ಜಾತಿ ಗಣತಿ ವರದಿ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಗುರುವಾರ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ರಾಜ್ಯದ ಜಾತಿಗಣತಿ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ. ಅದನ್ನು ಜಾರಿಗೊಳಿಸಬೇಕೋ ಬೇಡವೋ ಎನ್ನುವುದು ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಗಳಿವೆ. ವರದಿ ಮಂಡನೆಗೆ ಮುನ್ನವೇ ಜಾತಿಗಣತಿಯ ಬಗ್ಗೆ ಮೇಲ್‌ಜಾತಿಗಳು ತಕರಾರುಗಳನ್ನು ತೆಗೆದಿವೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಂಘಟನೆಯೊಂದು, ಜಾತಿಗಣತಿ ಜಾರಿಗೊಂಡರೆ ‘ಕರ್ನಾಟಕ ಬಂದ್’ ಆಚರಿಸುವುದಾಗಿ ಬೆದರಿಕೆಯೊಡ್ಡಿದರೆ, ವೀರಶೈವ ಲಿಂಗಾಯತ ಸಂಘಟನೆಗಳೂ ಜಾತಿ ಗಣತಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ. ಕಾಂಗ್ರೆಸ್ ಪಕ್ಷದೊಳಗಿರುವ ಮೇಲ್‌ಜಾತಿಗೆ ಸೇರಿದ ನಾಯಕರು ಜಾತಿ ಗಣತಿಯ ವಿರುದ್ಧ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರೆ, ಹಿಂದುಳಿದ ವರ್ಗಕ್ಕೆ ಸೇರಿರುವ ನಾಯಕರು ಜಾತಿ ಗಣತಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿರುವ ಮೇಲ್‌ಜಾತಿಯ ಸಂಘಟನೆಗಳಿಗೆ, ತಾವು ಯಾಕೆ ವರದಿಯನ್ನು ವಿರೋಧಿಸುತ್ತಿದ್ದೇವೆ ಎನ್ನುವುದು ಸ್ಪಷ್ಟವಿಲ್ಲ. ಈ ವರದಿ ಜಾರಿಯಿಂದ ಲಿಂಗಾಯತ ಮತ್ತು ಒಕ್ಕಲಿಗರ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತದೆ ಎನ್ನುವುದು ಅವರ ಆತಂಕ. ಆದರೆ, ಈ ಆತಂಕಕ್ಕೆ ಕಾರಣವೇನು ಎನ್ನುವ ಬಗ್ಗೆ ಅವರಲ್ಲಿ ಸ್ಪಷ್ಟನೆಗಳಿಲ್ಲ. ಈಗಾಗಲೇ ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರು ತೇಲಿ ಬಿಟ್ಟ ವದಂತಿಯನ್ನೇ ನಂಬಿಕೊಂಡು ಅವರು ವರದಿಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ಅವರೀಗ ಮಾತನಾಡುತ್ತಿರುವುದು