ಗುತ್ತಿಗೆದಾರನ ಆತ್ಮಹತ್ಯೆ: ಇತಿಹಾಸ ಮರುಕಳಿಸದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮುಳುಗುವವನಿಗೆ ಹುಲ್ಲುಕಡ್ಡಿ ಎನ್ನುವಂತೆ, ಗುತ್ತಿಗೆದಾರ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯು ಪ್ರಿಯಾಂಕ್ ಖರ್ಗೆ ವಿರುದ್ಧ ತಿರುಗಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಅವರು ಬರೆದಿಟ್ಟಿರುವ ಪತ್ರ ಇದೀಗ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಲಬುರಗಿಯ ಕಾಂಗ್ರೆಸ್ ಮುಖಂಡ ರಾಜು ಕಪನೂರ ಸೇರಿದಂತೆ ಎಂಟು ಮಂದಿ ಟೆಂಡರ್ ವಿಚಾರವೊಂದಕ್ಕೆ ಸಂಬಂಧಿಸಿ ತನ್ನಿಂದ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಅವರು ತನ್ನ ಮರಣಪತ್ರದಲ್ಲಿ ಆರೋಪಿಸಿದ್ದಾರೆ. ರಾಜು ಕಪನೂರ ಎಂಬಾತ ಪ್ರಿಯಾಂಕ್ ಖರ್ಗೆಯ ಆಪ್ತ ಎನ್ನುವುದು, ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣವನ್ನು ನೀಡಿದೆ. ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಅವರು ಪರೋಕ್ಷ ಕಾರಣರಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಇದೇ ಸಂದರ್ಭದಲ್ಲಿ ಆರೋಪಗಳನ್ನು ಪ್ರಿಯಾಂಕ್ ಖರ್ಗೆ ಸಾರಾಸಗಟಾಗಿ ಅಲ್ಲಗಳೆದಿದ್ದು, ಪ್ರಕರಣಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯವಾಗಿ ಆತ್ಮಹತ್ಯೆಗೈದ ಪಾಂಚಾಳ ತನ್ನ ಮರಣ ಪತ್ರದಲ್ಲಿ ಸಚಿವರ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಆತ ಉಲ್ಲೇಖಿಸಿರುವ ರಾಜು ಕಪನೂರ ಪ್ರಿಯಾಂಕ್ ಖರ್ಗೆಯವರ ಆಪ್ತ ಎನ್ನುವ ಒಂದೇ ಕಾರಣಕ್ಕೆ ನೇರವಾಗಿ ಪ್ರಿಯಾಂಕ್ ಖರ್ಗೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಆಗುವುದಿಲ್ಲ. ಮೊದಲು ಮರಣ ಪತ್ರದಲ್ಲಿರುವ ಆರೋಪ ಎಷ್ಟರಮಟ್ಟಿಗೆ ಸತ್ಯ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕು. ಇದಾದ ಬಳಿಕ, ಆಪ್ತನ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆಯೇ ಎನ್ನುವುದು ಗೊತ್ತಾಗಬೇಕಾಗಿದೆ. ಈ ನಿಟ್ಟಿನಲ್ಲಿ, ಪ್ರಕರಣವನ್ನು ತನಿಖೆಗೆ ಆಗ್ರಹಿಸಬಹುದಾಗಿದೆಯೇ ಹೊರತು, ಆತ್ಮಹತ್ಯೆಗೂ ಸಚಿವ ಖರ್ಗೆಗೂ ನೇರ ಸಂಬಂಧವನ್ನು ಕಲ್ಪಿಸುವುದು ತಪ್ಪಾಗುತ್ತದೆ. ಇದೇ ಸಂದರ್ಭದಲ್ಲಿ ತನಿಖೆಯನ್ನು ಸಿಐಡಿಗೆ ನೀಡುವ ಇಂಗಿತವನ್ನೂ ಸರಕಾರ ವ್ಯಕ್ತಪಡಿಸಿರುವುದರಿಂದ ಬಿಜೆಪಿಯ ಗದ್ದಲ ಅನಗತ್ಯವಾಗಿದೆ.
