ಮತ ಕ್ಷೇತ್ರ ಮರು ವಿಂಗಡಣೆಯ ಮಸಲತ್ತು

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿವಿಧ ಸಮುದಾಯಗಳಿಗೆ ಸೇರಿದ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಸಂಘಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿಯ ಬಹು ದಿನಗಳ ಕನಸು. ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಬಿಜೆಪಿ ತನ್ನ ಈ ಗುರಿ ಸಾಧಿಸಲು ದಾಪುಗಾಲಿಡುತ್ತಲೇ ಬಂದಿದೆ. ಉತ್ತರದ ಹಿಂದಿ ಭಾಷಿಕ ಪ್ರಭಾವದ ರಾಜ್ಯಗಳಲ್ಲಿ ಪ್ರಾಬಲ್ಯ ಸಾಧಿಸಿ ನಂತರ ಈಶಾನ್ಯ ರಾಜ್ಯಗಳಲ್ಲಿ ನಾನಾ ಕಸರತ್ತುಗಳನ್ನು ಮಾಡಿ ವಶಪಡಿಸಿಕೊಂಡ ಬಿಜೆಪಿಗೆ ಮಣಿಪುರದಂಥ ರಾಜ್ಯಗಳು ನುಂಗಲಾಗದ ತುತ್ತಾದರೂ ಸಂಪೂರ್ಣ ಭರವಸೆಯನ್ನು ಅದು ಕಳೆದುಕೊಂಡಿಲ್ಲ. ಆದರೆ ಎಲ್ಲೆಡೆ ದಿಗ್ವಿಜಯ ಸಾಧಿಸುತ್ತಲೇ ಬಂದ ಕೇಂದ್ರದ ಆಡಳಿತ ಪಕ್ಷಕ್ಕೆ ದಕ್ಷಿಣದ ರಾಜ್ಯಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಹೇಗಾದರೂ ಮಾಡಿ ಪ್ರಾಬಲ್ಯ ಸಾಧಿಸಲು ಯತ್ನಿಸಿದರೂ ದಕ್ಷಿಣದ ರಾಜ್ಯಗಳು ಬಿಡುವುದಿಲ್ಲ ಎಂಬುದು ತಮಿಳುನಾಡಿನ ಇತ್ತೀಚಿನ ವಿದ್ಯಮಾನಗಳಿಂದ ಸ್ಪಷ್ಟವಾಗಿದೆ.
ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆಯ ದಿಢೀರ್ ಪ್ರಸ್ತಾವಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಏನೇ ಸಬೂಬು ಹೇಳಿದರೂ ಬಿಜೆಪಿಗೆ ನೆಲೆಯೂರಲು ಅವಕಾಶ ನೀಡದ ದಕ್ಷಿಣ ಭಾರತದ ರಾಜ್ಯಗಳನ್ನು ನಿಯಂತ್ರಿಸುವುದಕ್ಕಾಗಿ ಈ ಮಸಲತ್ತು ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಕೇರಳದಲ್ಲಿ ನಾರಾಯಣ ಗುರು ಮತ್ತು ಅವರ ವೈಚಾರಿಕ ವಾರಸುದಾರರಾದ ಕಮ್ಯುನಿಸ್ಟರು ಹಾಗೂ ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಹಾಗೂ ಅವರ ಸೈದ್ಧಾಂತಿಕ ಸ್ಫೂರ್ತಿಯ ಸೆಲೆಯನ್ನು ಹೊಂದಿರುವ ದ್ರಾವಿಡ ಪಕ್ಷಗಳು, ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ಅಸ್ಮಿತೆ ಮತ್ತು ಪ್ರಭಾವಿ ಎಡಪಂಥೀಯ ಚಳವಳಿ ಮನುವಾದಿ ಪರಿವಾರಕ್ಕೆ ಬಹು ದೊಡ್ಡ ಅಡ್ಡಿಯಾಗಿವೆ. ಇನ್ನು ಕರ್ನಾಟಕದಲ್ಲಿ ಬಸವಣ್ಣ ಮತ್ತು ಕುವೆಂಪು ಪ್ರಭಾವದಿಂದಾಗಿ ಈವರೆಗೆ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತವನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ ಅವರ ಕೆಲವು ಅನುಯಾಯಿಗಳ ಅವಕಾಶವಾದಿತನದಿಂದ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಒಂದಿಷ್ಟು ಜಾಗ ಮಾಡಿಕೊಂಡಿದೆ.
ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆಯ ಕುರಿತು ಸಮಾಲೋಚನೆ ಮಾಡಲು ವಿವಿಧ ರಾಜ್ಯ ಸರಕಾರಗಳ ಮುಖ್ಯಸ್ಥರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಇತ್ತೀಚೆಗೆ ಚೆನ್ನೈನಲ್ಲಿ ಸಭೆ ಸೇರಿದ್ದರು. ಇವರಲ್ಲಿ ಸಹಜವಾಗಿ ದಕ್ಷಿಣ ಭಾರತದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಅವರು ವ್ಯಕ್ತಪಡಿಸಿದ ಆತಂಕದಲ್ಲಿ ಹುರುಳಿಲ್ಲದಿಲ್ಲ. ಈ ಸಭೆಯಲ್ಲಿ ದಕ್ಷಿಣದ ತಮಿಳುನಾಡು, ಕೇರಳ, ತೆಲಂಗಾಣ ಮಾತ್ರವಲ್ಲ ಪಂಜಾಬ್ನ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು. ಕರ್ನಾಟಕದ ಉಪ ಮುಖ್ಯಮಂತ್ರಿ, ಒಡಿಶಾದ ಕೆಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ರಚಿಸಲಾದ ಜಂಟಿ ಕ್ರಿಯಾ ಸಮಿತಿಯ ಪರವಾಗಿ ಹೇಳಿಕೆ ನೀಡಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆ ನ್ಯಾಯ ಸಮ್ಮತವಾಗಿ, ವೈಜ್ಞಾನಿಕವಾಗಿ ನಡೆದರೆ ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು.
ಸರಕಾರದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ರಾಜ್ಯಗಳನ್ನು ಗುರಿಯಾಗಿರಿಸಿಕೊಂಡು ಅವುಗಳನ್ನು ಶಿಕ್ಷಿಸಲು ಅಂದರೆ ಲೋಕಸಭೆಯಲ್ಲಿ ಅವುಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಈ ಮಸಲತ್ತು ನಡೆದಿದೆ ಎಂಬ ಸ್ಟಾಲಿನ್ ಆರೋಪವನ್ನು ತಳ್ಳಿ ಹಾಕಲು ಆಗುವುದಿಲ್ಲ. ಲೋಕಸಭೆಯಲ್ಲಿ ದಕ್ಷಿಣದ ಪ್ರಾತಿನಿಧ್ಯ ಕಡಿಮೆಯಾಗುವುದಿಲ್ಲ ಎಂದು ಅಮಿತ್ ಶಾ ಭರವಸೆಯನ್ನು ನೀಡಿದ್ದರೂ ವಾಸ್ತವವಾಗಿ ಉತ್ತರದ ರಾಜ್ಯಗಳ ಜನಸಂಖ್ಯೆ ಪ್ರಮಾಣ ದಕ್ಷಿಣಕ್ಕಿಂತ ಜಾಸ್ತಿಯಾಗಿರುವುದರಿಂದ ಸಹಜವಾಗಿ ಅವುಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
ಈ ರೀತಿ ಅವೈಜ್ಞಾನಿಕವಾಗಿ ಲೋಕಸಭಾ ಮತಕ್ಷೇತ್ರಗಳ ಮರುವಿಂಗಡಣೆ ಮಾಡಲು ಹೊರಟರೆ ಭಾರತದ ಸಮಗ್ರತೆ ಮತ್ತು ಸಂವಿಧಾನದ ಆಶಯದ ಮೂಲವಾದ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಆರ್ಥಿಕ ವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಆತಂಕವೂ ಸುಳ್ಳಲ್ಲ. ಈ ಕುರಿತು ಗೃಹ ಮಂತ್ರಿ ಅಮಿತ್ ಶಾ ಏನೇ ಹೇಳಲಿ ದಿಢೀರನೇ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಗೆ ಹೊರಟಿರುವ ಉದ್ದೇಶವೇನು ಎಂಬುದನ್ನು ಸರಕಾರ ಅಧಿಕೃತವಾಗಿ ಪ್ರಕಟಿಸುವುದು ಅಗತ್ಯವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಸರಕಾರ ಇದಕ್ಕೆ ಮುಂದಾಗಬಾರದು.
