ಮುಂಗಡ ಪತ್ರ: ಮೋದಿ ಸರಕಾರದ ಎದುರಿನ ಸವಾಲುಗಳು
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರವರಿಯಲ್ಲಿ ತಾತ್ಕಾಲಿಕ ಮುಂಗಡಪತ್ರವನ್ನು ಮಂಡಿಸಿದ್ದ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರಕಾರ ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ತಯಾರಿ ನಡೆಸಿದೆ. ಇದಕ್ಕೆ ಪೂರ್ವ ಸಿದ್ಧತೆಯ ಭಾಗವಾಗಿ ಕೆಲವು ಆಯ್ದ ರಾಜ್ಯಗಳ ಮುಖ್ಯಮಂತ್ರಿಗಳು, ಹಣಕಾಸು ಮತ್ತು ನೀತಿ ಆಯೋಗದ ಸದಸ್ಯರು ಹಾಗೂ ಆರ್ಥಿಕ ಪರಿಣಿತರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನಿರಂತರವಾಗಿ ಸಮಾಲೋಚನೆ ನಡೆಸಿದ್ದಾರೆ. ಜುಲೈ 23ರಂದು ಆಯವ್ಯಯ ಮಂಡನೆಯಾಗಲಿದೆ.
ಈ ಮುಂಗಡಪತ್ರ ಸಿದ್ಧಪಡಿಸುವುದು ಈಗ ಸುಲಭವಲ್ಲ. ಹಣಕಾಸು ಆಯೋಗದ ಸೂತ್ರ, ನೀತಿ ಆಯೋಗದ ಶಿಫಾರಸುಗಳು, ರಾಜ್ಯಗಳ ಬೇಡಿಕೆ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳು, ಇವೆಲ್ಲವನ್ನೂ ಕಡ್ಡಾಯವಾಗಿ ಗಮನದಲ್ಲಿಟ್ಟುಕೊಂಡು ಮುಂಗಡ ಪತ್ರದ ಗಾತ್ರ ಮತ್ತು ಸ್ವರೂಪದ ಬಗ್ಗೆ ತೀರ್ಮಾನವಾಗಲಿದೆ. ಈಗ ಇರುವ ಹಲವಾರು ಯೋಜನೆಗಳನ್ನು ಮುಂದುವರಿಸುವ ಜೊತೆಗೆ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳು ಹಾಗೂ ಸರಕಾರದ ಆಧಾರ ಸ್ತಂಭಗಳಾದ ಆಂಧ್ರಪ್ರದೇಶದ ತೆಲುಗು ದೇಶಂ ಮತ್ತು ಬಿಹಾರದ ಸಂಯುಕ್ತ ಜನತಾದಳಗಳ ವಿಶೇಷ ಬೇಡಿಕೆಗಳಿಗೆ ಪ್ರಧಾನಿ ಆದ್ಯತೆಯನ್ನು ನೀಡಬೇಕಾಗಿದೆ.
ಲೋಕಸಭಾ ಚುನಾವಣೆಯ ನಂತರ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳಗಳು ಆಸರೆಯಾಗಿ ನಿಲ್ಲದಿದ್ದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ರಚನೆಯಾಗುತ್ತಿರಲಿಲ್ಲ. ಸರಕಾರಕ್ಕೆ ಬೆಂಬಲ ನೀಡುವ ಮುನ್ನ ತೆಲುಗು ದೇಶಂ ಲೋಕಸಭೆಯ ಸ್ಪೀಕರ್ ಸ್ಥಾನ ಮತ್ತು ನಾಲ್ಕು ಸಂಪುಟ ದರ್ಜೆಯ ಸಚಿವ ಸ್ಥಾನಗಳಿಗೆ ಆಗ್ರಹಿಸಿತ್ತು. ಸಂಯುಕ್ತ ಜನತಾದಳ ಕೂಡ ನಾಲ್ಕು ಸಂಪುಟ ದರ್ಜೆಯ ಸಚಿವ ಸ್ಥಾನ ಹಾಗೂ ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿತ್ತು. ಆದರೆ ಅದು ಈಡೇರಲಿಲ್ಲ. ಆಗ ಪಟ್ಟು ಸಡಿಲಿಸಿದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಈಗ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸುತ್ತಿದ್ದಾರೆ. ಇವರ ಬೇಡಿಕೆಗಳನ್ನು ಕಡೆಗಣಿಸುವ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರಿಲ್ಲ.
