ಆರೆಸ್ಸೆಸ್ ಸಂಚುಗಳನ್ನು ಮೀರಿ ಬೆಳೆಯಬಲ್ಲರೆ ವಿಜಯೇಂದ್ರ?
Photo:twitter.com/BYVijayendra
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಆರೆಸ್ಸೆಸ್ ಕೇಂದ್ರಿತವಾದ ಬ್ರಾಹ್ಮಣ್ಯ ಒಳಸಂಚುಗಳ ವಿರುದ್ಧ ಒಂದು ಹಂತದಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ತನ್ನ ಪುತ್ರನ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಅತ್ಯಂತ ಅವಮಾನಕರ ರೀತಿಯಲ್ಲಿ ಕೆಳಗಿಳಿಸಿದ್ದ ಬಿಜೆಪಿಯ ವರಿಷ್ಠರ ವಿರುದ್ಧ ಅದೇ ಪುತ್ರನನ್ನು ರಾಜ್ಯಾಧ್ಯಕ್ಷನನ್ನಾಗಿಸುವ ಮೂಲಕ ಅಷ್ಟೇ ತೀವ್ರವಾಗಿ ಸೇಡು ತೀರಿಸಿಕೊಂಡಿದ್ದಾರೆ. ‘ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಘೋಷಣೆಯನ್ನು’ ಸಂಭ್ರಮಿಸಿದ್ದ ಹಲವು ನಾಯಕರು ವರಿಷ್ಠರ ಈ ಅನಿರೀಕ್ಷಿತ ತೀರ್ಮಾನದಿಂದ ಇಂಗು ತಿಂದ ಮಂಗನಂತಾಗಿದ್ದಾರೆ. ಹಿರಿಯ ನಾಯಕರನ್ನು ಹೊರಗಿಟ್ಟು, ಕಟ್ಟರ್ ಹಿಂದುತ್ವವಾದಿಗಳ ನೇತೃತ್ವದಲ್ಲಿ ಬಿಜೆಪಿಯನ್ನು ಹೊಸದಾಗಿ ಕಟ್ಟುವ ಆರೆಸ್ಸೆಸ್ನ ಯೋಜನೆಗೆ ಸದ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ.
ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಅವರ ರಾಜಕೀಯ ಬದುಕು ಮುಕ್ತಾಯವಾಯಿತು ಎಂದರೆ ಅವರು ತನ್ನ ಪುತ್ರನ ಮೂಲಕ ಮತ್ತೆ ಬಿಜೆಪಿಯ ಬ್ರಾಹ್ಮಣ್ಯದ ಕೆಸರಲ್ಲಿ ಅರಳಿದ ಕಮಲವಾಗಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಒಳಗೊಳಗೇ ಮುಸುಕಿನ ಗುದ್ದಾಟ ನಡೆಸುತ್ತಿರುವ ಸಿ.ಟಿ. ರವಿ, ಈಶ್ವರಪ್ಪ, ಯತ್ನಾಳ್ ಮೊದಲಾದವರೆಲ್ಲ ಇವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಕಿರಿಯನಾದ ಬಿ. ವೈ. ವಿಜಯೇಂದ್ರ ಜೊತೆಗೆ ಹೇಗೆ ಸಹಕರಿಸುತ್ತಾರೆ ಎನ್ನುವುದರ ಆಧಾರದಲ್ಲಿ ರಾಜ್ಯ ಬಿಜೆಪಿಯ ಭವಿಷ್ಯ ನಿಂತಿದೆ.