ಸೋರಿಕೆಯಾಗಿರುವ ವರದಿಯನ್ನು ಆಧರಿಸಿ. ತಮ್ಮಲ್ಲಿರುವ ವರದಿಯ ವಿವರಗಳು ಅಧಿಕೃತವೋ ಎನ್ನುವುದರ ಬಗ್ಗೆಯೇ ಸ್ಪಷ್ಟವಿಲ್ಲದೇ ಇರುವಾಗ, ಜಾತಿಗಣತಿ ವಿರುದ್ಧ ಕರ್ನಾಟಕ ಬಂದ್ ಆಚರಿಸುವ ಬೆದರಿಕೆ ಒಡ್ಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಏಳುತ್ತದೆ. ಅಧಿಕೃತ ಜಾತಿಗಣತಿ ವರದಿ ಕೈ ಸೇರಿದ ಬಳಿಕ, ಅದು ಎಷ್ಟರಮಟ್ಟಿಗೆ ವೈಜ್ಞಾನಿಕವಾಗಿವೆ ಎನ್ನುವುದನ್ನು ಚರ್ಚಿಸಿ ಒಂದು ವೇಳೆ ಅದರಲ್ಲಿರುವ ಅಂಕಿಅಂಶಗಳಲ್ಲಿ ಏರುಪೇರುಗಳಿದ್ದರೆ ಅದನ್ನು ಜನರ ಮುಂದಿಟ್ಟು, ಹೊಸತಾದ ಸಮೀಕ್ಷೆಗೆ ಒತ್ತಾಯಿಸಬಹುದು. ಆದರೆ, ಬಲಾಢ್ಯ ಜಾತಿಗಳು ಕಾಂತರಾಜು ಸಮೀಕ್ಷೆ ಸರಿಯಾಗಿಲ್ಲ ಎಂಬ ಕಾರಣ ಮುಂದೊಡ್ಡಿ ವಿರೋಧಿಸುತ್ತಿದೆಯೋ ಅಥವಾ ಜಾತಿ ಗಣತಿಯನ್ನೇ ವಿರೋಧಿಸುತ್ತಿದೆಯೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಒಂದು ವೇಳೆ ಜಾತಿ ಗಣತಿಯೇ ಅವುಗಳಿಗೆ ಇಷ್ಟವಿಲ್ಲ ಎಂದಾದರೆ, ಇನ್ನೊಂದು ಸಮೀಕ್ಷೆಯಲ್ಲೂ ಅವು ತಪ್ಪುಗಳನ್ನು ಹುಡುಕುತ್ತವೆ. ಜಾತಿಗಣತಿಯನ್ನು ವಿರೋಧಿಸುವುದು ಎಂದರೆ ಪರೋಕ್ಷವಾಗಿ ಸಂವಿಧಾನವನ್ನು, ನ್ಯಾಯಾಲಯವನ್ನು ವಿರೋಧಿಸಿದಂತೆ ಎನ್ನುವುದನ್ನು ಒಕ್ಕಲಿಗ ಮತ್ತು ವೀರಶೈವಲಿಂಗಾಯತ ನಾಯಕರು ಅರಿತುಕೊಳ್ಳಬೇಕಾಗಿದೆ. ಜಾತಿ ಗಣತಿ ಬೇಡ ಎನ್ನುವವರು ಈ ನೆಲದಲ್ಲಿ ಮೇಲು ಕೀಳು ಎನ್ನುವ ಜಾತಿ ಅಸಮಾನತೆ ಶಾಶ್ವತವಾಗಿ ಅಸ್ತಿತ್ವದಲ್ಲಿರಬೇಕು ಎಂದು ಬಯಸುವವರು. ಆದುದರಿಂದ, ತಮ್ಮ ವಿರೋಧ ಯಾವುದಕ್ಕೆ ಎನ್ನುವುದರ ಬಗ್ಗೆ ಈ ಸಂಘಟನೆಗಳಿಗೆ ಸ್ಪಷ್ಟತೆಯಿರಬೇಕು. ಬಿಜೆಪಿ ಮತ್ತು ಸಂಘಪರಿವಾರ ಜಾತಿ ಗಣತಿಯನ್ನೇ ಒಳಗಿಂದೊಳಗೆ ವಿರೋಧಿಸುತ್ತಿವೆ. ಯಾಕೆಂದರೆ ಜಾತಿ ಅಸಮಾನತೆ ಅವರು ನಂಬಿದ ಸಿದ್ಧಾಂತವಾಗಿದೆ. ಅದಕ್ಕಾಗಿ ಮೇಲ್‌ಜಾತಿಗೆ ಸೇರಿದ ಕೆಲವು ಸಂಘಟನೆಗಳ ನಾಯಕರನ್ನು ದುರುಪಯೋಗಗೊಳಿಸುತ್ತಿವೆ. ಒಂದು ರೀತಿಯಲ್ಲಿ, ಆರೆಸ್ಸೆಸ್ ತೋಡಿದ ಖೆಡ್ಡಾಕ್ಕೆ ಈ ಜಾತಿ ಸಂಘಟನೆಯ ನಾಯಕರು ಬೀಳಲು ಮುಂದಾಗಿದ್ದಾರೆ.
