ವಿವಿಗಳ ನಿಯಂತ್ರಣಕ್ಕೆ ಕೇಂದ್ರದ ಮಸಲತ್ತು

ರಾಜ್ಯಗಳ ಸ್ವಾಯತ್ತತೆ ಮೇಲೆ ನಿರಂತರವಾಗಿ ದಾಳಿ ನಡೆಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಂದರೆ ಎನ್ಡಿಎ ಸರಕಾರ ಒಕ್ಕೂಟ ವ್ಯವಸ್ಥೆಯನ್ನು ಕ್ರಮೇಣ ನಿಸ್ಸತ್ವಗೊಳಿಸಲು ಮುಂದಾಗಿದೆ. ಒಂದೆಡೆ ಶಾಲಾ ಪಠ್ಯಪುಸ್ತಕಗಳನ್ನು ಹಂತ ಹಂತವಾಗಿ ಕೋಮುವಾದೀಕರಣಗೊಳಿಸುತ್ತಿದ್ದರೆ, ಇನ್ನೊಂದೆಡೆ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಳ್ಳಲು ನಿಯಮಾವಳಿಗಳನ್ನು ಬದಲಿಸಲು ಹೊರಟಿದೆ. ಇದರಿಂದ ಈ ವರೆಗೆ ರಾಜ್ಯಗಳಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಅನುದಾನ ಆಯೋಗವು (ಯುಜಿಸಿ) ಇತ್ತೀಚೆಗೆ ತಂದ ನಿಯಮಾವಳಿಗಳ ಪ್ರಕಾರ ಇನ್ನು ಮುಂದೆ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ವರೂಪ ಸಂಪೂರ್ಣವಾಗಿ ಬದಲಾಗಲಿದೆ.ಇದು ಅನುಷ್ಠಾನಕ್ಕೆ ಬಂದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳಿಗೆ ಯಾವುದೇ ಅಧಿಕಾರವಿಲ್ಲದಂತಾಗುತ್ತದೆ.
ಈವರೆಗೆ ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿದ್ದ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ ಕುಲಾಧಿಪತಿಗಳಿಗೆ ಮುಕ್ತ ಹಾಗೂ ಅಪರಿಮಿತ ಅಧಿಕಾರವನ್ನು ನೀಡಲಾಗುತ್ತದೆ. ಕುಲಪತಿಗಳ ನೇಮಕದ ಶೋಧನಾ ಸಮಿತಿಯಲ್ಲಿ ರಾಜ್ಯ ಸರಕಾರದ ಯಾವ ಪ್ರತಿನಿಧಿಗಳೂ ಇರುವುದಿಲ್ಲ. ರಾಜ್ಯದ ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾಗಿರುತ್ತಾರೆ. ಈ ರಾಜ್ಯಪಾಲರನ್ನು ಕೇಂದ್ರ ಸರಕಾರವೇ ನೇಮಕ ಮಾಡುವುದರಿಂದಾಗಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕವನ್ನು ಕೇಂದ್ರ ಸರಕಾರವೇ ಮಾಡಿದಂತಾಗುತ್ತದೆ. ಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರಕ್ಕೆ ಯಾವುದೇ ಪಾತ್ರವಿರುವುದಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲ ಇದು ಸಂವಿಧಾನಕ್ಕೆ ಮಾಡಿದ ಅಪಚಾರವಾಗುತ್ತದೆ.
ಯುಜಿಸಿಯ ಕರಡು ನಿಯಮಾವಳಿಗಳ ಪ್ರಕಾರ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ಸ್ವರೂಪವನ್ನು ಬದಲಿಸಲಾಗಿದೆ.ಇನ್ನು ಮುಂದೆ ಕುಲಪತಿಗಳಾಗಲು ಪಿಎಚ್.ಡಿ. ಪದವಿಯಾಗಲಿ, ಬೋಧನೆಯ ಅನುಭವವಾಗಲಿ ಅಗತ್ಯವಿಲ್ಲ ಮತ್ತು ಉದ್ಯಮ, ಆಡಳಿತ, ಇನ್ನಾವುದೇ ಕ್ಷೇತ್ರದ ವ್ಯಕ್ತಿ ಕುಲಪತಿಯಾಗಿ ನೇಮಕವಾಗಲು ಯಾವುದೇ ಅಭ್ಯಂತರವಿಲ್ಲ. ಬೋಧಕರ ನೇಮಕ ಹಾಗೂ ಭಡ್ತಿಗೆ ಸಂಬಂಧಿಸಿದಂತೆ ಈಗ ಇರುವ ಅರ್ಹತೆಯ ಮಾನದಂಡಗಳು ಬದಲಾಗಲಿವೆ. ಬಿಜೆಪಿ ಹಾಗೂ ಒಟ್ಟಾರೆ ಸಂಘ ಪರಿವಾರದ ಸೈದ್ಧಾಂತಿಕ ಹಿನ್ನಲೆಯ ವ್ಯಕ್ತಿ ಯಾವುದೇ ವಿದ್ಯಾರ್ಹತೆಯನ್ನು ಹೊಂದಿರದಿದ್ದರೂ ಕುಲಾಧಿಪತಿಗಳ ನೇಮಕದ ಮೂಲಕ ಕುಲಪತಿಯಾಗಬಹುದು.
ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾಗಿ ಉಂಟು ಮಾಡಿರುವ ವಿವಾದಗಳು ಹಾಗೂ ಸಂಘರ್ಷದಿಂದಾಗಿ ಕುಲಪತಿ ನೇಮಕದ ಬಗ್ಗೆ ಈ ವರೆಗೆ ರಾಜ್ಯಪಾಲರು ಹೊಂದಿದ್ದ ಅಧಿಕಾರವನ್ನು ವಾಪಸ್ ಪಡೆಯಲು ಕೆಲವು ರಾಜ್ಯ ಸರಕಾರಗಳು ಮುಂದಾಗಿರುವುದು ಅಚ್ಚರಿ ಪಡಬೇಕಾದ ವಿಷಯವಲ್ಲ. ಈ ವಿದ್ಯಮಾನಗಳಿಂದಾಗಿ ವಿಶ್ವವಿದ್ಯಾನಿಲಯಗಳಲ್ಲಿನ ನೇಮಕದ ಪರಮಾಧಿಕಾರವನ್ನು ರಾಜ್ಯಪಾಲರಿಗೆ ನೀಡಲು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ತೀರ್ಮಾನಿಸಿ ಕಾರ್ಯೋನ್ಮುಖವಾಗಿದೆ. ಯುಜಿಸಿಯ ಈ ತರಾತುರಿಯ ಕ್ರಮವನ್ನು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮತ್ತು ವಿಶ್ವವಿದ್ಯಾನಿಲಯಗಳ ಬೋಧಕರು ತೀವ್ರವಾಗಿ ವಿರೋಧಿಸಿದ್ದಾರೆ. ಇಷ್ಟೇ ಅಲ್ಲ, ತನ್ನ ಮೂಗಿನ ನೇರಕ್ಕೆ ಪಠ್ಯಪುಸ್ತಕಗಳನ್ನು ಮರು ರೂಪಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಡೀ ಶೈಕ್ಷಣಿಕ ಕ್ಷೇತ್ರವನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ.
ಕೇಂದ್ರ ಸರಕಾರದ ಈ ದುಡುಕಿನ ಕ್ರಮದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಘರ್ಷ ಇನ್ನಷ್ಟು ತೀವ್ರವಾದರೆ ಅಚ್ಚರಿ ಪಡಬೇಕಾಗಿಲ್ಲ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ರಾಜ್ಯಗಳು ಹಾಗೂ ವಿಶ್ವವಿದ್ಯಾನಿಲಯಗಳು ಮತ್ತು ಪ್ರಜ್ಞಾವಂತ ನಾಗರಿಕರು ಶಿಕ್ಷಣ ಕ್ಷೇತ್ರವನ್ನು ಸುರಕ್ಷಿತವಾಗಿ ಕಾಪಾಡಲು ದಿಟ್ಟತನದ ಪ್ರತಿರೋಧಕ್ಕೆ ಮುಂದಾಗಬೇಕಾಗಿದೆ.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಏಜೆಂಟರೆಂದೇ ಪ್ರತಿಪಕ್ಷಗಳಿಂದ ಟೀಕಿಸಲ್ಪಡುವ ರಾಜ್ಯಪಾಲರು ಹಾಗೂ ರಾಜ್ಯ ಸರಕಾರಗಳ ನಡುವೆ ಕೆಲವೆಡೆ ವೈಷಮ್ಯ ಉಂಟಾಗಿರುವುದು ಗುಟ್ಟಿನ ಸಂಗತಿಯಲ್ಲ. ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಇವೇ ಮೊದಲಾದ ರಾಜ್ಯಗಳಲ್ಲಿ ಇದು ಸಂಘರ್ಷದ ಸ್ವರೂಪವನ್ನು ತಾಳಿದೆ. ಕರ್ನಾಟಕವನ್ನು ವಿಶೇಷವಾಗಿ ತೆಗೆದುಕೊಂಡರೆ ವಿಶ್ವವಿದ್ಯಾನಿಲಯಗಳ ನೇಮಕಕ್ಕೆ ಸಂಬಂಧಿಸಿದ ರಾಜ್ಯಪಾಲರ ಅಧಿಕಾರವನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಚಿವ ಸಂಪುಟ ನಿರ್ಣಯವೊಂದರ ಮೂಲಕ ಮೊಟಕುಗೊಳಿಸಿದೆ. ಹೀಗಾಗಿ ಉನ್ನತ ಶಿಕ್ಷಣದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಲು ಕೇಂದ್ರ ಸರಕಾರ, ಅಂದರೆ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ನಿಯಮಾವಳಿಗಳನ್ನೇ ಬದಲಿಸಲು ಹೊರಟಿದೆ. ರಾಜ್ಯಗಳು ಸುಮ್ಮನಿದ್ದರೆ ಕೇಂದ್ರ ಸರಕಾರ ಇದನ್ನು ಜಾರಿಗೆ ತರುತ್ತದೆ.