ಕಳೆದ ವಿಧಾನಸಭಾಚುನಾವಣೆಯ ಸೋಲಿನ ಹೊಣೆಹೊತ್ತು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅವರು ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿಯು ಮುಂದೆ ಗುರು-ಗುರಿ ಎರಡೂ ಇಲ್ಲದೆ ಕಂಡಲ್ಲಿ ಉಂಡಲೆಯುತ್ತಿತ್ತು. ನಿಜಕ್ಕೂ ಬಿಜೆಪಿಯ ಸೋಲಿಗೆ ನಳಿನ್ ಕುಮಾರ್ ಕಟೀಲು ಕಾರಣರಾಗಿರಲೇ ಇಲ್ಲ. ಯಾಕೆಂದರೆ ಅವರೆಂದಿಗೂ ‘ರಾಜ್ಯಾಧ್ಯಕ್ಷರಾಗಿ’ ಕಾರ್ಯ ನಿರ್ವಹಿಸಿರಲೇ ಇಲ್ಲ. ಹೆಸರಿಗಷ್ಟೇ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದೆ ನಿಲ್ಲಿಸಿ, ಅವರ ಹಿಂದಿನಿಂದ ಬಾಣ ಬಿಡುತ್ತಿದ್ದುದು ಆರೆಸ್ಸೆಸ್ ವರಿಷ್ಠರು. ನಳಿನ್ ಕುಮಾರ್ ಕಟೀಲು ಅವರು ‘ಕೇಶವ ಕೃಪಾ’ದ ಸೂತ್ರದ ಗೊಂಬೆಯಾಗಿಯಷ್ಟೇ ಬಳಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಹಲವು ಹಿರಿಯ ನಾಯಕರಿಗೆ ನಿವೃತ್ತಿಯನ್ನು ನೀಡಿ ಅವರ ಜಾಗದಲ್ಲಿ ಹೊಸ ಮುಖಗಳನ್ನು ತರುವ ನಿರ್ಧಾರ ನಳಿನ್ ಕುಮಾರ್ ಕಟೀಲು ಅವರದ್ದಲ್ಲ. ಅದರ ಹಿಂದೆ ಆರೆಸ್ಸೆಸ್ ಮುಖಂಡ ಸಂತೋಷ್, ಪ್ರಹ್ಲಾದ್ ಜೋಷಿಯಂತಹ ಹಿರಿಯ ನಾಯಕರಿದ್ದರು. ಯಡಿಯೂರಪ್ಪ ಅವರ ಹೆಗಲಿಗೆ ಹೆಸರಿಗಷ್ಟೇ ಚುನಾವಣೆಯ ಹೊಣೆಯನ್ನು ಹೊರಿಸಲಾಗಿತ್ತು. ತನ್ನನ್ನು ಬಿಜೆಪಿ ಚುನಾವಣೆಯಲ್ಲಿ ಬಳಸಿ ಎಸೆಯುವ ಪ್ರಯತ್ನ ನಡೆಸುತ್ತಿದೆ ಎನ್ನುವುದು ಗೊತ್ತಿದ್ದ ಕಾರಣಕ್ಕಾಗಿಯೇ ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ತೊಡಗಿರಲಿಲ್ಲ. ಬಿಜೆಪಿಯನ್ನು ರಾಜ್ಯಮಟ್ಟದಲ್ಲಿ ಕಟ್ಟಿ ನಿಲ್ಲಿಸಿದ ತನಗೆ ವರಿಷ್ಠರು ಕೊಟ್ಟದ್ದೇನು ಎನ್ನುವ ನೆನಪು ಅವರಿಗಿತ್ತು. ಈಗಲೂ ಇದೆ. ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ನಡೆದಿತ್ತು. ರಾಜ್ಯದ ಎಲ್ಲ ಹಿರಿಯರನ್ನು ಬದಿಗೆ ಸರಿಸಿ, ಮೋದಿಯ ಹೆಸರಿನಲ್ಲಿ ಚುನಾವಣೆಯನ್ನು ಗೆದ್ದು ಹಿಂದುತ್ವವಾದಿ ಸರಕಾರವೊಂದನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರುವುದು ಆರೆಸ್ಸೆಸ್ನ ಯೋಜನೆಯಾಗಿತ್ತು. ಆದರೆ ಆ ಯೋಜನೆಗೆ ಅತ್ಯಂತ ಹೀನಾಯ ರೀತಿಯಲ್ಲಿ ಹಿನ್ನಡೆಯಾಯಿತು. ನಳಿನ್ ಕುಮಾರ್ ಕಟೀಲು ಹರಕೆಯ ಕುರಿಯಂತೆ ತಮ್ಮ ತಲೆಯನ್ನು ಕೊಟ್ಟರು. ಹಾಗೆ ನೋಡಿದರೆ ಕೊಡುವುದಕ್ಕೆ ಅವರ ಬಳಿ ‘ತಲೆಯೇ’ ಇದ್ದಿರಲಿಲ್ಲ. ಆದುದರಿಂದ ಅವರ ರಾಜೀನಾಮೆ ಬಿಜೆಪಿಯ ಪಾಲಿಗೆ ಒಂದು ವಿಷಯವೇ ಆಗಿರಲಿಲ್ಲ.
ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಬಿಜೆಪಿಯನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಿತ್ತು. ಲಿಂಗಾಯತ ಮತ್ತು ಆರೆಸ್ಸೆಸ್ ಲಾಬಿಗಳ ನಡುವೆ ಶೀತಲ ಸಮರ ನಡೆಯ ತೊಡಗಿತು. ಬ್ರಾಹ್ಮಣ ನಾಯಕನ ಕೈಗೆ ಬಿಜೆಪಿಯ ಚುಕ್ಕಾಣಿ ಕೊಡುವ ಧೈರ್ಯ ಆರೆಸ್ಸೆಸ್ ನಾಯಕರಿಗೆ ಇರಲಿಲ್ಲ. ಆದುದರಿಂದ ತಾವು ಹಾಕಿದ ಬಿಸ್ಕೆಟ್ ತಿಂದು ತಮ್ಮ ಮನೆ ಕಾಯುವ ಶೂದ್ರ ನಾಯಕನ ಕೈಗೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಪ್ರಯತ್ನವನ್ನು ನಡೆಸಿದರು. ಆದರೆ ಅಷ್ಟರಲ್ಲೇ, ಬಿಜೆಪಿಯ ಸೋಮಣ್ಣ, ಯತ್ನಾಳ್, ಯಡಿಯೂರಪ್ಪ ಸೇರಿದಂತೆ ಹಿರಿಯರು ತಮ್ಮನ್ನು ನಿರ್ಲಕ್ಷಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ವರಿಷ್ಠರಿಗೆ ತಲುಪಿಸಿದ್ದರು. ಅದಾಗಲೇ ಹೀನಾಯ ಸ್ಥಿತಿಯಲ್ಲಿರುವ ರಾಜ್ಯ ಬಿಜೆಪಿ, ಹಿರಿಯರ ಈ ಬಂಡಾಯವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಯಡಿಯೂರಪ್ಪರ ತಲೆಗೆ ‘ರಾಷ್ಟ್ರಮಟ್ಟದ ನಾಯಕ’ನ ಟೋಪಿ ಹಾಕಿ ಅವರನ್ನು ರಾಜ್ಯದಿಂದ ದೂರ ಇಡುವ ಪ್ರಯತ್ನದಲ್ಲಿ ವರಿಷ್ಠರು ಯಶಸ್ವಿಯಾಗಿದ್ದರು. ಆದರೆ, ಯಡಿಯೂರಪ್ಪ ತನ್ನ ಪರವಾಗಿ ಮಗನನ್ನು ಮುಂದಿಟ್ಟರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ
ಕಾಲದಲ್ಲಿ ‘ವಿಜಯೇಂದ್ರ ಅವರು ಸರಕಾರದೊಳಗೆ ನಡೆಸುತ್ತಿರುವ ಹಸ್ತಕ್ಷೇಪ ಮತ್ತು ಭಾರೀ ಭ್ರಷ್ಟಾಚಾರವನ್ನು’ ಮುಂದಿಟ್ಟು ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಕೇಂದ್ರದಿಂದ ಐಟಿ ದಾಳಿಯ ಬೆದರಿಕೆಯನ್ನು ಹಾಕಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸಲಾಯಿತು ಎನ್ನುವ ವದಂತಿಗಳಿವೆ. ಇದೀಗ ಮತ್ತೆ ರಾಜ್ಯಾಧ್ಯಕ್ಷನನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದೆಂದರೆ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ತಪ್ಪನ್ನು ವರಿಷ್ಠರು ಒಪ್ಪಿಕೊಂಡಂತೆ. ಯಡಿಯೂರಪ್ಪ ಅವರನ್ನು ಅಂದು ಕೆಳಗಿಳಿಸುವುದಕ್ಕೆ ಸಂಚು ರೂಪಿಸಿದ್ದ ಎಲ್ಲ ನಾಯಕರಿಗೆ ಇದು ನುಂಗಲಾರದ ತುತ್ತು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಲಿಂಗಾಯತ ಸ್ವಾಮೀಜಿಗಳು ವೈದಿಕ ಸಿದ್ಧಾಂತದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತುತ್ತಿದ್ದಾರೆ. ಸ್ವಾಮೀಜಿಯೊಬ್ಬರು ‘ಗಣೇಶನ ನಂಬಿಕೆಗೂ ಲಿಂಗಾಯತ ಧರ್ಮಕ್ಕೂ ಸಂಬಂಧವಿಲ್ಲ’ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇತರ ಸ್ವಾಮೀಜಿಗಳು ಇದಕ್ಕೆ ಧ್ವನಿಗೂಡಿಸಿದ್ದರು. ಲಿಂಗಾಯತ ಧರ್ಮವನ್ನು ವೈದಿಕ ಧರ್ಮ ಈಗಾಗಲೇ ಅರ್ಧ ನುಂಗಿ ಹಾಕಿದೆ. ಲಿಂಗಾಯತ ಧರ್ಮದೊಂದಿಗೆ ಸಂಬಂಧವೇ ಇಲ್ಲದ ವೈದಿಕ ಧರ್ಮವನ್ನು ಅದರೊಳಗೆ ತುರುಕಿಸಲಾಗಿದೆ. ಆರೆಸ್ಸೆಸ್ ವೈದಿಕ ಧರ್ಮದ ತಳಹದಿಯಲ್ಲಿ ನಿಂತಿರುವುದು. ರಾಜ್ಯದಲ್ಲಿ ಲಿಂಗಾಯತ ಧರ್ಮವನ್ನು ಆರೆಸ್ಸೆಸ್ಗೆ ಬಲಿ ಅರ್ಪಿಸಿರುವುದರಲ್ಲಿ ಯಡಿಯೂರಪ್ಪ ಅವರ ಪಾಲು ಬಹುದೊಡ್ಡದು.
ಯಡಿಯೂರಪ್ಪ ಅವರನ್ನು ಪೂರ್ಣ ಪ್ರಮಾಣದಲ್ಲಿ ಎದುರು ಹಾಕಿಕೊಂಡರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ನ ಹಿಂದುತ್ವ ರಾಜಕಾರಣಕ್ಕೆ ಭಾರೀ ಹಿನ್ನಡೆಯನ್ನು ತರಬಹುದು ಎನ್ನುವ ಭಯ ಆರೆಸ್ಸೆಸ್ಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ‘ರಾಮಮಂದಿರ ಉದ್ಘಾಟನೆಯ’ ಹೆಸರಿನಲ್ಲೇ ಎದುರಿಸಲು ಸಿದ್ಧತೆ ನಡೆಸುತ್ತಿರುವ ಹೊತ್ತಿಗೆ ಹಿಂದುತ್ವವಾದಕ್ಕೆ ಕರ್ನಾಟಕದಲ್ಲಿ ಹಿನ್ನಡೆಯಾಗುವುದು ವರಿಷ್ಠರಿಗೆ ಬೇಡವಾಗಿದೆ.
ಆದುದರಿಂದಲೇ ಕೈ ಬಿಟ್ಟ ಯಡಿಯೂರಪ್ಪರನ್ನು ಮತ್ತೆ ರಾಜ್ಯ ಬಿಜೆಪಿ ಕೈ ಹಿಡಿದಿದೆ.
ವಿಜಯೇಂದ್ರ ಪಕ್ಷದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದ್ದಾರೆ ಎನ್ನುವುದರ ಅರ್ಥ, ಭವಿಷ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯ ಹಂತಕ್ಕೆ ಸಮೀಪದಲ್ಲಿದ್ದಾರೆ. ಅಂದರೆ ಬಿಜೆಪಿಯ ಹಿಡಿತ ತಂದೆಯಿಂದ ಮಗನಿಗೆ ಹಸ್ತಾಂತರಗೊಂಡಿದೆ. ಆದರೆ ತಂದೆಗಿದ್ದ ಮುತ್ಸದ್ದಿತನ, ದೂರದೃಷ್ಟಿ, ವಿವೇಕ ಇವುಗಳೆಲ್ಲ ವಿಜಯೇಂದ್ರ ಅವರಿಗೆ ಇದೆ ಎನ್ನುವಂತಿಲ್ಲ. ಬಿಜೆಪಿಯನ್ನು ತಳಸ್ತರದಿಂದ ಕಟ್ಟಿ ಬೆಳೆಸಿದ ಹಲವು ದಶಕಗಳ ರಾಜಕೀಯ ಅನುಭವ ಯಡಿಯೂರಪ್ಪರಿಗಿದೆ. ಅವರು ಪಕ್ಷದೊಳಗಿರುವ ಸಹ ನಾಯಕರ ಒಳಹೊರಗನ್ನು ಅರಿತುಕೊಂಡು ಮುಂದೆ ಹೆಜ್ಜೆ ಇಡುತ್ತಿದ್ದರು. ಆ ಮುತ್ಸದ್ದಿತನ ವಿಜಯೇಂದ್ರ ಅವರಲ್ಲಿ ಎಷ್ಟರಮಟ್ಟಿಗೆ ಇದೆ ಎನ್ನುವ ಆಧಾರದಲ್ಲಿ ಬಿಜೆಪಿಯೊಳಗೆ ಅವರ ಭವಿಷ್ಯ ನಿಂತಿದೆ. ಯಡಿಯೂರಪ್ಪರ ಮುಂದೆ ಹಲ್ಲುಕಿರಿಯುತ್ತಾ, ಕೇಶವಕೃಪಾದ ಒಳಮನೆಯಲ್ಲಿ ಕುಳಿತು ಸಂಚು ರೂಪಿಸುವ ಆರೆಸ್ಸೆಸ್ನ ಬ್ರಾಹ್ಮಣ್ಯ ರಾಜಕೀಯವನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಎದುರಿಸುವುದು ಅಷ್ಟೊಂದು ಸುಲಭವಿಲ್ಲ ಎನ್ನುವುದು ವಿಜಯೇಂದ್ರ ಅವರಿಗೂ ಶೀಘ್ರದಲ್ಲೇ ಮನವರಿಕೆಯಾಗಬಹುದು.