ಜಾತಿ ಗಣತಿಯ ಮೂಲಕ ಸಿದ್ದರಾಮಯ್ಯ ಅವರು ಸಮಾಜವನ್ನು ವಿಚ್ಛಿದ್ರಗೊಳಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಇದು ಇನ್ನೊಂದು ಅಪ್ಪಟ ಸುಳ್ಳಾಗಿದೆ. ಜಾತಿ ಗಣತಿಯನ್ನು ನಿರ್ದೇಶಿಸಿರುವುದು ಸಿದ್ದರಾಮಯ್ಯ ಅಲ್ಲ, ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಎನ್ನುವ ಪ್ರಾಥಮಿಕ ಅರಿವೂ ಕುಮಾರಸ್ವಾಮಿಯವರಿಗೆ ಇಲ್ಲದೇ ಇರುವುದು ವಿಪರ್ಯಾಸವಾಗಿದೆ. ಹಿಂದುಳಿದ ವರ್ಗಕ್ಕೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಸಂದರ್ಭದಲ್ಲಿ, ಸೂಕ್ತ ದತ್ತಾಂಶಗಳು ಇಲ್ಲದಿರುವುದನ್ನು ಮುಂದೊಡ್ಡಿ ಸುಪ್ರೀಂಕೋರ್ಟ್ ಮೀಸಲಾತಿಯನ್ನು ಎತ್ತಿ ಹಿಡಿಯಲು ಹಿಂಜರಿಯಿತು. ಇಂದಿಗೂ ಬ್ರಿಟಿಷರ ಕಾಲದ ದತ್ತಾಂಶಗಳ ಆಧಾರದಲ್ಲಿ ಮೀಸಲಾತಿಯನ್ನು ನಿರ್ಧರಿಸಲಾಗುತ್ತದೆ. ಇದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಕೇಳಿದ್ದು ಸುಪ್ರೀಂಕೋರ್ಟ್. ಮೀಸಲಾತಿಯ ಅನುಷ್ಠಾನವಾಗಬೇಕಾದರೆ ಮೊದಲು ಅಧಿಕೃತ ದತ್ತಾಂಶಗಳನ್ನು ತನ್ನಿ ಎಂದು ಹೇಳಿದ ಕಾರಣಕ್ಕಾಗಿ ದೇಶಕ್ಕೆ ಜಾತಿ ಗಣತಿಯನ್ನು ನಡೆಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಅಧಿಕೃತ ದತ್ತಾಂಶಗಳಿಲ್ಲದೆ ಮೀಸಲಾತಿಯನ್ನು ನ್ಯಾಯಯುತಗೊಳಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕರ್ನಾಟಕ ಜಾತಿ ಗಣತಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿತು. ಇದರ ಬೆನ್ನಿಗೇ ಬಿಹಾರ ಕೂಡ ಜಾತಿಗಣತಿಗೆ ಮುಂದಾಯಿತು. ಇದೀಗ ಬಿಹಾರದಲ್ಲಿ ಜಾತಿಗಣತಿ ವರದಿ ಮಂಡನೆಯಾಗಿದ್ದು, ಕರ್ನಾಟಕದಲ್ಲಿ ಮಾತ್ರ ಕೆಲವು ಹಿತಾಸಕ್ತಿಗಳು ಮಂಡನೆಗೆ ಅಡ್ಡಿಯುಂಟು ಮಾಡುತ್ತಿವೆ.
