ಜಾತಿವಾರು ಜನಗಣತಿ: ವಿರೋಧಿಸುವವರ ಸಮಸ್ಯೆಯೇನು?
Photo: fb.com/cmofkarnataka
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊನೆಗೂ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2015’ ದತ್ತಾಂಶ ವರದಿಯನ್ನು ಅದೊಂದು ಸ್ಫೋಟಕ ವಸ್ತುವೋ ಎಂಬಂತೆ ಬಹಳ ಜಾಗರೂಕತೆಯಿಂದ ಸರಕಾರ ಸ್ವೀಕರಿಸಿದೆ. ಬಿಹಾರದಲ್ಲಿ ಜಾತಿ ಗಣತಿ ಆರಂಭಕ್ಕೆ ಮುನ್ನವೇ ಕರ್ನಾಟಕದಲ್ಲಿ ಆರಂಭವಾಯಿತಾದರೂ, ವರದಿಯನ್ನು ಸ್ವೀಕರಿಸಿ ಅದನ್ನು ಜಾರಿಗೊಳಿಸುವ ವಿಷಯದಲ್ಲಿ ಬಿಹಾರ ಮೊದಲಿಗನಾಯಿತು. ಬಿಹಾರದ ಪಾಲಿಗೆ ಜಾತಿ ಗಣತಿಯನ್ನು ಸ್ವೀಕರಿಸಿ ವರದಿ ಬಹಿರಂಗಗೊಳಿಸುವುದು ಸಾಧನೆಯ ಭಾಗವಾಗಿದ್ದರೆ, ಕರ್ನಾಟಕ ಅದೇನೋ ಪ್ರಮಾದವೆಸಗುತ್ತಿದ್ದೇನೆ ಎನ್ನುವ ಆತಂಕದೊಂದಿಗೆ ವರದಿಯನ್ನು ಸ್ವೀಕರಿಸಿದೆ. ಇಲ್ಲಿರುವ ಬಲಾಢ್ಯ ಜಾತಿಗಳ ಆಕ್ಷೇಪವೇ ಇದಕ್ಕೆ ಕಾರಣವೆನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ವರದಿಯ ಬಗ್ಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಕೆಲವು ನಾಯಕರು ಈಗಾಗಲೇ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ, ಕಾಂಗ್ರೆಸ್ನೊಳಗಿರುವ ಒಕ್ಕಲಿಗ, ಲಿಂಗಾಯತ ಸಮುದಾಯದ ನಾಯಕರು ಕೂಡ ಆಳದಲ್ಲಿ ವರದಿಯ ಜೊತೆಗೆ ಸಹಮತವನ್ನು ಹೊಂದಿಲ್ಲ. ಈ ವರದಿಯ ಅಗತ್ಯ ಮತ್ತು ಅನಿವಾರ್ಯವನ್ನು ತಮ್ಮ ಸಮುದಾಯದ ಜನರಿಗೆ ಮನವರಿಕೆ ಮಾಡಬೇಕಾಗಿರುವ ಕಾಂಗ್ರೆಸ್ ನಾಯಕರು, ತಮ್ಮ ಸಮುದಾಯದ ಅಸಮಾಧಾನವನ್ನು ಎದುರಿಸುವ ಧೈರ್ಯವಿಲ್ಲದೆ ಅವರ ಜೊತೆಗೆ ನಿಂತು ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಸರಕಾರ ವರದಿ ಸ್ವೀಕರಿಸಿದ ಬೆನ್ನಿಗೇ ಬಿಜೆಪಿ ಮತ್ತೆ ಈ ಗಣತಿಯ ವಿರುದ್ಧ ಹೇಳಿಕೆಗಳನ್ನು ನೀಡಲು ಶುರು ಹಚ್ಚಿದೆ. ಗಣತಿಯು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿಯ ನಾಯಕ ಬಸವರಾಜ ಬೊಮ್ಮಾಯಿಯವರು ಹೇಳಿಕೆ ನೀಡಿದ್ದಾರೆ.