ಪ್ರಿಯಾಂಕ್ ಖರ್ಗೆಯ ಆಪ್ತ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಖರ್ಗೆ ಕಟಕಟೆಯಲ್ಲಿ ನಿಲ್ಲಬೇಕು ಎನ್ನುವುದಾದರೆ, ಪಕ್ಷದ ಟಿಕೆಟ್ ನೀಡುತ್ತೇನೆ ಎಂದು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಪ್ರಹ್ಮಾದ್ ಜೋಶಿ ಅವರ ಸೋದರನ ಪ್ರಕರಣದ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ಪ್ರಹ್ಮಾದ್ ಜೋಶಿಯ ಸೋದರನ ಹೆಸರು ಇದರಲ್ಲಿ ಕೇಳಿ ಬರುತ್ತಿದ್ದಂತೆಯೇ, ಪ್ರಹ್ಮಾದ್ ಜೋಶಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆದರೆ, ಸೋದರನಿಗೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ಮಾಧ್ಯಮಗಳಲ್ಲಿ ಜೋಶಿ ಸ್ಪಷ್ಟನೆ ನೀಡಿದರು. ಈ ವಂಚನೆ ಆರೋಪಕ್ಕೆ ಸಂಬಂಧಿಸಿ ಈವರೆಗೆ ಬಿಜೆಪಿ ವರಿಷ್ಠರು ಪ್ರಹ್ಮಾದ್ ಜೋಶಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಿರುವಾಗ, ಆಪ್ತ ಮಾಡಿರುವ ತಪ್ಪಿಗಾಗಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಗದ್ದಲ ಎಬ್ಬಿಸುವುದು ಎಷ್ಟು ಸರಿ? ಪ್ರಜ್ವಲ್ ಗೌಡ ಎಸಗಿದ ಲೈಂಗಿಕ ಹಗರಣಕ್ಕೂ ತಮಗೂ ಯಾವ ಸಂಬಂಧವೂ ಇಲ್ಲ, ಅನಗತ್ಯವಾಗಿ ದೇವೇಗೌಡರ ಕುಟುಂಬವನ್ನು ಇದರೊಂದಿಗೆ ಎಳೆದುಕೊಂಡು ಬರಬೇಡಿ ಎಂದು ಕುಮಾರಸ್ವಾಮಿ ಈ ಹಿಂದೆ ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಪ್ರಜ್ವಲ್ ಗೌಡ ಮಾಡಿದ ಆರೋಪಗಳಿಗೆ ದೇವೇಗೌಡ ಕುಟುಂಬ ಯಾವ ರೀತಿಯಲ್ಲೂ ಹೊಣೆ ಅಲ್ಲ ಎಂದಾದರೆ, ಒಬ್ಬ ರಾಜಕೀಯ ಆಪ್ತ ಮಾಡಿದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಹೊಣೆಯಾಗುವುದು ಹೇಗೆ ಎನ್ನುವ ಪ್ರಶ್ನೆಗೂ ವಿರೋಧ ಪಕ್ಷಗಳು ಉತ್ತರಿಸಬೇಕಾಗುತ್ತದೆ.
