ಚನ್ನಪಟ್ಟಣದ 'ಗೊಂಬೆ'ಯಾಟ
PC: fb.com/hdkumaraswamy
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವರ್ಷಗಳ ಹಿಂದೆ ಚನ್ನಪಟ್ಟಣದ ಗೊಂಬೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಚನ್ನಪಟ್ಟಣದ ರಾಜಕೀಯ ಗೊಂಬೆಗಳು ದಿಲ್ಲಿ ವರಿಷ್ಠರ ಸೂತ್ರ ಹರಿದು ಸ್ವತಂತ್ರವಾಗಿ ಕುಣಿಯುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿವೆ. ರಾಜ್ಯದಲ್ಲಿ ನಡೆಯುವ ಉಪಚುನಾವಣೆಯು ಚನ್ನಪಟ್ಟಣದ ಕಾರಣಕ್ಕಾಗಿ ರಂಗು ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತೆರವು ಮಾಡಿರುವ ಕ್ಷೇತ್ರ ಇದಾಗಿರುವುದರಿಂದ, ಈ ಕ್ಷೇತ್ರವನ್ನು ಬಿಜೆಪಿಯು ಬಿಟ್ಟುಕೊಡುವ ಮೂಲಕ ಎನ್ಡಿಎ ಮೈತ್ರಿಯನ್ನು ಎತ್ತಿ ಹಿಡಿಯಬೇಕು ಎನ್ನುವುದು ಜೆಡಿಎಸ್ ಪಟ್ಟು. ಈ ಮೂಲಕ, ರಾಜ್ಯದಲ್ಲಿ ತನ್ನ ಸುಪುತ್ರ ನಿಖಿಲ್ ಕುಮಾರಸ್ವಾಮಿಗೆ ಒಂದು ನೆಲೆಯನ್ನು ಒದಗಿಸಿಕೊಡುವುದು ಕುಮಾರಸ್ವಾಮಿ ಅವರ ಒಳಗಿನ ಹಂಬಲ. ಚನ್ನಪಟ್ಟಣದಲ್ಲಿ ತನ್ನ ಪಾಲನ್ನು ಪಡೆದುಕೊಳ್ಳಲು ವಿಫಲವಾದರೆ, ಅದು ಜೆಡಿಎಸ್ಗೆ ಭಾರೀ ಮುಖಭಂಗವಾಗಲಿದೆ ಮಾತ್ರವಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಯ ಮೇಲೆ ಅದು ಪರಿಣಾಮ ಬೀರಲಿದೆ. ಸದ್ಯಕ್ಕೆ ಬಿಜೆಪಿಗೆ ಜೆಡಿಎಸ್ ಬೇಡವಾದರೂ, ಜೆಡಿಎಸ್ನ ತೆಕ್ಕೆಯಲ್ಲಿರುವ ಒಕ್ಕಲಿಗ ಸಮುದಾಯದ ಅಗತ್ಯವಿದೆ. ಮಂಡ್ಯವೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಮು ವಿಷವನ್ನು ಹರಡುವುದಕ್ಕಾಗಿ ಜೆಡಿಎಸ್ನ ಸಂಗ ಆರೆಸ್ಸೆಸ್ಗೂ ಬೇಕಾಗಿದೆ. ಜೆಡಿಎಸ್ ಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಬಿಜೆಪಿಯ ಅಭ್ಯರ್ಥಿಯಾದರೂ ಸರಿ, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದರೆ ಸಾಕು ಎಂದು ಅಂಗಲಾಚುವ ಮಟ್ಟಕ್ಕೆ ಇಳಿದಿದೆ. ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶವಿಲ್ಲ ಎಂದಾದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆಯೇ ಹೊರತು, ಜೆಡಿಎಸ್ನಿಂದ ಸ್ಪರ್ಧಿಸಲಾರೆ ಎಂದು ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಘೋಷಿಸಿದ್ದರು. ಇದೀಗ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ಗೆ ಪಕ್ಷಾಂತರಗೊಂಡಿದ್ದಾರೆ.