ಹಿಂದಿನಂತೆ ಆಂಧ್ರಪ್ರದೇಶವನ್ನು ಐಟಿ-ಬಿಟಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಆ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಿಂದೆ ಅವಿಭಜಿತ ಆಂಧ್ರಪ್ರದೇಶದ ರಾಜಧಾನಿಯಾಗಿದ್ದ ಹೈದರಾಬಾದನ್ನು ಅಭಿವೃದ್ಧಿ ಪಡಿಸಿದಂತೆ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯನ್ನು ಇತರ ರಾಜ್ಯಗಳ ರಾಜಧಾನಿಗಳಿಗಿಂತ ಹೆಚ್ಚು ಯೋಜನಾಬದ್ಧವಾಗಿ ರೂಪಿಸಲು ವಿಶೇಷ ಆಸಕ್ತಿ ವಹಿಸಿದ್ದಾರೆ. ಆಂಧ್ರಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಮರಾವತಿ ರಾಜಧಾನಿಯಾಗಲು ಅಡ್ಡಿಯಾಗಿದ್ದರು.ಅದರ ಬದಲಿಗೆ ಮೂರು ರಾಜಧಾನಿಗಳನ್ನು ಮಾಡಲು ಹೊರಟಿದ್ದರು. ಆದರೆ ಈಗ ಮತ್ತೆ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದಿರುವುದರಿಂದ ಅಮರಾವತಿ ಅಭಿವೃದ್ಧಿಗೆ ರೆಕ್ಕೆ ಪುಕ್ಕಗಳು ಮೂಡಿವೆ. ಅದಕ್ಕಾಗಿ ಅವರಿಗೆ ಕೇಂದ್ರದಿಂದ ವಿಶೇಷ ಅನುದಾನ ಬೇಕಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿ ಹೆಚ್ಚಿನ ಸಹಾಯವನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿದ್ದಾರೆ. ಅಪಾರ ಖನಿಜ ಸಂಪತ್ತನ್ನು ಹೊಂದಿರುವ ಜಾರ್ಖಂಡ್ ಪ್ರದೇಶವನ್ನು ಪ್ರತ್ಯೇಕ ರಾಜ್ಯ ಮಾಡಿದ ನಂತರ ಬಿಹಾರಕ್ಕೆ ಸಂಪನ್ಮೂಲಗಳ ತೀವ್ರ ಕೊರತೆ ಉಂಟಾಗಿದೆ. ಅದಕ್ಕಾಗಿ ಈ ಕೊರತೆಯನ್ನು ನೀಗಿಸಲು ನಿತೀಶ್ ಕುಮಾರ್ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದಾರೆ. ಬಿಹಾರದಲ್ಲಿ ಒಂಭತ್ತು ವಿಮಾನ ನಿಲ್ದಾಣಗಳು, ಎರಡು ವಿದ್ಯುತ್ ಸ್ಥಾವರ ಘಟಕಗಳು, ನದಿ ನೀರಿನ ಬಳಕೆಯ ಎರಡು ಯೋಜನೆಗಳು ಹಾಗೂ ಏಳು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದಾರೆ.
