆಟ್ ದರ ಏರಿಸಿದಾಕ್ಷಣ ಗದ್ದಲ ಎಬ್ಬಿಸುವುದು ಎಷ್ಟು ಸರಿ? ಈ ಬೆಲೆಯೇರಿಕೆಯಲ್ಲಿ ಕೇಂದ್ರ ಸರಕಾರದ ಪಾತ್ರವೂ ಪರೋಕ್ಷವಾಗಿದೆ. ಟಿಕೆಟ್ ದರವನ್ನು ಏರಿಸಲೇ ಬೇಕಾದಂತಹ ಸ್ಥಿತಿಗೆ ರಾಜ್ಯ ಸರಕಾರವನ್ನು ತಳ್ಳಿರುವುದು ಕೇಂದ್ರ ಸರಕಾರವೇ ಆಗಿದೆ. ಆದುದರಿಂದ, ವಿರೋಧ ಪಕ್ಷದ ನಾಯಕರು ಕೇಂದ್ರದಲ್ಲಿರುವ ತಮ್ಮದೇ ಸರಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಮೊದಲು ಪ್ರಶ್ನಿಸಬೇಕಾಗಿದೆ. ಆಗ ಮಾತ್ರ, ಬೆಲೆಯೇರಿಕೆಗೆ ಸಂಬಂಧಿಸಿ ರಾಜ್ಯ ಸರಕಾರವನ್ನು ಟೀಕಿಸುವ ನೈತಿಕತೆಯನ್ನು ಪಡೆದುಕೊಳ್ಳುತ್ತಾರೆ.