ಈ ಹಿಂದೆ ಬೊಮ್ಮಾಯಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದಾಗಲೂ ಇಂತಹದೇ ಒಂದು ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಗುತ್ತಿಗೆದಾರರೊಬ್ಬರು ಸಚಿವ ಈಶ್ವರಪ್ಪ ಅವರು ಹಣ ಬಿಡುಗಡೆ ಮಾಡಲು ತಡೆಯಾಗಿದ್ದಾರೆ ಎನ್ನುವ ಆರೋಪ ಹೊರಿಸಿ ಹೊಟೇಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಈಶ್ವರಪ್ಪ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ ನಡೆದ ತನಿಖೆಯಲ್ಲಿ ಈಶ್ವರಪ್ಪನವರಿಗೆ ಸರಕಾರವೇ ಕ್ಲೀನ್ ಚಿಟ್ ನೀಡಿ ರಕ್ಷಿಸಿತು ಎನ್ನುವುದು ಬೇರೆ ವಿಷಯ. ಆ ಪ್ರಕರಣವನ್ನು ಇದೀಗ ಬೀದರ್‌ನ ಗುತ್ತಿಗೆದಾರನ ಆತ್ಮಹತ್ಯೆಗೆ ಹೋಲಿಸಿ, ಈಶ್ವರಪ್ಪರಂತೆಯೇ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ತಗಾದೆ ತೆಗೆದಿದೆ. ಉಡುಪಿಯಲ್ಲಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಸಚಿವ ಈ್ವರಪ್ಪ ಅವರನ್ನು ನೇರವಾಗಿ ಮರಣಪತ್ರದಲ್ಲಿ ಉಲ್ಲೇಖಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ತನಗಾಗಿರುವ ಅನ್ಯಾಯವನ್ನು ಅವರು ಅದಕ್ಕೂ ಮುಂಚೆ ಪ್ರಧಾನಮಂತ್ರಿಗೂ ಪತ್ರ ಬರೆದು ತಿಳಿಸಿದ್ದರು. ಆದರೆ, ಇದರಿಂದ ಅವರ ಸಮಸ್ಯೆ ಪರಿಹಾರವಾಗದೆ ಉಲ್ಬಣಗೊಂಡಿತು. ಆರೋಪ ಮಾಡಿದ ಗುತ್ತಿಗೆದಾರನ ವಿರುದ್ಧ ಮೊಕದ್ದಮೆ ದಾಖಲಿಸಲ್ಪಟ್ಟಿತ್ತು. ಸರಕಾರದ ವಿರುದ್ಧ ಆರೋಪ ಮಾಡಿದ ಕಾರಣಕ್ಕಾಗಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದೂ ಅವರು ಅಲವತ್ತುಕೊಂಡಿದ್ದರು. ಆಗಲೂ ಸರಕಾರ ಸ್ಪಂದಿಸದೇ ಇದ್ದಾಗ, ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆ ಅಂದಿನ ಬೊಮ್ಮಾಯಿ ಸರಕಾರಕ್ಕೆ ಸಾಕಷ್ಟು ಮುಜುಗರ ಸೃಷ್ಟಿಸಿತ್ತು. ಗುತ್ತಿಗೆದಾರರ ಸಂಘಟನೆ ಬಹಿರಂಗವಾಗಿ ಸರಕಾರದ ಲಂಚ, ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿತ್ತು. ಆದರೆ ಬೀದರ್‌ನ ಭಾಲ್ಕಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಖಾಸಗಿ ವ್ಯವಹಾರಕ್ಕೆ ಸಂಬಂಧ ಪಟ್ಟದ್ದು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಲ್ಲಿ, ಸಚಿವರ ಹೆಸರು ಎಲ್ಲೂ ಪ್ರಸ್ತಾಪವಿಲ್ಲ. ಬಿಜೆಪಿ ನಾಯಕರೇ ಸಚಿವ ಖರ್ಗೆಯವರ ಹೆಸರನ್ನು ಪ್ರಕರಣದಲ್ಲಿ ಜೋಡಿಸಲು ಪ್ರಯತ್ನಿಸುತ್ತಿದ್ದಾರೆ.