ಬಿಜೆಪಿ ಆಡಳಿತ ಕಾಲದಲ್ಲಿ ಕರ್ನಾಟಕದಲ್ಲಿ ನಡೆದಿರುವ ಅಶಾಂತಿ, ಸಮಾಜದಲ್ಲಿ ನಡೆದಿರುವ ಅರಾಜಕತೆ ಇವೆಲ್ಲಕ್ಕೂ ಈ ಸಮೀಕ್ಷೆ ಕಾರಣ ಎಂದು ಬೊಮ್ಮಾಯಿ ಹೇಳುತ್ತಾರೆಯೆ? ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ಧರ್ಮೀಯರ ಏಳಿಗೆ, ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ. ಜಾತಿ ಗಣತಿಯು ಹಿಂದೂ ಧರ್ಮದಲ್ಲಿರುವ ಅತ್ಯಂತ ಶೋಷಿತ ಸಮುದಾಯವನ್ನು ಗುರುತಿಸಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಆ ಕಾರಣಕ್ಕಾಗಿಯೇ ಸರಕಾರ ಈ ಗಣತಿಯನ್ನು ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಎಂದು ಕರೆದಿದೆ. ಯಾವ ಯಾವ ಜಾತಿಗಳ ಸಂಖ್ಯೆ ಎಷ್ಟು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅವುಗಳು ಎಷ್ಟು ಪ್ರಗತಿಯನ್ನು ಸಾಧಿಸಿವೆ ಎನ್ನುವುದನ್ನು ಈ ವರದಿ ಬಹಿರಂಗಗೊಳಿಸುತ್ತದೆ. ಅದರ ಆಧಾರದಲ್ಲಿ ಮೀಸಲಾತಿಯನ್ನು ಮತ್ತು ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಹಂಚುವುದಕ್ಕೆ ಸಹಕಾರಿಯಾಗುತ್ತದೆ. ಇದರಿಂದ ಅಂತಿಮವಾಗಿ ಹಿಂದೂಧರ್ಮದೊಳಗಿರುವ ತಳಸ್ತರದ ಬಡವರಿಗೆ, ಶೋಷಿತರಿಗೆ ನ್ಯಾಯ ಸಿಗುತ್ತದೆ. ಅನ್ಯಾಯ, ಅಸಮಾನತೆಯಿಂದ ಒಡೆದು ಹೋಗಿರುವ ಸಮಾಜವನ್ನು ಈ ಸಮೀಕ್ಷೆ ಅಭಿವೃದ್ಧಿಯ ಮೂಲಕ ಜೋಡಿಸುತ್ತದೆ. ಆದುದರಿಂದ ಹಿಂದೂಧರ್ಮದೊಳಗಿನ ಬಡತನ, ಶೈಕ್ಷಣಿಕ, ಸಾಮಾಜಿಕ ಕುಂದುಕೊರತೆಗಳನ್ನು ಅರಿಯುವುದಕ್ಕಾಗಿ ಸಮೀಕ್ಷೆಯನ್ನು ಜಾರಿಗೊಳಿಸಲು ಬಿಜೆಪಿ ಮುಂಚೂಣಿಯಲ್ಲಿ ನಿಲ್ಲಬೇಕಾಗಿತ್ತು. ತಮ್ಮ ಅಧಿಕಾರಾವಧಿಯಲ್ಲಿಯೇ ಈ ಸಮೀಕ್ಷೆಯನ್ನು ಬಿಡುಗಡೆಗೊಳಿಸಿ ಕನಿಷ್ಠ ಹಿಂದೂಧರ್ಮದ ಮೇಲಿನ ಪ್ರೀತಿಯನ್ನಾದರೂ ಸಾಬೀತು ಪಡಿಸಬೇಕಾಗಿತ್ತು.
ಕೆಲವರಿಗೆ ಈ ಸಮೀಕ್ಷೆ ಜಾರಿಯಾಗುವುದು ಬೇಡ. ಯಾಕೆಂದರೆ ಇದು ಅಂಗೀಕಾರವಾದರೆ ಯಾವ ಯಾವ ಜಾತಿಗಳು ಹಿಂದುಳಿದಿವೆ ಮತ್ತು ಅವುಗಳ ಸ್ಥಿತಿಗತಿಗಳು ಏನು ಎನ್ನುವುದು ಬಹಿರಂಗವಾಗಿ ಅವುಗಳ ಉದ್ಧಾರಕ್ಕೆ ಸರಕಾರ ಮುಂದಾಗಬೇಕಾಗುತ್ತದೆ. ಇದು ಮುಖ್ಯವಾಗಿ ಆರೆಸ್ಸೆಸ್ಗೆ ಇಷ್ಟವಿಲ್ಲ. ಹಿಂದೂಧರ್ಮದಲ್ಲಿ ಅತ್ಯಂತ ಕೆಳಸ್ತರದಲ್ಲಿರುವವರು ದುರ್ಬಲರಾಗಿಯೇ ಇದ್ದು, ಮೇಲ್ಜಾತಿಯ ಸೇವೆ ಮಾಡಿಕೊಂಡಿರಬೇಕು ಎನ್ನುವುದು ಅದರ ಉದ್ದೇಶ. ತನ್ನ ಉದ್ದೇಶವನ್ನು ಆರೆಸ್ಸೆಸ್ ಸಾಧಿಸಿಕೊಳ್ಳಲು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವನ್ನು ದಾರಿ ತಪ್ಪಿಸುತ್ತಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೂ ಈ ಸಮೀಕ್ಷೆಯಿಂದ ಲಾಭಗಳಿವೆ. ಇಂದಿಗೂ ರಾಜ್ಯದಲ್ಲಿ ಈ ಜಾತಿ ಗಣತಿಯ ವಿರುದ್ಧ ಬ್ರಾಹ್ಮಣ ಸಮುದಾಯ ತುಟಿಬಿಚ್ಚಿಲ್ಲ.
ದುರದೃಷ್ಟವಶಾತ್ ವಿಲನ್ಗಳಾಗುತ್ತಿರುವುದು ಲಿಂಗಾಯತ, ಒಕ್ಕಲಿಗ ಸಮುದಾಯದ ಕೆಲವು ನಾಯಕರು ಮಾತ್ರ. ಹಾಗೆ ನೋಡಿದರೆ ಶೇ. 10 ಮೀಸಲಾತಿಯನ್ನು ಬ್ರಾಹ್ಮಣ ಸಮುದಾಯ ಯಾವ ಹೋರಾಟ, ಚಳವಳಿಗಳಿಲ್ಲದೆಯೇ ತನ್ನದಾಗಿಸಿಕೊಂಡಿತು. ಆವರೆಗೆ ಮೀಸಲಾತಿಯನ್ನು ವಿರೋಧಿಸಿಕೊಂಡು ಬಂದಿದ್ದ, ಮೀಸಲಾತಿಯಿಂದ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿಕೆ ನೀಡುತ್ತಾ ಬಂದಿದ್ದ ಆರೆಸ್ಸೆಸ್ ನಾಯಕರು ಕೂಡ ಮೇಲ್ಜಾತಿ ಬಡವರಿಗೆ ಶೇ. 10 ಮೀಸಲಾತಿ ನೀಡಿದಾಗ ಅದನ್ನು ವಿರೋಧಿಸಲಿಲ್ಲ. ‘ಈ ಮೀಸಲಾತಿಯಿಂದ ದೇಶದ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ. ಆದುದರಿಂದ ಈ ಮೀಸಲಾತಿ ನಮಗೆ ಬೇಡ’ ಎಂದು ಒಬ್ಬನೇ ಒಬ್ಬ ತಿರಸ್ಕರಿಸಲಿಲ್ಲ. ಈಗಲೂ ಅಷ್ಟೇ. ಜಾತಿ ಗಣತಿಯನ್ನು ಆಳದಲ್ಲಿ ವಿರೋಧಿಸುತ್ತಿರುವ ಆರೆಸ್ಸೆಸ್ ಆ ವಿರೋಧಕ್ಕೆ ಬಳಸುತ್ತಿರುವುದು ಹಿಂದುಳಿದ ವರ್ಗವನ್ನೇ. ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಜಾತಿಗಣತಿಯ ಬಗ್ಗೆ ತಪ್ಪು ಮಾಹಿತಿಯನ್ನು ಹಂಚುತ್ತಿದ್ದಾರೆೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ಪಕ್ಷದೊಳಗಿರುವ ಮುಖಂಡರೂ ಈ ತಪ್ಪು ಮಾಹಿತಿಗಳಿಗೆ ಬಲಿಯಾಗಿ ಅದರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು.