ಸಂವಿಧಾನದ ಏಳನೇ ಪರಿಚ್ಛೇದದಲ್ಲಿರುವ ಕೇಂದ್ರ ಪಟ್ಟಿಯ 66ನೇ ಅಂಶದ ಪ್ರಕಾರ ಉನ್ನತ ಶಿಕ್ಷಣ ಅಥವಾ ಸಂಶೋಧನಾ ಸಂಸ್ಥೆಗಳು ಹಾಗೂ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳ ಸಮನ್ವಯ ಮತ್ತು ಗುಣಮಟ್ಟದ ನಿರ್ವಹಣೆಯ ಹೊಣೆಗಾರಿಕೆ ಕೇಂದ್ರ ಸರಕಾರಕ್ಕೆ ಸೇರಿದ್ದು ಎಂದು ವ್ಯಾಖ್ಯಾನ ಮಾಡಿರುವುದರ ಅರ್ಥ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲವೆಂದಲ್ಲ. ಆದರೆ ವಿಶ್ವವಿದ್ಯಾನಿಲಯಗಳ ನಿಯಮಾವಳಿಗಳನ್ನು ರೂಪಿಸುವುದು ಸೇರಿದಂತೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹಲವಾರು ವಿಷಯಗಳ ಬಗ್ಗೆ ರಾಜ್ಯ ಸರಕಾರಗಳಿಗೂ ಹಕ್ಕಿದೆ.ಕೇಂದ್ರ ಸರಕಾರ ಅದನ್ನು ಕಿತ್ತು ಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುವುದು ಸರಿಯಲ್ಲ.
ವಾಸ್ತವವಾಗಿ ರಾಜ್ಯಗಳು ರೂಪಿಸಿರುವ ಕಾಯ್ದೆಗಳ ಅಡಿಯಲ್ಲಿ ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡಿವೆ. ಇವು ರಾಜ್ಯ ಸರಕಾರಗಳ ಅನುದಾನದಿಂದ ಕಾರ್ಯನಿರ್ವಹಿಸುತ್ತವೆ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ವಿಶ್ವವಿದ್ಯಾನಿಲಯಗಳನ್ನು ನಿಯಂತ್ರಿಸುವ ಅಧಿಕಾರ ವಿಶ್ವವಿದ್ಯಾನಿಲಯ ಅನುದಾನ ಆಯೋಗಕ್ಕೆ (ಯುಜಿಸಿ) ಇಲ್ಲ. ಅಂತಲೇ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕುಲಪತಿಗಳ ನೇಮಕದ ಪ್ರಶ್ನೆ ವಿವಾದಾತ್ಮಕ ವಿಚಾರವಾಗಿದೆ.
ರಾಜ್ಯಗಳು ಮತ್ತು ಕೇಂದ್ರಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಇಂತಹ ಏಕಪಕ್ಷೀಯವಾದ ದುಡುಕಿನ ಕ್ರಮಗಳಿಂದ ಭಾರತದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟಾಗುತ್ತದೆ. ಈ ಕಿತ್ತಾಟದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗಲಾದರೂ ಕೇಂದ್ರ ಸರಕಾರ ರಾಜ್ಯ ಸರಕಾರಗಳ ಜೊತೆಗೆ ಸಮಾಲೋಚನೆ ಮಾಡಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸಲು ಮುಂದಾಗಲಿ.