ಹಾಗೆಂದು ಆತ್ಮಹತ್ಯೆ ಪ್ರಕರಣದೊಂದಿಗೆ ಸಚಿವ ಖರ್ಗೆ ಅವರಿಗೆ ಸಂಬಂಧವೇ ಇಲ್ಲ ಎನ್ನುವಂತಿಲ್ಲ. ಸಚಿವರೊಬ್ಬರ ಆಪ್ತ ಸಹಾಯಕ ತನ್ನ ವೈಯಕ್ತಿಕ ವ್ಯವಹಾರಗಳಲ್ಲಿ ಸಚಿವರ ವರ್ಚಸ್ಸನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಆದುದರಿಂದಲೇ, ಪ್ರಕರಣ ತನಿಖೆಯಾಗಬೇಕು. ತನಿಖೆಯಲ್ಲಿ ಆಪ್ತ ಸಚಿವರ ಹೆಸರನ್ನು ಬಳಕೆ ಮಾಡಿದ್ದರೆ ಅಥವಾ ತನ್ನ ಆಪ್ತನ ಮೂಲಕ ಗುತ್ತಿಗೆದಾರನಿಗೆ ಸಚಿವರು ಒತ್ತಡ ಹಾಕಿದ್ದಾರೆ ಎನ್ನುವುದು ಬಹಿರಂಗವಾದರೆ ಆ ಬಳಿಕ ಸಚಿವರ ರಾಜೀನಾಮೆಗೆ ಒತ್ತಾಯಿಸುವುದರಲ್ಲಿ ನ್ಯಾಯವಿದೆ. ಇದೇ ಸಂದರ್ಭದಲ್ಲಿ, ರಾಜಕಾರಣಿಗಳೊಂದಿಗೆ ಗುತ್ತಿಗೆದಾರರ ಅನೈತಿಕ ಸಂಬಂಧ ಇಂದು ನಿನ್ನೆಯದಲ್ಲ. ರಾಜಕಾರಣಿಗಳ ವರ್ಚಸ್ಸಿನ ಬಲವನ್ನು ನಂಬಿಕೊಂಡು ಹಣ ಚೆಲ್ಲಿ ಟೆಂಡರ್‌ಗಳನ್ನು ತಮ್ಮದಾಗಿಸಿ, ಬಳಿಕ ಸಾಲಸೋಲದ ಸುಳಿಗೆ ಸಿಲುಕಿಕೊಳ್ಳುವ ನೂರಾರು ಗುತ್ತಿಗೆದಾರರು ನಮ್ಮ ನಡುವೆ ಇದ್ದಾರೆ. ಈ ಗುತ್ತಿಗೆದಾರರ ವ್ಯವಹಾರವೆನ್ನುವುದು ರಾಜಕೀಯ ನಿಯಂತ್ರಿತವಾದ ಜೂಜಾಟ. ರಾಜಕಾರಣಿಗಳನ್ನು ನಂಬಿ ಅವರು ಹೂಡುವ ಹಣ ಅವರಿಗೇ ಕೆಲವೊಮ್ಮೆ ಮುಳುವಾಗುತ್ತದೆ. ರಾಜಕಾರಣಿಗಳಿಗೆ ಅವರ ಪಾಲು ನೀಡದೆ ಯಾವುದೇ ಟೆಂಡರ್‌ಗಳನ್ನು ಪಡೆದುಕೊಳ್ಳಲು ಗುತ್ತಿಗೆದಾರರಿಗೆ ಸಾಧ್ಯವಿಲ್ಲ ಎನ್ನುವ ಆರೋಪ ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಬಾಕಿಯಿರುವ ಹಣ ಬಿಡುಗಡೆ ಮಾಡಿಸಬೇಕಾದರೂ ಸರಕಾರಕ್ಕೆ ಶೇಕಡವಾರು ಲಂಚ ನೀಡುವುದು ಅನಿವಾರ್ಯ. ಇದು ಕಾಂಗ್ರೆಸ್ ಸರಕಾರದಲ್ಲೂ ಮುಂದುವರಿಯುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘಟನೆಗಳು ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ಆರೋಪಗಳನ್ನು ಮಾಡಿವೆ. ಗುತ್ತಿಗೆದಾರರು ಹೆಚ್ಚು ಹೆಚ್ಚು ಪರ್ಸೆಂಟೇಜ್ ಸಲ್ಲಿಸಿದ ಹಾಗೆಯೇ ಅದು ಕಾಮಗಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ನಮ್ಮ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಲು ಮುಖ್ಯ ಕಾರಣವೇ ಗುತ್ತಿಗೆದಾರರು ಮತ್ತು ರಾಜಕಾರಣಿಗಳ ನಡುವಿನ ಅನೈತಿಕ ಸಂಬಂಧಗಳು. ಆದುದರಿಂದ, ಸರಕಾರ ಗುತ್ತಿಗೆದಾರನ ಅತ್ಮಹತ್ಯೆ ಪ್ರಕರಣವನ್ನು ಗಂಭೀರ ತನಿಖೆಗೊಳಪಡಿಸಬೇಕು ಮಾತ್ರವಲ್ಲ, ಗುತ್ತಿಗೆದಾರರ ಸಮಸ್ಯೆಗಳಿಗೆ ಕಿವಿಯಾಗಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.