ಎರಡು ಬಾರಿ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆದ್ದಿರುವ ಕಾರಣಕ್ಕಾಗಿ, ಚನ್ನಪಟ್ಟಣದ ಮೇಲೆ ಜೆಡಿಎಸ್ ಹಕ್ಕು ಸಾಧಿಸುತ್ತಿದೆ. ಚನ್ನಪಟ್ಟಣದ ರಾಜಕೀಯ ಇತಿಹಾಸವನ್ನು ನೋಡಿದರೆ ಅದು ಯಾವುದೇ ಪಕ್ಷಕ್ಕೂ ನಿಷ್ಠೆಯನ್ನು ಪ್ರದರ್ಶಿಸಿದ ಕ್ಷೇತ್ರವಲ್ಲ. ಅನೇಕ ಸಂದರ್ಭದಲ್ಲಿ ಅದು ಪಕ್ಷಕ್ಕಿಂತ ವ್ಯಕ್ತಿಯನ್ನು ನೆಚ್ಚಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕಾಗಿ ಕುಮಾರಸ್ವಾಮಿಯವರನ್ನು ಗೆಲ್ಲಿಸಿದ ಚೆನ್ನಪಟ್ಟಣ, ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಲು ಹಿಂದೆ ಮುಂದೆ ನೋಡಲಿಲ್ಲ. ಹಾಗೆ ನೋಡಿದರೆ ಈ ಕ್ಷೇತ್ರದ ಮೇಲೆ ಕುಮಾರಸ್ವಾಮಿಗಿಂತಲೂ ಯೋಗೇಶ್ವರ್ ಅವರಿಗೆ ಹೆಚ್ಚು ಹಿಡಿತವಿದೆ ಎನ್ನುವುದನ್ನು ಈ ಹಿಂದಿನ ರಾಜಕೀಯ ಅಂಕಿಸಂಕಿಗಳು ಸ್ಪಷ್ಟಪಡಿಸುತ್ತವೆ. 2018 ಮತ್ತು 2023ರಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಗೆದ್ದಿರುವುದೇನೋ ನಿಜ. ಆದರೆ, ಈ ಕ್ಷೇತ್ರವನ್ನು ಜೆಡಿಎಸ್ ಎರಡು ಬಾರಿ ಗೆದ್ದಿದ್ದರೆ, ಯೋಗೇಶ್ವರ್ ಐದು ಬಾರಿ ಗೆದ್ದಿದ್ದಾರೆ. ಅವರು ಯಾವುದೇ ಒಂದು ಪಕ್ಷವನ್ನು ನೆಚ್ಚಿಕೊಂಡು ಗೆದ್ದವರಲ್ಲ. ಎರಡು ಬಾರಿ ಕಾಂಗ್ರೆಸ್ನಿಂದ, ಒಂದು ಬಾರಿ ಬಿಜೆಪಿಯಿಂದ, ಮತ್ತೊಂದು ಬಾರಿ ಸಮಾಜವಾದಿ ಪಾರ್ಟಿಯಿಂದ ಮಾತ್ರವಲ್ಲ, ಒಂದು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿಯೂ ಗೆದ್ದಿದ್ದಾರೆ. ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದ ಬೆಂಬಲವಿಲ್ಲದೆ ಪಕ್ಷೇತರನಾಗಿ ನಿಂತಾಗಲೂ ಗೆಲ್ಲಿಸಿದ ಕ್ಷೇತ್ರವನ್ನು ಯೋಗೇಶ್ವರ್ ಕೈ ಬಿಟ್ಟರೆ ತಮ್ಮ ರಾಜಕೀಯ ಭವಿಷ್ಯಕ್ಕೆ ತಾವೇ ಕಲ್ಲು ಹಾಕಿಕೊಂಡ ಹಾಗೆ. ಈ ಕಾರಣದಿಂದಲೇ ಅವರು ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಟಿಕೆಟ್ಗಾಗಿ ಪಟ್ಟು ಹಿಡಿದು ಕೂತಿದ್ದರು. ಹಿಡಿದ ಪಟ್ಟನ್ನು ಅವರು ಬಿಡುವುದಿಲ್ಲ ಎನ್ನುವುದು ಮನವರಿಕೆಯಾಗಿಯೇ ‘‘ಹಾಗಾದರೆ ಜೆಡಿಎಸ್ನಿಂದಲೇ ಸ್ಪರ್ಧಿಸಿ’’ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು. ಯಾಕೆಂದರೆ, ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ನಿಂತರೆ, ಜೆಡಿಎಸ್ಗೆ ಸೋಲು ಕಟ್ಟಿಟ್ಟ ಬುತ್ತಿ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಹೇಳಿಕೊಳ್ಳುವ ಅವಕಾಶಕ್ಕಾಗಿ ಜೆಡಿಎಸ್ನಿಂದ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದರು. ಆದರೆ ಜೆಡಿಎಸ್ನಿಂದ ಚುನಾವಣೆಗೆ ನಿಂತು ಗೆಲುವಿನ ಹೆಗ್ಗಳಿಕೆಯನ್ನು ಗೌಡರ ಕುಟುಂಬಕ್ಕೆ ಒಪ್ಪಿಸುವುದಕ್ಕಿಂತ ಸ್ವತಂತ್ರವಾಗಿ ಸ್ಪರ್ಧಿಸುವುದು ಅಥವಾ ಕಾಂಗ್ರೆಸ್ನಿಂದ ಸ್ಪರ್ಧಿಸುವುದೇ ಬುದ್ಧಿವಂತಿಕೆ ಎಂದು ಯೋಗೇಶ್ವರ್ ಅವರು ಭಾವಿಸಿರಬೇಕು.
ಮೈತುಂಬಾ ಕಳಂಕವನ್ನು ಹೊತ್ತುಕೊಂಡ ಜೆಡಿಎಸ್ನಿಂದ ಯೋಗೇಶ್ವರ್ ಸ್ಪರ್ಧಿಸದೇ ಇರುವ ಮೂಲಕ ಮುತ್ಸದ್ದಿತನವನ್ನು ಪ್ರದರ್ಶಿಸಿದ್ದಾರೆ. ಸದ್ಯಕ್ಕೆ ರೇವಣ್ಣ, ಪ್ರಜ್ವಲ್ಗೌಡ, ಸೂರಜ್ ಗೌಡ ಅವರು ತಮ್ಮ ಲೈಂಗಿಕ ಹಗರಣಗಳಿಂದ ಜೆಡಿಎಸ್ಗೆ ಅದೆಂತಹ ಕಳಂಕವನ್ನು ತಂದಿಟ್ಟಿದ್ದಾರೆ ಎಂದರೆ, ಮಾನ, ಮರ್ಯಾದೆ ಎಂದು ಅಂಜುವ ಯಾವ ಸಭ್ಯ ರಾಜಕಾರಣಿಯೂ ಅತ್ತ ಕಡೆ ಹಾಯಲಾರ. ಆದುದರಿಂದ ಸಹಜವಾಗಿಯೇ ಯೋಗೇಶ್ವರ್ ಜೆಡಿಎಸ್ನಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದು ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ಗೂ ಲಾಭವಿದೆ, ಜೊತೆಗೇ ಯೋಗೇಶ್ವರ್ ಅವರಿಗೂ ಲಾಭವಿದೆ. ಯೋಗೇಶ್ವರ್ ಅಧಿಕಾರವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಸೇರಿದ್ದಾರೆಯೇ ಹೊರತು, ಬಿಜೆಪಿಯ ಸಿದ್ಧಾಂತದ ಮೇಲಿನ ನಂಬಿಕೆಯಿಂದ ಅಲ್ಲ. ಅವರ ಈ ಹಿಂದಿನ ರಾಜಕೀಯ ನಡೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಅವರು ಸಂದರ್ಭಕ್ಕೆ ತಕ್ಕಂತೆ ಪಕ್ಷಗಳನ್ನು ಬದಲಾಯಿಸುತ್ತಾ ಬಂದಿದ್ದಾರೆ. ಅವರನ್ನು ರಾಜಕೀಯ ಪಕ್ಷಗಳು ಬಳಸಿದ್ದಕ್ಕಿಂತ ರಾಜಕೀಯ ಪಕ್ಷಗಳನ್ನು ಅವರು ಬಳಸಿಕೊಂಡದ್ದೇ ಹೆಚ್ಚು. ಅವರಿಗೆ ತಮ್ಮ ಸ್ವಂತ ವರ್ಚಸ್ಸಿನ ಮೇಲೆಯೇ ಹೆಚ್ಚು ನಂಬಿಕೆಯಿದ್ದಂತಿದೆ. ಸದ್ಯಕ್ಕೆ ಹೇಗಾದರೂ ಸರಿ, ಬಿಜೆಪಿ, ಜೆಡಿಎಸ್ಗೆ ಮುಖಭಂಗವನ್ನುಂಟು ಮಾಡುವುದು ಕಾಂಗ್ರೆಸ್ ಗುರಿಯಾದರೆ, ಯೋಗೇಶ್ವರ್ಗೆ ಈ ಚುನಾವಣೆಯಲ್ಲಿ ಗೆದ್ದರೆ ಸರಕಾರದಲ್ಲಿ ಉನ್ನತ ಸ್ಥಾನವನ್ನು ಸುಲಭದಲ್ಲಿ ತನ್ನದಾಗಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ, ಚನ್ನಪಟ್ಟಣವನ್ನು ಗೆಲ್ಲಲು ಅವರಿಗೆ ಅದು ಪೂರಕವಾಗಬಹುದು. ಚನ್ನಪಟ್ಟಣ ಒಕ್ಕಲಿಗ ಸಮುದಾಯದ ಪ್ರಾಬಲ್ಯವನ್ನು ಹೊಂದಿರುವ ಕ್ಷೇತ್ರ. ಯೋಗೇಶ್ವರ್ ಒಕ್ಕಲಿಗರು ಮಾತ್ರವಲ್ಲ, ಅವರ ಬೆನ್ನಿಗೆ ನಿಂತಿರುವ ಡಿ.ಕೆ. ಶಿವಕುಮಾರ್ ಕೂಡ ಒಕ್ಕಲಿಗರು. ಜೆಡಿಎಸ್ನ ಲೈಂಗಿಕ ಹಗರಣಗಳಿಂದ ಒಕ್ಕಲಿಗ ಸಮುದಾಯ ತೀವ್ರ ಮುಜುಗರವನ್ನು ಅನುಭವಿಸುತ್ತಿದೆ ಮಾತ್ರವಲ್ಲ, ಒಕ್ಕಲಿಗ ಯುವಕರನ್ನು ಆರೆಸ್ಸೆಸ್ನ ಹೊಡಿಬಡಿ ರಾಜಕೀಯಕ್ಕೆ ಕುಮಾರಸ್ವಾಮಿ ಬಲಿಕೊಡುತ್ತಿರುವ ಬಗ್ಗೆಯೂ ಒಕ್ಕಲಿಗ ಸಮುದಾಯದ ಹಿರಿಯರಲ್ಲಿ ಅಸಮಾಧಾನಗಳಿವೆ. ಇಂತಹ ಸಂದರ್ಭದಲ್ಲಿ ಚನ್ನಪಟ್ಟಣದ ಒಕ್ಕಲಿಗರಿಗೆ ಯೋಗೇಶ್ವರ್ ಅಲ್ಲದೇ ಬೇರೆ ಆಯ್ಕೆಯೇ ಇಲ್ಲ ಎನ್ನುವ ಸ್ಥಿತಿಯಿದೆ. ಇದೇ ಸಂದರ್ಭದಲ್ಲಿ, ದಲಿತರು ಮತ್ತು ಮುಸ್ಲಿಮರೂ ಕಾಂಗ್ರೆಸನ್ನು ಈ ಬಾರಿ ಪೂರ್ಣ ಪ್ರಮಾಣದಲ್ಲಿ ತಬ್ಬಿಕೊಳ್ಳುವ ಲಕ್ಷಣಗಳಿವೆ. ಸೋಲು ಶತಸಿದ್ಧವಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕುಮಾರಸ್ವಾಮಿಯವರು ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಕಣಕ್ಕಿಳಿಸಿದರೆ, ಚುನಾವಣಾ ಫಲಿತಾಂಶದ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ತಂದೆ ಮಕ್ಕಳಿಬ್ಬರೂ ಜೊತೆಯಾಗಿ ಕಣ್ಣೀರು ಸುರಿಸುವುದು ಅನಿವಾರ್ಯವಾಗಬಹುದು.