ಜನಗಣತಿಗೆ ವಿಳಂಬ: ಕೇಂದ್ರದ ನಡೆ ಆತಂಕಕಾರಿ

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರಕ್ಕೆ ರಾಷ್ಟ್ರಮಟ್ಟದ ಜನಗಣತಿಯನ್ನು ನಡೆಸುವ ಆಸಕ್ತಿ ಇದೆಯೇ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಜನಗಣತಿಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. 2021ರಲ್ಲಿ ನಡೆಸ ಬೇಕಾಗಿದ್ದ ಜನಗಣತಿಯನ್ನು 2025ರಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವರ್ಷವಾದರೂ ನಡೆಯುತ್ತದೆ ಎಂಬ ಖಾತರಿಯಿಲ್ಲ. ಕಾರಣವೇನೆಂದರೆ 2025-26ನೇ ವರ್ಷದ ಮುಂಗಡ ಪತ್ರದಲ್ಲಿ ಜನಗಣತಿಗಾಗಿ ಕೇವಲ ರೂ. 574.80 ಕೋಟಿ ಮಾತ್ರ ನಿಗದಿಪಡಿಸಲಾಗಿದೆ. ಈ ಅಲ್ಪಮೊತ್ತದಲ್ಲಿ ಜನಗಣತಿ ನಡೆಸಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಜನಗಣತಿ ನಡೆಯದೇ ಇದ್ದರೆ, 14 ಕೋಟಿ ಜನರಿಗೆ ಆಹಾರದ ಭದ್ರತೆಯನ್ನು ನಿರಾಕರಿಸಿದಂತಾಗುವುದು ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಪ್ರತೀ ಹತ್ತು ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯ ಮೂಲಕ ಲಭ್ಯವಾಗುವ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳನ್ನು ಲೆಕ್ಕ ಹಾಕಲಾಗುತ್ತದೆ. ಆದರೆ ಜನಗಣತಿಯನ್ನೇ ಮಾಡದಿರುವಾಗ ಅಂಕಿ-ಸಂಖ್ಯೆಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಇದರ ಪರಿಣಾಮವಾಗಿ ಈ ಕಾಯ್ದೆಯ ಅನ್ವಯ ಸರಕಾರಿ ಸವಲತ್ತುಗಳು ಹಾಗೂ ಪ್ರಯೋಜನಗಳನ್ನು ಪಡೆಯುವ ದೊಡ್ಡ ಸಂಖ್ಯೆಯ ಜನರಿಗೆ ಇವುಗಳನ್ನು ನಿರಾಕರಿಸಿದಂತಾಗುತ್ತದೆ.
ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವ ಅತಿ ದೊಡ್ಡ ಮತ್ತು ಸಮಗ್ರವಾದ ಕಾರ್ಯಕ್ರಮ ಜನಗಣತಿಯಾಗಿದೆ. ಭಾರತದ ಜನಸಂಖ್ಯೆ ಎಷ್ಟು ಎಂಬುದನ್ನು ತಿಳಿಸುವುದು ಮಾತ್ರವಲ್ಲ, ಇದು ದೇಶದ ಜನ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಹಿಂದಿನ ಜನಗಣತಿಯ ನಂತರದಲ್ಲಿ ದೇಶದ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ಈ ಜನಗಣತಿಯಿಂದ ಸಾಧ್ಯವಾಗುತ್ತದೆ. ಹಿಂದಿನ ಸಲ ಜನಗಣತಿ ನಡೆದಿರುವುದು 2011ರಲ್ಲಿ. ಆನಂತರದ ಕಾಲಾವಧಿಯಲ್ಲಿ ದೇಶವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. 2011ರಲ್ಲಿ ಭಾರತದ ಜನಸಂಖ್ಯೆ 121 ಕೋಟಿ ಇತ್ತು. ಈಗ ಅದು 145 ಕೋಟಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.