ಬಿಹಾರ ಮತ್ತು ಆಂಧ್ರಪ್ರದೇಶ ಈ ಎರಡೂ ರಾಜ್ಯಗಳು ಕೇಂದ್ರ ಸರಕಾರದಿಂದ ತಲಾ ಐವತ್ತು ಸಾವಿರ ಕೋಟಿ ರೂಪಾಯಿ ನೆರವನ್ನು ಕೇಳುತ್ತಿವೆ. ಆದರೆ ಎರಡೂ ರಾಜ್ಯಗಳ ಈ ಬೇಡಿಕೆಯನ್ನು ಈಡೇರಿಸುವುದು ಸುಲಭದ ಸಂಗತಿಯಲ್ಲ. ಆಂಧ್ರಪ್ರದೇಶ ವಿಭಜನೆಯಾದಾಗ ಆಂಧ್ರಪ್ರದೇಶಕ್ಕೆ ಉಂಟಾದ ತೆರಿಗೆ ಸಂಗ್ರಹದ ಕೊರತೆಯನ್ನು ಹಿಂದಿನ ಕಾಂಗ್ರೆಸ್ ಸರಕಾರ ವಿಶೇಷ ಅನುದಾನದ ಮೂಲಕ ನಿವಾರಿಸಿತ್ತು. ಆದರೂ ಈಗ ಮತ್ತೆ ವಿಶೇಷ ಅನುದಾನ ಕೋರುತ್ತಿದೆ. ಇದು ಮೋದಿಯವರಿಗೆ ತಲೆನೋವಾಗಿ ಪರಿಣಮಿಸಿದೆ.
ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ರಾಜ್ಯಗಳಿಗೆ ಅವು ಸಂಗ್ರಹಿಸುವ ತೆರಿಗೆಯಲ್ಲಿ ಶೇ. 41ರಷ್ಟನ್ನು ನೀಡಬೇಕಾಗುತ್ತದೆ. ಆದರೆ ಈ ಹಣಕಾಸು ಆಯೋಗ ಮಾಡಿರುವ ಶಿಫಾರಸಿನಿಂದ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ನಿರೂಪಣಾ ಸಂಸ್ಥೆಯ ಪಿನಾಕಿ ಚಕ್ರವರ್ತಿ ಅವರು ಹೇಳಿದ್ದಾರೆ. ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಎರಡು ರಾಜ್ಯಗಳ ಸಚಿವರು ಮತ್ತು ಶಾಸಕರು ದಿಲ್ಲಿಯಲ್ಲಿ ಪ್ರತಿಭಟನೆಯನ್ನೂ ಮಾಡಿದರು. ತಮಿಳುನಾಡು ಕೂಡ ತನಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯದ ಬೇಡಿಕೆಗಳನ್ನು ಈಡೇರಿಸುವುದಾದರೆ ಈ ರಾಜ್ಯಗಳ ಬೇಡಿಕೆಗೂ ಸ್ಪಂದಿಸಬೇಕಾಗುತ್ತದೆ.
ಬಿಜೆಪಿಯೇತರ ರಾಜ್ಯಗಳ ಬಗ್ಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಪಕ್ಷಪಾತ ಧೋರಣೆ ತಾಳಿದೆ. ಭೀಕರ ಬರಗಾಲದಿಂದ ತತ್ತರಿಸಿದ ಕರ್ನಾಟಕಕ್ಕೆ ಗ್ರಾಮೀಣ ಭಾಗದ ಜನರಿಗೆ ಸಹಾಯವಾಗಲು ರಾಜ್ಯ ಸರಕಾರ 12,557 ಕೋಟಿ ರೂಪಾಯಿ ನೆರವು ಕೇಳಿದರೆ ಕೇವಲ 232 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿಯವರಿಗೆ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ತೃಪ್ತಿ ಪಡಿಸುವ ಜೊತೆಗೆ ನವೆಂಬರ್ ನಲ್ಲಿ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜ್ಯಗಳನ್ನು ಸಮಾಧಾನ ಪಡಿಸಬೇಕಾಗಿದೆ.ಜೊತೆಗೆ ಕರ್ನಾಟಕ, ಕೇರಳ, ತಮಿಳುನಾಡುಗಳ ಬೇಡಿಕೆಯನ್ನೂ ಪರಿಗಣಿಸಬೇಕಾಗಿದೆ. ಹೀಗಾಗಿ ಮುಂಗಡಪತ್ರ ಅವರ ಪಾಲಿಗೆ ಒಂದು ಸವಾಲಾಗುವುದು ಖಂಡಿತ.