ಜಾತಿ ಈ ದೇಶದ ವಾಸ್ತವ. ಈ ದೇಶದ ಹಿಂದುಳಿದಿರುವಿಕೆಯ ಹಿಂದೆ ಜಾತಿ ಅಸಮಾನತೆಯ ಕೊಡುಗೆ ದೊಡ್ಡದು. ಮೀಸಲಾತಿಯ ಮೂಲಕ ಎಲ್ಲ ಶೋಷಿತ ಸಮುದಾಯಗಳಿಗೆ ನ್ಯಾಯ ನೀಡಬೇಕಾದರೆ, ಆಯಾ ಜಾತಿಗಳ ಜನಸಂಖ್ಯೆ, ಅವುಗಳ ಸ್ಥಿತಿಗತಿಗಳು ಏನು ಎನ್ನುವುದು ಬಹಿರಂಗವಾಗಬೇಕಾಗಿದೆ. ಜಾತಿ ಗಣತಿಯು ಬರೇ ಜಾತಿಗಳ ಜನಸಂಖ್ಯೆ ವಿವರಗಳನ್ನಷ್ಟೇ ನೀಡುವುದಲ್ಲ. ಮುಖ್ಯವಾಹಿನಿಗೆ ಅಪರಿಚಿತವಾಗಿರುವ ೩೦೦ಕ್ಕೂ ಹೆಚ್ಚು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿವರಗಳನ್ನು ಇದು ಬಹಿರಂಗಪಡಿಸುತ್ತದೆ ಮತ್ತು ಸರಕಾರ ನೀಡುತ್ತಾ ಬಂದಿರುವ ಮೀಸಲಾತಿ ಸವಲತ್ತುಗಳಿಂದ ಇವರೆಲ್ಲರೂ ವಂಚಿತರಾಗುವ ಮೂಲಕ ಹೇಗೆ ಅಭಿವೃದ್ಧಿಯಿಂದ ಹೊರಗೆ ತಳ್ಳಲ್ಪಟ್ಟಿದ್ದಾರೆ ಎನ್ನುವುದು ಈ ವರದಿಯಿಂದ ಗೊತ್ತಾಗುತ್ತದೆ. ಒಂದಲ್ಲ ಹತ್ತು ಬಾರಿ ಗಣತಿ ನಡೆಸಿದರೂ, ನಾವು ಈ ವಾಸ್ತವವನ್ನು ಮುಖಾಮುಖಿಯಾಗಲೇಬೇಕಾಗುತ್ತದೆ. ಕಾಂತರಾಜು ವರದಿಯನ್ನು ವಿರೋಧಿಸಿ ಇನ್ನೊಂದು ಹೊಸ ಸಮೀಕ್ಷೆಯನ್ನು ನಿರೀಕ್ಷಿಸುವವರು ಇದನ್ನು ಅರ್ಥಮಾಡಿಕೊಳ್ಳಲೇಬೇಕು. ನಿಜಕ್ಕೂ ಜಾತಿ ಗಣತಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಎಡವಟ್ಟುಗಳಾಗಿದ್ದರೆ ಅದನ್ನು ತಿದ್ದಿಕೊಳ್ಳಲು ಸರಕಾರ ಮುಂದಾಗಬೇಕೇ ಹೊರತು, ಮೊಸರಲ್ಲಿ ಕಲ್ಲು ಹುಡುಕುವವರ ಮಾತುಗಳಿಗೆ ಅಂಜಿ, ಅವರ ಬೆದರಿಕೆಗೆ ಮಣಿದು ಜಾತಿ ಗಣತಿಯನ್ನೇ ಮೂಲೆಗುಂಪು ಮಾಡಬಾರದು. ಜಾತಿಗಣತಿಯನ್ನು ವಿರೋಧಿಸುವವರು, ಈ ದೇಶದ ಸಂವಿಧಾನವನ್ನು, ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನವನ್ನು ವಿರೋಧಿಸುತ್ತಿದ್ದಾರೆ. ಅವರು ಈ ದೇಶದ ತಳಸ್ತರ ಸಮುದಾಯದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದಾರೆ. ಅಂತಹ ಶಕ್ತಿಗಳ ವಿರುದ್ಧ ಈ ನಾಡಿನ ಹಿಂದುಳಿದವರ್ಗಗಳು ಸಂಘಟಿತವಾಗಬೇಕಾಗಿದೆ. ಜಾತಿಗಣತಿ ವರದಿ ಪರಿಣಾಮಕಾರಿಯಾಗಿ ಜಾರಿಯಾಗುವ ಮೂಲಕ, ಕರ್ನಾಟಕ ದೇಶಕ್ಕೆ ಮಾದರಿ ರಾಜ್ಯವಾಗಬೇಕಾಗಿದೆ.