2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೋವಿಡ್ ಕಾರಣದಿಂದ ಮುಂದಕ್ಕೆ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಜಗತ್ತಿನ ಇತರ ದೇಶಗಳಲ್ಲಿ ನಡೆಯಬೇಕಿದ್ದ ಜನಗಣತಿಯನ್ನೂ ಮುಂದೂಡಲಾಗಿತ್ತು. ಆದರೆ ನಂತರದ ಕಾಲಾವಧಿಯಲ್ಲಿ ಜಗತ್ತಿನ ಕೆಲವು ದೇಶಗಳು ಜನಗಣತಿ ಕಾರ್ಯವನ್ನು ಪೂರೈಸಿವೆ. ಆದರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಇನ್ನಷ್ಟೇ ಜನಗಣತಿ ನಡೆಸಬೇಕಾಗಿದೆ.
ಯಾವುದೇ ದೇಶದಲ್ಲಿ ಜನಸಂಖ್ಯೆಯ ನಿಖರ ಅಂಕಿಅಂಶಗಳು ಇಲ್ಲದಿದ್ದಾಗ ದೇಶದ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳು ಹಾಗೂ ನೀತಿ ನಿರೂಪಣೆಗಳ ಮೇಲೆ ಅತ್ಯಂತ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ.ಸರಕಾರ ಸಂಪನ್ಮೂಲಗಳನ್ನು ವಿನಿಯೋಗಿಸುವಾಗ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಸರಕಾರದ ಸಾರ್ವಜನಿಕ ನೀತಿ ಕಾರ್ಯಕ್ರಮಗಳು ಪ್ರಯೋಜನಕಾರಿ ಹಾಗೂ ಪರಿಣಾಮಕಾರಿಯಾಗಬೇಕೆಂದಿದ್ದರೆ ದತ್ತಾಂಶಗಳು ನಿಖರವಾಗಿ ಲಭ್ಯವಾಗಬೇಕು. ಆಗ ಮಾತ್ರ ಸರಕಾರ ನೀತಿ ಕಾರ್ಯಕ್ರಮಗಳನ್ನು ಸರಿಯಾಗಿ ರೂಪಿಸಲು, ಫಲಾನುಭವಿಗಳಿಗೆ ಅವು ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತದೆ.
ಸರಕಾರದ ಕಾರ್ಯಕ್ರಮ ಹಾಗೂ ನೀತಿ, ನಿರೂಪಣೆಯಲ್ಲಿ ನೆರವಾಗುವ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಪರಿಸ್ಥಿತಿ ಮತ್ತು ಸಮೀಕ್ಷೆ, ಕಾರ್ಮಿಕರ ಸಮಸ್ಯೆ, ಜನಸಂಖ್ಯೆಯ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ ಇವೆಲ್ಲವೂ ಜನಸಂಖ್ಯೆಯ ಖಚಿತ ದತ್ತಾಂಶಗಳಿಂದ ಗೊತ್ತಾಗುತ್ತದೆ.