ದಕ್ಷಿಣ ಭಾರತದಲ್ಲಿ ನೆಲೆಯೂರಲು ಸಂಘ ಪರಿವಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯತ್ನಿಸುತ್ತಲೇ ಇದೆ. ಆರೆಸ್ಸೆಸ್ ಸ್ಥಾಪನೆಯಾಗಿ ಈಗ ನೂರು ವರ್ಷಗಳಾಗಿವೆ. ಈ ಶತಮಾನೋತ್ಸವದ ಸಂಭ್ರಮದಲ್ಲಿ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ಆದರೆ ಬಹುತ್ವದ ಈ ಭಾರತ ಇದನ್ನು ಒಪ್ಪುವುದಿಲ್ಲ ಎಂಬುದು ದಕ್ಷಿಣ ಭಾರತದ ರಾಜ್ಯಗಳ ನಿಲುವಿನಿಂದ ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಕೆಲವೊಮ್ಮೆ ಮುಖ್ಯಮಂತ್ರಿ ಪಟ್ಟವನ್ನು ಗಿಟ್ಟಿಸಿಕೊಂಡರೂ ಸ್ವಂತ ಬಲದಿಂದ ಅದು ಎಂದಿಗೂ ಅಧಿಕಾರಕ್ಕೆ ಬರಲಿಲ್ಲ. ಇನ್ನು ತಮಿಳುನಾಡಿನಲ್ಲಿ ಪೆರಿಯಾರ್ ಮತ್ತು ದ್ರಾವಿಡ ಪಕ್ಷಗಳನ್ನು ಬದಿಗೊತ್ತಿ ಬಿಜೆಪಿಯನ್ನು ಕಟ್ಟುವುದಾಗಿ ಕೊಚ್ಚಿಕೊಂಡು ಅಲ್ಲಿಗೆ ಹೋಗಿದ್ದ ಅಣ್ಣಾಮಲೈ ಕೈಲಾಗದೆ ಅಧ್ಯಕ್ಷ ಹುದ್ದೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಮತ್ತೆ ಅಲ್ಲಿನ ಅಣ್ಣಾ ಡಿಎಂಕೆ ಪಕ್ಷಕ್ಕೆ ಬಿಜೆಪಿ ಶರಣಾಗತವಾಗಿದೆ.
ಇನ್ನು ಕೇರಳದಲ್ಲಿ ಆರೆಸ್ಸೆಸ್ ಆಗಾಗ ಅಬ್ಬರಿಸುತ್ತಿದ್ದರೂ ಬಿಜೆಪಿಗೆ ಹೆಚ್ಚಿನ ಯಶಸ್ಸು ದೊರಕಿಸಿಕೊಡಲು ಈವರೆಗೆ ಅದಕ್ಕೆ ಸಾಧ್ಯವಾಗಲೇ ಇಲ್ಲ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಅಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರ ಪ್ರಮಾಣ ಶೇ. 45ರಷ್ಟು. ಇನ್ನು ಶೇ. 55ರಷ್ಟಿರುವ ಹಿಂದೂಗಳಲ್ಲಿ ಬಹುತೇಕ ನಾರಾಯಣಗುರುಗಳ ಪ್ರಭಾವವಿರುವ ಈಳವರು. ಅವರು ಕಮ್ಯುನಿಸ್ಟ್ ಪಕ್ಷಗಳ ಜೊತೆಗಿದ್ದಾರೆ. ಉಳಿದವರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲಿಗರಾಗಿದ್ದಾರೆ. ಕರ್ನಾಟಕ ಈಗಲೂ ಅದಕ್ಕೆ ಕನಸಿನ ಗಂಟು. ಅಂತಲೇ ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆಯ ಮೂಲಕ ಅದು ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ಕುಗ್ಗಿಸಲು ಹುನ್ನಾರ ನಡೆಸಿದೆ.
ಲೋಕಸಭಾ ಮತಕ್ಷೇತ್ರಗಳ ಮರು ವಿಂಗಡಣೆಯಂತಹ ಮಹತ್ವದ ವಿಷಯಕ್ಕೆ ಕೈ ಹಾಕುವ ಮುನ್ನ ಎಲ್ಲಾ ರಾಜ್ಯಗಳನ್ನು ಹಾಗೂ ಎಲ್ಲ ರಾಜಕೀಯ ಪಕ್ಷಗಳನ್ನು ಕೇಂದ್ರ ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕು ಹಾಗೂ ಒಕ್ಕೂಟ ವ್ಯವಸ್ಥೆಗೆ ಚ್ಯುತಿ ಉಂಟಾಗದಂತೆ ನಡೆದುಕೊಳ್ಳಬೇಕು.