ಸರಕಾರ ಗಣತಿಯನ್ನು ಸ್ವೀಕರಿಸಿದ ಬೆನ್ನಿಗೇ ಕಾಂಗ್ರೆಸ್ನ ಮುಖಂಡರೊಬ್ಬರು, ತಮ್ಮ ಸಮುದಾಯದ ಜನಸಂಖ್ಯೆ ಬಗ್ಗೆ ತಪ್ಪು ಮಾಹಿತಿಗಳಿವೆ ಎಂದು ಹೇಳುತ್ತಿದ್ದಾರೆ. ವರದಿಯನ್ನು ಸ್ವೀಕರಿಸಲಾಗಿದೆಯಷ್ಟೇ. ಇನ್ನೂ ಅದರೊಳಗಿರುವ ಮಾಹಿತಿಗಳನ್ನು ಬಹಿರಂಗಗೊಳಿಸಲಾಗಿಲ್ಲ. ಅಷ್ಟರಲ್ಲೇ ಸರಕಾರದ ಭಾಗವಾಗಿರುವ ಕಾಂಗ್ರೆಸ್ನಾಯಕರೇ ಆ ವರದಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ? ಆದುದರಿಂದ ಮೊತ್ತ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮೀಕ್ಷೆಯ ಅಗತ್ಯದ ಬಗ್ಗೆ ತಮ್ಮ ಸರಕಾರದೊಳಗಿರುವ ಸಚಿವರು, ಶಾಸಕರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಬಿಜೆಪಿ ತೋಡಿದ ಹೊಂಡಕ್ಕೆ ಬಿದ್ದು ಅದರೊಳಗಿಂದ ಆರ್ತನಾದ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಮೊದಲು ಮೇಲಕ್ಕೆತ್ತುವ ಪ್ರಯತ್ನ ನಡೆಸಬೇಕು. ಜಾತಿವಾರು ಜನಗಣತಿಯ ಕುರಿತಂತೆ ಯಾವ ಕೀಳರಿಮೆಯೂ ಇಲ್ಲದೆ ಆತ್ಮವಿಶ್ವಾಸದಿಂದ ಅದನ್ನು ಸಂಪುಟದ ಮುಂದಿಡಬೇಕು. ಇನ್ನು ಅಂಕಿಅಂಶಗಳಲ್ಲಿ ಲೋಪಗಳು ಇಲ್ಲದೇ ಇರುವುದು ಸಾಧ್ಯವಿಲ್ಲ. ಸಮೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಕೆಲವರು ಅಂದಾಜಿನ ಮೇಲೆ ವರದಿಗಳನ್ನು ಸಿದ್ಧಪಡಿಸಿದ್ದಾರೆ ಎಂಬ ಆರೋಪಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಅಂತಹ ಆರೋಪಗಳಿಗೆ ಅವರು ಸರಿಯಾದ ರೀತಿಯ ದಾಖಲೆಗಳನ್ನು ಒದಗಿಸಬೇಕು. ವರದಿ ಬಹಿರಂಗವಾಗುವ ಮೊದಲೇ ‘ಸಮಸ್ಯೆ’ಗಳಿವೆೆ ಎಂದು ಗದ್ದಲ ಎಬ್ಬಿಸಿದರೆ, ಆ ಗದ್ದಲ ಎಬ್ಬಿಸಿದವರಲ್ಲೇ ನಿಜವಾದ ಸಮಸ್ಯೆಗಳಿವೆ. ಯಾಕೆಂದರೆ ಅವರು ‘ಸಮಸ್ಯೆಗಳಿವೆ’ ಎಂದು ವರದಿಯನ್ನು ವಿರೋಧಿಸುತ್ತಿರುವುದಲ್ಲ. ವರದಿಯೇ ಅವರಿಗೆ ಸಮಸ್ಯೆಯಾಗಿದೆ. ಯಾಕೆಂದರೆ ವರದಿ ಜಾರಿಗೊಂಡರೆ ಅದರಿಂದ ಶೋಷಿತ ಸಮುದಾಯವನ್ನು ಗುರುತಿಸಿ ಅವರಿಗೆ ನ್ಯಾಯವನ್ನು ನೀಡುವ ಪ್ರಯತ್ನ ನಡೆಯುತ್ತದೆ. ಆ ಪ್ರಯತ್ನವೇ ಇವರ ನಿಜವಾದ ಸಮಸ್ಯೆಯಾಗಿದೆ.