ಭಾರತದ ಜನಸಂಖ್ಯೆಯ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ಜಾಗತಿಕವಾಗಿ ಎಲಾನ್ ಮಸ್ಕ್ ಸೇರಿದಂತೆ ಅನೇಕರು ಆತಂಕಕ್ಕೊಳಗಾಗಿದ್ದಾರೆ.ಇದರಿಂದ ಅವರ ಮಾರುಕಟ್ಟೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಖರೀದಿಸುವವರ ಸಂಖ್ಯೆ ಕಡಿಮೆಯಾಗುವುದರಿಂದ ಮಾರುಕಟ್ಟೆ ತನ್ನಿಂದ ತಾನೆ ಕುಸಿಯುತ್ತದೆ. ಆದ್ದರಿಂದ ಭಾರತ ಜನಸಂಖ್ಯೆಯನ್ನು ನಿಯಂತ್ರಿಸಿ ಪ್ರಗತಿಯನ್ನು ಸಾಧಿಸುವುದು ಅನಿವಾರ್ಯವಾಗಿದೆ. ಅನಿಯಂತ್ರಿತ ವಲಸೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗಿರುವುದರಿಂದ ಮಾರುಕಟ್ಟೆ ಶಕ್ತಿಗಳು ಜನಸಂಖ್ಯೆ ಹೆಚ್ಚಾಗಬೇಕೆಂದು ಬಯಸುತ್ತವೆ. ಈ ಹಿನ್ನೆಲೆಯಲ್ಲಿ ಜನಗಣತಿಗಾಗಿ ಕೇಂದ್ರದ ಮೋದಿ ಸರಕಾರ ಮುಂಗಡಪತ್ರದಲ್ಲಿ ನಿಗದಿಪಡಿಸಿದ ಮೊತ್ತ ಯಾವುದಕ್ಕೂ ಸಾಲದು. 1951ರಿಂದ ಹತ್ತು ವರ್ಷಕ್ಕೊಮ್ಮೆ ನಿಯಮಿತವಾಗಿ ನಡೆಯುತ್ತಾ ಬಂದಿದ್ದ ಜನಗಣತಿ ಈಗ ಮೂಲೆ ಗುಂಪಾಗಿದೆ. ಹಾಗಾಗಿ ಕೇಂದ್ರ ಸರಕಾರ ಈ ಕುರಿತು ತನ್ನ ನೀತಿ, ಧೋರಣೆಯನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ.
ಕಳೆದ ಒಂದೂವರೆ ದಶಕದಿಂದ ಅಂದರೆ 2011ರ ನಂತರದ ಭಾರತದ ಜನಸಂಖ್ಯಾ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಗರೀಕರಣ ಹೆಚ್ಚಾಗುತ್ತಿದ್ದಂತೆ ಜನರ ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆಯಾಗತೊಡಗಿತು. ಇದರ ಪರಿಣಾಮವಾಗಿ ದೇಶದ ಆರ್ಥಿಕ, ಸಾಮಾಜಿಕ ಸ್ವರೂಪವೂ ಮುಂಚಿನಂತಿಲ್ಲ. ಸಾಕಷ್ಟು ಬದಲಾವಣೆಗಳು ಆಗಿವೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಜನ ಕಲ್ಯಾಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬೇಕಾಗಿದೆ. ಇದಕ್ಕೆ ಜನಗಣತಿಯ ಅಂಕಿ ಅಂಶಗಳು ಕಡ್ಡಾಯವಾಗಿಬೇಕು. ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ
ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ತರಲಾದ ಆಹಾರ ಭದ್ರತಾ ಕಾಯ್ದೆ ಭಾರತದ ಕೋಟ್ಯಂತರ ಜನರ ಹಸಿವನ್ನು ಇಂಗಿಸಿತು. ಕೋವಿಡ್ ಕಾಲದಲ್ಲಿ ಹಸಿವಿನ ದವಡೆಗೆ ಸಿಲುಕಿದ ಕೋಟ್ಯಂತರ ಜನರನ್ನು ಈ ಕಾಯ್ದೆ ಬದುಕಿಸಿತು.ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದರೆ ಆದಷ್ಟು ಬೇಗ ಜನಗಣತಿ ನಡೆಸಿ, ಲಭ್ಯವಿರುವ ಹೊಸ ಅಂಕಿ ಅಂಶಗಳನ್ನು ಪರಿಗಣಿಸಿ ಆಹಾರ ಭದ್ರತಾ ಕಾಯ್ದೆಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು. ಅದಕ್ಕೆ ಮುಂಗಡ ಪತ್ರದಲ್ಲಿ ಕಡಿಮೆ ಮೊತ್ತ ನಿಗದಿ ಪಡಿಸಿದರೆ ಆಗುವುದಿಲ್ಲ. ಆದ್ದರಿಂದ ಈ ಲೋಪವನ್ನು ಸರಿಪಡಿಸಿ ಈ ವರ್ಷ ತ್ವರಿತವಾಗಿ ಜನಗಣತಿ ಕಾರ್ಯವನ್ನು ನಡೆಸಲಿ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28