ರಾಜ್ಯ ಬಿಜೆಪಿಯೊಳಗೆ ಅಸಮಾಧಾನದ ಹೊಗೆ ಬಾಂಬ್
ರಾಜ್ಯ ಬಿಜೆಪಿಯೊಳಗೆ ಭಿನ್ನ ಧ್ವನಿಗಳು ಹೆಚ್ಚುತ್ತಿರುವಂತೆಯೇ ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂದರ್ಭದಲ್ಲಿ ಬಿಜೆಪಿ ಎದುರಿಸಿದ ಸಂಕಟಗಳು ಪುನರಾವರ್ತನೆಗೊಂಡಿವೆ. ವಿಧಾನಸಭಾ ಚುನಾವಣೆಯಲ್ಲಿ ಆರೆಸ್ಸೆಸ್ ಹಸ್ತಕ್ಷೇಪ ಬಿಜೆಪಿಯ ಫಲಿತಾಂಶದ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಿತ್ತು. ಹಿರಿಯ ಲಿಂಗಾಯತ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡಿ ಆ ಸ್ಥಾನಕ್ಕೆ ಆರೆಸ್ಸೆಸ್ ತನ್ನ ಜನಗಳನ್ನು ತುಂಬಿಸಲು ಮಾಡಿದ ಪ್ರಯತ್ನ ಅಂತಿಮವಾಗಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಯಿತು. ಚುನಾವಣೆ ಮುಗಿದ ಬೆನ್ನಿಗೇ ತಮ್ಮ ತಪ್ಪನ್ನು ತಿದ್ದಿಕೊಂಡ ವರಿಷ್ಠರು ರಾಜ್ಯ ಬಿಜೆಪಿಯ ಸೂತ್ರವನ್ನು ಮತ್ತೆ ಯಡಿಯೂರಪ್ಪರ ಕೈಗೆ ಒಪ್ಪಿಸಿದರು. ಈ ಮೂಲಕ ಲಿಂಗಾಯತ ಲಾಬಿಗಳಿಗೆ ಅನಿವಾರ್ಯವಾಗಿ ಮಣಿಯುವ ಸ್ಥಿತಿ ಕೇಶವ ಕೃಪಾಕ್ಕೆ ನಿರ್ಮಾಣವಾಯಿತು. ಇಷ್ಟಾದರೂ ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ ಬಿಜೆಪಿಯೊಳಗಿನ ಶೂದ್ರ ಮುಖಂಡರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸುತ್ತಲೇ ಇದೆ. ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುತ್ತಲೇ ಬಿಜೆಪಿಯೊಳಗೆ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಯಡಿಯೂರಪ್ಪ ಅವರ ಹಸ್ತಕ್ಷೇಪಗಳ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಯತ್ನಾಳ್ ಅವರು, ‘ಅಪ್ಪ-ಮಗ ಸೇರಿ ಬಿಜೆಪಿಯನ್ನು ಮುಗಿಸಲು ಹೊರಟಿದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ತನ್ನ ಟಿಕೆಟ್ ವಂಚಿತ ಮಗನ ಪರವಾಗಿ ನಾಲಗೆಯನ್ನು ಬೀಸತೊಡಗಿದ್ದಾರೆ.
ಬಿಜೆಪಿಯ ಪಾಲಿನ ದ್ವೇಷ ರಾಜಕಾರಣದ ಪ್ರಯೋಗ ಶಾಲೆ ಎಂದು ಕುಖ್ಯಾತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲು ಟಿಕೆಟ್ ವಂಚಿತರಾಗಿದ್ದಾರೆ. ನಳಿನ್ ಕುಮಾರ್ ಕಟೀಲು ಅವರಿಗೆ ಯಾವ ಕಾರಣಕ್ಕೂ ಟಿಕೆಟ್ ನೀಡಬಾರದು ಎನ್ನುವ ಆಂದೋಲನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಯೊಳಗೆ ಆರಂಭವಾಗಿತ್ತು. ‘ಪಂಪ್‌ವೆಲ್ ಮೇಲು ಸೇತುವೆ’ಯನ್ನು ಮುಂದಿಟ್ಟುಕೊಂಡು ಇವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಟೀಕಾ ಬಾಣಗಳ ಸುರಿಮಳೆಯಾಗಿದ್ದವು. ದಕ್ಷಿಣ ಕನ್ನಡದ ಅಭಿವೃದ್ಧಿಯ ಹಿನ್ನಡೆಯಲ್ಲಿ ನಳಿನ್ ಕುಮಾರ್ ಪಾತ್ರವಿದೆ ಎನ್ನುವುದು ಬಿಜೆಪಿ ಕಾರ್ಯಕರ್ತರೇ ಆಡಿಕೊಳ್ಳುತ್ತಿದ್ದರು. ಆರೆಸ್ಸೆಸ್‌ನ್ನು ಮೇಲ್‌ಸೇತುವೆಯಾಗಿ ಬಳಸಿಕೊಂಡು ನಳಿನ್ ಕುಮಾರ್ ವರಿಷ್ಠರನ್ನು ತಲುಪಿದರು. ಮೋದಿಯ ಹೆಸರಿನಲ್ಲಿ ನಳಿನ್ ಕುಮಾರ್ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾದರು. ಯಾವುದೇ ನಾಯಕತ್ವದ ಗುಣಲಕ್ಷಣಗಳಿಲ್ಲದಿದ್ದರೂ ಅವರನ್ನು ಆರೆಸ್ಸೆಸ್ ಶಿಫಾರಸಿನ ಮೇರೆಗೆ ರಾಜ್ಯಾಧ್ಯಕ್ಷರನ್ನಾಗಿಸಲಾಯಿತು. ಅವರ ದೌರ್ಬಲ್ಯಗಳೇ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಇದ್ದ ಅರ್ಹತೆಗಳಾಗಿದ್ದವು. ‘ಸ್ವಂತ’ ರಾಜಕೀಯ ನಿಲುವುಗಳಿಲ್ಲದ ಕಟೀಲರನ್ನು ಬಳಸಿಕೊಂಡು ಬಿಜೆಪಿಯೊಳಗೆ ಕೇಶವ ಕೃಪಾ ಗರಿಷ್ಠಮಟ್ಟದಲ್ಲಿ ಹಸ್ತಕ್ಷೇಪ ನಡೆಸಿತು. ರಾಜ್ಯ ಬಿಜೆಪಿಯನ್ನು ಮಕಾಡೆ ಮಲಗಿಸಿದ ಹೆಗ್ಗಳಿಕೆ ಕಟೀಲರಿಗೆ ಸಲ್ಲಬೇಕು. ಈ ಬಾರಿ ಕಟೀಲು ಟಿಕೆಟ್ ವಂಚಿತರಾಗುವುದು ಅನಿರೀಕ್ಷಿತವಾಗಿರಲಿಲ್ಲ. ಬಹುಶಃ ಕಟೀಲರಿಗೆ ಟಿಕೆಟ್ ನೀಡಿದ್ದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಬೇಕಾಗಿತ್ತು. ಯಾಕೆಂದರೆ ಕಟೀಲರ ವಿರುದ್ಧ ಕಣಕ್ಕಿಳಿಯಲು ಬಿಜೆಪಿಯ ಹಲವು ನಾಯಕರು ಸಿದ್ಧರಾಗಿದ್ದರು.
ಅತ್ಯಂತ ಅಸಮರ್ಥ ಸಂಸದೆ ಎಂದು ಕುಖ್ಯಾತಿ ಪಡೆದಿದ್ದ ಶೋಭಾ ಕರಂದ್ಲಾಜೆಯ ವಿರುದ್ಧವೂ ಬಿಜೆಪಿಯ ಕಾರ್ಯಕರ್ತರು ಬಂಡೆದ್ದಿದ್ದರು. ಉಡುಪಿ-ಚಿಕ್ಕಮಗಳೂರಿನ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಅಲ್ಲಿನ ಕ್ಷೇತ್ರದ ಜನರಿಗೂ ಅವರ ಮೇಲೆ ವ್ಯಾಪಕ ಅಸಮಾಧಾನಗಳಿದ್ದವು. ಇಷ್ಟಾದರೂ ಅವರು ಈ ಬಾರಿ ಟಿಕೆಟ್ ವಂಚಿತರಾಗಲಿಲ್ಲ ಎನ್ನುವುದು ಬಿಜೆಪಿಯೊಳಗೆ ಹಲವು ನಾಯಕರಿಗೆ ಇರಿಸುಮುರಿಸು ಉಂಟು ಮಾಡಿದೆ. ಶೋಭಾ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯನಾಯಕರೂ ದಕ್ಷಿಣ ಕನ್ನಡದವರೇ ಆಗಿರುವ ಸದಾನಂದ ಗೌಡರು ಟಿಕೆಟ್ ವಂಚಿತರಾಗಿದ್ದಾರೆ. ‘ಅಶ್ಲೀಲ ಸಿಡಿ’ಯ ಮೂಲಕ ವರ್ಚಸ್ಸು ಕಳೆದುಕೊಂಡು ರಾಜಕೀಯ ವಲಯದಲ್ಲಿ ಈಗಾಗಲೇ ಮೂಲೆಗುಂಪಾಗಿರುವ ಸದಾನಂದ ಗೌಡರ ಪರವಾಗಿ ಬ್ಯಾಟಿಂಗ್ ಮಾಡುವ ಜಾತಿ ಲಾಬಿಗಳಿಲ್ಲ. ಆದರೆ ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ತಿರಸ್ಕೃತಗೊಂಡಿರುವ ಶೋಭಾಕರಂದ್ಲಾಜೆಯವರನ್ನು ಬೆಂಗಳೂರು ಉತ್ತರಕ್ಕೆ ಹೇರಿಕೆ ಮಾಡಿರುವುದು ಬಿಜೆಪಿಯೊಳಗೆ ಕೆಲವು ಹಿರಿಯ ನಾಯಕರನ್ನು ಸಿಟ್ಟಿಗೆಬ್ಬಿಸಿದೆ. ಹಲವು ಹಿರಿಯ ನಾಯಕರಿದ್ದೂ ಶೋಭಾ ಅವರು ಬಿಜೆಪಿ ವರಿಷ್ಠರಿಗೆ ಯಾಕೆ ಅನಿವಾರ್ಯವಾದರು ಎನ್ನುವ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ಹಿರಿಯ ನಾಯಕ ಅಶೋಕ್ ಕೂಡ ‘‘ಈ ಬಗ್ಗೆ ಬಿಜೆಪಿಯೊಳಗೆ ಅಸಮಾಧಾನವಿದೆ’’ ಎಂದಿದ್ದಾರೆ. ಮಗನ ಟಿಕೆಟ್‌ಗಾಗಿ ಎಂತಹ ಕೀಳು ಅಭಿರುಚಿಯ ಹೇಳಿಕೆಯನ್ನು ಬೇಕಾದರೂ ನೀಡಬಲ್ಲೆ ಎಂದು ಪದೇ ಪದೇ ದ್ವೇಷ ಕಾರಿ ಆರೆಸ್ಸೆಸ್‌ನ್ನು ಖುಷಿ ಪಡಿಸಲು ಯತ್ನಿಸುತ್ತಿದ್ದ ಈಶ್ವರಪ್ಪ ಅವರಿಗೂ ಭಾರೀ ಮುಖಭಂಗವಾಗಿದೆ. ಈಗ ಅವರು ತನ್ನ ನಾಲಗೆಯನ್ನು ಬಿಜೆಪಿ ವರಿಷ್ಠರ ವಿರುದ್ಧವೇ ಹರಿಯ ಬಿಡುತ್ತಿದ್ದಾರೆ.
ಸಂಸತ್ತಿನಲ್ಲಿ ಹೊಗೆ ಬಾಂಬ್ ಖ್ಯಾತಿಯ ಪ್ರತಾಪ ಸಿಂಹ ಬಾಲ ಮಡಚಿ ಬೋನು ಸೇರಿದ್ದಾರೆ. ವಿವಾದಿತ ಹೇಳಿಕೆಗಳು, ಕೋಮುಗಲಭೆ ಮತ್ತು ಸಂಸತ್‌ನಲ್ಲಿ ಹೊಗೆಬಾಂಬ್ ಇವುಗಳ ಮೂಲಕವೇ ಸುದ್ದಿಯಲ್ಲಿದ್ದ ಪ್ರತಾಪ ಸಿಂಹ ಬಗ್ಗೆಯೂ ಕ್ಷೇತ್ರದಲ್ಲಿ ವ್ಯಾಪಕ ಅಸಮಾಧಾನವಿತ್ತು. ಸಂಸತ್ ಮೇಲಿನ ದಾಳಿಯನ್ನು ಪ್ರತಾಪ ಸಿಂಹ ವಿರುದ್ಧ ಬಳಸಿಕೊಳ್ಳುವ ಬಗ್ಗೆ ವರಿಷ್ಠರಿಗೆ ಆತಂಕವಿತ್ತು. ಯಡಿಯೂರಪ್ಪ ಬಣವೂ ಪ್ರತಾಪ ಸಿಂಹನ ವಿರುದ್ಧವಿತ್ತು. ಇದೀಗ ಮೈಸೂರಿನಲ್ಲಿ ಪ್ರತಾಪ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ, ಜನಸಾಮಾನ್ಯರೊಂದಿಗೆ ಸಂಪರ್ಕವಿಲ್ಲದ ಯದುವೀರ್ ಅವರನ್ನು ತನ್ನ ‘ಭಾವನಾತ್ಮಕ ರಾಜಕಾರಣ’ಕ್ಕೆ ಬಿಜೆಪಿ ಬಳಸಲು ಹೊರಟಿದೆ. ಟಿಕೆಟ್ ಘೋಷಣೆಗೆ ಮುನ್ನವೇ ಪ್ರತಾಪ ಸಿಂಹ, ಈ ಬಗ್ಗೆ ವ್ಯಂಗ್ಯವಾಡಿದ್ದರು. ಇದು ರಾಜಪ್ರಭುತ್ವದ ಕಾಲವಲ್ಲ, ಪ್ರಜಾಪ್ರಭುತ್ವದ ಕಾಲ. ರಾಜಕೀಯಕ್ಕೆ ಬರುವುದಾದರೆ, ಸರಕಾರದ ವಿರುದ್ಧ ನ್ಯಾಯಾಲಯದಲ್ಲಿರುವ ಮೊಕದ್ದಮೆಯಿಂದ ಯದುವೀರ್ ಹಿಂದೆ ಸರಿಯಲಿ ಎಂದು ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದರು. ಡಿಕೆಶಿಯೊಂದಿಗೆ ಒಳಗೊಳಗೆ ಸೌಹಾರ್ದ ಸಂಬಂಧ ಹೊಂದಿರುವ ಪ್ರತಾಪ ಸಿಂಹ, ಟಿಕೆಟ್ ನಿರಾಕರಣೆಯನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಅಳಿಯ ಖ್ಯಾತ ವೈದ್ಯ ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ಜೆಡಿಎಸ್ ಅಧಿಕೃತವಾಗಿ ಬಿಜೆಪಿಯೊಂದಿಗೆ ವಿಲೀನಗೊಂಡಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ. ಬಿಜೆಪಿಯ ತಳಮಟ್ಟದ ಸದಸ್ಯರೂ ಆಗಿರದ ಮಂಜುನಾಥ್‌ಗೆ ಏಕಾಏಕಿ ಬಿಜೆಪಿಯಿಂದ ಟಿಕೆಟ್ ನೀಡಿರುವುದು ಬಿಜೆಪಿಯೊಳಗಿನ ಹಲವು ಹಿರಿಯರಲ್ಲಿ ಅಸಮಾಧಾನ ಸೃಷ್ಟಿಸಿದೆ.
ಒಂದಂತೂ ಸ್ಪಷ್ಟ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಘೋಷಣೆಯಾದ ಬಳಿಕ ಸೃಷ್ಟಿಯಾದ ಗೊಂದಲ, ಬಂಡಾಯ ಈ ಬಾರಿ ಸೃಷ್ಟಿಯಾಗುವುದಿಲ್ಲ. ಯಾಕೆಂದರೆ, ಟಿಕೆಟ್ ವಂಚಿತರಾಗಿರುವ ಯಾವುದೇ ಬಿಜೆಪಿ ನಾಯಕರು ತಾವು ಗೆದ್ದು ಬಂದಿರುವುದು, ಮುಂದೆ ಗೆಲ್ಲುವುದು ಸ್ವಂತ ಬಲದಿಂದಲ್ಲ, ಮೋದಿಯ ಹೆಸರಿನಿಂದ ಎಂದು ನಂಬಿರುವವರು. ಆ ಕಾರಣಕ್ಕಾಗಿಯೇ ಕರ್ನಾಟಕದ ಪರವಾಗಿ ಇವರಾರೂ ಸಂಸತ್‌ನಲ್ಲಿ ಧ್ವನಿಯೆತ್ತಲಿಲ್ಲ. ತಮ್ಮನ್ನು ಗೆಲ್ಲಿಸಿರುವುದು ಮತದಾರರಲ್ಲ, ಪ್ರಧಾನಿ ಮೋದಿ ಎಂದು ನಂಬಿದವರು, ಕರ್ನಾಟಕದ ಅಭಿವೃದ್ಧಿ ಪರವಾಗಿ ಯಾಕಾದರೂ ಮಾತನಾಡುತ್ತಾರೆ? ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಯನ್ನು ಮುಂದಿಟ್ಟುಕೊಂಡು ಮತ ಯಾಚಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಬಿಜೆಪಿಯ ಬತ್ತಳಿಕೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ, ರಾಮೇಶ್ವರಂ ಕೆಫೆಯ ಸ್ಫೋಟ ಮತ್ತು ಮೋದಿ ಭಜನೆಗಳಷ್ಟೇ ಇವೆ. ಪಕ್ಷದೊಳಗೆ ಹರಡಿರುವ ಅಸಮಾಧಾನದ ಹೊಗೆಬಾಂಬನ್ನು ತಿಳಿಯಾಗಿಸಿ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಬೇಕಾಗಿದೆ. ರಾಜ್ಯದ ವಾತಾವರಣ ಕಾಂಗ್ರೆಸ್‌ಗೆ ಪೂರಕವಾಗಿವೆ. ದ್ವೇಷ ರಾಜಕಾರಣದ ಅಗ್ನಿದಿವ್ಯದಲ್ಲಿ ಕಾಂಗ್ರೆಸ್‌ನ ಅಭಿವೃದ್ಧಿ ರಾಜಕಾರಣ ತನ್ನ ‘ಗ್ಯಾರಂಟಿ’ಯ ಹೊಳಪಿನೊಂದಿಗೆ ಎದ್ದು ಗೆದ್ದು ಬರಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.